ಇತ್ತೀಚಿನ ದಿನಗಳಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯ ನಿಲುವಿನಲ್ಲಿ ಬದಲಾವಣೆ ಆಗಿದೆ. ಈ ಬದಲಾವಣೆ ಭಾರತೀಯ ರೈಲ್ವೆಯ ಆಧುನೀಕರಣದಲ್ಲಿ ಅಭೂತಪೂರ್ವ ಪ್ರಗತಿಗೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಗುಜರಾತ್ ನ ಕೇವಾಡಿಯಾಕ್ಕೆ ದೇಶದ ವಿವಿಧ ವಲಯಗಳಿಂದ 8 ರೈಲುಗಳ ಸಂಪರ್ಕಕ್ಕೆ ಹಸಿರು ನಿಶಾನೆ ತೋರಿಸಿ, ರಾಜ್ಯದ ವಿವಿಧ ರೈಲ್ವೆ ಸಂಬಂಧಿತ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೊದಲು ಗಮನವು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ನಡೆಸಲು ಮಾತ್ರ ಸೀಮಿತವಾಗಿರುತ್ತಿತ್ತು ಮತ್ತು ಹೊಸ ಆಲೋಚನೆ ಅಥವಾ ಹೊಸ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಈ ವಿಧಾನವನ್ನು ಬದಲಾಯಿಸುವುದು ಕಡ್ಡಾಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಸಂಪೂರ್ಣ ರೈಲ್ವೆ ವ್ಯವಸ್ಥೆಯ ಸಮಗ್ರ ಪರಿವರ್ತನೆಯ ಕೆಲಸ ಮಾಡಲಾಯಿತು ಮತ್ತು ಇದು ಬಜೆಟ್ ನೊಂದಿಗೆ ಹೊಸ ರೈಲು ಪ್ರಕಟಣೆಗೆ ಮಾತ್ರ ಸೀಮಿತವಾಗಿರಲಿಲ್ಲ. ಪರಿವರ್ತನೆಯು ಅನೇಕ ರಂಗಗಳಲ್ಲಿ ನಡೆಯಿತು ಎಂದರು. ಕೆವಾಡಿಯಾವನ್ನು ಸಂಪರ್ಕಿಸುತ್ತಿರುವ ಪ್ರಸಕ್ತ ಯೋಜನೆಯ ಉದಾಹರಣೆ ನೀಡಿದ ಅವರು, ಅಲ್ಲಿ ಬಹುಹಂತದ ಗಮನ ದಾಖಲೆಯ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಾರಣವಾಯಿತು ಎಂದರು.
ಹಿಂದಿನ ಕಾಲದ ವಿಧಾನಗಳ ಬದಲಾವಣೆಯ ಉದಾಹರಣೆಯಾಗಿ ಪ್ರಧಾನ ಮಂತ್ರಿ ಸಮರ್ಪಿತ ಸರಕು ಕಾರಿಡಾರ್ ಅನ್ನು ಪ್ರಸ್ತುತಪಡಿಸಿದರು. ಪ್ರಧಾನಮಂತ್ರಿಯವರು ಇತ್ತೀಚೆಗೆ ಪೂರ್ವ ಮತ್ತು ಪಶ್ಚಿಮ ಸಮರ್ಪಿತ ಸರಕು ಕಾರಿಡಾರ್ ಗಳನ್ನು ದೇಶಕ್ಕೆ ಸಮರ್ಪಿಸಿದ್ದರು. ಈ ಯೋಜನೆಯು ಈಗ ಪ್ರಗತಿಯಲ್ಲಿದೆ. 2006-2014ರ ನಡುವೆ ಒಂದು ಕಿಲೋಮೀಟರ್ ಹಳಿ ಸಹ ಹಾಕದೆ ಕಾಗದಗಳಲ್ಲಿ ಮಾತ್ರ ಕಾಮಗಾರಿ ನಡೆದಿತ್ತು. ಈಗ ಮುಂದಿನ 11 ತಿಂಗಳಲ್ಲಿ ಒಟ್ಟು 1100 ಕಿಲೋಮೀಟರ್ ಪೂರ್ಣಗೊಳ್ಳಲಿದೆ.