ಗೌರವಾನ್ವಿತ ಮಹಿಳೆಯರೇ ಮತ್ತು ಮಹನೀಯರೇ, ತಮಗೆಲ್ಲರಿಗೂ ನಮಸ್ಕಾರ!
ಭೌತಿಕ ಸ್ವರೂಪದಲ್ಲಿ ನಡೆಯುತ್ತಿರುವ ಮೊದಲ ಜಿ20 ರಾಷ್ಟ್ರಗಳ ಭ್ರಷ್ಟಾಚಾರ-ವಿರೋಧಿ ಸಚಿವರ ಸಭೆಗೆ ನಾನು ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ನೊಬೆಲ್ ಪ್ರಶಸ್ತಿ ವಿಜೇತ ಗುರುದೇವ್ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ನಗರದಲ್ಲಿ - ಅಂದರೆ ಕೋಲ್ಕತ್ತಾದಲ್ಲಿ, ನೀವು ಪರಸ್ಪರ ಭೇಟಿ ಮಾಡುತ್ತಿದ್ದೀರಿ. ಅವರ ಬರಹಗಳಲ್ಲಿ, ಅವರು ದುರಾಶೆಯ ವಿರುದ್ಧ ಎಚ್ಚರಿಸಿದ್ದಾರೆ, ಏಕೆಂದರೆ ಅದು ಸತ್ಯವನ್ನು ಅರಿತುಕೊಳ್ಳುವುದನ್ನು ತಡೆಯುತ್ತದೆ. ಪುರಾತನ ಭಾರತೀಯ ಉಪನಿಷತ್ತುಗಳು ಸಹ ‘ಮಾ ಗ್ರಿಧ’ವನ್ನು ಬಯಸುತ್ತವೆ, ಅಂದರೆ “ದುರಾಸೆ ಬೇಡ” ಎಂದೇ ಹೇಳುತ್ತವೆ.
ಸ್ನೇಹಿತರೇ,
ಭ್ರಷ್ಟಾಚಾರದ ಪ್ರಭಾವವನ್ನು ಅಂತಿಮವಾಗಿ ಬಡವರು ಮತ್ತು ಅಂಚಿನಲ್ಲಿರುವವರು ಹೆಚ್ಚು ಅನುಭವಿಸುತ್ತಾರೆ. ಇದು ಸಂಪನ್ಮೂಲ ಬಳಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಾರುಕಟ್ಟೆಗಳನ್ನು ವಿರೂಪಗೊಳಿಸುತ್ತದೆ. ಇದು ಸೇವೆಯ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತು, ಅಂತಿಮವಾಗಿ, ಇದು ಜನರ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಅರ್ಥಶಾಸ್ತ್ರದಲ್ಲಿ, ಕೌಟಿಲ್ಯನು ತನ್ನ ಜನರ ಕಲ್ಯಾಣವನ್ನು ಗರಿಷ್ಠಗೊಳಿಸಲು ರಾಜ್ಯದ ಸಂಪನ್ಮೂಲಗಳನ್ನು ಹೆಚ್ಚಿಸುವುದು ಸರ್ಕಾರದ ಕರ್ತವ್ಯ ಎಂದು ಪ್ರತಿಪಾದಿಸುತ್ತಾನೆ. ಈ ಗುರಿಯನ್ನು ಸಾಧಿಸಲು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಅಗತ್ಯವಿದೆ. ಮತ್ತು, ಅದಕ್ಕಾಗಿಯೇ, ನಮ್ಮ ಜನರಿಗಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆ.
ಸ್ನೇಹಿತರೇ,
ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ಕಟ್ಟುನಿಟ್ಟಿನ ನೀತಿಯನ್ನು ಭಾರತ ಹೊಂದಿದೆ. ಪಾರದರ್ಶಕ ಮತ್ತು ಜವಾಬ್ದಾರಿಯುತ ಪರಿಸರ ವ್ಯವಸ್ಥೆಯನ್ನು ರಚಿಸಲು ನಾವು ತಂತ್ರಜ್ಞಾನ ಮತ್ತು ಇ-ಆಡಳಿತವನ್ನು ಬಳಸಿಕೊಳ್ಳುತ್ತಿದ್ದೇವೆ. ಕಲ್ಯಾಣ ಯೋಜನೆಗಳು ಮತ್ತು ಸರ್ಕಾರಿ ಯೋಜನೆಗಳಲ್ಲಿನ ಸೋರಿಕೆಗಳು ಮತ್ತು ಅಂತರವನ್ನು ಮುಚ್ಚಲಾಗುತ್ತಿದೆ. ಭಾರತದಲ್ಲಿ ನೂರಾರು ದಶಲಕ್ಷ ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆಯ ಮೂಲಕ ಹಣವನ್ನು ಸ್ವೀಕರಿಸಿದ್ದಾರೆ. ಅಂತಹ ವರ್ಗಾವಣೆಗಳ ಮೌಲ್ಯವು 360 ಶತಕೋಟಿ ಡಾಲರ್ ಗಳನ್ನು ದಾಟಿದೆ, ಇದು ನಮಗೆ 33 ಶತಕೋಟಿ ಡಾಲರ್ ಗಳನ್ನು ಉಳಿಸಿದೆ. ನಾವು ವ್ಯವಹಾರಗಳಿಗೆ ವಿವಿಧ ಕಾರ್ಯವಿಧಾನಗಳನ್ನು ಸರಳಗೊಳಿಸಿದ್ದೇವೆ. ಸರ್ಕಾರಿ ಸೇವೆಗಳ ಆಟೊಮೇಷನ್ ಮತ್ತು ಡಿಜಿಟಲೀಕರಣವು ಸಹಾಯಧನ ಹಾಗು ಹಣಕಾಸು ಸೌಲಭ್ಯ ಪಡೆಯುವಲ್ಲಿರುವ ಅಡೆತಡೆಗಳನ್ನು ತೆಗೆದುಹಾಕಿದೆ. ನಮ್ಮ ಸರ್ಕಾರಿ ಇ-ಮಾರುಕಟ್ಟೆ, ಅಥವಾ ಜಿ.ಇ.ಎಂ. ಜಾಲತಾಣ, ಸರ್ಕಾರಿ ಸಂಗ್ರಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತಂದಿದೆ. ನಾವು ಆರ್ಥಿಕ ಅಪರಾಧಿಗಳನ್ನು ನಿಯಂತ್ರಿಸಲು ಅತ್ಯಂತ ಆಕ್ರಮಣಕಾರಿ ವ್ಯವಸ್ಥೆಗಳನ್ನು ಅನುಸರಿಸುತ್ತಿದ್ದೇವೆ. ನಾವು 2018 ರಲ್ಲಿ ಆರ್ಥಿಕ ಅಪರಾಧಿಗಳ ಕಾಯಿದೆಯನ್ನು ಜಾರಿಗೊಳಿಸಿದ್ದೇವೆ. ಅಂದಿನಿಂದ, ನಾವು ಆರ್ಥಿಕ ಅಪರಾಧಿಗಳು ಮತ್ತು ಪರಾರಿಯಾದ ಆರ್ಥಿಕ ಅಪರಾಧಿಗಳಿಂದ 1.8 ಶತಕೋಟಿ ಡಾಲರ್ ಗಳಷ್ಟು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ. “ಮನಿ ಲಾಂಡರಿಂಗ್ ತಡೆ ಕಾಯ್ದೆ”ಯಡಿ, ನಮ್ಮ ಸರ್ಕಾರವು 2014 ರಿಂದ 12 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಘನತೆವೆತ್ತ ಮಹನೀಯರೇ,
ಪಲಾಯನಗೈದ ಆರ್ಥಿಕ ಅಪರಾಧಿಗಳ ಸಮಸ್ಯೆಯು ಎಲ್ಲಾ ಜಿ20 ದೇಶಗಳಿಗೆ ಮತ್ತು ಜಾಗತಿಕ ದಕ್ಷಿಣಕ್ಕೆ ಸವಾಲಾಗಿದೆ. 2014 ರಲ್ಲಿ ನನ್ನ ಮೊದಲ ಜಿ-20 ಶೃಂಗಸಭೆಯಲ್ಲಿ, ನಾನು ಈ ವಿಷಯದ ಬಗ್ಗೆ ಮಾತನಾಡಿದ್ದೆ. 2018 ರಲ್ಲಿ ಜಿ-20 ಶೃಂಗಸಭೆಯಲ್ಲಿ, ಪರಾರಿಯಾದ (ಪ್ಯುಗಿಟಿವ್) ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮಕ್ಕಾಗಿ ಮತ್ತು ಆಸ್ತಿ ಮರುಪಡೆಯುವಿಕೆಗಾಗಿ ನಾನು ಒಂಬತ್ತು ಅಂಶಗಳ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದೆ. ಮತ್ತು, ನಿಮ್ಮ ಗುಂಪು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ಗಮನಿಸಲು ನನಗೆ ಸಂತೋಷವಾಗಿದೆ. ಮೂರು ಆದ್ಯತೆಯ ಕ್ಷೇತ್ರಗಳಲ್ಲಿ ಕ್ರಮ-ಆಧಾರಿತ ಉನ್ನತ ಮಟ್ಟದ ತತ್ವಗಳನ್ನು ನಾವು ಸ್ವಾಗತಿಸುತ್ತೇವೆ: ಮಾಹಿತಿ ಹಂಚಿಕೆಯ ಮೂಲಕ ಕಾನೂನು ಜಾರಿ ಸಹಕಾರ; ಆಸ್ತಿ ಮರುಪಡೆಯುವಿಕೆ ಕಾರ್ಯವಿಧಾನಗಳನ್ನು ಬಲಪಡಿಸುವುದು; ಮತ್ತು ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳ ಸಮಗ್ರತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು. ಕಾನೂನು ಜಾರಿ ಏಜೆನ್ಸಿಗಳ ನಡುವಿನ ಅನೌಪಚಾರಿಕ ಸಹಕಾರದ ಬಗ್ಗೆ ತಿಳುವಳಿಕೆಯನ್ನು ತಲುಪಿದೆ ಎಂದು ನನಗೆ ಖುಷಿಯಾಗಿದೆ. ದೇಶದಗಡಿ ದಾಟುವಾಗ ಅಪರಾಧಿಗಳು ಕಾನೂನು ಲೋಪದೋಷಗಳನ್ನು ಬಳಸಿಕೊಳ್ಳುವುದನ್ನು ಇದು ತಡೆಯುತ್ತದೆ. ಸಮಯೋಚಿತ ಆಸ್ತಿ ಪತ್ತೆ ಮತ್ತು ಅಪರಾಧದ ಆದಾಯವನ್ನು ಗುರುತಿಸುವುದು ಅಷ್ಟೇ ಮುಖ್ಯ. ದೇಶಗಳು ತಮ್ಮ ದೇಶೀಯ ಆಸ್ತಿ ಮರುಪಡೆಯುವಿಕೆ ಕಾರ್ಯವಿಧಾನಗಳನ್ನು ಹೆಚ್ಚಿಸಲು ನಾವು ಪ್ರೋತ್ಸಾಹಿಸಬೇಕಾಗಿದೆ. ವಿದೇಶಿ ಆಸ್ತಿಗಳ ಮರುಪಡೆಯುವಿಕೆಯನ್ನು ತ್ವರಿತಗೊಳಿಸಲು, ಶಿಕ್ಷೆ(ಕನ್ವಿಕ್ಷನ್)-ಆಧಾರಿತ ಮುಟ್ಟುಗೋಲು ಹಾಕುವಿಕೆಯನ್ನು ಬಳಸಿಕೊಂಡು ಜಿ20 ದೇಶಗಳು ಒಂದು ಮಾದರಿ ಉದಾಹರಣೆಯನ್ನು ಪರಸ್ಪರ ಹೊಂದಿಸಬಹುದು. ನ್ಯಾಯಾಂಗ ಪ್ರಕ್ರಿಯೆಯ ನಂತರ ಅಪರಾಧಿಗಳ ತ್ವರಿತ ವಾಪಸಾತಿ ಮತ್ತು ಹಸ್ತಾಂತರವನ್ನು ಇದು ಖಚಿತಪಡಿಸುತ್ತದೆ. ಮತ್ತು, ಇದು ಭ್ರಷ್ಟಾಚಾರದ ವಿರುದ್ಧ ನಮ್ಮ ಜಂಟಿ ಹೋರಾಟದ ಬಗ್ಗೆ ಬಲವಾದ ಸಂಕೇತವನ್ನು ಕಳುಹಿಸುತ್ತದೆ.
ಘನತೆವೆತ್ತ ಮಹನೀಯರೇ,
ಜಿ20 ಸದಸ್ಯ ರಾಷ್ಟ್ರವಾಗಿ, ನಮ್ಮ ಸಾಮೂಹಿಕ ಪ್ರಯತ್ನಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಗಣನೀಯವಾಗಿ ಬೆಂಬಲಿಸುತ್ತವೆ. ವರ್ಧಿತ ಅಂತರರಾಷ್ಟ್ರೀಯ ಸಹಕಾರ ಮತ್ತು ಭ್ರಷ್ಟಾಚಾರದ ಮೂಲ ಕಾರಣಗಳನ್ನು ಪರಿಹರಿಸುವ ದೃಢವಾದ ಕ್ರಮಗಳ ಅನುಷ್ಠಾನದ ಮೂಲಕ ನಾವು ವ್ಯತ್ಯಾಸವನ್ನು ಮಾಡಬಹುದು. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟದಲ್ಲಿ ಲೆಕ್ಕಪರಿಶೋಧನಾ ಸಂಸ್ಥೆಗಳ ಪಾತ್ರವನ್ನು ನಾವು ಪರಿಗಣಿಸಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಆಡಳಿತಾತ್ಮಕ ಮತ್ತು ಕಾನೂನು ವ್ಯವಸ್ಥೆಗಳನ್ನು ಬಲಪಡಿಸುವುದರ ಜೊತೆಗೆ, ನಾವು ನಮ್ಮ ಮೌಲ್ಯ ವ್ಯವಸ್ಥೆಗಳಲ್ಲಿ ನೈತಿಕತೆ ಮತ್ತು ಸಮಗ್ರತೆಯ ಸಂಸ್ಕೃತಿಯನ್ನು ಬೆಳೆಸಬೇಕು. ಹಾಗೆ ಮಾಡುವುದರಿಂದ ಮಾತ್ರ ನಾವು ನ್ಯಾಯಯುತ ಮತ್ತು ಸುಸ್ಥಿರ ಸಮಾಜಕ್ಕೆ ಅಡಿಪಾಯ ಹಾಕಬಹುದು. ನಿಮ್ಮೆಲ್ಲರಿಗೂ ಉತ್ಪಾದಕ ಮತ್ತು ಯಶಸ್ವಿ ಸಭೆಯನ್ನು ನಾನು ಬಯಸುತ್ತೇನೆ.
ನಮಸ್ಕಾರ!