ನಮಸ್ಕಾರ!
ರಾಷ್ಟ್ರೀಯ ಮಟ್ಟದ 'ರೋಜ್‌ಗಾರ್ ಮೇಳಗಳು' ಅಥವಾ ಉದ್ಯೋಗ ಮೇಳಗಳು ಎನ್ ಡಿಎ ಮತ್ತು ಬಿಜೆಪಿ ಸರ್ಕಾರದ ಹೊಸ ಗುರುತಾಗಿವೆ. ಇಂದು ಮತ್ತೊಮ್ಮೆ 70 ಸಾವಿರಕ್ಕೂ ಹೆಚ್ಚು ಯುವಕರು ನೇಮಕಾತಿ ಪತ್ರ ಪಡೆದಿದ್ದಾರೆ. ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಇಂತಹ ರೋಜ್‌ಗಾರ್ ಮೇಳಗಳನ್ನು ಆಯೋಜಿಸುತ್ತಿರುವುದು ನನಗೆ ಖುಷಿ ತಂದಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆಯುತ್ತಿರುವವರಿಗೆ ಇದು ಅತ್ಯಂತ ನಿರ್ಣಾಯಕ ಸಮಯ.
‘ಆಜಾದಿ ಕಾ ಅಮೃತಕಾಲ’ದ ಅವಧಿ ಈಗಷ್ಟೇ ಶುರುವಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದೀರಿ. ನೀವು ವರ್ತಮಾನಕ್ಕಾಗಿ ಮಾತ್ರವಲ್ಲದೆ, ದೇಶದ ಉಜ್ವಲ ಭವಿಷ್ಯದತ್ತಲೂ ಶ್ರಮಿಸಬೇಕು. ಇಂದು ನೇಮಕಾತಿ ಪತ್ರವನ್ನು ಪಡೆದ ಎಲ್ಲಾ ಯುವಕರು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಭಾರತದಲ್ಲಿಂದು ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಹೊಸ ಉದ್ಯೋಗಾವಕಾಶಗಳು ನಿರಂತರವಾಗಿ ಸೃಷ್ಟಿಯಾಗುತ್ತಿವೆ. ನಮ್ಮ ಹೆಚ್ಚಿನ ಸಂಖ್ಯೆಯ ಯುವಕರು ಸ್ವಯಂ-ಉದ್ಯೋಗದ ನಿರೀಕ್ಷೆಗಳನ್ನು ಸಹ ನೋಡುತ್ತಿದ್ದಾರೆ. ಬ್ಯಾಂಕ್ ಗ್ಯಾರಂಟಿ ಇಲ್ಲದೆ ಆರ್ಥಿಕ ನೆರವು ನೀಡುವ ಮುದ್ರಾ ಯೋಜನೆ ಕೋಟ್ಯಂತರ ಯುವಕರಿಗೆ ಸಹಾಯ ಮಾಡಿದೆ. ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾದಂತಹ ಅಭಿಯಾನಗಳು ಯುವಕರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಸರಕಾರದಿಂದ ನೆರವು ಪಡೆದ ಈ ಯುವಕರು ಈಗ ತಾವೇ ಅನೇಕ ಯುವಕರಿಗೆ ಉದ್ಯೋಗ ನೀಡುತ್ತಿದ್ದಾರೆ.
ಈ ಅಭಿಯಾನದ ಅಡಿ, ಕಳೆದ ವರ್ಷಗಳಲ್ಲಿ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಉದ್ಯೋಗಗಳನ್ನು ನೀಡಿದ ರೀತಿ ಅಭೂತಪೂರ್ವವಾಗಿದೆ. ದೇಶದಲ್ಲಿ ಎಸ್‌ಎಸ್‌ಸಿ, ಯುಪಿಎಸ್‌ಸಿ ಮತ್ತು ಆರ್‌ಆರ್‌ಬಿನಂತಹ ಪ್ರಮುಖ ಸರ್ಕಾರಿ ಉದ್ಯೋಗ ಒದಗಿಸುವ ಸಂಸ್ಥೆಗಳು ಹಿಂದೆಂದಿಗಿಂತಲೂ ಈ ವ್ಯವಸ್ಥೆಗಳ ಮೂಲಕ ಹೆಚ್ಚಿನ ಸಂಖ್ಯೆಯ ಯುವಕರಿಗೆ ಉದ್ಯೋಗಗಳನ್ನು ನೀಡಿವೆ. ಸ್ವಲ್ಪ ಸಮಯದ ಹಿಂದೆ ತೋರಿಸಲಾದ ವೀಡಿಯೊದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಪರೀಕ್ಷಾ ಪ್ರಕ್ರಿಯೆಯನ್ನು ಪಾರದರ್ಶಕ, ವ್ಯವಸ್ಥಿತ ಮತ್ತು ಸರಳವಾಗಿಸಲು ಈ ಸಂಸ್ಥೆಗಳು ಒತ್ತು ನೀಡಿವೆ. ಮೊದಲು, ಪರೀಕ್ಷೆಗಳ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಂಪೂರ್ಣ ಆವರ್ತನವು 1 ವರ್ಷ ಅಥವಾ ಒಂದೂವರೆ ವರ್ಷ ತೆಗೆದುಕೊಳ್ಳುತ್ತಿತ್ತು. ನ್ಯಾಯಾಲಯದ ಪ್ರಕರಣವಿದ್ದರೆ, ಪ್ರಕ್ರಿಯೆಯಲ್ಲಿ 2 ಅಥವಾ 5 ವರ್ಷ ವ್ಯರ್ಥವಾಗುತ್ತಿತ್ತು. ಆದರೆ ಈಗ ಇಡೀ ಪ್ರಕ್ರಿಯೆ ಕೆಲವೇ ತಿಂಗಳಲ್ಲಿ ಪಾರದರ್ಶಕ ರೀತಿಯಲ್ಲಿ ಪೂರ್ಣಗೊಳ್ಳುತ್ತಿದೆ.
ಸ್ನೇಹಿತರೆ,
ಅಭಿವೃದ್ಧಿಯತ್ತ ನಮ್ಮ ಪಯಣದಲ್ಲಿ ಇಂದು ಇಡೀ ಜಗತ್ತು ನಮ್ಮೊಂದಿಗೆ ನಡೆಯಲು ಸಿದ್ಧವಾಗಿದೆ. ಹಿಂದೆಂದೂ ಭಾರತದ ಮೇಲೆ, ನಮ್ಮ ಆರ್ಥಿಕತೆಯ ಮೇಲೆ ಅಂತಹ ನಂಬಿಕೆ ಇರಲಿಲ್ಲ. ಒಂದು ಕಡೆ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ವಿಶ್ವಾದ್ಯಂತ ಕೊರೊನಾದಂತಹ ತೀವ್ರ ಸಾಂಕ್ರಾಮಿಕ ರೋಗ, ಇನ್ನೊಂದು ಕಡೆ ಯುದ್ಧದಿಂದಾಗಿ ಜಾಗತಿಕ ಪೂರೈಕೆ ಸರಪಳಿ ಹಳಿ ತಪ್ಪಿದ್ದು ನಿಮಗೆ ಈಗಾಗಲೇ ತಿಳಿದಿದೆ. ವಿಶ್ವಾದ್ಯಂತ ಅನೇಕ ಸವಾಲುಗಳು ಗೋಚರಿಸಿವೆ. ನನ್ನ ಯುವ ಸ್ನೇಹಿತರೇ, ನೀವು ಇದರತ್ತ ಗಮನ ಹರಿಸಬೇಕು. ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ, ಭಾರತವು ತನ್ನ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ.
ಇಂದು ವಿಶ್ವದ ಅಗ್ರಮಾನ್ಯ ಕಂಪನಿಗಳು ಉತ್ಪಾದನೆ ಮಾಡಲು ಭಾರತಕ್ಕೆ ಬರುತ್ತಿವೆ. ಇಂದು ಭಾರತದ ವಿದೇಶಿ ವಿನಿಮಯ ಸಂಗ್ರಹ ದಾಖಲೆ ಮಟ್ಟದಲ್ಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿಯುತ್ತಿರುವಾಗ, ಸಹಜವಾಗಿ, ಉತ್ಪಾದನೆ ಹೆಚ್ಚುತ್ತದೆ, ಕೈಗಾರಿಕೆಗಳು ವಿಸ್ತರಿಸುತ್ತವೆ, ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿ, ರಫ್ತು ಹೆಚ್ಚಾಗುತ್ತದೆ. ಸ್ವಾಭಾವಿಕವಾಗಿ ಈ ಕೆಲಸವನ್ನು ಹೊಸ ಯುವಕರು ಇಲ್ಲದೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಉದ್ಯೋಗಾವಕಾಶಗಳು ಬಹಳ ವೇಗವಾಗಿ ಬೆಳೆಯುತ್ತಿವೆ.
ನಮ್ಮ ಸರ್ಕಾರದ ನಿರ್ಧಾರಗಳು ಖಾಸಗಿ ವಲಯದಲ್ಲಿ ಲಕ್ಷಗಟ್ಟಲೆ ಹೊಸ ಅವಕಾಶಗಳನ್ನು ಹೇಗೆ ಸೃಷ್ಟಿಸಿವೆ ಎಂಬುದರ ಕುರಿತು ಸ್ವಲ್ಪ ಸಮಯದ ಹಿಂದೆ ಡಾ. ಜಿತೇಂದ್ರ ಸಿಂಗ್ ಜೀ ಅವರು ಸಾಲು ಸಾಲಾಗಿ ವಿವರವಾದ ಮಾಹಿತಿ ನೀಡಿದರು. ಆದರೆ ನಾನು ಆಟೋಮೊಬೈಲ್ ಕ್ಷೇತ್ರದ ಒಂದು ಉದಾಹರಣೆಯನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ದೇಶದ ಜಿಡಿಪಿಯಲ್ಲಿ ಈ ಕ್ಷೇತ್ರದ ಕೊಡುಗೆ ಶೇ.6.5ಕ್ಕಿಂತ ಹೆಚ್ಚಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದ ವಾಹನೋದ್ಯಮವು ಪ್ರಗತಿಯ ಹಾದಿ ಹಿಡಿದಿದೆ.
ಇಂದು ಭಾರತದಿಂದ ವಿಶ್ವದ ಹಲವು ದೇಶಗಳಿಗೆ ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳ ರಫ್ತು ಹೆಚ್ಚುತ್ತಿದೆ. ಇದಲ್ಲದೆ, ನಮ್ಮ ತ್ರಿಚಕ್ರ, ದ್ವಿಚಕ್ರ ವಾಹನಗಳ ರಫ್ತು ಕೂಡ ಗಣನೀಯವಾಗಿ ಹೆಚ್ಚುತ್ತಿದೆ. 10 ವರ್ಷಗಳ ಹಿಂದೆ ಈ ಉದ್ಯಮದ ವಹಿವಾಟು ಸುಮಾರು 5 ಲಕ್ಷ ಕೋಟಿ ರೂ. ಇತ್ತು. ಇಂದು ಈ ಉದ್ಯಮವು 5 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಭಾರತದಲ್ಲಿ ನಿರಂತರವಾಗಿ ವಿಸ್ತರಿಸುತ್ತಿದೆ. ಭಾರತ ಸರ್ಕಾರದ ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್‌ಐ) ಯೋಜನೆಯೊಂದಿಗೆ ಆಟೋಮೊಬೈಲ್ ಕ್ಷೇತ್ರವೂ ಪ್ರಬಲ ಉತ್ತೇಜನ ಪಡೆಯುತ್ತಿದೆ. ವೇಗವಾಗಿ ಮುನ್ನಡೆಯುತ್ತಿರುವ ಇಂತಹ ಕ್ಷೇತ್ರಗಳು ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ.
ಸ್ನೇಹಿತರೆ,
ಭಾರತವಿಂದು ಒಂದು ದಶಕದ ಹಿಂದೆ ಇದ್ದಕ್ಕಿಂತ ಹೆಚ್ಚು ಸ್ಥಿರ, ಹೆಚ್ಚು ಸುರಕ್ಷಿತ ಮತ್ತು ಬಲಿಷ್ಠ ದೇಶವಾಗಿದೆ. ರಾಜಕೀಯ ಭ್ರಷ್ಟಾಚಾರ, ಯೋಜನೆಗಳಲ್ಲಿನ ಗೊಂದಲಗಳು, ಸಾರ್ವಜನಿಕ ಹಣದ ದುರುಪಯೋಗ ಹಿಂದಿನ ಎಲ್ಲಾ ಸರ್ಕಾರಗಳ ಗುರುತಾಗಿದೆ. ಇಂದು ಭಾರತವು ತನ್ನ ರಾಜಕೀಯ ಸ್ಥಿರತೆಗೆ ಹೆಸರುವಾಸಿಯಾಗಿದೆ. ಜಗತ್ತಿನಲ್ಲಿ ರಾಜಕೀಯ ಸ್ಥಿರತೆ ಬಹಳ ಮುಖ್ಯ.
ಇಂದು ಭಾರತ ಸರ್ಕಾರವು ತನ್ನ ದಿಟ್ಟ ನಿರ್ಧಾರಗಳಿಂದ ಗುರುತಿಸಿಕೊಂಡಿದೆ. ಒಂದು ನಿರ್ಣಾಯಕ ಸರ್ಕಾರವಾಗಿದೆ. ಇಂದು ಭಾರತ ಸರ್ಕಾರವು ತನ್ನ ಆರ್ಥಿಕ ಮತ್ತು ಪ್ರಗತಿಪರ ಸಾಮಾಜಿಕ ಸುಧಾರಣೆಗಳಿಗಾಗಿ ಗುರುತಿಸಲ್ಪಟ್ಟಿದೆ. ಜಾಗತಿಕ ಏಜೆನ್ಸಿಗಳು ನಿರಂತರವಾಗಿ ಶ್ಲಾಘಿಸುತ್ತಿವೆ ಮತ್ತು ಭವಿಷ್ಯ ನುಡಿಯುತ್ತಿವೆ. ಅದು ಹೆದ್ದಾರಿಗಳ ನಿರ್ಮಾಣವಾಗಲಿ ಅಥವಾ ರೈಲು ಮಾರ್ಗಗಳ ನಿರ್ಮಾಣವಾಗಲಿ ಅಥವಾ ಸುಲಭವಾಗಿ ಜೀವನ ನಡೆಸುವುದಾಗಲಿ ಅಥವಾ ಸುಲಭವಾಗಿ ಉದ್ಯಮ ವ್ಯವಹಾರ ನಡೆಸುವುದಾಗಲಿ, ಭಾರತವು ಹಿಂದಿನ ಸರ್ಕಾರಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ.
ಹಲವು ವರ್ಷಗಳಲ್ಲಿ ಭಾರತವು ತನ್ನ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆಯು ಕೋಟಿಗಟ್ಟಲೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿದೆ. ಈಗ ನಾನು ಸಾಮಾಜಿಕ ಮೂಲಸೌಕರ್ಯದ ಉದಾಹರಣೆ ನೀಡುತ್ತೇನೆ, ಇದು ನಮ್ಮ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ, ಅದೆಂದರೆ ನೀರು. ನೀರಿಗಾಗಿ ಜಲಜೀವನ್ ಮಿಷನ್ ಆರಂಭಿಸಿದ್ದೇವೆ. ಜಲ ಜೀವನ್ ಮಿಷನ್‌ಗೆ ಸುಮಾರು 4 ಲಕ್ಷ ಕೋಟಿ ರೂ. ತೊಡಗಿಸಿದ್ದೇವೆ. ಈ ಮಿಷನ್ ಪ್ರಾರಂಭಿಸಿದಾಗ, ಗ್ರಾಮೀಣ ಪ್ರದೇಶದ ಪ್ರತಿ 100 ಮನೆಗಳಲ್ಲಿ 15 ಮನೆಗಳಿಗೆ ಮಾತ್ರ ಪೈಪ್‌ಲೈನ್ ನೀರು ಸರಬರಾಜು ಮಾಡಲಾಗಿತ್ತು. ಇದು ಸರಾಸರಿ ಅಂಕಿ ಅಂಶವಾಗಿದೆ. 100 ಮನೆಗಳ ಪೈಕಿ 15 ಮನೆಗಳಿಗೆ ಪೈಪ್‌ಲೈನ್ ಮೂಲಕ ನೀರು ಸಿಗುತ್ತಿತ್ತು. ಇಂದು, ಜಲ ಜೀವನ್ ಮಿಷನ್‌ನಿಂದಾಗಿ, ಪ್ರತಿ 100 ಮನೆಗಳಲ್ಲಿ ಅರವತ್ತೆರಡು (62) ಮನೆಗಳಿಗೆ ಪೈಪ್‌ಲೈನ್ ನೀರು ಸರಬರಾಜು ಲಭ್ಯವಿದೆ, ಕೆಲಸವು ಇನ್ನೂ ವೇಗದಲ್ಲಿ ನಡೆಯುತ್ತಿದೆ. ಇಂದು ದೇಶದ 130 ಜಿಲ್ಲೆಗಳ ಪ್ರತಿ ಹಳ್ಳಿ ಮತ್ತು ಪ್ರತಿ ಮನೆಯಲ್ಲಿ ನಲ್ಲಿ ನೀರು ಲಭ್ಯವಿದೆ.
ಮತ್ತು ಸ್ನೇಹಿತರೆ,
ಈಗ ಶುದ್ಧ ಕುಡಿಯುವ ನೀರು ತಲುಪುತ್ತಿರುವುದರಿಂದ ಜನರ ಸಮಯವೂ ಉಳಿತಾಯವಾಗಿದೆ. ಅತ್ಯಂತ ಮುಖ್ಯವಾಗಿ, ಜನರು ಈಗ ಗಂಭೀರ ಕಾಯಿಲೆಗಳಿಂದ ರಕ್ಷಿಸಲ್ಪಟ್ಟಿದ್ದಾರೆ. ಕುಡಿಯುವ ನೀರು ಉತ್ತಮ ಆರೋಗ್ಯ ಖಚಿತಪಡಿಸಿಕೊಳ್ಳಲು ಉತ್ತಮ ಔಷಧಿಯಂತಿದೆ. ಪ್ರತಿ ಮನೆಗೆ ಪೈಪ್ ನೀರು ತಲುಪಲು ಆರಂಭಿಸಿದಾಗ ಅತಿಸಾರದಿಂದ 4 ಲಕ್ಷ ಸಾವುಗಳನ್ನು ತಪ್ಪಿಸಬಹುದು ಅಥವಾ 4 ಲಕ್ಷ ಜೀವಗಳನ್ನು ಉಳಿಸಬಹುದು ಎಂದು ಅಧ್ಯಯನ ಬಹಿರಂಗಪಡಿಸಿದೆ. ಅಂದರೆ ಜಲಜೀವನ್ ಮಿಷನ್ 4 ಲಕ್ಷ ಜನರ ಜೀವ ಉಳಿಸಿದೆ.
ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ತಲುಪಿದ ನಂತರ ದೇಶದ ಬಡವರು 8 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣ ಉಳಿಸಬಹುದು ಎಂದು ಈ ಅಧ್ಯಯನ ಹೇಳಿದೆ. ಅಂದರೆ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಹಣ ಉಳಿತಾಯವಾಗುತ್ತಿದೆ. ಮೊದಲು ಅವರು ಈ ಹಣವನ್ನು ನೀರಿನ ವ್ಯವಸ್ಥೆಗೆ ಮತ್ತು ನೀರಿನಿಂದ ಹರಡುವ ರೋಗಗಳ ಚಿಕಿತ್ಸೆಗಾಗಿ ಖರ್ಚು ಮಾಡಬೇಕಾಗಿತ್ತು. ಜಲಜೀವನ್‌ನ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ಅದು ಮಹಿಳೆಯರಿಗೆ ಸಾಕಷ್ಟು ಸಮಯವನ್ನು ಉಳಿಸುತ್ತಿದೆ.
ಈ 'ರೋಜ್‌ಗಾರ್ ಮೇಳ'ದಲ್ಲಿ ಉದ್ಯೋಗ ಪಡೆದ ನೀವೆಲ್ಲರೂ ಸರ್ಕಾರ ರೂಪಿಸಿರುವ ಪ್ರತಿಯೊಂದು ಯೋಜನೆಗೂ ಗುಣಕ ಪರಿಣಾಮವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಜಲಜೀವನ್ ಮಿಷನ್‌ನ ಉದಾಹರಣೆಯನ್ನು ನಾನು ನಿಮ್ಮ ಮುಂದೆ ಇಟ್ಟಿದ್ದೇನೆ. ಅದೇ ರೀತಿ ಈಗ ನೀವು ಸರ್ಕಾರಿ ವ್ಯವಸ್ಥೆಗೆ ಪ್ರವೇಶಿಸಿದ್ದೀರಿ, ನಿಮ್ಮ ಇಲಾಖೆಯ ಪ್ರತಿಯೊಂದು ಗುರಿ ಸಾಧಿಸಲು ನೀವು ಶ್ರಮಿಸುತ್ತೀರಿ ಮತ್ತು ಸರ್ಕಾರದ ಪ್ರತಿಯೊಂದು ಯೋಜನೆಯನ್ನು ತ್ವರಿತ ಗತಿಯಲ್ಲಿ ಯಶಸ್ವಿಗೊಳಿಸುತ್ತೀರಿ. ಇದು ನಿಮ್ಮ ಮೇಲಿನ ನನ್ನ ನಂಬಿಕೆ ಹಾಗೂ ನಿಮ್ಮಿಂದ ನನ್ನ ನಿರೀಕ್ಷೆಯೂ ಆಗಿದೆ.
ಸ್ನೇಹಿತರೆ,
ದೇಶದಲ್ಲಿ ನಡೆಯುತ್ತಿರುವ ಈ ಉದ್ಯೋಗ ಅಭಿಯಾನವು ಪಾರದರ್ಶಕತೆ ಮತ್ತು ಉತ್ತಮ ಆಡಳಿತ ಎರಡಕ್ಕೂ ಸಾಕ್ಷಿಯಾಗಿದೆ. ನಮ್ಮ ದೇಶದ ವಂಶ ಪಾರಂಪರ್ಯ ರಾಜಕೀಯ ಪಕ್ಷಗಳು ಪ್ರತಿಯೊಂದು ವ್ಯವಸ್ಥೆಯಲ್ಲಿ ಸ್ವಜನಪಕ್ಷಪಾತವನ್ನು ಹೇಗೆ ಉತ್ತೇಜಿಸಿವೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಸರ್ಕಾರಿ ಉದ್ಯೋಗಗಳ ಬಗ್ಗೆ ಹೇಳುವುದಾದರೆ, ಈ ವಂಶ ಪಾರಂಪರ್ಯದ ಪಕ್ಷಗಳು ಸ್ವಜನಪಕ್ಷಪಾತ, ಓಲೈಕೆ ಮತ್ತು ಭ್ರಷ್ಟಾಚಾರವನ್ನು ಉತ್ತೇಜಿಸಿವೆ. ಈ ಪಕ್ಷಗಳು ದೇಶದ ಕೋಟಿಗಟ್ಟಲೆ ಯುವಕರಿಗೆ ದ್ರೋಹ ಬಗೆದಿವೆ.
2014ರಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಂಡುಬಂದಿದ್ದು, ಸ್ವಜನಪಕ್ಷಪಾತವೂ ಅಂತ್ಯವಾಗುತ್ತಿದೆ. ಕೇಂದ್ರ ಸರ್ಕಾರದ ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಯಲ್ಲಿ ಸಂದರ್ಶನ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಯುವಕರು ಇದರ ಪ್ರಯೋಜನ ಪಡೆದಿದ್ದಾರೆ. ಒಂದೆಡೆ ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನವಿದ್ದರೆ, ಇನ್ನೊಂದೆಡೆ ಸ್ವಜನಪಕ್ಷಪಾತ ನಿಂತಿದೆ. ನನ್ನ ಯುವಕರು ಇದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಕೆಲವು ವಿಷಯಗಳು ಸತ್ಯಗಳ ಆಧಾರದ ಮೇಲೆ ಮೇಲ್ಮೈಗೆ ಬರುತ್ತಿವೆ.
ಒಂದು ಅಥವಾ 2 ದಿನಗಳ ಹಿಂದೆ ನೀವು ಮಾಧ್ಯಮ ವರದಿಗಳನ್ನು ನೋಡಿರಬೇಕು; ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಬಹಳಷ್ಟು ನೋಡಲಾಗಿದೆ. ಒಂದು ರಾಜ್ಯದಲ್ಲಿ 'ಉದ್ಯೋಗಕ್ಕಾಗಿ ನಗದು' ಪಡೆದಿರುವ ಹಗರಣವು ನನ್ನ ದೇಶದ ಯುವಕರಿಗೆ ಸಾಕಷ್ಟು ಕಳವಳ ಉಂಟುಮಾಡಿದೆ. ಹಾಗಾದರೆ, ಆ ರಾಜ್ಯದಲ್ಲಿನ ವ್ಯವಸ್ಥೆಯು ನಿಖರವಾಗಿ ಏನು? ಸರ್ಕಾರಿ ಉದ್ಯೋಗ ವಲಯದ ಪ್ರತಿಯೊಂದು ಹುದ್ದೆಗೂ 'ರೇಟ್ ಕಾರ್ಡ್'ಗಳಿವೆ. ಉದಾಹರಣೆಗೆ, ನೀವು ಆಹಾರಕ್ಕಾಗಿ ಹೋಟೆಲ್‌ಗೆ ಹೋದಾಗ, ಅಲ್ಲಿ ದರ ಕಾರ್ಡ್ ಇರುತ್ತದೆ, ಅದೇ ರೀತಿ ಪ್ರತಿ ಉದ್ಯೋಗಕ್ಕೂ 'ರೇಟ್ ಕಾರ್ಡ್' ಇರುತ್ತದೆ. ಈ ವ್ಯವಸ್ಥೆಯಿಂದ ಬಡವರನ್ನು ಲೂಟಿ ಮಾಡಲಾಗುತ್ತಿದೆ. ಅದು ಹೇಗೆ? ನಿಮಗೆ ಸ್ವೀಪರ್ ಕೆಲಸ ಬೇಕಾದರೆ, ಆ ಕೆಲಸ ಪಡೆಯಲು ನೀವು ಈ ನಿರ್ದಿಷ್ಟ ದರವನ್ನು ಲಂಚವಾಗಿ ಪಾವತಿಸಬೇಕಾಗುತ್ತದೆ. ನೀವು ಚಾಲಕನ ಕೆಲಸ ಬಯಸಿದರೆ ಆ ಕೆಲಸ ಪಡೆಯಲು ಈ ದರ ಅನ್ವಯಿಸುತ್ತದೆ; ನೀವು ಗುಮಾಸ್ತನ ಕೆಲಸ ಅಥವಾ ಶಿಕ್ಷಕನ ಕೆಲಸ, ಅಥವಾ ನರ್ಸ್ ಕೆಲಸ ಬಯಸಿದರೆ ನಿಮಗೆ ನಿರ್ದಿಷ್ಟ ದರಗಳು ಅನ್ವಯವಾಗುತ್ತವೆ. ಸುಮ್ಮನೆ ಊಹಿಸಿಕೊಳ್ಳಿ! ಪ್ರತಿ ಹುದ್ದೆಗೂ ಆ ರಾಜ್ಯದಲ್ಲಿ ‘ರೇಟ್ ಕಾರ್ಡ್’ ಬಳಕೆಯಾಗುತ್ತಿದ್ದು, ಕಮೀಷನ್ ಹಣ ಅಲ್ಲಿ ಚಾಲ್ತಿಯಲ್ಲಿದೆ. ದೇಶದ ಯುವಕರು ಎಲ್ಲಿಗೆ ಹೋಗುತ್ತಾರೆ? ಈ ಸ್ವಾರ್ಥಿ ರಾಜಕೀಯ ಪಕ್ಷಗಳು ಉದ್ಯೋಗಕ್ಕಾಗಿ 'ರೇಟ್ ಕಾರ್ಡ್'ಗಳನ್ನು ಮಾಡುತ್ತವೆ.
ಇದೀಗ ಕೆಲ ದಿನಗಳ ಹಿಂದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರೈಲ್ವೆ ಮಂತ್ರಿಯೊಬ್ಬರು ಬಡ ರೈತರಿಗೆ ಉದ್ಯೋಗ ನೀಡುವ ಬದಲು ಅವರ ಜಮೀನುಗಳನ್ನು ಬರೆದುಕೊಟ್ಟಿದ್ದಾರೆ. ಅಂದರೆ 'ಉದ್ಯೋಗಕ್ಕಾಗಿ ಭೂಮಿ' ವ್ಯವಸ್ಥೆ. ಆ ಪ್ರಕರಣವನ್ನೂ ಸಿಬಿಐ ತನಿಖೆ ನಡೆಸುತ್ತಿದೆ. ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಸಹೋದರ ಸಹೋದರಿಯರೆ,
ನಿಮ್ಮ ಮುಂದೆ 2 ವಿಷಯಗಳಿವೆ - ಒಂದು ಕಡೆ ವಂಶ ಪಾರಂಪರ್ಯದ ಪಕ್ಷಗಳು, ಸ್ವಜನಪಕ್ಷಪಾತ ಉತ್ತೇಜಿಸುವ ಪಕ್ಷಗಳು, ಭ್ರಷ್ಟಾಚಾರದ ಮೂಲಕ ಉದ್ಯೋಗ ನೀಡುವ ಹೆಸರಿನಲ್ಲಿ ದೇಶದ ಯುವಕರನ್ನು ಲೂಟಿ ಮಾಡುವ ಪಕ್ಷಗಳು, ಜಾಬ್ ರೇಟ್ ಕಾರ್ಡ್ ಹೊಂದಿರುವ ಪಕ್ಷಗಳು ಮತ್ತು ಎಲ್ಲದಕ್ಕೂ ರೇಟ್ ಕಾರ್ಡ್‌ಗಳು ಮತ್ತು ಕಮೀಷನ್ ಹಣವನ್ನು ತೆಗೆದುಕೊಳ್ಳುತ್ತಾರೆ; ಮತ್ತೊಂದೆಡೆ, ನಾವು ಯುವಕರ ಉಜ್ವಲ ಭವಿಷ್ಯ ಕಾಪಾಡಲು ಕೆಲಸ ಮಾಡುತ್ತಿದ್ದೇವೆ. ದರ ಕಾರ್ಡ್‌ಗಳು ನಿಮ್ಮ ಸಾಮರ್ಥ್ಯ, ನಿಮ್ಮ ತಾಕತ್ತು ಮತ್ತು ನಿಮ್ಮ ಕನಸುಗಳನ್ನು ಛಿದ್ರಗೊಳಿಸುತ್ತವೆ. ನಿಮ್ಮನ್ನು ರಕ್ಷಿಸಲು ಮತ್ತು ನಿಮ್ಮ ಕನಸುಗಳಿಗಾಗಿ ಬದುಕಲು ನಾವು ಬದ್ಧರಾಗಿದ್ದೇವೆ. ನಿಮ್ಮ ನಿರ್ಣಯಗಳನ್ನು ಪೂರೈಸಲು ನಾವು ಕೆಲಸ ಮಾಡುತ್ತೇವೆ. ನಿಮ್ಮ ಪ್ರತಿಯೊಂದು ಆಶಯ, ಆಕಾಂಕ್ಷೆ ಮತ್ತು ನಿಮ್ಮ ಕುಟುಂಬದ ಆಕಾಂಕ್ಷೆಗಳನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ. ಈಗ ದೇಶದ ಯುವಕರ ಭವಿಷ್ಯವು ದರ ಕಾರ್ಡ್‌ಗಳ ಮೇಲೆ ಅವಲಂಬಿತವಾಗಿದೆಯೇ ಅಥವಾ ಸುರಕ್ಷತಾ ವ್ಯವಸ್ಥೆಯ ಅಡಿ ಸುರಕ್ಷಿತವಾಗಿ ಅಭಿವೃದ್ಧಿ ಹೊಂದುತ್ತದೆಯೇ ಎಂಬುದನ್ನು ದೇಶವು ನಿರ್ಧರಿಸುತ್ತದೆ.
ಸ್ನೇಹಿತರೆ,
ಒಂದೆಡೆ ಈ ವಂಶ ಪಾರಂಪರ್ಯ ಪಕ್ಷಗಳು ದೇಶದ ಸಾಮಾನ್ಯ ವ್ಯಕ್ತಿಯಿಂದ ಬೆಳವಣಿಗೆ ಮತ್ತು ಪ್ರಗತಿಯ ಅವಕಾಶಗಳನ್ನು ಕಸಿದುಕೊಳ್ಳುತ್ತಿವೆ; ಮತ್ತೊಂದೆಡೆ, ನಾವು ದೇಶದ ಸಾಮಾನ್ಯ ಜನರಿಗೆ ಪ್ರತಿದಿನ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ.
ಸ್ನೇಹಿತರೆ,
ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳು ಜನರನ್ನು ಪರಸ್ಪರ ಹೊಡೆದಾಡಲು ಮತ್ತು ದೇಶವನ್ನು ಒಡೆಯಲು ಭಾಷೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ, ಆದರೆ ನಾವು ಜನರಿಗೆ ಉದ್ಯೋಗ ನೀಡಿ ಅವರನ್ನು ಸಬಲೀಕರಣಗೊಳಿಸಲು ಭಾಷೆಯನ್ನು ಮಾಧ್ಯಮವನ್ನಾಗಿ ಮಾಡುತ್ತಿದ್ದೇವೆ. ಯಾರಾದರೂ ಅವರ ಕನಸನ್ನು ನನಸಾಗಿಸಲು ಬಯಸಿದರೆ, ಯಾವುದೇ ಭಾಷೆ ಅವರಿಗೆ ಅಡ್ಡಿಯಾಗಬಾರದು ಎಂಬುದನ್ನು ನಮ್ಮ ಸರ್ಕಾರ ಖಚಿತಪಡಿಸುತ್ತಿದೆ. ಭಾರತ ಸರ್ಕಾರವು ನೇಮಕಾತಿ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳಿಗೆ ಮಾತೃಭಾಷೆ ಬಳಸುವುದಕ್ಕೆ ಒತ್ತು ನೀಡುತ್ತಿದೆ. ಹಾಗಾಗಿ, ನನ್ನ ದೇಶದ ಪುತ್ರರು ಮತ್ತು ಪುತ್ರಿಯರು ಮತ್ತು ನಮ್ಮ ಯುವಕರು ಇದರ ಗರಿಷ್ಠ ಲಾಭ ಪಡೆಯುತ್ತಿದ್ದಾರೆ. ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಸುವ ಮೂಲಕ ಯುವಕರು ತಮ್ಮ ಸಾಮರ್ಥ್ಯವನ್ನು ಸುಲಭವಾಗಿ ಸಾಬೀತುಪಡಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಸ್ನೇಹಿತರೆ,
ಕ್ಷಿಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿರುವ ಇಂದಿನ ಭಾರತದಲ್ಲಿ ಸರ್ಕಾರಿ ವ್ಯವಸ್ಥೆಗಳು ಮತ್ತು ಸರ್ಕಾರಿ ನೌಕರರು ಕೆಲಸ ಮಾಡುವ ರೀತಿ ಸಹ ವೇಗವಾಗಿ ಬದಲಾಗುತ್ತಿದೆ. ದೇಶದ ಸಾಮಾನ್ಯ ನಾಗರಿಕರು ಸೇವೆಗಳನ್ನು ಪಡೆಯಲು ಪದೇಪದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾದ ಸಮಯವಿತ್ತು. ಇಂದು ಸರಕಾರ ತನ್ನೆಲ್ಲ ಸೇವೆಗಳನ್ನು ದೇಶದ ನಾಗರಿಕರ ಮನೆ ಬಾಗಿಲಿಗೆ ಕೊಂಡೊಯ್ಯುತ್ತಿದೆ. ಈಗ ನಮ್ಮ ಸರ್ಕಾರವು ಜನರ ನಿರೀಕ್ಷೆಗಳನ್ನು ಮತ್ತು ಪ್ರದೇಶಗಳ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಿರಂತರ ಕೆಲಸ ಮಾಡುತ್ತಿದೆ. ವಿವಿಧ ಸರ್ಕಾರಿ ಕಚೇರಿಗಳು ಮತ್ತು ಇಲಾಖೆಗಳು ಸಾರ್ವಜನಿಕರ ಬಗ್ಗೆ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ.
ಹಲವಾರು ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಡಿಜಿಟಲ್ ಸೇವೆಗಳ ಮೂಲಕ ಸರ್ಕಾರಿ ಸೇವೆಗಳು ಮತ್ತು ಸೌಲಭ್ಯಗಳಿಗೆ ಪ್ರವೇಶ ಪಡೆಯುವುದು ಈಗ ತುಂಬಾ ಸುಲಭವಾಗಿದೆ. ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆಯನ್ನೂ ನಿರಂತರವಾಗಿ ಬಲಪಡಿಸಲಾಗುತ್ತಿದೆ. ಈ ಬದಲಾವಣೆಗಳ ನಡುವೆ, ನೀವು ಕೂಡ ದೇಶದ ನಾಗರಿಕರ ಬಗ್ಗೆ ಸಂಪೂರ್ಣ ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು. ನೀವು ಈ ಸುಧಾರಣೆಗಳನ್ನು ಮತ್ತಷ್ಟು ಮಾಡಬೇಕು. ಇದಲ್ಲದೆ, ನಿರಂತರವಾಗಿ ಹೊಸದನ್ನು ಕಲಿಯುವ ಪ್ರವೃತ್ತಿಯನ್ನು ಕಾಪಾಡಿಕೊಳ್ಳಲು ಯಾವಾಗಲೂ ಪ್ರಯತ್ನಿಸಬೇಕು.
ಸರ್ಕಾರಿ ಸೇವೆಗಳಿಗೆ ಪ್ರವೇಶವು ನಿಮ್ಮ ಜೀವನದ ಮಹತ್ವಾಕಾಂಕ್ಷೆಗಳ ಅಂತ್ಯವಾಗುವುದಿಲ್ಲ. ನೀವು ಇದನ್ನು ಮೀರಿ ಹೊಸ ಎತ್ತರಕ್ಕೆ ಜಿಗಿಯಬೇಕು. ನಿಮ್ಮ ಜೀವನದಲ್ಲಿ ಹೊಸ ಕನಸುಗಳು, ಹೊಸ ಸಂಕಲ್ಪಗಳು, ಹೊಸ ಸಾಮರ್ಥ್ಯಗಳು ಹೊರಹೊಮ್ಮಬೇಕು. ಇದಕ್ಕಾಗಿ ಸರ್ಕಾರವು iGoT ಎಂಬ ಆನ್‌ಲೈನ್ ಪೋರ್ಟಲ್ ಮೂಲಕ ಹೊಸ ಸೌಲಭ್ಯವನ್ನು ಸೃಷ್ಟಿಸಿದೆ. ಇತ್ತೀಚೆಗೆ, ಅದರ ಬಳಕೆದಾರರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.
ಈ ಆನ್‌ಲೈನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಕೋರ್ಸ್‌ಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ. ಇದು ನಿಮ್ಮ ಕೆಲಸಕ್ಕೆ ತುಂಬಾ ಉಪಯುಕ್ತವಾಗಿರುತ್ತದೆ. ನೀವು ಮತ್ತಷ್ಟು ಪ್ರಗತಿ ಸಾಧಿಸಲು ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.
ಮತ್ತು ಸ್ನೇಹಿತರೆ,
ನಾನು ಈ ಸ್ಥಳದ ಆಚೆ ನಿಮ್ಮನ್ನು ನೋಡಲು ಬಯಸುತ್ತೇನೆ. ಮುಂದೆ ಸಾಗಿದರೆ ದೇಶವೂ ಮುಂದಕ್ಕೆ ಸಾಗುತ್ತದೆ. ಈ 25 ವರ್ಷಗಳು ನಿಮ್ಮ ಪ್ರಗತಿಗಾಗಿ ಮತ್ತು ದೇಶದ ಪ್ರಗತಿಗಾಗಿ ಮೀಡಲಿಡಲಾಗಿದೆ.
ಬನ್ನಿ,
ಮುಂದಿನ 25 ವರ್ಷಗಳ ಅಮೃತ ಕಾಲದ ಪಯಣದಲ್ಲಿ ನಾವು ಹೆಗಲಿಗೆ ಹೆಗಲು ಕೊಟ್ಟು ಒಂದಾಗಿ ನಡೆಯೋಣ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ವೇಗದ ಗತಿಯಲ್ಲಿ ಮುನ್ನಡೆಯೋಣ. ನಾನು ಮತ್ತೊಮ್ಮೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅಭಿನಂದಿಸುತ್ತೇನೆ.
ತುಂಬು ಧನ್ಯವಾದಗಳು!