ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶ ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಾ ಸಾಗಿದ್ದೇವೆ. ಈ ವೇಳೆ ದೇಶಕ್ಕಾಗಿ ಅಪ್ರತಿಮ ಕೊಡುಗೆಯನ್ನು ನೀಡಿರುವ ಐತಿಹಾಸಿಕ ನಾಯಕರು ಮತ್ತು ನಾಯಕಿಯರ ಕೊಡುಗೆಗಳನ್ನು ಸ್ಮರಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
ಅವರು ಇತಿಹಾಸದ ಪುಸ್ತಕಗಳಲ್ಲಿ ಯಾರು ಭಾರತಕ್ಕಾಗಿ ಮತ್ತು ಭಾರತೀಯತೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೋ ಅಂತಹವರಿಗೆ ಸಿಗಬೇಕಾದ ಮನ್ನಣೆಯನ್ನು ನೀಡಿಲ್ಲ ಎಂದು ವಿಷಾದಿಸಿದರು. ನಾವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಭಾರತೀಯ ಇತಿಹಾಸವನ್ನು ಬರೆದಿರುವ ಇತಿಹಾಸಕಾರರು ಮಾಡಿರುವ ಅಕ್ರಮಗಳು ಮತ್ತು ಅನ್ಯಾಯವನ್ನು ನಾವು ಸರಿಪಡಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರ ಕೊಡುಗೆಯನ್ನು ಸ್ಮರಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉತ್ತರ ಪ್ರದೇಶದ ಬಹ್ರೈಚ್ ನಲ್ಲಿಂದು ಚಿತ್ತೌರಾ ಸರೋವರದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ, ಮಹಾರಾಜ ಸುಹೆಲ್‌ದೇವ್ ಅವರ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಭಾರತದ ಇತಿಹಾಸವು ವಸಾಹತುಶಾಹಿ ಶಕ್ತಿಗಳು ಅಥವಾ ವಸಾಹತುಶಾಹಿ ಮನೋಭಾವ ಹೊಂದಿರುವವರು ಬರೆದ ಇತಿಹಾಸ ಮಾತ್ರವಲ್ಲ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಭಾರತೀಯ ಇತಿಹಾಸವನ್ನು ಸಾಮಾನ್ಯ ಜನರು ತಮ್ಮ ಜಾನಪದ ರೂಪದಲ್ಲಿ ಪೋಷಿಸಿಕೊಂಡು ಬಂದಿರುವುದನ್ನು ಹಲವು ತಲೆಮಾರುಗಳು ಮುಂದುವರಿಸಿಕೊಂಡು ಬರುತ್ತಿವೆ ಎಂದರು.
ಆಜಾದ್ ಹಿಂದ್ ಸರ್ಕಾರದ ಮೊದಲ ಪ್ರಧಾನಮಂತ್ರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಿಗಬೇಕಾದಷ್ಟು ಸ್ಥಾನಮಾನ ಮತ್ತು ಗೌರವವನ್ನು ನೀಡಲಾಗಿದೆಯೇ ಎಂದು ಅವರು ಪ್ರಶ್ನಿಸಿದರು. ನೇತಾಜಿ ಅವರು ಕೆಂಪುಕೋಟೆಯಿಂದ ಅಂಡಮಾನ್ ನಿಕೋಬಾರ್ ವರೆಗೆ ತಮ್ಮ ಹೆಜ್ಜೆ ಗುರುತನ್ನು ಬಲವರ್ಧನೆಗೊಳಿಸಿ ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಗುರುತಿಸಿದ್ದೇವೆಯೇ ಎಂದರು.
ಅಂತೆಯೇ 500ಕ್ಕೂ ಅಧಿಕ ಸಂಸ್ಥಾನಗಳನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವರನ್ನು ನಡೆಸಿಕೊಂಡ ರೀತಿ ಸರಿಯಿತ್ತೇ ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು. ಇಂದು ವಿಶ್ವದ ಅತಿ ದೊಡ್ಡ ಏಕತಾ ಪ್ರತಿಮೆ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಥಾಪಿಸಲಾಗಿದೆ ಎಂದರು.
ಸಂವಿಧಾನದ ಪ್ರಮುಖ ಶಿಲ್ಪಿ ಮತ್ತು ಶೋಷಿತರು, ದುರ್ಬಲರು ಹಾಗೂ ತುಳಿತಕ್ಕೊಳಗಾದವರ ಧ್ವನಿಯಾಗಿದ್ದ ದಾದಾ ಸಾಹೇಬ್ ಅಂಬೇಡ್ಕರ್ ಅವರನ್ನು ಸದಾ ರಾಜಕೀಯ ಮಸೂರದಲ್ಲೇ ನೋಡಲಾಗಿತ್ತು. ಇಂದು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಭಾರತದಿಂದ ಇಂಗ್ಲೆಂಡ್ ವರೆಗಿನ ಎಲ್ಲಾ ಜಾಗಗಳನ್ನು ಪಂಚತೀರ್ಥ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿದೆ. “ನಾನಾ ಕಾರಣಗಳಿಂದಾಗಿ ಗುರುತಿಸಲಾಗದ ಅಸಂಖ್ಯಾತ ವ್ಯಕ್ತಿಗಳು ಇದ್ದಾರೆ. ಚೌರಿ ಚಾರಾದ ದಿಟ್ಟ ಯೋಧರ ಕತೆ ಏನಾಯಿತು ಎಂಬುದನ್ನು ನಾವು ಮರೆಯಲು ಸಾಧ್ಯವೇ” ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು.
ಅದೇ ರೀತಿ ಮಹಾರಾಜ ಸುಹೆಲ್‌ದೇವ್ ಅವರು ಭಾರತೀಯತೆಯ ರಕ್ಷಣೆಗೆ ನೀಡಿದ ಕೊಡುಗೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಹಾರಾಜ ಸುಹೆಲ್‌ದೇವ್ ಅವರನ್ನು ಪಠ್ಯ ಪುಸ್ತಕಗಳಲ್ಲಿ ನಿರ್ಲಕ್ಷಿಸಲಾಗಿದ್ದರೂ ಸಹ ಅವದ್, ತರೈ ಮತ್ತು ಪೂರ್ವಾಂಚಲ ಪ್ರದೇಶಗಳ ಜಾನಪದದ ಮೂಲಕ ಜನಗಳ ಹೃದಯದಲ್ಲಿ ಜೀವಂತವಾಗಿಡಲಾಗಿದೆ ಎಂದರು. ಸುಹೆಲ್‌ದೇವ್ ಅತ್ಯಂತ ಸೂಕ್ಷ್ಮ ವ್ಯಕ್ತಿಯಾಗಿದ್ದರು ಹಾಗೂ ಅಭಿವೃದ್ಧಿಪರ ರಾಜರಾಗಿದ್ದರು. ಅವರ ಕೊಡುಗೆ ಅವಿಸ್ಮರಣೀಯ ಎಂದು ಪ್ರಧಾನಮಂತ್ರಿ ಸ್ಮರಿಸಿದರು.