ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 16ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಶೇರ್ ಬಹಾದುರ್ ದೇವುಬಾ ಅವರ ಆಹ್ವಾನದ ಮೇರೆಗೆ ಲುಂಬಿನಿಗೆ ಅಧಿಕೃತ ಭೇಟಿ ನೀಡಲಿದ್ದಾರೆ. 2014ರಿಂದೀಚೆಗೆ ಪ್ರಧಾನಮಂತ್ರಿ ಅವರು ನೇಪಾಳಕ್ಕೆ ನೀಡುತ್ತಿರುವ ಐದನೇ ಭೇಟಿ ಇದಾಗಿದೆ.
ಲುಂಬಿನಿಯಲ್ಲಿ ಪ್ರಧಾನಮಂತ್ರಿ ಅವರು ಪವಿತ್ರ ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನೇಪಾಳ ಸರ್ಕಾರದ ಆಶ್ರಯದಲ್ಲಿ ಲುಂಬಿನಿ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿರುವ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಭಾಷಣ ಮಾಡಲಿದ್ದಾರೆ. ಪ್ರತ್ಯೇಕವಾಗಿ, ಲುಂಬಿನಿ ಸನ್ಯಾಸಿ ವಲಯದೊಳಗೆ ನವದೆಹಲಿಯ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟಕ್ಕೆ (ಐಬಿಸಿ) ಸೇರಿದ ನಿವೇಶನದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರವನ್ನು ನಿರ್ಮಿಸುವ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇಬ್ಬರೂ ಪ್ರಧಾನಮಂತ್ರಿಗಳು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೇಟಿಯು ನಮ್ಮ ನೆರೆಹೊರೆ ಮೊದಲು ನೀತಿಯನ್ನು ಮುಂದುವರಿಸಲು ಭಾರತ ಮತ್ತು ನೇಪಾಳ ನಡುವೆ ನಿಯಮಿತವಾಗಿ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವನ್ನು ಮುಂದುವರಿಸಿದೆ. ಇದು ಎರಡೂ ದೇಶಗಳ ಜನರ ಹಂಚಿಕೆಯ ನಾಗರಿಕ ಪರಂಪರೆಯನ್ನು ಒತ್ತಿಹೇಳುತ್ತದೆ.