ಅಮೆರಿಕಾ ಭಾರತ ವ್ಯೂಹಾತ್ಮಕ ಸಹಯೋಗ ವೇದಿಕೆ (ಯು.ಎಸ್.ಐ.ಎಸ್.ಪಿ.ಎಫ್.) ಸದಸ್ಯರು ಇಂದು ನವದೆಹಲಿಯ ಲೋಕ ಕಲ್ಯಾಣ ಮಾರ್ಗ್ ನ ನಂ. 7ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ನಿಯೋಗದ ನೇತೃತ್ವವನ್ನು ಯು.ಎಸ್.ಐ.ಎಸ್.ಪಿ.ಎಫ್.ನ ಅಧ್ಯಕ್ಷ ಶ್ರೀ ಜಾನ್ ಚೇಂಬರ್ಸ್ ವಹಿಸಿದ್ದರು.
ಪ್ರಧಾನಮಂತ್ರಿಯವರು ಭಾರತದ ಆರ್ಥಿಕತೆಯ ಬಗ್ಗೆ ವಿಶ್ವಾಸವನ್ನು ಪುನರ್ವ್ಯಕ್ತಪಡಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿದರು. ದೇಶದಲ್ಲಿ ನವೋದ್ಯಮ ಪರಿಸರ ಹೊರಹೊಮ್ಮುತ್ತಿರುವ ಕುರಿತು ಅವರು ಪ್ರಸ್ತಾಪಿಸಿ, ಭಾರತೀಯ ಯುವಜನರ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದರು. ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಹ್ಯಾಕಥಾನ್ ಆಯೋಜನೆಯೂ ಸೇರಿದಂತೆ ನಾವಿನ್ಯತೆಯ ಸಾಮರ್ಥ್ಯದ ಉತ್ತೇಜನಕ್ಕೆ ಮತ್ತು ತಂತ್ರಜ್ಞಾನ ಬಳಸಿ ಸಮಸ್ಯೆ ಪರಿಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಮುಖವಾಗಿ ತಿಳಿಸಿದರು.
ಪ್ರಧಾನಮಂತ್ರಿಯವರು ಸುಗಮ ವಾಣಿಜ್ಯ ನಡೆಸುವುದಕ್ಕಾಗಿ ಸಾಂಸ್ಥಿಕ ತೆರಿಗೆ ಕಡಿತ ಮತ್ತು ಕಾರ್ಮಿಕ ಸುಧಾರಣೆ ಮಾಡಿರುವ ಕುರಿತಂತೆಯೂ ಮಾತನಾಡಿದರು. ಈಗ ಸರ್ಕಾರದ ಗುರಿ ಸುಗಮ ಜೀವನ ನಡೆಸುವಂತೆ ಮಾಡುವುದಾಗಿದೆ ಎಂದು ಒತ್ತಿ ಹೇಳಿದರು. ಭಾರತದ ಅನನ್ಯ ಶಕ್ತಿ ಮೂರು ಡಿಎಸ್ ಗಳ ಲಭ್ಯತೆಯಾಗಿದೆ ಅದು ಡೆಮಾಕ್ರಸಿ (ಪ್ರಜಾಪ್ರಭುತ್ವ) ಡೆಮೋಗ್ರಫಿ (ಜನಸಂಖ್ಯೆ) ಮತ್ತು ದಿಮಾಗ್ (ಬುದ್ಧಿವಂತಿಕೆ) ಎಂದರು.
ನಿಯೋಗವು ಪ್ರಧಾನಮಂತ್ರಿಯವರು ದೇಶದ ಬಗ್ಗೆ ತಳೆದಿರುವ ದೃಷ್ಟಿಕೋನಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ, ಭಾರತದ ಮುಂದಿನ ಐದು ವರ್ಷಗಳು ವಿಶ್ವದ ಮುಂದಿನ 25 ವರ್ಷಗಳನ್ನು ಸ್ಪಷ್ಟಪಡಿಸುತ್ತದೆ ಎಂದರು.
ಯುಎಸ್ಐಎಸ್ ಪಿಎಫ್ ಬಗ್ಗೆ
ಅಮೆರಿಕಾ –ಭಾರತ ವ್ಯೂಹಾತ್ಮಕ ಸಹಯೋಗ ವೇದಿಕೆ (ಯುಎಸ್ಐಎಸ್ ಪಿಎಫ್) ಒಂದು ಲಾಭರಹಿತ ಸಂಘಟನೆಯಾಗಿದ್ದು, ಇದರ ಮುಖ್ಯ ಉದ್ದೇಶ ಭಾರತ – ಅಮೆರಿಕಾ ದ್ವಿಪಕ್ಷೀಯ ಮತ್ತು ವ್ಯೂಹಾತ್ಮಕ ಪಾಲುದಾರಿಕೆಯನ್ನು ಆರ್ಥಿಕ ಪ್ರಗತಿ, ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಮತ್ತು ನಾವಿನ್ಯತೆಯ ಮೂಲಕ ಬಲಪಡಿಸುವುದಾಗಿದೆ.