ಸಾರ್ಕ್ ನಾಯಕರು ಮತ್ತು ಪ್ರತಿನಿಧಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿ ಮೋದಿ ಕೊರೋನಾ ವೈರಾಣು ಹಬ್ಬದಂತೆ ತಡೆಯಲು ಭಾರತ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಒತ್ತಿ ಹೇಳಿದರು. ಸನ್ನದ್ಧರಾಗಿರಿ ಆದರೆ, ಆತಂಕಕ್ಕೆ ಒಳಗಾಗಬೇಡಿ ಎಂಬುದು ನಮ್ಮ ಮಾರ್ಗದರ್ಶಿ ಮಂತ್ರವಾಗಿದೆ ಎಂದು ತಿಳಿಸಿದರು. ನಾವು ಸಮಸ್ಯೆಯನ್ನು ಕಡೆಗಣಿಸದಂತೆ ಜಾಗರೂಕತೆ ವಹಿಸಿದ್ದೇವೆ, ಆದರೂ ಅನೈಚ್ಛಿಕ ಸೆಳೆತದ ಪ್ರಕ್ರಿಯೆ ತಡೆಯಲು ಮುಂದಾಗಿದ್ದೇವೆ.ನಾವು ಶ್ರೇಣೀಕೃತ ಸ್ಪಂದನ ವ್ಯವಸ್ಥೆ ಸೇರಿದಂತೆ ಸಕಾರಾತ್ಮಕವಾದ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಜನವರಿಯ ಮಧ್ಯಭಾಗದಿಂದಲೇ ನಾವು ಭಾರತಕ್ಕೆ ಬರುವವರ ತಪಾಸಣೆಯನ್ನು ಆರಂಭಿಸಿದ್ದೇವೆ, ಜೊತೆಗೆ ಹಂತ ಹಂತವಾಗಿ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು. ಹಂತ ಹಂತದ ದೃಷ್ಟಿಕೋನವು ಈ ಆತಂಕ ನಿವಾರಿಸಲು ನಮಗೆ ನೆರವಾಗಿದೆ ಎಂದೂ ಅವರು ತಿಳಿಸಿದರು. ನಾವು ಟಿವಿ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಹೆಚ್ಚಿಸುತ್ತಿದ್ದೇವೆ ಎಂದೂ ಅವರು ಉಲ್ಲೇಖಿಸಿದರು.
ದುರ್ಬಲ ವರ್ಗಗಳನ್ನು ತಲುಪಲು ನಾವು ವಿಶೇಷ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. “ದೇಶಾದ್ಯಂತ ನಮ್ಮ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡುವುದೂ ಸೇರಿದಂತೆ ನಮ್ಮ ವ್ಯವಸ್ಥೆಯಲ್ಲಿ ಸಾಮರ್ಥ್ಯವನ್ನು ತ್ವರಿತವಾಗಿ ಹೆಚ್ಚಿಸಲು ಭಾರತ ಶ್ರಮಿಸುತ್ತಿದೆ. ನಾವು ರೋಗಪತ್ತೆ ದಕ್ಷತೆಯನ್ನೂ ಹೆಚ್ಚಿಸಿದ್ದೇವೆ. ಎರಡೇ ತಿಂಗಳಲ್ಲಿ, ಭಾರತಾದ್ಯಂತ ಒಂದು ಪ್ರಮುಖ ಪರೀಕ್ಷಾ ಸೌಲಭ್ಯದಿಂದ, ಅಂತಹ 60 ಕ್ಕೂ ಹೆಚ್ಚು ಪ್ರಯೋಗಾಲಯಗಳನ್ನು ರೂಪಿಸಲಾಗಿದೆ’’ ಎಂದು ಪ್ರಧಾನಮಂತ್ರಿ ಮೋದಿ ಮಾಹಿತಿ ನೀಡಿದರು.
ಈ ಸಾಂಕ್ರಾಮಿಕರೋಗವನ್ನು ನಿಗ್ರಹಿಸುವ ಪ್ರತಿಯೊಂದು ಹಂತದಲ್ಲೂ ನಾವು ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದೂ ಪ್ರಧಾನಮಂತ್ರಿ ತಿಳಿಸಿದರು; ಪ್ರವೇಶಿಸುವಾಗಲೇ ತಪಾಸಣೆ ಮಾಡುವುದು; ಶಂಕಿತ ಪ್ರಕರಣಗಳಲ್ಲಿ ಸಂಪರ್ಕಿತರ ಪತ್ತೆ ಮಾಡುವುದು; ಪ್ರತ್ಯೇಕೀಕರಣ (ಕ್ವಾರಂಟೈನ್) ಮತ್ತು ಪ್ರತ್ಯೇಕ ಸೌಕರ್ಯ ನಿರ್ವಹಣೆ; ಮತ್ತು ಬಿಡುಗಡೆಗೊಳಿಸಿದ ಪ್ರಕರಣಗಳ ನಿಗಾವನ್ನೂ ಇಡುತ್ತಿದ್ದೇವೆ ಎಂದು ತಿಳಿಸಿದರು.
ಇದರ ಜೊತೆಗೆ ಭಾರತವು ವಿದೇಶಗಳಲ್ಲಿರುವ ನಮ್ಮ ಜನರ ಕರೆಗೂ ಸ್ಪಂದಿಸಿದೆ. ಭಾರತ ಸುಮಾರು 1,400 ಭಾರತೀಯರನ್ನು ವಿವಿಧ ದೇಶಗಳಿಂದ ತೆರವು ಮಾಡಿಸಿದೆ. ಅದೇ ರೀತಿ ನೆರೆಹೊರೆ ಪ್ರಥಮ ಎಂಬ ನೀತಿಯನ್ವಯ ನಾವು ನೆರೆಯ ರಾಷ್ಟ್ರಗಳ ಕೆಲವು ನಾಗರಿಕರಿಗೂ ಸಹಾಯ ಮಾಡಿದ್ದೇವೆ. ಎಂದು ತಿಳಿಸಿದರು.