ನಮಸ್ಕಾರ!
ಅಸ್ಸಾಂ ಸರ್ಕಾರದಲ್ಲಿ ಉದ್ಯೋಗ ಪಡೆದ ಎಲ್ಲಾ ಯುವಕರು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ. ಕಳೆದ ತಿಂಗಳು ಬಿಹು ಸಂದರ್ಭದಲ್ಲಿ ನಾನು ಅಸ್ಸಾಂಗೆ ಬಂದಿದ್ದೆ. ಆ ಅದ್ಧೂರಿ ಘಟನೆಯ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಂದು ನಡೆದ ಘಟನೆ ಅಸ್ಸಾಮಿ ಸಂಸ್ಕೃತಿಯ ವೈಭವೀಕರಣದ ಪ್ರತೀಕವಾಗಿತ್ತು. ಅಸ್ಸಾಂನ ಬಿಜೆಪಿ ಸರ್ಕಾರವು ಯುವಜನರ ಭವಿಷ್ಯದ ಬಗ್ಗೆ ತುಂಬಾ ಗಂಭೀರವಾಗಿದೆ ಎನ್ನುವುದರ ಸಂಕೇತವೇ ಇಂದಿನ ‘ರೋಜ್‌ಗಾರ್ ಮೇಳ’ (ಉದ್ಯೋಗ ಮೇಳ). ಅಸ್ಸಾಂನಲ್ಲಿ ಉದ್ಯೋಗ ಮೇಳದ ಮೂಲಕ ಈಗಾಗಲೇ 40,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಇಂದು ಸುಮಾರು 45,000 ಯುವಕರಿಗೆ ನೇಮಕಾತಿ ಪತ್ರ ಹಸ್ತಾಂತರಿಸಲಾಗಿದೆ. ಎಲ್ಲಾ ಯುವಕರಿಗೆ ಉಜ್ವಲ ಭವಿಷ್ಯ ಸಿಗಲೆಂದು ಹಾರೈಸುತ್ತೇನೆ.
ಸ್ನೇಹಿತರೆ,
ಇಂದು ಅಸ್ಸಾಂ ಬಿಜೆಪಿ ಸರ್ಕಾರವು ಶಾಂತಿ ಮತ್ತು ಅಭಿವೃದ್ಧಿಯ ಹೊಸ ಯುಗಕ್ಕೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಈ ವೇಗವು ಅಸ್ಸಾಂನಲ್ಲಿ ಸಕಾರಾತ್ಮಕತೆ ಮತ್ತು ಸ್ಫೂರ್ತಿ ಹರಡಿದೆ. ಸರ್ಕಾರಿ ನೇಮಕಾತಿಯನ್ನು ಹೆಚ್ಚು ಪಾರದರ್ಶಕಗೊಳಿಸಲು ಅಸ್ಸಾಂ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನನಗೆ ತಿಳಿದುಬಂದಿದೆ. ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು 'ಅಸ್ಸಾಂ ನೇರ ನೇಮಕಾತಿ ಆಯೋಗ' ರಚಿಸಲಾಗಿದೆ. ಹಿಂದೆ ಇದ್ದ ನೇಮಕ ಪ್ರಕ್ರಿಯೆಯಲ್ಲಿ ಪ್ರತಿ ಇಲಾಖೆಯು ವಿಭಿನ್ನ ನಿಯಮಗಳನ್ನು ಹೊಂದಿತ್ತು. ಇದರಿಂದಾಗಿ ಹಲವು ಬಾರಿ ನಿಗದಿತ ಸಮಯಕ್ಕೆ ನೇಮಕಾತಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಅಭ್ಯರ್ಥಿಗಳು ವಿವಿಧ ಇಲಾಖೆಗಳ ಹುದ್ದೆಗಳಿಗೆ ವಿವಿಧ ಪರೀಕ್ಷೆಗಳಿಗೆ ಹಾಜರಾಗಬೇಕಾಗಿತ್ತು. ಈಗ ಈ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಅಸ್ಸಾಂ ಸರ್ಕಾರ ನಿಜವಾಗಿಯೂ ಅನೇಕ ಅಭಿನಂದನೆಗಳಿಗೆ ಅರ್ಹವಾಗಿದೆ.
ಸ್ನೇಹಿತರೆ,
ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ನಾವೆಲ್ಲರೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದೇವೆ. ‘ಅಮೃತ್ ಕಾಲ’ದ ಮುಂದಿನ 25 ವರ್ಷಗಳು ನಿಮ್ಮ ಸೇವಾವಧಿಯಷ್ಟೇ ಮುಖ್ಯ. ನೀವು ಈಗ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಅಸ್ಸಾಂ ಸರ್ಕಾರದ ಮುಖವಾಗುತ್ತೀರಿ. ಈಗ ನಿಮ್ಮ ನಡವಳಿಕೆ, ಆಲೋಚನೆ, ಕೆಲಸ ಮಾಡುವ ವಿಧಾನ ಮತ್ತು ಸಾರ್ವಜನಿಕರ ಕಡೆಗೆ ನಿಮ್ಮ ಸೇವಾ ಮನೋಭಾವದ ಪ್ರಭಾವವು ದೊಡ್ಡದಾಗಿರುತ್ತದೆ. ಆದ್ದರಿಂದ, ನೀವು ಕೆಲವು ಸಮಸ್ಯೆಗಳಿಗೆ ಹೆಚ್ಚು ಕಾಳಜಿ ವಹಿಸಬೇಕು. ಇಂದು ನಮ್ಮ ಸಮಾಜವು ವೇಗವಾಗಿ ಮಹತ್ವಾಕಾಂಕ್ಷೆ ಹೊಂದುತ್ತಿದೆ. ಮೂಲಸೌಕರ್ಯಕ್ಕೂ ಜನರು ದಶಕಗಳ ಕಾಲ ಕಾಯುವ ದಿನಗಳು ಕಳೆದು ಹೋಗಿವೆ. ಇತ್ತೀಚಿನ ದಿನಗಳಲ್ಲಿ ಯಾವುದೇ ನಾಗರಿಕರು ಅಭಿವೃದ್ಧಿಗಾಗಿ ತುಂಬಾ ಕಾಯಲು ಬಯಸುವುದಿಲ್ಲ. ಟ್ವೆಂಟಿ-20 ಕ್ರಿಕೆಟ್‌ನ ಈ ಯುಗದಲ್ಲಿ, ದೇಶದ ಜನರು ತಕ್ಷಣದ ಫಲಿತಾಂಶಗಳನ್ನು ಬಯಸುತ್ತಾರೆ. ಆದ್ದರಿಂದ, ಸರ್ಕಾರಿ ಯಂತ್ರವು ಅದಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕಾಗುತ್ತದೆ. ದೇಶದ ನಾಗರಿಕರ ಆಶೋತ್ತರಗಳನ್ನು ಈಡೇರಿಸುವ ಗುರುತರ ಜವಾಬ್ದಾರಿಯೂ ಸರ್ಕಾರಿ ನೌಕರರ ಮೇಲಿದೆ. ನಿಮ್ಮನ್ನು ಈ ಸ್ಥಾನಕ್ಕೆ ತಂದ ಅದೇ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಅನುಸರಿಸಿ ನೀವು ಮುಂದುವರಿಯಬೇಕು. ನೀವು ಯಾವಾಗಲೂ ಕಲಿಯುತ್ತಲೇ ಇರಬೇಕು. ಆಗ ಮಾತ್ರ ಸಮಾಜ ಮತ್ತು ವ್ಯವಸ್ಥೆ ಎರಡನ್ನೂ ಸುಧಾರಿಸಲು ನೀವು ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ಸ್ನೇಹಿತರೆ,
ಇಂದು ಭಾರತವು ತನ್ನ ಮೂಲಸೌಕರ್ಯಗಳನ್ನು ವೇಗವಾಗಿ ಆಧುನೀಕರಿಸುತ್ತಿದೆ. ಹೊಸ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು, ಹೊಸ ರೈಲು ಮಾರ್ಗಗಳು, ಹೊಸ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಜಲಮಾರ್ಗಗಳ ನಿರ್ಮಾಣ ಯೋಜನೆಗಳಿಗೆ ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಪ್ರತಿಯೊಂದು ಮೂಲಸೌಕರ್ಯ ಯೋಜನೆಗೆ ಸರ್ಕಾರ ವ್ಯಯಿಸುತ್ತಿರುವ ಮೊತ್ತವು ಉದ್ಯೋಗ ಮತ್ತು ಸ್ವಯಂ ಉದ್ಯೋಗಗಳನ್ನು ಹೆಚ್ಚಿಸುತ್ತಿದೆ. ಉದಾಹರಣೆಗೆ ವಿಮಾನ ನಿಲ್ದಾಣ ನಿರ್ಮಾಣವಾಗಬೇಕಾದರೆ ಇಂಜಿನಿಯರ್‌ಗಳು, ತಂತ್ರಜ್ಞರು, ಲೆಕ್ಕ ಪರಿಶೋಧಕರು, ಕಾರ್ಮಿಕರು, ವಿವಿಧ ರೀತಿಯ ಉಪಕರಣಗಳು, ಉಕ್ಕು ಮತ್ತು ಸಿಮೆಂಟ್ ಅಗತ್ಯವಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಯೋಜನೆಯೊಂದಿಗೆ ಅನೇಕ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಇದೆ. ರೈಲ್ವೆ ಮಾರ್ಗಗಳ ವಿಸ್ತರಣೆ ಮತ್ತು ಅವುಗಳ ವಿದ್ಯುದ್ದೀಕರಣದಿಂದ ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗುತ್ತಿವೆ.
ಭಾರತವು ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುತ್ತಿದೆ ಮತ್ತು ಜೀವನ ಸೌಕರ್ಯವನ್ನು ಸುಧಾರಿಸುತ್ತದೆ ಎಂಬುದಕ್ಕೆ ದೇಶದ ಮೂಲೆ ಮೂಲೆಗಳಲ್ಲಿ ಉದ್ಯೋಗದ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. 2014ರಿಂದ ನಮ್ಮ ಸರ್ಕಾರ ದೇಶದಲ್ಲಿ ಬಡವರಿಗಾಗಿ ಸುಮಾರು 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದೆ. ಈ ಮನೆಗಳಿಗೆ ಶೌಚಾಲಯ, ಅನಿಲ ಸಂಪರ್ಕ, ನಲ್ಲಿ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಈ ಮನೆಗಳನ್ನು ನಿರ್ಮಿಸಲು ಮತ್ತು ಈ ಸೌಲಭ್ಯಗಳನ್ನು ಖಾತ್ರಿಪಡಿಸುವಲ್ಲಿ ಉತ್ಪಾದನೆ ಮತ್ತು ಸರಕು ಸಾಗಣೆ ವಲಯ, ನುರಿತ ಕೆಲಸಗಾರರು ಮತ್ತು ಕಾರ್ಮಿಕರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅಂದರೆ ವಿವಿಧ ಹಂತಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಆಯುಷ್ಮಾನ್ ಭಾರತ್ ಯೋಜನೆಯು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿ, ದೇಶದಲ್ಲಿ ಅನೇಕ ಹೊಸ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳನ್ನು ನಿರ್ಮಿಸಲಾಗಿದೆ. ಕೆಲವು ವಾರಗಳ ಹಿಂದೆ, ಏಮ್ಸ್ ಗುವಾಹಟಿ ಮತ್ತು ಇತರ 3 ವೈದ್ಯಕೀಯ ಕಾಲೇಜುಗಳನ್ನು ಅರ್ಪಿಸುವ ಸವಲತ್ತು ನನಗೆ ಸಿಕ್ಕಿತು. ಕಳೆದ ಕೆಲವು ವರ್ಷಗಳಲ್ಲಿ ಅಸ್ಸಾಂನಲ್ಲಿ ದಂತ ವೈದ್ಯಕೀಯ ಕಾಲೇಜುಗಳು ಕೂಡ ವಿಸ್ತರಿಸಿವೆ. ಇದರ ಪರಿಣಾಮವಾಗಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ.
ಸ್ನೇಹಿತರೆ,
ಇಂದು ಯುವಕರು ಅಂತಹ ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ, ಅದರ ಬಗ್ಗೆ 10 ವರ್ಷಗಳ ಹಿಂದೆ ಯಾರೂ ಊಹಿಸಿರಲಿಲ್ಲ. ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ದೇಶದಲ್ಲಿ ಲಕ್ಷಾಂತರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಕೃಷಿ, ಸಾಮಾಜಿಕ ಘಟನೆಗಳು, ಸಮೀಕ್ಷೆಗಳು ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಡ್ರೋನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ದೇಶದಲ್ಲಿ ನಡೆಯುತ್ತಿರುವ ಆತ್ಮನಿರ್ಭರ್ ಭಾರತ ಅಭಿಯಾನವು ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇಂದು ಭಾರತದಲ್ಲಿ ಕೋಟ್ಯಂತರ ಮೊಬೈಲ್ ಫೋನ್‌ಗಳು ತಯಾರಾಗುತ್ತಿವೆ. ಬ್ರಾಡ್‌ಬ್ಯಾಂಡ್ ಸಂಪರ್ಕವು ಪ್ರತಿ ಹಳ್ಳಿಯನ್ನು ತಲುಪುತ್ತಿದೆ. ಇದು ಉದ್ಯೋಗ ಮತ್ತು ಸ್ವಯಂ-ಉದ್ಯೋಗವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಿದೆ. ಸರ್ಕಾರದ ಒಂದು ಯೋಜನೆ ಅಥವಾ ಒಂದು ನಿರ್ಧಾರದ ಪರಿಣಾಮವು ಜನರ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ನೀವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು.
ಸ್ನೇಹಿತರೆ,
ಇಂದು ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ಈಶಾನ್ಯ ಭಾಗದ ಹೆಚ್ಚಿನ ಸಂಖ್ಯೆಯ ಯುವಕರು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಯುವಜನರ ಕನಸುಗಳನ್ನು ನನಸು ಮಾಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ನೀಡುವ ಮೂಲಕ ನಾವು ನವ ಭಾರತ ನಿರ್ಮಿಸುವತ್ತ ತ್ವರಿತ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಮತ್ತೊಮ್ಮೆ, ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.