2015ರ ಐ.ಎ.ಎಸ್. ಅಧಿಕಾರಿಗಳ ತಂಡ ಇಂದು ತಮ್ಮ ಸಹಾಯಕ ಕಾರ್ಯದರ್ಶಿ ಸಮಾರೋಪ ಅಧಿವೇಶನದ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಎದುರು ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.
ಆಡಳಿತದ ವಿವಿಧ ಧ್ಯೇಯಗಳಿಗೆ ಸಂಬಂಧಿಸಿದಂತೆ ಅಂದರೆ ಅಪಘಾತ ಸಂತ್ರಸ್ತರಿಗೆ ತ್ವರಿತ ಸ್ಪಂದನೆ, ವೈಯಕ್ತಿಕ ಇಂಗಾಲ ಹೆಜ್ಜೆಗುರುತುಗಳ ಶೋಧನೆ, ಹಣಪೂರಣ, ಗ್ರಾಮೀಣ ಆದಾಯ ಸುಧಾರಣೆ, ದತ್ತಾಂಶ ಚಾಲಿತ ಗ್ರಾಮೀಣ ಪ್ರಗತಿ, ಪಾರಂಪರಿಕ ಪ್ರವಾಸೋದ್ಯಮ, ರೈಲ್ವೆ ಸುರಕ್ಷತೆ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಕುರಿತಂತೆ ಆಯ್ದ 8 ಪ್ರಾತ್ಯಕ್ಷಿಕೆಗಳನ್ನು ಅಧಿಕಾರಿಗಳು ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅತ್ಯಂತ ಕಿರಿಯ ಮತ್ತು ಅತ್ಯಂತ ಹಿರಿಯ ಅಧಿಕಾರಿಗಳು ಸುದೀರ್ಘ ಸಮಯವನ್ನು ಒಟ್ಟಿಗೆ ಕಳೆದು, ಪರಸ್ಪರ ಸಂವಹನ ನಡೆಸಿದ ಇದು ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಹೇಳಿದರು. ಕಿರಿಯ ಅಧಿಕಾರಿಗಳು ಈ ಸಂವಾದದ ಎಲ್ಲ ಧನಾತ್ಮಕ ಅಂಶಗಳನ್ನೂ ತಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಜಿಎಸ್ಟಿ ಜಾರಿ ಮತ್ತು ಡಿಜಿಟಲ್ ವಹಿವಾಟು ಅದರಲ್ಲೂ ಭೀಮ್ ಆಪ್ ಮೂಲಕ ವಹಿವಾಟು ಉತ್ತೇಜನಕ್ಕೆ ಗಮನ ಹರಿಸುವಂತೆ ಯುವ ಅಧಿಕಾರಿಗಳಿಗೆ ಪ್ರಧಾನಿ ಕರೆ ನೀಡಿದರು.
ತಮ್ಮ ತಮ್ಮ ಇಲಾಖೆಗಳಲ್ಲಿ ಸರ್ಕಾರಿ ಇ ಮಾರುಕಟ್ಟೆ ತಾಣ (ಜಿಇಎಂ)ದ ಅಳವಡಿಕೆಯನ್ನು ತ್ವರಿತಗೊಳಿಸುವಂತೆ ಎಲ್ಲ ಅಧಿಕಾರಿಗಳಿಗೆ ಪ್ರಧಾನಿ ಆಗ್ರಹಿಸಿದರು. ಇದು ಮಧ್ಯವರ್ತಿಗಳನ್ನು ತೆಗೆದುಹಾಕುವುದಲ್ಲದೆ ಸರ್ಕಾರಕ್ಕೆ ಭಾರಿ ಉಳಿತಾಯವನ್ನೂ ಮಾಡಲಿದೆ ಎಂದರು.
ಓಡಿಎಫ್ ಗುರಿ ಮತ್ತು ಗ್ರಾಮೀಣ ವಿದ್ಯುದ್ದೀಕರಣದ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ನೂರಕ್ಕೆ ನೂರು ಗುರಿ ಸಾಧನೆಯತ್ತ ಕೆಲಸ ಮಾಡುವಂತೆ ಆಗ್ರಹಿಸಿದರು. 2022ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟಗಾರರ ಭಾರತದ ಕನಸು ನನಸು ಮಾಡುವತ್ತ ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿನಮ್ರ ಹಿನ್ನೆಲೆಗಳಿಂದ ಬೆಳೆದುಬಂದ ಅಧಿಕಾರಿಗಳು ಯುವ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರನ್ನು ಪ್ರೇರೇಪಿಸಬೇಕು ಎಂದು ಪ್ರಧಾನಿ ಹೇಳಿದರು. ಸಂವಹನ ಸಹಾನುಭೂತಿ ಕಾರಣವಾಗುತ್ತದೆ ಎಂದೂ ಪ್ರಧಾನಿ ಹೇಳಿದರು.
ಇಂದು ಅಧಿಕಾರಿಗಳ ಪ್ರಮುಖ ಗುರಿ ದೇಶದ ಮತ್ತು ಅದರ ಪ್ರಜೆಗಳ ಕಲ್ಯಾಣವಾಗಿರಬೇಕು ಎಂದು ಹೇಳಿದರು. ತಂಡಸ್ಫೂರ್ತಿಯೊಂದಿಗೆ ಶ್ರಮಿಸುವಂತೆ, ಮತ್ತು ತಾವು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿ ತಂಡ ಕಟ್ಟುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು.