ಎಲ್ಲಾ ಗೌರವಾನ್ವಿತ ಹಿರಿಯರಿಗೆ, ಸಹೋದರಿಯರಿಗೆ, ಅತ್ತೆಯಂದಿರಿಗೆ, ಮತ್ತು ಉತ್ತರಾಖಂಡದ ಸಹೋದರರಿಗೆ ಹಾಗು ಸಹೋದರಿಯರಿಗೆ ನನ್ನ ನಮಸ್ಕಾರಗಳು. ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ.ದಯವಿಟ್ಟು ನನ್ನ ಶುಭಾಶಯಗಳನ್ನು ಸ್ವೀಕರಿಸಿ.
ಉತ್ತರಾಖಂಡದ ರಾಜ್ಯಪಾಲರಾದ ಶ್ರೀ ಗುರ್ಮೀತ್ ಸಿಂಗ್ ಜೀ, ಜನಪ್ರಿಯ, ಉತ್ಸಾಹಿ ಮುಖ್ಯಮಂತ್ರಿ ಶ್ರೀ ಪುಷ್ಕರ ಸಿಂಗ್ ಧಾಮೀ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಪ್ರಹ್ಲಾದ್ ಜೋಶೀ ಜೀ ಮತ್ತು ಅಜಯ್ ಭಟ್ ಜೀ, ಉತ್ತರಾಖಂಡದ ಸಚಿವರಾಗಿರುವ ಸತ್ಪಾಲ್ ಮಹಾರಾಜ್ ಜೀ, ಹರಾಕ್ ಸಿಂಗ್ ರಾವತ್ ಜೀ, ಮತ್ತು ರಾಜ್ಯ ಸಂಪುಟದ ಇತರ ಸದಸ್ಯರೇ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ನಿಶಾಂಕ್ ಜೀ, ತೀರತ್ ಸಿಂಗ್ ರಾವತ್ ಜೀ,ಇತರ ಸಂಸತ್ ಸದಸ್ಯರೇ, ತ್ರಿವೇಂದ್ರ ಸಿಂಗ್ ರಾವತ್ ಜೀ, ವಿಜಯ ಬಹುಗುಣ ಜೀ, ರಾಜ್ಯ ವಿಧಾನ ಸಭೆಯ ಇತರ ಸದಸ್ಯರೇ, ಜಿಲ್ಲಾ ಪಂಚಾಯತ್ ಸದಸ್ಯರೇ, ಮದನ್ ಕೌಶಿಕ್ ಜೀ, ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ,
ನೀವೆಲ್ಲರೂ ನಮ್ಮನ್ನು ಆಶೀರ್ವದಿಸುವುದಕ್ಕಾಗಿ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ಸ್ವೀಕರಿಸುವುದಕ್ಕೆ ನಾವು ಬಹಳ ಉತ್ಸಾಹದಿಂದಿದ್ದೇವೆ ಮತ್ತು ನಮಗೆ ಮನದುಂಬಿ ಬಂದಿದೆ. ಉತ್ತರಾಖಂಡ ಇಡೀ ದೇಶದ ನಂಬಿಕೆ ಮಾತ್ರವಲ್ಲ ಅದು ಕರ್ಮ ಮತ್ತು ಕಠಿಣ ಪರಿಶ್ರಮದ ಭೂಮಿ. ಆದುದರಿಂದ ಈ ವಲಯದ ಅದ್ದೂರಿ ಅಭಿವೃದ್ಧಿ ಎರಡು ಇಂಜಿನ್ ಸರಕಾರದ ಪ್ರಥಮಾದ್ಯತೆಯಾಗಿದೆ. ಈ ಸ್ಪೂರ್ತಿ, ಉತ್ಸಾಹದಲ್ಲಿ ಕೇಂದ್ರ ಸರಕಾರ ಕಳೆದ ಐದು ವರ್ಷಗಳಲ್ಲಿ ಉತ್ತರಾಖಂಡದ ಅಭಿವೃದ್ಧಿಗೆ ಒಂದು ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಅಂಗೀಕಾರ ನೀಡಿದೆ. ರಾಜ್ಯ ಸರಕಾರ ಈ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರುತ್ತಿದೆ. ಇದರ ಮುಂದುವರಿಕೆಯಾಗಿ 18,000 ಕೋ.ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಒಂದೋ ಶಿಲಾನ್ಯಾಸ ಮಾಡಲಾಗಿದೆ ಅಥವಾ ಅವುಗಳನ್ನು ಕಾರ್ಯಾರಂಭ ಮಾಡಲಾಗಿದೆ. ಸಂಪರ್ಕ, ಆರೋಗ್ಯ, ಸಂಸ್ಕೃತಿ, ತೀರ್ಥ ಯಾತ್ರೆ, ವಿದ್ಯುತ್, ಮಕ್ಕಳ ಸ್ನೇಹೀ ನಗರ ಯೋಜನೆಗಳು ಮತ್ತು ಪ್ರತೀ ವಲಯಕ್ಕೂ ಸಂಬಂಧಿಸಿದ ಯೋಜನೆಗಳು ಇದರಲ್ಲಿ ಸೇರಿವೆ. ವರ್ಷಗಳ ಕಠಿಣ ಶ್ರಮ ಮತ್ತು ಅವಶ್ಯ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಅಂತಿಮವಾಗಿ ಈ ದಿನ ಬಂದಿದೆ. ಈ ಮೊದಲು ಕೇದಾರಪುರಿಯ ಪವಿತ್ರ ಭೂಮಿಯಿಂದ ನಾನಿದನ್ನು ಹೇಳಿದ್ದೆ ಮತ್ತು ನಾನದನ್ನು ಡೆಹ್ರಾಡೂನ್ ನಿಂದ ಪುನರುಚ್ಛಾರ ಮಾಡುತ್ತಿದ್ದೇನೆ. ಈ ಯೋಜನೆಗಳು ಈ ದಶಕವನ್ನು ಉತ್ತರಾಖಂಡದ ದಶಕವನ್ನಾಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ. ಈ ಎಲ್ಲಾ ಯೋಜನೆಗಳಿಗಾಗಿ ನಾನು ಉತ್ತರಾಖಂಡದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎರಡು ಇಂಜಿನ್ ಗಳ ಸರಕಾರದ ಲಾಭ ಏನು ಎಂದು ಕೇಳುವವರು ಉತ್ತರಾಖಂಡದ ತ್ವರಿತ ಗತಿಯ ಅಭಿವೃದ್ಧಿಯ ಹರಿವನ್ನು ನೋಡಬಹುದು.
ಸಹೋದರರೇ ಮತ್ತು ಸಹೋದರಿಯರೇ,
ಈ ಶತಮಾನದ ಆರಂಭದಲ್ಲಿ, ಅಟಲ್ ಬಿಹಾರಿ ವಾಜಪೇಯೀ ಜೀ ಅವರು ಭಾರತದಲ್ಲಿ ಸಂಪರ್ಕ ವ್ಯವಸ್ಥೆಯನ್ನು ತ್ವರಿತಗೊಳಿಸುವ ಆಂದೋಲನವನ್ನು ಆರಂಭ ಮಾಡಿದರು. ಆದರೆ ಅವರ ಬಳಿಕ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರಕಾರ ದೇಶದ ಮತ್ತು ಉತ್ತರಾಖಂಡದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿತು. ಹತ್ತು ವರ್ಷಗಳ ಕಾಲ ದೇಶದಲ್ಲಿಯ ಮೂಲಸೌಕರ್ಯಗಳಿಗೆ ಸಂಬಂಧಿಸಿ ಹಗರಣಗಳು ನಡೆದವು. ದೇಶಕ್ಕಾಗಿರುವ ಈ ನಷ್ಟವನ್ನು ಸರಿದೂಗಿಸಲು ನಾವು ದುಪ್ಪಟ್ಟು ಪರಿಶ್ರಮವನ್ನು ಹಾಕಿದೆವು. ಮತ್ತು ಇಂದು ಕೂಡಾ ನಾವದನ್ನು ಮಾಡುತ್ತಿದ್ದೇವೆ. ಇಂದು ಭಾರತವು ಆಧುನಿಕ ಮೂಲಸೌಕರ್ಯಗಳ ಮೇಲೆ 100 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವಿನಿಯೋಗಿಸುವ ಉದ್ದೇಶದೊಂದಿಗೆ ಮುನ್ನಡೆಯುತ್ತಿದೆ. ಇಂದು ಭಾರತದ ನೀತಿಯಲ್ಲಿ ಚಲನಶೀಲತೆ ಇದೆ. ಎರಡು ಪಟ್ಟು, ಮೂರು ಪಟ್ಟು ವೇಗದೊಂದಿಗೆ ಕೆಲಸ ಮಾಡುವುದಕ್ಕೆ ಇದು ಉದಾಹರಣೆಯಾಗಿದೆ. ಬಹಳ ಅದ್ದೂರಿಯಿಂದ ಯೋಜನೆಗಳನ್ನು ಘೋಷಿಸಿ ಆ ಬಳಿಕ ಹಲವಾರು ವರ್ಷಗಳ ಕಾಲ ಆ ಯೋಜನೆಗಳನ್ನು ಅನುಷ್ಟಾನಕ್ಕೆ ತಾರದೆ ಬಾಕಿ ಉಳಿಸುವ ಹಳೆಯ ವಿಧಾನಗಳನ್ನು ಕೈಬಿಡುವ ಮೂಲಕ ಸರಕಾರ ಈಗ ನವಭಾರತದ ನಿರ್ಮಾಣಕ್ಕೆ ಕಟಿಬದ್ಧವಾಗಿದೆ. ಈ 21 ನೇ ಶತಮಾನದಲ್ಲಿ ಸಂಪರ್ಕದ “ಮಹಾಯಾಗ” ನಡೆಯುತ್ತಿದ್ದು, ಅದು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸಲಿದೆ. ಈ “ಮಹಾಯಾಗ”ದ ಯಜ್ಞವನ್ನು ಇಂದು ದೇವಭೂಮಿಯಲ್ಲಿ ನಡೆಸಲಾಗುತ್ತಿದೆ.
ಸಹೋದರರೇ ಮತ್ತು ಸಹೋದರಿಯರೇ,
ಭಕ್ತಾದಿಗಳು, ಉದ್ಯಮಿಗಳು ಮತ್ತು ಪ್ರಕೃತಿ ಪ್ರಿಯ ಪ್ರವಾಸಿಗರು ಕೂಡಾ ಈ ದೇವಭೂಮಿಗೆ ಬರುತ್ತಾರೆ. ಈ ಭೂಮಿಯ ಸಾಮರ್ಥ್ಯವನ್ನು ಹೆಚ್ಚಿಸಲು ಆಧುನಿಕ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಅಭೂತಪೂರ್ವ ಕೆಲಸಗಳು ನಡೆಯುತ್ತಿವೆ. ಚಾರ್ ಧಾಮ ಸರ್ವ ಋತು ಯೋಜನೆ ಅಡಿಯಲ್ಲಿ ದೇವಪ್ರಯಾಗದಿಂದ ಶ್ರೀಕೋಟ್ ಮತ್ತು ಬ್ರಹ್ಮಪುರಿಯಿಂದ ಕೌಡಿಯಾಲವರೆಗೆ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ. ಬದರೀನಾಥ ಧಾಮ ಹಾದಿಯಲ್ಲಿ ಬರುವ ಲಾಂಬಗಡ್ ಭೂಕುಸಿತದ ತೊಂದರೆಯನ್ನು ಈಗ ಪರಿಹರಿಸಲಾಗಿದೆ. ಈ ಭೂಕುಸಿತ ಹಲವಾರು ಯಾತ್ರಿಕರು ಬದರೀನಾಥ ಜೀಗೆ ತೆರಳುವುದಕ್ಕೆ ಅಡ್ಡಿಯುಂಟು ಮಾಡುತ್ತಿತ್ತು ಮತ್ತು ಅನೇಕ ಜನರು ದೇವಾಲಯಕ್ಕೆ ಭೇಟಿ ನೀಡದೆ ಮರಳುವಂತೆ ಮಾಡುತ್ತಿತ್ತು ಹಾಗು ಗಂಟೆಗಟ್ಟಲೆ ಕಾಯುವಂತೆ ಮಾಡುತ್ತಿತ್ತು. ಈಗ ಬದರೀನಾಥ ಜೀ ಯಾತ್ರೆ ಸುರಕ್ಷಿತ ಮತ್ತು ಹಿಂದೆಂದಿಗಿಂತಲೂ ಆನಂದದಾಯಕ. ಇಂದು ಬದರೀನಾಥದಲ್ಲಿ, ಗಂಗೋತ್ರಿಯಲ್ಲಿ ಮತ್ತು ಯಮುನೋತ್ರಿ ಧಾಮಗಳಲ್ಲಿ ಸೌಲಭ್ಯಗಳಿಗೆ ಸಂಬಂಧಿಸಿದ ಹಲವು ಹೊಸ ಯೋಜನೆಗಳನ್ನು ಕೂಡಾ ಆರಂಭಿಸಲಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ವರ್ಷಗಳಿಂದ ನಾವು ಕೇದಾರನಾಥ ಧಾಮದಲ್ಲಿ ನೋಡಿದ್ದೇವೆ, ಉತ್ತಮ ಸಂಪರ್ಕ ಮತ್ತು ಸೌಲಭ್ಯಗಳಿದ್ದರೆ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗೆ ಎಷ್ಟೊಂದು ಪ್ರಯೋಜನವಾಗುತ್ತದೆ ಎಂಬುದನ್ನು. ಇಲ್ಲಿ ದುರಂತ ಸಂಭವಿಸುವುದಕ್ಕೆ ಮೊದಲು 2012 ರಲ್ಲಿ ದಾಖಲೆ 5.70 ಲಕ್ಷ ಜನರು ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಇದು ಬಹಳ ದೊಡ್ಡ ದಾಖಲೆ. ಕೊರೊನಾ ಕಾಟ ಆರಂಭಕ್ಕೆ ಮೊದಲು 2019 ರಲ್ಲಿ 10 ಲಕ್ಷ ಜನರು ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕೇದಾರಧಾಮದ ಮರುನಿರ್ಮಾಣ ಭಕ್ತಾದಿಗಳ ಸಂಖ್ಯೆಯನ್ನು ಹೆಚ್ಚಿಸಿತಲ್ಲದೆ ಅಲ್ಲಿಯ ಜನರಿಗೆ ಉದ್ಯೋಗಗಳ ಮತ್ತು ಸ್ವ-ಉದ್ಯೋಗಗಳಿಗೆ ಹಲವು ಅವಕಾಶಗಳನ್ನು ಒದಗಿಸಿತು
ಸ್ನೇಹಿತರೇ,
ಈ ಮೊದಲು ನಾನು ಉತ್ತರಾಖಂಡಕ್ಕೆ ಭೇಟಿ ನೀಡುತ್ತಿದ್ದಾಗ ಮತ್ತು ಜನರನ್ನು ಭೇಟಿ ಮಾಡುತ್ತಿದ್ದಾಗ ಅವರು ಯಾವಾಗಲೂ ಹೇಳುತ್ತಿದ್ದರು, ದಿಲ್ಲಿಯಿಂದ ಡೆಹ್ರಾಡೂನ್ ಗೆ ಪ್ರಯಾಣ ಗಣೇಶಪುರಿಯವರೆಗೆ ಸುಗಮವಾಗಿದೆ, ಆ ಬಳಿಕ ಬಹಳ ಕಷ್ಟಕರವಾಗಿದೆ ಎಂದು. ಇಂದು ದಿಲ್ಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರಿಗೆ ಶಿಲಾನ್ಯಾಸ ಮಾಡಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ಇದು ಸಿದ್ದಗೊಂಡಾಗ ದಿಲ್ಲಿಯಿಂದ ಡೆಹ್ರಾಡೂನ್ ಗೆ ಪ್ರಯಾಣ ಪ್ರಯಾಣದ ಅವಧಿ ಸರಿಸುಮಾರು ಅರ್ಧದಷ್ಟು ಕಡಿಮೆಯಾಗುತ್ತದೆ. ಇದರಿಂದ ಡೆಹ್ರಾಡೂನ್ ಜನತೆಗೆ ಮಾತ್ರ ಪ್ರಯೋಜನಗಳು ಲಭಿಸುವುದಲ್ಲ, ಹರಿದ್ವಾರ, ಮುಜಾಫರ್ ನಗರ, ಶಾಮ್ಲಿ, ಭಾಗ್ಪತ್ ಮತ್ತು ಮೀರತ್ ಗಳಿಗೆ ತೆರಳುವವರಿಗೂ ಅನುಕೂಲಗಳಾಗಲಿವೆ. ಈ ಆರ್ಥಿಕ ಕಾರಿಡಾರ್ ಈಗ ದಿಲ್ಲಿಯಿಂದ ಹರಿದ್ವಾರ ನಡುವಣ ಪ್ರಯಾಣ ಅವಧಿಯನ್ನು ಕಡಿಮೆ ಮಾಡಲಿದೆ. ಹರಿದ್ವಾರ ವರ್ತುಲ ರಸ್ತೆ ಯೋಜನೆಯು ಹರಿದ್ವಾರವನ್ನು ಬಹಳ ಹಳೆಯ ಸಮಸ್ಯೆಯಾದ ವಾಹನ ದಟ್ಟಣೆಯಿಂದ ಮುಕ್ತಗೊಳಿಸಲಿದೆ. ಇದು ಕುಮೌನ್ ವಲಯಕ್ಕೆ ಸಂಪರ್ಕವನ್ನು ಸುಲಭಗೊಳಿಸಲಿದೆ. ಇದಲ್ಲದೆ, ಋಷಿಕೇಶದಲ್ಲಿ ಲಕ್ಷ್ಮಣ್ ಜೂಲಾ ಸೇತುವೆ ಬಳಿ ಹೊಸ ಸೇತುವೆಗೆ ಶಿಲಾನ್ಯಾಸ ಮಾಡಲಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ಪರಿಸರ ರಕ್ಷಣೆಯ ಜೊತೆ ಅಭಿವೃದ್ಧಿಗೆ ಸಂಬಂಧಿಸಿದ ನಮ್ಮ ಮಾದರಿಗೆ ದಿಲ್ಲಿ ಡೆಹ್ರಾಡೂನ್ ಎಕ್ಸ್ ಪ್ರೆಸ್ ವೇ ಒಂದು ಉದಾಹರಣೆ. ಕೈಗಾರಿಕಾ ಕಾರಿಡಾರುಗಳ ಜೊತೆ ಏಷ್ಯಾದ ಅತ್ಯಂತ ದೊಡ್ಡ ಎತ್ತರದ ವನ್ಯಜೀವಿ ಕಾರಿಡಾರ್ ಕೂಡಾ ನಿರ್ಮಾಣ ಆಗಲಿದೆ. ಈ ಕಾರಿಡಾರ್ ವಾಹನ ಸಂಚಾರವನ್ನು ಸುಲಭಗೊಳಿಸುವುದು ಮಾತ್ರವಲ್ಲ ವನ್ಯ ಜೀವಿಗಳಿಗೂ ಸುರಕ್ಷಿತವಾಗಿ ಸಾಗಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ವೈದ್ಯಕೀಯ ಅಂಶಗಳುಳ್ಳ ಗಿಡ ಮೂಲಿಕೆಗಳು ಉತ್ತರಾಖಂಡದ ಪ್ರಾಕೃತಿಕ ಸಹಜ ಉತ್ಪನ್ನಗಳು. ಇವುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ಉತ್ತರಾಖಂಡದ ಈ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ. ಆಧುನಿಕ ಸುಗಂಧ ದ್ರವ್ಯ ಮತ್ತು ಪರಿಮಳ ಪ್ರಯೋಗಾಲಯವನ್ನು ಈಗ ನಿರ್ಮಾಣ ಮಾಡಲಾಗುತ್ತಿದ್ದು ಅದು ಉತ್ತರಾಖಂಡದ ಸಾಮರ್ಥ್ಯವನ್ನು ಇನ್ನಷ್ಟು ವರ್ಧಿಸಲಿದೆ.
ಸಹೋದರರೇ ಮತ್ತು ಸಹೋದರಿಯರೇ,
ನಮ್ಮ ಪರ್ವತಗಳು ನಮ್ಮ ಸಂಸ್ಕೃತಿ ಮತ್ತು ನಂಬಿಕೆಯ ಬಲಾಢ್ಯಕೇಂದ್ರಗಳು ಮಾತ್ರವಲ್ಲ ಅವುಗಳು ನಮ್ಮ ದೇಶದ ಭದ್ರತೆಯ ಕೋಟೆಗಳು. ದೇಶದ ಪ್ರಮುಖಾದ್ಯತೆಗಳಲ್ಲಿ ಒಂದೆಂದರೆ ಪರ್ವತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರ ಬದುಕನ್ನು ಸುಲಭ ಮಾಡುವುದು. ದುರದೃಷ್ಟ ಎಂದರೆ ಇದು ದಶಕಗಳಿಂದ ಅಧಿಕಾರದಲ್ಲಿದ್ದ ಸರಕಾರಗಳ ನೀತಿ ಮತ್ತು ವ್ಯೂಹದಲ್ಲಿ ಕಂಡು ಬರುವುದಿಲ್ಲ. ಅದು ಉತ್ತರಾಖಂಡ ಇರಲಿ, ಅಥವಾ ಭಾರತದ ಇತರ ವಲಯಗಳಿರಲಿ ಅವರ ಉದ್ದೇಶವಿದ್ದದ್ದು ಒಂದೇ ತಮ್ಮ ಖಜಾನೆ ತುಂಬಿಸುವುದು ಮತ್ತು ತಮ್ಮ ಬಂಧುಗಳ ಬಗ್ಗೆ ಕಾಳಜಿ ವಹಿಸುವುದು.
ಸಹೋದರರೇ ಮತ್ತು ಸಹೋದರಿಯರೇ
ನಮಗೆ, ಉತ್ತರಾಖಂಡವು ಸಂಯಮಕ್ಕೆ ಮತ್ತು ಕಠಿಣ ಪರಿಶ್ರಮಕ್ಕೆ ಹಾದಿ. 2007 ರಿಂದ 2014ರ ನಡುವಣ 7 ವರ್ಷಗಳಲ್ಲಿ ಅಧಿಕಾರದಲ್ಲಿದ್ದ ಈ ಮೊದಲಿನ ಕೇಂದ್ರ ಸರಕಾರ ಉತ್ತರಾಖಂಡಕ್ಕೆ ಏನು ಮಾಡಿದೆ?. ಆ ಏಳು ವರ್ಷಗಳಲ್ಲಿ ಮೊದಲಿನ ಸರಕಾರ ಉತ್ತರಾಖಂಡದಲ್ಲಿ ಬರೇ 288 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಿತು. 300 ಕಿಲೋ ಮೀಟರ್ ಕೂಡಾ ಅಲ್ಲ. ಆದರೆ ನಮ್ಮ ಸರಕಾರ ಉತ್ತರಾಖಂಡದಲ್ಲಿ 2,000 ಕಿಲೋ ಮೀಟರ್ ಗೂ ಅಧಿಕ ರಾಷ್ಟ್ರೀಯ ಹೆದ್ದಾರಿಯನ್ನು ಏಳು ವರ್ಷಗಳಲ್ಲಿ ನಿರ್ಮಾಣ ಮಾಡಿದೆ. ಸಹೋದರರೆ ಮತ್ತು ಸಹೋದರಿಯರೇ ಈಗ ನನಗೆ ಹೇಳಿ, ಇದನ್ನು ನೀವು ಸಾಧನೆ ಎಂದು ಪರಿಗಣಿಸುತ್ತೀರೋ ಇಲ್ಲವೋ?. ಇದರಿಂದ ಜನತೆಗೆ ಒಳಿತಾಗುತ್ತದೆಯೋ ಇಲ್ಲವೋ?. ಇದು ಉತ್ತರಾಖಂಡಕ್ಕೆ ಒಳಿತು ಹೌದೋ ಅಲ್ಲವೋ?. ಇದು ನಿಮ್ಮ ಮುಂದಿನ ಪೀಳಿಗೆಗೆ ಒಳಿತು ಹೌದೋ ಅಲ್ಲವೋ?.ಉತ್ತರಾಖಂಡದ ಯುವ ಜನತೆಯ ಅದೃಷ್ಟ ಬದಲಾಗುತ್ತದೆಯೋ ಇಲ್ಲವೋ? ಇಷ್ಟು ಮಾತ್ರ ಅಲ್ಲ, ಈ ಮೊದಲಿನ ಸರಕಾರಗಳು ಉತ್ತರಾಖಂಡದಲ್ಲಿ ಏಳು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗಾಗಿ 600 ಕೋ.ರೂ.ಗಳನ್ನು ವಿನಿಯೋಗಿಸಿದ್ದವು. ಈಗ ಕೇಳಿ, ನಮ್ಮ ಸರಕಾರ ಈ ಏಳುವರೆ ವರ್ಷಗಳಲ್ಲಿ 12,000 ಕೋ.ರೂ.ಗಳನ್ನು ವಿನಿಯೋಗಿಸಿದೆ. 600 ಕೋ.ರೂ. ಮತ್ತು 12,000 ಕೋ.ರೂ.ಗಳ ನಡುವಣ ವ್ಯತ್ಯಾಸವನ್ನು ನೋಡಿ. ಈಗ ನೀವು ನನಗೆ ಹೇಳಿ, ಉತ್ತರಾಖಂಡ ನಮಗೆ ಆದ್ಯತೆ ಹೌದೇ ಅಲ್ಲವೇ?. ನೀವಿದನ್ನು ನಂಬುತ್ತಿರೋ ಇಲ್ಲವೋ? ನಾವಿದನ್ನು ಮಾಡಿದ್ದೇವೆಯೋ ಇಲ್ಲವೋ?. ನಾವು ಉತ್ತರಾಖಂಡಕ್ಕಾಗಿ ಪೂರ್ಣ ಮನಸ್ಸಿನಿಂದ ದುಡಿಯುತ್ತಿದ್ದೆವೆಯೋ ಇಲ್ಲವೋ?
ಸ್ನೇಹಿತರೇ,
ಇದು ಬರೇ ಅಂಕಿ ಅಂಶ ಅಲ್ಲ. ಇಂತಹ ಬೃಹತ್ ಮೂಲಸೌಕರ್ಯಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ, ಆಗ ಎಷ್ಟೆಲ್ಲಾ ಸಂಗತಿಗಳ ಅಗತ್ಯವಿದೆ? ನಮಗೆ ಸಿಮೆಂಟ್ ಬೇಕು, ಕಬ್ಬಿಣ, ಮರ, ಇಟ್ಟಿಗೆಗಳು, ಕಲ್ಲು, ಕಾರ್ಮಿಕರು, ಉದ್ಯಮದ ಜನರು ಬೇಕು ಮತ್ತು ಅಲ್ಲಿ ಸ್ಥಳೀಯ ಯುವಜನತೆಗೆ ಅವಕಾಶಗಳು ಇರುತ್ತವೆ. ಈ ಕೆಲಸದಲ್ಲಿ ತೊಡಗಿಕೊಳ್ಳುವ ಕಾರ್ಮಿಕರು, ಇಂಜಿನಿಯರ್ ಗಳು, ಮತ್ತು ಆಡಳಿತವರ್ಗವನ್ನು ಬಹುತೇಕ ಸ್ಥಳೀಯವಾಗಿಯೇ ಒಗ್ಗೂಡಿಸಲಾಗುತ್ತದೆ. ಆದುದರಿಂದ ಈ ಮೂಲಸೌಕರ್ಯ ಯೋಜನೆಗಳು ಉತ್ತರಾಖಂಡದಲ್ಲಿ ಹೊಸ ಉದ್ಯೋಗಾವಕಾಶಗಳ ಪರಿಸರ ವ್ಯವಸ್ಥೆಯನ್ನು ಸಾವಿರಾರು ಯುವ ಜನರಿಗೆ ಉದ್ಯೋಗ ನೀಡುವ ಮೂಲಕ ನಿರ್ಮಾಣ ಮಾಡುತ್ತಿವೆ .ನಾನು ಐದು ವರ್ಷಗಳ ಹಿಂದೆ ಏನು ಹೇಳಿದ್ದೇನೋ ಅದನ್ನು ಇಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಬಹಳಷ್ಟು ರಾಜಕಾರಣಿಗಳಿಗೆ ತಾವು ಐದು ವರ್ಷಗಳ ಹಿಂದೆ ಏನು ಹೇಳಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳುವ ನೆನಪಿನ ಶಕ್ತಿ ಇಲ್ಲ. ಆದರೆ ನನಗಿದೆ. ನಾನಾಗ ಏನು ಹೇಳಿದ್ದೆ?. ನಾನು ಹೆಮ್ಮೆಯಿಂದ ಹೇಳಬಲ್ಲೆ ಇಂದು ಉತ್ತರಾಖಂಡದ ನೀರು ಮತ್ತು ಯುವಜನತೆ ಉತ್ತರಾಖಂಡಕ್ಕೆ ಬಹಳ ಪ್ರಯೋಜನಕಾರಿಯಾಗಲಿದ್ದಾರೆ.
ಸ್ನೇಹಿತರೇ,
ಹಿಂದಿನ ಸರಕಾರಗಳು ಗಡಿಗಳ ಗಿರಿ ಪ್ರದೇಶಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೊಡಬೇಕಾದಷ್ಟು ಗಮನವನ್ನು ಕೊಡಲಿಲ್ಲ. ಗಡಿಯ ಹತ್ತಿರ ರಸ್ತೆಗಳು, ಸೇತುವೆಗಳು ಇರಬೇಕು ಎಂಬುದರ ಬಗ್ಗೆಯೂ ಗಮನ ಹರಿಸಲಿಲ್ಲ. ಅದಕ್ಕೆ ಬದಲು ಅವರು ಸೇನೆಯನ್ನು ಪ್ರತೀ ಹಂತದಲ್ಲಿಯೂ ನೈತಿಕವಾಗಿ ಕುಸಿಯುವಂತೆ ಮಾಡುವ ಪ್ರಮಾಣ ತೆಗೆದುಕೊಂಡಂತಿತ್ತು. ಅದು ಒಂದು ಶ್ರೇಣಿ ಒಂದು ಪೆನ್ಷನ್ ಇರಲಿ, ಆಧುನಿಕ ಶಸ್ತ್ರಾಸ್ತ್ರಗಳಿರಲಿ, ಅಥವಾ ಭಯೋತ್ಪಾದಕರಿಗೆ ಸೂಕ್ತ ಉತ್ತರ ಕೊಡುವುದಿರಲಿ ಎಲ್ಲದರಲ್ಲೂ ಅವರು ನಿಷ್ಕಾಳಜಿ ತೋರಿದರು. ಆದರೆ ಇಂದು ಅಧಿಕಾರದಲ್ಲಿರುವ ಸರಕಾರ ಜಗತ್ತಿನ ಯಾವ ದೇಶದ ಒತ್ತಡಕ್ಕೂ ಜಗ್ಗುವುದಿಲ್ಲ. ನಾವು ದೇಶ ಮೋದಲು, ಸದಾ ಮೊದಲು ಎಂಬ ಮಂತ್ರವನ್ನು ಅನುಸರಿಸುವವರು. ನಾವು ಗಡಿಭಾಗದ ಗಿರಿ ಪ್ರದೇಶಗಳಲ್ಲಿ ನೂರಾರು ಕಿಲೋ ಮೀಟರ್ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿದ್ದೇವೆ. ಇದನ್ನು ಕಠಿಣ ಭೌಗೋಳಿಕ ಪ್ರದೇಶಗಳಲ್ಲಿ ಮತ್ತು ವಾತಾವರಣದಲ್ಲಿಯ ವೈಪರಿತ್ಯ ಇದ್ದಾಗಲೂ ಮಾಡಿದ್ದೇವೆ. ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸುವ ಉತ್ತರಾಖಂಡದ ಪ್ರತೀ ಕುಟುಂಬವೂ ಇದರ ಮಹತ್ವವನ್ನು ಮನಗಾಣುತ್ತದೆ.
ಸ್ನೇಹಿತರೇ,
ಅದೊಂದು ಕಾಲವಿತ್ತು. ಗಿರಿ ಪ್ರದೇಶಗಳ ಜನತೆ ಅಭಿವೃದ್ಧಿಯ ಮುಖ್ಯ ವಾಹಿನಿಗೆ ಬರುವ ಬಗ್ಗೆ ಬರೇ ಕನಸು ಕಾಣುತ್ತಿದ್ದರು. ತಲೆಮಾರುಗಳಿಂದ ನಮಗೆ ಯಾವಾಗ ಸಾಕಷ್ಟು ವಿದ್ಯುತ್ ದೊರಕೀತು ಅಥವಾ ಪಕ್ಕಾ ಮನೆ ದೊರಕೀತು ಎಂದು ಅವರು ಕಾತರದಿಂದ ಕಾಯುತ್ತಿದ್ದರು. ಅವರ ಗ್ರಾಮದವರೆಗೆ ರಸ್ತೆ ಬರಲಿದೆಯೋ ಇಲ್ಲವೋ? ಉತ್ತಮ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗುತ್ತವೆಯೋ ಇಲ್ಲವೋ ಅಥವಾ ವಲಸೆ ಪ್ರಕ್ರಿಯೆ ಅಂತಿಮವಾಗಿ ಯಾವಾಗ ನಿಲ್ಲುತ್ತದೆ ?. ಇಲ್ಲಿಯ ಜನರ ಮನದಲ್ಲಿ ಇಂತಹ ಹಲವಾರು ಪ್ರಶ್ನೆಗಳಿದ್ದವು.
ಆದರೆ ಸ್ನೇಹಿತರೇ,
ಏನಾದರೂ ಮಾಡಲೇ ಬೇಕು ಎಂಬ ದೃಢ ನಿಶ್ಚಯ ಇದ್ದಾಗ, ಧೋರಣೆ ಮತ್ತು ಅದರ ರೂಪದಲ್ಲಿ ಬದಲಾವಣೆ ಆಗುತ್ತದೆ. ಮತ್ತು ನಾವು ನಿಮ್ಮ ಕನಸುಗಳನ್ನು ಈಡೇರಿಸಲು ಕಠಿಣ ಪರಿಶ್ರಮವನ್ನು ಮಾಡುತ್ತಿದ್ದೇವೆ. ಇಂದು ಸರಕಾರ ನಾಗರಿಕರು ಅವರ ಸಮಸ್ಯೆಗಳೊಂದಿಗೆ ತನ್ನ ಬಳಿ ಬರಲಿ ಎಂದು ಕಾಯುವುದಿಲ್ಲ. ಈಗ ಸರಕಾರ ನೇರವಾಗಿ ನಾಗರಿಕರ ಬಳಿಗೆ ಹೋಗುತ್ತದೆ. ನೆನಪು ಮಾಡಿಕೊಳ್ಳಿ, ಒಂದು ಕಾಲದಲ್ಲಿ ಉತ್ತರಾಖಂಡದಲ್ಲಿ ಕೊಳವೆ ಮೂಲಕ ನೀರು ತಲುಪುತ್ತಿದ್ದ ಮನೆಗಳ ಸಂಖ್ಯೆ ಬರೇ 1.25 ಲಕ್ಷದಷ್ಟಿತ್ತು. ಇಂದು 7.5 ಲಕ್ಷಕ್ಕೂ ಅಧಿಕ ಮನೆಗಳಿಗೆ ಕೊಳವೆ ಮೂಲಕ ನೀರು ಪೂರೈಕೆ ಆಗುತ್ತಿದೆ. ಈ ತಾಯಂದಿರು ಮತ್ತು ಸಹೋದರಿಯರು ನನಗೆ ಆಶೀರ್ವಾದ ಮಾಡುತ್ತಾರೆಯೇ ಇಲ್ಲವೇ, ಈಗ ನೀರು ನೇರವಾಗಿ ಅವರ ಅಡುಗೆ ಮನೆಯಲ್ಲಿ ಸಿಗುತ್ತಿದೆ. ಕೊಳವೆ ಮೂಲಕ ನೀರು ಅವರ ಮನೆಗಳಿಗೆ ತಲುಪಿದಾಗ ತಾಯಂದಿರ ಮತ್ತು ಸಹೋದರಿಯರ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಜಲ ಜೀವನ ಆಂದೋಲನ ಆರಂಭ ಮಾಡಿದ ಎರಡು ವರ್ಷದೊಳಗೆ ನಾವು ಅದರಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದ ಉತ್ತರಾಖಂಡದ ತಾಯಂದಿರು ಮತ್ತು ಸಹೋದರಿಯರಿಗೆ ಬಹಳ ಪ್ರಯೋಜನವಾಗಿದೆ. ಉತ್ತರಾಖಂಡದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ನಮ್ಮ ಮೇಲೆ ಸದಾ ಪ್ರೀತಿಯ ಮಳೆ ಹರಿಸಿದ್ದಾರೆ. ಈ ತಾಯಂದಿರ ಮತ್ತು ಸಹೋದರಿಯರ ಋಣವನ್ನು ತೀರಿಸಲು ನವು ಸದಾ ಕಠಿಣ ಪರಿಶ್ರಮವನ್ನು ಹಾಕುವ ಮೂಲಕ ಪ್ರಯತ್ನಿಸುತ್ತಿರುತ್ತೇವೆ ಮತ್ತು ಅವರ ಬದುಕನ್ನು ಸುಲಭ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇವೆ.
ಸ್ನೇಹಿತರೇ,
ಎರಡು ಇಂಜಿನ್ ಗಳ ಸರಕಾರದಡಿಯಲ್ಲಿ ಉತ್ತರಾಖಂಡದ ಆರೋಗ್ಯ ಮೂಲಸೌಕರ್ಯಕ್ಕೆ ಸಂಬಂಧಿಸಿ ಅಭೂತಪೂರ್ವ ಕೆಲಸ ನಡೆಯುತ್ತಿದೆ. ಉತ್ತರಾಖಂಡದಂತಹ ಸಣ್ಣ ರಾಜ್ಯಕ್ಕೆ ಮೂರು ಹೊಸ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಹರಿದ್ವಾರ ವೈದ್ಯಕೀಯ ಕಾಲೇಜಿಗೆ ಇಂದು ಶಿಲಾನ್ಯಾಸ ಮಾಡಲಾಗಿದೆ. ಋಷಿಕೇಶ ಎ.ಐ.ಐ.ಎಂ.ಎಸ್. ಈಗಾಗಲೇ ಕಾರ್ಯಾಚರಿಸುತ್ತಿದೆ ಮತ್ತು ಸದ್ಯದಲ್ಲಿಯೇ ಕುಮೋನ್ ನಲ್ಲಿ ಸೆಟಲೈಟ್ ಕೇಂದ್ರ ಸೇವೆಗಳನ್ನು ಒದಗಿಸಲಿದೆ. ಲಸಿಕಾಕರಣದಲ್ಲಿ ಉತ್ತರಾಖಂಡವು ಇಡೀ ದೇಶದಲ್ಲಿಯೇ ಪ್ರಮುಖ ರಾಜ್ಯಗಳ ಸಾಲಿನಲ್ಲಿರುವುದಕ್ಕೆ ಧಾಮೀ ಜೀ , ಅವರ ಸಹೋದ್ಯೋಗಿಗಳು ಮತ್ತು ಇಡೀ ಉತ್ತರಾಖಂಡ ಸರಕಾರವನ್ನು ನಾನು ಅಭಿನಂದಿಸುತ್ತೇನೆ. ಈ ಯಶಸ್ಸಿನ ಹಿಂದೆ ಉತ್ತಮ ವೈದ್ಯಕೀಯ ಮೂಲಸೌಕರ್ಯ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಿದೆ. ಈ ಕೊರೊನಾ ಕಾಲದಲ್ಲಿ ಉತ್ತರಾಖಂಡದಲ್ಲಿ 50 ಕ್ಕೂ ಅಧಿಕ ಹೊಸ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗಿದೆ.
ಸ್ನೇಹಿತರೇ,
ತಮ್ಮ ಮಕ್ಕಳು ವೈದ್ಯರಾಗಬೇಕು ಅಥವಾ ಇಂಜಿನಿಯರ್ ಆಗಬೇಕು ಅಥವಾ ಉದ್ಯಮಾಡಳಿತ ಅಧ್ಯಯನ ಮಾಡಬೇಕು ಎಂಬ ಆಶಯ ಪ್ರತಿಯೊಬ್ಬರಿಗೂ ಇರುತ್ತದೆ. ಹೊಸ ಸಂಸ್ಥೆಗಳನ್ನು ಸ್ಥಾಪಿಸದಿದ್ದರೆ ಮತ್ತು ಸೀಟುಗಳನ್ನು ಹೆಚ್ಚಿಸದಿದ್ದರೆ ನಿಮ್ಮ ಕನಸು ಈಡೇರಿಸಲು ಸಾಧ್ಯವೇ?. ನಿಮ್ಮ ಮಗ ಅಥವಾ ಮಗಳು ವೈದ್ಯರಾಗಲು ಸಾಧ್ಯವೇ?.ಇಂದು ಹೊಸ ವೈದ್ಯಕೀಯ ಕಾಲೇಜುಗಳು, ಐ.ಐ.ಟಿ.ಗಳು, ಐ.ಐ.ಎಂ.ಗಳು ಮತ್ತು ವೃತ್ತಿಪರ ಕೋರ್ಸುಗಳಿಗೆ ಸೀಟುಗಳ ಹೆಚ್ಚಳದಿಂದಾಗಿ ಈಗಿನ ಮತ್ತು ಭವಿಷ್ಯದ ತಲೆಮಾರಿನ ಭವಿಷ್ಯ ಬಲಗೊಳ್ಳುತ್ತಿದೆ. ನಾವು ಜನಸಾಮಾನ್ಯರ ಸಾಮರ್ಥ್ಯವನ್ನು ಹೆಚ್ಚಿಸಿ ಮತ್ತು ಅವರನ್ನು ಸಶಕ್ತೀಕರಣಗೊಳಿಸುವ ಮೂಲಕ ಸಾಮಾನ್ಯ ಜನತೆಗೆ ಘನತೆಯಿಂದ ಬದುಕಲು ಹೊಸ ಅವಕಾಶಗಳನ್ನು ಒದಗಿಸುತ್ತಿದ್ದೇವೆ.
ಸ್ನೇಹಿತರೇ,
ಕಾಲಾನುಕ್ರಮದಲ್ಲಿ ನಮ್ಮ ದೇಶದ ರಾಜಕೀಯದಲ್ಲಿ ಹಲವಾರು ಅಸ್ತವ್ಯಸ್ತಗಳು ಸಂಭವಿಸಿವೆ. ಮತ್ತು ಇಂದು ಉತ್ತರಾಖಂಡದ ಈ ಪವಿತ್ರ ಭೂಮಿಯಿಂದ ಈ ಬಗ್ಗೆ ನಾನು ಕೆಲವು ಸಂಗತಿಗಳನ್ನು ತಿಳಿಸಲು ಬಯಸುತ್ತೇನೆ. ಕೆಲವು ರಾಜಕೀಯ ಪಕ್ಷಗಳು ಒಂದು ವರ್ಗಕ್ಕೆ, ಒಂದು ಜಾತಿಗೆ ಅಥವಾ ಒಂದು ನಿರ್ದಿಷ್ಟ ಧರ್ಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ವಿಭಜನೆಗಳನ್ನು ಮಾಡುತ್ತಿವೆ. ಈ ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು ಅವರು ಅದರಲ್ಲಿ ಅವರ ಮತ ಬ್ಯಾಂಕನ್ನು ಕಾಣುತ್ತಾರೆ. ಮತ ಬ್ಯಾಂಕ್ ನಿರ್ಮಾಣ ಮಾಡುವುದು ಮತ್ತು ಅದಕ್ಕೆ ಬೆಂಬಲವಾಗಿ ನಿಲ್ಲುವುದೆಂದರೆ ಎಲ್ಲವೂ ಸರಿಯಾಗಿರುತ್ತದೆ ಎಂಬುದು ಅವರ ತರ್ಕ. ಈ ರಾಜಕೀಯ ಪಕ್ಷಗಳು ಇನ್ನೊಂದು ಹಾನಿಕಾರಕ ಧೋರಣೆಯನ್ನು ಕೈಗೊಂಡಿವೆ, ಅದೆಂದರೆ ಜನರು ಬಲಿಷ್ಟರಾಗಲು ಬಿಡದಂತಹ ನಿಲುವು. ಅವರು ಜನತೆ ಅಸಹಾಯಕರಾಗಿದ್ದಷ್ಟು ದಿನವೂ ತಮ್ಮ ಕಿರೀಟಕ್ಕೆ ತೊಂದರೆ ಇಲ್ಲ ಎಂದುಕೊಂಡಿದ್ದರು. ಈ ವಿಕೃತ ರಾಜಕೀಯ ಜನರ ಆವಶ್ಯಕತೆಗಳನ್ನು ಈಡೇರಿಸುವುದಕ್ಕಲ್ಲ ಬದಲು ಅವರನ್ನು ಸದಾ ಅವಲಂಬನೆಯಲ್ಲಿಯೇ ಇರುವಂತೆ ಮಾಡುವುದಕ್ಕಾಗಿ. ದುರದೃಷ್ಟವಶಾತ್ ಈ ರಾಜಕೀಯ ಪಕ್ಷಗಳು ಜನರ ಮನಸ್ಸಿನಲ್ಲಿ ಸರಕಾರ ಎಂದರೆ ಎಲ್ಲವೂ, ಮತ್ತು ತಾವು ಬದುಕಿರುವುದೇ ಈ ಸರಕಾರದಿಂದ ಎಂಬ ಭಾವನೆ ಬೆಳೆಯುವಂತೆ ಮಾಡಿದ್ದವು. ಈ ರೀತಿಯಲ್ಲಿ ದೇಶದ ಜನಸಾಮಾನ್ಯರ ಹೆಮ್ಮೆ ಮತ್ತು ಸ್ವಾಭಿಮಾನವನ್ನು ಚೆನ್ನಾಗಿ, ತರ್ಕಬದ್ಧವಾಗಿ ರೂಪಿಸಿದ ವ್ಯೂಹದ ಮೂಲಕ ಅದುಮಿಡಲಾಗಿತ್ತು. ಮತ್ತು ಆತನನ್ನು ಅವಲಂಬಿತನನ್ನಾಗಿ ಮಾಡಲಾಗಿತ್ತು. ದುಃಖದ ಸಂಗತಿ ಎಂದರೆ ಅವರು ಇದೇ ರೀತಿಯ ಧೋರಣೆಯನ್ನು ಮುಂದುವರೆಸಿದರು ಮತ್ತು ಜನರಿಗೂ ಅದರ ಸುಳಿವೂ ಸಿಗಲಿಲ್ಲ. ಆದರೆ ನಾವು ಬೇರೆ ಧೋರಣೆಯನ್ನು ಅನುಸರಿಸಿದೆವು. ನಾವು ಆಯ್ಕೆ ಮಾಡಿಕೊಂಡ ಹಾದಿ ಕಠಿಣವಾದುದಾಗಿತ್ತು. ಆದರೆ ಅದರಲ್ಲಿ ದೇಶದ ಜನತೆಯ ಹಿತಾಸಕ್ತಿ ಅಡಗಿತ್ತು. ಮತ್ತು ನಮ್ಮ ಹಾದಿ-ಸಬ್ ಕಾ ಸಾಥ್-ಸಬ್ ಕಾ ವಿಕಾಸ್. ಯೋಜನೆಗಳು ಎಲ್ಲರಿಗೂ ಮತ್ತು ಅಲ್ಲಿ ತಾರತಮ್ಯ ಇಲ್ಲ. ಮತ ಬ್ಯಾಂಕ್ ರಾಜಕೀಯವನ್ನು ಅನುಸರಿಸುವುದಕ್ಕೆ ಬದಲು ನಾವು ಜನ ಸೇವೆಗೆ ಆದ್ಯತೆಯನ್ನು ನೀಡಿದೆವು. ದೇಶವನ್ನು ಬಲಪಡಿಸುವುದು ನಮ್ಮ ಧೋರಣೆಯಾಯಿತು. ಪ್ರತೀ ಕುಟುಂಬವೂ ಬಲಿಷ್ಟವಾದಾಗ ದೇಶ ಬಲಿಷ್ಟವಾಗುತ್ತದೆ. ನಾವು ಪರಿಹಾರಗಳನ್ನು ಹುಡುಕಿದೆವು ಮತ್ತು ಮತ ಬ್ಯಾಂಕ್ ರಾಜಕೀಯಕ್ಕೆ ಸರಿಹೊಂದದಂತಹ ಯೋಜನೆಗಳನ್ನು ಆದರೆ ನಿಮ್ಮ ಬದುಕನ್ನು ಸುಲಭ ಮಾಡುವಂತಹ ಯೋಜನೆಗಳನ್ನು, ನಿಮಗೆ ಹೊಸ ಅವಕಾಶಗಳನ್ನು ಕೊಡುವಂತಹ ಯೋಜನೆಗಳನ್ನು, ಯಾವುದೇ ತಾರತಮ್ಯ ಇಲ್ಲದೆ ನಿಮ್ಮನ್ನು ಬಲಿಷ್ಟರನ್ನಾಗಿ ಮಾಡುವಂತಹ ಯೋಜನೆಗಳನ್ನು ರೂಪಿಸಿದೆವು. ಮತ್ತು ಖಚಿತವಾಗಿ ಹೇಳುವುದಾದರೆ, ನೀವು ಕೂಡಾ ನಿಮ್ಮ ಮಕ್ಕಳು ಬೇರೆಯವರನ್ನು ಆಶ್ರಯಿಸುತ್ತಾ ಬದುಕುವಂತಹ ಪರಿಸರವನ್ನು ಇಚ್ಚಿಸುತಿರಲಿಲ್ಲ. ನೀವು ಹೊತ್ತುಕೊಂಡಿರುವ ಸಮಸ್ಯೆಗಳನ್ನು , ಅನುಭವಿಸಿದ ಕಷ್ಟಗಳನ್ನು ನಿಮ್ಮ ಮಕ್ಕಳ ಮೇಲೆ ವರ್ಗಾಯಿಸಲು ಆಶಿಸುತ್ತಿರಲಿಲ್ಲ. ನಾವು ನಿಮ್ಮನ್ನು ಪರತಂತ್ರಕ್ಕೆ ಬದಲು ಸ್ವತಂತ್ರರನ್ನಾಗಿ ಮಾಡಲು ಇಚ್ಚಿಸಿದೆವು. ನಾವು ಈ ಮೊದಲು ಹೇಳಿದಂತೆ, ನಾವು ನಮ್ಮ ರೈತರು ಇಂಧನ/ವಿದ್ಯುತ್ ಉತ್ಪಾದಕರೂ ಆಗಬೇಕು ಎಂದು ಆಶಿಸಿದೆವು. ಈ ನಿಟ್ಟಿನಲ್ಲಿ ನಾವು ಕುಸುಮ್ ಯೋಜನೆಯನ್ನು ರೂಪಿಸಿದೆವು. ಇದರಡಿಯಲ್ಲಿ ಕೃಷಿ ಭೂಮಿಯ ಅಂಚಿನಲ್ಲಿ ಸೌರ ವಿದ್ಯುತ್ ಉತ್ಪಾದನಾ ಫಲಕಗಳನ್ನು ಸ್ಥಾಪಿಸಬಹುದು. ಇದರಿಂದ ರೈತರಿಗೆ ತಮ್ಮ ಕೃಷಿ ಕ್ಷೇತ್ರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ನಾವು ರೈತರು ಯಾರೊಬ್ಬರ ಆಶ್ರಯದಲ್ಲಿ ಇರುವಂತೆ ಮಾಡಲಿಲ್ಲ ಮತ್ತು ಅವರಿಗೆ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ ಎಂಬ ಭಾವನೆ ಬರುವಂತೆಯೂ ಮಾಡಲಿಲ್ಲ. ಅವರಿಗೆ ವಿದ್ಯುತ್ ಲಭಿಸುವಂತೆ ಮಾಡಿದೆವು.ಮಾತ್ರವಲ್ಲ ದೇಶಕ್ಕೂ ಇದರಿಂದ ಯಾವುದೇ ಹೊರೆ ಆಗಲಿಲ್ಲ.ಈ ರೀತಿಯಿಂದಾಗಿ ಅವರು ಸ್ವತಂತ್ರರಾದರು ಮತ್ತು ಈ ಯೋಜನೆಯನ್ನು ದೇಶದ ಹಲವು ಭಾಗಗಳಲ್ಲಿ ರೈತರು ಅನುಷ್ಟಾನಕ್ಕೆ ತಂದಿದ್ದಾರೆ. ಅದೇ ರೀತಿ ನಾವು ಉಜಾಲಾ ಯೋಜನೆಯನ್ನು ದೇಶಾದ್ಯಂತ ಆರಂಭ ಮಾಡಿದೆವು. ಮನೆಗಳಲ್ಲಿ ವಿದ್ಯುತ್ ಬಿಲ್ ಇಳಿಕೆಗೆ ಪ್ರಯತ್ನಗಳನ್ನು ಮಾಡಲಾಯಿತು. ದೇಶಾದ್ಯಂತ ಕೋಟ್ಯಾಂತರ ಎಲ್.ಇ.ಡಿ. ಬಲ್ಬ್ ಗಳನ್ನು ವಿತರಿಸಲಾಯಿತು ಮತ್ತು ಇಲ್ಲಿ ಉತ್ತರಾಖಂಡದಲ್ಲಿ ಕೂಡಾ ಅದನ್ನು ಮಾಡಲಾಯಿತು. ಈ ಮೊದಲು ಎಲ್.ಇ.ಡಿ. ಬಲ್ಬ್ ಗಳು 300 ರಿಂದ 400 ರೂ ಬೆಲೆ ಬಾಳುತ್ತಿದ್ದವು. ಈಗ ಇವು 40-50 ರೂಪಾಯಿಗಳಿಗೆ ಲಭ್ಯ ಇವೆ. ಇಂದು ಬಹುತೇಕ ಎಲ್ಲಾ ಮನೆಗಳಲ್ಲೂ ಎಲ್.ಇ.ಡಿ. ಬಲ್ಬ್ ಗಳನ್ನು ಬಳಸಲಾಗುತ್ತಿದೆ. ಮತ್ತು ಜನತೆಯ ವಿದ್ಯುತ್ ಬಿಲ್ ಕೂಡಾ ಇಳಿಕೆಯಾಗುತ್ತಿದೆ. ಹಲವು ಮಧ್ಯಮ ವರ್ಗದ ಮನೆಗಳಲ್ಲಿ ಮತ್ತು ಕೆಳ ಮಧ್ಯಮ ವರ್ಗದವರ ಮನೆಗಳಲ್ಲಿ ವಿದ್ಯುತ್ ಬಿಲ್ ತಿಂಗಳಿಗೆ 500-600 ರೂ ಗಳಷ್ಟು ಇಳಿಕೆಯಾಗಿದೆ.
ಸ್ನೇಹಿತರೇ
ಅದೇ ರೀತಿ ನಾವು ಮೊಬೈಲ್ ಫೋನುಗಳನ್ನು ಮತ್ತು ಅಂತರ್ಜಾಲವನ್ನು ಬಹಳ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಿದ್ದೇವೆ, ಇದರ ಪರಿಣಾಮವಾಗಿ ಗ್ರಾಮಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು ಆರಂಭಗೊಂಡು ಹಳ್ಳಿಗಳಲ್ಲಿ ಹಲವು ಸೌಲಭ್ಯಗಳು ಲಭ್ಯವಾಗುವಂತಾಗಿದೆ. ಈಗ ಹಳ್ಳಿಯ ನಿವಾಸಿಯೊಬ್ಬರು ರೈಲ್ವೇ ಟಿಕೇಟನು ಮುಂಗಡ ಕಾಯ್ದಿರಿಸಬೇಕಾಗಿದ್ದರೆ ಅವರು ನಗರಕ್ಕೆ ಬರಬೇಕಾಗಿಲ್ಲ. ಅವರು ದಿನದ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ, ಬಸ್ಸಿನ ಪ್ರಯಾಣದರವಾಗಿ 100-200-300 ರೂಪಾಯಿಗಳನ್ನು ಖರ್ಚು ಮಾಡಬೇಕಾಗಿಲ್ಲ. ಅವರು ತಮ್ಮ ಗ್ರಾಮದಲ್ಲಿಯೇ ಇರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆನ್ ಲೈನಿನಲ್ಲಿ ಮುಂಗಡ ರೈಲ್ವೇ ಟಿಕೇಟನ್ನು ಪಡೆಯಬಹುದು. ಇದೇ ರೀತಿ, ನೀವು ನೋಡಿರಬಹುದು ಉತ್ತರಾಖಂಡದ ಹೋಂ ಸ್ಟೇಗಳು ಹೇಗೆ ಹಳ್ಳಿಹಳ್ಳಿಗಳಲ್ಲಿ ಜನಪ್ರಿಯವಾಗಿವೆ ಎಂಬುದನ್ನು. ಕೆಲ ಸಮಯದ ಹಿಂದೆ ನಾನು ಉತ್ತರಾಖಂಡದಲ್ಲಿ ಹೋಂ ಸ್ಟೇಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದ ಜನರ ಜೊತೆ ಮಾತನಾಡುತ್ತಿದ್ದೆ. ಬಹಳಷ್ಟು ಮಂದಿ ಪ್ರವಾಸಿಗರು ಬಂದಾಗ ಹೊಟೇಲ್ ಗಳ ಲಭ್ಯತೆ ಒಂದು ಸಮಸ್ಯೆಯಾಗುತ್ತದೆ. ಈ ಮೊದಲಿಗೆ ಹೋಲಿಸಿದಾಗ ಪ್ರವಾಸಿಗರ ಸಂಖ್ಯೆ ಎರಡು ಪಟ್ಟು, ಮೂರು ಪಟ್ಟು ಹೆಚ್ಚಿದೆ. ಆದುದರಿಂದ ಅಷ್ಟೊಂದು ಸಂಖ್ಯೆಯಲ್ಲಿ ಹೊಟೇಲುಗಳನ್ನು ರಾತ್ರಿ ಹಗಲಾಗುವುದರೊಳಗೆ ನಿರ್ಮಾಣ ಮಾಡಲಾಗದು. ಆದರೆ ಪ್ರತೀ ಮನೆಗಳಲ್ಲಿಯೂ ಉತ್ತಮ ಸೌಲಭ್ಯಗಳೊಂದಿಗೆ ಕೊಠಡಿಯನ್ನು ನಿರ್ಮಾಣ ಮಾಡಬಹುದು. ಮತ್ತು ಉತ್ತರಾಖಂಡವು ಹೆಚ್ಚು ಸೌಲಭ್ಯಗಳೊಂದಿಗೆ ಹೋಂ ಸ್ಟೇಗಳನ್ನು ಅಭಿವೃದ್ಧಿ ಮಾಡುವ ಮೂಲಕ ದೇಶಕ್ಕೆ ಹೊಸ ದಿಕ್ಕನ್ನು ತೋರಿಸಬಲ್ಲದು ಎಂಬ ಬಗ್ಗೆ ನನಗೆ ನಂಬಿಕೆ ಇದೆ.
ಸ್ನೇಹಿತರೇ,
ನಾವು ಈ ರೀತಿಯ ಬದಲಾವಣೆಯನ್ನು ದೇಶದ ಎಲ್ಲಾ ಮೂಲೆಗಳಲ್ಲೂ ತರುತ್ತಿದ್ದೇವೆ. ಈ ಬದಲಾವಣೆಗಳೊಂದಿಗೆ ದೇಶವು 21 ನೇ ಶತಮಾನದಲ್ಲಿ ಮುನ್ನಡೆ ಸಾಧಿಸಲಿದೆ ಮತ್ತು ಉತ್ತರಾಖಂಡದ ಜನತೆ ಸ್ವಾವಲಂಬಿಗಳಾಗಿ ಸ್ವತಂತ್ರರಾಗಲಿದ್ದಾರೆ.
ಸ್ನೇಹಿತರೇ,
ಸಮಾಜದ ಅವಶ್ಯಕತೆಗಳಿಗೆ ಸಂಬಂಧಿಸಿ ಏನಾದರೂ ಮಾಡುತ್ತಿರುವುದಕ್ಕೂ ಮತ್ತು ಮತಬ್ಯಾಂಕ್ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿರುವುದಕ್ಕೂ ಭಾರೀ ವ್ಯತ್ಯಾಸಗಳಿವೆ. ನಮ್ಮ ಸರಕಾರ ಬಡವರಿಗೆ ಉಚಿತ ಮನೆಗಳನ್ನು ಒದಗಿಸುತ್ತಿರುವಾಗ, ಅವರು ತಮ್ಮ ಜೀವಮಾನದ ಅತ್ಯಂತ ದೊಡ್ಡ ಚಿಂತೆಯಿಂದ ಮುಕ್ತರಾದರು. ನಮ್ಮ ಸರಕಾರ ಬಡವರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಒದಗಿಸುವುದರಿಂದ ಅವರು ತಮ್ಮ ಭೂಮಿ ಮಾರುವ ಪರಿಸ್ಥಿತಿಯಿಂದ ಪಾರಾದರು ಮತ್ತು ಇದರಿಂದ ಅವರು ಸಾಲದ ವಿಷವರ್ತುಲಕ್ಕೆ ಬೀಳುವುದು ತಪ್ಪಿತು. ಕೊರೊನಾ ಅವಧಿಯಲ್ಲಿ ನಮ್ಮ ಸರಕಾರ ಪ್ರತೀ ಬಡವರಿಗೆ ಉಚಿತ ಆಹಾರ ಧಾನ್ಯವನ್ನು ಖಾತ್ರಿಪಡಿಸಿದ್ದರಿಂದ ಅವರು ಹಸಿವೆಯಿಂದ ಪಾರಾದರು. ದೇಶದ ಬಡವರು, ಮಧ್ಯಮ ವರ್ಗದವರು ಈ ಸತ್ಯವನ್ನು ತಿಳಿದುಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಆದುದರಿಂದ ನಮ್ಮ ಯೋಜನೆಗಳಿಗೆ ದೇಶಾದ್ಯಂತ ಜನರಿಂದ ಆಶೀರ್ವಾದಗಳು ಲಭಿಸುತ್ತಿವೆ.
ಸ್ನೇಹಿತರೇ,
ದೇಶದ ಪ್ರಗತಿಯ ವೇಗ ಸ್ಥಗಿತಗೊಳ್ಳುವುದಿಲ್ಲ. ಬದಲು ಅದು ಸ್ವಾತಂತ್ರ್ಯದ ಈ ಪುಣ್ಯಕರ ಕಾಲದಲ್ಲಿ ಹೊಸ ನಂಬಿಕೆ ಮತ್ತು ದೃಢ ನಿರ್ಧಾರದೊಂದಿಗೆ ಮುನ್ನಡೆಯುತ್ತದೆ. ಉತ್ತರಾಖಂಡವು ಮುಂದಿನ ಐದು ವರ್ಷಗಳಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳಲಿದೆ. ಉತ್ತರಾಖಂಡ ಸಾಧಿಸಲಾರದ ಯಾವ ಗುರಿಯೂ ಇಲ್ಲ. ಈ ದೇವಭೂಮಿಯಲ್ಲಿ ಕಾರ್ಯರೂಪಕ್ಕೆ ಬಾರದಿರುವಂತಹ ಯಾವ ನಿರ್ಧಾರವೂ ಇರಲಾರದು. ಧಾಮೀಜೀಯವರಂತಹ ಯುವ ನಾಯಕತ್ವ ನಿಮಗಿದೆ ಮತ್ತು ಅವರ ಬಳಿ ಅನುಭವೀ ತಂಡವಿದೆ. ನಮ್ಮಲ್ಲಿ ಅನೇಕ ಹಿರಿಯ ನಾಯಕರಿದ್ದಾರೆ. ಉತ್ತರಾಖಂಡದ ಭವ್ಯ ಭವಿತವ್ಯಕ್ಕೆ ಬದ್ಧರಾಗಿರುವ 30-40 ವರ್ಷಗಳ ಅನುಭವ ಇರುವ ನಾಯಕರ ತಂಡವಿದೆ.
ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ,
ದೇಶಾದ್ಯಂತ ದುರ್ಬಲರಾಗಿ ಹರಡಿ ಹೋಗುತ್ತಿರುವವರಿಂದ ಉತ್ತರಾಖಂಡಕ್ಕೆ ಪುನಶ್ಚೇತನ ನೀಡುವುದು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದಗಳೊಂದಿಗೆ ಈ ಎರಡು ಇಂಜಿನ್ ಗಳ ಅಭಿವೃದ್ಧಿಯು ಉತ್ತರಾಖಂಡವನ್ನು ತ್ವರಿತವಾಗಿ ಅಭಿವೃದ್ಧಿ ಮಾಡಲಿದೆ. ಈ ನಂಬಿಕೆಯೊಂದಿಗೆ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ನಾನು ದೇವ ಭೂಮಿಗೆ ಬಂದಿರುವಾಗ, ವೀರ ಮಾತೆಯರ ಭೂಮಿಗೆ ಬಂದಾಗ ನಾನು ನನ್ನ ಭಾಷಣವನ್ನು ಕೆಲವು ಗೌರವಾರ್ಪಣೆಗಳೊಂದಿಗೆ ಮುಕ್ತಾಯಗೊಳಿಸುತ್ತೇನೆ:
जहाँ पवन बहे संकल्प लिए,
जहाँ पर्वत गर्व सिखाते हैं,
जहाँ ऊँचे नीचे सब रस्ते
बस भक्ति के सुर में गाते हैं
उस देव भूमि के ध्यान से ही
उस देव भूमि के ध्यान से ही
मैं सदा धन्य हो जाता हूँ
है भाग्य मेरा,
सौभाग्य मेरा,
मैं तुमको शीश नवाता हूँ।
मैं तुमको शीश नवाता हूँ।
और धन्य धन्य हो जाता हूँ।
तुम आँचल हो भारत माँ का
जीवन की धूप में छाँव हो तुम
बस छूने से ही तर जाएँ
सबसे पवित्र वो धरा हो तुम
बस लिए समर्पण तन मन से
मैं देव भूमि में आता हूँ
मैं देव भूमि में आता हूँ
है भाग्य मेरा
सौभाग्य मेरा
मैं तुमको शीश नवाता हूँ
मैं तुमको शीश नवाता हूँ।
और धन्य धन्य हो जाता हूँ।
जहाँ अंजुली में गंगा जल हो
जहाँ हर एक मन बस निश्छल हो
जहाँ गाँव गाँव में देश भक्त
जहाँ नारी में सच्चा बल हो
उस देवभूमि का आशीर्वाद लिए
मैं चलता जाता हूँ
उस देवभूमि का आशीर्वाद लिए
मैं चलता जाता हूँ
है भाग्य मेरा
सौभाग्य मेरा
मैं तुमको शीश नवाता हूँ
मैं तुमको शीश नवाता हूँ
और धन्य धन्य हो जाता हूँ
मंडवे की रोटी
हुड़के की थाप
हर एक मन करता
शिवजी का जाप
ऋषि मुनियों की है
ये तपो भूमि
कितने वीरों की
ये जन्म भूमि
में देवभूमि में आता हूँ
मैं तुमको शीश नवाता हूँ
और धन्य धन्य हो जाता हूँ
मैं तुमको शीश नवाता हूँ
और धन्य धन्य हो जाता हूँ
ನನ್ನೊಂದಿಗೆ ಹೇಳಿ, ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಬಹಳ ಧನ್ಯವಾದಗಳು.