ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಜಿ, ರಾಜ್ಯಸಭಾ ಉಪಾಧ್ಯಕ್ಷ ಶ್ರೀ ಹರಿವಂಶ್ ಜಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜಿ, ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ಶ್ರೀ ರಾಹುಲ್ ನಾರ್ವೇಕರ್ ಜಿ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಪೀಠಾಧಿಪತಿಗಳೇ, ಅಧ್ಯಕ್ಷೀಯ ಅಧಿಕಾರಿಗಳೇ,
ಮಹಿಳೆಯಯರೇ ಮತ್ತು ಮಹನೀಯರೇ,
ಅಖಿಲ ಭಾರತ ವಿಧಾನಸಭಾ ಅಧ್ಯಕ್ಷರ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ! ಈ ಬಾರಿಯ ಸಮ್ಮೇಳನಕ್ಕೆ ವಿಶೇಷ ಮಹತ್ವವಿದೆ. 75ನೇ ಗಣರಾಜ್ಯೋತ್ಸವದ ನಂತರ ಕೂಡಲೇ ಇದನ್ನು ನಡೆಸಲಾಗಿದೆ. ನಮ್ಮ ಸಂವಿಧಾನವು ಜನವರಿ 26 ರಂದು ಜಾರಿಗೆ ಬಂದಿತು, ಅದರ ಅಸ್ತಿತ್ವಕ್ಕೆ 75 ವರ್ಷಗಳು. ನಮ್ಮ ದೇಶದ ಪ್ರಜೆಗಳ ಪರವಾಗಿ ಸಂವಿಧಾನ ರಚನಾ ಸಭೆಯ ಎಲ್ಲ ಸದಸ್ಯರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ
ಶಾಸಕಾಂಗದ ಅಧ್ಯಕ್ಷತೆ ವಹಿಸುವ ಅಧಿಕಾರಿಗಳ ಈ ಸಮ್ಮೇಳನವು ನಮ್ಮ ಸಂವಿಧಾನ ಸಭೆಯಿಂದ ಕಲಿಯುವುದು ತುಂಬಾ ಇದೆ. ಸಂವಿಧಾನ ಸಭೆಯ ಸದಸ್ಯರು ವಿವಿಧ ವಿಚಾರಗಳು, ವಿಷಯಗಳು ಮತ್ತು ಅಭಿಪ್ರಾಯಗಳ ನಡುವೆ ಒಮ್ಮತವನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಮತ್ತು ಅವರು ಅದನ್ನು ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಈ ಸಮ್ಮೇಳನವು ಸಂವಿಧಾನ ಸಭೆಯ ಆದರ್ಶಗಳಿಂದ ಮತ್ತೊಮ್ಮೆ ಸ್ಫೂರ್ತಿ ಪಡೆಯುವ ಅವಕಾಶವನ್ನು ಎಲ್ಲಾ ಶಾಸಕಾಂಗದ ಅಧ್ಯಕ್ಷ ಅಧಿಕಾರಿಗಳಿಗೆ ಒದಗಿಸುತ್ತದೆ. ಮುಂದಿನ ಪೀಳಿಗೆಗೆ ಪರಂಪರೆಯಾಗಬಲ್ಲ ಇಂತಹ ಪ್ರಯತ್ನಗಳನ್ನು ನೀವೆಲ್ಲರೂ ನಿಮ್ಮ ಅಧಿಕಾರಾವಧಿಯಲ್ಲಿ ಮಾಡಬೇಕು.
ಸ್ನೇಹಿತರೇ
ಶಾಸಕಾಂಗ ಸಭೆಗಳ ಮತ್ತು ಸಮಿತಿಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಕುರಿತಾಗಿ ಪ್ರಾಥಮಿಕ ಗಮನವನ್ನು ಈ ಸಭೆಗೆ , ಈ ಬಾರಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಇವು ನಿರ್ಣಾಯಕ ವಿಷಯಗಳಾಗಿವೆ. ಇಂದು, ದೇಶದ ಜನರು ಜಾಗರೂಕತೆಯಿಂದ ಪ್ರತಿಯೊಬ್ಬ ಪ್ರತಿನಿಧಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದರಿಂದ, ಅಂತಹ ವಿಮರ್ಶೆಗಳು ಮತ್ತು ಚರ್ಚೆಗಳು ಅಪಾರ ಪ್ರಯೋಜನವನ್ನು ನೀಡುತ್ತವೆ. ವಿಧಾನಸಭೆಯಲ್ಲಿ ಪ್ರತಿನಿಧಿಗಳ ನಡವಳಿಕೆಯು ದೇಶದ ಸಂಸದೀಯ ವ್ಯವಸ್ಥೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸದನದಲ್ಲಿ ಪ್ರತಿನಿಧಿಗಳ ಸ್ಥಿರವಾದ ಸಕಾರಾತ್ಮಕ ನಡವಳಿಕೆಯನ್ನು ಹೇಗೆ ನಿರ್ವಹಿಸುವುದು ಮತ್ತು ಸದನದ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ಈ ಸಮ್ಮೇಳನದಿಂದ ಹೊರಹೊಮ್ಮುವ ಸಮಗ್ರ ಸಲಹೆಗಳು ಬಹಳ ಸಹಾಯಕವಾಗುತ್ತವೆ.
ಸ್ನೇಹಿತರೇ
ಸದನದಲ್ಲಿ ಸದಸ್ಯರೊಬ್ಬರು ಸದನದ ಶಿಷ್ಟಾಚಾರ ಉಲ್ಲಂಘಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಆಹ್ವಾನಿಸಿದರೆ ಅಂತಹ ತಪ್ಪುಗಳನ್ನು ತಡೆಯಲು ಹಾಗೂ ಮುಂದೆ ಸದನದ ಶಿಷ್ಟಾಚಾರವನ್ನು ಉಲ್ಲಂಘಿಸದಂತೆ ಸದನದ ಹಿರಿಯ ಸದಸ್ಯರು ಆ ಸದಸ್ಯನಿಗೆ ಸಲಹೆ ನೀಡುತ್ತಿದ್ದ ಕಾಲವೊಂದಿತ್ತು. ಆದರೆ, ಇಂದಿನ ದಿನಗಳಲ್ಲಿ, ಕೆಲವು ರಾಜಕೀಯ ಪಕ್ಷಗಳು ಅಂತಹ ಸದಸ್ಯರ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ಪ್ರಾರಂಭಿಸುವುದನ್ನು ನಾವು ಗಮನಿಸಿದ್ದೇವೆ. ಈ ಪರಿಸ್ಥಿತಿಯು ಸಂಸತ್ತಿನ ಅಥವಾ ಶಾಸಕಾಂಗ ಸಭೆಗೆ ಸ್ವೀಕಾರಾರ್ಹವಲ್ಲ. ಸಭಾ ಮರ್ಯಾದೆ, ಸದನದ ಅಲಂಕಾರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಈ ವೇದಿಕೆಯಲ್ಲಿ ಚರ್ಚಿಸುವುದು ಬಹುಮುಖ್ಯ.
ಸ್ನೇಹಿತರೇ
ಇಂದು ನಾವು ಮತ್ತೊಂದು ಬದಲಾವಣೆಗೆ ಸಾಕ್ಷಿಯಾಗಿದ್ದೇವೆ. ಈ ಹಿಂದೆ ಸದನದ ಯಾವುದೇ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಆದರೆ ಇಂದು ನ್ಯಾಯಾಲಯಗಳಿಂದ ಶಿಕ್ಷೆಗೆ ಗುರಿಯಾದ ಭ್ರಷ್ಟ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ಕಾರ್ಯಾಂಗಕ್ಕೆ ಅಗೌರವ, ನ್ಯಾಯಾಂಗಕ್ಕೆ ಅಗೌರವ, ಮತ್ತು ಭಾರತದ ಶ್ರೇಷ್ಠ ಸಂವಿಧಾನಕ್ಕೆ ಅಗೌರವ. ಈ ಸಮ್ಮೇಳನದಲ್ಲಿ ಈ ವಿಷಯದ ಕುರಿತು ನಡೆಯುವ ಚರ್ಚೆ ಮತ್ತು ರೂಪಿಸುವ ಉತ್ತಮ ಸಲಹೆಗಳು ಭವಿಷ್ಯಕ್ಕಾಗಿ ಹೊಸ ಮಾರ್ಗಸೂಚಿಯನ್ನು ರಚಿಸಲು ಸಹಾಯ ಮಾಡುತ್ತದೆ.
ಸ್ನೇಹಿತರೇ
ಈ ‘ಅಮೃತ ಕಾಲ’ದಲ್ಲಿ ದೇಶವು ನಿಗದಿಪಡಿಸುವ ಗುರಿಗಳನ್ನು ಸಾಕಾರಗೊಳಿಸುವಲ್ಲಿ ಪ್ರತಿ ರಾಜ್ಯ ಸರ್ಕಾರ ಮತ್ತು ಅದರ ಶಾಸಕಾಂಗ ಸಭೆಯ ಪಾತ್ರವು ಬಹಳ ಮುಖ್ಯವಾಗಿದೆ. ನಮ್ಮ ರಾಜ್ಯಗಳು ಪ್ರಗತಿ ಹೊಂದಿದಾಗ ಮಾತ್ರ ಭಾರತದ ಪ್ರಗತಿಯಾಗುತ್ತದೆ. ಮತ್ತು ರಾಜ್ಯಗಳ ಪ್ರಗತಿಯು ಅವರ ಶಾಸಕಾಂಗ ಮತ್ತು ಕಾರ್ಯಾಂಗವು ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಂಭವಿಸುತ್ತದೆ. ಶಾಸಕಾಂಗವು ತನ್ನ ರಾಜ್ಯಕ್ಕಾಗಿ ಅಂತಹ ಗುರಿಗಳನ್ನು ಸಾಧಿಸಲು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತದೆ, ರಾಜ್ಯವು ಹೆಚ್ಚು ಪ್ರಗತಿ ಹೊಂದುತ್ತದೆ. ಆದ್ದರಿಂದ, ನಿಮ್ಮ ರಾಜ್ಯದ ಆರ್ಥಿಕ ಪ್ರಗತಿಗೆ ಸಮಿತಿಗಳ ಸಬಲೀಕರಣವೂ ನಿರ್ಣಾಯಕವಾಗಿದೆ.
ಸ್ನೇಹಿತರೇ
ಒಂದು ಪ್ರಮುಖ ವಿಷಯವೆಂದರೆ ಅನಗತ್ಯ ಕಾನೂನುಗಳ ಅಂತ್ಯ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ನಮ್ಮ ವ್ಯವಸ್ಥೆಗೆ ಹಾನಿಕಾರಕವಾದ 2,000 ಕ್ಕೂ ಹೆಚ್ಚು ಕಾನೂನುಗಳನ್ನು ರದ್ದುಗೊಳಿಸಿದೆ. ಅವುಗಳು ಒಂದು ರೀತಿಯಲ್ಲಿ ಹೊರೆಯಾಗಿದ್ದವು. ಕಾನೂನು ವ್ಯವಸ್ಥೆಯ ಈ ಸರಳೀಕರಣವು ಸಾಮಾನ್ಯ ಜನರು ಎದುರಿಸುತ್ತಿರುವ ತೊಂದರೆಗಳನ್ನು ಕಡಿಮೆ ಮಾಡಿದೆ ಮತ್ತು ಜೀವನ ಸೌಕರ್ಯವನ್ನು ಹೆಚ್ಚಿಸಿದೆ. ಪೀಠಾಧಿಪತಿಗಳಾದ ನೀವು ಅಂತಹ ಕಾನೂನುಗಳ ಅಧ್ಯಯನ ನಡೆಸಿ, ಪಟ್ಟಿಗಳನ್ನು ರಚಿಸಿ, ಆಯಾ ಸರ್ಕಾರಗಳ ಮತ್ತು ಶಾಸಕರ ಗಮನ ಸೆಳೆದರೆ, ಎಲ್ಲರೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ಮುಂದೆ ಬರುವ ಸಾಧ್ಯತೆಯಿದೆ. ಇದು ನಾಗರಿಕರ ಜೀವನದ ಮೇಲೆ ಗಮನಾರ್ಹವಾಗಿ ಧನಾತ್ಮಕ ಪರಿಣಾಮ ಬೀರುತ್ತದೆ.
ಸ್ನೇಹಿತರೇ
ಕಳೆದ ವರ್ಷವಷ್ಟೇ ನಾರಿ ಶಕ್ತಿ ವಂದನ್ ಅಧಿನಿಯಂ ಅನ್ನು ಸಂಸತ್ತು ಅಂಗೀಕರಿಸಿದ್ದು ನಿಮಗೆ ಗೊತ್ತೇ ಇದೆ. ಈ ಸಮ್ಮೇಳನದಲ್ಲಿ, ಮಹಿಳಾ ಸಬಲೀಕರಣದ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಅವರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಸಲಹೆಗಳ ಕುರಿತು ಚರ್ಚೆಗಳು ನಡೆಯಬೇಕು. ಭಾರತದಂತಹ ಯುವ ದೇಶದಲ್ಲಿ, ಸಮಿತಿಗಳಲ್ಲಿ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ನಮ್ಮ ಯುವ ಪ್ರತಿನಿಧಿಗಳು ಹೆಚ್ಚಿನ ಅವಕಾಶಗಳನ್ನು ಹೊಂದಿರುವುದು ಮಾತ್ರವಲ್ಲದೆ ಸದನದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ನೀತಿ ರಚನೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಬೇಕು.
ಸ್ನೇಹಿತರೇ
2021 ರಲ್ಲಿ ನಮ್ಮ ಚರ್ಚೆಯ ಸಮಯದಲ್ಲಿ, ನಾನು ಒಂದು ರಾಷ್ಟ್ರ-ಒಂದು ಶಾಸಕಾಂಗ ವೇದಿಕೆಯನ್ನು ಪ್ರಸ್ತಾಪಿಸಿದೆ. ನಮ್ಮ ಸಂಸತ್ತು ಮತ್ತು ನಮ್ಮ ರಾಜ್ಯ ಶಾಸಕಾಂಗಗಳು ಈಗ ಇ-ವಿಧಾನ್ ಮತ್ತು ಡಿಜಿಟಲ್ ಸಂಸದ್ ವೇದಿಕೆಗಳ ಮೂಲಕ ಈ ಗುರಿಯತ್ತ ಕೆಲಸ ಮಾಡುತ್ತಿವೆ ಎಂದು ತಿಳಿದುಕೊಳ್ಳಲು ನನಗೆ ಸಂತೋಷವಾಗಿದೆ. ಮತ್ತೊಮ್ಮೆ, ಈ ವಿಶೇಷ ಸಂದರ್ಭಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಈ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಎಲ್ಲಾ ಶಾಸಕಾಂಗ ಪೀಠಾಧಿಪತಿಗಳಿಗೆ , ಅಧಿಕಾರಿಗಳಿಗೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ತುಂಬ ಧನ್ಯವಾದಗಳು.