ಗಾಯತ್ರಿ ಪರಿವಾರದ ಎಲ್ಲಾ ಭಕ್ತರು, ಸಮಾಜ ಸೇವಕರು ಮತ್ತು ಸಾಧಕರು, ಮಹಿಳೆಯರು ಮತ್ತು ಸಜ್ಜನರೇ,
ಗಾಯತ್ರಿ ಪರಿವಾರ ಆಯೋಜಿಸುವ ಯಾವುದೇ ಕಾರ್ಯಕ್ರಮವು ಪಾವಿತ್ರ್ಯತೆಯೊಂದಿಗೆ ಕೂಡಿರುತ್ತೆ, ಅದರಲ್ಲಿ ಭಾಗವಹಿಸುವುದು ದೊಡ್ಡ ಅದೃಷ್ಟದ ವಿಷಯವಾಗಿದೆ. ದೇವ ಸಂಸ್ಕೃತಿ ವಿಶ್ವವಿದ್ಯಾನಿಲಯವು ಇಂದು ಆಯೋಜಿಸಿರುವ ಅಶ್ವಮೇಧ ಯಾಗದ ಭಾಗವಾಗಲು ನನಗೆ ಸಂತೋಷವಾಗಿದೆ. ಈ ಅಶ್ವಮೇಧ ಯಾಗದಲ್ಲಿ ಭಾಗವಹಿಸಲು ಗಾಯತ್ರಿ ಪರಿವಾರದಿಂದ ಆಹ್ವಾನ ಬಂದಾಗ ಸಮಯದ ಅಭಾವದಿಂದ ನನಗೆ ಸಂಕಷ್ಟ ಎದುರಾಗಿದೆ. ವೀಡಿಯೋ ಮೂಲಕ ಈ ಕಾರ್ಯಕ್ರಮವನ್ನು ನೋಡಬೇಕಾಗಿದೆ. ಸಮಸ್ಯೆಯೆಂದರೆ ಅಶ್ವಮೇಧ ಯಾಗವನ್ನು ಸಾಮಾನ್ಯ ಮನುಷ್ಯನು ಶಕ್ತಿಯ ವಿಸ್ತರಣೆ ಎಂದು ಗ್ರಹಿಸುತ್ತಾನೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಶ್ವಮೇಧ ಯಾಗವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಸಹಜ. ಆದರೆ ಈ ಅಶ್ವಮೇಧ ಯಾಗವು ಆಚಾರ್ಯ ಶ್ರೀರಾಮ ಶರ್ಮರ ಚೈತನ್ಯವು ಮುನ್ನಡೆಸುತ್ತಿದೆ ಮತ್ತು ಅಶ್ವಮೇಧ ಯಾಗವನ್ನು ಮರು ವ್ಯಾಖ್ಯಾನಿಸುತ್ತಿದೆ ಎಂದು ನಾನು ಕಂಡುಕೊಂಡೆ, ಆದ್ದರಿಂದ ನನ್ನ ಎಲ್ಲಾ ಸಂದಿಗ್ಧತೆಗಳು ಮಾಯವಾದವು.
ಇಂದು, ಗಾಯತ್ರಿ ಪರಿವಾರದ ಅಶ್ವಮೇಧ ಯಾಗವು ಸಾಮಾಜಿಕ ಸಂಕಲ್ಪಕ್ಕಾಗಿ ಒಂದು ದೊಡ್ಡ ಅಭಿಯಾನವಾಗಿದೆ. ಈ ಅಭಿಯಾನದ ಮೂಲಕ ಲಕ್ಷಾಂತರ ಯುವಕರು ವ್ಯಸನ ಮತ್ತು ದುಶ್ಚಟಳಿಂದ ಪಾರಾಗುತ್ತಾರೆ ಮತ್ತು ಅವರ ಅಪರಿಮಿತ ಶಕ್ತಿಯು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತದೆ. ಯುವಕರು ನಿಜಕ್ಕೂ ನಮ್ಮ ದೇಶದ ಭವಿಷ್ಯ. ಯುವಕರ ಅಭಿವೃದ್ಧಿಯೇ ದೇಶದ ಭವಿಷ್ಯದ ಅಭಿವೃದ್ಧಿ. ‘ಅಮೃತ ಕಾಲ’ದ ಸಮಯದಲ್ಲಿ ಭಾರತವನ್ನು ಅಭಿವೃದ್ಧಿಪಡಿಸುವುದು ಯುವ ಸಮೂಹದ ಜವಾಬ್ದಾರಿಯಾಗಿದೆ. ಈ ಯಾಗಕ್ಕಾಗಿ ನಾನು ಗಾಯತ್ರಿ ಪರಿವಾರಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನನಗೆ ವೈಯಕ್ತಿಕವಾಗಿ ಗಾಯತ್ರಿ ಪರಿವಾರದ ನೂರಾರು ಸದಸ್ಯರ ಪರಿಚಯವಿದೆ. ನೀವೆಲ್ಲರೂ ಭಕ್ತಿಯಿಂದ ಸಮಾಜವನ್ನು ಸಶಕ್ತಗೊಳಿಸುವಲ್ಲಿ ತೊಡಗಿದ್ದೀರಿ. ಶ್ರೀರಾಮ್ ಶರ್ಮಾ ಜಿ ಅವರ ತರ್ಕ, ಅವರ ಸತ್ಯಗಳು, ದುಷ್ಟರ ವಿರುದ್ಧ ಹೋರಾಡುವ ಅವರ ಧೈರ್ಯ, ಅವರ ವೈಯಕ್ತಿಕ ಜೀವನದ ಪರಿಶುದ್ಧತೆ, ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಆಚಾರ್ಯ ಶ್ರೀರಾಮ ಶರ್ಮಾ ಜಿ ಮತ್ತು ಮಾತಾ ಭಗವತಿ ಜೀ ಅವರ ನಿರ್ಣಯಗಳನ್ನು ಮುಂದುವರಿಸುತ್ತಿರುವ ರೀತಿ ನಿಜವಾಗಿಯೂ ಶ್ಲಾಘನೀಯ.
ಸ್ನೇಹಿತರೇ,
ಯಾವುದ ವ್ಯಸನವನ್ನು ನಿಯಂತ್ರಿಸದಿದ್ದರೆ, ಅದು ವ್ಯಕ್ತಿಯ ಇಡೀ ಜೀವನವನ್ನು ಹಾಳುಮಾಡುತ್ತದೆ. ಇದರಿಂದ ಸಮಾಜ ಮತ್ತು ದೇಶಕ್ಕೆ ದೊಡ್ಡ ಹಾನಿಯಾಗುತ್ತದೆ. ಆದ್ದರಿಂದ, ನಮ್ಮ ಸರ್ಕಾರವು ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು. ನನ್ನ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಇಲ್ಲಿಯವರೆಗೆ, ಭಾರತ ಸರ್ಕಾರದ ಈ ಅಭಿಯಾನಕ್ಕೆ 11 ಕೋಟಿಗೂ ಹೆಚ್ಚು ಜನರು ಸೇರಿದ್ದಾರೆ. ಬೈಕ್ ಯಾತ್ರೆ, ಪ್ರತಿಜ್ಞಾವಿಧಿ ಕಾರ್ಯಕ್ರಮ, ಬೀದಿನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಸರ್ಕಾರದ ಈ ಅಭಿಯಾನದಲ್ಲಿ ಸಾಮಾಜಿಕ ಸಂಘಟನೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಸಹ ಭಾಗಿಯಾಗಿವೆ. ಗಾಯತ್ರಿ ಪರಿವಾರವೇ ಸರ್ಕಾರದ ಜೊತೆಗೂಡಿ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ದೇಶದ ಮೂಲೆ ಮೂಲೆಗೂ ವ್ಯಸನದ ವಿರುದ್ಧ ಸಂದೇಶವನ್ನು ಸಾರುವ ಪ್ರಯತ್ನ ಇದಾಗಿದೆ. ಒಣ ಹುಲ್ಲಿನ ರಾಶಿಗೆ ಬೆಂಕಿ ಬಿದ್ದಾಗ ಅದರ ಮೇಲೆ ಯಾರೋ ನೀರು ಎಸೆದರೆ, ಯಾರೋ ಮಣ್ಣನ್ನು ಎಸೆಯುವುದನ್ನು ನಾವು ನೋಡಿದ್ದೇವೆ. ಹೆಚ್ಚು ಬುದ್ಧಿವಂತ ವ್ಯಕ್ತಿಯು ಬೆಂಕಿಯಿಂದ ಸುರಕ್ಷಿತವಾಗಿರುವ ಹುಲ್ಲನ್ನು ತೆಗೆದುಹಾಕಲು ಪ್ರಯತ್ನಿಸುತ್ತಾನೆ. ಇಂದಿನ ಕಾಲದಲ್ಲಿ, ಗಾಯತ್ರಿ ಪರಿವಾರದ ಈ ಅಶ್ವಮೇಧ ಯಾಗವು ಈ ಚೇತನಕ್ಕೆ ಸಮರ್ಪಿತವಾಗಿದೆ. ನಮ್ಮ ಯುವಕರನ್ನು ವ್ಯಸನದಿಂದ ರಕ್ಷಿಸಬೇಕು ಮತ್ತು ವ್ಯಸನದ ಹಿಡಿತದಲ್ಲಿರುವವರನ್ನೂ ಮುಕ್ತಗೊಳಿಸಬೇಕು.
ಸ್ನೇಹಿತರೇ,
ನಮ್ಮ ದೇಶದ ಯುವಕರನ್ನು ನಾವು ದೊಡ್ಡ ಗುರಿಗಳೊಂದಿಗೆ ಸಂಪರ್ಕಿಸುತ್ತೇವೆ, ಇಂದು ದೇಶವು ‘ವಿಕಸಿತ್ ಭಾರತ್’ (ಅಭಿವೃದ್ಧಿ ಹೊಂದಿದ ಭಾರತ) ಗುರಿಯತ್ತ ಕೆಲಸ ಮಾಡುತ್ತಿದೆ, ಇಂದು ದೇಶವು ‘ಆತ್ಮನಿರ್ಭರ್’ (ಸ್ವಾವಲಂಬನೆ) ಗುರಿಯತ್ತ ಕೆಲಸ ಮಾಡುತ್ತಿದೆ. ಭಾರತ್ ನೇತೃತ್ವದಲ್ಲಿ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ವಿಷಯದೊಂದಿಗೆ ಜಿ-20 ಶೃಂಗಸಭೆಯನ್ನು ಆಯೋಜಿಸಿರುವುದನ್ನು ನೀವು ನೋಡಿದ್ದೀರಿ. ಇಂದು, 'ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್' ನಂತಹ ಹಂಚಿಕೆಯ ಯೋಜನೆಗಳಲ್ಲಿ ಕೆಲಸ ಮಾಡಲು ಜಗತ್ತು ಸಿದ್ಧವಾಗಿದೆ. 'ಒಂದು ಪ್ರಪಂಚ, ಒಂದು ಆರೋಗ್ಯʼ ದಂತಹ ಮಿಷನ್‌ಗಳು ನಮ್ಮ ಮಾನವ ಭಾವನೆಗಳು ಮತ್ತು ನಿರ್ಣಯಗಳಿಗೆ ಸಾಕ್ಷಿಯಾಗುತ್ತಿವೆ. ಇಂತಹ ರಾಷ್ಟ್ರೀಯ ಮತ್ತು ಜಾಗತಿಕ ಅಭಿಯಾನಗಳಲ್ಲಿ ನಾವು ದೇಶದ ಯುವಕರನ್ನು ಎಷ್ಟು ಹೆಚ್ಚು ತೊಡಗಿಸಿಕೊಳ್ಳುತ್ತೇವೆಯೋ ಅಷ್ಟು ಅವರನ್ನು ತಪ್ಪು ದಾರಿಯಲ್ಲಿ ಹೋಗದಂತೆ ಉಳಿಸಲಾಗುತ್ತದೆ. ಇಂದು ಸರ್ಕಾರ ಕ್ರೀಡೆಗೆ ಇಷ್ಟೊಂದು ಪ್ರೋತ್ಸಾಹ ನೀಡುತ್ತಿದೆ. ಇಂದು ಸರ್ಕಾರ ವಿಜ್ಞಾನ ಮತ್ತು ಸಂಶೋಧನೆಗೆ ಇಷ್ಟೊಂದು ಪ್ರೋತ್ಸಾಹ ನೀಡುತ್ತಿದೆ... ಚಂದ್ರಯಾನದ ಯಶಸ್ಸು ಯುವಕರಲ್ಲಿ ತಂತ್ರಜ್ಞಾನದ ಬಗ್ಗೆ ಹೊಸ ಕ್ರೇಜ್ ಹುಟ್ಟುಹಾಕಿದ್ದು ಹೇಗೆ ಎಂಬುದನ್ನು ನೀವು ನೋಡಿದ್ದೀರಿ... ಪ್ರತಿಯೊಂದು ಪ್ರಯತ್ನ, ಅಂತಹ ಅಭಿಯಾನವು ದೇಶದ ಯುವಜನರನ್ನು ತಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ಪ್ರೇರೇಪಿಸುತ್ತದೆ. ಅದು ಫಿಟ್ ಇಂಡಿಯಾ ಆಂದೋಲನವಾಗಲಿ ಅಥವಾ ಖೇಲೋ ಇಂಡಿಯಾ ಸ್ಪರ್ಧೆಯಾಗಲಿ... ಈ ಪ್ರಯತ್ನಗಳು ಮತ್ತು ಅಭಿಯಾನಗಳು ದೇಶದ ಯುವಕರನ್ನು ಪ್ರೇರೇಪಿಸುತ್ತವೆ. ಮತ್ತು ಪ್ರೇರಿತ ಯುವಕರು ವ್ಯಸನದ ಕಡೆಗೆ ತಿರುಗಲು ಸಾಧ್ಯವಿಲ್ಲ. ದೇಶದ ಯುವಜನತೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರ್ಕಾರವು 'ಮೇರಾ ಯುವ ಭಾರತ್' ಎಂಬ ಹೆಸರಿನಲ್ಲಿ ಒಂದು ದೊಡ್ಡ ಸಂಸ್ಥೆಯನ್ನು ಸಹ ರಚಿಸಿದೆ. ಕೇವಲ ಮೂರು ತಿಂಗಳಲ್ಲಿ ಸುಮಾರು 1.5 ಕೋಟಿ ಯುವಕರು ಈ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಇದು ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸುವಲ್ಲಿ ಯುವಶಕ್ತಿಯ ಸರಿಯಾದ ಬಳಕೆಯನ್ನು ಖಚಿತಪಡಿಸುತ್ತದೆ.
ಸ್ನೇಹಿತರೇ,
ಈ ವ್ಯಸನದ ಸಮಸ್ಯೆಯಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ಕುಟುಂಬ ಮತ್ತು ನಮ್ಮ ಕೌಟುಂಬಿಕ ಮೌಲ್ಯಗಳ ಪಾತ್ರ ಬಹಳ ಮುಖ್ಯವಾಗಿದೆ. ವ್ಯಸನದಿಂದ ಮುಕ್ತಿಯನ್ನು ನಾವು ತುಣುಕುಗಳಲ್ಲಿ ನೋಡಲಾಗುವುದಿಲ್ಲ. ಒಂದು ಕುಟುಂಬವು ದುರ್ಬಲಗೊಂಡಾಗ, ಕೌಟುಂಬಿಕ ಮೌಲ್ಯಗಳಲ್ಲಿ ಕುಸಿತ ಉಂಟಾದಾಗ, ಅದರ ಪ್ರಭಾವವು ಎಲ್ಲೆಡೆ ಸ್ಪಷ್ಟವಾಗಿ ಕಂಡುಬರುತ್ತದೆ. ಸಂಸಾರದಲ್ಲಿ ಸಾಮೂಹಿಕ ಭಾವನೆಗಳ ಕೊರತೆ ಇದ್ದಾಗ...ಕುಟುಂಬದವರು ಬಹುದಿನಗಳ ಕಾಲ ಒಬ್ಬರನ್ನೊಬ್ಬರು ಭೇಟಿಯಾಗದಿದ್ದಾಗ, ಒಟ್ಟಿಗೆ ಕೂರದೇ ಇದ್ದಾಗ... ಸುಖ-ದುಃಖಗಳನ್ನು ಹಂಚಿಕೊಳ್ಳದೇ ಇದ್ದಾಗ... ಅಪಾಯಗಳು ಹೆಚ್ಚು. ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮದೇ ಆದ ಮೊಬೈಲ್ ಫೋನ್‌ಗಳಲ್ಲಿ ಮುಳುಗಿದ್ದರೆ, ಅವರ ಪ್ರಪಂಚವು ತುಂಬಾ ಚಿಕ್ಕದಾಗುತ್ತದೆ. ಆದ್ದರಿಂದ, ದೇಶವನ್ನು ವ್ಯಸನ ಮುಕ್ತಗೊಳಿಸಲು ಕುಟುಂಬವು ಬಲಿಷ್ಠವಾಗುವುದು ಅಷ್ಟೇ ಮುಖ್ಯ.
ಸ್ನೇಹಿತರೇ,
ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾರತಕ್ಕಾಗಿ ಸಾವಿರ ವರ್ಷಗಳ ಹೊಸ ಪಯಣ ಆರಂಭವಾಗಿದೆ ಎಂದು ಹೇಳಿದ್ದೆ. ಇಂದು ನಾವು ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ಆ ಹೊಸ ಯುಗದ ಉದಯವನ್ನು ನೋಡುತ್ತಿದ್ದೇವೆ. ವೈಯಕ್ತಿಕ ಅಭಿವೃದ್ಧಿಯ ಮೂಲಕ ರಾಷ್ಟ್ರ ನಿರ್ಮಾಣದ ಈ ಮೆಗಾ ಅಭಿಯಾನದಲ್ಲಿ ನಾವು ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆ ಎಂದು ನನಗೆ ದೃಢವಾದ ನಂಬಿಕೆ ಇದೆ. ಈ ಸಂಕಲ್ಪದೊಂದಿಗೆ ಮತ್ತೊಮ್ಮೆ ಗಾಯತ್ರಿ ಪರಿವಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಎಲ್ಲರಿಗೂ ತುಂಬಾ ಧನ್ಯವಾದಗಳು!