ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ, ನಮಸ್ಕಾರ!
Pf-20 ಶಿಕ್ಷಣ ಸಚಿವರ ಸಮಾವೇಶ (ಸಮ್ಮೇಳನ)ಕ್ಕಾಗಿ ಭಾರತಕ್ಕೆ ಆಗಮಿಸಿರುವ ನಿಮ್ಮೆಲ್ಲರನ್ನು ನಾನು ಸ್ವಾಗತಿಸುತ್ತೇನೆ. ಶಿಕ್ಷಣವು ನಮ್ಮ ನಾಗರಿಕತೆಯನ್ನು ನಿರ್ಮಿಸಿದ ಭದ್ರ ಅಡಿಪಾಯ ಮಾತ್ರವಲ್ಲ, ಅದು ಮನುಕುಲದ ಭವಿಷ್ಯದ ವಾಸ್ತುಶಿಲ್ಪಿಯೂ ಆಗಿದೆ. ಶಿಕ್ಷಣ ಸಚಿವರಾಗಿ ನೀವು ಎಲ್ಲರ ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮೆಲ್ಲರ ನಿರಂತರ ಪ್ರಯತ್ನಗಳಲ್ಲಿ ಮನುಕುಲವನ್ನು ಮುನ್ನಡೆಸುತ್ತಿರುವ ಶೆರ್ಪಾಗಳಾಗಿದ್ದೀರಿ. ಭಾರತೀಯ ಗ್ರಂಥಗಳಲ್ಲಿ ಶಿಕ್ಷಣದ ಪಾತ್ರವು ಸಂತೋಷ ತರುವ ಪ್ರಮುಖ ಸಾಧನವಾಗಿದೆ ಎಂದು ವಿವರಿಸಲಾಗಿದೆ. ವಿದ್ಯಾ ದದಾತಿ ವಿನಯಂ ವಿನಯಾದ್ ಯಾತಿ ಪಾತ್ರತಾಮ್ । ಪಾತ್ರತ್ವಾತ್ ಧನಮಾಪ್ನೋತಿ ಧನಧರ್ಮಂ ತತಃ ಸುಖಮ್ ॥
ಇದರ ಅರ್ಥ: “ನಿಜವಾದ ಜ್ಞಾನವು ನಮ್ರತೆಯನ್ನು ನೀಡುತ್ತದೆ. ನಮ್ರತೆಯಿಂದ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಸಂಪತ್ತನ್ನು ಪಡೆಯುತ್ತಾನೆ. ಸಂಪತ್ತು ವ್ಯಕ್ತಿಯನ್ನು ಸತ್ಕರ್ಮಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಇದು ಸಂತೋಷವನ್ನು ತರುತ್ತದೆ. ಇದಕ್ಕಾಗಿಯೇ, ಭಾರತದಲ್ಲಿ ನಾವು ಸಮಗ್ರ ಮತ್ತು ಒಟ್ಟಾರೆ ಪ್ರಯಾಣ ಆರಂಭಿಸಿದ್ದೇವೆ. ತಳಮಟ್ಟದ ಅಥವಾ ಮೂಲಭೂತ ಸಾಕ್ಷರತೆಯು ನಮ್ಮ ಯುವಕರಿಗೆ ಭದ್ರ ನೆಲೆ ರೂಪಿಸುತ್ತದೆ ಎಂದು ನಾವು ನಂಬುತ್ತೇವೆ. ನಾವು ಅದನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತಿದ್ದೇವೆ. ಇದಕ್ಕಾಗಿ, ನಾವು ಪಠ್ಯವನ್ನು ಸಂಖ್ಯಾಶಾಸ್ತ್ರದೊಂದಿಗೆ ಓದುವ ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ಕುಶಲತೆಯ ರಾಷ್ಟ್ರೀಯ ಉಪಕ್ರಮ(ನ್ಯಾಷನಲ್ ಇನಿಶಿಯೇಟಿವ್ ಫಾರ್ ಪ್ರಾಫೀಶಿಯೆನ್ಸಿ ಇನ್ ರೀಡಿಂಗ್ ವಿಥ್ ಅಂಡರ್‌ಸ್ಟ್ಯಾಂಡಿಂಗ್ ಮತ್ತು ಸಂಖ್ಯಾಶಾಸ್ತ್ರ)ವನ್ನು ಅಥವಾ "ನಿಪುಣ ಭಾರತ" ಉಪಕ್ರಮ ಪ್ರಾರಂಭಿಸಿದ್ದೇವೆ. ನಿಮ್ಮ ಗುಂಪಿನಿಂದಲೂ ''ತಳಮಟ್ಟದ(ಫೌಂಡೇಶನಲ್) ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ'' ಆದ್ಯತೆಯಾಗಿ ಗುರುತಿಸಲ್ಪಟ್ಟಿದೆ ಎಂದು ನನಗೆ ಸಂತೋಷವಾಗಿದೆ. ಈ ನಿಟ್ಟಿನಲ್ಲಿ 2030ರ ವೇಳೆಗೆ ಕಾಲಮಿತಿಯಲ್ಲಿ ಕೆಲಸ ಮಾಡಲು ನಾವು ಸಂಕಲ್ಪ ಮಾಡಬೇಕು.
ಗಣ್ಯರೆ,
ಉತ್ತಮ ಆಡಳಿತದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶವಾಗಿರಬೇಕು. ಇದರಲ್ಲಿ ನಾವು ಹೊಸ ಇ-ಲರ್ನಿಂಗ್ ಅನ್ನು ವಿನೂತನವಾಗಿ ಅಳವಡಿಸಿಕೊಳ್ಳಬೇಕು ಮತ್ತು ಬಳಸಬೇಕು. ಭಾರತದಲ್ಲಿ ನಾವು ನಮ್ಮದೇ ಆದ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದೇವೆ. ಅಂತಹ ಒಂದು ಕಾರ್ಯಕ್ರಮವೆಂದರೆ ''ಯುವ ಮಹತ್ವಾಕಾಂಕ್ಷೆಯ ಮನಸ್ಸುಗಳಿಗಾಗಿ ಸಕ್ರಿಯ ಕಲಿಕೆಯ ಅಧ್ಯಯನ ವೆಬ್'', ಅಥವಾ ಸ್ವಯಂ. ಈ ಆನ್‌ಲೈನ್ ವೇದಿಕೆಯು 9ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ ಎಲ್ಲಾ ಕೋರ್ಸ್‌ಗಳನ್ನು ಆಯೋಜಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ದೂರದಿಂದಲೇ ಕಲಿಯಲು ಅನುವು ಮಾಡಿಕೊಡುತ್ತದೆ ಮತ್ತು ಪ್ರವೇಶ, ಸಮಾನ ಪಾಲು ಮತ್ತು ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸುತ್ತದೆ. 34 ದಶಲಕ್ಷ ದಾಖಲಾತಿಗಳು ಮತ್ತು 9 ಸಾವಿರಕ್ಕೂ ಹೆಚ್ಚು ಕೋರ್ಸ್‌ಗಳೊಂದಿಗೆ ಇದು ಅತ್ಯಂತ ಪರಿಣಾಮಕಾರಿ ಕಲಿಕಾ ಸಾಧನವಾಗಿದೆ. ನಾವು ''ಜ್ಞಾನ ಹಂಚಿಕೆಗಾಗಿ ಡಿಜಿಟಲ್ ಮೂಲಸೌಕರ್ಯ'' ಅಥವಾ ದೀಕ್ಷಾ ಪೋರ್ಟಲ್ ಅನ್ನು ಸಹ ರೂಪಿಸಿದ್ದೇವೆ. ಇದು ದೂರದ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದವರನ್ನು ಗುರಿಯಾಗಿಸಿಕೊಂಡಿದೆ. ದೂರಶಿಕ್ಷಣದ ಮೂಲಕ ಶಾಲಾ ಶಿಕ್ಷಣ ನೀಡಲು ಶಿಕ್ಷಕರು ಇದನ್ನು ಬಳಸಿಕೊಳ್ಳುತ್ತಾರೆ. ಇದು 29 ಭಾರತೀಯ ಭಾಷೆಗಳು ಮತ್ತು 7 ವಿದೇಶಿ ಭಾಷೆಗಳಲ್ಲಿ ಕಲಿಕೆಯನ್ನು ಬೆಂಬಲಿಸುತ್ತದೆ. ಇದು 137 ದಶಲಕ್ಷ ಕೋರ್ಸ್ ಗಳನ್ನು ಪೂರ್ಣಗೊಳಿಸಲು ಸಾಕ್ಷಿಯಾಗಿದೆ. ಈ ಅನುಭವಗಳು ಮತ್ತು ಸಂಪನ್ಮೂಲಗಳನ್ನು ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗದಲ್ಲಿ ಇರುವವರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಭಾರತ ಸಂತೋಷ ಪಡುತ್ತಿದೆ.
ಗಣ್ಯರೆ,
ನಮ್ಮ ಯುವ ಸಮುದಾಯದ ಭವಿಷ್ಯ ಸಿದ್ಧಗೊಳಿಸಲು ನಾವು ನಿರಂತರವಾಗಿ ಕೌಶಲ್ಯ, ಮರುಕೌಶಲ್ಯ ಮತ್ತು ಕುಶಲತೆಯನ್ನು ಹೆಚ್ಚಿಸಬೇಕು. ವಿಕಸನಗೊಳ್ಳುತ್ತಿರುವ ಕೆಲಸದ ಅಡಕಗಳು ಮತ್ತು ಅಭ್ಯಾಸಗಳೊಂದಿಗೆ ನಾವು ಅವರ ಸಾಮರ್ಥ್ಯಗಳನ್ನು ಜೋಡಿಸಬೇಕಾಗಿದೆ. ಭಾರತದಲ್ಲಿ ನಾವು ಕೌಶಲ್ಯ ನಕ್ಷೆಯನ್ನು ಕೈಗೊಳ್ಳುತ್ತಿದ್ದೇವೆ. ನಮ್ಮ ಶಿಕ್ಷಣ, ಕೌಶಲ್ಯ ಮತ್ತು ಕಾರ್ಮಿಕ ಸಚಿವಾಲಯಗಳು ಈ ಉಪಕ್ರಮದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಜಿ-20 ದೇಶಗಳು ಜಾಗತಿಕ ಮಟ್ಟದಲ್ಲಿ ಕೌಶಲ್ಯ ಮ್ಯಾಪಿಂಗ್ ಕೈಗೊಳ್ಳಬಹುದು ಮತ್ತು ಕೌಶಲ್ಯ ಅಂತರವನ್ನು ಪತ್ತೆ ಮಾಡಬಹುದು.
ಗಣ್ಯರೆ,
ಡಿಜಿಟಲ್ ತಂತ್ರಜ್ಞಾನವು ಸಮಾನ ಅವಕಾಶಗಳ ಸಾಧನ(ಈಕ್ವಲೈಜರ್)ವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಶಿಕ್ಷಣಕ್ಕೆ ಪ್ರವೇಶ ಹೆಚ್ಚಿಸುವಲ್ಲಿ ಮತ್ತು ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವಲ್ಲಿ ಇದು ಬಲವಾದ ಗುಣಕವಾಗಿದೆ. ಇಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಲಿಕೆ, ಕೌಶಲ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಮರ್ಥ್ಯವನ್ನು ಒದಗಿಸುತ್ತದೆ. ಅವಕಾಶಗಳ ಜತೆಗೆ ತಂತ್ರಜ್ಞಾನವೂ ಸವಾಲುಗಳನ್ನು ಒಡ್ಡುತ್ತದೆ. ಈ ನಿಟ್ಟಿನಲ್ಲಿ ನಾವು ಸರಿಯಾದ ಸಮತೋಲನವನ್ನು ಕಾಪಾಡಬೇಕು. ಜಿ-20 ಸಮಾವೇಶ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಮಹನೀಯರೆ,
ಭಾರತದಲ್ಲಿ, ನಾವು ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಿದ್ದೇವೆ. ದೇಶಾದ್ಯಂತ 10 ಸಾವಿರ ''ಅಟಲ್ ಟಿಂಕರಿಂಗ್ ಲ್ಯಾಬ್ಸ್'' ಸ್ಥಾಪಿಸಿದ್ದೇವೆ. ಇವು ನಮ್ಮ ಶಾಲಾ ಮಕ್ಕಳಿಗೆ ಸಂಶೋಧನೆ ಮತ್ತು ನಾವೀನ್ಯತೆ ನರ್ಸರಿಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಲ್ಯಾಬ್‌ಗಳಲ್ಲಿ 7.5 ದಶಲಕ್ಷಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು 1.5 ದಶಲಕ್ಷಕ್ಕಿಂತ ನವೀನ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿ-20 ದೇಶಗಳು ತಮ್ಮ ಸಾಮರ್ಥ್ಯಗಳೊಂದಿಗೆ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ ಭಾಗದಲ್ಲಿ. ಹೆಚ್ಚಿನ ಸಂಶೋಧನಾ ಸಹಯೋಗಗಳಲ್ಲಿ ಮಾರ್ಗೋಪಾಯಗಳನ್ನು ರೂಪಿಸುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.
ಮಹನೀಯರೆ,
ನಿಮ್ಮ ಸಮಾವೇಶವು ನಮ್ಮ ಮಕ್ಕಳು ಮತ್ತು ಯುವಕರ ಭವಿಷ್ಯಕ್ಕಾಗಿ ಅಪಾರ ಮಹತ್ವವನ್ನು ಹೊಂದಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಿಮ್ಮ ಗುಂಪು ಹಸಿರು ಪರಿವರ್ತನೆ, ಡಿಜಿಟಲ್ ರೂಪಾಂತರಗಳು ಮತ್ತು ಮಹಿಳಾ ಸಬಲೀಕರಣವನ್ನು ವೇಗವರ್ಧಕಗಳಾಗಿ ಗುರುತಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಎಲ್ಲ ಪ್ರಯತ್ನಗಳಿಗೆ ಶಿಕ್ಷಣವೇ ಮೂಲ. ಈ ಗುಂಪು ಎಲ್ಲರನ್ನೂ ಒಳಗೊಂಡ, ಕ್ರಿಯೆ ಆಧಾರಿತ ಮತ್ತು ಭವಿಷ್ಯ ಸಿದ್ಧ ಶಿಕ್ಷಣ ಕಾರ್ಯಸೂಚಿಯೊಂದಿಗೆ ಹೊರಬರುತ್ತದೆ ಎಂಬ ವಿಶ್ವಾಸ ನನಗಿದೆ. ಇದು ವಸುಧೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ನಿಜವಾದ ಆತ್ಮದಲ್ಲಿ ಇಡೀ ಜಗತ್ತಿಗೆ ಪ್ರಯೋಜನ ನೀಡುತ್ತದೆ. ನೀವೆಲ್ಲರೂ ಫಲಪ್ರದ ಮತ್ತು ಯಶಸ್ವಿ ಸಭೆಗಳನ್ನು ನಡೆಸುತ್ತೀರಿ ನಾನು ಬಯಸುತ್ತೇನೆ, ನಂಬುತ್ತೇನೆ.
ತುಂಬು ಧನ್ಯವಾದಗಳು