ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಬ್ರಿಟನ್ ಪ್ರಧಾನಿ ಗೌರವಾನ್ವಿತ ಬೋರಿಸ್ ಜಾನ್ಸನ್ ಅವರು 2022ರ ಏಪ್ರಿಲ್ 21ರಿಂದ 22ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ಇದು ಅವರ ಮೊದಲ ಭಾರತ ಭೇಟಿಯಾಗಿದೆ.
2. 2022ರ ಏಪ್ರಿಲ್ 22ರಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಮಂತ್ರಿ ಜಾನ್ಸನ್ ಅವರನ್ನು ವಿದ್ಯುಕ್ತವಾಗಿ ಸ್ವಾಗತಿಸಲಾಯಿತು, ಅಲ್ಲಿ ಅವರನ್ನು ಪ್ರಧಾನಿ ಮೋದಿ ಅವರು ಸ್ವಾಗತಿಸಿದರು. ನಂತರ ಪ್ರಧಾನಿ ಜಾನ್ಸನ್ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ ಮಾಲಾರ್ಪಣೆ ಮಾಡುವ ಮೂಲಕ ಮಹಾತ್ಮಾ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು.
3. ಭಾರತ ಪ್ರವಾಸದಲ್ಲದ್ದ ಪ್ರಧಾನಿ ಜಾನ್ಸನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೈದರಾಬಾದ್ ಹೌಸ್‌ನಲ್ಲಿ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು ಮತ್ತು ಅವರ ಗೌರವಾರ್ಥ ಔತಣಕೂಟವನ್ನೂ ಏರ್ಪಡಿಸಿದ್ದರು. ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ಬ್ರಿಟನ್ ಪ್ರಧಾನಿಯನ್ನು ಭೇಟಿಯಾದರು.
4. 2021ರ ಮೇ ತಿಂಗಳ ವರ್ಚುವಲ್ ಶೃಂಗಸಭೆಯಲ್ಲಿ ಪ್ರಾರಂಭಿಸಲಾದ ʻಮಾರ್ಗಸೂಚಿ 2030ʼರ ವಿಚಾರದಲ್ಲಿ ಆಗಿರುವ ಪ್ರಗತಿಯನ್ನು ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಉಭಯ ಪ್ರಧಾನಿಗಳು ಶ್ಲಾಘಿಸಿದರು. ಇದೇ ವೇಳೆ, ದ್ವಿಪಕ್ಷೀಯ ಸಂಬಂಧಗಳ ವ್ಯಾಪ್ತಿಯುದ್ದಕ್ಕೂ ಮತ್ತಷ್ಟು ಸದೃಢವಾದ ಮತ್ತು ಕ್ರಿಯಾತ್ಮಕ ಸಹಕಾರವನ್ನು ಮುಂದುವರಿಸುವ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಪ್ರಸ್ತುತ ನಡೆಯುತ್ತಿರುವ ʻಎಫ್‌ಟಿಎʼ ಮಾತುಕತೆಗಳು ಮತ್ತು ʻವರ್ಧಿತ ವ್ಯಾಪಾರ ಪಾಲುದಾರಿಕೆʼಯ ಅನುಷ್ಠಾನದ ಪ್ರಗತಿಯನ್ನು ಅವರು ಶ್ಲಾಘಿಸಿದರು. ಜೊತೆಗೆ 2022ರ ಅಕ್ಟೋಬರ್ ಅಂತ್ಯದ ವೇಳೆಗೆ ಸಮಗ್ರ ಮತ್ತು ಸಮತುಲಿತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಲು ಪರಸ್ಪರ ಸಮ್ಮತಿಸಿದರು. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲು ʻಎಫ್‌ಟಿಎʼ ದಾರಿ ಮಾಡಿಕೊಡಲಿದೆ.
5. ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಭಾರತ-ಬ್ರಿಟನ್ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಪ್ರಮುಖ ಅಂಶವಾಗಿ ಪರಿವರ್ತಿಸಲು ಉಭಯ ನಾಯಕರು ಸಹಮತಿಸಿದರು ಮತ್ತು ಎರಡೂ ದೇಶಗಳ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆ ಸೇರಿದಂತೆ ರಕ್ಷಣಾ ಸಹಯೋಗಕ್ಕೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಿದರು. ಸೈಬರ್ ಭದ್ರತೆಯಲ್ಲಿ ವಿಶೇಷವಾಗಿ ಸೈಬರ್ ಆಡಳಿತ, ಸೈಬರ್ ಪ್ರತಿಬಂಧಕತೆ ಮತ್ತು ನಿರ್ಣಾಯಕ ರಾಷ್ಟ್ರೀಯ ಮೂಲಸೌಕರ್ಯವನ್ನು ರಕ್ಷಿಸುವ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ತೀವ್ರಗೊಳಿಸಲು ಎರಡೂ ಕಡೆಯಿಂದ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಭಯೋತ್ಪಾದನೆ ಮತ್ತು ತೀವ್ರಗಾಮಿ ಉಗ್ರವಾದದ ನಿರಂತರ ಅಪಾಯವನ್ನು ಎದುರಿಸಲು ನಿಕಟ ಸಹಕಾರಕ್ಕೆ ಅವರು ಸಮ್ಮತಿಸಿದರು.
6. ಇಂಡೋ-ಪೆಸಿಫಿಕ್, ಅಫ್ಘಾನಿಸ್ತಾನ, ಯುಎನ್ಎಸ್ಸಿ, ಜಿ20 ಮತ್ತು ಕಾಮನ್‌ವೆಲ್ತ್ ಸಹಕಾರ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಉಭಯ ಪ್ರಧಾನ ಮಂತ್ರಿಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಸಾಗರ ಭದ್ರತಾ ವ್ಯಾಪ್ತಿ ಅಡಿಯಲ್ಲಿ
ಇಂಡೋ-ಪೆಸಿಫಿಕ್ ಸಾಗರದ ಉಪಕ್ರಮಕ್ಕೆ ಬ್ರಿಟನ್ ಸೇರಿರುವುದನ್ನು ಭಾರತ ಸ್ವಾಗತಿಸಿತು ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಸಂಬಂಧಗಳನ್ನು ಹೆಚ್ಚಿಸಲು ಸಮ್ಮತಿಸಿತು.
7. ಉಕ್ರೇನ್-ರಷ್ಯಾ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಅವರು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ನೇರ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳಿಗೆ ಮರಳಬೇಕು ಎಂಬ ತಮ್ಮ ಕರೆಯನ್ನು ಪುನರುಚ್ಚರಿಸಿದರು.
8. ಕಳೆದ ವರ್ಷ ʻಸಿಒಪಿ26ʼ ಅನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ಜಾನ್ಸನ್ ಅವರನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸಲು ಮತ್ತು ʻಗ್ಲ್ಯಾಸ್ಗೋ ಹವಾಮಾನ ಒಪ್ಪಂದʼವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಹವಾಮಾನ ಉಪಕ್ರಮಕ್ಕೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಸಮುದ್ರ ಕಿನಾರೆಯ ಪವನ ಶಕ್ತಿ ಮತ್ತು ಹಸಿರು ಜಲಜನಕ ಸೇರಿದಂತೆ ಶುದ್ಧ ಇಂಧನದ ತ್ವರಿತ ನಿಯೋಜನೆಗೆ ಸಹಕಾರವನ್ನು ಹೆಚ್ಚಿಸಲು ಪರಸ್ಪರ ಸಹಮತಿಸಿದರು. ಇದರ ಭಾಗವಾಗಿ ʻಐಎಸ್ಎʼ ಅಡಿಯಲ್ಲಿ ʻಜಾಗತಿಕ ಗ್ರೀನ್ ಗ್ರಿಡ್ಸ್ʼ ಎನಿಸಿರುವ ʻಒಬ್ಬ ಸೂರ್ಯ-ಒಂದು ಜಗತ್ತು ಗ್ರಿಡ್ ಉಪಕ್ರಮʼ (ಒಎಸ್ಒಒಒಜಿ) ಮತ್ತು ʻಸಿಡಿಆರ್‌ಐʼ ಅಡಿಯಲ್ಲಿ ʻಐರಿಸ್ʼ (IRIS) ವೇದಿಕೆಯ ತ್ವರಿತ ಕಾರ್ಯಾಚರಣೆಗೆ ನಿಕಟವಾಗಿ ಕೆಲಸ ಮಾಡಲು ಅವರು ಸಮ್ಮತಿಸಿದರು. ಹವಾಮಾನ ಶೃಂಗಸಭೆಯಲ್ಲಿ ಭಾರತ ಮತ್ತು ಬ್ರಿಟನ್ ಜಂಟಿಯಾಗಿ ಈ ಉಪಕ್ರಮಗಳನ್ನು ಆರಂಭಿಸಿವೆ.
9. ಭಾರತ-ಬ್ರಿಟನ್ ʻಜಾಗತಿಕ ಆವಿಷ್ಕಾರ ಪಾಲುದಾರಿಕೆʼ ಮತ್ತು ʻಪರಮಾಣು ಇಂಧನ ಪಾಲುದಾರಿಕೆಯ ಜಾಗತಿಕ ಕೇಂದ್ರʼದ (ಜಿಸಿಎನ್‌ಇಪಿ) ಅನುಷ್ಠಾನ ಕುರಿತ ಎರಡು ತಿಳಿವಳಿಕಾ ಒಡಂಬಡಿಕೆಗಳನ್ನು ಪ್ರಧಾನಿ ಜಾನ್ಸನ್ ಅವರ ಭೇಟಿಯ ಸಂದರ್ಭದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ʻಜಾಗತಿಕ ಆವಿಷ್ಕಾರ ಪಾಲುದಾರಿಕೆʼಯ ಮೂಲಕ, ಭಾರತ ಮತ್ತು ಬ್ರಿಟನ್ ಹವಾಮಾನ ಸ್ಮಾರ್ಟ್ ಸುಸ್ಥಿರ ಆವಿಷ್ಕಾರಗಳ ವರ್ಗಾವಣೆ ಮತ್ತು ಪ್ರಮಾಣವನ್ನು ಬೆಂಬಲಿಸಲು ಮೂರನೇ ದೇಶಗಳಿಗೆ 75 ದಶಲಕ್ಷ ಪೌಂಡ್‌ನಷ್ಟು ಹಣಕಾಸು ಸಹಕಾರ ನೀಡಲು ಒಪ್ಪಿಕೊಂಡಿವೆ. ಈ ಪಾಲುದಾರಿಕೆಯ ಅಡಿಯಲ್ಲಿ ರಚಿಸಲಾದ ನವೀನ ʻಜಿಐಪಿʼ ನಿಧಿಯು ಭಾರತೀಯ ಆವಿಷ್ಕಾರಗಳನ್ನು ಬೆಂಬಲಿಸಲು ಮಾರುಕಟ್ಟೆಯಿಂದ ಹೆಚ್ಚುವರಿ 100 ದಶಲಕ್ಷ ಪೌಂಡ್ ಸಂಗ್ರಹಿಸುವ ಗುರಿಯನ್ನು ಹೊಂದಿದೆ.
10. ಈ ಕೆಳಗಿನ ಘೋಷಣೆಗಳನ್ನು ಸಹ ಮಾಡಲಾಯಿತು: (I) 5G, ಕೃತಕ ಬುದ್ಧಿಮತ್ತೆ ಇತ್ಯಾದಿಗಳಂತಹ ಹೊಸ ಮತ್ತು ಉದಯೋನ್ಮುಖ ಸಂವಹನ ತಂತ್ರಜ್ಞಾನಗಳ ಬಗ್ಗೆ ವ್ಯೂಹಾತ್ಮಕ ತಾಂತ್ರಿಕ ಸಮಾಲೋಚನೆ-ಸಚಿವರ ಮಟ್ಟದ ಸಂವಾದ (II) ಸಮಗ್ರ ವಿದ್ಯುತ್ ಪ್ರಸರಣದ ಸಹಯೋಗ - ಎರಡು ನೌಕಾಪಡೆಗಳ ನಡುವೆ ತಂತ್ರಜ್ಞಾನದ ಸಹ-ಅಭಿವೃದ್ಧಿ.
11. ಪ್ರಧಾನಿ ಜಾನ್ಸನ್ ಅವರು ಏಪ್ರಿಲ್ 21ರಂದು ಗುಜರಾತ್‌ನ ಅಹ್ಮದಾಬಾದ್‌ನಿಂದ ತಮ್ಮ ಭೇಟಿಯನ್ನು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ಅವರು ಸಾಬರಮತಿ ಆಶ್ರಮ, ವಡೋದರಾದ ಮಸ್ವಾದ್ ಕೈಗಾರಿಕಾ ಪ್ರದೇಶದಲ್ಲಿರುವ ಜೆಸಿಬಿ ಘಟಕ ಮತ್ತು ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿರುವ ಗುಜರಾತ್ ಜೈವಿಕ ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು.
12. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗಾಗಿ ಪ್ರಧಾನಮಂತ್ರಿ ಜಾನ್ಸನ್ ಅವರನ್ನು ಭಾರತಕ್ಕೆ ಆಹ್ವಾನಿಸಿದರು. ಬ್ರಿಟನ್‌ಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ತಮ್ಮ ಆಹ್ವಾನವನ್ನು ಪ್ರಧಾನಮಂತ್ರಿ ಜಾನ್ಸನ್ ಪುನರುಚ್ಚರಿಸಿದರು. ಪ್ರಧಾನಿ ಮೋದಿ ಅವರು ಆಹ್ವಾನವನ್ನು ಸ್ವೀಕರಿಸಿದರು.