ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಯಶಸ್ಸು ಎಂ.ಜಿ.ಆರ್. ಅವರ ಆತ್ಮವನ್ನು ಸಂತುಷ್ಟಗೊಳಿಸಿದೆ: ಪ್ರಧಾನಮಂತ್ರಿ
ಭಾರತೀಯ ವೈದ್ಯಕೀಯ ವೃತ್ತಿಪರರ ಬಗ್ಗೆ ಅಪಾರವಾದ ಗೌರವ ಮತ್ತು ಮೆಚ್ಚುಗೆ ಇದೆ: ಪ್ರಧಾನಮಂತ್ರಿ
ಸಾಂಕ್ರಾಮಿಕದ ಬಳಿಕ ವೈದ್ಯರ ಬಗೆಗಿನ ಗೌರವ ಹೆಚ್ಚಾಗಿದೆ:ಪ್ರಧಾನಮಂತ್ರಿ
ಸ್ವಾರ್ಥ ಮೀರಿದರೆ ನೀವು ನಿರ್ಭೀತರಾಗುತ್ತೀರಿ: ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ

ವಣಕ್ಕಂ

ತಮಿಳುನಾಡು ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ಬನ್ವಾರಿಲಾಲ್ ಪುರೋಹಿತ್, ಉಪಕುಲಪತಿಗಳಾದ ಸುಧಾ ಶೇಷಯ್ಯನ್, ಬೋಧಕ ಸಿಬ್ಬಂದಿ ಮತ್ತು ನನ್ನ ನೆಚ್ಚಿನ ವಿದ್ಯಾರ್ಥಿಗಳೇ.

ನೀವು ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಸೇರಿದಂತೆ ಇತರೆ ಪದವಿಗಳು ಮತ್ತು ಡಿಪ್ಲೊಮಾಗಳನ್ನು ಪಡೆಯುತ್ತಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ಭಾಗವಹಿಸುತ್ತಿರುವುದು ನನಗೆ ಹೆಚ್ಚಿನ ಹೆಮ್ಮೆ ತಂದಿದೆ. ಇಂದು ಸುಮಾರು 21 ಸಾವಿರ ವಿದ್ಯಾರ್ಥಿಗಳು ಪದವಿ ಮತ್ತು ಡಿಪ್ಲೊಮಾಗಳನ್ನು ಪಡೆಯುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಆದರೆ ಒಂದು ಅಂಶವನ್ನು ನಾನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಈ ಸಂಖ್ಯೆಗಳನ್ನು ಗಮನಿಸಿದರೆ ಸುಮಾರು ಶೇ.30ರಷ್ಟು ಪುರುಷರು ಮತ್ತು ಶೇ.70ರಷ್ಟು ಮಹಿಳೆಯರಿದ್ದಾರೆ. ನಾನು ಎಲ್ಲ ಪದವೀಧರರನ್ನು ಅಭಿನಂದಿಸುತ್ತೇನೆ ಮತ್ತು ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳನ್ನು ನಾನು ಶ್ಲಾಘಿಸುತ್ತೇನೆ. ಯಾವುದೇ ರಂಗದಲ್ಲೂ ಮಹಿಳೆಯರು ಮುಂಚೂಣಿಯಲ್ಲಿರುವುದು ಸದಾ ವಿಶೇಷವಾಗಿದೆ ಮತ್ತು ಈ ಕ್ಷಣ ಹೆಮ್ಮೆ ಹಾಗೂ ಸಂತೋಷದ ಕ್ಷಣವೂ ಆಗಿದೆ.

ಮಿತ್ರರೇ,

ನಿಮ್ಮೆಲ್ಲರ ಹಾಗೂ ಈ ಸಂಸ್ಥೆಯ ಯಶಸ್ಸು ಶ್ರೇಷ್ಠ ಎಂಜಿಆರ್ ಅವರನ್ನು ಸಂತೋಷಗೊಳಿಸಿದೆ. ಅವರ ಆಡಳಿತ ಸಂಪೂರ್ಣ ಬಡವರ ಬಗ್ಗೆ ಅನುಕಂಪ ಹೊಂದಿತ್ತು. ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣ ವಿಷಯಗಳು ಅವರಿಗೆ ತೀರಾ ಆಪ್ತವಾದ ವಿಷಯವಾಗಿದ್ದವು. ಕೆಲವು ವರ್ಷಗಳ ಹಿಂದೆ ನಾನು ಎಂಜಿಆರ್ ಅವರು ಹುಟ್ಟಿದ ಶ್ರೀಲಂಕಾಗೆ ಭೇಟಿ ನೀಡಿದ್ದೆ. ಶ್ರೀಲಂಕಾದ ಆರೋಗ್ಯ ವಲಯದಲ್ಲಿ ಕೆಲಸ ಮಾಡುತ್ತಿರುವ ನಮ್ಮ ತಮಿಳು ಸಹೋದರ ಸಹೋದರಿಯರ ಪರವಾಗಿ ಕೆಲಸ ಮಾಡುವುದು ಭಾರತಕ್ಕೆ ಹೆಮ್ಮೆ ಎನಿಸಿದೆ. ಭಾರತದ ಆರ್ಥಿಕ ನೆರವಿನೊಂದಿಗೆ ಆರಂಭಿಸಲಾದ ಉಚಿತ ಆಂಬುಲೆನ್ಸ್ ಸೇವೆಯನ್ನು ಅಲ್ಲಿನ ತಮಿಳು ಸಮುದಾಯ ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ದಿಕೊಯಾದ ಆಸ್ಪತ್ರೆಯಲ್ಲಿ ನಡೆದ ಆ ಉದ್ಘಾಟನಾ ಸಮಾರಂಭವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಅತ್ಯಾಧುನಿಕ ಆಸ್ಪತ್ರೆ ಹಲವರಿಗೆ ಸಹಕಾರಿಯಾಗಿದೆ. ಆರೋಗ್ಯ ರಕ್ಷಣೆಯಲ್ಲಿನ ಈ ಪ್ರಯತ್ನಗಳು ಅದರಲ್ಲೂ ವಿಶೇಷವಾಗಿ ತಮಿಳು ಸಮುದಾಯಕ್ಕೆ ಮಾಡಿರುವ ಈ ಪ್ರಯತ್ನಗಳು ಎಂಜಿಆರ್ ಅವರನ್ನು ತುಂಬಾ ಸಂತೋಷಗೊಳಿಸಿದೆ.

ವಿದ್ಯಾರ್ಥಿ ಮಿತ್ರರೇ,

ಇದು ನಿಮ್ಮ ಜೀವನದಲ್ಲಿ ಒಂದು ಪ್ರಮುಖ ಹಂತದಿಂದ ಮತ್ತೊಂದು ಹಂತಕ್ಕೆ ಪರಿವರ್ತನೆಗೊಳ್ಳುವ ಅತ್ಯಂತ ಪ್ರಮುಖ ಘಟ್ಟವಾಗಿದೆ. ಈ ಸಮಯದಲ್ಲಿ ನೀವು ಕಲಿಕೆಯಿಂದ ಗುಣಮುಖವಾಗುವತ್ತ ಪರಿವರ್ತನೆಗೊಳ್ಳುತ್ತೀರಿ. ಈ ಸಮಯ ಪರೀಕ್ಷೆಯಲ್ಲಿ ನೀವು ಅಂಕಗಳನ್ನು ಗಳಿಸುವುದರಿಂದ ಸಮಾಜದಲ್ಲಿ ನೀವು ಹೆಜ್ಜೆ ಗುರುತುಗಳನ್ನು ಮೂಡಿಸುವತ್ತ ಪರಿವರ್ತನೆಗೊಳ್ಳುವ ಸಮಯವಾಗಿದೆ.

ಮಿತ್ರರೇ,

ಅನಿರೀಕ್ಷಿತವಾಗಿ ಕಾಣಿಸಿಕೊಂಡ ಕೋವಿಡ್-19 ಸಾಂಕ್ರಾಮಿಕ ಇಡೀ ವಿಶ್ವವನ್ನು ವ್ಯಾಪಿಸಿದೆ. ಅದರ ಚಿಕಿತ್ಸೆಗೆ ಯಾವುದೇ ಪೂರ್ವ ನಿಗದಿತ ಸೂತ್ರವಿಲ್ಲ. ಅಂತಹ ಸಂದರ್ಭದಲ್ಲಿ ಭಾರತ ಕೆಲವು ಹೆಜ್ಜೆ ಗುರುತುಗಳನ್ನು ಮೂಡಿಸಿದ್ದೇ ಅಲ್ಲದೆ ಆ ಮಾರ್ಗದಲ್ಲಿ ನಡೆಯಲು ಹಲವು ರಾಷ್ಟ್ರಗಳಿಗೆ ಸಹಾಯ ಮಾಡಿದೆ. ಭಾರತದಲ್ಲಿ ಸೋಂಕಿತರ ಅತಿ ಕಡಿಮೆ ಸಾವು ಸಂಭವಿಸಿದೆ ಮತ್ತು ಗುಣಮುಖರಾದವರ ಸಂಖ್ಯೆ ಅತ್ಯಧಿಕವಾಗಿದೆ. ಭಾರತ ಜಗತ್ತಿಗೆ ಬೇಕಾದ ಔಷಧಗಳನ್ನು ಉತ್ಪಾದಿಸುತ್ತಿದೆ ಮತ್ತು ವಿಶ್ವಕ್ಕೆ ಬೇಕಾದ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತೀಯ ವೈದ್ಯಕೀಯ ವೃತ್ತಿಪರರು, ವಿಜ್ಞಾನಿಗಳು ಮತ್ತು ಫಾರ್ಮಾ ವೃತ್ತಿಪರರಿಗೆ ಹೆಚ್ಚಿನ ಗೌರವ ಮತ್ತು ಮೆಚ್ಚುಗೆ ಸಿಗುತ್ತಿರುವ ಸಮಯದಲ್ಲಿ ನೀವು ಪದವೀಧರರಾಗಿದ್ದೀರಿ. ಒಟ್ಟಾರೆ ಭಾರತೀಯ ಆರೋಗ್ಯ ಪೂರಕ ವ್ಯವಸ್ಥೆಯನ್ನು ಹೊಸ ದೃಷ್ಟಿಯಿಂದ, ಹೊಸ ಗೌರವದಿಂದ ಮತ್ತು ಹೊಸ ವಿಶ್ವಾಸಾರ್ಹತೆಯಿಂದ ನೋಡಲಾಗುತ್ತಿದೆ. ಆದರೆ ವಿಶ್ವ ನಿಮ್ಮಿಂದ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದೆ ಎಂಬುದು ಕೂಡ ಅಷ್ಟೇ ಮುಖ್ಯವಾಗಿದ್ದು, ಆ ಹೊಣೆಗಾರಿಕೆ ನಮ್ಮ ಯುವ ಹಾಗೂ ಬಲಿಷ್ಠ ಭುಜಗಳ ಮೇಲಿದೆ. ಈ ಸಾಂಕ್ರಾಮಿಕದಿಂದ ಕಲಿತಿರುವ ಪಾಠ ನಮಗೆ ಕ್ಷಯರೋಗ ಮತ್ತಿತರ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯಕವಾಗಲಿದೆ.

ಮಿತ್ರರೇ,

ತಿರುವಳ್ಳವರ್ ಅವರು ಹೀಗೆ ಹೇಳಿದ್ದರು : ಅನಾರೋಗ್ಯ, ವೈದ್ಯರು ಔಷಧ ಮತ್ತು ಶುಶ್ರೂಷೆದಾರರು ಈ ನಾಲ್ಕು ಅಂಶ ಚಿಕಿತ್ಸೆಯಲ್ಲಿ ಸೇರಿವೆ. ಸಾಂಕ್ರಾಮಿಕದುದ್ದಕ್ಕೂ ಮತ್ತು ಅಡೆತಡೆಗಳ ನಡುವೆಯೇ ಈ ನಾಲ್ಕು ಸ್ತಂಭಗಳು ಅಪರಿಚಿತ ಶತ್ರುವಿನ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದವು. ಈ ಸೋಂಕಿನ ಸಮರದ ವಿರುದ್ಧ ಹೋರಾಡಿದವರೆಲ್ಲರೂ ಮಾನವೀಯತೆಯ ನಾಯಕರಾಗಿ ಗುರುತಿಸಿಕೊಂಡರು.

ಮಿತ್ರರೇ,

ನಾವು ಇಡೀ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ರಕ್ಷಣಾ ವಲಯವನ್ನು ಪರಿವರ್ತನೆಗೊಳಿಸುತ್ತಿದ್ದೇವೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಹೆಚ್ಚಿನ ಪಾರದರ್ಶಕತೆಯನ್ನು ತರಲಿದೆ. ಅಲ್ಲದೆ ಅದು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದ ನಿಯಮಗಳನ್ನು ಏಕರೂಪಗೊಳಿಸಲಿದೆ. ಜೊತೆಗೆ ಅದು ಈ ವಲಯದಲ್ಲಿ ಮಾನವ ಸಂಪನ್ಮೂಲದ ಲಭ್ಯತೆ ಮತ್ತು ಗುಣಮಟ್ಟವನ್ನು ಸುಧಾರಿಸಲಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 30 ಸಾವಿರಕ್ಕೂ ಅಧಿಕ ಹೆಚ್ಚಳ ಮಾಡಲಾಗಿದೆ. 2014ರಿಂದೀಚೆಗೆ ಆ ಪ್ರಮಾಣ ಶೇ.50ಕ್ಕೂ ಅಧಿಕ ಹೆಚ್ಚಳವಾಗಿದೆ. ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ ಸುಮಾರು 24 ಸಾವಿರ ಹೆಚ್ಚಳವಾಗಿದ್ದು, ಇದು 2014ರಿಂದೀಚೆಗೆ ಶೇ.80ರಷ್ಟು ಹೆಚ್ಚಳವಾದಂತಾಗಿದೆ. 2014ರಲ್ಲಿ ದೇಶದಲ್ಲಿ ಕೇವಲ ಆರು ಏಮ್ಸ್ ಗಳಿದ್ದವು. ಕಳೆದ ಆರು ವರ್ಷಗಳಲ್ಲಿ ನಾವು ದೇಶಾದ್ಯಂತ 15ಕ್ಕೂ ಅಧಿಕ ಏಮ್ಸ್ ಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದೇವೆ. ತಮಿಳುನಾಡು, ವೈದ್ಯಕೀಯ ಶಿಕ್ಷಣಕ್ಕೆ ಅತ್ಯಂತ ಹೆಸರುವಾಸಿಯಾಗಿದೆ. ಈ ರಾಜ್ಯದಲ್ಲಿನ ನಮ್ಮ ಯುವಕರಿಗೆ ಮತ್ತಷ್ಟು ಸಹಾಯ ಮಾಡಲು ನಮ್ಮ ಸರ್ಕಾರ ರಾಜ್ಯದಲ್ಲಿ ಹೊಸದಾಗಿ 11 ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿದೆ. ಈ ಹೊಸ ವೈದ್ಯಕೀಯ ಕಾಲೇಜುಗಳು ಯಾವು ಜಿಲ್ಲೆಗಳಲ್ಲಿ ಸದ್ಯ ವೈದ್ಯಕೀಯ ಕಾಲೇಜುಗಳು ಇಲ್ಲವೋ ಅಂತಹ ಕಡೆ ತಲೆ ಎತ್ತಲಿವೆ. ಈ ಪ್ರತಿಯೊಂದು ಕಾಲೇಜುಗಳಿಗೆ ಭಾರತ ಸರ್ಕಾರ 2 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ನೀಡಲಿದೆ.

ನಾವು ಬಜೆಟ್ ನಲ್ಲಿ 64 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಪಿಎಂ ಆತ್ಮನಿರ್ಭರ ಸ್ವಾಸ್ಥ್ಯ ಯೋಜನೆಯನ್ನು ಪ್ರಕಟಿಸಿದ್ದೇವೆ. ಇದು ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ರಕ್ಷಣಾ ಸೇವಾ ಸಾಮರ್ಥ್ಯಗಳನ್ನು ಉತ್ತೇಜಿಸಲಿದೆ ಮತ್ತು ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆಗಳನ್ನು ಗುಣಪಡಿಸಲು ಮತ್ತು ಅವುಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ನಮ್ಮ ಆಯುಷ್ಮಾನ್ ಭಾರತ್ ಯೋಜನೆ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಕಾರ್ಯಕ್ರಮವಾಗಿದ್ದು, ಸುಮಾರು 50 ಕೋಟಿ ಜನರಿಗೆ 1600 ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸೆಗಳಲ್ಲಿ ಗುಣಮಟ್ಟದ ಆರೈಕೆಯನ್ನು ನೀಡುತ್ತಿದೆ.

ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 7000ಕ್ಕೂ ಅಧಿಕ ಸಂಖ್ಯೆಗೆ ವಿಸ್ತರಿಸಲಾಗಿದೆ. ಅವುಗಳ ಮೂಲಕ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸಲಾಗುತ್ತಿದೆ. ನಮ್ಮ ದೇಶದಲ್ಲಿ ವೈದ್ಯಕೀಯ ಸಾಧನಗಳಾದ ಸ್ಟಂಟ್ಸ್ ಮತ್ತು ನೀ ಇಂಪ್ಲಾಂಟ್ಸ್(ಮಂಡಿಚಿಪ್ಪು)ಗಳ ದರವನ್ನು ಅತಿ ಕಡಿಮೆ ಮಾಡಿದ್ದು, ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗುತ್ತಿದೆ.

ಮಿತ್ರರೇ,

ನಮ್ಮ ದೇಶದಲ್ಲಿ ಅತಿ ಹೆಚ್ಚಿನ ವೃತ್ತಿಪರ ಗೌರವವನ್ನು ವೈದ್ಯರಿಗೆ ನೀಡಲಾಗುತ್ತಿದೆ. ಇಂದು ಸಾಂಕ್ರಾಮಿಕದ ನಂತರ ಆ ರೀತಿಯ ಗೌರವ ನೀಡುವುದು ಇನ್ನೂ ಹೆಚ್ಚಾಗಿದೆ. ಈ ರೀತಿಯ ಗೌರವ ನೀಡಲು ಕಾರಣವೆಂದರೆ, ಹಲವು ಸಂಕಷ್ಟಗಳ ಸಮಯದಲ್ಲಿ, ಅಕ್ಷರಶಃ ಯಾರಾದರೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಂದರ್ಭದಲ್ಲಿ ನಿಮ್ಮ ವೃತ್ತಿಯ ಗಂಭೀರತೆಯನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ಆದರೂ ಗಂಭೀರವಾಗಿರುವುದು ಎರಡು ವಿಧದಲ್ಲಿ ಮುಖ್ಯವಾಗುತ್ತದೆ. ಆದರೂ ನಾನು ನಿಮ್ಮ ಹಾಸ್ಯ ಮನೋಭಾವವನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ಅದು ರೋಗಿಗಳಿಗೆ ಚೈತನ್ಯ ತುಂಬಲು ಮತ್ತು ಅವರ ನೈತಿಕ ಸ್ಥೈರ್ಯ ಹೆಚ್ಚಳವಾಗುವಂತೆ ಮಾಡಲು ನಿಮಗೆ ಸಹಕಾರಿಯಾಗಲಿದೆ. ನಾನು ಕೆಲವು ವೈದ್ಯರನ್ನು ನೋಡಿದ್ದೇನೆ. ಅವರು ತಮ್ಮ ವೃತ್ತಿಯಲ್ಲಿ ಅತ್ಯಂತ ಶ್ರೇಷ್ಠರಾಗಿದ್ದಾರೆ, ಜೊತೆಗೆ ಆಸ್ಪತ್ರೆಯ ಪರಿಸರದಲ್ಲಿ ಅವರು ತಮ್ಮ ರೋಗಿಗಳು ಹಾಗೂ ಸಿಬ್ಬಂದಿಯೊಂದಿಗೆ ಹಾಸ್ಯಭರಿತ ಸಂಭಾಷಣೆಗಳನ್ನು ನಡೆಸುತ್ತಿರುತ್ತಾರೆ. ಇದು ಕೂಡ ರೋಗಿಗಳ ಚೇತರಿಕೆಯಲ್ಲಿ ಅತ್ಯಂತ ಮುಖ್ಯವಾಗಿದ್ದು, ಜನರಿಗೆ ಒಂದು ಬಗೆಯ ವಿಶ್ವಾಸವನ್ನು ತುಂಬುತ್ತದೆ. ನಿಮ್ಮ ಹಾಸ್ಯ ಮನೋಭಾವ ಕೂಡ ನಿಮ್ಮನ್ನು ಆರೋಗ್ಯವಾಗಿಡುತ್ತದೆ ಮತ್ತು ಅಧಿಕ ವೃತ್ತಿಯ ಒತ್ತಡದ ಸಂದರ್ಭದಲ್ಲಿ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ. ನೀವು ದೇಶದ ಆರೋಗ್ಯವನ್ನು ನೋಡಿಕೊಳ್ಳುವಂತಹವರು. ನಿಮ್ಮ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಬಗ್ಗೆ ಗಮನಹರಿಸಿದಾಗ ಮಾತ್ರ ನೀವು ದೇಶದ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬಹುದಾಗಿದೆ. ಯೋಗ, ಧ್ಯಾನ, ಓಟ, ಸೈಕ್ಲಿಂಗ್ ಇವುಗಳಲ್ಲಿ ಕೆಲವು ದೈಹಿಕಾ ಕ್ಷಮತಾ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಹಾಗೂ ಅವು ನಿಮ್ಮ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿವೆ.

 

ಮಿತ್ರರೇ,

ಸ್ವಾಮಿ ವಿವೇಕಾನಂದ ಅವರು ಗುರು ಶ್ರೀ ರಾಮಕೃಷ್ಣ ಪರಮಹಂಸ ಅವರು ಹೀಗೆ ಹೇಳಿದ್ದರು “शिव ज्ञाने जीव सेवा” ಅದರ ಅರ್ಥ ಜನತೆಯ ಸೇವೆಯನ್ನು ಮಾಡುವುದು ಶಿವ ಅಥವಾ ದೇವರ ಸೇವೆಗೆ ಸಮನಾದುದು ಎಂದು. ಅತ್ಯಂತ ಆದರ್ಶ ತತ್ವವಾದ ಇದನ್ನು ಪಾಲಿಸಲು ಅತಿ ಹೆಚ್ಚಿನ ಅವಕಾಶ ಇರುವುದು ಎಂದರೆ ಅದು ವೈದ್ಯಕೀಯ ವೃತ್ತಿಪರರಿಗೆ. ನಿಮ್ಮ ದೀರ್ಘಾವಧಿ ವೃತ್ತಿ ಜೀವನದಲ್ಲಿ ವೃತ್ತಿಪರವಾಗಿ ಬೆಳೆಯಬೇಕಾದರೆ ಮತ್ತು ಅದೇ ವೇಳೆ ನಿಮ್ಮ ವೈಯಕ್ತಿಕ ಬೆಳವಣಿಗೆಯನ್ನೂ ಸಹ ಮರೆಯಬೇಡಿ. ಸ್ವಹಿತಾಸಕ್ತಿಯನ್ನು ಮೀರಿ ಬೆಳೆಯಿರಿ. ಆ ರೀತಿ ಬೆಳೆದಾಗ ನೀವು ಹೆದರುವ ಅಗತ್ಯ ಇರುವುದಿಲ್ಲ.

ಮಿತ್ರರೇ,

ಇಂದು ಪದವಿ ಸ್ವೀಕರಿಸುತ್ತಿರುವ ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಮಾತುಗಳೊಂದಿಗೆ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದೇನೆ ಮತ್ತು ನಿಮಗೆ ಈ ರೋಮಾಂಚಕಾರಿ ವಲಯದಲ್ಲಿ ನಿಮ್ಮಲ್ಲರಿಗೂ ಸಾರ್ಥಕ, ಅದ್ಭುತ ಮತ್ತು ಸವಾಲಿನ ವೃತ್ತಿಜೀವನವನ್ನು ನಾನು ಬಯಸುತ್ತೇನೆ.

ಧನ್ಯವಾದಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government