ನನ್ನ ಪ್ರೀತಿಯ ದೇಶವಾಸಿಗಳೇ,
ಕಾಲ ಚಕ್ರವು ನಮಗೆ ಗತಕಾಲದ ತಪ್ಪುಗಳನ್ನು ಸರಿಪಡಿಸಲು ಮತ್ತು ಹೊಸ ಭವಿಷ್ಯವನ್ನು ರೂಪಿಸಲು ಮಾನವತೆಯ ಮುಂದೆ ಇಂತಹ ಕೆಲವೇ ಅವಕಾಶಗಳನ್ನು ನೀಡುತ್ತದೆ. ಇಂದು ಅದೃಷ್ಟವಶಾತ್ ಅಂತಹ ಒಂದು ಕ್ಷಣವು ನಮ್ಮ ಮುಂದಿದೆ. ದಶಕಗಳ ಹಿಂದೆ, ಜೀವವೈವಿಧ್ಯತೆಯ ಹಳೆಯ ಕೊಂಡಿಯು ಕಡಿದುಹೋಗಿತ್ತು, ಅಳಿದುಹೋಗಿತ್ತು, ಇಂದು ನಾವು ಅದನ್ನು ಮರುಸಂಪರ್ಕಿಸುವ ಅವಕಾಶವನ್ನು ಪಡೆದಿದ್ದೇವೆ. ಇಂದು, ಚೀತಾಗಳು ಭಾರತೀಯ ಮಣ್ಣಿಗೆ ಮರಳಿವೆ. ಮತ್ತು ಈ ಚೀತಾಗಳ ಜೊತೆಗೆ, ಭಾರತದ ಪ್ರಕೃತಿ-ಪ್ರೀತಿಯ ಪ್ರಜ್ಞೆಯೂ ಸಹ ಪೂರ್ಣ ಬಲದಿಂದ ಜಾಗೃತವಾಗಿದೆ ಎಂದು ನಾನು ಹೇಳುತ್ತೇನೆ. ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.
ವಿಶೇಷವಾಗಿ, ನಮ್ಮ ಸ್ನೇಹಪರ ದೇಶ ನಮೀಬಿಯಾ ಮತ್ತು ಅಲ್ಲಿನ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ, ಅದರ ಸಹಕಾರದೊಂದಿಗೆ ಚೀತಾಗಳು ದಶಕಗಳ ನಂತರ ಭಾರತದ ನೆಲಕ್ಕೆ ಮರಳಿವೆ.
ಈ ಚೀತಾಗಳು ಪ್ರಕೃತಿಯ ಕಡೆಗೆ ನಮ್ಮ ಜವಾಬ್ದಾರಿಗಳ ಬಗ್ಗೆ ನಮಗೆ ಅರಿವು ಮೂಡಿಸುವುದು ಮಾತ್ರವಲ್ಲದೆ, ನಮ್ಮ ಮಾನವೀಯ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸಹ ತಿಳಿಸುತ್ತವೆ ಎಂಬ ನನಗೆ ವಿಶ್ವಾಸವಿದೆ.
ಸ್ನೇಹಿತರೆ,
ನಾವು ನಮ್ಮ ಬೇರುಗಳಿಂದ ದೂರವಾಗಿದ್ದಾಗ ನಾವು ಬಹಳಷ್ಟು ಕಳೆದುಕೊಳ್ಳುತ್ತೇವೆ. ಅದಕ್ಕಾಗಿಯೇ ಈ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ನಾವು 'ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ' ಮತ್ತು 'ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ' ಮುಂತಾದ ಪಂಚ ಪ್ರಾಣಗಳ ಮಹತ್ವವನ್ನು ಪುನರುಚ್ಚರಿಸಿದ್ದೇವೆ. ಕಳೆದ ಶತಮಾನಗಳಲ್ಲಿ, ಪ್ರಕೃತಿಯ ಶೋಷಣೆಯನ್ನು ತಮ್ಮ ಅಧಿಕಾರ ಮತ್ತು ಆಧುನಿಕತೆಯ ಸಂಕೇತವೆಂದು ಪರಿಗಣಿಸಲಾದ ಸಮಯವನ್ನು ಸಹ ನಾವು ನೋಡಿದ್ದೇವೆ. 1947 ರಲ್ಲಿ, ದೇಶದಲ್ಲಿ ಕೊನೆಯ ಮೂರು ಚೀತಾಗಳು ಮಾತ್ರ ಉಳಿದಿದ್ದಾಗ, ಅವುಗಳನ್ನು ಸಹ ಕ್ರೂರವಾಗಿ ಮತ್ತು ಬೇಜವಾಬ್ದಾರಿಯಿಂದ ಮುಂದಿನ ವರ್ಷಗಳಲ್ಲಿ ಕಾಡುಗಳಲ್ಲಿ ಬೇಟೆಯಾಡಲಾಯಿತು. 1952ರಲ್ಲಿ ಚೀತಾಗಳು ದೇಶದಿಂದ ಅಳಿದುಹೋಗಿವೆ ಎಂದು ನಾವು ಘೋಷಿಸಿದ್ದು ಮಾತ್ರ ದುರದೃಷ್ಟಕರ, ಆದರೆ ಅವುಗಳಿಗೆ ಪುನರ್ವಸತಿ ಕಲ್ಪಿಸಲು ದಶಕಗಳಿಂದ ಯಾವುದೇ ಅರ್ಥಪೂರ್ಣ ಪ್ರಯತ್ನ ನಡೆದೇ ಇರಲಿಲ್ಲ.
ಇಂದು, ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ಈಗ ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳಿಗೆ ಪುನರ್ವಸತಿ ಕಲ್ಪಿಸಲು ಒಂದಾಗಿದೆ. ಅಮೃತವು ಸತ್ತವರಿಗೆ ಪುನರ್ಜನ್ಮ ನೀಡುವ ಶಕ್ತಿಯನ್ನು ಹೊಂದಿದೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ಕರ್ತವ್ಯ ಮತ್ತು ವಿಶ್ವಾಸದ ಈ ಅಮೃತವು ನಮ್ಮ ಪರಂಪರೆ, ನಮ್ಮ ಪರಂಪರೆ ಮತ್ತು ಈಗ ಭಾರತದ ಮಣ್ಣಿನಲ್ಲಿ ಚೀತಾಗಳಿಗೆ ಪುನಶ್ಚೇತನ ನೀಡುತ್ತಿದೆ ಎಂಬುದು ನನಗೆ ಸಂತೋಷವಾಗಿದೆ.
ಇದರ ಹಿಂದೆ ಹಲವಾರು ವರ್ಷಗಳ ಕಠಿಣ ಪರಿಶ್ರಮವಿದೆ. ರಾಜಕೀಯ ದೃಷ್ಟಿಕೋನದಿಂದ ಯಾರೂ ಪ್ರಾಮುಖ್ಯತೆ ನೀಡದ ಕಾರ್ಯದ ಹಿಂದೆ ನಾವು ಸಾಕಷ್ಟು ಶಕ್ತಿಯನ್ನು ಹಾಕುತ್ತೇವೆ. ಇದಕ್ಕಾಗಿ, ವಿವರವಾದ ಚೀತಾ ಕ್ರಿಯಾ ಯೋಜನೆಯನ್ನು ತಯಾರಿಸಲಾಯಿತು. ನಮ್ಮ ವಿಜ್ಞಾನಿಗಳು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ತಜ್ಞರೊಂದಿಗೆ ಆಪ್ತವಾಗಿ ಕೆಲಸ ಮಾಡುತ್ತಾ ದೀರ್ಘವಾದ ಸಂಶೋಧನೆಯನ್ನು ಮಾಡಿದರು. ನಮ್ಮ ತಂಡಗಳು ಅಲ್ಲಿಗೆ ಹೋದವು, ಅಲ್ಲಿನ ತಜ್ಞರು ಸಹ ಭಾರತಕ್ಕೆ ಬಂದರು. ದೇಶಾದ್ಯಂತ ಚೀತಾಗಳಿಗೆ ಅತ್ಯಂತ ಸೂಕ್ತವಾದ ಪ್ರದೇಶಕ್ಕಾಗಿ ವೈಜ್ಞಾನಿಕ ಸಮೀಕ್ಷೆಗಳನ್ನು ನಡೆಸಲಾಯಿತು, ಮತ್ತು ನಂತರ ಈ ಶುಭ ಆರಂಭಕ್ಕಾಗಿ ಕುನೊ ರಾಷ್ಟ್ರೀಯ ಉದ್ಯಾನವನವನ್ನು ಆಯ್ಕೆ ಮಾಡಲಾಯಿತು. ಇಂದು, ನಮ್ಮ ಆ ಕಠಿಣ ಪರಿಶ್ರಮದ ಫಲಶ್ರುತಿ ನಮ್ಮ ಮುಂದೆ ಇದೆ.
ಸ್ನೇಹಿತರೆ,
ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸಿದಾಗ, ನಮ್ಮ ಭವಿಷ್ಯವೂ ಸುರಕ್ಷಿತವಾಗಿರುತ್ತದೆ ಎಂಬುದು ನಿಜ. ಅಭಿವೃದ್ಧಿ ಮತ್ತು ಸಮೃದ್ಧಿಯ ಹಾದಿಗಳು ಸಹ ತೆರೆದುಕೊಳ್ಳುತ್ತವೆ. ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳು ಮತ್ತೆ ಓಡಿದಾಗ, ಇಲ್ಲಿನ ಹುಲ್ಲುಗಾವಲು ಪರಿಸರ ವ್ಯವಸ್ಥೆಯನ್ನು ಮತ್ತೆ ಪುನಃಸ್ಥಾಪಿಸಲಾಗುತ್ತದೆ, ಜೀವವೈವಿಧ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ. ಮುಂಬರುವ ದಿನಗಳಲ್ಲಿ, ಪರಿಸರ ಪ್ರವಾಸೋದ್ಯಮವೂ ಇಲ್ಲಿ ಹೆಚ್ಚಾಗುತ್ತದೆ, ಅಭಿವೃದ್ಧಿಯ ಹೊಸ ಸಾಧ್ಯತೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಆದರೆ ಸ್ನೇಹಿತರೇ, ನಾನು ನಿಮಗೆ ಒಂದು ಮನವಿ ಮಾಡಲು ಬಯಸುತ್ತೇನೆ, ಇಂದಿನ ಎಲ್ಲಾ ದೇಶವಾಸಿಗಳು. ಕೆಲವು ತಿಂಗಳುಗಳ ತಾಳ್ಮೆಯನ್ನು ತೋರಿಸಬೇಕು, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಸಿರುವ ಚಿರತೆಗಳನ್ನು ನೋಡಲು ಕಾಯಬೇಕು. ಇಂದು ಈ ಚೀತಾಗಳು ಅತಿಥಿಗಳಾಗಿ ಬಂದಿವೆ, ಈ ಪ್ರದೇಶದ ಬಗ್ಗೆ ಅವುಗಳಿಗೆ ತಿಳಿದಿಲ್ಲ. ಕುನೋ ರಾಷ್ಟ್ರೀಯ ಉದ್ಯಾನವನ್ನು ತಮ್ಮ ವಾಸಸ್ಥಾನವಾಗಿ ಮಾಡಿಕೊಳ್ಳಲು ನಾವು ಈ ಚೀತಾಗಳಿಗೆ ಕೆಲವು ತಿಂಗಳುಗಳನ್ನು ನೀಡಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸಿ, ಭಾರತವು ಈ ಚೀತಾಗಳನ್ನು ನೆಲೆಗೊಳಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಪ್ರಯತ್ನಗಳು ವಿಫಲವಾಗಲು ನಾವು ಬಿಡಬಾರದು.
ಸ್ನೇಹಿತರೆ,
ಇಂದು, ಜಗತ್ತು ಪ್ರಕೃತಿ ಮತ್ತು ಪರಿಸರವನ್ನು ನೋಡಿದಾಗ, ಅದು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ. ಆದರೆ ಪ್ರಕೃತಿ ಮತ್ತು ಪರಿಸರ, ಪ್ರಾಣಿಗಳು ಮತ್ತು ಪಕ್ಷಿಗಳಿಗೆ, ಭಾರತಕ್ಕೆ, ಇವು ಕೇವಲ ಸುಸ್ಥಿರತೆ ಮತ್ತು ಭದ್ರತೆಯ ವಿಷಯವಷ್ಟೇ ಅಲ್ಲ. ನಮಗೆ, ಅವು ನಮ್ಮ ಸಂವೇದನೆ ಮತ್ತು ಆಧ್ಯಾತ್ಮಿಕತೆಗೂ ಆಧಾರವಾಗಿವೆ. 'ಸರ್ವಂ ಖಲ್ವಿದಂ ಬ್ರಹ್ಮ' ಮಂತ್ರದ ಮೇಲೆ ನಿಂತಿರುವ ಸಾಂಸ್ಕೃತಿಕ ಅಸ್ತಿತ್ವವನ್ನು ಹೊಂದಿರುವ ಜನರು ನಾವು. ಅಂದರೆ, ಪ್ರಪಂಚದಲ್ಲಿ ಪ್ರಾಣಿ-ಪಕ್ಷಿ, ಮರ-ಸಸ್ಯ, ಬೇರು-ಚೇತನ ಏನೇ ಇರಲಿ , ಅದು ದೇವರ ರೂಪ, ನಮ್ಮ ಸ್ವಂತ ವಿಸ್ತರಣೆ. ನಮ್ಮಲ್ಲಿ ಹೀಗೆ ಹೇಳುವ ಜನರೂ ಇದ್ದಾರೆ- 'ಪರಂ ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ ಅಂದರೆ, ಒಬ್ಬರ ಸ್ವಂತ ಅನುಕೂಲತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುವುದು ನಿಜವಾದ ಜೀವನವಲ್ಲ. ಯಾರು ಲೋಕೋಪಕಾರಕ್ಕಾಗಿ ಜೀವಿಸುತ್ತಾರೆಯೋ ಅದುವೇ ನಿಜವಾದ ಜೀವನ. ಅದಕ್ಕಾಗಿಯೇ, ನಾವು ಊಟ ಮಾಡುವಾಗ, ಅದಕ್ಕೂ ಮೊದಲು ನಾವು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ಹೊರಗೆ ತೆಗೆದಿಡುತ್ತೇವೆ. ನಮ್ಮ ಸುತ್ತಲೂ ವಾಸಿಸುವ ಸಣ್ಣ ಜೀವಿಯ ಬಗ್ಗೆಯೂ ಚಿಂತಿಸಲು ನಮಗೆ ಕಲಿಸಲಾಗುತ್ತದೆ. ನಮ್ಮ ಮೌಲ್ಯಗಳು ಎಷ್ಟಿವೆಯೆಂದರೆ, ಒಂದು ಜೀವಿಯ ಜೀವನವು ಯಾವುದೇ ಕಾರಣವಿಲ್ಲದೆ ಕಳೆದುಹೋದರೆ, ನಮ್ಮಲ್ಲಿ ಅಪರಾಧ ಪ್ರಜ್ಞೆ ಕಾಡುತ್ತದೆ. ಹಾಗಾದರೆ, ನಮ್ಮಿಂದಾಗಿ ಇಡೀ ಜೀವಿಯ ಅಸ್ತಿತ್ವವೇ ಅಳಿಸಿಹೋಗಿದೆ ಎಂದು ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ?
ನೀವು ಕಲ್ಪಿಸಿಕೊಳ್ಳಿ, ಇಲ್ಲಿನ ಅನೇಕ ಮಕ್ಕಳಿಗೆ ತಾವು ಕೇಳಿ ಬೆಳೆದ ಚೀತಾ ಕಳೆದ ಶತಮಾನದಲ್ಲಿ ತಮ್ಮ ದೇಶದಿಂದ ಕಣ್ಮರೆಯಾಗಿದೆ ಎಂದು ಸಹ ತಿಳಿದಿಲ್ಲ. ಇಂದು, ಆಫ್ರಿಕಾದ ಕೆಲವು ದೇಶಗಳಲ್ಲಿ, ಇರಾನ್ ನಲ್ಲಿ ಚೀತಾಗಳು ಕಂಡುಬರುತ್ತವೆ, ಆದರೆ ಭಾರತದ ಹೆಸರನ್ನು ಬಹಳ ಹಿಂದೆಯೇ ಆ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮುಂಬರುವ ವರ್ಷಗಳಲ್ಲಿ ಮಕ್ಕಳು ಈ ವಿಡಂಬನೆಯನ್ನು ಅನುಭವಿಸಬೇಕಾಗಿಲ್ಲ. ನನಗೆ ವಿಶ್ವಾಸವಿದೆ, ಅವರು ತಮ್ಮ ಸ್ವಂತ ದೇಶದಲ್ಲಿಯೇ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಓಡುವುದನ್ನು ನೋಡಲು ಸಾಧ್ಯವಾಗುತ್ತದೆ. ಚೀತಾದ ಮೂಲಕ, ಇಂದು ನಮ್ಮ ಕಾಡು ಮತ್ತು ಜೀವನದ ದೊಡ್ಡ ಶೂನ್ಯವನ್ನು ತುಂಬಲಾಗುತ್ತಿದೆ.
ಸ್ನೇಹಿತರೆ,
ಇಂದು, 21 ನೇಶತಮಾನದ ಭಾರತವು ಆರ್ಥಿಕತೆ ಮತ್ತು ಪರಿಸರಶಾಸ್ತ್ರವು ವಿರೋಧಾಭಾಸದ ಕ್ಷೇತ್ರಗಳಲ್ಲ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ನೀಡುತ್ತಿದೆ. ಪರಿಸರವನ್ನು ರಕ್ಷಿಸುವುದರ ಜೊತೆಗೆ, ದೇಶವು ಸಹ ಪ್ರಗತಿ ಹೊಂದಬಹುದು, ಭಾರತವು ಇದನ್ನು ಜಗತ್ತಿಗೆ ತೋರಿಸಿದೆ. ಇಂದು, ಒಂದು ಕಡೆ, ನಾವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ, ಮತ್ತು ಅದೇ ವೇಳೆ, ದೇಶದ ಅರಣ್ಯ ಪ್ರದೇಶಗಳು ಸಹ ವೇಗವಾಗಿ ವಿಸ್ತರಿಸುತ್ತಿವೆ.
ಸ್ನೇಹಿತರೆ,
2014 ರಲ್ಲಿ ನಮ್ಮ ಸರ್ಕಾರ ರಚನೆಯಾದಾಗಿನಿಂದ, ಸುಮಾರು 250 ಹೊಸ ಸಂರಕ್ಷಿತ ಪ್ರದೇಶಗಳನ್ನು ದೇಶಕ್ಕೆ ಸೇರಿಸಲಾಗಿದೆ. ಇಲ್ಲಿ ಏಷ್ಯಾದ ಸಿಂಹಗಳ ಸಂಖ್ಯೆಯಲ್ಲಿಯೂ ದೊಡ್ಡ ಹೆಚ್ಚಳ ಕಂಡುಬಂದಿದೆ. ಇಂದು, ಗುಜರಾತ್ ದೇಶದ ಏಷ್ಯಾದ ಸಿಂಹಗಳ ಪ್ರಮುಖ ಪ್ರದೇಶವಾಗಿ ಹೊರಹೊಮ್ಮಿದೆ. ದಶಕಗಳ ಕಠಿಣ ಪರಿಶ್ರಮ, ಸಂಶೋಧನೆ ಆಧಾರಿತ ನೀತಿಗಳು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ ಇದರ ಹಿಂದೆ ದೊಡ್ಡ ಪಾತ್ರವನ್ನು ವಹಿಸುತ್ತವೆ. ನನಗೆ ನೆನಪಿದೆ, ನಾವು ಗುಜರಾತ್ ನಲ್ಲಿ ಒಂದು ನಿರ್ಣಯವನ್ನು ತೆಗೆದುಕೊಂಡಿದ್ದೇವೆ - ನಾವು ಕಾಡು ಪ್ರಾಣಿಗಳ ಬಗ್ಗೆ ಗೌರವವನ್ನು ಹೆಚ್ಚಿಸುತ್ತೇವೆ ಮತ್ತು ಸಂಘರ್ಷವನ್ನು ಕಡಿಮೆ ಮಾಡುತ್ತೇವೆ. ಅದರ ಪರಿಣಾಮವಾಗಿ ಇಂದು ಆ ಚಿಂತನೆಯ ಪ್ರಭಾವವು ನಮ್ಮ ಮುಂದಿದೆ. ದೇಶದಲ್ಲಿಯೂ ಸಹ, ನಾವು ಸಮಯಕ್ಕಿಂತ ಮುಂಚಿತವಾಗಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಿದ್ದೇವೆ. ಒಂದು ಕಾಲದಲ್ಲಿ ಅಸ್ಸಾಂನಲ್ಲಿ, ಒಂದು ಕೊಂಬಿನ ಘೇಂಡಾಮೃಗಗಳ ಅಸ್ತಿತ್ವವು ಆತಂಕಕ್ಕೆ ಒಳಗಾಗಲು ಪ್ರಾರಂಭಿಸಿತು, ಆದರೆ ಇಂದು ಅವುಗಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ವರ್ಷಗಳಲ್ಲಿ ಆನೆಗಳ ಸಂಖ್ಯೆಯೂ 30 ಸಾವಿರಕ್ಕೂ ಹೆಚ್ಚಾಗಿದೆ.
ಸಹೋದರ ಸಹೋದರಿಯರೇ,
ದೇಶದಲ್ಲಿ ಪ್ರಕೃತಿ ಮತ್ತು ಪರಿಸರದ ದೃಷ್ಟಿಕೋನದಿಂದ ಮಾಡಲಾದ ಮತ್ತೊಂದು ದೊಡ್ಡ ಕೆಲಸವೆಂದರೆ ಜೌಗು ಭೂಮಿ ವಿಸ್ತರಣೆ! ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನ ಮತ್ತು ಅಗತ್ಯಗಳು ಜೌಗುಭೂಮಿ ಪರಿಸರ ವಿಜ್ಞಾನದ ಮೇಲೆ ಅವಲಂಬಿತವಾಗಿವೆ. ಇಂದು, ದೇಶದಲ್ಲಿ 75 ಗದ್ದೆಗಳನ್ನು ರಾಮ್ಸಾರ್ ತಾಣಗಳೆಂದು ಘೋಷಿಸಲಾಗಿದ್ದು, ಅವುಗಳಲ್ಲಿ ಕಳೆದ 4 ವರ್ಷಗಳಲ್ಲಿ 26 ಸ್ಥಳಗಳನ್ನು ಸೇರಿಸಲಾಗಿದೆ. ದೇಶದ ಈ ಪ್ರಯತ್ನಗಳ ಪರಿಣಾಮವನ್ನು ಮುಂದಿನ ಶತಮಾನಗಳವರೆಗೆ ನೋಡಲಾಗುವುದು ಮತ್ತು ಪ್ರಗತಿಯ ಹೊಸ ಮಾರ್ಗಗಳನ್ನು ಸುಗಮಗೊಳಿಸುತ್ತದೆ.
ಸ್ನೇಹಿತರೆ,
ಇಂದು ನಾವು ಜಾಗತಿಕ ಸಮಸ್ಯೆಗಳು, ಪರಿಹಾರಗಳು ಮತ್ತು ನಮ್ಮ ಜೀವನವನ್ನು ಸಮಗ್ರ ರೀತಿಯಲ್ಲಿ ನೋಡಬೇಕಾದ ಅಗತ್ಯವಿದೆ. ಅದಕ್ಕಾಗಿಯೇ, ಇಂದು ಭಾರತವು ವಿಶ್ವಕ್ಕೆ ಲೈಫ್ ಎಲ್.ಐ.ಎಫ್.ಇ. ಯಂತಹ ಜೀವನ-ಮಂತ್ರವನ್ನು ನೀಡಿದೆ, ಅಂದರೆ, ವಿಶ್ವಕ್ಕಾಗಿ ಪರಿಸರಕ್ಕಾಗಿ ಜೀವನಶೈಲಿ. ಇಂದು, ಅಂತಾರಾಷ್ಟ್ರೀಯ ಸೌರ ಸಹಯೋಗದಂತಹ ಪ್ರಯತ್ನಗಳ ಮೂಲಕ, ಭಾರತವು ವಿಶ್ವಕ್ಕೆ ಒಂದು ವೇದಿಕೆಯನ್ನು ನೀಡುತ್ತಿದೆ, ಒಂದು ದೃಷ್ಟಿಕೋನವನ್ನು ನೀಡುತ್ತಿದೆ. ಈ ಪ್ರಯತ್ನಗಳ ಯಶಸ್ಸು ಪ್ರಪಂಚದ ದಿಕ್ಕು ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ಇಂದು ಜಾಗತಿಕ ಸವಾಲುಗಳನ್ನು ನಮ್ಮ ವೈಯಕ್ತಿಕ ಸವಾಲುಗಳು ಎಂದು ಪರಿಗಣಿಸುವ ಸಮಯವಾಗಿದೆ ಮತ್ತು ಪ್ರಪಂಚದದಲ್ಲ. ನಮ್ಮ ಜೀವನದಲ್ಲಿ ಒಂದು ಸಣ್ಣ ಬದಲಾವಣೆಯು ಇಡೀ ಭೂಮಿಯ ಭವಿಷ್ಯಕ್ಕೆ ಆಧಾರವಾಗಬಹುದು. ಭಾರತದ ಪ್ರಯತ್ನಗಳು ಮತ್ತು ಪರಂಪರೆಗಳು ಈ ದಿಕ್ಕಿನಲ್ಲಿ ಇಡೀ ಮನುಕುಲಕ್ಕೆ ಮಾರ್ಗದರ್ಶನ ನೀಡುತ್ತವೆ, ಉತ್ತಮ ಪ್ರಪಂಚದ ಕನಸಿಗೆ ಶಕ್ತಿಯನ್ನು ನೀಡುತ್ತವೆ ಎಂಬ ವಿಶ್ವಾಸ ನನಗಿದೆ.
ಈ ನಂಬಿಕೆಯೊಂದಿಗೆ, ಈ ಅಮೂಲ್ಯ ಸಮಯದಲ್ಲಿ, ಈ ಐತಿಹಾಸಿಕ ಸಮಯದಲ್ಲಿ, ನಾನು ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.