ಹಲವು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ನೇಮಕಗೊಂಡಿರುವ 70,000 ಕ್ಕೂ ಅಧಿಕ ಮಂದಿಗೆ ನೇಮಕಾತಿ ಪತ್ರ ವಿತರಣೆ
“ಸರ್ಕಾರದಿಂದ ನೇಮಕಗೊಳ್ಳಲು ಇಂದಿಗಿಂತ ಉತ್ತಮ ಸಮಯವಿಲ್ಲ’’
“ನಿಮ್ಮ ಒಂದು ಸಣ್ಣ ಪ್ರಯತ್ನ ಬೇರೆಯವರ ಜೀವನದಲ್ಲಿ ಭಾರಿ ಬದಲಾವಣೆ ತರಬಲ್ಲದು’’
“ಭಾರತವು ಇಂದು ಬ್ಯಾಂಕಿಂಗ್ ವಲಯವನ್ನು ಪ್ರಬಲವೆಂದು ಪರಿಗಣಿಸುವ ದೇಶಗಳಲ್ಲಿ ಒಂದಾಗಿದೆ’’
“ನಷ್ಟ ಮತ್ತು ಎನ್ ಪಿಎ ಕಾರಣಗಳಿಂದ ಹೆಸರುವಾಸಿಯಾದ ಬ್ಯಾಂಕುಗಳು ತಮ್ಮ ದಾಖಲೆಯ ಲಾಭದ ಬಗ್ಗೆ ಚರ್ಚೆಯಾಗುತ್ತಿದೆ’’
“ಬ್ಯಾಂಕಿಂಗ್ ವಲಯದ ಜನರು ಎಂದಿಗೂ ನನ್ನನ್ನು ಅಥವಾ ನನ್ನ ದೂರದೃಷ್ಟಿಯನ್ನು ನಿರಾಸೆಗೊಳಿಸಿಲ್ಲ’’
“ಸಾಮೂಹಿಕ ಪ್ರಯತ್ನಗಳನ್ನು ಬಡತನವನ್ನು ಭಾರತದಿಂದ ಸಂಪೂರ್ಣ ನಿರ್ಮೂಲನೆ ಸಾಧ್ಯ. ಮತ್ತು ಅದರಲ್ಲಿ ದೇಶದ ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯ ಬಹುದೊಡ್ಡ ಪಾತ್ರವಿರಲಿದೆ’’

ನಮಸ್ಕಾರ,

ನೇಮಕಾತಿ ಪತ್ರಗಳನ್ನು ಪಡೆಯುತ್ತಿರುವ ಯುವ ಸ್ನೇಹಿತರಿಗಷ್ಟೇ ಅಲ್ಲದೆ, ಇಡೀ ದೇಶಕ್ಕೂ ಇಂದು ಅತ್ಯಂತ ಸ್ಮರಣೀಯ ದಿನವಾಗಿದೆ. 1947ರಲ್ಲಿ ಈ ದಿನ, ಅಂದರೆ ಜುಲೈ 22ರಂದು, ತ್ರಿವರ್ಣ ಧ್ವಜವನ್ನು ಅದರ ಪ್ರಸ್ತುತ ರೂಪದಲ್ಲಿ ಸಂವಿಧಾನ ಸಭೆಯು ಅಂಗೀಕರಿಸಿತು. ಈ ಮಹತ್ವದ ದಿನದಂದು ಸರ್ಕಾರಿ ಸೇವೆಗೆ ನೇಮಕಾತಿ ಪತ್ರಗಳನ್ನು ಸ್ವೀಕರಿಸುವುದು ಸ್ವತಃ ಒಂದು ದೊಡ್ಡ ಸ್ಫೂರ್ತಿಯಾಗಿದೆ. ನೀವೆಲ್ಲರೂ ಸರ್ಕಾರಿ ಸೇವೆಯಲ್ಲಿರುವುದರಿಂದ, ಸದಾ ತ್ರಿವರ್ಣ ಧ್ವಜದ ವೈಭವ ಹೆಚ್ಚಾಗುವಂತೆ ಮತ್ತು ದೇಶವು ಹೆಮ್ಮೆ ಪಡುವಂತೆ ಮಾಡಬೇಕು. 'ಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಸಂದರ್ಭದಲ್ಲಿ, ದೇಶವು ಅಭಿವೃದ್ಧಿಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸಂದರ್ಭದ್ಲಲಿ ಸರ್ಕಾರಿ ಸೇವೆಯಲ್ಲಿರುವುದು ನಿಜಕ್ಕೂ ಒಂದು ಅತ್ಯುತ್ತಮ ಅವಕಾಶವಾಗಿದೆ. ಇದು ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶ ನಿಮ್ಮ ಮುಂದಿದೆ. ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ ಎಲ್ಲಾ ಯುವಕರನ್ನು ನಾನು ಅಭಿನಂದಿಸುತ್ತೇನೆ, ನಿಮ್ಮ ಕುಟುಂಬ ಸದಸ್ಯರಿಗೂ ನನ್ನ ಶುಭ ಹಾರೈಕೆಗಳು!

ಸ್ನೇಹಿತರೇ,

ಈ 'ಸ್ವಾತಂತ್ರ್ಯದ ಅಮೃತ ಕಾಲ'ದ ಅವಧಿಯಲ್ಲಿ, ಅಂದರೆ, ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಎಲ್ಲಾ ದೇಶವಾಸಿಗಳು ಕೈಗೊಂಡಿದ್ದಾರೆ. ಮುಂದಿನ 25 ವರ್ಷಗಳು ನಿಮ್ಮೆಲ್ಲರ ಪಾಲಿಗೆ ಮತ್ತು ಭಾರತಕ್ಕೆ ಅತ್ಯಂತ ನಿರ್ಣಾಯಕ. ಇಂದು, ಭಾರತದ ಮೇಲೆ ಜಗತ್ತು ವಿಶ್ವಾಸ ಇರಿಸಲು ಪ್ರಾರಂಭಿಸಿದೆ; ಭಾರತದ ಕಡೆಗೆ ಒಂದು ಆಕರ್ಷಣೆ ಇದೆ; ಮತ್ತು ಭಾರತದ ಪ್ರಾಮುಖ್ಯತೆ ಪ್ರಪಂಚದಾದ್ಯಂತ ಬೆಳೆದಿದೆ. ಆದ್ದರಿಂದ, ನಾವೆಲ್ಲರೂ ಈ ಪ್ರಸ್ತುತ ಸನ್ನಿವೇಶದ ಸಂಪೂರ್ಣ ಲಾಭವನ್ನು ಪಡೆಯಬೇಕಾಗಿದೆ.

ಕೇವಲ 9 ವರ್ಷಗಳಲ್ಲಿ 10ನೇ ಸ್ಥಾನದಲ್ಲಿದ್ದ ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿರುವುದನ್ನು ನೀವು ನೋಡಿದ್ದೀರಿ. ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರತಿಯೊಬ್ಬ ತಜ್ಞರೂ ಇಂದು ಭವಿಷ್ಯ ನುಡಿಯುತ್ತಿದ್ದಾರೆ. ಅಗ್ರ ಮೂರು ಸ್ಥಾನಗಳನ್ನು ತಲುಪುವುದು ಭಾರತದ ಪಾಲಿಗೆ ಒಂದು ಅಸಾಧಾರಣ ಸಾಧನೆಯೇ ಸರಿ. ಇದರರ್ಥ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಮತ್ತು ಸಾಮಾನ್ಯ ನಾಗರಿಕರ ಆದಾಯವೂ ಹೆಚ್ಚಾಗಲಿದೆ. ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಗೆ ಇದಕ್ಕಿಂತ ದೊಡ್ಡ ಸಂದರ್ಭ ಇರಲು ಸಾಧ್ಯವಿಲ್ಲ. ಇದಕ್ಕಿಂತ ಮುಖ್ಯವಾದ ಸಮಯ ಇನ್ನೊಂದಿಲ್ಲ. ದೇಶದ ಹಿತದೃಷ್ಟಿಯಿಂದ ನಿಮ್ಮ ನಿರ್ಧಾರಗಳು ದೇಶದ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಎಂಬುದು ನನ್ನ ನಂಬಿಕೆ. ಈ ಅವಕಾಶ, ಈ ಸವಾಲು ನಿಮ್ಮ ಮುಂದೆ ಇದೆ. ಈ 'ಅಮೃತ ಕಾಲ'ದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ನಿಮಗೆ ಅಭೂತಪೂರ್ವ ಅವಕಾಶವಿದೆ. ದೇಶದ ಜನರ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರ ಜೀವನದಿಂದ ಕಷ್ಟಗಳನ್ನು ತೊಡೆದುಹಾಕುವುದು ನಿಮ್ಮ ಆದ್ಯತೆಯಾಗಿರಬೇಕು. ನೀವು ಯಾವುದೇ ಇಲಾಖೆಯಲ್ಲಿರಲಿ, ನೀವು ಯಾವುದೇ ನಗರ ಅಥವಾ ಹಳ್ಳಿಯಲ್ಲಿರಲಿ, ನಿಮ್ಮ ಕೆಲಸವು ಸಾಮಾನ್ಯ ಜನರ ತೊಂದರೆಗಳು ಮತ್ತು ಸಮಸ್ಯೆಗಳನ್ನು ಕಡಿಮೆ ಮಾಡುವುದೇ ಆಗಿರಬೇಕು. ನಿಮ್ಮ ಕೆಲಸಗಳು ಜನರ ಜೀವನವನ್ನು ಸುಲಭಗೊಳಿಸಬೇಕು ಮತ್ತು 25 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಡಿಸುವ ಕನಸನ್ನು ಜನರಲ್ಲಿ ಉತ್ತೇಜಿಸಬೇಕು ಎಂಬುದನ್ನು ಸದಾ ನೆನಪಿನಲ್ಲಿಡಿ. ಕೆಲವೊಮ್ಮೆ ನಿಮ್ಮ ಒಂದು ಸಣ್ಣ ಪ್ರಯತ್ನವು ವ್ಯಕ್ತಿಯೊಬ್ಬರ ಹಲವಾರು ತಿಂಗಳ ಕಾಯುವಿಕೆಯನ್ನು ಅಂತ್ಯಗೊಳಿಸಬಹುದು ಮತ್ತು ಅವರಿಗೆ ಸಹಾಯ ಮಾಡಬಹುದು. ಜೊತೆಗೆ, ಸದಾ ಒಂದು ವಿಷಯವನ್ನು ನೆನಪಿಡಿ, ಸಾರ್ವಜನಿಕರು ದೇವರ ಒಂದು ರೂಪ. ನೀವು ಜನರಿಂದ ಪಡೆಯುವ ಆಶೀರ್ವಾದ, ಬಡವರಿಂದ ನೀವು ಪಡೆಯುವ ಆಶೀರ್ವಾದ ದೇವರ ಆಶೀರ್ವಾದಕ್ಕೆ ಸಮಾನವಾಗಿವೆ. ಆದ್ದರಿಂದ, ನೀವು ಇತರರಿಗೆ ಸಹಾಯ ಮಾಡುವ ಮತ್ತು ಇತರರಿಗೆ ಸೇವೆ ಸಲ್ಲಿಸುವ ಮನೋಭಾವದಿಂದ ಕೆಲಸ ಮಾಡಿದರೆ, ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಜೀವನದ ಅತಿದೊಡ್ಡ ಸಂಪತ್ತು ತೃಪ್ತಿ, ಆದ್ದರಿಂದ ನೀವು ಅಲ್ಲಿ ಆ ತೃಪ್ತಿಯನ್ನು ಕಂಡುಕೊಳ್ಳುವಿರಿ.

ಸ್ನೇಹಿತರೇ,

ಇಂದಿನ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಅನೇಕ ಮಂದಿ ನೇಮಕಾತಿ ಪತ್ರಗಳನ್ನು ಪಡೆಯುತ್ತಿದ್ದಾರೆ. ನಮ್ಮ ಬ್ಯಾಂಕಿಂಗ್ ವಲಯವು ಆರ್ಥಿಕತೆಯ ವಿಸ್ತರಣೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಇಂದು ಪ್ರಬಲ ಬ್ಯಾಂಕಿಂಗ್ ಕ್ಷೇತ್ರವನ್ನು ಹೊಂದಿರುವ ದೇಶಗಳೆಂದು ಪರಿಗಣಿಸಲಾದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಆದರೆ 9 ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಿಂತ ಅಧಿಕಾರದ ದುರಾಸೆಗೆ ಆದ್ಯತೆ ದೊರೆತಾಗ, ಅದು ಹಲವಾರು ರೀತಿಯ ವಿಪತ್ತಿಗೆ ದಾರಿ ಮಾಡುತ್ತದೆ. ದೇಶದಲ್ಲಿ ಈ ರೀತಿಯಾಗಿ ಸಂಭವಿಸಿದ ವಿಪತ್ತುಗಳಿಗೆ ವಿವಿಧ ಉದಾಹರಣೆಗಳೂ ಇವೆ. ಹಿಂದಿನ ಸರ್ಕಾರದ ಆಡಳಿತದಲ್ಲಿ ನಮ್ಮ ಬ್ಯಾಂಕಿಂಗ್ ವಲಯವು ಇದನ್ನು ನೋಡಿದೆ, ಅನುಭವಿಸಿದೆ ಮತ್ತು ಅದರ ಫಲವನ್ನು ಉಂಡಿದೆ. ಈಗಿನದ್ದು ಡಿಜಿಟಲ್ ಯುಗ. ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲೇ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಾರೆ ಮತ್ತು ಫೋನ್‌ಬ್ಯಾಂಕಿಂಗ್ ಬಳಸುತ್ತಾರೆ. ಆದರೆ ಒಂಬತ್ತು ವರ್ಷಗಳ ಹಿಂದೆ, ಫೋನ್ ಬ್ಯಾಂಕಿಂಗ್ ಪರಿಕಲ್ಪನೆ ವಿಭಿನ್ನವಾಗಿತ್ತು, ಪದ್ಧತಿಗಳು ವಿಭಿನ್ನವಾಗಿದ್ದವು, ವಿಧಾನಗಳೂ ವಿಭಿನ್ನವಾಗಿದ್ದವು, ಉದ್ದೇಶಗಳು ಮತ್ತೂ ವಿಭಿನ್ನವಾಗಿದ್ದವು. ಆ ಸಮಯದಲ್ಲಿ, ಆ ಸರ್ಕಾರದ ಆಡಳಿತದಲ್ಲಿ, ಫೋನ್ ಬ್ಯಾಂಕಿಂಗ್ ಎಂಬುದು ನನ್ನ ಮತ್ತು ನಿಮ್ಮಂತಹ ಸಾಮಾನ್ಯ ನಾಗರಿಕರಿಗಾಗಿ ಇರಲಿಲ್ಲ. ಅದು 140 ಕೋಟಿ ದೇಶವಾಸಿಗಳಿಗಾಗಿ ಇರಲಿಲ್ಲ. ಆ ಸಮಯದಲ್ಲಿ, ನಿರ್ದಿಷ್ಟ ಕುಟುಂಬಕ್ಕೆ ಹತ್ತಿರವಿರುವ ಕೆಲವು ಪ್ರಬಲ ನಾಯಕರು ಬ್ಯಾಂಕುಗಳಿಗೆ ಕರೆ ಮಾಡಿ ತಮ್ಮ ಪ್ರೀತಿಪಾತ್ರರಿಗೆ ಸಾವಿರಾರು ಕೋಟಿ ರೂ.ಗಳ ಸಾಲವನ್ನು ವ್ಯವಸ್ಥೆ ಮಾಡುತ್ತಿದ್ದರು. ಈ ಸಾಲವನ್ನು ಎಂದಿಗೂ ಮರುಪಾವತಿಸಲಾಗಿಲ್ಲ ಮತ್ತು ಕೇವಲ ಕಾಗದಪತ್ರಗಳು ಮಾತ್ರ ಇರುತ್ತಿದ್ದವು. ಒಂದು ಸಾಲವನ್ನು ಮರುಪಾವತಿಸಲು ಬ್ಯಾಂಕಿಗೆ ಕರೆ ಮಾಡಿ ಮತ್ತೊಂದು ಸಾಲ ಪಡೆಯುತ್ತಿದ್ದರು. ಎರಡನೇ ಸಾಲವನ್ನು ಮರುಪಾವತಿಸಲು ಮೂರನೇ ಸಾಲ, ಅದನ್ನು ಮರುಪಾವತಿಸಲು ಮತ್ತೊಂದು ಸಾಲ.. ಹೀಗೆ ಸಾಗುತ್ತಿತ್ತು. ಈ ಫೋನ್ ಬ್ಯಾಂಕಿಂಗ್ ಹಗರಣವು ಹಿಂದಿನ ಸರ್ಕಾರದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಹಿಂದಿನ ಸರ್ಕಾರದ ಈ ಹಗರಣದಿಂದಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಛಿದ್ರಗೊಂಡಿತ್ತು. 2014ರಲ್ಲಿ, ನೀವೆಲ್ಲರೂ ನಮ್ಮನ್ನು ಆಯ್ಕೆ ಮಾಡುವ ಮೂಲಕ ದೇಶ ಸೇವೆ ಮಾಡಲು ನಮಗೆ ಅವಕಾಶ ನೀಡಿದ್ದೀರಿ. 2014ರಲ್ಲಿ ಸರ್ಕಾರ ರಚಿಸಿದ ನಂತರ, ಬ್ಯಾಂಕಿಂಗ್ ವಲಯ ಮತ್ತು ದೇಶವನ್ನು ತೊಂದರೆಯಿಂದ ಹೊರತರಲು ನಾವು ಹಂತ ಹಂತವಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ನಾವು ಸಾರ್ವಜನಿಕ ವಲಯದ ಬ್ಯಾಂಕುಗಳ ನಿರ್ವಹಣೆಯನ್ನು ಬಲಪಡಿಸಿದ್ದೇವೆ ಮತ್ತು ವೃತ್ತಿಪರತೆಗೆ ಒತ್ತು ನೀಡಿದ್ದೇವೆ. ದೇಶದಲ್ಲಿ ಸಣ್ಣ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ನಾವು ದೊಡ್ಡ ಬ್ಯಾಂಕುಗಳನ್ನು ರಚಿಸಿದ್ದೇವೆ. ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ನಾಗರಿಕರ 5 ಲಕ್ಷ ರೂ.ವರೆಗಿನ ಮೊತ್ತವು ಎಂದಿಗೂ ಬ್ಯಾಂಕ್‌ ಮುಳುಗಡೆಯಿಂದ ನಷ್ಟವಾಗದಂತೆ ನಾವು ಖಚಿತಪಡಿಸಿದ್ದೇವೆ. ಅನೇಕ ಸಹಕಾರಿ ಬ್ಯಾಂಕುಗಳು ಮುಳುಗಲು ಪ್ರಾರಂಭಿಸಿದ್ದರಿಂದ ಬ್ಯಾಂಕುಗಳ ಬಗ್ಗೆ ಸಾಮಾನ್ಯ ನಾಗರಿಕರ ವಿಶ್ವಾಸವನ್ನು ಮರಳಿ ಪಡೆಯುವುದು ಬಹಳ ಮುಖ್ಯವಾಯಿತು. ಸಾಮಾನ್ಯ ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮುಳುಗುತ್ತಿತ್ತು. ಅದಕ್ಕಾಗಿಯೇ ನಾವು ಮಿತಿಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಇದರಿಂದಾಗಿ 99% ನಾಗರಿಕರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮರಳಿ ಪಡೆಯಬಹುದು. ಸರ್ಕಾರ ಕೈಗೊಂಡ ಮತ್ತೊಂದು ಪ್ರಮುಖ ಹೆಜ್ಜೆಯೆಂದರೆ ʻದಿವಾಳಿತನ ಸಂಹಿತೆʼಯಂತಹ ಕಾನೂನುಗಳನ್ನು ರೂಪಿಸುವುದು. ಇದರಿಂದ ಕೆಲವು ಕಾರಣಗಳಿಗಾಗಿ ಕಂಪನಿಯನ್ನು ಮುಚ್ಚಿದರೆ, ಬ್ಯಾಂಕುಗಳು ಕನಿಷ್ಠ ಪರಿಣಾಮ ಬೀರುತ್ತವೆ. ಇದಲ್ಲದೆ, ನಾವು ತಪ್ಪಿತಸ್ಥರ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ, ಬ್ಯಾಂಕುಗಳನ್ನು ಲೂಟಿ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಇದರ ಫಲಿತಾಂಶ ಇಂದು ನಿಮ್ಮ ಮುಂದಿದೆ. ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಮತ್ತು ಅನುತ್ಪಾದಕ ಆಸ್ತಿಗಳಿಗಾಗಿ(ʻಎನ್‌ಪಿಎʼ) ಸುದ್ದಿಯಲ್ಲಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳು ಈಗ ದಾಖಲೆಯ ಲಾಭ ಗಳಿಸುವ ಮೂಲಕ ಸುದ್ದಿಯಲ್ಲಿವೆ.

ಸ್ನೇಹಿತರೇ,

ಭಾರತದ ಬಲವಾದ ಬ್ಯಾಂಕಿಂಗ್ ವ್ಯವಸ್ಥೆ, ಬ್ಯಾಂಕಿನ ಪ್ರತಿಯೊಬ್ಬ ಉದ್ಯೋಗಿ ಮತ್ತು ಕಳೆದ 9 ವರ್ಷಗಳಲ್ಲಿ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಆ ಸಿಬ್ಬಂದಿಯ ಕಾರ್ಯನಿರ್ವಹಣೆಯು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಬ್ಯಾಂಕುಗಳಲ್ಲಿ ಕೆಲಸ ಮಾಡುವ ನನ್ನ ಎಲ್ಲಾ ಉದ್ಯೋಗಿ ಸಹೋದರ ಸಹೋದರಿಯರು ತುಂಬಾ ಶ್ರಮಿಸಿದ್ದಾರೆ ಮತ್ತು ಬ್ಯಾಂಕುಗಳನ್ನು ಬಿಕ್ಕಟ್ಟಿನಿಂದ ಹೊರತಂದಿದ್ದಾರೆ. ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಬ್ಯಾಂಕ್ ಉದ್ಯೋಗಿಗಳು ನನ್ನನ್ನು ಅಥವಾ ನನ್ನ ಆಶಯವನ್ನು ಎಂದಿಗೂ ನಿರಾಸೆಗೊಳಿಸಿಲ್ಲ. ನನಗೆ ನೆನಪಿದೆ, ʻಜನ್ ಧನ್ʼ ಯೋಜನೆ ಪ್ರಾರಂಭವಾದಾಗ, ಹಳೆಯ ಮನಸ್ಥಿತಿಯ ಜನರು ನನ್ನನ್ನು ಕುರಿತು - "ಬಡವರು ತಮ್ಮ ಬಳಿ ಹಣವಿಲ್ಲದಿದ್ದರೆ ಬ್ಯಾಂಕ್ ಖಾತೆಗಳನ್ನು ತೆರೆದು ಏನು ಮಾಡುತ್ತಾರೆ?" ಹೀಗೆ ಕೇಳುತ್ತಿದ್ದರು. ಬ್ಯಾಂಕುಗಳ ಮೇಲಿನ ಹೊರೆ ಹೆಚ್ಚಾಗುತ್ತದೆ. ಬ್ಯಾಂಕ್ ಉದ್ಯೋಗಿಗಳು ಹೇಗೆ ಕೆಲಸ ಮಾಡುತ್ತಾರೆ? ಎಂದು ಪ್ರಶ್ನಿಸಿದರು. ನಕಾರಾತ್ಮಕತೆ ವ್ಯಾಪಕವಾಗಿ ಹರಡಿತು. ಆದರೆ ಬ್ಯಾಂಕಿನ ನನ್ನ ಸ್ನೇಹಿತರು ಬಡವರಿಗಾಗಿ ʻಜನ್ ಧನ್ʼ ಖಾತೆಗಳನ್ನು ತೆರೆಯಲು ಹಗಲು ರಾತ್ರಿ ಕೆಲಸ ಮಾಡಿದರು. ಬ್ಯಾಂಕ್ ನೌಕರರು ಕೊಳೆಗೇರಿಗಳಿಗೆ ಹೋಗಿ ಜನರಿಂದ ಬ್ಯಾಂಕ್ ಖಾತೆಗಳನ್ನು ತೆರೆಸುತ್ತಿದ್ದರು. ಇಂದು ದೇಶದಲ್ಲಿ ಸುಮಾರು 50 ಕೋಟಿ ʻಜನ್ ಧನ್ʼ ಬ್ಯಾಂಕ್ ಖಾತೆಗಳಿವೆ ಮತ್ತು ಇದು ಬ್ಯಾಂಕುಗಳಲ್ಲಿ ಕೆಲಸ ಮಾಡುವ ನಮ್ಮ ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ಸಾಧ್ಯವಾಘಿದೆ. ಬ್ಯಾಂಕ್ ಉದ್ಯೋಗಿಗಳ ಕಠಿಣ ಪರಿಶ್ರಮದಿಂದಾಗಿಯೇ ಕೊರೊನಾ ಅವಧಿಯಲ್ಲಿ ಕೋಟ್ಯಂತರ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲು ಸರ್ಕಾರಕ್ಕೆ ಸಾಧ್ಯವಾಯಿತು.

ಸ್ನೇಹಿತರೇ,

ಅಸಂಘಟಿತ ವಲಯದ ಜನರಿಗೆ ಸಹಾಯ ಮಾಡಲು ನಮ್ಮ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಎಂದು ಕೆಲವರು ಈ ಹಿಂದೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರು. ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಏನಾಗುತ್ತಿತ್ತು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಆದರೆ 2014ರ ನಂತರ ಪರಿಸ್ಥಿತಿ ಹಾಗಿಲ್ಲ. ʻಮುದ್ರಾʼ ಯೋಜನೆಯಡಿ ಯುವಕರಿಗೆ ಅಡಮಾನವಿಲ್ಲದೆ ಸಾಲ ನೀಡಲು ಸರ್ಕಾರ ನಿರ್ಧರಿಸಿದಾಗ, ಬ್ಯಾಂಕುಗಳ ಸಿಬ್ಬಂದಿ ಈ ಯೋಜನೆಯನ್ನು ಮುಂದೆ ಸಾಗಿಸಿದರು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸರ್ಕಾರವು ಸಾಲದ ಮೊತ್ತವನ್ನು ದ್ವಿಗುಣಗೊಳಿಸಿದಾಗ, ಬ್ಯಾಂಕ್ ಉದ್ಯೋಗಿಗಳು ಹೆಚ್ಚು ಹೆಚ್ಚು ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಸಹಾಯವನ್ನು ನೀಡಿದರು. ಕೋವಿಡ್ ಅವಧಿಯಲ್ಲಿ ʻಎಂಎಸ್ಎಂಇʼ ವಲಯಕ್ಕೆ ಸಹಾಯ ಮಾಡಲು ಸರ್ಕಾರ ನಿರ್ಧರಿಸಿದಾಗ, ಬ್ಯಾಂಕ್ ನೌಕರರು ಗರಿಷ್ಠ ಸಾಲಗಳನ್ನು ನೀಡುವ ಮೂಲಕ ʻಎಂಎಸ್ಎಂಇʼ ವಲಯವನ್ನು ಉಳಿಸಲು ಸಹಾಯ ಮಾಡಿದರು. 1.5 ಕೋಟಿ ಉದ್ಯಮಿಗಳ ಸಣ್ಣ ಕೈಗಾರಿಕೆಗಳನ್ನು ಉಳಿಸುವ ಮೂಲಕ 1.5 ಕೋಟಿಗೂ ಹೆಚ್ಚು ಜನರ ಉದ್ಯೋಗವನ್ನು ಉಳಿಸಿದರು. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸಲು ಸರ್ಕಾರವು ʻಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯನ್ನು ಪ್ರಾರಂಭಿಸಿದಾಗ, ತಂತ್ರಜ್ಞಾನದ ಸಹಾಯದಿಂದ ಈ ಯೋಜನೆಯನ್ನು ಯಶಸ್ವಿಗೊಳಿಸಲು ಬ್ಯಾಂಕ್‌ ನೌಕರರು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದರು.

ಪಾದಚಾರಿ ಮಾರ್ಗದಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಗಳು ಮತ್ತು ವ್ಯಾಪಾರಿಗಳಿಗಾಗಿ ಸರ್ಕಾರ ʻಸ್ವನಿಧಿʼ ಯೋಜನೆಯನ್ನು ಪ್ರಾರಂಭಿಸಿದಾಗ, ನಮ್ಮ ಬ್ಯಾಂಕ್‌ ಸಿಬ್ಬಂದಿ ತಮ್ಮ ಬಡ ಸಹೋದರ-ಸಹೋದರಿಯರಿಗಾಗಿ ಶ್ರಮಿಸಿದರು. ಕೆಲವು ಬ್ಯಾಂಕ್ ಶಾಖೆಗಳು ವೈಯಕ್ತಿಕವಾಗಿ ಅವರನ್ನು ತಲುಪಿವೆ ಮತ್ತು ಸಾಲಗಳೊಂದಿಗೆ ಅವರನ್ನು ಬೆಂಬಲಿಸಿವೆ. ಇಂದು, ನಮ್ಮ ಬ್ಯಾಂಕ್ ಉದ್ಯೋಗಿಗಳ ಕಠಿಣ ಪರಿಶ್ರಮದಿಂದಾಗಿ, 50 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬ್ಯಾಂಕಿನಿಂದ ಸಹಾಯ ಪಡೆಯಲು ಸಾಧ್ಯವಾಗಿದೆ. ಇದಕ್ಕಾಗಿ ನಾನು ಪ್ರತಿಯೊಬ್ಬ ಬ್ಯಾಂಕ್ ಉದ್ಯೋಗಿಯನ್ನು ಪ್ರಶಂಸಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಈಗ ನೀವು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರುತ್ತಿರುವುದರಿಂದ, ಆ ವಲಯಕ್ಕೆ ಹೊಸ ಶಕ್ತಿ ಮತ್ತು ಹೊಸ ನಂಬಿಕೆಯನ್ನು ತುಂಬಲಾಗುತ್ತದೆ. ಸಮಾಜಕ್ಕೆ ಏನಾದರೂ ಮಾಡುವ ಹೊಸ ಉತ್ಸಾಹ ಬೆಳೆಯುತ್ತದೆ. ನಿಮ್ಮ ಕಠಿಣ ಪರಿಶ್ರಮವು ಪ್ರಸ್ತುತ ಉದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ಜೊತೆಯಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದ ಮೂಲಕ ಕಡು ಬಡವರನ್ನು ಬಲಪಡಿಸಲು ನಾವು ಬಯಸುತ್ತಿದ್ದೇವೆ ಎಂದು ನಾನು ದೃಢವಾಗಿ ನಂಬಿದ್ದೇನೆ. ಆದ್ದರಿಂದ ಇಂದು, ನೇಮಕಾತಿ ಪತ್ರದ ಜೊತೆಗೆ ನೀವು ʻಸಂಕಲ್ಪʼ ಪತ್ರವನ್ನೂ ಪಡೆಯುತ್ತಿದ್ದೀರಿ.

ಸ್ನೇಹಿತರೇ,

ಸೂಕ್ತ ಉದ್ದೇಶದೊಂದಿಗೆ ನಿರ್ಧಾರಗಳನ್ನು ತೆಗೆದುಕೊಂಡಾಗ ಮತ್ತು ಸೂಕ್ತ ನೀತಿಗಳನ್ನು ರೂಪಿಸಿದಾಗ, ಅದರ ಫಲಿತಾಂಶಗಳು ಅದ್ಭುತ ಮತ್ತು ಅಭೂತಪೂರ್ವವಾಗಿರುತ್ತವೆ. ದೇಶವು ಕೆಲವು ದಿನಗಳ ಹಿಂದೆ ಇದಕ್ಕೆ ಪುರಾವೆಗಳನ್ನು ನೋಡಿದೆ. ನೀತಿ ಆಯೋಗದ ವರದಿಯ ಪ್ರಕಾರ, ಕೇವಲ 5 ವರ್ಷಗಳಲ್ಲಿ ದೇಶದ 13.5 ಕೋಟಿ ಭಾರತೀಯರು ಬಡತನ ರೇಖೆಗಿಂತ ಮೇಲಕ್ಕೆ ಸಾಗಿದ್ದಾರೆ. ಭಾರತದ ಈ ಯಶಸ್ಸು ಸರ್ಕಾರಿ ನೌಕರರ ಕಠಿಣ ಪರಿಶ್ರಮವನ್ನೂ ಒಳಗೊಂಡಿದೆ. ಬಡವರಿಗೆ ಶಾಶ್ವತ ಮನೆಗಳನ್ನು ಒದಗಿಸುವ ಯೋಜನೆಯಾಗಿರಲಿ, ಬಡವರಿಗೆ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯಾಗಿರಲಿ, ಬಡವರಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಯೋಜನೆಯಾಗಿರಲಿ, ನಮ್ಮ ಸರ್ಕಾರಿ ನೌಕರರು ಇಂತಹ ಅನೇಕ ಯೋಜನೆಗಳನ್ನು ಪ್ರತಿ ಹಳ್ಳಿ ಮತ್ತು ಮನೆಯ ಸಾಮಾನ್ಯ ನಾಗರಿಕರಿಗೆ ತಲುಪಿಸಿದ್ದಾರೆ. ಈ ಯೋಜನೆಗಳು ಬಡವರನ್ನು ತಲುಪಿದಾಗ, ಬಡವರ ನೈತಿಕ ಸ್ಥೈರ್ಯವೂ ಅಗಾಧವಾಗಿ ಹೆಚ್ಚಿತು, ಮತ್ತು ಹೊಸ ವಿಶ್ವಾಸ ಅವರಲ್ಲಿ ಬೆಳೆಯಿತು. ಭಾರತದಿಂದ ಬಡತನವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಾವು ಒಟ್ಟಾಗಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸಿದರೆ, ಭಾರತದಿಂದ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂಬುದನ್ನು ಈ ಯಶಸ್ಸು ತೋರಿಸುತ್ತದೆ. ಖಂಡಿತವಾಗಿಯೂ ದೇಶದ ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿ ಈ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಡವರಿಗಾಗಿ ಇರುವ ಪ್ರತಿಯೊಂದು ಕಲ್ಯಾಣ ಯೋಜನೆಗಳ ಬಗ್ಗೆ ನೀವು ತಿಳಿದಿರಬೇಕು ಮತ್ತು ಈ ಯೋಜನೆಗಳೊಂದಿಗೆ ಸಾರ್ವಜನಿಕರನ್ನು ಸಂಪರ್ಕಿಸಬೇಕು.

ಸ್ನೇಹಿತರೇ,

ಭಾರತದಲ್ಲಿ ಬಡತನ ಕಡಿಮೆಯಾಗಲು ಮತ್ತೊಂದು ಆಯಾಮವಿದೆ. ಕ್ಷೀಣಿಸುತ್ತಿರುವ ಬಡತನದ ನಡುವೆ ʻನವ-ಮಧ್ಯಮ ವರ್ಗʼವು ದೇಶದಲ್ಲಿ ನಿರಂತರವಾಗಿ ವಿಸ್ತರಿಸುತ್ತಿದೆ. ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಭಾರತದಲ್ಲಿ ಬೆಳೆಯುತ್ತಿರುವ ʻನವ-ಮಧ್ಯಮ ವರ್ಗʼವು ತನ್ನದೇ ಆದ ಬೇಡಿಕೆಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿದೆ. ಈ ಬೇಡಿಕೆಯನ್ನು ಪೂರೈಸಲು, ಇಂದು ದೇಶದಲ್ಲಿ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇಂದು, ನಮ್ಮ ಕಾರ್ಖಾನೆಗಳು ಮತ್ತು ನಮ್ಮ ಕೈಗಾರಿಕೆಗಳು ದಾಖಲೆಯ ಉತ್ಪಾದನೆಯಲ್ಲಿ ತೊಡಗಿದ್ದರೆ, ನಮ್ಮ ಯುವಕರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ ಮತ್ತು ಹೊಸ ಸಾಧನೆಗಳನ್ನು ಮಾಡಲಾಗುತ್ತಿದೆ. ಈಗ ದಾಖಲೆಯ ಮೊಬೈಲ್ ಫೋನ್‌ಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ. ಈ ವರ್ಷದ ಮೊದಲ 6 ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಕಾರುಗಳ ಸಂಖ್ಯೆಗಳ ಅಂಕಿ-ಅಂಶವೂ ಉತ್ತೇಜನಕಾರಿಯಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವೂ ದಾಖಲೆ ಮಟ್ಟದಲ್ಲಿದೆ. ಈ ಎಲ್ಲಾ ಅಂಶಗಳು ದೇಶದಲ್ಲಿ ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿವೆ.

ಸ್ನೇಹಿತರೇ,

ಇಂದು ಇಡೀ ಜಗತ್ತು ಭಾರತದ ಪ್ರತಿಭೆಯ ಮೇಲೆ ಕಣ್ಣಿಟ್ಟಿದೆ. ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ, ಜನರ ವಯಸ್ಸು ವೇಗವಾಗಿ ಹೆಚ್ಚುತ್ತಿದೆ. ವಿಶ್ವದ ಅನೇಕ ದೇಶಗಳು ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರಿಂದ ತುಂಬಿವೆ. ಅಲ್ಲಿ ಯುವಜನರ ಜನಸಂಖ್ಯೆ ಕಡಿಮೆಯಾಗುತ್ತಿದೆ, ದುಡಿಯುವ ಜನಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ, ಭಾರತದ ಯುವಕರು ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಬಹಳ ಶ್ರಮಿಸುವ ಸಮಯ ಇದು. ಭಾರತದ ಐಟಿ ಪ್ರತಿಭೆಗಳು, ವೈದ್ಯರು, ದಾದಿಯರು ಮತ್ತು ಗಲ್ಫ್ ದೇಶಗಳಲ್ಲಿ ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡುವ ನಮ್ಮ ಸ್ನೇಹಿತರಿಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ನಾವು ನೋಡಿದ್ದೇವೆ. ಪ್ರತಿ ದೇಶದಲ್ಲಿ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯ ಪ್ರತಿಭೆಗಳ ಬಗ್ಗೆ ಗೌರವ ನಿರಂತರವಾಗಿ ಹೆಚ್ಚುತ್ತಿದೆ. ಅದಕ್ಕಾಗಿಯೇ ಕಳೆದ 9 ವರ್ಷಗಳಲ್ಲಿ, ಸರ್ಕಾರವು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ. ʻಪಿಎಂ ಕೌಶಲ್ ವಿಕಾಸ್ ಯೋಜನೆʼ ಅಡಿಯಲ್ಲಿ ಸುಮಾರು 1.5 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ. ನಮ್ಮ ಯುವಕರನ್ನು ಜಾಗತಿಕ ಅವಕಾಶಗಳಿಗೆ ಸಜ್ಜುಗೊಳಿಸಲು ಸರ್ಕಾರವು 30 ʻಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರʼಗಳನ್ನು ಸ್ಥಾಪಿಸುತ್ತಿದೆ. ಇಂದು ದೇಶಾದ್ಯಂತ ಹೊಸ ವೈದ್ಯಕೀಯ ಕಾಲೇಜುಗಳು, ಹೊಸ ಐಟಿಐಗಳು, ಹೊಸ ಐಐಟಿಗಳು, ತಾಂತ್ರಿಕ ಸಂಸ್ಥೆಗಳನ್ನು ನಿರ್ಮಿಸುವ ಅಭಿಯಾನ ಭರದಿಂದ ಸಾಗಿದೆ. 2014ರವರೆಗೆ ನಮ್ಮ ದೇಶದಲ್ಲಿ ಕೇವಲ 380 ವೈದ್ಯಕೀಯ ಕಾಲೇಜುಗಳಿದ್ದವು. ಕಳೆದ 9 ವರ್ಷಗಳಲ್ಲಿ ಈ ಸಂಖ್ಯೆ 700 ಕ್ಕಿಂತ ಹೆಚ್ಚಾಗಿದೆ. ಅಂತೆಯೇ, ನರ್ಸಿಂಗ್ ಕಾಲೇಜುಗಳ ಸಂಖ್ಯೆಯಲ್ಲೂ ಭಾರಿ ಹೆಚ್ಚಳ ಕಂಡುಬಂದಿದೆ. ಜಾಗತಿಕ ಬೇಡಿಕೆಯನ್ನು ಪೂರೈಸುವ ಕೌಶಲ್ಯಗಳು ಭಾರತದ ಯುವಕರಿಗೆ ಲಕ್ಷಾಂತರ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ.

ಸ್ನೇಹಿತರೇ,

ನೀವೆಲ್ಲರೂ ಬಹಳ ಸಕಾರಾತ್ಮಕ ವಾತಾವರಣದಲ್ಲಿ ಸರ್ಕಾರಿ ಸೇವೆಗೆ ಸೇರುತ್ತಿದ್ದೀರಿ. ಈಗ ದೇಶದ ಈ ಸಕಾರಾತ್ಮಕ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ನೀವೆಲ್ಲರೂ ನಿಮ್ಮ ಆಕಾಂಕ್ಷೆಗಳನ್ನು ವಿಸ್ತರಿಸಲು ಪ್ರಯತ್ನಿಸಬೇಕು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡ ನಂತರವೂ ಕಲಿಕೆ ಮತ್ತು ಸ್ವಯಂ ಅಭಿವೃದ್ಧಿಯ ಪ್ರಕ್ರಿಯೆಯನ್ನು ಮುಂದುವರಿಸಿ. ನಿಮಗೆ ಸಹಾಯ ಮಾಡಲು, ಸರ್ಕಾರವು ʻಐಜಿಒಟಿ ಕರ್ಮಯೋಗಿʼ ಎಂಬ ಆನ್‌ಲೈನ್ ಕಲಿಕೆಯ ವೇದಿಕೆಯನ್ನು ಸಿದ್ಧಪಡಿಸಿದೆ. ಈ ಸೌಲಭ್ಯದ ಗರಿಷ್ಠ ಲಾಭವನ್ನು ಪಡೆಯಲು ಪ್ರಯತ್ನಿಸುವಂತೆ ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ. ಮತ್ತೊಮ್ಮೆ, ಈ ಹೊಸ ಜವಾಬ್ದಾರಿಗಾಗಿ ನಾನು ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ಅಭಿನಂದಿಸುತ್ತೇನೆ. ಮತ್ತು ಈ ಹೊಸ ಜವಾಬ್ದಾರಿಯು ಒಂದು ಆರಂಭಿಕ ಹಂತವಾಗಿದೆ. ನೀವು ಜೀವನದಲ್ಲಿ ಅನೇಕ ಹೊಸ ಎತ್ತರಗಳನ್ನು ಸಾಧಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮಗೆ ಸೇವೆ ಸಲ್ಲಿಸಲು ಎಲ್ಲಿ ಅವಕಾಶ ಸಿಕ್ಕರೂ ಬಳಸಿಕೊಳ್ಳಿ. ದೇಶದ ಪ್ರತಿಯೊಬ್ಬ ನಾಗರಿಕನು ನಿಮ್ಮಿಂದಾಗಿ ಅವನ / ಅವಳ ಕನಸುಗಳನ್ನು ಈಡೇರಿಕೊಳ್ಳಲು ಸಾಕಷ್ಟು ಹೊಸ ಶಕ್ತಿಯನ್ನು ಪಡೆಯುವಂತಾಗಬೇಕು. ನಿಮ್ಮ ಪ್ರತಿಯೊಂದು ಕನಸು, ಸಂಕಲ್ಪ ಮತ್ತು ಈ ಜವಾಬ್ದಾರಿಯನ್ನು ನೀವು ಚೆನ್ನಾಗಿ ಪೂರೈಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ನಿಮಗೆ ನನ್ನ ಶುಭ ಹಾರೈಕೆಗಳು. ತುಂಬ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
‘Make in India’ is working, says DP World Chairman

Media Coverage

‘Make in India’ is working, says DP World Chairman
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”