ಹೌಸ್ (ಸಂಸತ್) ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಮೈಕೆಲ್ ಮೆಕ್ ಕೌಲ್ ನೇತೃತ್ವದ ಏಳು ಸದಸ್ಯರ ಯುಎಸ್ ಕಾಂಗ್ರೆಸ್ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ನಿಯೋಗದ ಇತರ ಸದಸ್ಯರಲ್ಲಿ ಪ್ರತಿನಿಧಿ ನ್ಯಾನ್ಸಿ ಪೆಲೋಸಿ, ಪ್ರತಿನಿಧಿ ಗ್ರೆಗೊರಿ ಮೀಕ್ಸ್, ಪ್ರತಿನಿಧಿ ಮರಿಯಾನೆಟ್ ಮಿಲ್ಲರ್-ಮೀಕ್ಸ್, ಪ್ರತಿನಿಧಿ ನಿಕೋಲ್ ಮಲ್ಲಿಯೊಟಾಕಿಸ್, ಪ್ರತಿನಿಧಿ ಅಮರೀಶ್ ಬಾಬುಲಾಲ್ "ಅಮಿ ಬೆರಾ" ಮತ್ತು ಪ್ರತಿನಿಧಿ ಜಿಮ್ ಮೆಕ್ಗವರ್ನ್ ಸೇರಿದ್ದಾರೆ.
ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವ ಪ್ರಧಾನಮಂತ್ರಿಯವರಿಗೆ ನಿಯೋಗದ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಚುನಾವಣಾ ಪ್ರಕ್ರಿಯೆಯ ಪ್ರಮಾಣ, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಯೋಗವು ಭಾರತ-ಅಮೆರಿಕ ಸಂಬಂಧಗಳನ್ನು ಅತ್ಯಂತ ಪರಿಣಾಮಾತ್ಮಕವಾಗಿದೆ ಎಂದು ಬಣ್ಣಿಸಿತು ಮತ್ತು ವ್ಯಾಪಾರ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನ, ರಕ್ಷಣೆ, ಜನರ ನಡುವಿನ ವಿನಿಮಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಕಾರ್ಯತಂತ್ರದ ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ತಮ್ಮ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು.
ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಕ್ಕೆ ಗೌರವ ಮತ್ತು ಜನರ ನಡುವಿನ ಬಲವಾದ ಸಂಬಂಧಗಳನ್ನು ಆಧರಿಸಿದ ಭಾರತ-ಅಮೆರಿಕ ಸಂಬಂಧಗಳನ್ನು ಮುನ್ನಡೆಸುವಲ್ಲಿ ಯುಎಸ್ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲವು ವಹಿಸಿದ ಮಹತ್ವದ ಪಾತ್ರವನ್ನು ಪ್ರಧಾನಿ ಬಿಂಬಿಸಿದರು. ಜಾಗತಿಕ ಒಳಿತಿಗಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಕಳೆದ ವರ್ಷ ಜೂನ್ ನಲ್ಲಿ ತಾವು ಅಮೆರಿಕಕ್ಕೆ ನೀಡಿದ್ದ ಅಧಿಕೃತ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿ, ಈ ಸಂದರ್ಭದಲ್ಲಿ ಐತಿಹಾಸಿಕ ಎರಡನೇ ಬಾರಿಗೆ ಅಮೆರಿಕ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಅವಕಾಶ ಸಿಕ್ಕಿತ್ತು ಎಂದರು.