ನಾನು ಫೆಬ್ರವರಿ 13-14 , 2024 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮತ್ತು ಫೆಬ್ರವರಿ 14-15, 2024 ರವರೆಗೆ ಕತಾರ್ ಗೆ ಅಧಿಕೃತ ಭೇಟಿಗಾಗಿ ಪ್ರಯಾಣಿಸುತ್ತಿದ್ದೇನೆ. ಇದು ಯು.ಎ.ಇ.ಗೆ ನನ್ನ ಏಳನೇ ಭೇಟಿಯಾಗಿದೆ ಮತ್ತು 2014 ರಿಂದ ಈ ತನಕ ಕತಾರ್ ಗೆ ನನ್ನ ಎರಡನೇ ಭೇಟಿಯಾಗಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಶಿಕ್ಷಣದಂತಹ ವೈವಿಧ್ಯಮಯ ವಲಯಗಳಲ್ಲಿ ಯು.ಎ.ಇ. ಜೊತೆಗಿನ ನಮ್ಮ ಸಹಕಾರವು ಬಹುಪಟ್ಟು ಬೆಳೆದಿದೆ. ನಮ್ಮ ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಪರ್ಕ ಎಂದಿಗಿಂತಲೂ ಬಲವಾಗಿದೆ.
ಅಬುಧಾಬಿಯಲ್ಲಿ ಯು.ಎ.ಇ. ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ ಮತ್ತು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ವ್ಯಾಪಕ ಚರ್ಚೆಗಳನ್ನು ಅವರೊಂದಿಗೆ ನಡೆಸಲಿದ್ದೇನೆ. ಗುಜರಾತ್ನಲ್ಲಿ ಇತ್ತೀಚೆಗೆ ನಡೆದ “ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024” ರಲ್ಲಿ ಮುಖ್ಯ ಅತಿಥಿಯಾಗಿದ್ದ ಹಿಸ್ ಹೈನೆಸ್ ಅವರನ್ನು ಆಹ್ವಾನಿಸುವ ಅವಕಾಶ ನನಗೆ ಸಿಕ್ಕಿತು.
ಯು.ಎ.ಇ.ಯ ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಸಚಿವ ಮತ್ತು ದುಬೈ ಆಡಳಿತಗಾರರಾದ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆಹ್ವಾನದ ಮೇರೆಗೆ, ನಾನು 14 ಫೆಬ್ರವರಿ, 2024 ರಂದು ದುಬೈನಲ್ಲಿ ನಡೆಯಲಿರುವ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ವಿಶ್ವ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಶೃಂಗಸಭೆಯ ಸಂದರ್ಭದಲ್ಲಿ ಯು.ಎ.ಇ.ಯ ಪ್ರಧಾನಮಂತ್ರಿ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರ ಜೊತೆಗಿನ ನನ್ನ ಚರ್ಚೆಗಳು ದುಬೈನೊಂದಿಗಿನ ನಮ್ಮ ಬಹುಮುಖಿ ಸಂಬಂಧಗಳನ್ನು ಬಲಪಡಿಸುವತ್ತ ಗಮನಹರಿಸಲಿದೆ.
ಭೇಟಿಯ ಸಮಯದಲ್ಲಿ, ನಾನು ಅಬುಧಾಬಿಯಲ್ಲಿ ಮೊದಲ ಹಿಂದೂ ಮಂದಿರವನ್ನು ಸಹ ಉದ್ಘಾಟಿಸಲಿದ್ದೇನೆ. ಈ ಬಿಎಪಿಎಸ್ ದೇವಾಲಯವು, ಭಾರತ ಮತ್ತು ಯು.ಎ.ಇ. ಎರಡೂ ದೇಶಗಳು ಹಂಚಿಕೊಳ್ಳುವ ಸಾಮರಸ್ಯ, ಶಾಂತಿ ಮತ್ತು ಸಹಿಷ್ಣುತೆಯ ಮೌಲ್ಯಗಳಿಗೆ ನಿರಂತರ ಗೌರವ ಪ್ರಧಾನವಾಗಿದೆ.
ಅಬುಧಾಬಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಯು.ಎ.ಇ.ಯ ಎಲ್ಲಾ ಎಮಿರೇಟ್ಸ್ ನ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ನಾನು ಮಾತನಾಡಲಿದ್ದೇನೆ.
ಕತಾರ್ ನಲ್ಲಿ, ಅಮೀರ್ ಹೈನೆಸ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಅವರ ನಾಯಕತ್ವದಲ್ಲಿ ಕತಾರ್ ಅತ್ಯುತ್ತಮ ಬೆಳವಣಿಗೆ ಮತ್ತು ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ. ಕತಾರ್ ನಲ್ಲಿರುವ ಇತರ ಉನ್ನತ ಗಣ್ಯರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ.
ಐತಿಹಾಸಿಕವಾಗಿ, ಭಾರತ ಮತ್ತು ಕತಾರ್ ದೇಶಗಳು ನಿಕಟ ಮತ್ತು ಸ್ನೇಹ ಸಂಬಂಧವನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ, ನಮ್ಮ ಬಹುಮುಖಿ ಸಂಬಂಧಗಳು ಉನ್ನತ ಮಟ್ಟದ ರಾಜಕೀಯ ವಿನಿಮಯ, ಬೆಳೆಯುತ್ತಿರುವ ವ್ಯಾಪಾರ ಮತ್ತು ಎರಡು ದೇಶಗಳ ನಡುವೆ ಹೂಡಿಕೆ, ನಮ್ಮ ಶಕ್ತಿ ಪಾಲುದಾರಿಕೆಯನ್ನು ಬಲಪಡಿಸುವುದು ಮತ್ತು ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಗಾಢವಾಗುತ್ತಲೇ ಇವೆ. ದೋಹಾದಲ್ಲಿ 800,000 ಕ್ಕೂ ಹೆಚ್ಚು ಸಂಖ್ಯೆಯ ಬಲಿಷ್ಠ ಭಾರತೀಯ ವಲಸಿಗ ಸಮುದಾಯದ ಉಪಸ್ಥಿತಿಯು ನಮ್ಮ ಎರಡೂ ದೇಶಗಳ ನಡುವಿನ ಬಲವಾದ ಜನರ-ಜನರ ಸಂಬಂಧಗಳಿಗೆ ಸಾಕ್ಷಿಯಾಗಿದೆ.