ಲೋಕಪಾಲ್ ಅಧ್ಯಕ್ಷರಾದ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಜೀ, ಕೇಂದ್ರೀಯ ಜಾಗೃತ ಆಯುಕ್ತರಾದ ಸುರೇಶ್ ಎನ್. ಪಟೇಲ್ ಜೀ, ಸಿ.ಬಿ.ಐ. ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಜೀ, ಪ್ರಮುಖ ತಜ್ಞರೇ, ವಿವಿಧ ರಾಜ್ಯಗಳ ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳೇ ಹಾಗು ಕಾರ್ಯಕ್ರಮದಲ್ಲಿ ಹಾಜರಿರುವ ಗೌರವಾನ್ವಿತ ಗಣ್ಯರೇ,
ಮಹಿಳೆಯರೇ ಮತ್ತು ಮಹನೀಯರೇ!
ಭ್ರಷ್ಟಾಚಾರದಿಂದ ಉದ್ಭವಿಸಿರುವ ಹೊಸ ಸವಾಲುಗಳಿಗೆ ಅರ್ಥ ಪೂರ್ಣ ಪರಿಹಾರಗಳನ್ನು ಹುಡುಕಲು ವಿದ್ವತ್ಪೂರ್ಣ ಗಂಭೀರ ಅಧಿವೇಶನಕ್ಕಾಗಿ ನೀವೆಲ್ಲರೂ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ನೆರಳಿನಲ್ಲಿ ಇಲ್ಲಿ ಸೇರಿದ್ದೀರಿ. ಸರ್ದಾರ್ ಪಟೇಲ್ ಅವರು ಆಡಳಿತವನ್ನು ಭಾರತದ ಅಭಿವೃದ್ಧಿ, ಸಾರ್ವಜನಿಕ ಕಳಕಳಿ ಮತ್ತು ಸಾರ್ವಜನಿಕ ಕಲ್ಯಾಣಗಳ ತಳಪಾಯವನ್ನಾಗಿ ಮಾಡಲು ಗರಿಷ್ಠ ಆದ್ಯತೆಯನ್ನು ನೀಡಿದ್ದರು.ನಾವು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ದೇಶವು ಮುಂದಿನ 25 ವರ್ಷಗಳಲ್ಲಿ ಆತ್ಮ ನಿರ್ಭರ ಭಾರತದ ಬಹುದೊಡ್ಡ ನಿರ್ಧಾರವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದೆ. ಅಂದರೆ ಇದು ಬಹಳ ಪುಣ್ಯಕರ ಕಾಲ. ನಾವು ಉತ್ತಮ ಆಡಳಿತವನ್ನು ಬಲಪಡಿಸಲು ಬದ್ಧರಾಗಿದ್ದೇವೆ. ಅಂದರೆ ಜನ ಪರ ಮತ್ತು ಪ್ರತಿಕ್ರಿಯಾತ್ಮಕ ಆಡಳಿತ. ಆದುದರಿಂದ ನಿಮ್ಮ ಕಾರ್ಯಾಧಾರಿತ, ಸಾಹಸ ಪ್ರಧಾನ ಶೃದ್ಧೆ ಸರ್ದಾರ್ ಪಟೇಲ್ ಅವರ ಆದರ್ಶಗಳಿಗೆ ಬಲವನ್ನು ತುಂಬುತ್ತದೆ.
ಸ್ನೇಹಿತರೇ,
ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆಂದು ಉಲ್ಲೇಖಿಸಲಾಗಿದೆ
न्यायमूलं सुराज्यं
स्यात् !
ಅಂದರೆ “ಸುರಾಜ್” (ಉತ್ತಮ ಆಡಳಿತ) ಸಾಧ್ಯವಾಗುವುದು ಪ್ರತಿಯೊಬ್ಬರಿಗೂ ನ್ಯಾಯ ಸಿಕ್ಕಾಗ ಮಾತ್ರ. ಭ್ರಷ್ಟಾಚಾರ, ಅದು ಸಣ್ಣದಿರಲಿ ಅಥವಾ ದೊಡ್ಡದಿರಲಿ, ಅದು ಯಾರದ್ದಾದರೂ ಅಥವಾ ಇನ್ನೊಬ್ಬರ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಅದು ದೇಶದ ಸಾಮಾನ್ಯ ನಾಗರಿಕರ ಹಕ್ಕುಗಳನ್ನು ನಿರಾಕರಿಸುತ್ತದೆ ಮತ್ತು ದೇಶದ ಪ್ರಗತಿಗೆ ಅಡ್ಡಿಯಾಗುತ್ತದೆ. ಮತ್ತು ಒಂದು ರಾಷ್ಟ್ರವಾಗಿ ನಮ್ಮ ಒಟ್ಟು ಶಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಸಹೋದ್ಯೋಗಿಗಳಾದ ನಿಮಗೆಲ್ಲ ಮತ್ತು ನೀವು ಪ್ರತಿನಿಧಿಸುತ್ತಿರುವ ಸಂಸ್ಥೆಗಳಿಗೆ ಭ್ರಷ್ಟಾಚಾರದಿಂದಾಗುವ ಅನ್ಯಾಯವನ್ನು ನಿವಾರಣೆ ಮಾಡುವ ಬಹಳ ದೊಡ್ಡ ಜವಾಬ್ದಾರಿ ಇದೆ. ಇಂದು ಸರ್ದಾರ್ ಪಟೇಲ್ ಅವರ ನೆರಳಿನಡಿಯಲ್ಲಿ ಮತ್ತು ನರ್ಮದಾ ಮಾತೆಯ ದಡದಲ್ಲಿ ನೀವು ನಿಮ್ಮ ದೃಢ ನಿರ್ಧಾರವನ್ನು ಪುನರುಚ್ಚರಿಸಬೇಕು ಮತ್ತು ದೇಶದ ಬಗ್ಗೆ ನಿಮ್ಮ ಜವಾಬ್ದಾರಿಗಳನ್ನು ಸಾಕಾರಗೊಳಿಸಲು ಶಕ್ತಿಯನ್ನು ಹೊಂದಬೇಕು.
ಸ್ನೇಹಿತರೇ,
ಕಳೆದ ಆರು –ಏಳು ವರ್ಷಗಳಲ್ಲಿ ನಾವು ದೇಶದಲ್ಲಿ ಭ್ರಷ್ಟಾಚಾರವನ್ನು ತಡೆಯುವುದು ಸಾಧ್ಯ ಎಂಬ ಭರವಸೆಯನ್ನು, ವಿಶ್ವಾಸವನ್ನು ಜನತೆಯಲ್ಲಿ ಮೂಡಿಸಲು ಸಮರ್ಥರಾಗಿದ್ದೇವೆ. ದೇಶದ ಜನರು ಕೂಡಾ ಯಾವುದೇ ಮಧ್ಯವರ್ತಿಯಿಲ್ಲದೆ ಸರಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು ಎಂಬ ವಿಶ್ವಾಸವನ್ನು ಇಂದು ಹೊಂದಿದ್ದಾರೆ. ಮತ್ತು ಇಂದು ದೇಶ ಕೂಡಾ ದೇಶವನ್ನು ವಂಚಿಸುವವರು, ಬಡವರನ್ನು ಲೂಟುವವರು, ಅವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅಡ್ಡಿಯಿಲ್ಲ, ಅವರು ದೇಶದಲ್ಲಿ ಅಥವಾ ಜಗತ್ತಿನಲ್ಲಿ ಎಲ್ಲೇ ಇರಲಿ ಅವರಿಗೆ ದಯೆ ತೋರಿಸುವುದಿಲ್ಲ, ಸರಕಾರ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ನಂಬಿಕೆಯನ್ನು ಹೊಂದತೊಡಗಿದೆ.
ಸ್ನೇಹಿತರೇ,
ನಿಮಗೂ ಗೊತ್ತಿದೆ, ಈ ವಿಶ್ವಾಸವನು ಸ್ಥಾಪಿಸುವುದು ಅಷ್ಟೊಂದು ಸುಲಭವಾದ ಸಂಗತಿಯಾಗಿರಲಿಲ್ಲ. ಹಿಂದಿನ ಸರಕಾರಗಳು ಮತ್ತು ವ್ಯವಸ್ಥೆಗಳು ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿಯನ್ನು ಹೊಂದಿರಲಿಲ್ಲ. ಇಂದು ಭ್ರಷ್ಟಾಚಾರದ ಮೇಲೆ ಪ್ರಹಾರ ಮಾಡುವಂತಹ ರಾಜಕೀಯ ಇಚ್ಛಾಶಕ್ತಿ ಇದೆ. ಮತ್ತು ಅಲ್ಲಿ ಆಡಳಿತಾತ್ಮಕ ಮಟ್ಟದಲ್ಲಿ ನಿರಂತರ ಸುಧಾರಣೆಗಳಾಗುತ್ತಿವೆ.
ಸ್ನೇಹಿತರೇ,
ಆದುನಿಕ ಧೋರಣೆಯ ಜೊತೆ, 21 ನೇ ಶತಮಾನದ ಭಾರತವು ಮಾನವತೆಯ ಕಲ್ಯಾಣಕ್ಕಾಗಿ ತಂತ್ರಜ್ಞಾನದ ಬಳಕೆಗೆ ಹೆಚ್ಚು ಒತ್ತನ್ನು ಕೊಡುತ್ತದೆ. ನವ ಭಾರತ ಅನ್ವೇಷಣೆಯನ್ನು ಮಾಡುತ್ತದೆ, ಉಪಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು ಅದನ್ನು ಅನುಷ್ಠಾನ ಮಾಡುತ್ತದೆ. ನವ ಭಾರತವು ಭ್ರಷ್ಟಾಚಾರವನ್ನು ವ್ಯವಸ್ಥೆಯ ಭಾಗವನ್ನಾಗಿ ಸ್ವೀಕರಿಸಲು ತಯಾರಿಲ್ಲ. ಅದು ಪಾರದರ್ಶಕ ವ್ಯವಸ್ಥೆಯನ್ನು, ದಕ್ಷತೆಯ ಪ್ರಕ್ರಿಯೆಗಳನ್ನು ಮತ್ತು ಸುಸೂತ್ರವಾದ ಆಡಳಿತವನ್ನು ಅಪೇಕ್ಷಿಸುತ್ತದೆ.
ಸ್ನೇಹಿತರೇ,
ಸ್ವಾತಂತ್ರ್ಯದ ಬಳಿಕದ ದಶಕಗಳಲ್ಲಿ, ಎಲ್ಲವನ್ನೂ ಸರಕಾರದ ನಿಯಂತ್ರಣದಲ್ಲಿ ಇಡಬೇಕು ಎಂಬ ಸ್ಫೂರ್ತಿ, ಉತ್ಸಾಹದಲ್ಲಿ ಮೊದಲಿನ ವ್ಯವಸ್ಥೆಗಳಿದ್ದವು. ಹಿಂದಿನ ಸರಕಾರಗಳು ತಮ್ಮೊಳಗೇ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಂಡಿದ್ದವು. ಮತ್ತು ಇದರ ಪರಿಣಾಮವಾಗಿ ವ್ಯವಸ್ಥೆಯಲ್ಲಿ ಹಲವಾರು ತಪ್ಪು ಪ್ರವೃತ್ತಿಗಳು ಬೆಳೆದವು. ಗರಿಷ್ಠ ನಿಯಂತ್ರಣ, ಅದು ಮನೆಯಲ್ಲಿರಲಿ, ಕುಟುಂಬದಲ್ಲಿರಲಿ ಅಥವಾ ದೇಶದಲ್ಲಿಯೇ ಇರಲಿ, ಅದು ಗರಿಷ್ಠ ಹಾನಿಯನ್ನು ಉಂಟು ಮಾಡುತ್ತದೆ. ಆದುದರಿಂದ ನಾವು ದೇಶವಾಸಿಗಳ ಬದುಕಿನಲ್ಲಿ ಸರಕಾರದ ಹಸ್ತಕ್ಷೇಪವನ್ನು ಮಿತಿಗೊಳಪಡಿಸುವ ಕೆಲಸವನ್ನು ಆಂದೋಲನದೋಪಾದಿಯಲ್ಲಿ ಮಾಡಿದೆವು. ನಾವು ಸರಕಾರಿ ಪ್ರಕ್ರಿಯೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡಿದ್ದೇವೆ. ಸರಕಾರದ ಗರಿಷ್ಠ ನಿಯಂತ್ರಣಕ್ಕೆ ಬದಲು, ಕನಿಷ್ಠ ಸರಕಾರ, ಗರಿಷ್ಠ ಆಡಳಿತಕ್ಕೆ ಆದ್ಯ ಗಮನವನ್ನು ನೀಡಿದೆವು.
ಸ್ನೇಹಿತರೇ,
ದೇಶದ ನಾಗರಿಕರನ್ನು ಸಶಕ್ತೀಕರಣ ಮಾಡಲು ನಂಬಿಕೆ ಮತ್ತು ತಂತ್ರಜ್ಞಾನದ ಮೇಲೆ ಎಷ್ಟೊಂದು ವಿಶೇಷ ಒತ್ತನ್ನು ನೀಡಲಾಗಿದೆ ಎಂಬುದನ್ನು ನೀವೆಲ್ಲಾ ಗಮನಿಸಿದ್ದೀರಿ.ಇಂದು ದೇಶದಲ್ಲಿರುವ ಸರಕಾರ ದೇಶದ ನಾಗರಿಕರನ್ನು ನಂಬುತ್ತದೆ ಮತ್ತು ಅವರನ್ನು ಸಂಶಯದ ದೃಷ್ಟಿಯಿಂದ ನೋಡುವುದಿಲ್ಲ. ಈ ನಂಬಿಕೆ ಭ್ರಷ್ಟಾಚಾರದ ಅನೇಕ ಮಾರ್ಗಗಳನ್ನು ತಡೆಗಟ್ಟಿದೆ. ಭ್ರಷ್ಟಾಚಾರದಿಂದ ಹೊರಬರಲು ಮತ್ತು ಅನವಶ್ಯಕ ಅಡೆ ತಡೆಗಳಿಂದ ಹೊರಬರಲು ದಾಖಲೆಗಳ ಪರಿಶೀಲನೆಯ ಹಂತಗಳನ್ನು ತೆಗೆದುಹಾಕಲಾಗಿದೆ. ಜನನ ಪ್ರಮಾಣ ಪತ್ರದಿಂದ ಹಿಡಿದು ನಿವೃತ್ತಿ ವೇತನಕ್ಕೆ ಬೇಕಾಗುವ ಜೀವಿತ ಪ್ರಮಾಣ ಪತ್ರಗಳವರೆಗೆ ಮಧ್ಯವರ್ತಿಗಳಿಲ್ಲದೆ ಡಿಜಿಟಲ್ ತಂತ್ರಜ್ಞಾನದ ಮೂಲಕ ನೂರಾರು ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಗುಂಪು ಸಿ ಮತ್ತು ಗುಂಪು ಡಿ ನೇಮಕಾತಿಗಳಿಗೆ ಸಂದರ್ಶನಗಳನ್ನು ತೆಗೆದು ಹಾಕಿದ ಬಳಿಕ ಬಡವರು ಮತ್ತು ಮಧ್ಯಮ ವರ್ಗದವರಿಗೆ ಭ್ರಷ್ಟಾಚಾರದಿಂದ ಮುಕ್ತಿ ದೊರೆತಿದೆ. ಅಡುಗೆ ಅನಿಲ ಬುಕ್ಕಿಂಗ್ ನಿಂದ ಹಿಡಿದು ತೆರಿಗೆ ಸಂಬಂಧಿ ಪ್ರಕ್ರಿಯೆಗಳವರೆಗೆ ಆನ್ ಲೈನ್ ಮತ್ತು ಮುಖರಹಿತ ಪ್ರಕ್ರಿಯೆಗಳು,ಭ್ರಷ್ಟಾಚಾರದ ಪ್ರಮುಖ ಮೂಲವಾಗಿದ್ದ ಬಹಳ ದೊಡ್ಡ ಸರತಿ ಸಾಲಿನಿಂದ ಜನರನ್ನು ಮುಕ್ತ ಮಾಡಿವೆ.
ಸ್ನೇಹಿತರೇ,
ದಕ್ಷ ಆಡಳಿತದ ಮೇಲೆ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣಗಳನ್ನು ರೂಪಿಸುವ ನಿಟ್ಟಿನಲ್ಲಿ ನಂಬಿಕೆ ಮತ್ತು ತಂತ್ರಜ್ಞಾನದ ಉಂಟು ಮಾಡುವ ಪರಿಣಾಮ ನಿಮಗೆಲ್ಲರಿಗೂ ತಿಳಿದಿದೆ. ಅನುಮತಿಗಳು ಮತ್ತು ಬದ್ಧತೆಗಳ ಜಾಲದಲ್ಲಿ ಮತ್ತು ವ್ಯಾಪಾರೋದ್ಯಮ ಆರಂಭ ಹಾಗು ಅದರ ಮುಚ್ಚುವಿಕೆಗೆ ಸಂಬಂಧಿಸಿ ಅಥವಾ ಬ್ಯಾಂಕುಗಳಿಂದ ಸಾಲ ಪಡೆಯುವ ಮತ್ತು ಅದನ್ನು ತೀರಿಸುವ ವಿಷಯದಲ್ಲಿ ಈ ಹಿಂದೆ ಏನೇನು ನಡೆದಿದೆಯೋ, ಅದರಿಂದ ದೇಶಕ್ಕಂತೂ ಬಹಳ ಹಾನಿಯಾಗಿದೆ, ಆದರೆ ಅದನ್ನೀಗ ಗುರುತಿಸಿ ದುರಸ್ತಿ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ನೂರಾರು ಹಳೆಯ ಕಾಯ್ದೆಗಳ ಜಾಲವನ್ನು ತೊಡೆದು ಹಾಕಿದ್ದೇವೆ ಮತ್ತು ಪ್ರಸ್ತುತ ಇರುವ ಸವಾಲುಗಳ ಹಿನ್ನೆಲೆಯಲ್ಲಿ ಹೊಸ ಕಾನೂನುಗಳನ್ನು ಅಳವಡಿಸಿಕೊಂಡಿದ್ದೇವೆ. ಸಾವಿರಾರು ಬದ್ಧತೆಗಳ, ಅನುಸರಣೆಗಳ ಮತ್ತು ವಿವಿಧ ನಿರಾಕ್ಷೇಪಣಾ ಪತ್ರಗಳ ಮತ್ತು ಅನುಮತಿಗಳ ಹೆಸರಿನಲ್ಲಿ ಇದ್ದ ಭ್ರಷ್ಟಾಚಾರದ ಬಗ್ಗೆ ನಿಮಗಿಂತ ಹೆಚ್ಚು ತಿಳಿದವರು ಬೇರೆ ಯಾದೂ ಇರಲಾರರು. ಕಳೆದ ಕೆಲವು ವರ್ಷಗಳಲ್ಲಿ ಸಾವಿರಾರು ಅನುಸರಣೆಗಳನ್ನು ರದ್ದು ಮಾಡಲಾಗಿದೆ. ಮತ್ತು ಸದ್ಯೋಭವಿಷ್ಯದಲ್ಲಿ ಇನೂ ಸಾವಿರಾರು ಇಂತಹ ಅನುಸರಣೆಗಳನ್ನು ರದ್ದು ಮಾಡುವ ಯೋಜನೆ ಇದೆ. ಬಹುತೇಕ ಅನುಮತಿಗಳನ್ನು ಮುಖರಹಿತವನ್ನಾಗಿಸಲಾಗಿದೆ. ಮತ್ತು ಸ್ವ ಮೌಲ್ಯಮಾಪನ ಹಾಗು ಸ್ವ ಘೋಷಣೆಯಂತಹ ಪ್ರಕ್ರಿಯೆಗಳನ್ನು ಉತ್ತೇಜಿಸಲಾಗುತ್ತಿದೆ. ಸರಕಾರಿ ಖರೀದಿಯಲ್ಲಿ ಪಾರದರ್ಶಕತೆ ಇದೆ ಮತ್ತು ಜಿ.ಇ.ಎಂ. ಅಂದರೆ ಸರಕಾರಿ ಇ-ಮಾರುಕಟ್ಟೆ ಸ್ಥಳದಿಂದಾಗಿ ಇ-ಟೆಂಡರ್ ನಲ್ಲಿ ಗೊಂದಲ ಬಹುತೇಕ ಕಡಿಮೆಯಾಗಿದೆ. ಡಿಜಿಟಲ್ ತಂತ್ರಜ್ಞಾನದಿಂದಾಗಿ ತನಿಖೆಗಳು ಬಹಳ ಸುಲಭವಾಗುತ್ತಿವೆ ಮತ್ತು ಹೆಚ್ಚು ಅನುಕೂಲಕರವಾಗುತ್ತಿವೆ. ಇತ್ತೀಚೆಗೆ ಕಾರ್ಯಾರಂಭ ಮಾಡಲಾದ ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆಯು ನಿರ್ಧಾರ ಕೈಗೊಳ್ಳುವಲ್ಲಿ ಇರುವ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಲಿದೆ.
ಸ್ನೇಹಿತರೇ,
ನಾವು ನಂಬಿಕೆ ಮತ್ತು ತಂತ್ರಜ್ಞಾನದ ಶಕೆಯಲ್ಲಿ ಮುನ್ನಡೆಯುವಾಗ ನಿಮ್ಮೆಲ್ಲರ ಮೇಲೆ ದೇಶದ ನಂಬಿಕೆ ಕೂಡಾ ಅಷ್ಟೇ ಮುಖ್ಯ. ನಾವೆಲ್ಲರೂ ಸದಾ ಕಾಲ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕು-ದೇಶ ಮೊದಲು!. ನಮ್ಮ ಕೆಲಸಕ್ಕೆ ಒಂದೇ ಒಂದು ಅಳತೆಗೋಲಿದೆ- ಸಾರ್ವಜನಿಕ ಹಿತಾಸಕ್ತಿ, ಸಾರ್ವಜನಿಕ ಕಳಕಳಿ!.
ನಮ್ಮ ನಿರ್ಧಾರಗಳು ಈ ಅಳತೆಗೋಲನ್ನು ಅನುಸರಿಸುತ್ತವೆ ಎಂದಾದರೆ, ನೀವು ಸದಾ ಕಾಲವೂ ದೇಶದ ಕರ್ಮ ಯೋಗಿಯ ಹಿಂದೆ ನಾನು ದೃಢವಾಗಿ ನಿಂತಿರುವುದನ್ನು ಕಾಣಬಲ್ಲಿರಿ. ಸರಕಾರ ಕಟ್ಟು ನಿಟ್ಟಿನ ಕಾನೂನು ಪ್ರಸ್ತಾವನೆಗಳನ್ನು ಅಳವಡಿಸಿಕೊಂಡಿದೆ. ಮತ್ತು ಅವುಗಳನ್ನು ಅನುಷ್ಠಾನ ಗೊಳಿಸುವುದು ನಿಮ್ಮ ಕರ್ತವ್ಯ. ಆದರೆ ಕಾನೂನಿನ ಈ ಅಧಿಕಾರದ ಜೊತೆಗೆ ನ್ಯಾಯೋಚಿತ ವರ್ತನೆಯನ್ನು ಉತ್ತೇಜಿಸುವುದು ಮತ್ತು ಪ್ರೋತ್ಸಾಹಿಸುವುದು ಅಷ್ಟೇ ಮುಖ್ಯ.
ಸ್ನೇಹಿತರೇ,
ಯಾವುದಾದರೊಂದು ಹಗರಣ ನಡೆದಾಗ, ಭ್ರಷ್ಟಾಚಾರ ಅಥವಾ ಅವ್ಯವಹಾರ ನಡೆದಾಗ ಸಾಮಾನ್ಯವಾಗಿ ನೀವು ಅಲ್ಲಿ ಕಾಣಿಸಿಕೊಳ್ಳುತ್ತೀರಿ. ನಾನು ನಿಮ್ಮೊಂದಿಗೆ ಒಂದು ಮಾತನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾವು ಭ್ರಷ್ಟಾಚಾರ ತಡೆಗಟ್ಟುವ ಜಾಗೃತಿಯ ನಿಟ್ಟಿನಲ್ಲಿ ಯಾಕೆ ಕೆಲಸ ಮಾಡಬಾರದು?. ನಾವು ಎಚ್ಚರಿಕೆಯಿಂದಿದ್ದರೆ ಆಗ ಇದನ್ನು ಬಹಳ ಸುಲಭದಲ್ಲಿ ಮಾಡಬಹುದು. ನೀವು ಈ ವ್ಯವಸ್ಥೆಯನ್ನು ತಂತ್ರಜ್ಞಾನ ಮತ್ತು ನಿಮ್ಮ ಅನುಭವ, ಪರಿಣತಿಯ ಮೂಲಕ ಇನ್ನಷ್ಟು ಬಲಪಡಿಸಬಹುದು. ತಂತ್ರಜ್ಞಾನದ ಮತ್ತು ಎಚ್ಚರಿಕೆಯ ಜೊತೆ-ಸರಳತೆ, ಸ್ಪಷ್ಟತೆ, ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಭ್ರಷ್ಟಾಚಾರ ತಡೆಗಟ್ಟುವ ಜಾಗೃತಿಯಲ್ಲಿ ನಮ್ಮನ್ನು ಬಹಳ ದೂರ ಕೊಂಡೊಯ್ಯಬಲ್ಲದು.
ಇಂದು, ಹಲವು ಸರಕಾರಿ ಇಲಾಖೆಗಳು, ಬ್ಯಾಂಕುಗಳು, ಪಿ.ಎಸ್.ಯು.ಗಳು ಮತ್ತು ಹಣಕಾಸು ಸಂಸ್ಥೆಗಳು ದೇಶದಲ್ಲಿ ಪ್ರತಿಬಂಧಕ ಜಾಗೃತಿ ನಿಟ್ಟಿನಲ್ಲಿ ಬಹಳ ಪ್ರಮುಖವಾದಂತಹ ಕಾರ್ಯವನ್ನು ಮಾಡುತ್ತಿವೆ.ರೋಗ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಉತ್ತಮ ಎಂಬುದನ್ನು ನಾವು ಎಲ್ಲರೂ ಕೇಳಿರುತ್ತೇವೆ. ನೀವು ನಿಮ್ಮ ವೈಧಾನಿಕತೆಯಲ್ಲಿ ಪ್ರತಿಬಂಧಕ ಜಾಗೃತಿ ಒಂದು ಭಾಗವಾಗಿರುವಂತೆ ಮಾಡಲು ಪ್ರಯತ್ನ ಮಾಡಬೇಕು. ಇದು ನಿಮ್ಮ ಕೆಲಸವನ್ನು ಸರಳೀಕೃತ ಮಾಡುತ್ತದೆ ಮತ್ತು ರಾಷ್ಟ್ರದ ಸಂಪನ್ಮೂಲಗಳನ್ನು ಉಳಿಸುತ್ತದೆ. ಸಿ.ವಿ.ಸಿ. ತನ್ನ ಕೈಪಿಡಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದೆ ಎಂಬುದಾಗಿ ನನಗೆ ತಿಳಿಸಲಾಗಿದೆ. ಇ-ಜಾಗೃತಿಯ ಬಗ್ಗೆ ಈ ಕಾಯ್ದೆ ಪುಸ್ತಕದಲ್ಲಿ ಹೆಚ್ಚುವರಿ ಅಧ್ಯಾಯವನ್ನು ಸೇರಿಸಲಾಗಿದೆ. ಅಪರಾಧ ಎಸಗುವವರು ಪ್ರತೀ ದಿನ, ಪ್ರತೀ ತಿಂಗಳೂ ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ. ಆದರೆ ನಾವು ಅವರಿಗಿಂತ ಎರಡು ಹೆಜ್ಜೆ ಮುಂದಿರಬೇಕಾಗುತ್ತದೆ.
ಸ್ನೇಹಿತರೇ,
ಈ ಮಣ್ಣಿನ ಜೊತೆ, ಭಾರತ ಮಾತೆಯ ಜೊತೆ ನಿಮ್ಮ ಸಂಬಂಧ ಇರುತ್ತದೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ದೇಶವಾಸಿಗಳನ್ನು ವಂಚಿಸುವ ವ್ಯಕ್ತಿಗೆ ಜಗತ್ತಿನ ಯಾವ ಭಾಗದಲ್ಲಿಯೂ, ಅಥವಾ ದೇಶದಲ್ಲಿ ಎಲ್ಲಿಯೂ ಸುರಕ್ಷಿತ ಸ್ವರ್ಗ ಎಂಬುದಿಲ್ಲ. ರಾಷ್ಟ್ರದ ಹಿತಾಸಕ್ತಿಯ ವಿರುದ್ಧ ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿರುದ್ಧ ಸಾಗುತ್ತಿರುವ ವ್ಯಕ್ತಿ ಎಷ್ಟೇ ಬಲಾಢ್ಯನಾಗಿದ್ದರೂ ಸಹ ಆತನ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ರಾಷ್ಟ್ರದ ಹಿತಾಸಕ್ತಿಯನ್ನು ಅನುಸರಿಸಿ ಮತ್ತು ನಮ್ಮ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ಸಂಪೂರ್ಣ ಅರ್ಪಣಾ ಭಾವದಿಂದ ಹಾಗು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಲೇ ಹೋಗಬೇಕು. ನೀವೆಲ್ಲರೂ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕು-ನಿಮ್ಮ ಕೆಲಸ ಯಾರನ್ನಾದರೂ ಹೆದರಿಸುವಂತಹದಲ್ಲ. ಅದು ಬಡವರಲ್ಲಿ ಬಡವರ ಮನಸ್ಸಿನಲ್ಲಿರುವ ಅನವಶ್ಯಕ ಭಯವನ್ನು ಮತ್ತು ಹಿಂಜರಿಕೆಯ ವಾತಾವರಣವನ್ನು ನಿವಾರಿಸುವಂತಿರಬೇಕು. ಭ್ರಷ್ಟಾಚಾರದ ವಿರುದ್ಧದ ದೇಶದ ಹೋರಾಟದಲ್ಲಿ ನಿಮ್ಮ ಪ್ರಯತ್ನಗಳು ಬಹಳ ಮುಖ್ಯ. ಈ ಹೋರಾಟವನ್ನು ನಾವು ಏಜೆನ್ಸಿಗಳಿಗೆ ಮಿತಿಗೊಳಿಸಬಾರದು. ತಂತ್ರಜ್ಞಾನದ ಋಣಾತ್ಮಕವಾದ ಅಂಶಗಳನ್ನು ನಿಭಾಯಿಸುವುದೂ ಅಷ್ಟೇ ಮುಖ್ಯ.ಯಾವ ಬೀಗವೂ ಸಂಪೂರ್ಣ ಸುರಕ್ಷಿತ ಅಲ್ಲ ಎನ್ನುವಂತೆ ಯಾರಾದರೊಬ್ಬರು ತಪ್ಪು ಉದ್ದೇಶದಿಂದ ಅದರ ಬೀಗದ ಕೈಯನ್ನು ಹುಡುಕುತ್ತಾರೆ.ಅದೇ ರೀತಿ ಅಪರಾಧಿ ಹಿನ್ನೆಲೆಯವರು ತಂತ್ರಜ್ಞಾನದಿಂದ ಹೊರ ಹಾದಿ ಹುಡುಕುತ್ತಾರೆ. ಬಲಿಷ್ಠ ಡಿಜಿಟಲ್ ಆಡಳಿತಕ್ಕೆ ಸೈಬರ್ ಅಪರಾಧಗಳು ಮತ್ತು ಸೈಬರ್ ವಂಚನೆಗಳು ಬಹಳ ದೊಡ್ಡ ಸವಾಲಾಗಿವೆ.ನೀವೆಲ್ಲರೂ ಈ ಸವಾಲುಗಳ ಬಗ್ಗೆ ಗಂಭೀರ ಚಿಂತನೆ, ಮಂಥನ ನಡೆಸುತ್ತೀರೆಂಬ ಬಗ್ಗೆ ನನಗೆ ಖಾತ್ರಿ ಇದೆ. ಎಲ್ಲ ಸರಕಾರಿ ಇಲಾಖೆಗಳ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಪರಾಮರ್ಶೆ ಮಾಡುವ ಬಗ್ಗೆ ಆಗಸ್ಟ್ 15 ರಂದು ನಾನು ಕೆಂಪು ಕೋಟೆಯಿಂದ ಕೋರಿಕೆ ಮುಂದಿಟ್ಟಿದ್ದೆ. ಸಿ.ವಿ.ಸಿ. ಮತ್ತು ಸಿ.ಬಿ.ಐ. ಸಹಿತ ಎಲ್ಲಾ ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳಿಗೆ ನವ ಭಾರತದ ಧೋರಣೆಯ ಹಾದಿಯಲ್ಲಿ ಅಡ್ಡ ಬರುವ, ದಶಕಗಳಿಂದ ಅಲ್ಲಿರುವ ಅಂತಹ ಪ್ರಕ್ರಿಯೆಗಳನ್ನು ತೆಗೆದು ಹಾಕುವಂತೆ ನಾನು ಮನವಿ ಮಾಡುತ್ತೇನೆ. ನವ ಭಾರತದ ಹೊಸ ಧೋರಣೆ ಮತ್ತು ಹೊಸ ನಿರ್ಧಾರಗಳ ಜಾರಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತಿರುವ ಈ ಸುಸಂದರ್ಭವಲ್ಲದೆ ಬೇರೆ ಯಾವ ಸುಸಂದರ್ಭ ದೊರೆಯಬಲ್ಲದು?. ಭ್ರಷ್ಟಾಚಾರವನ್ನು ಬೆಳೆಸುವ ವ್ಯವಸ್ಥೆಯ ಹುಳುಕುಗಳನ್ನು, ಮತ್ತು ಅಲ್ಲಿರುವ ತಪ್ಪಿಸಿಕೊಂಡು ಪಾರಾಗುವ ದಾರಿಗಳನ್ನು ಬಲ್ಲವರು ನೀವು. ಭ್ರಷ್ಟಾಚಾರಕ್ಕೆ ಶೂನ್ಯ ಸಹನೆಯ ನವಭಾರತದ ನೀತಿಯನ್ನು ಬಲಪಡಿಸಬೇಕಾಗಿದೆ. ನೀವು ಇಂತಹ ಪ್ರಕ್ರಿಯೆಗಳ ಬಗ್ಗೆ ಮತ್ತು ಕಾನೂನುಗಳ ಬಗ್ಗೆ ನಿಮ್ಮ ಚಿಂತನ ಮಂಥನದಲ್ಲಿ ಚರ್ಚಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.
ಬಡವರು ವ್ಯವಸ್ಥೆಯ ಹತ್ತಿರ ಬರುವ ರೀತಿಯಲ್ಲಿ ಮತ್ತು ಭ್ರಷ್ಟರು ಅದರಿಂದ ದೂರ ಹೋಗುವಂತೆ ಮಾಡುವ ರೀತಿಯಲ್ಲಿ ನೀವು ಕಾನೂನುಗಳನ್ನು ಅನುಷ್ಠಾನ ಮಾಡಬೇಕು. ಇದು ದೇಶಕ್ಕೆ ಬಹಳ ದೊಡ್ಡ ಸೇವೆಯಾಗಬಲ್ಲದು. ಸ್ವಾತಂತ್ರ್ಯದ ಈ ಪುಣ್ಯಕರ ಕಾಲಘಟ್ಟದಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ಅನ್ವೇಷಣೆಯೊಂದಿಗೆ ನೀವು ಮುನ್ನಡೆಯಿರಿ ಎಂಬೀ ಆಶಯದೊಂದಿಗೆ, ನಿಮಗೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ!
ಬಹಳ ಧನ್ಯವಾದಗಳು!