ಗೌರವಾನ್ವಿತ, ಮಹಿಳೆಯರೇ ಮತ್ತು ಮಹನೀಯರೇ,
ಎಲ್ಲರಿಗೂ ನಮಸ್ಕಾರ!
ನಾನು ನಿಮ್ಮೆಲ್ಲರನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಕೃಷಿ ಮಾನವ ನಾಗರಿಕತೆಯ ಹೃದಯಭಾಗವಾಗಿದೆ. ಆದ್ದರಿಂದ, ಕೃಷಿ ಮಂತ್ರಿಗಳಾಗಿ, ನಿಮ್ಮ ಕೆಲಸವು ಕೇವಲ ಆರ್ಥಿಕತೆಯ ಒಂದು ವಲಯವನ್ನು ನಿರ್ವಹಿಸುವುದಲ್ಲ. ಮಾನವೀಯತೆಯ ಭವಿಷ್ಯಕ್ಕಾಗಿ ನೀವು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೀರಿ. ಜಾಗತಿಕವಾಗಿ, ಕೃಷಿಯು 2.5 ಬಿಲಿಯನ್ ಜನರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ದಕ್ಷಿಣ ಭಾಗದಲ್ಲಿ ಕೃಷಿಯು GDP ಯ ಸುಮಾರು ಶೇಕಡ 30ರಷ್ಟು ಪಾಲು ಮತ್ತು 60 ಪ್ರತಿಶತದಷ್ಟು ಉದ್ಯೋಗಗಳನ್ನು ಹೊಂದಿದೆ. ಮತ್ತು ಇಂದು, ಈ ವಲಯವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಪೂರೈಕೆ, ನಿರಂತರ ಅಡೆತಡೆಗಳು, ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಪ್ರಭಾವದಿಂದ ಹದಗೆಟ್ಟಿದೆ. ಹವಾಮಾನ ಬದಲಾವಣೆಯು ಹವಾಮಾನ ವೈಪರೀತ್ಯವನ್ನು ಹೆಚ್ಚು ಹೆಚ್ಚಾಗಿ ಉಂಟುಮಾಡುತ್ತಿದೆ. ಈ ಸವಾಲುಗಳು ದಕ್ಷಿಣ ಭಾಗದಲ್ಲಿ ಹೆಚ್ಚು ಪರಿಣಾಮ ಬೀರಿದೆ.
ಸ್ನೇಹಿತರೇ,
ಈ ಅತ್ಯಂತ ಪ್ರಮುಖ ವಲಯದಲ್ಲಿ ಭಾರತ ಏನು ಮಾಡುತ್ತಿದೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನಮ್ಮ ನೀತಿಯು 'ಬ್ಯಾಕ್ ಟು ಬೇಸಿಕ್ಸ್' ಮತ್ತು 'ಮಾರ್ಚ್ ಟು ಫ್ಯೂಚರ್'ಗಳ ಸಮ್ಮಿಲನವಾಗಿದೆ. ನಾವು ನೈಸರ್ಗಿಕ ಕೃಷಿ ಹಾಗೂ ತಂತ್ರಜ್ಞಾನ ಯುಕ್ತ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ. ಭಾರತದಾದ್ಯಂತ ರೈತರು ಈಗ ನೈಸರ್ಗಿಕ ಕೃಷಿಯನ್ನು ಹೆಚ್ಚು ಅವಲಂಬಿಸಿದ್ದಾರೆ. ಕೃತಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸುತ್ತಿಲ್ಲ. ಭೂಮಿ ತಾಯಿಯನ್ನು ಪುನರುಜ್ಜೀವನಗೊಳಿಸುವುದು, ಮಣ್ಣಿನ ಆರೋಗ್ಯವನ್ನು ರಕ್ಷಿಸುವುದು, 'ಪ್ರತಿ ಹನಿ, ಹೆಚ್ಚು ಬೆಳೆ', ಹೆಚ್ಚು ಉತ್ಪಾದನೆ, ಮತ್ತು ಸಾವಯವ ಗೊಬ್ಬರಗಳು ಮತ್ತು ಕೀಟ ನಿರ್ವಹಣೆ ಪರಿಹಾರಗಳನ್ನು ಉತ್ತೇಜಿಸುವುದು ಆಗಿದೆ. ಅದೇ ಸಮಯದಲ್ಲಿ, ನಮ್ಮ ರೈತರು ಉತ್ಪಾದಕತೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಜಮೀನಿನಲ್ಲಿ ಸೌರಶಕ್ತಿ ಉತ್ಪಾದಿಸುತ್ತಿದ್ದಾರೆ.. ಬೆಳೆ ಆಯ್ಕೆಯನ್ನು ಅತ್ಯುತ್ತಮವಾಗಿಸಲು ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ಬಳಸುತ್ತಿದ್ದಾರೆ ಮತ್ತು ಪೋಷಕಾಂಶಗಳನ್ನು ಸಿಂಪಡಿಸಲು ಮತ್ತು ಮೇಲ್ವಿಚಾರಣೆ ಮಾಡಲು ಡ್ರೋನ್ಗಳನ್ನು ಬಳಸುತ್ತಿದ್ದಾರೆ. ಕೃಷಿಯಲ್ಲಿನ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಈ ''ಸಮ್ಮಿಳನ ವಿಧಾನ'' ಅತ್ಯುತ್ತಮ ಮಾರ್ಗವಾಗಿದೆ ಎಂದು ನಾನು ನಂಬುತ್ತೇನೆ.
ಸ್ನೇಹಿತರೇ,
ನಿಮಗೆ ತಿಳಿದಿರುವಂತೆ, 2023 ನೇ ವರ್ಷವನ್ನು ಅಂತಾರಾಷ್ಟ್ರೀಯ ರಾಗಿ ವರ್ಷ ಎಂದು ಆಚರಿಸಲಾಗುತ್ತದೆ. ನೀವು ಹೈದರಾಬಾದ್ನಲ್ಲಿ ಇದನ್ನು ಅನುಭವಿಸುತ್ತೀರಿ. ನಾವು ಭಾರತದಲ್ಲಿ ರಾಗಿ ಅಥವಾ ಶ್ರೀ ಅನ್ನ ಎಂದು ಕರೆಯುತ್ತೇವೆ. ಅದರ ಅನೇಕ ಭಕ್ಷ್ಯಗಳು ಇವೆ. ಈ ಸೂಪರ್ಫುಡ್ಗಳು ಸೇವಿಸಲು ಆರೋಗ್ಯಕರ ಮಾತ್ರವಲ್ಲ, ಅವು ಕಡಿಮೆ ನೀರನ್ನು ಬಳಸುವುದರ ಮೂಲಕ, ಕಡಿಮೆ ರಸಗೊಬ್ಬರಗಳ ಅಗತ್ಯತೆ ಮತ್ತು ಕಡಿಮೆ ಕೀಟ-ನಿರೋಧಕಗಳ ಮೂಲಕ ರೈತರ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತವೆ. ರಾಗಿ ಹೊಸದಲ್ಲ. ಅವುಗಳನ್ನು ಸಾವಿರಾರು ವರ್ಷಗಳಿಂದ ಬೆಳೆಸಲಾಗುತ್ತಿದೆ. ಆದರೆ ಮಾರುಕಟ್ಟೆಗಳು ಮತ್ತು ಮಾರ್ಕೆಟಿಂಗ್ ನಮ್ಮ ಆಯ್ಕೆಗಳ ಮೇಲೆ ಪ್ರಭಾವ ಬೀರಿದ್ದು, ಸಾಂಪ್ರದಾಯಿಕವಾಗಿ ಬೆಳೆದ ಆಹಾರ ಬೆಳೆಗಳ ಮೌಲ್ಯವನ್ನು ನಾವು ಮರೆತಿದ್ದೇವೆ. ಶ್ರೀ ಅನ್ನ ಮಿಲ್ಲೆಟ್ಸ್ ಅನ್ನು ನಮ್ಮ ಆಯ್ಕೆಯ ಆಹಾರವಾಗಿ ಸ್ವೀಕರಿಸೋಣ. ನಮ್ಮ ಬದ್ಧತೆಯ ಭಾಗವಾಗಿ, ರಾಗಿಯಲ್ಲಿನ ಉತ್ತಮ ಸಂಶೋಧನೆ ಮತ್ತು ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ಮಿಲೆಟ್ಸ್ ಸಂಶೋಧನಾ ಸಂಸ್ಥೆಯನ್ನು ಶ್ರೇಷ್ಠತೆಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಸ್ನೇಹಿತರೇ,
ಜಾಗತಿಕ ಆಹಾರ ಭದ್ರತೆಯನ್ನು ಸಾಧಿಸಲು ಸಾಮೂಹಿಕ ಕ್ರಮವನ್ನು ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ನಾನು ನಿಮಗೆ ಮಾಹಿತಿ ನೀಡುತ್ತೇನೆ. ನಾವು ಸುಸ್ಥಿರ ಮತ್ತು ಅಂತರ್ಗತ ಆಹಾರ ವ್ಯವಸ್ಥೆಯನ್ನು ನಿರ್ಮಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು, ಜಾಗತಿಕ ರಸಗೊಬ್ಬರ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಅದೇ ಸಮಯದಲ್ಲಿ, ಉತ್ತಮ ಮಣ್ಣಿನ ಆರೋಗ್ಯ, ಬೆಳೆ ಆರೋಗ್ಯ ಮತ್ತು ಇಳುವರಿಗಾಗಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಪ್ರಪಂಚದ ವಿವಿಧ ಭಾಗಗಳ ಸಾಂಪ್ರದಾಯಿಕ ಅಭ್ಯಾಸಗಳು ಪುನರುತ್ಪಾದಕ ಕೃಷಿಗೆ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ನಮಗೆ ಸ್ಫೂರ್ತಿ ನೀಡಬಹುದು. ನಾವೀನ್ಯತೆ ಮತ್ತು ಡಿಜಿಟಲ್ ತಂತ್ರಜ್ಞಾನದಿಂದ ನಾವು ನಮ್ಮ ರೈತರನ್ನು ಸಬಲೀಕರಣಗೊಳಿಸಬೇಕಾಗಿದೆ. ದಕ್ಷಿಣ ಭಾಗದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನಾವು ಪರಿಹಾರಗಳನ್ನು ಕೈಗೆಟುಕುವಂತೆ ಮಾಡಬೇಕು. ಕೃಷಿ ಮತ್ತು ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವ ತುರ್ತು ಅಗತ್ಯವೂ ಇದೆ, ಬದಲಿಗೆ ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸಲು ಹೂಡಿಕೆ ಮಾಡಬೇಕಾಗಿದೆ.
ಸ್ನೇಹಿತರೇ,
ನಮ್ಮ 'ಒಂದು ಭೂಮಿ'ಯನ್ನು ಅಭಿವೃದ್ಧಿಪಡಿಸುವುದು, ನಮ್ಮ 'ಒಂದು ಕುಟುಂಬ'ದಲ್ಲಿ ಸಾಮರಸ್ಯವನ್ನು ಸೃಷ್ಟಿಸುವುದು ಮತ್ತು ಉಜ್ವಲವಾದ 'ಒಂದು ಭವಿಷ್ಯ'ದ ಭರವಸೆಯನ್ನು ನೀಡಬೇಕಾಗಿದೆ. ''ಆಹಾರ ಭದ್ರತೆ ಮತ್ತು ಪೋಷಣೆಯ ಮೇಲಿನ ಡೆಕ್ಕನ್ ಉನ್ನತ ಮಟ್ಟದ ತತ್ವಗಳು''; ಮತ್ತು, ರಾಗಿ ಮತ್ತು ಇತರ ಧಾನ್ಯಗಳಿಗಾಗಿ ''ಮಹರ್ಷಿ'' ಎಂಬ ಎರಡು ಹೊಸ ಮಹತ್ವದ ಉಪಕ್ರಮಗಳ ಮೇಲೆ ಕೆಲಸ ಮಾಡುತ್ತಿದ್ದೀರಿ ಎಂದು ತಿಳಿಯಲು ನನಗೆ ಸಂತೋಷವಾಗಿದೆ. ಈ ಎರಡು ಉಪಕ್ರಮಗಳಿಗೆ ಬೆಂಬಲವು ಅಂತರ್ಗತ, ಸುಸ್ಥಿರ ಮತ್ತು ಚೇತರಿಸಿಕೊಳ್ಳುವ ಕೃಷಿಗೆ ಬೆಂಬಲ, ಪೂರಕ ಎಂದು ತಿಳಿಯುತ್ತೇನೆ. ನಿಮ್ಮ ಎಲ್ಲಾ ಚರ್ಚೆಗಳು ಯಶಸ್ವಿಯಾಗಬೇಕೆಂದು ನಾನು ಹಾರೈಸುತ್ತೇನೆ.
ಧನ್ಯವಾದಗಳು