​​​​​​​"ವಾಟರ್ ವಿಷನ್ @ 2047 ಮುಂದಿನ 25 ವರ್ಷಗಳ ಅಮೃತ ಕಾಲ ಪ್ರಯಾಣದ ಪ್ರಮುಖ ಆಯಾಮವಾಗಿದೆ"
"ಸಾರ್ವಜನಿಕರು ಒಂದು ಅಭಿಯಾನದಲ್ಲಿ ಭಾಗವಹಿಸಿದಾಗ, ಅವರು ಆ ಅಭಿಯಾನದ ಗಂಭೀರತೆಯನ್ನು ಅರಿಯುತ್ತಾರೆ"
"ಜನರು ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸಿದಾಗ, ಸಾರ್ವಜನಿಕರಲ್ಲಿಯೂ ಅದರ ಬಗ್ಗೆ ಒಂದು ಪ್ರಜ್ಞೆಯನ್ನು ಮೂಡಿಸಲಾಯಿತು"
"ದೇಶವು ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸುತ್ತಿದೆ, ಈ ಹಾದಿಯಲ್ಲಿ ಈಗಾಗಲೇ 25 ಸಾವಿರ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ."
"ಜಲ ಜೀವನ್ ಮಿಷನ್ ಪ್ರತಿ ಮನೆಗೂ ನೀರನ್ನು ಒದಗಿಸುವಲ್ಲಿ ರಾಜ್ಯದ ಒಂದು ಪ್ರಮುಖ ಅಭಿವೃದ್ಧಿಯ ನಿಯತಾಂಕವಾಗಿದೆ"
"'ಪ್ರತಿ ಹನಿಗೂ ಹೆಚ್ಚು ಬೆಳೆ' ಅಭಿಯಾನದಡಿ, ದೇಶದಲ್ಲಿ ಈ ವರೆಗೆ 70 ಲಕ್ಷ ಹೆಕ್ಟೇರ್ ಗೂ ಹೆಚ್ಚು ಭೂಮಿಯನ್ನು ಸೂಕ್ಷ್ಮ ನೀರಾವರಿಗೆ ಒಳಪಡಿಸಲಾಗಿದೆ."
"ಗ್ರಾಮ ಪಂಚಾಯಿತಿಗಳು ಮುಂದಿನ 5 ವರ್ಷಗಳಲ್ಲಿ ನೀರು ಪೂರೈಕೆ, ಸ್ವಚ್ಛತೆ, ಮತ್ತು ತ್ಯಾಜ್ಯ ನಿರ್ವಹಣೆಯವರೆಗೆ ಮಾರ್ಗಸೂಚಿಯನ್ನು ಪರಿಗಣಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು."
"ನಮ್ಮ ನದಿಗಳು, ನಮ್ಮ ಜಲಮೂಲಗಳು ಇಡೀ ಜಲ ಪರಿಸರ ವ್ಯವಸ್ಥೆಯ ಅತ್ಯಂತ ಪ್ರಮುಖ ಭಾಗವಾಗಿವೆ"
"ನಮಾಮಿ ಗಂಗೆ ಮಿಷನ್ ಅನ್ನು ಉದಾಹರಣೆಯಾಗಿಟ್ಟುಕೊಂಡು, ಇತರ ರಾಜ್ಯಗಳು ನದಿಗಳ ಸಂರಕ್ಷಣೆಗಾಗಿ ಇದೇ ರೀತಿಯ ಅಭಿಯಾನಗಳನ್ನು ಪ್ರಾರಂಭಿಸಬಹುದು"

ನಮಸ್ಕಾರ!

ನೀರಿನ ಕುರಿತ ಮೊದಲ `ಅಖಿಲ ಭಾರತ ರಾಜ್ಯ ಸಚಿವರ ವಾರ್ಷಿಕ  ಸಮ್ಮೇಳನ’ವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಇಂದು, ಭಾರತವು ನೀರಿನ ಭದ್ರತೆಗೆ ಸಂಬಂಧಿಸಿದಂತೆ ಸರಿಸಾಟಿಯಿಲ್ಲದ ಕೆಲಸಗಳಲ್ಲಿ ತೊಡಗಿದೆ; ಜೊತೆಗೆ, ಹಿಂದೆ ಕಂಡು-ಕೇಳಿರದಷ್ಟು ಮಟ್ಟದಲ್ಲಿ ಹೂಡಿಕೆಗಳನ್ನು ಸಹ ಮಾಡುತ್ತಿದೆ. ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ, ನೀರಿನ ವಿಷಯವು ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಜಲಸಂರಕ್ಷಣೆ ವಿಚಾರದಲ್ಲಿ ರಾಜ್ಯ ಸರಕಾರಗಳ ಪ್ರಯತ್ನಗಳು, ದೇಶದ ಸಾಮೂಹಿಕ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವಪೂರ್ಣವಾಗಿವೆ. ಆದ್ದರಿಂದ, ಮುಂದಿನ 25 ವರ್ಷಗಳ 'ಅಮೃತಕಾಲ'ದ ಪ್ರಯಾಣದಲ್ಲಿ 'ವಾಟರ್ ವಿಷನ್@2047'(ಜಲ ದೂರದೃಷ್ಟಿ @2047') ಪ್ರಮುಖ ಆಯಾಮವಾಗಿದೆ. 

ಸ್ನೇಹಿತರೇ, 

ಈ ಸಮ್ಮೇಳನದಲ್ಲಿ 'ಇಡೀ ಸರಕಾರʼ ಮತ್ತು 'ಇಡೀ ದೇಶ'ದ ದೃಷ್ಟಿಕೋನವನ್ನು ಗಮನದಲ್ಲಿರಿಸಿಕೊಂಡು ಚರ್ಚೆಗಳನ್ನು ನಡೆಸುವುದು ಸ್ವಾಭಾವಿಕ ಮತ್ತು ಅಗತ್ಯವಾಗಿದೆ. ಎಲ್ಲ ಸರಕಾರಗಳು ಒಂದೇ ಘಟಕವಾಗಿ ಅಥವಾ ಒಂದು ವ್ಯವಸ್ಥೆಯಾಗಿ ಕೆಲಸ ಮಾಡಬೇಕು ಎಂಬುದು 'ಇಡೀ ಸರಕಾರʼದ ಪರಿಕಲ್ಪನೆಯಾಗಿದೆ. ರಾಜ್ಯಗಳಲ್ಲಿಯೂ ಸಹ, ಜಲಸಂಪನ್ಮೂಲ ಸಚಿವಾಲಯ, ನೀರಾವರಿ ಸಚಿವಾಲಯ, ಕೃಷಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಪಶುಸಂಗೋಪನಾ ಇಲಾಖೆ, ನಗರಾಭಿವೃದ್ಧಿ ಸಚಿವಾಲಯ ಮತ್ತು ವಿಪತ್ತು ನಿರ್ವಹಣೆಯಂತಹ ವಿವಿಧ ಸಚಿವಾಲಯಗಳಿವೆ. ಆದ್ದರಿಂದ, ಎಲ್ಲರ ನಡುವೆ ನಿರಂತರ ಸಂವಹನ, ಚರ್ಚೆ, ಸ್ಪಷ್ಟತೆ ಮತ್ತು ಏಕೀಕೃತ ದೃಷ್ಟಿಕೋನವನ್ನು ಹೊಂದಿರುವುದು ಬಹಳ ಮುಖ್ಯ. ಇಲಾಖೆಗಳು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡರೆ ಮತ್ತು ಸಂಪೂರ್ಣ ದತ್ತಾಂಶವನ್ನು ಹೊಂದಿದ್ದರೆ, ಇದರಿಂದ ಇಲಾಖೆಗಳು ಯೋಜನೆ ರೂಪಿಸಲು ಸಹಾಯಕವಾಗುತ್ತದೆ. 
 
ಸ್ನೇಹಿತರೇ,

ಕೇವಲ ಸರಕಾರದ ಪ್ರಯತ್ನಗಳಿಂದ ಯಶಸ್ಸನ್ನು ಸಾಧಿಸುವುದು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ತಮ್ಮ ಪ್ರಯತ್ನಗಳು ಮಾತ್ರ ನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತವೆ ಎಂಬ ಮನಸ್ಥಿತಿಯನ್ನು ಸರಕಾರದಲ್ಲಿರುವವರು ತ್ಯಜಿಸಬೇಕು. ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಅಭಿಯಾನಗಳಲ್ಲಿ ಸಾರ್ವಜನಿಕರು, ಸಾಮಾಜಿಕ ಸಂಘಟನೆಗಳು ಮತ್ತು ನಾಗರಿಕ ಸಮಾಜವನ್ನು ಸಾಧ್ಯವಾದಷ್ಟು ತೊಡಗಿಸಿಕೊಳ್ಳಬೇಕು. ಸಾರ್ವಜನಿಕ ಭಾಗವಹಿಸುವಿಕೆಯ ಮತ್ತೊಂದು ಆಯಾಮವಿದೆ, ಅದನ್ನು ಅರ್ಥಮಾಡಿಕೊಳ್ಳುವುದು ಬಹಳ ನಿರ್ಣಾಯಕವಾಗಿದೆ. ಸಾರ್ವಜನಿಕ ಭಾಗವಹಿಸುವಿಕೆ ಎಂದರೆ ಎಲ್ಲ ಜವಾಬ್ದಾರಿಗಳನ್ನು ಜನರ ಮೇಲೆ ಹೇರುವುದು ಅಥವಾ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದರಿಂದ ಸರಕಾರದ ಜವಾಬ್ದಾರಿ ಕಡಿಮೆ ಆಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಇದು ವಾಸ್ತವವಲ್ಲ. ಸರಕಾರದ ಉತ್ತರದಾಯಿತ್ವ ಕಡಿಮೆಯಾಗುವುದಿಲ್ಲ. ಸಾರ್ವಜನಿಕ ಭಾಗವಹಿಸುವಿಕೆಯ ದೊಡ್ಡ ಪ್ರಯೋಜನವೆಂದರೆ ಈ ಅಭಿಯಾನದಲ್ಲಿ ಎಷ್ಟು ಹಣ ಮತ್ತು ಶ್ರಮವನ್ನು ಹಾಕಲಾಗುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಯುತ್ತದೆ. ಇದು ವಿವಿಧ ಆಯಾಮಗಳನ್ನು ಹೊಂದಿದೆ. ಸಾರ್ವಜನಿಕರು ಒಂದು ಅಭಿಯಾನದಲ್ಲಿ ತೊಡಗಿಕೊಂಡಾಗ, ಕೆಲಸದ ಗಂಭೀರತೆ, ಅದರ ಸಾಮರ್ಥ್ಯ, ಪ್ರಮಾಣ ಮತ್ತು ಬಳಸಲಾಗುತ್ತಿರುವ ಒಟ್ಟು ಸಂಪನ್ಮೂಲಗಳ ಬಗ್ಗೆ ಅವರು ಅರಿತುಕೊಳ್ಳುತ್ತಾರೆ. ಪರಿಣಾಮವಾಗಿ, ಅದು ಯಾವುದೇ ಯೋಜನೆ ಅಥವಾ ಆಬಿಯಾನವಾಗಿದ್ದರೂ ಜನರು ಈ ವಿಷಯಗಳನ್ನು ನೋಡಿದಾಗ ಮತ್ತು ಅದರಲ್ಲಿ ತೊಡಗಿಸಿಕೊಂಡಾಗ, ಅವರಲ್ಲಿ ಮಾಲೀಕತ್ವದ ಪ್ರಜ್ಞೆ ಬೆಳೆಯುತ್ತದೆ. ಮಾಲೀಕತ್ವದ ಪ್ರಜ್ಞೆಯು ಯಶಸ್ಸಿಗೆ ಪ್ರಮುಖ ಕೀಲಿಕೈಯಾಗಿದೆ. ʻಸ್ವಚ್ಛ ಭಾರತ ಅಭಿಯಾನʼವು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಜನರು ʻಸ್ವಚ್ಛ ಭಾರತ ಅಭಿಯಾನಕ್ಕೆ ಸೇರಿದಾಗ, ಸಾರ್ವಜನಿಕರಲ್ಲಿ ಪ್ರಜ್ಞೆ ಮತ್ತು ಜಾಗೃತಿ ಇತ್ತು. ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ವಿಭಿನ್ನ ಸಂಪನ್ಮೂಲಗಳ ಅಗತ್ಯವಿತ್ತು. ವಿವಿಧ ನೀರು ಶುದ್ಧೀಕರಣ ಘಟಕಗಳ ನಿರ್ಮಾಣ, ಶೌಚಾಲಯಗಳು ಮತ್ತು ಅಂತಹ ಅನೇಕ ಕೆಲಸಗಳನ್ನು ಸರಕಾರವು ಮಾಡಿತು. ಆದರೆ ಸಾರ್ವಜನಿಕರು ಮತ್ತು ಪ್ರತಿಯೊಬ್ಬ ನಾಗರಿಕರಲ್ಲಿ ಮೂಡಿದ ʻಯಾರೂ ಕಸ ಹಾಕಬಾರದುʼ ಎಂಬ ಪ್ರಜ್ಞೆಯು ಈ ಅಭಿಯಾನದ ಯಶಸ್ಸನ್ನು ಖಚಿತಪಡಿಸಿತು. ನಾಗರಿಕರಲ್ಲಿ ಕೊಳಕಿನ ಬಗ್ಗೆ ತಿರಸ್ಕಾರದ ಭಾವನೆ ಬೆಳೆಯಲು ಪ್ರಾರಂಭಿಸಿತು. ಈಗ ನಾವು ನೀರಿನ ಸಂರಕ್ಷಣೆಗಾಗಿ ಜನರ ಮನಸ್ಸಿನಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಈ ಪರಿಕಲ್ಪನೆಯನ್ನು ಬೆಳೆಸಬೇಕಾಗಿದೆ. ಈ ಅಭಿಯಾನಕ್ಕಾಗಿ ನಾವು ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಿದಷ್ಟೂ, ಅದು ಬೀರುವ ಪರಿಣಾಮವೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಉದಾಹರಣೆಗೆ, ನಾವು 'ಜಲ ಜಾಗೃತಿ ಉತ್ಸವʼಗಳನ್ನು  ಆಯೋಜಿಸಬಹುದು. ಜಲ ಜಾಗೃತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ನಡೆಯುವ ಜಾತ್ರೆಗಳೊಂದಿಗೆ ಬೆಸೆಯಬಹುದು. ವಿಶೇಷವಾಗಿ ಹೊಸ ಪೀಳಿಗೆಗೆ ಈ ವಿಷಯದ ಬಗ್ಗೆ ಅರಿವು ಮೂಡಿಸಲು, ನಾವು ಪಠ್ಯಕ್ರಮದಿಂದ ಹಿಡಿದು ಶಾಲೆಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳವರೆಗೆ ನವೀನ ಮಾರ್ಗಗಳ ಬಗ್ಗೆ ಯೋಚಿಸಬೇಕು. ದೇಶವು ಪ್ರತಿ ಜಿಲ್ಲೆಯಲ್ಲೂ 25 `ಅಮೃತ ಸರೋವರ’ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ವಿಷಯ ನಿಮಗೆ ಈಗಾಗಲೇ ಗೊತ್ತಿದೆ. ನಿಮ್ಮ ರಾಜ್ಯದಲ್ಲಿ ಈ ಪ್ರಯತ್ನದಲ್ಲಿ ನೀವು ಸಾಕಷ್ಟು ಕೊಡುಗೆಯನ್ನೂ ನೀಡಿದ್ದೀರಿ. ಇಷ್ಟು ಕಡಿಮೆ ಅವಧಿಯಲ್ಲಿ 25,000 ʻಅಮೃತ ಸರೋವರʼಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇದು ಜಲಸಂರಕ್ಷಣೆಯ ದಿಕ್ಕಿನಲ್ಲಿ ಇಡೀ ವಿಶ್ವದಲ್ಲಿ ಈ ರೀತಿಯ ಒಂದು ವಿಶಿಷ್ಟ ಅಭಿಯಾನವಾಗಿದೆ. ಜೊತೆಗೆ ಇದು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸಹ ಒಳಗೊಂಡಿದೆ. ಜನರು ಸ್ವಯಂ ಪ್ರೇರಿತವಾಗಿ ಪ್ರಯತ್ನಗಳನ್ನು ಕೈಗೊಳ್ಳುತ್ತಿದ್ದಾರೆ; ಈ ಪ್ರಯತ್ನದಲ್ಲಿ ಜನರು ಮುಂದೆ ಬರುತ್ತಿದ್ದಾರೆ. ಸಂರಕ್ಷಣೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಈ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ನಿರಂತರವಾಗಿ ವಿಸ್ತರಿಸಬೇಕಾಗಿದೆ. 
 
ಸ್ನೇಹಿತರೇ, 

ನಾವು ಸರಕಾರದ ನೀತಿಗಳು ಮತ್ತು ಅಧಿಕಾರಶಾಹಿ ಕಾರ್ಯವಿಧಾನಗಳಿಂದ ಆಚೆಗೆ ನೀತಿ ರೂಪಣೆ ಮಟ್ಟದಲ್ಲಿಯೂ ಸಹ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಯೋಚಿಸಬೇಕು. ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ನಾವು ತಂತ್ರಜ್ಞಾನ, ಉದ್ಯಮ ಮತ್ತು ನವೋದ್ಯಮಗಳನ್ನು ಸಂಪರ್ಕಿಸಬೇಕಾಗಿದೆ. ʻಜಿಯೋ-ಸೆನ್ಸಿಂಗ್ʼ ಮತ್ತು ʻಜಿಯೋ-ಮ್ಯಾಪಿಂಗ್ʼನಂತಹ ತಂತ್ರಜ್ಞಾನಗಳು ಈ ನಿಟ್ಟಿನಲ್ಲಿ ನಮಗೆ ಸಾಕಷ್ಟು ಸಹಾಯ ಮಾಡುತ್ತವೆ. 
 
ಸ್ನೇಹಿತರೇ, 

'ಜಲ ಜೀವನ್ ಮಿಷನ್' ಪ್ರತಿ ಮನೆಗೂ ನೀರನ್ನು ಒದಗಿಸಲು ರಾಜ್ಯಗಳ ಪ್ರಮುಖ ಅಭಿವೃದ್ಧಿ ಮಾನದಂಡವಾಗಿದೆ. ಅನೇಕ ರಾಜ್ಯಗಳು ಈ ನಿಟ್ಟಿನಲ್ಲಿ ಪ್ರಶಂಸನೀಯ ಕೆಲಸವನ್ನು ಮಾಡಿವೆ. ಇತರ ಅನೇಕ ರಾಜ್ಯಗಳು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಿವೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ, ಅದರ ನಿರ್ವಹಣೆ ಸಹ ಅಷ್ಟೇ ಅಚ್ಚುಕಟ್ಟಾಗಿ ಆಗುವಂತೆ ನಾವು ಖಾತರಿಪಡಿಸಬೇಕು. ಗ್ರಾಮ ಪಂಚಾಯಿತಿಗಳು ʻಜಲ ಜೀವನ್ ಮಿಷನ್ʼ ಅನ್ನು ಮುನ್ನಡೆಸಬೇಕು; ಒಮ್ಮೆ ಕೆಲಸವು ಪೂರ್ಣಗೊಂಡ ನಂತರ, ಸಮರ್ಪಕ ಮತ್ತು ಶುದ್ಧವಾದ ನೀರಿನ ಲಭ್ಯತೆಯನ್ನು ಗ್ರಾಮ ಪಂಚಾಯಿತಿಗಳು ಪ್ರಮಾಣೀಕರಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯು ತನ್ನ ಗ್ರಾಮದಲ್ಲಿ ಎಷ್ಟು ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು ಆಗುತ್ತಿದೆ ಎಂಬುದರ ಬಗ್ಗೆ ಮಾಸಿಕ ಅಥವಾ ತ್ರೈಮಾಸಿಕ ವರದಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ನೀರಿನ ಗುಣಮಟ್ಟವು ನಿರೀಕ್ಷಿತ ಮಟ್ಟದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಆಗಾಗ್ಗೆ ನೀರಿನ ಪರೀಕ್ಷೆ ನಡೆಸುವ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಬೇಕು. 
 
ಸ್ನೇಹಿತರೇ, 

ಕೈಗಾರಿಕೆ ಮತ್ತು ಕೃಷಿ ಎರಡೂ ವಲಯಗಳು ಸ್ವಾಭಾವಿಕವಾಗಿ ಸಾಕಷ್ಟು ನೀರಿನ ಅಗತ್ಯವಿರುವ ವಲಯಗಳೆಂದು ನಮಗೆಲ್ಲರಿಗೂ ತಿಳಿದಿದೆ. ಈ ಎರಡೂ ವಲಯಗಳಿಗೆ ಸಂಬಂಧಿಸಿದ ಜನರಿಗೆ ನೀರಿನ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ನಾವು ವಿಶೇಷ ಅಭಿಯಾನವನ್ನು ನಡೆಸಬೇಕು. ನೀರಿನ ಲಭ್ಯತೆಯ ಆಧಾರದ ಮೇಲೆ ಬೆಳೆ-ವೈವಿಧ್ಯೀಕರಣವನ್ನು ಮಾಡಬೇಕು. ನೈಸರ್ಗಿಕ ಕೃಷಿಯನ್ನು ಮಾಡಬೇಕು ಮತ್ತು ಉತ್ತೇಜಿಸಬೇಕು. ನೈಸರ್ಗಿಕ ಕೃಷಿಯನ್ನು ಎಲ್ಲೆಲ್ಲಿ ಮಾಡಲಾಗುತ್ತಿದೆಯೋ ಅಲ್ಲಿ ನೀರಿನ ಸಂರಕ್ಷಣೆಯ ಮೇಲೆ ಸಕಾರಾತ್ಮಕ ಪರಿಣಾಮ ಆಗಿರುವುದು  ವಿವಿಧ ಸ್ಥಳಗಳಲ್ಲಿ ಕಂಡುಬಂದಿದೆ.

ಸ್ನೇಹಿತರೇ, 

ʻಪ್ರಧಾನ ಮಂತ್ರಿ ಕೃಷಿ ಸಿಂಚಾಯಿʼ ಯೋಜನೆಯಡಿಯಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಕೆಲಸಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಈ ಯೋಜನೆಯಡಿ, ʻಪ್ರತಿ ಹನಿಗೆ ಹೆಚ್ಚು ಬೆಳೆʼ ಅಭಿಯಾನವನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಇದುವರೆಗೆ, ದೇಶದಲ್ಲಿ 70 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯನ್ನು ಸೂಕ್ಷ್ಮ ನೀರಾವರಿಯ ಅಡಿಯಲ್ಲಿ ತರಲಾಗಿದೆ. ಸೂಕ್ಷ್ಮ ನೀರಾವರಿಯನ್ನು ಎಲ್ಲ ರಾಜ್ಯಗಳು ನಿರಂತರವಾಗಿ ಉತ್ತೇಜಿಸಬೇಕು. ನೀರಿನ ಸಂರಕ್ಷಣೆಗೆ ಇದು ಅತ್ಯಂತ ನಿರ್ಣಾಯಕವಾಗಿದೆ. ಈಗ ನೇರ ಕಾಲುವೆಯ ಬದಲಿಗೆ ಪೈಪ್‌ಲೈನ್ ಆಧಾರಿತ ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಇದನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕಿದೆ. 
 
ಸ್ನೇಹಿತರೇ, 

ನೀರಿನ ಸಂರಕ್ಷಣೆಗಾಗಿ, ಕೇಂದ್ರವು ʻಅಟಲ್ ಭೂಜಲ ಜಲ ಸಂರಕ್ಷಣಾ ಯೋಜನೆʼಯನ್ನು ಪ್ರಾರಂಭಿಸಿದೆ. ಇದೊಂದು ಸೂಕ್ಷ್ಮ ಅಭಿಯಾನವಾಗಿದ್ದು, ಸಮಾನ ಸಂವೇದನಾಶೀಲತೆಯಿಂದ ಇದನ್ನು ಮುಂದುವರಿಸಬೇಕಾಗಿದೆ. ಅಧಿಕಾರಿಗಳು ಅಂತರ್ಜಲ ನಿರ್ವಹಣೆ ವ್ಯವಸ್ಥೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿಯೂ ಶ್ರದ್ಧೆಯಿಂದ ಕೆಲಸ ಮಾಡುವುದು ಅಗತ್ಯವಾಗಿದೆ. ಅಂತರ್ಜಲ ಮರುಪೂರಣಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರಿನ ಶೆಡ್ ನಿರ್ಮಾಣ ಕೆಲಸವು ಆಗಬೇಕಿದೆ. ʻಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿʼ (MGNREGA) ಯೋಜನೆ ಅಡಿಯಲ್ಲಿ ಮಾಡುವ ಹೆಚ್ಚಿನ ಕೆಲಸಗಳು ಜಲ ಸಂರಕ್ಷಣೆ ಕುರಿತಾದ್ದವೇ ಆಗಿರಬೇಕೆಂದು ನಿರೀಕ್ಷಿಸಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ʻಸ್ಪ್ರಿಂಗ್ ಶೆಡ್ʼ ಪುನರುಜ್ಜೀವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಇದಕ್ಕೆ ಮತ್ತಷ್ಟು ವೇಗ ನೀಡಬೇಕಿದೆ. ನೀರಿನ ಸಂರಕ್ಷಣೆಗಾಗಿ ನಿಮ್ಮ ರಾಜ್ಯದ ಅರಣ್ಯ ಪ್ರದೇಶಗಳನ್ನು ವಿಸ್ತರಿಸುವುದು ಅಷ್ಟೇ ಮುಖ್ಯ. ಇದಕ್ಕಾಗಿ, ಪರಿಸರ ಸಚಿವಾಲಯ ಮತ್ತು ಜಲ ಸಂಪನ್ಮೂಲ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡಬೇಕು. ಸುಸ್ಥಿರ ಮತ್ತು ನಿರಂತರವಾಗಿ ನೀರನ್ನು ಒದಗಿಸುವ ಸಲುವಾಗಿ ಎಲ್ಲ ಸ್ಥಳೀಯ ನೀರಿನ ಮೂಲಗಳ ಸಂರಕ್ಷಣೆಯ ಬಗ್ಗೆಯೂ ಗಮನ ಹರಿಸಬೇಕು. ಗ್ರಾಮ ಪಂಚಾಯಿತಿಗಳು ನೀರನ್ನು ಗಮನದಲ್ಲಿರಿಸಿಕೊಂಡು ಮುಂದಿನ 5 ವರ್ಷಗಳವರೆಗೆ ಕ್ರಿಯಾ ಯೋಜನೆಯೊಂದನ್ನು ರೂಪಿಸಬೇಕು. ನೀರು ಸರಬರಾಜು, ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯ ಮಾರ್ಗಸೂಚಿಯನ್ನು ಇದು ಒಳಗೊಂಡಿರಬೇಕು. ಯಾವ ಹಳ್ಳಿಗೆ ಎಷ್ಟು ನೀರು ಬೇಕಾಗುತ್ತದೆ ಮತ್ತು ಅದಕ್ಕೆ ಅಗತ್ಯವಿರುವ ಕೆಲಸದ ಪ್ರಕಾರ ಏನೆಂಬುದನ್ನು ಆಧರಿಸಿ ಕೆಲವು ರಾಜ್ಯಗಳಲ್ಲಿ ಪಂಚಾಯತ್ ಮಟ್ಟದಲ್ಲಿ ʻನೀರಿನ ಬಜೆಟ್ʼ ಅನ್ನು ಸಿದ್ಧಪಡಿಸಲಾಗಿದೆ. ಇದನ್ನು ಇತರ ರಾಜ್ಯಗಳು ಸಹ ಅಳವಡಿಸಿಕೊಳ್ಳಬಹುದು. ಇತ್ತೀಚಿನ ವರ್ಷಗಳಲ್ಲಿ, 'ಕ್ಯಾಚ್ ದಿ ರೈನ್' (ಮಳೆ ನೀರನ್ನು ಹಿಡಿಯಿರಿ) ಅಭಿಯಾನವು ಸಾಕಷ್ಟು ಜನಾಕರ್ಷಣೆ ಪಡೆದಿರುವುದನ್ನು ನಾವು ನೋಡಿದ್ದೇವೆ. ಆದರೆ ಅದರ ಯಶಸ್ಸಿಗಾಗಿ, ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ. ಇಂತಹ ಅಭಿಯಾನಗಳು ರಾಜ್ಯ ಸರಕಾರಗಳ ದೈನಂದಿನ ಚಟುವಟಿಕೆಯ ಭಾಗವಾಗುವುದು ಅತ್ಯಗತ್ಯ. ಇದು ರಾಜ್ಯ ಸರಕಾರಗಳ ವಾರ್ಷಿಕ ಅಭಿಯಾನದ ಅತ್ಯಗತ್ಯ ಭಾಗವೂ ಆಗಬೇಕು. ಜೊತೆಗೆ, ಅಂತಹ ಅಭಿಯಾನಗಳಿಗಾಗಿ ಮಳೆ ಬರುವವರೆಗೂ ಕಾಯುವ ಬದಲು, ಮಳೆಗೆ ಮುಂಚಿತವಾಗಿ ಎಲ್ಲವನ್ನೂ ಯೋಜಿಸುವುದು ಬಹಳ ಮುಖ್ಯ. 
 
ಸ್ನೇಹಿತರೇ, 

ಈ ಬಾರಿಯ ಆಯವ್ಯಯದಲ್ಲಿ ಸರಕಾರವು ಆವರ್ತನ ಆರ್ಥಿಕತೆಗೆ ಸಾಕಷ್ಟು ಒತ್ತು ನೀಡಿದೆ. ಆವರ್ತನ ಆರ್ಥಿಕತೆಯು ನೀರಿನ ಸಂರಕ್ಷಣೆಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡಿದಾಗ, ತಾಜಾ ನೀರನ್ನು ಸಂರಕ್ಷಿಸಲಾಗುತ್ತದೆ, ಅದು ಇಡೀ ಪರಿಸರ ವ್ಯವಸ್ಥೆಗೆ ಪ್ರಯೋಜನವನ್ನು ನೀಡುತ್ತದೆ. ಅದಕ್ಕಾಗಿಯೇ ನೀರಿನ ಸಂಸ್ಕರಣೆ ಮತ್ತು ನೀರಿನ ಮರುಬಳಕೆ ಅತ್ಯಗತ್ಯ. ವಿವಿಧ ಕಾಮಗಾರಿಗಳಲ್ಲಿ 'ಸಂಸ್ಕರಿಸಿದ ನೀರಿನ' ಬಳಕೆಯನ್ನು ಹೆಚ್ಚಿಸಲು ರಾಜ್ಯಗಳು ಯೋಜಿಸಿವೆ. ತ್ಯಾಜ್ಯದಿಂದ ಯಾರು ಬೇಕಾದರೂ ಉತ್ತಮ ಆದಾಯವನ್ನು ಸಹ ಗಳಿಸಬಹುದು. ನೀವು ಸ್ಥಳೀಯ ಅಗತ್ಯಗಳನ್ನು ಪಟ್ಟಿ ಮಾಡಬೇಕು ಮತ್ತು ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ಸಿದ್ಧಪಡಿಸಬೇಕು. ನಾವು ಇನ್ನೂ ಒಂದು ವಿಷಯವನ್ನು ಗಮನಿಸಬೇಕು. ನಮ್ಮ ನದಿಗಳು ಮತ್ತು ಜಲಮೂಲಗಳು ಇಡೀ ಜಲ ಪರಿಸರ ವ್ಯವಸ್ಥೆಯ ಅತ್ಯಂತ ಪ್ರಮುಖ ಭಾಗವಾಗಿದೆ. ನಮ್ಮ ಯಾವುದೇ ನದಿಗಳು ಅಥವಾ ಜಲಮೂಲಗಳು ಬಾಹ್ಯ ಅಂಶಗಳಿಂದ ಕಲುಷಿತಗೊಳ್ಳದಂತೆ ಖಚಿತಪಡಿಸಿಕೊಳ್ಳಲು, ನಾವು ಪ್ರತಿ ರಾಜ್ಯದಲ್ಲೂ ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣೆಯ ಜಾಲವನ್ನು ರಚಿಸಬೇಕು. ಸಂಸ್ಕರಿಸಿದ ನೀರಿನ ಮರುಬಳಕೆಗಾಗಿ, ನಾವು ಪರಿಣಾಮಕಾರಿ ವ್ಯವಸ್ಥೆಯ ಬಗ್ಗೆಯೂ ಗಮನ ಹರಿಸಬೇಕು. ʻನಮಾಮಿ ಗಂಗೆ ಯೋಜನೆʼಯನ್ನು ಮಾದರಿಯಾಗಿ ಇರಿಸಿಕೊಂಡು, ಇತರ ರಾಜ್ಯಗಳು ಸಹ ನದಿಗಳ ಸಂರಕ್ಷಣೆ ಮತ್ತು ಪುನರುಜ್ಜೀವಕ್ಕಾಗಿ ಇದೇ ರೀತಿಯ ಅಭಿಯಾನಗಳನ್ನು ಪ್ರಾರಂಭಿಸಬಹುದು. 
 
ಸ್ನೇಹಿತರೇ, 

ನೀರು ರಾಜ್ಯಗಳ ನಡುವೆ ಸಹಯೋಗ, ಸಮನ್ವಯ ಮತ್ತು ಸಹಕಾರದ ವಿಷಯವಾಗಬೇಕು. ಇದು ನಮ್ಮೆಲ್ಲರ ಜವಾಬ್ದಾರಿ. ಇಲ್ಲಿ ಮತ್ತೊಂದು ಸಮಸ್ಯೆಯಿದೆ – ಶರವೇಗದ ನಗರೀಕರಣಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ನಮ್ಮ ಜನರು ವೇಗವಾಗಿ ನಗರೀಕರಣದತ್ತ ಸಾಗುತ್ತಿದ್ದಾರೆ. ನಗರಾಭಿವೃದ್ಧಿಯು ಎಷ್ಟು ವೇಗವಾಗಿ ನಡೆಯುತ್ತಿದೆಯೆಂದರೆ, ಈ ಕ್ಷಣದಿಂದಲೇ ನಾವು ನೀರಿನ ಬಗ್ಗೆ ಯೋಚಿಸಬೇಕಾಗಿದೆ. ಈ ಕ್ಷಣದಿಂದಲೇ ನಾವು ಒಳಚರಂಡಿ ವ್ಯವಸ್ಥೆ ಮತ್ತು ಒಳಚರಂಡಿ ಸಂಸ್ಕರಣೆಯ ಬಗ್ಗೆ ಯೋಚಿಸಬೇಕಾಗಿದೆ. ನಮ್ಮ ವೇಗವು ನಗರಗಳು ಬೆಳೆಯುತ್ತಿರುವ ವೇಗಕ್ಕಿಂತಲೂ ಹೆಚ್ಚಿರಬೇಕು. ಈ ಸಮಾವೇಶದಲ್ಲಿ ನಾವು ಪ್ರತಿಯೊಬ್ಬರ ಆಲೋಚನೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತೇವೆ ಹಾಗೂ ಫಲಪ್ರದವಾದ ಚರ್ಚೆಯನ್ನು ನಡೆಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಒಂದು ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಮತ್ತು ಒಂದು ನಿರ್ಣಯವನ್ನು ಕೈಗೊಂಡು, ಅದರ ಸಾಧನೆಗಾಗಿ ನೀವೆಲ್ಲರೂ ಮುಂದುವರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಂದು ರಾಜ್ಯವು ತನ್ನ ರಾಜ್ಯದ ನಾಗರಿಕರ ಕಲ್ಯಾಣವನ್ನು ಖಾತರಿಪಡಿಸುವುದಾದರೆ, ತನ್ನ ನಾಗರಿಕರ ಕರ್ತವ್ಯಗಳಿಗೆ ಒತ್ತು ನೀಡುವುದಾದರೆ ಮತ್ತು ನೀರಿನ ವಿಚಾರವಾಗಿ ಸರಕಾರ ಮಾಡಬೇಕಾದ ಕೆಲಸಕ್ಕೆ ಆದ್ಯತೆ ನೀಡುವುದಾದರೆ, ಈ ಜಲ ಸಮ್ಮೇಳನವು ಸಾಕಷ್ಟು ನಿರೀಕ್ಷೆಗಳು ಮತ್ತು ಭರವಸೆಗಳನ್ನು ಹೊಂದಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. 
ನಿಮಗೆಲ್ಲರಿಗೂ ಶುಭ ಹಾರೈಕೆಗಳು. 
ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.