ಗುಜರಾತ್ ನ ಕೆವಾಡಿಯಾ ಇನ್ನು ಮುಂದೆ ದೂರದ ಸಣ್ಣ ಪ್ರದೇಶವಾಗಿ ಉಳಿಯುವುದಿಲ್ಲ. ಬದಲಿಗೆ ಜಗತ್ತಿನ ಅತಿ ದೊಡ್ಡ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೊರ ಹೊಮ್ಮಲಿದೆ ಎಂದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ವಿಡಿಯೋ ಕಾನ್ಪರೆನ್ಸ್ ಮೂಲಕ ಗುಜರಾತ್ ನ ಕೆವಾಡಿಯಾಗೆ ದೇಶದ ವಿವಿಧ ಭಾಗಗಳಿಂದ ಸಂಪರ್ಕಿಸುವ ಎಂಟು ರೈಲು ಸೇವೆಗೆ ಚಾಲನೆ ನೀಡಿದ ಅವರು, ರಾಜ್ಯದ ರೈಲ್ವೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಗುಜರಾತ್ ನ ಏಕತಾ ಪ್ರತಿಮೆ [ಸ್ಟ್ಯಾಚು ಆಪ್ ಯುನಿಟಿ] ಇದೀಗ ಸ್ಟ್ಯಾಚು ಆಪ್ ಲಿಬರ್ಟಿಗಿಂತಲೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಏಕತಾ ಪ್ರತಿಮೆಯನ್ನು ದೇಶಕ್ಕೆ ಲೋಕಾರ್ಪಣೆ ಮಾಡಿದ ನಂತರ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಕೊರೋನಾ ಸೋಂಕಿನಿಂದಾಗಿ ತಿಂಗಳುಗಳ ಕಾಲ ಮುಚ್ಚಿದ ನಂತರವೂ ಸಹ ಈ ತಾಣ ತನ್ನನ್ನು ಆಕರ್ಷಿಸುತ್ತಿದೆ. ಈ ಪ್ರದೇಶಕ್ಕೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಿದ ನಂತರ ಪ್ರತಿದಿನ ಒಂದು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಯೋಜಿತ ರೀತಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿ ಮಾಡಬಹುದು ಎನ್ನುವುದಕ್ಕೆ ಕೆವಾಡಿಯಾ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಕೆವಾಡಿಯಾವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡುವ ಕುರಿತು ಪ್ರಸ್ತಾಪಿಸಿದಾಗ ಅದೊಂದು ಕನಸಿನಂತೆ ಕಾಣಿಸುತ್ತಿತ್ತು. ಇದಕ್ಕೆ ತರ್ಕವೂ ಇತ್ತು. ಹಳೆಯ ಕೆಲಸದ ವಿಧಾನ ಗಮನಿಸಿದಾಗ ಅಲ್ಲಿ ರಸ್ತೆ ಸಂಪರ್ಕ ಇರಲಿಲ್ಲ. ಬೀದಿ ದೀಪ ಬೆಳಗುತ್ತಿರಲಿಲ್ಲ. ರೈಲು ಸಂಪರ್ಕ, ಪ್ರವಾಸಿ ತಾಣಕ್ಕೆ ಬೇಕಾದ ಸೌಕರ್ಯಗಳಿರಲಿಲ್ಲ. ಇದೀಗ ಕೆವಾಡಿಯಾ ಒಂದು ಕುಟುಂಬಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳುಳ್ಳ ಸಂಪೂರ್ಣ ಪ್ಯಾಕೇಜ್ ಲಭ್ಯವಾಗುವ ರೀತಿ ಪರಿವರ್ತನೆಯಾಗಿದೆ. ಮಹೋನ್ನತವಾದ ಏಕತಾ ಪ್ರತಿಮೆ, ವಿಶಾಲವಾದ ಸರ್ದಾರ್ ಸರೋವರ, ಜುವಾಲಜಿಕಲ್ ಪಾರ್ಕ್, ಆರೋಗ್ಯ ವನ, ಜಂಗಲ್ ಸಫಾರಿ, ಪೋಷಣ್ ಉದ್ಯಾನವನವನ್ನು ಇದು ಒಳಗೊಂಡಿದೆ. ಅಲ್ಲದೇ ಗ್ಲೋ ಗಾರ್ಡನ್, ಏಕ್ತಾ ಕ್ರೂಸ್ ಮತ್ತು ಜಲ ಕ್ರೀಡೆಯ ವಿಶೇಷತೆಯೂ ಸಹ ಇಲ್ಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಾದರೆ ಆದಿವಾಸಿ ಯುವ ಸಮೂಹ ಹೆಚ್ಚು ಉದ್ಯೋಗ ಪಡೆಯಲಿದೆ ಮತ್ತು ಸ್ಥಳೀಯರು ಆಧುನಿಕ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಏಕ್ತಾ ಮಾಲ್ ನಲ್ಲಿ ಸ್ಥಳೀಯ ಕರಕುಶಲ ವಸ್ತುಗಳಿಗೆ ಹೊಸ ಅವಕಾಶ ದೊರೆಯಲಿದೆ. ಆದಿವಾಸಿ ಹಳ್ಳಿಗಳಲ್ಲಿ 200 ಕೊಠಡಿಗಳನ್ನು ಹೋಮ್ ಸ್ಟೇ ಆಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆವಾಡಿಯಾ ನಿಲ್ದಾಣವನ್ನು ಬೆಳೆಯುತ್ತಿರುವ ಪ್ರವಾಸಿ ಮನಸ್ಥಿತಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗುವುದು. ಈ ನಿಲ್ದಾಣ ಬುಡಕಟ್ಟು ಆರ್ಟ್ ಗ್ಯಾಲರಿ ಮತ್ತು ವೀಕ್ಷಣಾ ಗ್ಯಾಲರಿಯನ್ನು ಹೊಂದಿದೆ. ಅಲ್ಲಿಂದ ಏಕತಾ ಪ್ರತಿಮೆಯನ್ನು ಸಹ ವೀಕ್ಷಿಸಬಹುದಾಗಿದೆ ಎಂದರು.
ಭಾರತೀಯ ರೈಲ್ವೆ ಗುರಿ ಕೇಂದ್ರೀತ ಪ್ರಯತ್ನದ ಮೂಲಕ ರೂಪಾಂತರ ಹೊಂದುತ್ತಿರುವುದನ್ನು ಪ್ರಧಾನಮಂತ್ರಿ ಅವರು ಸುದೀರ್ಘವಾಗಿ ಪ್ರಸ್ತಾಪಿಸಿದರು. ರೈಲ್ವೆ ಪ್ರಯಾಣಿಕರು ಮತ್ತು ಸರಕು ಸಾಗಾಣೆಯ ತನ್ನ ಸಾಂಪ್ರದಾಯಿಕ ಪಾತ್ರವನ್ನು ಹೊರತುಪಡಿಸಿ ರೈಲ್ವೆ ಪ್ರವಾಸೋದ್ಯಮ, ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ನೇರವಾಗಿ ಸಂಪರ್ಕ ನೀಡುತ್ತಿದೆ. ಅಹಮದಾಬಾದ್ – ಕೆವಾಡಿಯಾ ಜನಶತಾಬ್ದಿ ಸೇರಿದಂತೆ ಹಲವು ರೈಲು ಮಾರ್ಗಗಳಲ್ಲಿ ಆಕರ್ಷಕ “ ವಿಸ್ತಾ-ಡೊಮ್ ಕೋಚ್ “ ಸಹ ಇರಲಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.