ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 29 ಅಕ್ಟೋಬರ್, 2024 ರಂದು ಬೆಳಿಗ್ಗೆ 10:30 ಕ್ಕೆ ವಿಡಿಯೋ ಸಮಾವೇಶ ಮೂಲಕ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಯುವಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಉದ್ಯೋಗ ಮೇಳ (ರೋಜ್‌ಗಾರ್ ಮೇಳ) ಎತ್ತಿ ತೋರಿಸುತ್ತದೆ. ಇದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಮೂಲಕ ಯುವಕರನ್ನು ಸಬಲಗೊಳಿಸುತ್ತದೆ.
ಉದ್ಯೋಗ ಮೇಳ (ರೋಜ್‌ಗಾರ್ ಮೇಳ) ಯನ್ನು ರಾಷ್ಟ್ರಾದ್ಯಂತ 40 ಸ್ಥಳಗಳಲ್ಲಿ ಆಯೋಜಿಸಲಾಗುವುದು, ಕೇಂದ್ರ ಕಂದಾಯ ಇಲಾಖೆ, ಕೇಂದ್ರ ಉನ್ನತ ಶಿಕ್ಷಣ ಇಲಾಖೆ, ಕೇಂದ್ರ ಗೃಹ ಸಚಿವಾಲಯ, ಕೇಂದ್ರ ರಕ್ಷಣಾ ಸಚಿವಾಲಯ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಂತಹ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಾದ್ಯಂತ ಕೇಂದ್ರ ಸರ್ಕಾರಕ್ಕೆ ಸಂಬಂಧಿತ ಹೊಸ ನೇಮಕಾತಿಗಳನ್ನು ಸೇರಿಸಲಾಗುತ್ತದೆ.
ಹೊಸದಾಗಿ ನೇಮಕಗೊಂಡವರು ಐಗೋಟ್ ಕರ್ಮಯೋಗಿ ಪೋರ್ಟಲ್ ನಲ್ಲಿ ಲಭ್ಯವಿರುವ ಆನ್‌ಲೈನ್ ಮಾಡ್ಯೂಲ್ 'ಕರ್ಮಯೋಗಿ ಪ್ರಾರಂಭ್' ಮೂಲಕ ಮೂಲ ತರಬೇತಿಯನ್ನು ಪಡೆಯಲು ಅವಕಾಶವನ್ನು ಹೊಂದಿರುತ್ತಾರೆ. ಇದರಲ್ಲಿ 1400 ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್‌ಗಳು ಲಭ್ಯವಿವೆ. ನೇಮಕಾತಿ ನಂತರ ಇದು ತಮ್ಮ ಉದ್ಯೋಗಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ತಮ್ಮನ್ನು ಸಜ್ಜುಗೊಳಿಸಲು ಸಹಕಾರಿಯಾಗುತ್ತದೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.