Historic MoA for Ken Betwa Link Project signed
India’s development and self-reliance is dependent on water security and water connectivity : PM
Water testing is being taken up with utmost seriousness: PM

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಜೀ, ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ ಜೀ, ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ಜಲಶಕ್ತಿ ಸಹಾಯಕ ಸಚಿವರಾದ ಶ್ರೀ ರತ್ತನ್ ಲಾಲ್ ಕಟಾರಿಯಾ ಜೀ, ಎಲ್ಲಾ ಗೌರವಾನ್ವಿತ ಅಧಿಕಾರಿಗಳೇ, ಈ ಆಂದೋಲನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿರುವ ದೇಶಾದ್ಯಂತದ ಗ್ರಾಮಗಳ ಸರಪಂಚರೇ ಮತ್ತು ಪಂಚರೇ, ಜನಪ್ರತಿನಿಧಿಗಳೇ, ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ !.

ದೇಶದ ವಿವಿಧ ಭಾಗಗಳಲ್ಲಿ ನಿಸರ್ಗ ಮತ್ತು ನೀರಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಮತ್ತು ಈ ಆಂದೋಲನದಲ್ಲಿ ಪ್ರತಿಯೊಬ್ಬರನ್ನೂ ಸೇರಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ನಾಯಕರ ಮಾತುಗಳನ್ನು ಕೇಳುವ ಅವಕಾಶ ಇಂದು ನನಗೆ ದೊರಕಿತ್ತು. ಅವರ ಮಾತುಗಳನ್ನು ಕೇಳಿದ ಬಳಿಕ ನನಗೆ ಹೊಸ ಪ್ರೇರಣೆ, ಶಕ್ತಿ ಮತ್ತು ಹೊಸ ಚಿಂತನೆಗಳು ದೊರಕಿವೆ. ಈ ಪ್ರತಿನಿಧಿಗಳ ಜೊತೆಗಿನ ಈ ಸಂವಾದವನ್ನು ಯಾರೆಲ್ಲಾ ಕೇಳಿರುವರೋ ಅವರು ಹೊಸತೇನನ್ನಾದರೂ ಕಲಿತಿರುತ್ತಾರೆ. ನಾನು ಕೂಡಾ ಕಲಿತಿದ್ದೇನೆ ಮತ್ತು ನನ್ನ ಅಧಿಕಾರಿಗಳು ಕೂಡಾ ಕಲಿತಿದ್ದಾರೆ ಮತ್ತು ಜನತೆ ಕೂಡಾ ಕಲಿಯಲಿದ್ದಾರೆ.

ನೀರಿನ ಮಹತ್ವಕ್ಕೆ ಸಂಬಂಧಿಸಿದ ಜಾಗೃತಿ ಹೆಚ್ಚುತ್ತಿರುವುದರ ಬಗ್ಗೆ ನಾನು ಸಂತೋಷಗೊಂಡಿದ್ದೇನೆ. ಮತ್ತು ಈ ನಿಟ್ಟಿನಲ್ಲಿ ಪ್ರಯತ್ನಗಳೂ ಹೆಚ್ಚುತ್ತಿವೆ. ಇಂದು ಅಂತಾರಾಷ್ಟ್ರೀಯ ಜಲ ದಿನ, ಇದನ್ನು ಜಗತ್ತಿನಾದ್ಯಂತ ನೀರಿನ ಮಹತ್ವ ಕುರಿತ ಜಾಗೃತಿ ಮೂಡಿಸುವುದಕ್ಕಾಗಿ ಅಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಂದು ಎರಡು ಪ್ರಮುಖ ಸಂಗತಿಗಳಿಗಾಗಿ ನಾವಿಲ್ಲಿ ಸೇರಿದ್ದೇವೆ. ಇಂದು ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ ಮತ್ತು ಇದರ ಬಗ್ಗೆ ನಾನು ನನ್ನ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೇನೆ. “ಮಳೆಯನ್ನು ಹಿಡಿಯಿರಿ” ಆಂದೋಲನದ ಜೊತೆಗೆ ಕೆನ್ ಬೆಟ್ವಾ ಸಂಪರ್ಕ ಕಾಲುವೆಗಾಗಿ ಮುಂದಡಿ ಇಡಲಾಗಿದ್ದು, ಇದು ಭಾರತದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲಿದೆ ಮಾತ್ರವಲ್ಲ ಜಗತ್ತಿನೆದುರು ಒಂದು ಉದಾಹರಣೆಯಾಗಿ ನಿಲ್ಲಲಿದೆ. ಉತ್ತರ ಪ್ರದೇಶದ ಮತ್ತು ಮಧ್ಯಪ್ರದೇಶದ ಮಿಲಿಯಾಂತರ ಕುಟುಂಬಗಳ ಹಿತಾಸಕ್ತಿಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಇಂದು ಒಪ್ಪಂದವೊಂದಕ್ಕೆ ಬರಲಾಗಿದ್ದು, ಅಟಲ್ ಜೀ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಇದು ಒಂದು ದೊಡ್ಡ ಹೆಜ್ಜೆಯಾಗಲಿದೆ. ಕೊರೋನಾ ಇರದಿದ್ದರೆ, ನಾನು ವೈಯಕ್ತಿಕವಾಗಿ ಬುಂದೇಲ್ ಖಂಡದ ಝಾನ್ಸಿಗೆ ಬಂದು ಉತ್ತರ ಪ್ರದೇಶ ಅಥವಾ ಮಧ್ಯಪ್ರದೇಶದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೆ. ಇದರಿಂದ ಲಕ್ಷಾಂತರ ಜನರಿಗೆ ಬಂದು ಈ ಮಹತ್ವದ ಉಪಕ್ರಮಕ್ಕಾಗಿ ನಮ್ಮನ್ನು ಆಶೀರ್ವದಿಸುವುದಕ್ಕೆ ಸಾಧ್ಯವಾಗುತ್ತಿತ್ತು.

ಸಹೋದರರೇ ಮತ್ತು ಸಹೋದರಿಯರೇ,

21 ಶತಮಾನದ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗುವಂತೆ ಮಾಡುವುದು ಬಹಳ ಪ್ರಮುಖ ಸಂಗತಿಯಾಗಿದೆ. ಪ್ರತೀ ಮನೆಗೂ, ಪ್ರತೀ ಕೃಷಿ ಭೂಮಿಗೂ ನೀರು ಅವಶ್ಯಕ. ಅದು ಜೀವನದ ಮತ್ತು ಆರ್ಥಿಕತೆಯ ಪ್ರತೀ ವಿಷಯಕ್ಕೂ ಬಹಳ ಮುಖ್ಯ. ಇಂದು ನಾವು ತ್ವರಿತಗತಿಯ ಬೆಳವಣಿಗೆಯ ಬಗ್ಗೆ ಮಾತನಾಡುವಾಗ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿರುವಾಗ, ಜಲ ಸುರಕ್ಷತೆ, ಭದ್ರತೆ ಇಲ್ಲದೆ ಮತ್ತು ಸಮರ್ಪಕ ಜಲ ನಿರ್ವಹಣೆ ಇಲ್ಲದೆ ಅದು ಸಾಧ್ಯವಾಗದು. ಅಭಿವೃದ್ಧಿ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದ ಭಾರತದ ಚಿಂತನೆ ನಮ್ಮ ಜಲಮೂಲಗಳನ್ನು ಮತ್ತು ನಮ್ಮ ಜಲ ಸಂಪರ್ಕಗಳನ್ನು ಅವಲಂಬಿಸಿದೆ. ಪರಿಸ್ಥಿತಿಯ ಗಂಭೀರತೆಯ ಹಿನ್ನೆಲೆಯಲ್ಲಿ ಬಹಳಷ್ಟನ್ನು ದಶಕಗಳ ಹಿಂದೆಯೇ ಮಾಡಬೇಕಿತ್ತು. ನಾನು ನಿಮಗೆ ಗುಜರಾತಿನ ಅನುಭವದ ಆಧಾರದಲ್ಲಿ ಹೇಳುತ್ತೇನೆ, ನಾವು ಯೋಜನಾ ಬದ್ಧವಾಗಿ ಜನತೆಯ ಸಹಭಾಗಿತ್ವದಲ್ಲಿ ನೀರು ಸಂಗ್ರಹಕ್ಕೆ ಮುಂದಾದರೆ, ನಮಗೆ ನೀರಿನ ಕೊರತೆಯ ಸಮಸ್ಯೆ ಬರುವುದಿಲ್ಲ. ಮತ್ತು ನೀರು ಹಣಕ್ಕಿಂತಲೂ ಬಹಳ ಮುಖ್ಯವಾದ ಅಮೂಲ್ಯ ಶಕ್ತಿಯಾಗಿ ಮೂಡಿ ಬರುತ್ತದೆ. ಇದನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಜನರ ಸಹಭಾಗಿತ್ವದೊಂದಿಗೆ ಅದು ಆಗಬೇಕಾದ ರೀತಿಯಲ್ಲಿ ಆಗಲಿಲ್ಲ. ಇದರ ಪರಿಣಾಮವಾಗಿ, ಭಾರತವು ಅಭಿವೃದ್ಧಿಯ ಪಥದಲ್ಲಿ ಮುಂದೆ ಸಾಗುತ್ತಿರುವಂತೆಯೇ ಜಲ ಬಿಕ್ಕಟ್ಟಿನ ಸವಾಲು ಹೆಚ್ಚುತ್ತಿದೆ. ದೇಶವು ಜಲ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸದಿದ್ದರೆ ಮತ್ತು ನೀರು ಪೋಲಾಗುವುದನ್ನು ತಡೆಯದಿದ್ದರೆ, ಬರಲಿರುವ ದಶಕಗಳಲ್ಲಿ ಪರಿಸ್ಥಿತಿ ತೀರಾ ಹದಗೆಡಲಿದೆ. ನಮ್ಮ ಪೂರ್ವಜರು ನಮಗೆ ನೀಡಿದ ನೀರನ್ನು ನಮ್ಮ ಭವಿಷ್ಯದ ಜನಾಂಗಗಳಿಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇದಕ್ಕಿಂತ ದೊಡ್ಡ ಸದ್ಗುಣ ಬೇರೆ ಯಾವುದೂ ಇಲ್ಲ. ಆದುದರಿಂದ ನಾವು ನೀರು ಪೋಲಾಗಲು ಬಿಡುವುದಿಲ್ಲ, ದುರುಪಯೋಗವಾಗಲು ಅವಕಾಶ ನೀಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳೋಣ ಮತ್ತು ನಾವು ನೀರಿನ ಜೊತೆಗೆ ಆಧ್ಯಾತ್ಮಿಕ ಬಾಂಧವ್ಯವನ್ನು ಬೆಳೆಸಿಕೊಳ್ಳೋಣ. ನಮ್ಮ ಪಾವಿತ್ರ್ಯ ನೀರಿನ ಸಂರಕ್ಷಣೆಯಲ್ಲಿ ನೆರವಿಗೆ ಬರಲಿದೆ. ಬರಲಿರುವ ತಲೆಮಾರುಗಳಿಗಾಗಿ ಇಂದಿನಿಂದ ಈಗಿನ ತಲೆಮಾರಿನವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ.

ಸಹೋದರರೇ ಮತ್ತು ಸಹೋದರಿಯರೇ.

ನಾವು ಈಗಿರುವ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿರುವುದು ಮಾತ್ರವಲ್ಲ, ನಾವು ಭವಿಷ್ಯದಲ್ಲಿ ಉದ್ಭವಿಸಬಹುದಾದ ಬಿಕ್ಕಟ್ಟಿಗೂ ಪರಿಹಾರಗಳನ್ನು ಕಂಡು ಹುಡುಕಬೇಕು. ಆದುದರಿಂದ ನಮ್ಮ ಸರಕಾರ ತನ್ನ ನೀತಿಗಳಲ್ಲಿ ಮತ್ತು ನಿರ್ಧಾರಗಳಲ್ಲಿ ನೀರಿನ ನಿರ್ವಹಣೆ ಮತ್ತು ಆಡಳಿತಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಟ್ಟಿದೆ. ಕಳೆದ ಆರು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನಾ, ಪ್ರತೀ ಕೃಷಿ ಭೂಮಿಗೂ ಜಲ ಆಂದೋಲನ-ಹರ್ ಖೇತ್ ಕೋ ಪಾನಿ, “ಹನಿ ನೀರಿಗೆ ಹೆಚ್ಚು ಬೆಳೆ” ಆಂದೋಲನ ಮತ್ತು ನಮಾಮಿ ಗಂಗೆ ಆಂದೋಲನ, ಜಲ ಜೀವನ್ ಆಂದೋಲನ, ಅಥವಾ ಅಟಲ್ ಭೂ ಜಲ್ ಯೋಜನಾ ಸಹಿತ ವಿವಿಧ ಯೋಜನೆಗಳಲ್ಲಿ ತ್ವರಿತವಾಗಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಸ್ನೇಹಿತರೇ,

ಈ ಎಲ್ಲಾ ಪ್ರಯತ್ನಗಳ ನಡುವೆ, ನಮ್ಮ ದೇಶದಲ್ಲಿ ಮಳೆ ನೀರು ಬಹಳ ದೊಡ್ಡ ಪ್ರಮಾಣದಲ್ಲಿ ನಿರುಪಯುಕ್ತವಾಗುತ್ತಿದೆ. ಅಥವಾ ಪೋಲು ಮಾಡಲಾಗುತ್ತಿದೆ. ಮಳೆ ನೀರನ್ನು ಭಾರತವು ಉತ್ತಮ ರೀತಿಯಲ್ಲಿ ನಿರ್ವಹಿಸಿದರೆ, ಅಂತರ್ಜಲದ ಮೇಲಿನ ದೇಶದ ಅವಲಂಬನೆ ಕಡಿಮೆಯಾಗುತ್ತದೆ. ಆದುದರಿಂದ “ಮಳೆ ನೀರು ಹಿಡಿಯಿರಿ” ಯಂತಹ ಯಶಸ್ವೀ ಆಂದೋಲನಗಳು ಬಹಳ ಮುಖ್ಯ. ಈ ಬಾರಿ ಜಲ ಶಕ್ತಿ ಅಭಿಯಾನದ ಮಹತ್ವ ಎಂದರೆ ಅದು ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ. ಮುಂಗಾರು ಮಳೆಗೆ ಇನ್ನು ಕೆಲವು ವಾರಗಳಿವೆ ಮತ್ತು ನಾವು ಈಗಿನಿಂದಲೇ ನೀರು ಸಂರಕ್ಷಣೆಗೆ ತಯಾರಿಗಳನ್ನು ಆರಂಭಿಸಬೇಕು. ನಮ್ಮ ತಯಾರಿಗಳಲ್ಲಿ ಕೊರತೆ ಇರಬಾರದು ಮತ್ತು ಯಾವ ರೀತಿಯಲ್ಲೂ ಅದು ಹಿಂದುಳಿಯಬಾರದು. ಕೆರೆ ಕಟ್ಟೆಗಳ ಸ್ವಚ್ಚತೆ, ಬಾವಿಗಳನ್ನು ಸ್ವಚ್ಚಗೊಳಿಸುವಿಕೆ, ಚರಂಡಿಗಳ ಹೂಳೆತ್ತುವಿಕೆ ಕಾರ್ಯಗಳು ಮುಂಗಾರು ಆರಂಭಕ್ಕೆ ಮೊದಲು ಪೂರ್ಣಗೊಳ್ಳಬೇಕು. ನಾವು ನೀರು ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸಬೇಕು ಮತ್ತು ಮಳೆ ನೀರು ಹರಿಯುವಲ್ಲಿ ಇರುವ ಅಡೆ ತಡೆಗಳನ್ನು ನಿವಾರಿಸಬೇಕು. ಮತ್ತು ಇದಕ್ಕೆ ಯಾವುದೇ ಪ್ರಮುಖವಾದಂತಹ ಇಂಜಿನಿಯರಿಂಗ್ ತಂತ್ರದ ಅವಶ್ಯಕತೆ ಇಲ್ಲ. ವಿನ್ಯಾಸವನ್ನು ರೂಪಿಸಲು ಯಾವುದೇ ಉನ್ನತ ಇಂಜಿನಿಯರ್ ಬೇಕಿಲ್ಲ. ಗ್ರಾಮಗಳ ಜನರಿಗೆ ಈ ಬಗ್ಗೆ ತಿಳಿದಿದೆ ಮತ್ತು ಅವರು ಅವರದನ್ನು ಸುಲಭದಲ್ಲಿ ಮಾಡುತ್ತಾರೆ. ಅಲ್ಲಿ ಏನು ಅವಶ್ಯಕತೆ ಇದೆ ಎಂದರೆ ಮೇಲುಸ್ತುವಾರಿ ಮಾಡಲು ಒಬ್ಬರು ಇರಬೇಕು ಮತ್ತು ತಂತ್ರಜ್ಞಾನವನ್ನು ಗರಿಷ್ಟ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಮಳೆ ಬರುವವರೆಗೆ ಎಂ.ಜಿ.ನರೇಗಾದ ಪ್ರತೀ ರೂಪಾಯಿಯೂ ಈ ಕಾರ್ಯಕ್ಕೆ ಬಳಕೆಯಾಗಬೇಕು ಎಂದು ನಾನು ಆಶಿಸುತ್ತೇನೆ.

ನೀರು ಮತ್ತು ಎಂ.ಜಿ. ನರೇಗಾ ಹಣಕಾಸಿಗೆ ಸಂಬಂಧಿಸಿ ಏನೆಲ್ಲಾ ಸಿದ್ಧತೆಗಳು ಮಾಡಬೇಕಾಗಿವೆಯೋ ಆ ಮೊತ್ತವನ್ನು ಬೇರೆಡೆ ವಿನಿಯೋಗಿಸಬಾರದು. ಮತ್ತು ಆದುದರಿಂದ ನಾನು ಈ ಆಂದೋಲನವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರವನ್ನು ಕೋರಲು ಇಚ್ಛಿಸುತ್ತೇನೆ. ಎಲ್ಲಾ ಸರಪಂಚರು, ಡಿ.ಎಂ.ಗಳು, ಜಿಲ್ಲಾಧಿಕಾರಿಗಳು, ಮತ್ತು ಇತರ ಸಹೋದ್ಯೋಗಿಗಳ ಪಾತ್ರವೂ ಬಹಳ ಮುಖ್ಯವಾದುದು. ಇಂದು ಗ್ರಾಮ ಸಭಾಗಳ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಹಾಗು ಅಲ್ಲಿ ಜಲ ಪ್ರತಿಜ್ಞೆಯನ್ನು ಕೈಗೊಳ್ಳಲಾಗಿದೆ. ಈ ಜಲ ಪ್ರತಿಜ್ಞೆ ಜನರ ತೀರ್ಮಾನವಾಗಬೇಕು, ಜನರ ಸ್ವಭಾವವಾಗಬೇಕು. ನೀರಿನ ಬಗೆಗಿನ ನಮ್ಮ ವರ್ತನೆ ಬದಲಾದರೆ ನಿಸರ್ಗ ಕೂಡಾ ನಮಗೆ ಸಹಾಯ ಮಾಡುತ್ತದೆ. ಶಾಂತಿಯ ಕಾಲದಲ್ಲಿ ಹೆಚ್ಚು ಬೆವರು ಸುರಿಸುವ ಸೇನೆಯು ಯುದ್ಧದಲ್ಲಿ ಅತಿ ಕಡಿಮೆ ರಕ್ತವನ್ನು ಸುರಿಸುತ್ತದೆ ಎಂಬುದೊಂದು ಮಾತಿದೆ. ಈ ನಿಯಮ ನೀರಿಗೂ ಅನ್ವಯಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಕಷ್ಟಪಟ್ಟು ಕೆಲಸ ಮಾಡಿ ಮಳೆಗಾಲಕ್ಕೆ ಮೊದಲು ನೀರು ಸಂಗ್ರಹ ಮತ್ತು ಸಂರಕ್ಷಣೆಗೆ ಯೋಜನೆಗಳನ್ನು ಹಾಕಿಕೊಂಡರೆ ಎಲ್ಲಾ ಕಾಮಗಾರಿಗಳ ಸ್ಥಾಗಿತ್ಯಕ್ಕೆ ಕಾರಣವಾಗುವ, ಜನಸಾಮಾನ್ಯರಿಗೆ ತೊಂದರೆಯನ್ನು ಮಾಡುವ, ಜಾನುವಾರುಗಳ ವಲಸೆಗೆ ಕಾರಣವಾಗುವ ಕ್ಷಾಮ, ಬರಗಾಲಗಳ ಕಾಲದಲ್ಲಿ ಸಂಭವಿಸುವ ಬಿಲಿಯಾಂತರ ರೂಪಾಯಿಯಷ್ಟು ಬೃಹತ್ ಪ್ರಮಾಣದ ಹಾನಿಯನ್ನು ತಡೆಗಟ್ಟಬಹುದು. ಯುದ್ಧದ ಸಮಯದಲ್ಲಿ ಅನುಕೂಲಕ್ಕೆ ಬರುವ ಶಾಂತಿಯ ಸಮಯದಲ್ಲಿ ಬೆವರು ಸುರಿಸುವ ಮಂತ್ರದಂತೆ ಮಳೆಗಾಲಕ್ಕೆ ಮೊದಲು ನಾವು ಜೀವವುಳಿಸಲು ಹೆಚ್ಚು ಪ್ರಯತ್ನಗಳನ್ನು ಮಾಡಿದಷ್ಟೂ ಅದರ ಪ್ರಯೋಜನ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ದೇಶದಲ್ಲಿ ನದಿ ನೀರು ನಿರ್ವಹಣೆ ಮತ್ತು ಮಳೆ ನೀರು ಸಂರಕ್ಷಣೆ ಬಗ್ಗೆ ದಶಕಗಳಿಂದ ಚರ್ಚೆಗಳು ನಡೆದಿವೆ. ಹಲವು ಕಡೆ ಅಣೆಕಟ್ಟುಗಳನ್ನು ಕಟ್ಟಿರುವುದನ್ನು ನಾವು ನೋಡಬಹುದು, ಆದರೆ ಅದರ ಹೂಳೆತ್ತುವ ಕಾರ್ಯ ಆಗಿಲ್ಲ. ನಾವು ಇಂಜಿನಿಯರುಗಳ ಮಾರ್ಗದರ್ಶನದಲ್ಲಿ ಅಣೆಕಟ್ಟುಗಳ ಹೂಳೆತ್ತಿದರೆ, ಅವುಗಳು ಹೆಚ್ಚು ನೀರನ್ನು ಸಂಗ್ರಹಿಸುತ್ತವೆ.ಮತ್ತು ಆ ನೀರು ಹೆಚ್ಚು ಸಮಯಕ್ಕೆ ಬರುತ್ತದೆ. ಅದೇ ರೀತಿ ನಾವು ನಮ್ಮ ನದಿಗಳಲ್ಲಿಯೂ ಮತ್ತು ಕಾಲುವೆಗಳಲ್ಲಿಯೂ ಹೂಳೆತ್ತಬೇಕು. ದೇಶವನ್ನು ಜಲ ಬಿಕ್ಕಟ್ಟಿನಿಂದ ಪಾರು ಮಾಡಲು ಈ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯಾಚರಿಸುವುದು ನಮ್ಮ ಸಂಯುಕ್ತ ಜವಾಬ್ದಾರಿಯಾಗಿದೆ. ಕೆನ್ –ಬೆಟ್ವಾ ಸಂಪರ್ಕ ಯೋಜನೆ ಈ ಚಿಂತನೆಯ ಭಾಗ. ನಾನು ಉಭಯ ಮುಖ್ಯಮಂತ್ರಿಗಳನ್ನು, ಸರಕಾರಗಳನ್ನು ಮತ್ತು ಮಧ್ಯ ಪ್ರದೇಶ ಹಾಗು ಉತ್ತರ ಪ್ರದೇಶಗಳ ಜನರನ್ನು ಅಭಿನಂದಿಸುತ್ತೇನೆ. ಇಂದು ಈ ಇಬ್ಬರು ನಾಯಕರು ಮತ್ತು ಸರಕಾರಗಳು ಎಂತಹ ದೊಡ್ಡ ಕೆಲಸ ಮಾಡಿರುವರೆಂದರೆ ಭಾರತದ ಜಲ ಸಂಬಂಧಿತ ಉಜ್ವಲ ಭವಿಷ್ಯದಲ್ಲಿ ಈ ಕೆಲಸ ಸುವರ್ಣಾಕ್ಷರದಲ್ಲಿ ಬರೆದಿಡಲ್ಪಡಲಿದೆ. ಇದು ಕ್ಷುಲ್ಲಕ ಕೆಲಸ ಅಲ್ಲ. ಇದು ಅವರಿಬ್ಬರು ಸಹಿ ಹಾಕಿದ ಸಣ್ಣ ಕಾಗದವಲ್ಲ. ಅವರು ಬುಂದೇಲ್ ಖಂಡದ ಜನತೆಗೆ ಇಂದು ಹೊಸ ಜೀವನ ರೇಖೆಯನ್ನು ಕೊಟ್ಟಿದ್ದಾರೆ ಮತ್ತು ಅದರ ಭವಿಷ್ಯ ಬದಲಾಯಿಸಲು ಹೊರಟಿದ್ದಾರೆ. ಅದುದರಿಂದ ಈ ಇಬ್ಬರು ಮುಖ್ಯಮಂತ್ರಿಗಳು, ಸರಕಾರಗಳು ಮತ್ತು ಈ ಎರಡು ರಾಜ್ಯಗಳ ಜನತೆ ಅಭಿನಂದನಾರ್ಹರು. ಆದರೆ ಕೆನ್ –ಬೆಟ್ವಾದ ಕಾಮಗಾರಿ ನಮ್ಮ ಜೀವಿತಾವಧಿಯೊಳಗೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವತ್ತ ಗರಿಷ್ಟ ಪ್ರಯತ್ನಗಳನ್ನು ಮಾಡುವುದು ಮತ್ತು ಆ ವಲಯದಲ್ಲಿ ನೀರು ಹರಿಯುವಂತೆ ನೋಡಿಕೊಳ್ಳುವುದು ಬುಂದೇಲ್ ಖಂಡದ ನನ್ನ ಸಹೋದರರ ಜವಾಬ್ದಾರಿ. ನಮ್ಮ ಕೃಷಿ ಭೂಮಿಯನ್ನು ಹಸಿರು ಮಾಡಲು ನಾವೆಲ್ಲರೂ ಕೈಜೋಡಿಸೋಣ. ಈ ಯೋಜನೆಯು ಲಕ್ಷಾಂತರ ಜನರು ಮತ್ತು ಕೃಷಿಕರು ನೀರು ಪಡೆದುಕೊಳ್ಳುವ ಜಿಲ್ಲೆಗಳಲ್ಲಿ ವಿದ್ಯುತ್ ಉತ್ಪಾದನೆಯನ್ನೂ ಮಾಡಲಿದೆ. ಅದು ಬಾಯಾರಿಕೆಯನ್ನು ನೀಗಿಸಲಿದೆ ಮತ್ತು ಪ್ರಗತಿಯನ್ನು ಖಾತ್ರಿಪಡಿಸಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಪ್ರಯತ್ನಗಳು ಭಗೀರಥನ ಪ್ರಯತ್ನಗಳಂತೆ ಪ್ರಾಮಾಣಿಕವಾಗಿದ್ದರೆ, ವಿಶ್ವಾಸಪೂರ್ಣವಾಗಿದ್ದರೆ ಯಾವುದೇ ಗುರಿಗಳನ್ನು ಸಾಧಿಸಬಹುದು. ಇಂದು ಇಂತಹದೇ ಪ್ರಯತ್ನಗಳು ಜಲ್ ಜೀವನ ಆಂದೋಲನದಲ್ಲಿ ಕಂಡು ಬರುತ್ತಿವೆ. ಬರೇ ಒಂದೂವರೆ ವರ್ಷಕ್ಕೆ ಮೊದಲು ನಮ್ಮ ದೇಶದ 19 ಕೋಟಿ ಗ್ರಾಮ ವಾಸಿ ಕುಟುಂಬಗಳಲ್ಲಿ ಬರೇ 3.5 ಕೋಟಿ ಕುಟುಂಬಗಳಿಗೆ ಮಾತ್ರವೇ ಕೊಳವೆ ಮೂಲಕ ಕುಡಿಯುವ ನೀರು ಲಭಿಸುತಿತ್ತು. ಜಲ ಜೀವನ ಆಂದೋಲನ ಆರಂಭಗೊಂಡ ಬಳಿಕ ಇಷ್ಟು ಕಡಿಮೆ ಅವಧಿಯಲ್ಲಿ 4 ಕೋಟಿ ಹೊಸ ಕುಟುಂಬಗಳಿಗೆ ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆಯಾಯಿತು ಎಂಬುದು ನನಗೆ ಸಂತೋಷದ ಸಂಗತಿ. ಈ ಆಂದೋಲನದ ಬಹಳ ಪ್ರಮುಖವಾದ ಸಂಗತಿ ಎಂದರೆ ಜನರ ಸಹಭಾಗಿತ್ವ. ಮತ್ತು ಸ್ಥಳೀಯಾಡಳಿತ ಮಾದರಿ ಅದರ ಕೇಂದ್ರ ಬಿಂದುವಿನಲ್ಲಿರುವುದು. ನಾನು ನನ್ನ ಅನುಭವದ ಆಧಾರದಲ್ಲಿ ಹೇಳುವುದೇನೆಂದರೆ ಹೆಚ್ಚು ಹೆಚ್ಚು ಮಂದಿ ಸಹೋದರಿಯರು ಮುಂದೆ ಬಂದು ಜವಾಬ್ದಾರಿ ತೆಗೆದುಕೊಂಡರೆ ಆಂದೋಲನಕ್ಕೆ ಹೆಚ್ಚು ಶಕ್ತಿ ಬರುತ್ತದೆ. ಯಾಕೆಂದರೆ ನಮ್ಮ ತಾಯಂದಿರು ಮತ್ತು ಸಹೋದರಿಯರು ನೀರಿನ ಮಹತ್ವವನ್ನು ತಿಳಿದುಕೊಂಡಷ್ಟು ಬೇರಾರೂ ತಿಳಿದುಕೊಂಡಿರಲಾರರು. ಮನೆಯಲ್ಲಿ ನೀರಿನ ಅಭಾವ ಇದ್ದಾಗ ತಾಯಂದಿರು ಮತ್ತು ಸಹೋದರಿಯರು ಅದರ ಸಮಸ್ಯೆಯನ್ನು ಅರಿತುಕೊಂಡಿರುತ್ತಾರೆ. ನಾವು ನೀರಿನ ನಿರ್ವಹಣೆಯನ್ನು ನಮ್ಮ ತಾಯಂದಿರಿಗೆ ಮತ್ತು ಸಹೋದರಿಯರಿಗೆ ಹಸ್ತಾಂತರಿಸಿದರೆ ನಾವು ಯೋಚನೆ ಕೂಡಾ ಮಾಡಿರಲಾರದಷ್ಟು ಪರಿವರ್ತನೆಯನ್ನು ತರುತ್ತಾರೆ. ಈ ಇಡೀ ಕಾರ್ಯಕ್ರಮವನ್ನು ಗ್ರಾಮಗಳು ನಿಭಾಯಿಸುತ್ತಿವೆ ಎಂಬುದು ಎಲ್ಲಾ ಪಂಚಾಯತ್ ರಾಜ್ ಸಹೋದ್ಯೋಗಿಗಳಿಗೆ ಗೊತ್ತಿದೆ. ನಾನೀಗಾಗಲೇ ಹೇಳಿದಂತೆ ಅದನ್ನು ನಮ್ಮ ಮಹಿಳೆಯರ ನಾಯಕತ್ವದಲ್ಲಿ ಮುಂದುವರೆಸಿಕೊಂಡು ಹೋಗಿ. ಮತ್ತು ಆಗ ನೀವು ಪಲಿತಾಂಶಗಳನ್ನು ನೋಡುತ್ತೀರಿ. ಶಾಲೆಗಳಿಗೆ, ಅಂಗನವಾಡಿಗಳಿಗೆ, ಆಶ್ರಮಗಳಿಗೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಹಾಗು ಸಮುದಾಯ ಕೇಂದ್ರಗಳಿಗೆ ಆದ್ಯತೆಯಾಧಾರದಲ್ಲಿ ಕೊಳವೆ ಮೂಲಕ ಕುಡಿಯುವ ನೀರು ಖಾತ್ರಿಪಡಿಸಿರುವುದು ನನಗೆ ಸಂತೋಷದ ಸಂಗತಿಯಾಗಿದೆ.

ಸ್ನೇಹಿತರೇ,

ಜಲ ಜೀವನ ಆಂದೋಲನದಲ್ಲಿ ಇನ್ನೊಂದು ಸಂಗತಿ ಇದೆ. ಅದನ್ನು ಹೆಚ್ಚಾಗಿ ಚರ್ಚೆ ಮಾಡಿಲ್ಲ. ನೀರಿನಲ್ಲಿ ವಿಷಕಾರಿ ಅಂಶಗಳು ಮತ್ತು ಇತರ ಮಾಲಿನ್ಯಕಾರಕ ಅಂಶಗಳ ಬಹಳ ದೊಡ್ಡ ಸಮಸ್ಯೆ ಇದೆ. ಕಲುಷಿತ ನೀರಿನಿಂದಾಗಿ, ಹಲವಾರು ರೋಗಗಳು ಹರಡಿ ಜನರ ಜೀವನವನ್ನು ಹಾಳು ಮಾಡುತ್ತವೆ ಮತ್ತು ಎಲುಬು ಸಂಬಂಧಿ ರೋಗಗಳು ಬದುಕನ್ನು ದುಸ್ತರ ಮಾಡುತ್ತವೆ. ನಾವು ಈ ರೋಗಗಳನ್ನು ತಡೆಯಲು ಸಮರ್ಥರಾದರೆ, ನಾವು ಹಲವಾರು ಜೀವಗಳನ್ನು ಉಳಿಸಲು ಸಮರ್ಥರಾಗುತ್ತೇವೆ. ಇದಕ್ಕೆ ಜಲ ಪರೀಕ್ಷೆ ಕೂಡಾ ಬಹಳ ಮುಖ್ಯ. ಆದರೆ ನಾವು ಈ ಮಳೆ ನೀರನ್ನು ಬೃಹತ್ ಪ್ರಮಾಣದಲ್ಲಿ ಹಿಡಿದಿಟ್ಟುಕೊಂಡರೆ, ಇಂತಹ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಸ್ವಾತಂತ್ರ್ಯಾನಂತರದಲ್ಲಿ ಇದೇ ಮೊದಲ ಬಾರಿಗೆ ಜಲ ಪರೀಕ್ಷೆಯ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಕಾರ್ಯಾಚರಿಸುತ್ತಿದೆ. ನಮ್ಮ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ವಾಸಿಸುತ್ತಿರುವ ಸಹೋದರಿಯರು ಮತ್ತು ಸಹೋದರರನ್ನು ಈ ಜಲ ಪರೀಕ್ಷೆಯಲ್ಲಿ ಒಳಗೊಳಿಸಿಕೊಳ್ಳಲಾಗುತ್ತಿರುವುದು ನನಗೆ ಸಂತೋಷದ ಸಂಗತಿ. ಕೊರೊನಾ ಅವಧಿಯಲ್ಲಿ 4.5 ಲಕ್ಷಕ್ಕೂ ಅಧಿಕ ಮಹಿಳೆಯರನ್ನು ಜಲ ಪರೀಕ್ಷೆಗಾಗಿ ತರಬೇತಿ ಮಾಡಲಾಗಿದೆ. ಪ್ರತೀ ಹಳ್ಳಿಯಲ್ಲೂ ಕನಿಷ್ಟ ಐದು ಮಂದಿ ಮಹಿಳೆಯರಿಗೆ ನೀರು ಪರೀಕ್ಷೆಯ ತರಬೇತಿ ನೀಡಲಾಗುತ್ತಿದೆ. ಜಲ ಆಡಳಿತದಲ್ಲಿ ನಮ್ಮ ಸಹೋದರಿಯರು ಮತ್ತು ಪುತ್ರಿಯರ ಪಾತ್ರ ಹೆಚ್ಚಿದಂತೆ ಉತ್ತಮ ಫಲಿತಾಂಶಗಳು ಖಚಿತವಾಗಿ ಲಭ್ಯವಾಗುತ್ತವೆ.

ನನಗೆ ವಿಶ್ವಾಸವಿದೆ ನಾವು ಸಾರ್ವಜನಿಕ ಸಹಭಾಗಿತ್ವದಲ್ಲಿ ದೇಶದ ನೀರನ್ನು ಉಳಿಸಿಕೊಳ್ಳುತ್ತೇವೆ, ಸಂರಕ್ಷಿಸುತ್ತೇವೆ ಮತ್ತು ಅವರ ಬಲದಲ್ಲಿ ನಾವು ಮತ್ತೆ ದೇಶವನ್ನು ಉಜ್ವಲವಾಗಿ ಕಟ್ಟುತ್ತೇವೆ. ನಾನು ದೇಶದ ಎಲ್ಲಾ ಯುವ ಜನತೆಯಲ್ಲಿ, ತಾಯಂದಿರು ಮತ್ತು ಸಹೋದರಿಯರಲ್ಲಿ, ಮಕ್ಕಳಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ , ಸಾಮಾಜಿಕ ಸಂಸ್ಥೆಗಳಲ್ಲಿ , ಸರಕಾರಿ ಇಲಾಖೆಗಳಲ್ಲಿ , ಎಲ್ಲಾ ರಾಜ್ಯ ಸರಕಾರಗಳಲ್ಲಿ ಮನವಿ ಮಾಡುತ್ತೇನೆ ಜಲ ಶಕ್ತಿ ಅಭಿಯಾನವನ್ನು ಯಶಸ್ವಿಗೊಳಿಸಿ ಎಂಬುದಾಗಿ. ನಾವು ಮುಂದಿನ ನೂರು ದಿನಗಳಲ್ಲಿ ನಮ್ಮಲ್ಲಿಗೆ ಅತಿಥಿಗಳು ಬರುವಾಗ ಮಾಡುವಂತೆ ಅಥವಾ ಹಳ್ಳಿಗೆ ಮದುವೆ ದಿಬ್ಬಣ ಬರುವಾಗ ಜಲ ಸಂಗ್ರಹಕ್ಕಾಗಿ ಮಾಡುವಂತಹ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಮಳೆಗಾಲ ಬರುವುದಕ್ಕೆ ಮೊದಲು ಇಂತಹದೇ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅಲ್ಲಿ ಉತ್ಸಾಹ ಇರಬೇಕು. ನೀವು ಒಂದೇ ಒಂದು ಹನಿಯೂ ಪೋಲಾಗದಂತೆ ನೋಡಿಕೊಳ್ಳಬೇಕು. ಎರಡನೆಯದಾಗಿ ಅಲ್ಲಿ ನೀರು ಸಾಕಷ್ಟು ಇದ್ದಾಗ , ನಾವು ಅದರ ದುರ್ಬಳಕೆ ಮಾಡುವ ಅಭ್ಯಾಸ ಹೊಂದಿರುತ್ತೇವೆ. ಜಲ ಸಂರಕ್ಷಣೆ, ಸಂಗ್ರಹವು ಅದರ ಬಳಕೆಯಷ್ಟೇ ಮಹತ್ವದ್ದು. ನಾವಿದನ್ನು ಎಂದೂ ಮರೆಯಬಾರದು.

ವಿಶ್ವ ಜಲ ದಿನಾಚರಣೆ ಸಂದರ್ಭದ ಈ ಜಾಗೃತಿ ಕಾರ್ಯಕ್ರಮಕ್ಕಾಗಿ ನಾನು ಮತ್ತೊಮ್ಮೆ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ, ಅದರಲ್ಲೂ ಇದನ್ನೊಂದು ಆಂದೋಲನ ಮಾಡಿಕೊಂಡಿರುವ ಸರಪಂಚರು ಮತ್ತು ಯುವ ಜನತೆಗೆ ವಿಶೇಷ ಅಭಿನಂದನೆಗಳು. ಈ ಆಂದೋಲನದಲ್ಲಿ ಕೈಜೋಡಿಸಿದ ಹಲವಾರು ಜನರು ದೇಶದ ಮೂಲೆ ಮೂಲೆಗಳಲ್ಲಿದ್ದಾರೆ ಮತ್ತು ಐದು ಮಂದಿಯ ಜೊತೆಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿದೆ. ಜಲ ಸಂರಕ್ಷಣೆಯ ಪ್ರಯತ್ನಗಳನ್ನು ನಾವು ಮಾಡೋಣ, ನಮ್ಮ ಭೂಗ್ರಹ, ಬದುಕು ಮತ್ತು ಆರ್ಥಿಕತೆ ಪುನಶ್ಚೇತನಗೊಳ್ಳುವ ಮೂಲಕ ನಮಗೆ ಯಶಸ್ಸು ದೊರೆಯಲಿದೆ ಮತ್ತು ನಾವು ಶಕ್ತಿಶಾಲೀ ರಾಷ್ಟ್ರವಾಗಿ ಮುನ್ನಡೆಯೋಣ. ಈ ನಿರೀಕ್ಷೆಗಳೊಂದಿಗೆ, ನಿಮ್ಮೆಲ್ಲರಿಗೂ ಬಹಳ ಬಹಳ ಧನ್ಯವಾದಗಳು.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi