ನಮಸ್ಕಾರ !
ಸಮಿತಿಯ ಎಲ್ಲಾ ಗೌರವಾನ್ವಿತ ಸದಸ್ಯರೇ ಮತ್ತು ಸಹೋದ್ಯೋಗಿಗಳೇ! ಗುರು ತೇಜ್ ಬಹಾದೂರ್ ಜೀ ಅವರ 400ನೇ ಜನ್ಮ ವರ್ಷಾಚರಣೆಯಾದ ಪ್ರಕಾಶ ಪುರಬ್ ಸಂದರ್ಭವು ರಾಷ್ಟ್ರೀಯ ಕರ್ತವ್ಯ ಮಾತ್ರವಲ್ಲ ಅದೊಂದು ಧಾರ್ಮಿಕ, ಆಧ್ಯಾತ್ಮಿಕ ಅವಕಾಶದ ಸಂದರ್ಭ. ಈ ನಿಟ್ಟಿನಲ್ಲಿ ಏನಾದರೂ ಕೊಡುಗೆ ನೀಡುವ ಅವಕಾಶವನ್ನು ಗುರು ಅವರ ಕೃಪೆ ನಮಗೊದಗಿಸಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು, ಪ್ರಯತ್ನಗಳನ್ನು ಮಾಡುವಾಗ ದೇಶದ ಎಲ್ಲಾ ನಾಗರಿಕರನ್ನು ಒಗ್ಗೂಡಿಸಿ ಕರೆದೊಯ್ಯುತ್ತೇವೆ ಎಂಬ ಸಂಗತಿ ನನಗೆ ಸಂತೋಷದಾಯಕವಾಗಿದೆ.
ರಾಷ್ಟ್ರೀಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ, ಗೃಹ ಸಚಿವರು ಬಂದಿರುವ ಸಲಹೆಗಳನ್ನು ಮತ್ತು ಸಮಿತಿಯ ಅಭಿಪ್ರಾಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಇಡೀ ವರ್ಷದ ಕಾರ್ಯಕ್ರಮದ ಸ್ಥೂಲವಾದ ರೂಪುರೇಷೆಯನ್ನು ಇದು ಒಳಗೊಂಡಿದೆ ಮತ್ತು ಇದರಲ್ಲಿ ಸುಧಾರಣೆಗೆ ಹಾಗು ಹೊಸ ಚಿಂತನೆಗಳಿಗೆ ಅವಕಾಶಗಳಿವೆ. ಸದಸ್ಯರಿಂದ ಮೌಲ್ಯಯುತವಾದ ಮತ್ತು ಮೂಲಭೂತವಾದ ಸಲಹೆಗಳು ಕೂಡಾ ಬಂದಿವೆ. ಇದು ನಿಜವಾಗಿಯೂ ಒಂದು ಅಪೂರ್ವ ಅವಕಾಶ ಮತ್ತು ನಾವು ನಮ್ಮ ದೇಶದ ಮೂಲ ಚಿಂತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಜನತೆಯತ್ತ ಕೊಂಡೊಯ್ಯಲು ಇದನ್ನು ಬಳಸಿಕೊಳ್ಳಬೇಕು. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಲಭಿಸದ ಬಹಳ ದೊಡ್ಡ ಸಂಖ್ಯೆಯ ಗೌರವಾನ್ವಿತ ಸದಸ್ಯರು ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ಲಿಖಿತವಾಗಿ ಕಳುಹಿಸಿದರೆ ಈ ಕಾರ್ಯಕ್ರಮವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಗುತ್ತದೆ. ಮತ್ತು ಉತ್ತಮ ಕ್ರಿಯಾ ಯೋಜನೆಗೂ ಸಹಾಯವಾಗುತ್ತದೆ.
ಸ್ನೇಹಿತರೇ,
ಕಳೆದ ನಾಲ್ಕು ಶತಮಾನಗಳಲ್ಲಿ ಗುರು ತೇಜ್ ಬಹಾದೂರ್ ಜೀ ಅವರ ಪ್ರಭಾವಕ್ಕೆ ಒಳಗಾಗದೇ ಇರುವಂತಹ ಅವಧಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಒಂಭತ್ತನೇ ಗುರುವಾದ ಅವರಿಂದ, ನಾವೆಲ್ಲರೂ ಪ್ರೇರಣೆ ಪಡೆದಿದ್ದೇವೆ. ಅವರ ಬದುಕಿನ ಮಜಲುಗಳ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಆದರೆ ದೇಶದ ಹೊಸ ತಲೆಮಾರಿನವರಿಗೂ ಅವರ ಬಗ್ಗೆ ತಿಳುವಳಿಕೆ ಇರುವುದು ಮತ್ತು ಅವರನ್ನು ಅರ್ಥ ಮಾಡಿಕೊಂಡಿರುವುದು ಬಹಳ ಮುಖ್ಯ.
ಸ್ನೇಹಿತರೇ,
ನಮ್ಮ ಸಿಖ್ ಗುರು ಪರಂಪರೆ ಗುರು ನಾನಕ್ ದೇವ್ ಜೀ ಅವರಿಂದ ಆರಂಭಗೊಂಡು ಗುರು ತೇಜ್ ಬಹಾದೂರ್ ಜೀ ಅವರವರೆಗೆ ಮತ್ತು ಅಂತಿಮವಾಗಿ ಗುರು ಗೋವಿಂದ ಸಿಂಗ್ ಜೀ ಅವರವರೆಗೆ ಜೀವನದ ಒಂದು ಸಂಪೂರ್ಣ ತತ್ವಜ್ಞಾನವನ್ನು ಒಳಗೊಂಡಿದೆ. ಗುರು ನಾನಕ್ ದೇವ್ ಜೀ ಅವರ 550 ನೇ ಪ್ರಕಾಶ್ ಪುರಬ್ ಆಚರಣೆಯ ಅವಕಾಶ ನಮಗೆ ಸಿಕ್ಕಿರುವುದು, ಗುರು ತೇಜ್ ಬಹಾದೂರ್ ಜೀ ಅವರ 400 ನೇ ಜನ್ಮ ವರ್ಷಾಚರಣೆಯ ಅವಕಾಶ ಮತ್ತು ಗುರು ಗೋವಿಂದ ಸಿಂಗ್ ಜೀ ಅವರ 350 ನೇ ಪ್ರಕಾಶ ಪುರಬ್ ಆಚರಣೆಯ ಅವಕಾಶ ಸಿಕ್ಕಿರುವುದು ನಮ್ಮ ಸರಕಾರಕ್ಕೊಂದು ಅಪೂರ್ವ ಸಂದರ್ಭ. ನಮ್ಮ ಗುರುಗಳ ಜೀವನವನ್ನು ಅನುಸರಿಸುವ ಮೂಲಕವೂ ಇಡೀ ಜಗತ್ತು ಜೀವನದ ಮಹತ್ವವನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಲ್ಲುದು. ಅವರ ಬದುಕಿನಲ್ಲಿ ಗರಿಷ್ಠ ಪ್ರಮಾಣದ ತ್ಯಾಗವಿದೆ ಮತ್ತು ಸಹಿಷ್ಣುತೆ ಇದೆ. ಅವರ ಬದುಕಿನಲ್ಲಿ ಜ್ಞಾನದ ಬೆಳಕಿದೆ, ಮತ್ತು ಅಲ್ಲಿ ಆಧ್ಯಾತ್ಮಿಕ ಸೆಳೆತವೂ ಇದೆ.
ಸ್ನೇಹಿತರೇ,
ಗುರು ತೇಜ್ ಬಹಾದೂರ್ ಜೀ ಹೇಳಿದ್ದರು: "सुखु दुखु दोनो सम करि जानै अउरु मानु अपमाना" ಅಂದರೆ, ನಾವು ನಮ್ಮ ಬದುಕಿನಲ್ಲಿ ಸಂತೋಷ ಮತ್ತು ದುಃಖಗಳನ್ನು ಸಮಾನವಾಗಿ ಸ್ವೀಕರಿಕೊಂಡು ಬದುಕಬೇಕು, ಗೌರವ ಮತ್ತು ನಮ್ರತೆಯಿಂದ ಬಾಳಬೇಕು. ಅವರು ಬದುಕಿನ ಉದ್ದೇಶಗಳನ್ನು ತಿಳಿಸಿಕೊಟ್ಟಿದ್ದಾರೆ. ಅವರು ನಮಗೆ ರಾಷ್ಟ್ರಸೇವೆಯ ಪಥವನ್ನು ತೋರಿಸಿದ್ದಾರೆ ಮತ್ತು ಜೀವನ ಧ್ಯೇಯವನ್ನು ತಿಳಿಸಿಕೊಟ್ಟಿದ್ದಾರೆ. ಅವರು ನಮಗೆ ಸಮಾನತೆಯ, ಸೌಹಾರ್ದದ, ಸನ್ಯಾಸದ ಮಂತ್ರವನ್ನು ನೀಡಿದ್ದಾರೆ. ನಮ್ಮೊಳಗೆ ಈ ಮಂತ್ರಗಳನ್ನು ಅಳವಡಿಸಿಕೊಂಡು ಬದುಕುವುದು ಮತ್ತು ಅವುಗಳನ್ನು ಜನರಲ್ಲಿ ಪ್ರಚುರಪಡಿಸುವುದು ನಮ್ಮೆಲ್ಲರ ಕರ್ತವ್ಯ.
ಸ್ನೇಹಿತರೇ,
ನಾವಿಲ್ಲಿ ಚರ್ಚಿಸಿದಂತೆ, 400ನೇ ಪ್ರಕಾಶ್ ಪುರಬ್ ದೇಶದಲ್ಲಿ ಇಡೀ ವರ್ಷ ನಡೆಯಬೇಕು ಮತ್ತು ನಾವು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಜನರನ್ನು ತಲುಪುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು. ಎಲ್ಲಾ ಯಾತ್ರಾ ಕೇಂದ್ರಗಳು ಮತ್ತು ಸಿಖ್ ಸಂಪ್ರದಾಯಕ್ಕೆ ಸಂಬಂಧಿಸಿದ ನಂಬಿಕೆಯ ಸ್ಥಾನಗಳು ಈ ಕೆಲಸಗಳಿಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತವೆ. ಗುರು ತೇಜ್ ಬಹಾದೂರ್ ಜೀ ಅವರ ’ಶಾಬಾದ್ ಗಳು, ಅವರ ಸ್ತೋತ್ರಪಾಠಗಳು, ಸಾಹಿತ್ಯ ಮತ್ತು ಅವರಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಪ್ರೇರಣೆ ನೀಡುತ್ತವೆ. ಡಿಜಿಟಲ್ ತಂತ್ರಜ್ಞಾನ ಬಳಸಿ ಈ ಸಂದೇಶಗಳನ್ನು ಜಗತ್ತಿನಾದ್ಯಂತ ಹೊಸ ತಲೆಮಾರಿಗೆ ಸುಲಭದಲ್ಲಿ ತಲುಪುವಂತೆ ಮಾಡಬಹುದು. ಇಂದು ಬಹಳಷ್ಟು ಸದಸ್ಯರು ಡಿಜಿಟಲ್ ತಂತ್ರಜ್ಞಾನವನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಬೇಕು ಎಂದು ಹೇಳಿರುವುದು ನನಗೆ ಸಂತಸ ತಂದಿದೆ. ಇದು ಬದಲಾಗುತ್ತಿರುವ ಭಾರತವನ್ನು ತೋರಿಸುತ್ತದೆ. ನಾವು ಈ ಎಲ್ಲಾ ಪ್ರಯತ್ನಗಳ ಮೂಲಕ ಸಾಧ್ಯವಾದಷ್ಟು ಹೆಚ್ಚು ಜನರನ್ನು ಸಂಪರ್ಕಿಸಬೇಕು.
ಸ್ನೇಹಿತರೇ,
ನಾವು ಈ ಕಾರ್ಯಕ್ರಮವನ್ನು ಗುರು ತೇಜ್ ಬಹಾದ್ದೂರ್ ಜೀ ಅವರ ಜೀವನ ಮತ್ತು ಬೋಧನೆಗಳನ್ನು ಮತ್ತು ಇಡೀ ಗುರು ಪರಂಪರೆಯನ್ನು ವಿಶ್ವದತ್ತ ಕೊಂಡೊಯ್ಯಲು ಬಳಸಬೇಕು. ಸಿಖ್ ಸಮುದಾಯ ಮತ್ತು ನಮ್ಮ ಗುರುಗಳ ಮಿಲಿಯಾಂತರ ಅನುಯಾಯಿಗಳು ಹೇಗೆ ಅವರನ್ನು ಅನುಸರಿಸಿ ಸಾಗುತ್ತಿದ್ದಾರೆ, ಸಿಖ್ಹರು ಹೇಗೆ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಸೇವೆಗಳನ್ನು ನಡೆಸುತ್ತಿದ್ದಾರೆ ಮತ್ತು ನಮ್ಮ ಗುರುದ್ವಾರಗಳನ್ನು ಮಾನವ ಸೇವೆಯ ಪ್ರಜ್ಞಾ ಕೇಂದ್ರಗಳನ್ನಾಗಿ ರೂಪಿಸಿದ್ದಾರೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಕೊಂಡೊಯ್ದರೆ ನಮಗೆ ಮಾನವತೆಯನ್ನು ಪ್ರೇರೇಪಿಸಲು ಸಾಧ್ಯವಾಗುತ್ತದೆ. ಇದನ್ನು ಸಂಶೋಧನೆ ಮಾಡಬೇಕು ಮತ್ತು ದಾಖಲಿಸಿಡಬೇಕು ಎಂಬುದಾಗಿ ನಾನು ಆಶಿಸುತ್ತೇನೆ. ಈ ಪ್ರಯತ್ನಗಳು ಭವಿಷ್ಯದ ತಲೆಮಾರಿಗೆ ಮಾರ್ಗದರ್ಶನ ಮಾಡುತ್ತವೆ. ಗುರು ತೇಜ್ ಬಹಾದ್ದೂರ್ ಜೀ ಸಹಿತ ಎಲ್ಲಾ ಗುರುಗಳ ಪಾದ ಕಮಲಗಳಿಗೆ ಇದು ನಮ್ಮ ಗೌರವ. ಮತ್ತು ಈ ರೀತಿಯಲ್ಲಿ ನಮ್ಮ ನೈಜ ಸೇವೆ. ಈ ಪ್ರಮುಖ ಕಾಲಘಟ್ಟದಲ್ಲಿ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅಂದರೆ 75 ನೇ ವರ್ಷವನ್ನು ಆಚರಿಸುತ್ತಿದೆ. ಗುರುಗಳ ಆಶೀರ್ವಾದದಿಂದ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗುತ್ತವೆ ಎಂಬುದಾಗಿ ನಾನು ಖಚಿತವಾಗಿ ಭಾವಿಸಿದ್ದೇನೆ. ನಿಮ್ಮೆಲ್ಲಾ ಸಲಹೆಗಳಿಗಾಗಿ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲಿ ನಿಮ್ಮ ಸಕ್ರಿಯ ಸಹಕಾರ ಈ ಶ್ರೇಷ್ಟ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವಲ್ಲಿ ಬಹಳ ದೊಡ್ಡ ಕೊಡುಗೆ ನೀಡಲಿದೆ. ಈ ಪವಿತ್ರ ಹಬ್ಬದಲ್ಲಿ ಗುರುಗಳಿಗೆ ಸೇವೆ ಮಾಡುವ ಅವಕಾಶ ಲಭಿಸಿರುವುದು ನಮ್ಮ ಹೆಮ್ಮೆ.
ಈ ಶುಭ ಹಾರೈಕೆಗಳೊಂದಿಗೆ, ನಿಮಗೆಲ್ಲರಿಗೂ ಬಹಳ ಬಹಳ ಧನ್ಯವಾದಗಳು.