ನನ್ನ ಪ್ರಿಯ ದೇಶವಾಸಿಗಳೇ ನಿಮ್ಮೆಲ್ಲರಿಗೂ ನಮಸ್ಕಾರ. ಆಕಾಶವಾಣಿಯ ಮೂಲಕ ಮನದ ಮಾತನ್ನು ಹಂಚಿಕೊಳ್ಳುತ್ತಾ 3 ವರ್ಷಗಳೇ ಆಗಿ ಹೋಗಿವೆ. ಇಂದು ಇದು 36ನೇ ಕಂತು. ಮನದ ಮಾತು ಒಂದು ರೀತಿ ಭಾರತದ ಸಕಾರಾತ್ಮಕ ಶಕ್ತಿಯಾಗಿದೆ. ದೇಶದ ಮೂಲೆಮೂಲೆಯ ಜನರಲ್ಲಿ ಹುದುಗಿದ ಭಾವನೆಗಳು, ಇಚ್ಛೆಗಳು, ಅಪೇಕ್ಷೆಗಳು, ಕೆಲವೆಡೆ ದೂರುಗಳಾಗಿವೆ. ಹೀಗೆ ಜನಮಾನಸದಲ್ಲಿ ತುಂಬಿ ತುಳುಕುತ್ತಿರುವ ಭಾವನೆಗಳೊಂದಿಗೆ ನಾನು ಬೆರೆಯಲು ಮನದ ಮಾತು ನನಗೆ ಒಂದು ಅದ್ಭುತ ಅವಕಾಶವನ್ನು ಒದಗಿಸಿದೆ. ನಾನೆಂದಿಗೂ ನನ್ನ ಮನದ ಮಾತು ಎಂದು ಹೇಳಿಲ್ಲ. ಈ ಮನದ ಮಾತು ದೇಶವಾಸಿಗಳ ಮನದೊಂದಿಗೆ ಬೆರೆತಿದೆ, ಅವರ ಭಾವನೆಗಳೊಂದಿಗೆ ಬೆರೆತಿದೆ, ಅವರ ಆಸೆ ಆಕಾಂಕ್ಷೆಗಳೊಂದಿಗೆ ಬೆರೆತಿದೆ. ಮನದ ಮಾತಿನಲ್ಲಿ ನಾನು ಹೇಳುವ ಮಾತುಗಳೆಲ್ಲವೂ ದೇಶದ ಮೂಲೆ ಮೂಲೆಯಿಂದ ಜನರು ನನಗೆ ಕಳುಹಿಸುವ ಅವರ ಮಾತುಗಳಾಗಿವೆ. ನಿಮಗೆ ಬಹುಶಃ ನಾನು ಬಹಳ ಕಡಿಮೆ ಹೇಳಲಾಗುತ್ತದೆಯೇನೋ, ಆದರೆ ನನಗೆ ತುಂಬಿ ತುಳುಕುವಂತಹ ಖಜಾನೆಯೇ ದೊರೆಯುತ್ತದೆ. ಅದು ಈ ಮೇಲ್ ಆಗಿರಲಿ, ದೂರವಾಣಿ ಆಗಿರಲಿ, ಮೈ ಗೌ ನಲ್ಲಾಗಿರಲಿ, ನರೇಂದ್ರ ಮೋದಿ ಆಪ್ನಲ್ಲಾಗಿರಲಿ ಸಾಕಷ್ಟು ಮಾತುಗಳು ನನಗೆ ತಲುಪುತ್ತವೆ. ಹೆಚ್ಚಿನವು ನನಗೆ ಪ್ರೇರಣಾದಾಯಕವಾಗಿರುತ್ತವೆ.
ಸಾಕಷ್ಟು ಸರ್ಕಾರದಲ್ಲಿಯ ಸುಧಾರಣೆ ಕುರಿತಾಗಿರುತ್ತವೆ. ಕೆಲವು ವ್ಯಕ್ತಿಗತ ದೂರುಗಳಾಗಿದ್ದರೆ ಇನ್ನು ಕೆಲವು ಸಾಮೂಹಿಕ ಸಮಸ್ಯೆಗಳ ಮೇಲೆ ಗಮನ ಹರಿಸುವಂಥವಾಗಿರುತ್ತವೆ. ನಾನು ತಿಂಗಳಿಗೊಮ್ಮೆ ನಿಮ್ಮ ಅರ್ಧ ಗಂಟೆಯಷ್ಟು ಸಮಯ ತೆಗೆದುಕೊಳ್ಳುತ್ತೇನೆ. ಆದರೆ ಜನರು 30 ದಿನಗಳೂ ಮನದ ಮಾತಿಗೆ ತಮ್ಮ ಮಾತುಗಳನ್ನು ತಲುಪಿಸುತ್ತಾರೆ. ಅದರ ಪರಿಣಾಮವಾಗಿ ಸರ್ಕಾರದಲ್ಲೂ ಸಂವೇದನಾಶೀಲತೆ, ಸಮಾಜದಲ್ಲಿ ದೂರ ದೂರದಲ್ಲಿ ಎಂತೆಂಥ ಶಕ್ತಿ ಕೇಂದ್ರೀಕೃತವಾಗಿದೆ ಅದರತ್ತ ಸರ್ಕಾರ ಗಮನ ನೀಡುವುದು, ಇದೆಲ್ಲ ಸಹಜ ಅನುಭವದಂತೆ ಕಂಡುಬರುತ್ತಿದೆ. ಹಾಗಾಗಿ ಮನದ ಮಾತಿನ 3 ವರ್ಷಗಳ ಈ ಯಾತ್ರೆ ದೇಶವಾಸಿಗಳ ಭಾವನೆಗಳ ಅರಿವಿನ ಯಾತ್ರೆಯಾಗಿದೆ. ಅಲ್ಲದೆ ಬಹುಶಃ ಇಷ್ಟು ಕಡಿಮೆ ಸಮಯದಲ್ಲಿ ದೇಶದ ಸಾಮಾನ್ಯ ನಾಗರಿಕನ ಭಾವನೆಗಳನ್ನು ಅರಿತುಕೊಳ್ಳುವ ಅವಕಾಶ ದೊರೆತದ್ದಕ್ಕೆ ದೇಶವಾಸಿಗಳಿಗೆ ನಾನು ಆಭಾರಿಯಾಗಿದ್ದೇನೆ. ಮನದ ಮಾತಿನಲ್ಲಿ ನಾನು ಯಾವಾಗಲೂ ಆಚಾರ್ಯ ವಿನೋಭಾ ಭಾವೆಯವರ ಮಾತನ್ನು ನೆನಪಿಟ್ಟಿದ್ದೇನೆ. ಆಚಾರ್ಯ ವಿನೋಭಾ ಭಾವೆ ’ಅ-ಸರ್ಕಾರಿ, ಅಸರ್ಕಾರಿ’ ಅಂದರೆ ಸರ್ಕಾರದ ಹೊರತಾಗಿದ್ದದ್ದು – ಪರಿಣಾಮಕಾರಿ ಎಂದು ಹೇಳುತ್ತಿದ್ದರು. ಮನದ ಮಾತಿನಲ್ಲಿ ನಾನೂ ದೇಶದ ಜನತೆಯನ್ನು ಕೇಂದ್ರೀಕೃತಗೊಳಿಸುವ ಪ್ರಯತ್ನ ಮಾಡಿದ್ದೇನೆ. ರಾಜಕೀಯದಿಂದ ದೂರವಿರಿಸಿದ್ದೇನೆ. ತಾತ್ಕಾಲಿಕ ಆವೇಶ, ಆಕ್ರೋಶದಲ್ಲಿ ಕೊಚ್ಚಿಹೋಗುವ ಬದಲು ಸ್ಥಿರ ಮನಸ್ಸಿನಿಂದ ನಿಮ್ಮೊಂದಿಗಿರುವ ಪ್ರಯತ್ನ ಮಾಡಿದ್ದೇನೆ.
ಈಗ 3 ವರ್ಷಗಳ ನಂತರ ಸಾಮಾಜಿಕ ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು, ರಿಸರ್ಚ್ ಸ್ಕಾಲರ್ ಗಳು, ಮಾಧ್ಯಮ ತಜ್ಞರು ಖಂಡಿತ ಇದರ ವಿಶ್ಲೇಷಣೆ ಮಾಡುತ್ತಾರೆ. ಸಾಧಕ-ಬಾಧಕ ಹೀಗೆ ಪ್ರತಿಯೊಂದು ವಿಷಯಗಳನ್ನೂ ಬೆಳಕಿಗೆ ತರುತ್ತಾರೆ ಮತ್ತು ಈ ವಿಚಾರ ವಿಮರ್ಶೆ ಭವಿಷ್ಯದಲ್ಲಿ ಮನದ ಮಾತಿಗೆ ಬಹಳ ಉಪಯುಕ್ತವಾಗಲಿದೆ, ಇದರಿಂದ ಒಂದು ಹೊಸ ಚೈತನ್ಯ, ಹೊಸ ಶಕ್ತಿ ದೊರೆಯಲಿದೆ ಎಂದು ನನಗೆ ವಿಶ್ವಾಸವಿದೆ. ನಾವು ಊಟ ಮಾಡುವಾಗ ಎಷ್ಟು ಅವಶ್ಯಕತೆಯಿದೆಯೋ ಅಷ್ಟನ್ನೇ ಸೇವಿಸಬೇಕು, ಆಹಾರ ಪದಾರ್ಥಗಳನ್ನು ಹಾಳು ಮಾಡಬಾರದು ಎಂದು ಹಿಂದೊಮ್ಮೆ ಮನದ ಮಾತಿನಲ್ಲಿ ಹೇಳಿದ್ದೆ. ಆದರೆ ತದನಂತರ ಈಗಾಗಲೇ ಅನೇಕ ಸಂಘ ಸಂಸ್ಥೆಗಳು, ಯುವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ದೇಶದ ಮೂಲೆ ಮೂಲೆಯಿಂದ ಬಂದ ಪತ್ರಗಳಿಂದ ನನಗೆ ತಿಳಿಯಿತು. ತಟ್ಟೆಯಲ್ಲಿ ಬಿಟ್ಟುಹೋಗುವ ಅನ್ನವನ್ನು ಹೇಗೆ ಒಟ್ಟುಗೂಡಿಸಿ ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂಬ ಕುರಿತು ಎಷ್ಟೊಂದು ಜನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. ಬಹಳ ಹರ್ಷವೆನಿಸಿತು.
ನಾನು ಒಮ್ಮೆ ಮನದ ಮಾತಿನಲ್ಲಿ ಮಹಾರಾಷ್ಟ್ರದ ನಿವೃತ್ತ ಶಿಕ್ಷಕ ಶ್ರೀಯುತ ಚಂದ್ರಕಾಂತ್ ಕುಲಕರ್ಣಿ ಅವರ ಮಾತನ್ನು ಪ್ರಸ್ತಾಪಿಸಿದ್ದೆ. ಅವರಿಗೆ 16 ಸಾವಿರ ರೂಪಾಯಿ ಪಿಂಚಣಿ ಲಭಿಸುತ್ತದೆ. ಅವರು ತಮಗೆ ಸಿಗುವ ಪಿಂಚಣಿಯಿಂದ, 5 ಸಾವಿರ ರೂಪಾಯಿಗಳ 51 ಪೋಸ್ಟ್ ಡೇಟೆಡ್ ಚೆಕ್ಗಳನ್ನು ಸ್ವಚ್ಛತೆಗಾಗಿ ದಾನ ನೀಡಿದ್ದರು. ಅದರ ನಂತರ ಸ್ವಚ್ಛತೆಗಾಗಿ ಇಂಥ ಕೆಲಸಕ್ಕೆ ಅದೆಷ್ಟು ಜನರು ಮುಂದೆ ಬಂದರು ಎಂಬುದನ್ನು ನಾನು ಕಂಡಿದ್ದೇನೆ.
ಒಮ್ಮೆ ನಾನು ಹರಿಯಾಣದ ಸರಪಂಚರೊಬ್ಬರು ಕಳುಹಿಸಿದ ಸೆಲ್ಫಿ ವಿದ್ ಡಾಟರ್ (ಮಗಳೊಂದಿಗೆ ಸೆಲ್ಫಿ) ವಿಷಯವನ್ನು ಮನದ ಮಾತಿನಲ್ಲಿ ಎಲ್ಲರ ಮುಂದಿರಿಸಿದೆ. ನೋಡು ನೋಡುತ್ತಲೇ ಕೇವಲ ಭಾರತದಿಂದ ಮಾತ್ರವಲ್ಲ, ವಿಶ್ವದಾದ್ಯಂತ ಸೆಲ್ಫಿ ವಿದ್ ಡಾಟರ್ ಎಂಬುದು ಒಂದು ಬಹುದೊಡ್ಡ ಅಭಿಯಾನದ ರೂಪದಲ್ಲಿ ಹರಡಿತು. ಇದು ಕೇವಲ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ವಿಷಯವಲ್ಲ. ಪ್ರತಿ ಹೆಣ್ಣು ಮಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವ, ಅಭಿಮಾನ ಮೂಡಿಸುವ ಘಟನೆಯಾಗಿ ರೂಪುಗೊಂಡಿತು. ಪ್ರತಿ ತಂದೆತಾಯಿಗೂ ತಾವೂ ಮಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು ಎನಿಸತೊಡಗಿತು. ಪ್ರತಿ ಹೆಣ್ಣು ಮಗಳಿಗೂ ತನ್ನದೇ ಹಿರಿಮೆಯಿದೆ, ತನ್ನದೇ ಆದ ಮಹತ್ವವಿದೆ ಎಂದೆನಿಸತೊಡಗಿತು.
ಕಳೆದ ದಿನಗಳಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯವರೊಂದಿಗೆ ಕುಳಿತಿದ್ದೆ. ಪ್ರವಾಸಕ್ಕೆಂದು ತೆರಳುವ ಜನರಿಗೆ ಇನ್ಕ್ರೆಡಿಬಲ್ ಇಂಡಿಯಾ ಬಗ್ಗೆ ಅವರು ಎಲ್ಲಿಯೇ ಹೋಗಲಿ ಫೋಟೊ ಕಳುಹಿಸಿ ಎಂದು ಕೇಳಿದ್ದೆ. ಭಾರತದ ಪ್ರತಿಯೊಂದು ಮೂಲೆಯಿಂದಲೂ ಲಕ್ಷಾಂತರ ಫೋಟೊಗಳು ಬಂದವು. ಒಂದು ರೀತಿ ಪ್ರವಾಸೀ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದೊಂದು ಬಹು ದೊಡ್ಡ ಆಸ್ತಿಯಾದಂತಾಯ್ತು. ಒಂದು ಪುಟ್ಟ ಘಟನೆ ಎಷ್ಟು ದೊಡ್ಡ ಆಂದೋಲನಕ್ಕೆ ನಾಂದಿಯಾಗುತ್ತದೆ ಎಂಬುದನ್ನು ಮನದ ಮಾತಿನಲ್ಲಿ ನಾನು ಅನುಭವಿಸಿದ್ದೇನೆ. ಇಂದು ಮನದ ಮಾತಿಗೆ 3 ವರ್ಷಗಳು ತುಂಬಿರುವ ಬಗ್ಗೆ ಯೋಚಿಸುತ್ತಿರುವ ಸಂದರ್ಭದಲ್ಲಿ ಕಳೆದ ವರ್ಷಗಳ ಕೆಲ ಮಾತುಗಳು ಮನಃಪಟಲವನ್ನು ಆವರಿಸಿಬಿಟ್ಟವು. ದೇಶ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲು ಪ್ರತಿ ಕ್ಷಣವೂ ಮುಂಚೂಣಿಯಲ್ಲಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಮತ್ತೊಬ್ಬರ ಒಳಿತಿಗಾಗಿ, ಸಮಾಜದ ಒಳಿತಿಗಾಗಿ, ದೇಶದ ಪ್ರಗತಿಗಾಗಿ ಏನಾದರೂ ಮಾಡಬಯಸುತ್ತಾನೆ. ನನ್ನ 3 ವರ್ಷದ ಮನದ ಮಾತಿನ ಈ ಅಭಿಯಾನದಲ್ಲಿ ನಾನು ದೇಶವಾಸಿಗಳಿಂದ ತಿಳಿದುಕೊಂಡೆ, ಅರಿತುಕೊಂಡೆ, ಕಲಿತೆ. ಯಾವುದೇ ದೇಶಕ್ಕೆ ಇದು ಅತಿ ದೊಡ್ಡ ಆಸ್ತಿಯಾಗಿದೆ, ಬಹುದೊಡ್ಡ ಶಕ್ತಿಯಾಗಿರುತ್ತದೆ. ನಾನು ಹೃದಯಪೂರ್ವಕವಾಗಿ ದೇಶದ ಜನರಿಗೆ ನಮಿಸುತ್ತೇನೆ.
ನಾನೊಮ್ಮೆ ಮನದ ಮಾತಿನಲ್ಲಿ ಖಾದಿ ಬಗ್ಗೆ ಚರ್ಚಿಸಿದ್ದೆ. ಖಾದಿ ಎಂಬುದು ಒಂದು ವಸ್ತ್ರವಲ್ಲ ಅದೊಂದು ವಿಚಾರವಾಗಿದೆ. ಈ ಮಧ್ಯೆ ಖಾದಿ ಬಗ್ಗೆ ಸಾಕಷ್ಟು ಅಭಿರುಚಿ ಹೆಚ್ಚಿದೆ. ಖಾದಿಧಾರಿಗಳಾಗಿ ಎಂದೇನೂ ಹೇಳುವುದಿಲ್ಲ ಆದರೆ ವಿಭಿನ್ನ ಬಗೆಯ ಫ್ಯಾಬ್ರಿಕ್ಗಳಿರುತ್ತವೆ ಅದರಲ್ಲಿ ಖಾದಿ ಕೂಡಾ ಒಂದು ಯಾಕಾಗಬಾರದು? ಮನೆಯಲ್ಲಿ ಹೊದಿಕೆಯಾಗಲಿ, ಕರವಸ್ತ್ರವಾಗಲಿ, ಪರದೆಯಾಗಲಿ ಎಂದು ನಾನು ಸಹಜವಾಗಿ ಹೇಳಿದ್ದೆ. ಯುವಪೀಳಿಗೆಯಲ್ಲಿ ಖಾದಿ ಆಕರ್ಷಣೆ ಹೆಚ್ಚಿದೆ ಎಂಬುದು ಅರಿವಿಗೆ ಬಂದಿದೆ. ಖಾದಿ ಮಾರಾಟ ಹೆಚ್ಚಿದೆ ಮತ್ತು ಅದರಿಂದಾಗಿ ನೇರವಾಗಿ ಬಡವನ ಮನೆಗೆ ಉದ್ಯೋಗದ ನಂಟು ಬೆಳೆದಿದೆ. ಅಕ್ಟೋಬರ್ 2 ರಿಂದ ಖಾದಿ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಖಾದಿಯ ಈ ಆಂದೋಲನವನ್ನು ಮುಂದುವರಿಸಿ ಮತ್ತು ಅಭಿವೃದ್ಧಿಪಡಿಸಿ ಎಂದು ನಾನು ಇನ್ನೊಮ್ಮೆ ಆಗ್ರಹಿಸುತ್ತೇನೆ. ಖಾದಿ ಖರೀದಿಸಿ ಬಡವನ ಮನೆಯಲ್ಲೂ ದೀಪಾವಳಿಯ ದೀಪ ಬೆಳಗಿಸೋಣ ಎಂಬ ಭಾವನೆಯೊಂದಿಗೆ ದುಡಿಯೋಣ. ನಮ್ಮ ದೇಶದ ಬಡಜನತೆಗೆ ಇದರಿಂದ ಹೊಸ ಶಕ್ತಿ ದೊರೆಯುತ್ತದೆ ಮತ್ತು ನಾವು ಅದನ್ನು ಮಾಡಲೇಬೇಕು. ಈಗ ಖಾದಿಯೆಡೆ ಅಭಿರುಚಿ ಹೆಚ್ಚಿರುವುದರಿಂದ ಖಾದಿ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ, ಭಾರತ ಸರ್ಕಾರದಲ್ಲಿ, ಖಾದಿಗೆ ಸಂಬಂಧಿಸಿದ ಜನರಲ್ಲಿ ಹೊಸ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳೋಣ, ಉತ್ಪಾದನಾ ಕ್ಷಮತೆಯನ್ನು ಹೇಗೆ ಹೆಚ್ಚಿಸೋಣ, ಸೋಲಾರ್ ಚರಕವನ್ನು ಹೇಗೆ ನಿರ್ಮಿಸೋಣ? ಎಂದು ಹೊಸ ದೃಷ್ಟಿಕೋನದಿಂದ ಆಲೋಚಿಸುವ ಉತ್ಸಾಹ ಹೆಚ್ಚಿದೆ. ನಮ್ಮ ಯಾವ ಪುರಾತನ ಪರಂಪರೆ, 20-25-30 ವರ್ಷಗಳಿಂದ ಮುಚ್ಚಿಹೋಗಿದ್ದವೋ ಅವುಗಳಿಗೆ ಪುನರುಜ್ಜೀವನ ಹೇಗೆ ಕಲ್ಪಿಸಬೇಕು ಎಂಬ ಚಿಂತನೆ ಮೂಡಿದೆ.
ಉತ್ತರ ಪ್ರದೇಶದ ವಾರಣಾಸಿಯ ಸೇವಾಪುರ್ನಲ್ಲಿ ಖಾದಿ ಆಶ್ರಮ 26 ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಆದರೆ ಇಂದು ಪುನರುಜ್ಜೀವನ ಪಡೆದಿದೆ. ವಿಭಿನ್ನ ಪ್ರಕಾರದ ಉಪಕಸುಬುಗಳನ್ನು ಜೋಡಿಸಿಕೊಳ್ಳಲಾಗಿದೆ. ಬಹಳಷ್ಟು ಜನರಿಗೆ ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಕಾಶ್ಮೀರದ ಪಂಪೋರ್ನಲ್ಲಿ ಖಾದಿ ಮತ್ತು ಗ್ರಾಮೊದ್ಯೋಗ ಸಂಸ್ಥೆಯು ಮುಚ್ಚಲ್ಪಟ್ಟಿದ್ದ ತಮ್ಮ ತರಬೇತಿ ಕೇಂದ್ರವನ್ನು ಮತ್ತೆ ಆರಂಭಿಸಿದೆ ಹಾಗೂ ಕಾಶ್ಮೀರದ ಬಳಿಯಂತೂ ಈ ಕ್ಷೇತ್ರಕ್ಕೆ ಕೊಡುಗೆ ನೀಡಲು ಬಹಳಷ್ಟಿದೆ. ಈಗ ಈ ತರಬೇತಿ ಕೇಂದ್ರ ಮತ್ತೆ ಆರಂಭಗೊಂಡಿದ್ದರಿಂದ ಹೊಸ ಪೀಳಿಗೆಗೆ ಆಧುನಿಕ ರೀತಿಯಲ್ಲಿ ನಿರ್ಮಿಸಲು, ಹೆಣೆಯಲು, ಹೊಸ ವಸ್ತುಗಳನ್ನು ಉತ್ಪಾದಿಸಲು ಸಹಾಯಕಾರಿಯಾಗಲಿದೆ. ದೊಡ್ಡ ದೊಡ್ಡ ಕಾರ್ಪೋರೇಟ್ ಹೌಸ್ಗಳು ಕೂಡಾ ದೀಪಾವಳಿ ಸಂದರ್ಭದಲ್ಲಿ ಉಡುಗೊರೆ ನೀಡಲು ಖಾದಿ ವಸ್ತುಗಳನ್ನು ಬಳಸುತ್ತಿರುವುದು ನನಗೆ ಬಹಳ ಸಂತಸವೆನಿಸಿದೆ. ಜನರು ಕೂಡಾ ಒಬ್ಬರಿಗೊಬ್ಬರು ಖಾದಿ ವಸ್ತುಗಳನ್ನೇ ಉಡುಗೊರೆಯಾಗಿ ನೀಡಲು ಆರಂಭಿಸಿದ್ದಾರೆ. ಸಹಜವಾಗಿಯೇ ಒಂದು ವಸ್ತು ಹೇಗೆ ವಿಸ್ತಾರಗೊಳ್ಳುತ್ತದೆ, ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎಂಬುದನ್ನು ನಾವು ಊಹಿಸಿಕೊಳ್ಳಬಹುದು.
ನನ್ನ ಪ್ರಿಯ ದೇಶವಾಸಿಗಳೇ, ಕಳೆದ ತಿಂಗಳ ಮನದ ಮಾತಿನಲ್ಲಿ ನಾವೆಲ್ಲರೂ ಒಂದು ಸಂಕಲ್ಪಗೈದಿದ್ದೆವು ಮತ್ತು ಗಾಂಧಿ ಜಯಂತಿಗೆ 15 ದಿನಗಳಿಗೂ ಮೊದಲು ದೇಶಾದ್ಯಂತ ಸ್ವಚ್ಛತೆಯ ಉತ್ಸವ ಆಚರಿಸುತ್ತೇವೆ, ಸ್ವಚ್ಛತೆಯೊಂದಿಗೆ ಜನಮಾನಸವನ್ನು ಒಗ್ಗೂಡಿಸೋಣ ಎಂದು ನಿರ್ಧರಿಸಿದ್ದೆವು. ನಮ್ಮ ಗೌರವಾನ್ವಿತ ರಾಷ್ಟ್ರಪತಿಯವರು ಈ ಕಾರ್ಯಕ್ಕೆ ಚಾಲನೆ ನೀಡಿದರು ಮತ್ತು ದೇಶ ಒಗ್ಗೂಡಿತು. ನಗರವಾಗಲಿ, ಗ್ರಾಮವಾಗಲಿ, ಪುರುಷರಾಗಿರಲಿ, ಸ್ತ್ರೀಯರಾಗಿರಲಿ, ಅಬಾಲವೃದ್ಧರಾದಿಯಾಗಿ ಇಂದು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮತ್ತು ನಾನು ಸಂಕಲ್ಪದಿಂದ ಸಿದ್ಧಿ ಎಂದು ಹೇಳಿದಾಗ ಈ ಸ್ವಚ್ಛತಾ ಅಭಿಯಾನ ಸಂಕಲ್ಪದಿಂದ ಸಿದ್ಧಿಯೆಡೆ ಹೇಗೆ ಮುಂದುವರಿಯುತ್ತಿದೆ ಎಂದು ನಾವು ಕಣ್ಣಾರೆ ನೋಡುತ್ತಿದ್ದೇವೆ. ಪ್ರತಿಯೊಬ್ಬರೂ ಇದನ್ನು ಸ್ವೀಕರಿಸುತ್ತಿದ್ದಾರೆ, ಸಹಯೋಗ ನೀಡುತ್ತಿದ್ದಾರೆ ಮತ್ತು ಇದನ್ನು ಸಾಕಾರಗೊಳಿಸಲು ಒಂದಲ್ಲಾ ಒಂದು ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ನಾನು ಗೌರವಾನ್ವಿತ ರಾಷ್ಟ್ರಪತಿಯವರಿಗೆ ಆಭಾರಿಯಾಗಿದ್ದೇನೆ ಜೊತೆಗೆ ದೇಶದ ಪ್ರತಿಯೊಂದೂ ವರ್ಗವೂ ಇದನ್ನು ತಮ್ಮದೇ ಕೆಲಸವೆಂದು ಭಾವಿಸಿದೆ. ಕ್ರೀಡಾಪಟುಗಳೇ ಆಗಿರಲಿ, ಚಿತ್ರರಂಗದವರಾಗಲಿ, ಶಿಕ್ಷಣರಂಗದವರೇ ಆಗಿರಲಿ, ಶಾಲೆಗಳಾಗಿರಲಿ, ಕಾಲೇಜುಗಳಾಗಿರಲಿ, ವಿಶ್ವವಿದ್ಯಾಲಯಗಳಾಗಿರಲಿ, ಕೃಷಿಕರಾಗಿರಲಿ, ಕಾರ್ಮಿಕರಾಗಿರಲಿ, ಅಧಿಕಾರಿ ಆಗಿರಲಿ, ಪೊಲೀಸರಾಗಿರಲಿ, ಸೇನಾನಿಯಾಗಿರಲಿ ಎಲ್ಲರೂ ಇದರೊಂದಿಗೆ ಒಗ್ಗೂಡಿದ್ದಾರೆ. ಈಗ ಸಾರ್ವಜನಿಕ ಸ್ಥಳಗಳು ಮಲಿನಗೊಂಡರೆ ಜನರು ದೂಷಿಸುತ್ತಾರೆ ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಂದು ರೀತಿಯ ಒತ್ತಡ ಏರ್ಪಟ್ಟಿದೆ. ಅಲ್ಲಿ ಕೆಲಸ ಮಾಡುವವರಿಗೂ ಒಂದು ಬಗೆಯ ಒತ್ತಡದ ಅನುಭವವಾಗುತ್ತಿದೆ. ಇದನ್ನು ನಾನು ಒಳ್ಳೇ ಬೆಳವಣಿಗೆ ಎಂದು ಭಾವಿಸುತ್ತೇನೆ. ಸ್ವಚ್ಚತೆಯೇ ಸೇವೆ ಅಭಿಯಾನದ ಮೊದಲ ನಾಲ್ಕು ದಿನಗಳಲ್ಲೇ ಸರಿ ಸುಮಾರು 75 ಲಕ್ಷಕ್ಕಿಂತ ಹೆಚ್ಚು ಜನರು, 40 ಸಾವಿರಕ್ಕಿಂತ ಹೆಚ್ಚು ಹೊಸ ಇನಿಶಿಯೇಟಿವ್ಗಳೊಂದಿಗೆ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಕೆಲವರಂತೂ ನಿರಂತರವಾಗಿ ಕೆಲಸ ಮಾಡುತ್ತಾ ಪರಿವರ್ತನೆಯನ್ನು ತಂದೇ ತರುವ ನಿರ್ಣಯದೊಂದಿಗೆ ಮುಂದುವರಿದಿದ್ದಾರೆ. ಈ ಬಾರಿ ಇನ್ನೊಂದು ವಿಷಯ ನೋಡಿದೆ – ಒಂದು ನಾವು ಯಾವುದೇ ಸ್ಥಳದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳುವುದು, ಇನ್ನೊಂದು ನಾವು ಜಾಗರೂಕರಾಗಿದ್ದು ಮಾಲಿನ್ಯ ಆಗದಂತೆ ನೋಡಿಕೊಳ್ಳುವುದು. ಹೀಗೆ ಸ್ವಚ್ಛತೆಯನ್ನು ಸ್ವಭಾವವಾಗಿಸಿಕೊಳ್ಳಬೇಕಾದರೆ ವೈಚಾರಿಕ ಆಂದೋಲನದ ಅವಶ್ಯಕತೆಯಿದೆ. ಈ ಬಾರಿ ಸ್ವಚ್ಛತೆಯೇ ಸೇವೆ ಎನ್ನುವ ಅಭಿಯಾನದೊಂದಿಗೆ ಹಲವಾರು ಸ್ಪರ್ಧೆಗಳೂ ನಡೆದವು. ಎರಡೂವರೆ ಕೋಟಿ ಮಕ್ಕಳು ಸ್ವಚ್ಛತೆಯ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸಾವಿರಾರು ಮಕ್ಕಳು ಪೇಂಟಿಂಗ್ ಮಾಡಿದರು. ತಮ್ಮ ತಮ್ಮ ಕಲ್ಪನೆಗನುಸಾರ ಸ್ವಚ್ಛತೆ ಬಗ್ಗೆ ಚಿತ್ರ ಬರೆದರು. ಬಹಳಷ್ಟು ಜನರು ಕವಿತೆ ರಚಿಸಿದರು. ಅಲ್ಲದೆ ಈ ಮಧ್ಯೆ ನಮ್ಮ ಪುಟ್ಟ ಸ್ನೇಹಿತರು ಕಳುಹಿಸಿದಂತಹ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಾನು ಪೋಸ್ಟ್ ಮಾಡುತ್ತಿದ್ದೇನೆ ಮತ್ತು ಅವರ ಪ್ರತಿಭೆಯನ್ನು ಗುರುತಿಸುತ್ತಿದ್ದೇನೆ. ಸ್ವಚ್ಛತೆಯ ಮಾತು ಬಂದಾಗ ನಾನು ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯುವುದಿಲ್ಲ. ಈ ಆಂದೋಲನವನ್ನು ಅವರು ಬಹಳ ಪಾವಿತ್ರ್ಯತೆಯಿಂದ ಮುಂದುವರಿಸಿದ್ದಾರೆ. ತಮ್ಮ ತಮ್ಮ ರೀತಿಯಲ್ಲಿ ಕೈ ಜೋಡಿಸಿದ್ದಾರೆ ಮತ್ತು ಒಂದು ಸಕಾರಾತ್ಮಕ ವಾತಾವರಣ ನಿರ್ಮಿಸುವಲ್ಲಿ ಅವರು ಬಹುದೊಡ್ಡ ಪಾತ್ರವಹಿಸಿದ್ದಾರೆ. ಇಂದಿಗೂ ಅವರು ತಮ್ಮದೇ ಆದ ರೀತಿಯಲ್ಲಿ ಸ್ವಚ್ಛತಾ ಆಂದೋಲನದ ನೇತೃತ್ವವಹಿಸಿದ್ದಾರೆ.
ನಮ್ಮ ದೇಶದ ವಿದ್ಯುನ್ಮಾನ ಮಾಧ್ಯಮ ಮತ್ತು ಮುದ್ರಣ ಮಾಧ್ಯಮ ಎಂತಹ ಅಭೂತಪೂರ್ವ ಸೇವೆ ಸಲ್ಲಿಸಬಹುದು ಎಂಬುದನ್ನು `ಸ್ವಚ್ಛತೆಯೇ ಸೇವೆ’ ಆಂದೋಲನದಲ್ಲಿ ಕಾಣಬಹುದು. ಇದೀಗ ಕೆಲ ದಿನಗಳ ಹಿಂದೆ ಶ್ರೀನಗರದ 18 ವರ್ಷದ ಯುವಕ ಬಿಲಾಲ್ ಡಾರ್ ಬಗ್ಗೆ ಯಾರೋ ನನ್ನ ಗಮನ ಸೆಳೆದರು. ಶ್ರೀನಗರ ನಿಗಮ ಬಿಲಾಲ್ ಡಾರ್ನನ್ನು ತಮ್ಮ ಸ್ವಚ್ಛತೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ ಎಂಬುದನ್ನು ಕೇಳಿ ನಿಮಗೆ ಸಂತೋಷವೆನ್ನಿಸಬಹುದು. ಬ್ರಾಂಡ್ ಅಂಬಾಸಿಡರ್ ಎಂದ ಕೂಡಲೇ ನಿಮಗೆ ಅವರು ಚಿತ್ರರಂಗದವರಾಗಿರಬಹುದು ಇಲ್ಲವೇ ಕ್ರೀಡಾಪಟುಗಳಾಗಿರಬಹುದು ಎಂದೆನಿಸಬಹುದು, ಆದರೆ ಅಲ್ಲ. ಬಿಲಾಲ್ ಡಾರ್ 12-13 ವರ್ಷದವನಿದ್ದಾಗಲೇ, ಅಂದರೆ ಕಳೆದ 5-6 ವರ್ಷಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಶ್ರೀನಗರದ ಬಳಿ ಇರುವ ಏಷ್ಯಾದ ಬಹುದೊಡ್ಡ ಸರೋವರದ ಬಳಿ ಪ್ಲಾಸ್ಟಿಕ್ ಇರಲಿ, ಪಾಲಿಥೀನ್ ಇರಲಿ, ಬಳಸಿದ ಬಾಟಲಿಗಳಿರಲಿ, ಕಸ ಕಡ್ಡಿಯಿರಲಿ ಅದೆಲ್ಲವನ್ನೂ ಸ್ವಚ್ಛಗೊಳಿಸುತ್ತಿರುತ್ತಾನೆ. ಅದರಿಂದ ಸ್ವಲ್ಪ ಸಂಪಾದನೆಯನ್ನೂ ಮಾಡುತ್ತಾನೆ. ಏಕೆಂದರೆ ಈತ ಬಹಳ ಚಿಕ್ಕವನಿದ್ದಾಗಲೇ ಅವನ ತಂದೆ ಕ್ಯಾನ್ಸರ್ನಿಂದ ಮರಣ ಹೊಂದಿದರು. ಆದರೆ ಆತ ತನ್ನ ಜೀವನ ನಿರ್ವಹಣೆಯೊಂದಿಗೆ ಸ್ವಚ್ಛತೆಯನ್ನು ಒಗ್ಗೂಡಿಸಿಕೊಂಡ. ಬಿಲಾಲ್ ವರ್ಷಕ್ಕೆ 12 ಸಾವಿರ ಕಿಲೋಗಿಂತಲೂ ಹೆಚ್ಚು ಕಸವನ್ನು ಸ್ವಚ್ಛಗೊಳಿಸಿದ್ದಾನೆಂದು ಅಂದಾಜಿಸಲಾಗಿದೆ. ಸ್ವಚ್ಛತೆಯ ಕುರಿತು ಮುಂದಡಿ ಇಟ್ಟಿದ್ದಕ್ಕಾಗಿ, ಬ್ರಾಂಡ್ ಅಂಬಾಸಿಡರ್ ನೇಮಕಕ್ಕಾಗಿ ಮತ್ತು ಅವರ ಈ ಕಲ್ಪನೆಗೆ ಶ್ರೀನಗರ ನಿಗಮವನ್ನೂ ನಾನು ಅಭಿನಂದಿಸುತ್ತೇನೆ. ಏಕೆಂದರೆ ಶ್ರೀನಗರ ಒಂದು ಪ್ರವಾಸಿ ತಾಣವಾಗಿದೆ. ಭಾರತದ ಪ್ರತಿ ನಾಗರಿಕನಿಗೂ ಶ್ರೀನಗರಕ್ಕೆ ಹೋಗುವ ಆಸೆ ಇರುತ್ತದೆ. ಹಾಗಾಗಿ ಶ್ರೀನಗರದಲ್ಲಿ ಸ್ವಚ್ಛತೆಯ ಬಗ್ಗೆ ಇಷ್ಟೊಂದು ಕಾಳಜಿ ಇರುವುದು ತನ್ನಲ್ಲೇ ಒಂದು ವಿಶೇಷತೆಯಾಗಿದೆ. ಬಿಲಾಲ್ನನ್ನು ಅವರು ಕೇವಲ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಲ್ಲ, ಸ್ವಚ್ಛತೆಯನ್ನು ಕೈಗೊಳ್ಳುತ್ತಿರುವ ಬಿಲಾಲ್ಗೆ ವಾಹನ ಸೌಲಭ್ಯ ಒದಗಿಸಿದ್ದಾರೆ. ಸಮವಸ್ತ್ರ ನೀಡಿದ್ದಾರೆ. ಮತ್ತು ಅವನು ಬೇರೆ ಪ್ರದೇಶಗಳಿಗೂ ಹೋಗಿ ಜನರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಾನೆ, ಸ್ಫೂರ್ತಿ ತುಂಬುತ್ತಾನೆ ಮತ್ತು ಸಫಲತೆ ದೊರೆಯುವವರೆಗೂ ಬೆಂಬಿಡದೆ ಹಿಂಬಾಲಿಸುತ್ತಾನೆ. ಬಿಲಾಲ್ ಡಾರ್ ವಯಸ್ಸು ಚಿಕ್ಕದು ಆದರೆ ಸ್ವಚ್ಛತೆ ಬಗ್ಗೆ ಕಾಳಜಿವಹಿಸುವವರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾನೆ.
ನಾನು ಬಿಲಾಲ್ ಡಾರ್ಗೆ ಅನಂತ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ಇತಿಹಾಸ ಇತಿಹಾಸದ ಗರ್ಭದಲ್ಲೇ ಜನಿಸುತ್ತದೆ ಎನ್ನುವ ಮಾತನ್ನು ನಾವು ಸ್ವೀಕರಿಸಲೇಬೇಕು ಮತ್ತು ಯಾವಾಗ ಇತಿಹಾಸದ ಮಾತು ಬರುತ್ತದೆಯೋ ಆಗ ಮಹಾಪುರುಷರ ನೆನಪಾಗುವುದು ಸ್ವಾಭಾವಿಕವೇ ಆಗಿದೆ. ಈ ಅಕ್ಟೋಬರ್ ತಿಂಗಳು ನಮ್ಮ ಬಹಳಷ್ಟು ಮಹಾಪುರುಷರನ್ನು ನೆನಪಿಸಿಕೊಳ್ಳುವ ತಿಂಗಳಾಗಿದೆ. ಮಹಾತ್ಮ ಗಾಂಧಿಯವರಿಂದ ಹಿಡಿದು ಸರ್ದಾರ್ ಪಟೇಲ್ ಅವರ ವರೆಗೆ, 20 ಮತ್ತು 21ನೇ ಶತಮಾನದಲ್ಲಿ ನಮಗೆ ದಿಕ್ಕು ತೋರಿಸಿದ, ನಮ್ಮ ನಾಯಕತ್ವ ವಹಿಸಿದ, ನಮಗೆ ಮಾರ್ಗದರ್ಶನ ತೋರಿದ ಎಷ್ಟೊಂದು ಮಹಾಪುರುಷರು ನಮ್ಮ ಮುಂದಿದ್ದಾರೆ ಮತ್ತು ದೇಶಕ್ಕಾಗಿ ಅವರೆಲ್ಲ ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆ. ಅಕ್ಟೋಬರ್ ಎರಡರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯಾದರೆ, ಅಕ್ಟೋಬರ್ ಹನ್ನೊಂದರಂದು ಜಯಪ್ರಕಾಶ್ ನಾರಾಯಣ್ ಮತ್ತು ನಾನಾಜಿ ದೇಶಮುಖ್ ಅವರ ಜಯಂತಿಯಾಗಿದೆ ಮತ್ತು ಸೆಪ್ಟೆಂಬರ್ 25ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜಯಂತಿಯಾಗಿದೆ. ನಾನಾಜಿ ಮತ್ತು ದೀನದಯಾಳ ಅವರದಂತೂ ಇದು ಜನ್ಮ ಶತಮಾನೋತ್ಸವದ ವರ್ಷ ಸಹ ಆಗಿದೆ. ಈ ಎಲ್ಲಾ ಮಹಾಪುರುಷರ ಒಂದು ಕೇಂದ್ರ ಬಿಂದು ಏನಾಗಿತ್ತು? ಒಂದು ಮಾತಿನಲ್ಲಿ ಇವರೆಲ್ಲರಲ್ಲಿ ಸಾಮ್ಯತೆ ಇತ್ತು, ಅದೆಂದರೆ ದೇಶಕ್ಕಾಗಿ ಬದುಕುವುದು ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡುವುದು. ಇದು ಬರೀ ಉಪದೇಶವಾಗಿರಲಿಲ್ಲ, ತಮ್ಮ ಜೀವನದ ಮುಖಾಂತರ ಮಾಡಿ ತೋರಿಸುವುದಾಗಿತ್ತು. ಗಾಂಧೀಜಿ, ಜಯಪ್ರಕಾಶ್ ಅವರು, ದೀನದಯಾಳ್ ಅವರಂತೂ ಎಂತಹ ಮಹಾಪುರುಷರೆಂದರೆ ಅವರು ಅಧಿಕಾರದ ಮಾರ್ಗದಿಂದ ದೂರ ಉಳಿದು ಜನರ ಜೀವನದ ಜೊತೆಗೆ ಕ್ಷಣ ಕ್ಷಣವೂ ಜೀವಿಸಿದ್ದರು, ಹೋರಾಟ ಮುಂದುವರೆಸಿದ್ದರು ಮತ್ತು ಸರ್ವ ಜನರ ಹಿತಕ್ಕಾಗಿ, ಸರ್ವ ಜನರ ಸುಖಕ್ಕಾಗಿ ಏನನ್ನಾದರೂ ಮಾಡುತ್ತಲೇ ಇರುತ್ತಿದ್ದರು. ನಾನಾಜಿ ದೇಶಮುಖ್ ಅವರು ರಾಜಕೀಯ ಜೀವನವನ್ನು ಬಿಟ್ಟು ಗ್ರಾಮೋದಯದಲ್ಲಿ ಭಾಗಿಯಾಗಿದ್ದರು ಮತ್ತು ಇಂದು ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರೆ ಅವರ ಗ್ರಾಮೋದಯದ ಕೆಲಸಕ್ಕೆ ಗೌರವಾದರ ಇರಿಸಿಕೊಳ್ಳುವುದು ತುಂಬಾ ಸಹಜವೇ ಆಗಿದೆ.
ಭಾರತದ ಅಂದಿನ ರಾಷ್ಟ್ರಪತಿ ಶ್ರೀಯುತ ಅಬ್ದುಲ್ ಕಲಾಂ ಅವರು ಯಾವಾಗ ನವ ಯುವಕರೊಂದಿಗೆ ಮಾತನಾಡುತ್ತಿದ್ದರೋ ಆಗೆಲ್ಲಾ ನಾನಾಜಿ ದೇಶಮುಖ್ ಅವರ ಗ್ರಾಮೀಣ ವಿಕಾಸದ ಮಾತುಗಳನ್ನು ಹೇಳುತ್ತಿದ್ದರು. ಆ ಮಾತುಗಳನ್ನು ತುಂಬಾ ಆದರದಿಂದ ಉಲ್ಲೇಖಿಸುತ್ತಿದ್ದರು ಮತ್ತು ಅವರು ಸ್ವತಃ ನಾನಾಜಿಯವರ ಈ ಕೆಲಸವನ್ನು ನೋಡುವುದಕ್ಕೋಸ್ಕರ ಹಳ್ಳಿಗೆ ಹೋಗಿದ್ದರು.
ಇನ್ನು ದೀನದಯಾಳ ಉಪಾಧ್ಯಾಯ ಅವರು. ಹೇಗೆ ಮಹಾತ್ಮಾ ಗಾಂಧಿ ಅವರು ಸಮಾಜದ ಕೊನೆಯ ಸ್ತರದಲ್ಲಿ ಕುಳಿತಿರುವ ಮನುಷ್ಯನ ಬಗ್ಗೆ ಮಾತನಾಡುತ್ತಿದ್ದರೋ ಹಾಗೆಯೇ ದೀನದಯಾಳ್ ಅವರು ಸಹ ಸಮಾಜದ ಕೊನೆಯ ಸ್ತರದಲ್ಲಿ ಕುಳಿತಿರುವ ನೋವುಂಡ, ಶೋಷಿತ, ವಂಚಿತ, ಬಡ ವರ್ಗದವರ ಬಗ್ಗೆಯೇ ಮಾತನಾಡುತ್ತಿದ್ದರು ಮತ್ತು ಅವರ ಜೀವನವನ್ನು ಸುಧಾರಿಸಲು ಶಿಕ್ಷಣದ ಮೂಲಕ, ಉದ್ಯೋಗದ ಮೂಲಕ ಯಾವ ರೀತಿ ಬದಲಾವಣೆ ತರಬಹುದು ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ಎಲ್ಲಾ ಮಹಾಪುರುಷರನ್ನು ಸ್ಮರಿಸುವುದು ಅವರಿಗೆ ನಾವು ಮಾಡುವ ಉಪಕಾರವಲ್ಲ. ನಮಗೆ ಜೀವನದಲ್ಲಿ ಮುಂದಿನ ದಾರಿಗಳು ಸಿಗುತ್ತಲಿರಲಿ, ಮುಂದಿನ ನಿರ್ದೇಶನಗಳು ಸಿಗುತ್ತಿರಲಿ ಎಂಬ ಕಾರಣಕ್ಕೆ ಈ ಮಹಾಪುರುಷರ ಸ್ಮರಣೆಯನ್ನು ಮಾಡಬೇಕಾಗಿದೆ.
ಮುಂದಿನ ಮನ್ ಕಿ ಬಾತ್ನಲ್ಲಿ ನಾನು ಖಂಡಿತವಾಗಿ ಸರ್ದಾರ್ ವಲ್ಲಬ್ ಭಾಯಿ ಪಟೇಲ್ ಅವರ ವಿಷಯ ಹೇಳುತ್ತೇನೆ. ಆದರೆ 31 ಅಕ್ಟೋಬರ್ ಪೂರಾ ದೇಶದಲ್ಲಿ, ದೇಶದ ಪ್ರತಿ ನಗರದಲ್ಲಿ, ಪ್ರತಿ ಪಟ್ಟಣದಲ್ಲಿ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ರನ್ ಫಾರ್ ಯುನಿಟಿ ಎನ್ನುವ ಕಾರ್ಯಕ್ರಮ ‘ಒಂದು ಭಾರತ ಶ್ರೇಷ್ಠ ಭಾರತ’ ಎನ್ನುವ ಘೋಷಣೆಯೊಂದಿಗೆ ನಡೆಯಬೇಕಿದೆ ಮತ್ತು ವಾತಾವರಣ ಸಹ ಓಡುವುದಕ್ಕೆ ಪೂರಕವಾಗಿದ್ದು ಸಂತೋಷ ತರುವಂತಿದೆ. ಸರ್ದಾರ್ ಪಟೇಲ್ ಅವರಂತೆ ಉಕ್ಕಿನ ಶಕ್ತಿ ಪಡೆದುಕೊಳ್ಳಲು ಇದು ಕೂಡ ಅವಶ್ಯಕವಾಗಿದೆ ಮತ್ತು ಸರ್ದಾರ್ ಪಟೇಲರು ದೇಶವನ್ನು ಒಗ್ಗೂಡಿಸಿದ್ದರು, ನಾವು ಸಹ ಏಕತೆಗಾಗಿ ಓಟದಲ್ಲಿ ಭಾಗವಹಿಸಿ ಐಕ್ಯತೆಯ ಮಂತ್ರವನ್ನು ಮುಂದುವರಿಸಬೇಕಾಗಿದೆ.
ನಾವೆಲ್ಲರೂ “ವಿವಿಧತೆಯಲ್ಲಿ ಏಕತೆ, ಭಾರತದ ವಿಶೇಷತೆ” ಎಂದು ತುಂಬಾ ಸಹಜವಾಗಿ ಹೇಳುತ್ತೇವೆ. ವಿವಿಧತೆಯನ್ನು ನಾವು ಗೌರವಿಸುತ್ತೇವೆ ಆದರೆ ಯಾವಾಗಲಾದರೂ ನಮ್ಮ ಈ ವಿವಿಧತೆಯನ್ನು ಅನುಭವಿಸಲು ಪ್ರಯತ್ನಪಟ್ಟಿದ್ದೇವೆಯೇ? ನಾನು ಮತ್ತೆ ಮತ್ತೆ ಹಿಂದುಸ್ತಾನದ ನನ್ನ ದೇಶ ವಾಸಿಗಳಿಗೆ ಅದರಲ್ಲೂ ವಿಶೇಷವಾಗಿ ನನ್ನ ಯುವ ಜನತೆಗೆ ಹೇಳಲು ಇಷ್ಟ ಪಡುತ್ತೇನೆ. ನಾವು ಒಂದು ಜಾಗೃತಾವಸ್ಥೆಯಲ್ಲಿ ಇದ್ದೇವೆ. ಈ ಭಾರತದ ವಿವಿಧತೆಯನ್ನು ಅನುಭವಿಸಿ, ಅದನ್ನು ಸ್ಪರ್ಶಿಸಿ, ಅದರ ಸುವಾಸನೆಯನ್ನು ಆಘ್ರಾಣಿಸಿ. ಬೇಕಿದ್ದರೆ ನೀವು ನೋಡಿ, ನಿಮ್ಮೊಳಗಿನ ವ್ಯಕ್ತಿತ್ವದ ವಿಕಸನಕ್ಕೆ ಕೂಡ ನಮ್ಮ ದೇಶದ ಈ ವೈವಿಧ್ಯತೆಗಳು ಒಂದು ದೊಡ್ಡ ಪಾಠಶಾಲೆಯಂತೆ ಕೆಲಸ ಮಾಡುತ್ತವೆ. ರಜಾ ದಿನಗಳಿರಲಿ, ದೀಪಾವಳಿಯ ದಿನವಾಗಲಿ, ನಮ್ಮ ದೇಶದಲ್ಲಿ ನಾಲ್ಕೂ ನಿಟ್ಟಿನಲ್ಲಿ ಒಂದಿಲ್ಲೊಂದು ಕಡೆ ಹೋಗಿ ಬರುವ ಅಭ್ಯಾಸವಿದೆ. ಜನರು ಯಾತ್ರಾರ್ಥಿಗಳಾಗಿ ಹೋಗಿ ಬರುತ್ತಾರೆ ಇದು ತುಂಬಾ ಸ್ವಾಭಾವಿಕ. ಆದರೆ ಒಮ್ಮೊಮ್ಮೆ ನನಗೆ, ‘ನಾವು ನಮ್ಮ ದೇಶವನ್ನು ನೋಡುವುದಿಲ್ಲ, ದೇಶದ ವೈವಿಧ್ಯತೆಗಳನ್ನು ತಿಳಿದುಕೊಳ್ಳುವುದಿಲ್ಲ, ಅರ್ಥ ಮಾಡಿಕೊಳ್ಳುವುದಿಲ್ಲ. ಅವ್ಯವಸ್ಥೆಯ ಪ್ರಭಾವದಿಂದ ವಿದೇಶಗಳಲ್ಲಿಯೇ ಪ್ರವಾಸ ಕೈಗೊಳ್ಳಲು ಇಷ್ಟ ಪಡಲು ಪ್ರಾರಂಭಿಸಿದ್ದೇವೆ’ ಎಂಬ ಚಿಂತೆ ಮೂಡುತ್ತದೆ. ನೀವು ಜಗತ್ತನ್ನೆಲ್ಲ ಸುತ್ತಲು ಹೋಗಿ, ನನಗೇನೂ ಅಭ್ಯಂತರವಿಲ್ಲ, ಆದರೆ ಕೆಲವೊಮ್ಮೆಯಾದರೂ ನಿಮ್ಮ ಮನೆಯನ್ನು ಕೂಡ ನೋಡಿ. ಉತ್ತರ ಭಾರತದ ವ್ಯಕ್ತಿಗಳಿಗೆ ದಕ್ಷಿಣ ಭಾರತದಲ್ಲಿ ಏನಿದೆ ಎಂದು ಗೊತ್ತಿರುವುದಿಲ್ಲ, ಪಶ್ಚಿಮ ಭಾರತದ ವ್ಯಕ್ತಿಗಳಿಗೆ ಪೂರ್ವ ಭಾರತದಲ್ಲಿ ಏನಿದೆ ಎಂದು ಗೊತ್ತಿರುವುದಿಲ್ಲ, ನಮ್ಮ ದೇಶ ಎಷ್ಟೊಂದು ವೈವಿಧ್ಯತೆಗಳಿಂದ ತುಂಬಿದೆ.
ಮಹಾತ್ಮ ಗಾಂಧಿ, ಲೋಕಮಾನ್ಯ ತಿಲಕ್, ಸ್ವಾಮಿ ವಿವೇಕಾನಂದ, ನಮ್ಮ ಹಿಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಜೀ ಇವರ ಮಾತುಗಳಲ್ಲೇ ನೋಡುವುದಾದರೆ ಒಂದು ಮಾತು ಮತ್ತೆ ಮತ್ತೆ ಬರುತ್ತದೆ ಅದು ಯಾವುದೆಂದರೆ ಅವರು ಭಾರತದಲ್ಲಿ ಸಂಚರಿಸಿದ್ದರಿಂದ ಅವರಿಗೆ ಭಾರತವನ್ನು ನೋಡಿ ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ಭಾರತಕ್ಕಾಗಿ ಬದುಕಲು ಅಥವಾ ಮಡಿಯಲು ಒಂದು ಹೊಸ ಪ್ರೇರಣೆ ಸಿಕ್ಕಿತು. ಈ ಎಲ್ಲಾ ಮಹಾಪುರುಷರೂ ಭಾರತದ ಉದ್ದಗಲಕ್ಕೂ ವ್ಯಾಪಕವಾಗಿ ಸಂಚರಿಸಿದ್ದರು. ತಮ್ಮ ತಮ್ಮ ಕೆಲಸಗಳ ಪ್ರಾರಂಭದಲ್ಲಿ ಇವರೆಲ್ಲ ಭಾರತವನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಭಾರತವನ್ನು ತಮ್ಮೊಳಗೆ ಜೀವಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ನಮ್ಮ ದೇಶದ ಭಿನ್ನಭಿನ್ನ ರಾಜ್ಯಗಳನ್ನೂ, ಭಿನ್ನಭಿನ್ನ ಸಮಾಜಗಳನ್ನೂ, ಸಮೂಹಗಳನ್ನೂ, ಅವರ ರೀತಿ-ರಿವಾಜುಗಳನ್ನೂ, ಅವರ ಪರಂಪರೆಯನ್ನೂ, ಅವರ ವೇಷ ಭೂಷಣಗಳನ್ನೂ, ಅವರ ಊಟ-ಉಪಚಾರಗಳನ್ನೂ, ಅವರ ಮೌಲ್ಯಗಳನ್ನೂ ಒಬ್ಬ ವಿದ್ಯಾರ್ಥಿಯ ರೂಪದಲ್ಲಿ ಕಲಿಯುವ, ಅರ್ಥಮಾಡಿಕೊಳ್ಳುವ, ಬದುಕುವ ಪ್ರಯತ್ನವನ್ನು ನಾವು ಮಾಡಬಲ್ಲೆವೇ?
ಪ್ರವಾಸದಲ್ಲಿ ನಾವು ಬರೀ ಬೇರೆಯವರನ್ನು ಭೇಟಿಯಾಗುವುದು ಅಷ್ಟೇ ಅಲ್ಲ, ನಾವು ಒಬ್ಬ ವಿದ್ಯಾರ್ಥಿಯ ತರಹ ಅವರನ್ನು ಅರ್ಥ ಮಾಡಿಕೊಂಡು ಅವರಂತೆ ಆಗುವ ಪ್ರಯತ್ನ ಮಾಡಿದಾಗ ಮಾತ್ರ ಪ್ರವಾಸ ಮೌಲ್ಯಾಧಾರಿತವಾಗುತ್ತದೆ. ನನ್ನ ಸ್ವಯಂ ಅನುಭವ ಹೇಳುವುದಾದರೆ ನನಗೆ ಹಿಂದುಸ್ತಾನದ 500ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹೋಗುವ ಅವಕಾಶ ಸಿಕ್ಕಿರಬಹುದು, 450ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನನಗೆ ರಾತ್ರಿ ಉಳಿದುಕೊಳ್ಳುವ ಸಂದರ್ಭ ಒದಗಿ ಬಂದಿದೆ ಮತ್ತು ಇಂದು ನಾನು ಭಾರತದಲ್ಲಿ ಈ ಒಂದು ಅಧಿಕಾರವನ್ನು ಸಂಭಾಳಿಸುತ್ತಿರುವಾಗ ನನ್ನ ಪ್ರವಾಸದ ಆ ಅನುಭವಗಳು ನನಗೆ ತುಂಬಾ ಕೆಲಸಕ್ಕೆ ಬರುತ್ತವೆ. ವಿಷಯಗಳನ್ನು ಅರ್ಥೈಸಿಕೊಳ್ಳುವಲ್ಲಿ ನನಗೆ ಬಹಳಷ್ಟು ಅನುಕೂಲವಾಗುತ್ತದೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ ನೀವು ಈ ವಿಶಾಲ ಭಾರತವನ್ನು “ವಿವಿಧತೆಯಲ್ಲಿ ಏಕತೆ” ಎನ್ನುವ ಘೋಷಣೆಗೆ ಮಾತ್ರ ಸೀಮಿತಗೊಳಿಸಬೇಡಿ, ನಮ್ಮ ಈ ಅಪಾರ ಶಕ್ತಿಯ ಭಂಡಾರವನ್ನು ಅನುಭವಿಸಿ. “ಒಂದು ಭಾರತ – ಶ್ರೇಷ್ಠ ಭಾರತ” ಎನ್ನುವ ಕನಸು ಇದರಲ್ಲಿ ಮಿಳಿತಗೊಂಡಿದೆ. ಊಟ-ಉಪಚಾರದಲ್ಲಿ ಎಷ್ಟೊಂದು ಬಗೆಗಳಿವೆ ಎಂದರೆ ಒಂದು ವೇಳೆ ಪೂರ್ತಿ ಜೀವಮಾನದಲ್ಲಿ ಪ್ರತಿ ದಿನವೂ ಒಂದೊಂದು ಹೊಸ ಬಗೆಯ ಆಹಾರ ಸೇವಿಸುತ್ತೇನೆ ಎಂದು ಅಂದುಕೊಂಡರೂ ಸಹ ಬಹುಶಃ ಯಾವುದೇ ಆಹಾರ ಪುನರಾವರ್ತನೆಯಾಗಲಾರದು. ಇದು ಈಗ ನಮ್ಮ ಪ್ರವಾಸೋದ್ಯಮದ ಒಂದು ದೊಡ್ಡ ಶಕ್ತಿಯಾಗಿದೆ.
ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಈ ರಜೆಯಲ್ಲಿ ನೀವು ಬರೀ ಒಂದು ಬದಲಾವಣೆಗೋಸ್ಕರ ಮನೆಯಿಂದ ಹೊರಗೆ ಹೋಗಬೇಡಿ , ಅದರ ಬದಲು ಏನಾದರೂ ಸ್ವಲ್ಪ ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ, ಪಡೆದುಕೊಳ್ಳುವ ನಿರ್ಧಾರದೊಂದಿಗೆ ಮನೆಯಿಂದ ಹೊರಡಿ. ಭಾರತವನ್ನು ನಿಮ್ಮೊಳಗೆ ಅವಗಾಹನೆ ಮಾಡಿಕೊಳ್ಳಿರಿ. ಕೋಟಿ ಕೋಟಿ ಜನರ ವೈವಿಧ್ಯತೆಯನ್ನು ನಿಮ್ಮೊಳಗೆ ಅಂತರ್ಗತಗೊಳಿಸಿಕೊಳ್ಳಿ. ಇಂತಹ ಅನುಭವಗಳಿಂದ ನಿಮ್ಮ ಜೀವನ ಸಮೃದ್ಧವಾಗುತ್ತದೆ. ನಿಮ್ಮ ಚಿಂತನೆಯ ವ್ಯಾಪ್ತಿಯು ವಿಶಾಲವಾಗುತ್ತದೆ. ಅನುಭವಕ್ಕಿಂತ ದೊಡ್ಡ ಶಿಕ್ಷಕ ಮತ್ಯಾರು ಇರಲು ಸಾಧ್ಯ? ಸಾಮಾನ್ಯವಾಗಿ ಅಕ್ಟೋಬರ್ನಿಂದ ಮಾರ್ಚ್ ವರೆಗಿನ ಸಮಯ ಹೆಚ್ಚಾಗಿ ಪ್ರವಾಸದ್ದಾಗಿರುತ್ತದೆ. ಜನರು ಪ್ರವಾಸ ಹೋಗುತ್ತಾರೆ. ಈ ಬಾರಿ ಕೂಡ ನೀವೊಂದು ವೇಳೆ ಪ್ರವಾಸ ಹೋಗುವಿರಾದರೆ ನನ್ನ ಈ ಅಭಿಯಾನವನ್ನು ನೀವು ಮುನ್ನಡೆಸುತ್ತೀರಿ ಎಂಬ ವಿಶ್ವಾಸ ನನಗಿದೆ. ನೀವು ಎಲ್ಲಿಯಾದರೂ ಹೋಗಿ, ನಿಮ್ಮ ಅನುಭವವನ್ನು ಹಂಚಿಕೊಳ್ಳಿ,
#incredibleindia (ಹ್ಯಾಷ್ ಟ್ಯಾಗ್ incredibleindia ) ಇದಕ್ಕೆ ನೀವು ಫೋಟೋಗಳನ್ನು ಖಂಡಿತವಾಗಿ ಕಳುಹಿಸಿ. ಅಲ್ಲಿಯ ಜನರ ಜೊತೆ ಭೇಟಿ ಮಾಡಿದಲ್ಲಿ ಅವರ ಭಾವಚಿತ್ರವನ್ನು ಕೂಡ ಕಳುಹಿಸಿ. ಬರೀ ಕಟ್ಟಡಗಳ ಬಗ್ಗೆ, ಪ್ರಕೃತಿ ಸೌಂದರ್ಯದ ಬಗ್ಗೆ ಮಾತ್ರವಲ್ಲ ಅಲ್ಲಿಯ ಜನ-ಜೀವನದ ಬಗ್ಗೆ ಸಹ ಕೆಲವು ಮಾತುಗಳನ್ನು ಬರೆಯಿರಿ. ನಿಮ್ಮ ಪ್ರವಾಸದ ಒಳ್ಳೆಯ ಪ್ರಬಂಧವನ್ನು ಬರೆಯಿರಿ. Mygovಗೆ ಕಳುಹಿಸಿರಿ, NarendraModiAppಗೆ ಕಳುಹಿಸಿರಿ.
ನನ್ನ ಮನಸ್ಸಿನಲ್ಲಿ ಒಂದು ವಿಚಾರ ಬರುತ್ತಿದೆ, ನಾವು ಭಾರತದ ಪ್ರವಾಸೋದ್ಯಮವನ್ನು ಉತ್ತೇಜಿಸಲು ನೀವು ನಿಮ್ಮ ರಾಜ್ಯದ 7 ಅತ್ತ್ಯುತ್ತಮ ಪ್ರವಾಸೀ ತಾಣಗಳು ಯಾವುವು ಎಂದು ಸೂಚಿಸಬಲ್ಲಿರಾ? ಪ್ರತಿಯೊಬ್ಬ ಭಾರತೀಯನೂ ನಿಮ್ಮ ರಾಜ್ಯದ ಆ 7 ತಾಣಗಳ ಬಗ್ಗೆ ತಿಳಿದುಕೊಳ್ಳಬೇಕು, ಸಾಧ್ಯವಾದರೆ ಆ 7 ತಾಣಗಳಿಗೆ ಹೋಗಬೇಕು. ನೀವು ಈ ವಿಷಯದಲ್ಲಿ ಏನಾದರೂ ಮಾಹಿತಿ ನೀಡಬಲ್ಲಿರಾ ? NarendraModiAppನಲ್ಲಿ ಅದನ್ನು ಹಾಕಬಲ್ಲಿರಾ? #IncredibleIndia (ಹ್ಯಾಷ್ ಟ್ಯಾಗ್ incredibleindia) ದಲ್ಲಿ ಅದನ್ನು ಹಾಕಬಲ್ಲಿರಾ?
ನೀವೇ ನೋಡಿ, ಒಂದು ರಾಜ್ಯದ ಎಲ್ಲಾ ಜನರು ಹೀಗೆ ಹೇಳಿದರೆ ನಾನು ಸರ್ಕಾರದಿಂದ ಅದನ್ನು ಪರಿಶೀಲನೆ ಮಾಡಿಸಿ ಬಹಳ ಸಾಮಾನ್ಯವಾಗಿ ಯಾವ 7 ತಾಣಗಳು ಪ್ರತಿ ರಾಜ್ಯದಿಂದ ಬಂದಿವೆ ಅದರ ಮೇಲೆ ಪ್ರಚಾರ ಸಾಹಿತ್ಯವನ್ನು ತಯಾರು ಮಾಡಲು ಹೇಳುತ್ತೇನೆ. ಅಂದರೆ ಒಂದು ಪ್ರಕಾರವಾಗಿ ಜನರ ಅಭಿಪ್ರಾಯಗಳಿಂದ ಪ್ರವಾಸೀ ತಾಣಗಳ ಅಭಿವೃದ್ಧಿ ಹೇಗೆ ಆಗುತ್ತದೆಯೋ ಅದೇ ರೀತಿ ನೀವು ದೇಶದೆಲ್ಲೆಡೆ ಯಾವ ತಾಣಗಳನ್ನು ನೋಡಿದ್ದೀರಿ ಅದರಲ್ಲಿ 7 ನಿಮಗೆ ಅತ್ಯುತ್ತಮ ಎನ್ನಿಸುವ, ಎಲ್ಲರೂ ಇದನ್ನು ಒಂದೇ ಒಂದು ಸರಿ ನೋಡಲೇಬೇಕು, ತಿಳಿದುಕೊಳ್ಳಬೇಕು, ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸುವ ನಿಮ್ಮ ನೆಚ್ಚಿನ ಅಂತಹ 7 ಸ್ಥಳಗಳ ಬಗ್ಗೆ ಸಹ MyGovಗೆ, NarendraModiAppಗೆ ಖಂಡಿತ ಕಳುಹಿಸಿಕೊಡಿ. ಭಾರತ ಸರ್ಕಾರವು ಅಂತಹ ಉತ್ತಮ ತಾಣಗಳ ಬಗ್ಗೆ ಫಿಲಂ ಮಾಡುವುದು, ವೀಡಿಯೊ ಮಾಡುವುದು, ಪ್ರಚಾರ ಸಾಹಿತ್ಯವನ್ನು ತಯಾರಿಸುವುದು ಮತ್ತು ಅಂತಹ ಸ್ಥಳಗಳ ಪ್ರವಾಸವನ್ನು ಉತ್ತೇಜಿಸುವುದು ಇವುಗಳ ಬಗ್ಗೆ ಕೆಲಸ ಮಾಡುತ್ತದೆ. ನಿಮ್ಮಗಳ ಕಡೆಯಿಂದ ಆಯ್ಕೆಗೆ ಒಳಪಟ್ಟ ತಾಣಗಳನ್ನು ನಾವು ಸ್ವೀಕರಿಸುತ್ತೇವೆ. ಬನ್ನಿ, ನನ್ನ ಜೊತೆಗೂಡಿ. ಈ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗಿನ ನಿಮ್ಮ ಸಮಯವನ್ನು ದೇಶದ ಪ್ರವಾಸೋದ್ಯಮವನ್ನು ಬಲಗೊಳಿಸಲು ಉಪಯೋಗಿಸಿ, ಇದರಿಂದ ನೀವು ಸಹ ಒಂದು ದೊಡ್ಡ ವೇಗವರ್ಧಕ ಮಧ್ಯವರ್ತಿಗಳಾಗಬಹುದು. ನಾನು ನಿಮಗೆ ಆಹ್ವಾನ ಕೊಡುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಒಬ್ಬ ಮನುಷ್ಯನಾಗಿ ಅನೇಕ ವಿಷಯಗಳು ನನ್ನ ಮನಸನ್ನು ಮುಟ್ಟುತ್ತವೆ. ನನ್ನ ಹೃದಯವನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ನನ್ನ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿ ಬಿಡುತ್ತವೆ. ಎಷ್ಟಾದರೂ ನಾನು ಕೂಡ ನಿಮ್ಮ ಹಾಗೆ ಒಬ್ಬ ಮನುಷ್ಯ. ಹಿಂದಿನ ದಿನಗಳಲ್ಲಿ ನಡೆದ ಘಟನೆ, ಪ್ರಾಯಶಃ ನಿಮಗೂ ಸಹ ನೆನಪಿನಲ್ಲಿ ಉಳಿದಿರಬಹುದು. ಮಹಿಳಾ ಶಕ್ತಿ ಮತ್ತು ದೇಶಭಕ್ತಿಯ ಒಂದು ವಿಶಿಷ್ಟ ಉದಾಹರಣೆ ನಾವೆಲ್ಲಾ ದೇಶವಾಸಿಗಳು ನೋಡಿದ್ದೇವೆ. ಭಾರತೀಯ ಸೇನೆಗೆ ಲೆಫ್ಟಿನೆಂಟ್ ಸ್ವಾತಿ ಮತ್ತು ನಿಧಿ ಎನ್ನುವ ರೂಪದಲ್ಲಿ ಇಬ್ಬರು ವೀರಾಂಗನೆಯರು ಸಿಕ್ಕಿದ್ದಾರೆ. ಮತ್ತು ಅವರು ಅಸಾಮಾನ್ಯ ವೀರಾಂಗನೆಯರು. ಅಸಾಮಾನ್ಯರು ಯಾಕೆಂದರೆ ಸ್ವಾತಿ ಮತ್ತು ನಿಧಿ ಇವರ ಗಂಡಂದಿರು ಮಾತೆ ಭಾರತಿಯ ಸೇವೆ ಮಾಡುತ್ತ ಹುತಾತ್ಮರಾದವರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಂಸಾರ ನಾಶವಾದರೆ ಮನಃಸ್ಥಿತಿ ಹೇಗಿರಬಹುದು ಎಂದು ನಾವು ಯೋಚಿಸಲೂ ಸಾಧ್ಯವೇ? ಆದರೆ ಹುತಾತ್ಮರಾದ ಕರ್ನಲ್ ಸಂತೋಷ್ ಮಹಾದಿಕ್ ಅವರ ಪತ್ನಿ ಸ್ವಾತಿ ಮಹಾದಿಕ್ ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾ ಮನದಲ್ಲೇ ನಿಶ್ಚಯ ಮಾಡಿದರು ಮತ್ತು ಅವರು ಭಾರತೀಯ ಸೇನೆಗೆ ಸೇರಿದರು. ಹನ್ನೊಂದು ತಿಂಗಳ ತನಕ ಅವರು ಕಠಿಣ ಕೆಲಸಗಳನ್ನು ಮಾಡುತ್ತಾ ತರಬೇತಿ ತೆಗೆದುಕೊಂಡರು ಮತ್ತು ತಮ್ಮ ಪತಿಯ ಕನಸನ್ನು ಸಾಕಾರಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅದೇ ರೀತಿ ನಿಧಿ ದುಬೆ ಅವರು ಕೂಡ. ಅವರ ಪತಿ ಮುಕೇಶ್ ದುಬೆ ಸೇನೆಯಲ್ಲಿ ನಾಯಕ್ ಆಗಿ ಸೇವೆ ಮಾಡುತ್ತಿದ್ದರು ಮತ್ತು ಮಾತೃಭೂಮಿಗಾಗಿ ಹುತಾತ್ಮರಾದರು. ಅವರ ಪತ್ನಿ ನಿಧಿ ಮನಸ್ಸಿನಲ್ಲೇ ನಿರ್ಧಾರ ಮಾಡಿಕೊಂಡು ಸೇನೆಗೆ ಸೇರಿದರು. ಎಲ್ಲಾ ದೇಶವಾಸಿಗಳಿಗೂ ನಮ್ಮ ಈ ಮಾತೃಶಕ್ತಿಯ ಮೇಲೆ, ನಮ್ಮ ಈ ವೀರಾಂಗನೆಯರ ಮೇಲೆ ಸಹಜವಾಗಿ ಬಹಳ ಹೆಮ್ಮೆ ಇರಬೇಕು. ನಾನು ಈ ಇಬ್ಬರು ಸೋದರಿಯರಿಗೂ ಹೃದಯಪೂರ್ವಕವಾಗಿ ತುಂಬಾ ತುಂಬಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಇವರಿಬ್ಬರೂ ದೇಶದ ಕೋಟಿ ಕೋಟಿ ಜನರಲ್ಲಿ ಒಂದು ಹೊಸ ಪ್ರೇರಣೆ, ಒಂದು ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ. ಆ ಇಬ್ಬರು ಸೋದರಿಯರಿಗೆ ತುಂಬಾ ಧನ್ಯವಾದಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ನವರಾತ್ರಿಯ ಉತ್ಸವ ಮತ್ತು ದೀಪಾವಳಿಯ ನಡುವೆ ನಮ್ಮ ದೇಶದ ಯುವ ಪೀಳಿಗೆಯವರಿಗೆ ಒಂದು ತುಂಬಾ ದೊಡ್ಡ ಅವಕಾಶ ಸಹ ಇದೆ. FIFA under-17 ವರ್ಲ್ಡ್ ಕಪ್ ನಮ್ಮಲ್ಲಿ ಜರುಗುತ್ತಿದೆ. ಸುತ್ತಲೂ ಫುಟ್ಬಾಲ್ನ ಗುಂಗು ಅನುರಣಿಸುತ್ತದೆ ಎನ್ನುವ ವಿಶ್ವಾಸ ನನಗಿದೆ. ಎಲ್ಲಾ ವಯೋಮಾನದವರಲ್ಲೂ ಫುಟ್ ಬಾಲ್ನ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಹಿಂದುಸ್ತಾನದ ನಮ್ಮ ಯುವಕರು ಆಡುತ್ತಾ ಇಲ್ಲದಿರುವ ಯಾವುದೇ ಶಾಲಾ-ಕಾಲೇಜುಗಳ ಮೈದಾನಗಳೂ ಕಾಣಿಸದಿರಲಿ. ಬನ್ನಿ, ಇಡೀ ವಿಶ್ವವೇ ಭಾರತದ ನೆಲದಲ್ಲಿ ಆಡಲು ಬರುತ್ತಿದೆ, ನಾವು ಸಹ ಆಟವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ನವರಾತ್ರಿಯ ಪರ್ವ ನಡೆಯುತ್ತಿದೆ. ದುರ್ಗಾ ಮಾತೆಯ ಪೂಜೆಯ ಸಮಯ ಇದು. ಇಡೀ ವಾತಾವರಣವೇ ಪವಿತ್ರ ಸುವಾಸನೆಯೊಂದಿಗೆ ವ್ಯಾಪಕವಾಗಿ ಹರಡಿಕೊಂಡಿರುತ್ತದೆ. ನಮ್ಮ ಸುತ್ತಲೂ ಒಂದು ಆಧ್ಯಾತ್ಮಿಕತೆಯ ವಾತಾವರಣ, ಉತ್ಸವದ ವಾತಾವರಣ, ಭಕ್ತಿಯ ವಾತಾವರಣ ಮತ್ತು ಇದೆಲ್ಲವೂ ಶಕ್ತಿಯ ಸಾಧನೆಯನ್ನು ಮಾಡುವ ಪರ್ವ ಎಂದು ಪರಿಗಣಿಸಲಾಗುತ್ತದೆ. ಇದನ್ನು ಶರನ್ನವರಾತ್ರಿ ಎಂದು ಕರೆಯುತ್ತಾರೆ ಮತ್ತು ಇಲ್ಲಿಂದಲೇ ಶರದೃತುವಿನ ಆರಂಭವಾಗುತ್ತದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಾನು ದೇಶವಾಸಿಗಳೆಲ್ಲರಿಗೂ ಅನೇಕಾನೇಕ ಶುಭ ಕಾಮನೆಗಳನ್ನು ಹಾರೈಸುತ್ತೇನೆ ಮತ್ತು ದೇಶದ ಸಾಮಾನ್ಯ ಮಾನವನ ಜೀವನದ ಆಸೆ, ಆಕಾಂಕ್ಷೆಗಳನ್ನು ಪೂರ್ಣಗೊಳಿಸಲು ನಮ್ಮ ದೇಶ ಹೊಸ ಎತ್ತರಕ್ಕೇರಲಿ ಎಂದು ತಾಯಿ ಶಕ್ತಿಯನ್ನು ಪ್ರಾರ್ಥಿಸುತ್ತೇನೆ. ಎಲ್ಲಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ದೇಶಕ್ಕೆ ಬರಲಿ. ದೇಶವು ಶೀಘ್ರಗತಿಯಲ್ಲಿ ಮುನ್ನಡೆಯಲಿ ಮತ್ತು 2022 ಭಾರತದ ಸ್ವಾತಂತ್ರ್ಯದ 75ನೇ ವರ್ಷ. ಸ್ವಾತಂತ್ರ್ಯಪ್ರೇಮಿಗಳ ಕನಸುಗಳನ್ನು ಪೂರೈಸುವ ಪ್ರಯತ್ನ, 125 ಕೋಟಿ ದೇಶವಾಸಿಗಳ ಸಂಕಲ್ಪ ಮತ್ತು ಕಠಿಣ ಪರಿಶ್ರಮ, ಪುರುಷಾರ್ಥ ಮತ್ತು ಸಂಕಲ್ಪವನ್ನು ಸಾಕಾರಗೊಳಿಸಲು ಐದು ವರ್ಷದ ನೀಲನಕ್ಷೆಯನ್ನು ತಯಾರಿಸಿ ನಾವು ಮುನ್ನಡೆಯೋಣ. ತಾಯಿ ಶಕ್ತಿ ನಮಗೆ ಆಶೀರ್ವಾದ ನೀಡಲಿ. ನಿಮ್ಮೆಲ್ಲರಿಗೂ ಅನೇಕಾನೇಕ ಶುಭಕಾಮನೆಗಳು. ಉತ್ಸವವನ್ನೂ ಆಚರಿಸಿ, ಉತ್ಸಾಹವನ್ನೂ ಹೆಚ್ಚಿಸಿಕೊಳ್ಳಿ. ಅನಂತ ಅನಂತ ಧನ್ಯವಾದಗಳು.
This is the 36th episode of #MannKiBaat, which completes 3 years with this episode: PM @narendramodi
— PMO India (@PMOIndia) September 24, 2017
#MannKiBaat - an effective way to showcase the strengths of India. pic.twitter.com/sNXHxsNhHK
— PMO India (@PMOIndia) September 24, 2017
People are at the centre of #MannKiBaat. pic.twitter.com/kFRjU8fTXY
— PMO India (@PMOIndia) September 24, 2017
PM @narendramodi talks about 3 years of #MannKiBaat and how it has integrated every section of society. pic.twitter.com/KCXSmvVMRk
— PMO India (@PMOIndia) September 24, 2017
I get so much feedback for #MannKiBaat. Naturally, I am not able to refer to all of it but the inputs given help us in the Government: PM
— PMO India (@PMOIndia) September 24, 2017
This Gandhi Jayanti, let is buy a Khadi product and light the lamp of prosperity in the lives of the poor. #MannKiBaat pic.twitter.com/a8JIKezLjO
— PMO India (@PMOIndia) September 24, 2017
Let us support the movement for the growth of the Khadi sector. #MannKiBaat pic.twitter.com/lN3sV40Im5
— PMO India (@PMOIndia) September 24, 2017
I am delighted to see the support towards #SwachhataHiSeva movement. People are actively contributing to a Swachh Bharat: PM @narendramodi
— PMO India (@PMOIndia) September 24, 2017
PM talks about widespread support for #SwachhataHiSeva movement and thanks the media for the support in furthering message of cleanliness. pic.twitter.com/Puw592i2If
— PMO India (@PMOIndia) September 24, 2017
Remembering the great men and women who lived for India. #MannKiBaat pic.twitter.com/sCCNAzDntP
— PMO India (@PMOIndia) September 24, 2017
Nanaji Deshmukh devoted his life towards the betterment of our villages: PM @narendramodi during #MannKiBaat
— PMO India (@PMOIndia) September 24, 2017
Sardar Patel unified the nation. Let us always preserve this unity. #MannKiBaat pic.twitter.com/MzTjPUj7Gu
— PMO India (@PMOIndia) September 24, 2017
PM @narendramodi urges people, specially youngsters to discover the wonders of #IncredibleIndia in the months to come. #MannKiBaat pic.twitter.com/V3gedpGWt1
— PMO India (@PMOIndia) September 24, 2017