ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ಸೇನಾ ಮುಖ್ಯಸ್ಥರ ‘ಪ್ರಶಂಸಾ ಪತ್ರ’ ಪಡೆದಿರುವ ಭಾರತೀಯ ಸೇನೆಯ ನಾಯಿಗಳಾದ ಸೋಫಿ ಮತ್ತು ವಿದಾ ಕುರಿತು ಮಾತನಾಡಿದರು. ಹಲವಾರು ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದಕ ಪಿತೂರಿಗಳನ್ನು ತಡೆಯುವಲ್ಲಿ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಪಡೆಗಳು ಇಂತಹ ಅನೇಕ ಕೆಚ್ಚೆದೆಯ ನಾಯಿಗಳನ್ನು ಹೊಂದಿವೆ ಎಂದು ಅವರು ಹೇಳಿದರು. ಅವುಗಳು ಮದ್ದುಗುಂಡುಗಳನ್ನು ಮತ್ತು ಸ್ಫೋಟಕಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಹಲವು ಉದಾಹರಣೆಗಳನ್ನು ನೀಡಿದರು. ಇತ್ತೀಚೆಗೆ ಬೀಡ್ ಪೊಲೀಸರು 300 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ ತಮ್ಮ ಸಹೋದ್ಯೋಗಿ ನಾಯಿ ರಾಕಿಗೆ ಸಕಲ ಗೌರವಗಳೊಂದಿಗೆ ನೀಡಿದ ಅಂತಿಮ ವಿದಾಯ ಬಗ್ಗೆಯೂ ಉಲ್ಲೇಖಿಸಿದರು.
ಭಾರತೀಯ ನಾಯಿ ತಳಿಗಳ ಬಗ್ಗೆ ಮಾತನಾಡಿದ ಪ್ರಧಾನಿ, ಅವುಗಳನ್ನು ಸಾಕಲು ಕಡಿಮೆ ವೆಚ್ಚ ತಗಲುತ್ತದೆ ಮತ್ತು ಇವು ಭಾರತೀಯ ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ ಮತ್ತು ನಮ್ಮ ಭದ್ರತಾ ಸಂಸ್ಥೆಗಳು ಈ ಭಾರತೀಯ ತಳಿ ನಾಯಿಗಳನ್ನು ತಮ್ಮ ಭದ್ರತಾ ದಳದ ಭಾಗವಾಗಿ ಸೇರಿಸಿಕೊಳ್ಳುತ್ತಿವೆ ಎಂದು ಹೇಳಿದರು. ಭಾರತೀಯ ತಳಿ ನಾಯಿಗಳ ಬಗ್ಗೆ ಸಂಶೋಧನೆಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ನಡೆಸುತ್ತಿದೆ ಎಂದು ಅವರು ಹೇಳಿದರು. ನಾಯಿಯನ್ನು ಸಾಕಲು ಆಲೋಚಿಸುತ್ತಿರುವವರು ಭಾರತೀಯ ತಳಿಗಳಲ್ಲಿ ಒಂದನ್ನು ಸಾಕುವಂತೆ ಅವರು ಕೇಳುಗರಿಗೆ ಸಲಹೆ ನೀಡಿದರು.