ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಅಬುಧಾಬಿಯ ಯುವರಾಜ ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2024 ಸೆಪ್ಟೆಂಬರ್ 9-10ರ ವರೆಗೆ ಅಧಿಕೃತ ಭಾರತ ಭೇಟಿಯಲ್ಲಿದ್ದಾರೆ. ಯುವರಾಜ ಶೇಖ್ ಖಲೀದ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ನಿನ್ನೆ ದೆಹಲಿಗೆ ಆಗಮಿಸಿದ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಬರಮಾಡಿಕೊಂಡರು, ನಂತರ ಅವರಿಗೆ ವಿಧ್ಯುಕ್ತ ಗೌರವ ವಂದನೆ ನೀಡಲಾಯಿತು. ಅವರ ಜೊತೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ದೊಡ್ಡ ಉದ್ಯಮ ದಿಗ್ಗಜರ ನಿಯೋಗ ಆಗಮಿಸಿದೆ.

ಗೌರವಾನ್ವಿತ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇಂದು ಪ್ರಧಾನ ಮಂತ್ರಿ ಜತೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಪ್ರಧಾನ ಮಂತ್ರಿ ಮೋದಿ ಅವವರು ಯುಎಇ ಅಧ್ಯಕ್ಷ, ಯುವರಾಜ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರಿಗೆ ಶುಭಾಶಯ ತಿಳಿಸಿದರು. ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಗಣನೀಯ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ದ್ವಿಪಕ್ಷೀಯ ಸಹಕಾರದ ಎಲ್ಲಾ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸುವ ಮತ್ತು ಆಳಗೊಳಿಸುವ ಅವಕಾಶಗಳ ಕುರಿತು ಚರ್ಚಿಸಿದರು. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ(ಸಿಇಪಿಎ) ಯಶಸ್ಸು ಮತ್ತು ದ್ವಿಪಕ್ಷೀಯ ಹೂಡಿಕೆ ಒಪ್ಪಂದ(ಬಿಐಟಿ) ಇತ್ತೀಚೆಗೆ ಜಾರಿಗೆ ಬಂದಿರುವುದು ಉಭಯ ದೇಶಗಳ ನಡುವಿನ ಬಲವಾದ ಆರ್ಥಿಕ ಮತ್ತು ವಾಣಿಜ್ಯ ಪಾಲುದಾರಿಕೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಅವರು ಒಪ್ಪಿಕೊಂಡರು. ವಿಶೇಷವಾಗಿ ಪರಮಾಣು ಶಕ್ತಿ, ನಿರ್ಣಾಯಕ ಖನಿಜಗಳು, ಹಸಿರು ಜಲಜನಕ, ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಬಳಕೆಯಾಗದ ಸಾಮರ್ಥ್ಯದ ಹೊಸ ಕ್ಷೇತ್ರಗಳನ್ನು ಅನ್ವೇಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಭೇಟಿಸಮಯದಲ್ಲಿ ಕೆಳಗಿನ ತಿಳಿವಳಿಕೆ ಒಡಂಬಡಿಕೆ, ಒಪ್ಪಂದಗಳಿಗೆ ಸಹಿ ಹಾಕಲಾಯಿತು, ಇದು ಸಾಂಪ್ರದಾಯಿಕ ಮತ್ತು ಹೊಸ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ವೇದಿಕೆ ನಿರ್ಮಿಸಿತು.

  • ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಎನ್ಎನ್ ಪಿಸಿಐಎಲ್) ಮತ್ತು ಎಮಿರೇಟ್ಸ್ ನ್ಯೂಕ್ಲಿಯರ್ ಎನರ್ಜಿ ಕಾರ್ಪೊರೇಷನ್ (ಇಎನ್ಇಸಿ) ನಡುವಿನ ಪರಮಾಣು ಸಹಕಾರಕುರಿತು ತಿಳಿವಳಿಕೆ ಒಡಂಬಡಿಕೆ
  • ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ(ಎಡಿಎನ್ಒಸಿ) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಡುವೆ ದೀರ್ಘಾವಧಿಯ ಎಲ್ಎನ್ ಜಿ ಪೂರೈಕೆ ಒಪ್ಪಂದ
  • ಎಡಿಎನ್ಒಸಿ ಮತ್ತು ಇಂಡಿಯಾ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್(ಐಎಸ್ ಪಿಆರ್ ಎಲ್) ನಡುವೆ ಒಪ್ಪಂದ
  • ಉರ್ಜಾ ಭಾರತ್ ಮತ್ತು ಎಡಿಎನ್ಒಸಿ ನಡುವಿನ ಅಬುಧಾಬಿ ಆನ್‌ಶೋರ್ ಬ್ಲಾಕ್ 1 ಕ್ಕಾಗಿ ಉತ್ಪಾದನೆ ರಿಯಾಯಿತಿ ಒಪ್ಪಂದ
  • ಭಾರತದಲ್ಲಿ ಫುಡ್ ಪಾರ್ಕ್‌ಗಳ ಅಭಿವೃದ್ಧಿ ಕುರಿತು ಗುಜರಾತ್ ಸರ್ಕಾರ ಮತ್ತು ಅಬುಧಾಬಿ ಡೆವಲಪ್‌ಮೆಂಟಲ್ ಹೋಲ್ಡಿಂಗ್ ಕಂಪನಿ(ಎಡಿಕ್ಯು) ನಡುವೆ ತಿಳಿವಳಿಕೆ ಒಡಂಬಡಿಕೆ

ಪರಮಾಣು ಸಹಕಾರ ಕುರಿತಾದ ತಿಳಿವಳಿಕೆ ಒಪ್ಪಂದವು ಪರಮಾಣು ಶಕ್ತಿ ಸ್ಥಾವರಗಳ ಕಾರ್ಯಾಚರಣೆ ಮತ್ತು ನಿರ್ವಹಣೆ, ಪರಮಾಣು ಸರಕುಗಳು ಮತ್ತು ಸೇವೆಗಳನ್ನು ಭಾರತದಿಂದ ಪಡೆಯುವುದು, ಪರಸ್ಪರ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವುದು ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರ ಹೆಚ್ಚಿಸಲು ನಿರೀಕ್ಷಿಸಲಾಗಿದೆ.

ಎಲ್ಎನ್ ಜಿ ದೀರ್ಘಾವಧಿ ಪೂರೈಕೆ ಒಪ್ಪಂದವು ವರ್ಷಕ್ಕೆ 1 ದಶಲಕ್ಷ ಮೆಟ್ರಿಕ್ ಟನ್ ಆಗಿದ್ದು, ಇದು ಕೇವಲ ಒಂದೇ ವರ್ಷದಲ್ಲಿ ಸಹಿ ಮಾಡಿದ 3ನೇ ಒಪ್ಪಂದವಾಗಿದೆ. ಐಒಸಿಎಲ್ ಮತ್ತು ಜಿಎಐಎಲ್ ಈ ಎರಡೂ ಕಂಪನಿಗಳುಈ ಹಿಂದೆ ಎಡಿಎನ್ಒಸಿ ಕಂಪನಿಯೊಂದಿಗೆ ಕ್ರಮವಾಗಿ 1.2 ದಶಲಕ್ಷ ಮೆಟ್ರಿಕ್ ಟನ್ ಮತ್ತು 0.5 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕಿದ್ದವು. ಈ ಒಪ್ಪಂದಗಳು ಎಲ್‌ಎನ್‌ಜಿ ಮೂಲಗಳನ್ನು ವೈವಿಧ್ಯಗೊಳಿಸುವ ಮೂಲಕ ಭಾರತದಲ್ಲಿ ಇಂಧನ ಭದ್ರತೆಯನ್ನು ಬಲಪಡಿಸಿವೆ.

ಎಡಿಎನ್ಒಸಿ ಮತ್ತು ಐಎಸ್|ಪಿಆರ್|ಎಲ್ ನಡುವಿನ ತಿಳುವಳಿಕೆ ಒಪ್ಪಂದವು ಭಾರತದಲ್ಲಿ ಕಚ್ಚಾ ತೈಲ ಸಂಗ್ರಹಣೆಗಾಗಿ ಹೆಚ್ಚುವರಿ ಅವಕಾಶಗಳಲ್ಲಿ ಎಡಿಎನ್ಒಸಿ ಭಾಗವಹಿಸುವಿಕೆಯನ್ನು ಅನ್ವೇಷಿಸಲು ಮತ್ತು ಪರಸ್ಪರ ಸ್ವೀಕಾರಾರ್ಹ ನಿಯಮಗಳು ಮತ್ತು ಷರತ್ತುಗಳ ಮೇಲೆ ಅದರ ಸಂಗ್ರಹಣೆ ಮತ್ತು ನಿರ್ವಹಣೆ ಒಪ್ಪಂದದ ನವೀಕರಣವನ್ನು ಒದಗಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು 2018ರಿಂದ ಐಎಸ್|ಪಿಆರ್|ಎಲ್ ನ ಮಂಗಳೂರು ಸ್ಥಾವರದಲ್ಲಿ ಕಚ್ಚಾ ತೈಲ ಸಂಗ್ರಹಣೆಯಲ್ಲಿ ಎಡಿಎನ್ಒಸಿಯ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

ಉರ್ಜಾ ಭಾರತ್(ಐಒಸಿಎಲ್ ಮತ್ತು ಭಾರತ್ ಪೆಟ್ರೋ ರಿಸೋರ್ಸಸ್ ಲಿಮಿಟೆಡ್‌ನ ಜೆವಿ) ಮತ್ತು ಎಡಿಎನ್‌ಒಸಿ ನಡುವಿನ ಅಬುಧಾಬಿ ಆನ್‌ಶೋರ್ ಬ್ಲಾಕ್ 1ಕ್ಕಾಗಿ  ಮಾಡಿಕೊಂಡಿರುವ ಉತ್ಪಾದನೆ ರಿಯಾಯಿತಿ ಒಪ್ಪಂದವು ಯುಎಇಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಭಾರತೀಯ ಕಂಪನಿಗೆ ಮೊದಲನೆಯದು. ಈ ರಿಯಾಯಿತಿಯು ಭಾರತಕ್ಕೆ ಕಚ್ಚಾ ತೈಲ ತರಲು ಉರ್ಜಾ ಭಾರತ್‌ಗೆ ಅವಕಾಶ ನೀಡುತ್ತದೆ, ಹೀಗಾಗಿ ದೇಶದ ಇಂಧನ ಭದ್ರತೆಗೆ ಕೊಡುಗೆ ನೀಡುತ್ತದೆ.

ಫುಡ್ ಪಾರ್ಕ್‌ಗಳ ಮೇಲಿನ ತಿಳಿವಳಿಕೆ ಒಪ್ಪಂದವು 2025ರ 2ನೇ ತ್ರೈಮಾಸಿಕದಲ್ಲಿ  ಫುಡ್ ಪಾರ್ಕ್ ಯೋಜನೆ ಪ್ರಾರಂಭಿಸುವ ದೃಷ್ಟಿಯಿಂದ ಗುಂಡನ್‌ಪಾರಾ, ಬಾವ್ಲಾ, ಅಹಮದಾಬಾದ್ ಅನ್ನು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಹೆಚ್ಚು ಭರವಸೆಯ ತಾಣವಾಗಿ ಅಭಿವೃದ್ಧಿಪಡಿಸಲು ಎಡಿಕ್ಯು(ಅಬುಧಾಬಿ ಹೂಡಿಕೆ ಕಂಪನಿ)ನ ಆಸಕ್ತಿಯ ಅಭಿವ್ಯಕ್ತಿಯನ್ನು ತಿಳಿಸುತ್ತದೆ. ಗುಜರಾತ್ ಸರ್ಕಾರವು ಎಡಿಕ್ಯು ಮತ್ತು ಎಡಿ ಬಂದರುಗಳಿಗೆ ಅನುಕೂಲ ಕಲ್ಪಿಸುತ್ತದೆ, ಈ ಸ್ಥಳದ ಬಗ್ಗೆ ವಿವರವಾದ ಮಾಹಿತಿ ಪಡೆಯಲು ಮತ್ತು ಅಗತ್ಯ ಅನುಮತಿ ಪಡೆಯಲು ಸಹಾಯ ಮಾಡುತ್ತದೆ.

ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಉಭಯ ನಾಯಕರು ಎರಡೂ ದೇಶಗಳ ನಡುವಿನ ಗಾಢವಾದ,  ಐತಿಹಾಸಿಕ ಮತ್ತು ಸಮಗ್ರ ಸಂಬಂಧಗಳು ಮತ್ತು ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡ ಹಲವಾರು ಉಪಕ್ರಮಗಳ ಕುರಿತು ಚರ್ಚೆ ನಡೆಸಿದರು. 3.5 ದಶಲಕ್ಷಕ್ಕಿಂತ ಹೆಚ್ಚಿರುವ ಭಾರತೀಯರಿಗೆ ಆತಿಥ್ಯ ವಹಿಸಿರುವುದಕ್ಕಾಗಿ ಯುಎಇ ನಾಯಕತ್ವಕ್ಕೆ ರಾಷ್ಟ್ರಪತಿ ಮುರ್ಮು ಕೃತಜ್ಞತೆ ಸಲ್ಲಿಸಿದರು.

ಗೌರವಾನ್ವಿತ ಶೇಖ್ ಖಲೀದ್ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು. 1992ರಲ್ಲಿ ಯುಎಇ ಮಾಜಿ ಅಧ್ಯಕ್ಷ ಗೌರವಾನ್ವಿತ ಶೇಖ್ ಜಾಯೆದ್ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ನಂತರ ಶೇಖ್ ಖಲೀದ್ ಅವರು ರಾಜ್‌ಘಾಟ್‌ನಲ್ಲಿ ಸಸಿ ನೆಟ್ಟ ಮೂರನೇ ತಲೆಮಾರಿನ ಯುಎಇ ನಾಯಕರಾದರು. 2016 ರಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ರಾಜ್‌ಘಾಟ್‌ನಲ್ಲಿ ಸಸಿ ನೆಟ್ಟಿದ್ದರು. ಇದು ಒಂದು ವಿಶಿಷ್ಟ ಮತ್ತು ಅಪರೂಪದ ಸಂದರ್ಭವಾಗಿದ್ದು, ಎರಡು ದೇಶಗಳ ನಡುವಿನ ಬಲವಾದ ಸಂಬಂಧದ ಪೀಳಿಗೆಯ ನಿರಂತರತೆಯನ್ನು ಪ್ರದರ್ಶಿಸುತ್ತದೆ. ರಾಜ್‌ಘಾಟ್ ಇತಿಹಾಸದಲ್ಲಿ ದೇಶದ 3 ತಲೆಮಾರುಗಳ ನಾಯಕರು ಮಹಾತ್ಮರನ್ನು ಗೌರವಿಸುವ ಸಸಿ ನೆಟ್ಟಿರುವುದು ಇದೇ ಮೊದಲು.

ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನಾಳೆ ಮುಂಬೈಗೆ ಭೇಟಿ ನೀಡಲಿದ್ದಾರೆ. ಭಾರತ-ಯುಎಇ ವ್ಯಾಪಾರ ವೇದಿಕೆಯಲ್ಲಿ ಅವರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ದೇಶಗಳ ನಡುವೆ ಭವಿಷ್ಯದ ಸಹಕಾರ ಹೊಂದಲು ಎರಡೂ ಕಡೆಯ ಉದ್ಯಮ ನಾಯಕರು ಮತ್ತು ಅಧಿಕಾರಿಗಳಿಗೆ ಇದು ವೇದಿಕೆ ಒದಗಿಸುತ್ತದೆ. ಭಾರತ-ಯುಎಇ ವರ್ಚುವಲ್ ಟ್ರೇಡ್ ಕಾರಿಡಾರ್(ವಿಟಿಸಿ) ಮತ್ತು ವಿಟಿಸಿ ಸುಗಮಗೊಳಿಸುವ ಮೈತ್ರಿ ಇಂಟರ್|ಫೇಸ್ ನಾಳೆ ಮುಂಬೈನಲ್ಲಿ ಜರುಗಲಿದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones