"ಭಾರತದ ಯುವಕರಿರುವ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸ ತಂದಿದೆ"
"ಭಾರತಿದಾಸನ್ ವಿಶ್ವವಿದ್ಯಾಲಯವು ಸದೃಢ ಮತ್ತು ಬಲಿಷ್ಠ ಬುನಾದಿಯೊಂದಿಗೆ ಪ್ರಾರಂಭವಾಯಿತು"
"ಯಾವುದೇ ರಾಷ್ಟ್ರಕ್ಕೆ ನಿರ್ದೇಶನ ನೀಡುವಲ್ಲಿ ವಿಶ್ವವಿದ್ಯಾಲಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ"
"ನಮ್ಮ ರಾಷ್ಟ್ರ ಮತ್ತು ಅದರ ನಾಗರಿಕತೆಯು ಯಾವಾಗಲೂ ಜ್ಞಾನದ ಸುತ್ತ ಕೇಂದ್ರೀಕೃತವಾಗಿದೆ"
"2047ರ ವರೆಗಿನ ವರ್ಷಗಳನ್ನು ನಮ್ಮ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾಗಿಸುವ ಯುವಜನರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ"
“ಯೌವನ ಎಂದರೆ ಶಕ್ತಿ. ಇದರರ್ಥ ವೇಗ, ಕೌಶಲ್ಯ ಮತ್ತು ಪ್ರಮಾಣದಲ್ಲಿ ಕೆಲಸ ಮಾಡುವ ಸಾಮರ್ಥ್ಯ"
"ಪ್ರತಿ ಜಾಗತಿಕ ಪರಿಹಾರದ ಭಾಗವಾಗಿ ಭಾರತವನ್ನು ಸ್ವಾಗತಿಸಲಾಗುತ್ತಿದೆ"
"ಹಲವು ರೀತಿಯಲ್ಲಿ, ಸ್ಥಳೀಯ ಮತ್ತು ಜಾಗತಿಕ ಅಂಶಗಳಿಂದಾಗಿ, ಭಾರತದಲ್ಲಿ ಯುವಕ(ಯುವಶಕ್ತಿ)ರಾಗಲು ಇದು ಅತ್ಯುತ್ತಮ ಸಮಯ"

ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಆರ್. ಎನ್. ರವಿ ಅವರೇ, ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಎಂ.ಕೆ.ಸ್ಟಾಲಿನ್ ಅವರೇ, ಭಾರತಿದಾಸನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಎಂ. ಸೆಲ್ವಂ ಅವರೇ, ನನ್ನ ಯುವ ಸ್ನೇಹಿತರೇ, ಶಿಕ್ಷಕ ಮಿತ್ರರೇ ಮತ್ತು ವಿಶ್ವವಿದ್ಯಾಲಯದ ಸಹಾಯಕ ಸಿಬ್ಬಂದಿಗಳೇ…

 

 

ನಮಸ್ಕಾರಗಳು!

ನನ್ನ ವಿದ್ಯಾರ್ಥಿ ಬಂಧುಗಳೇ, ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ವಿಶೇಷವಾಗಿದೆ. 2024ರಲ್ಲಿ ಇದು ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಸುಂದರ ರಾಜ್ಯವಾದ ತಮಿಳುನಾಡಿನಲ್ಲಿ ಮತ್ತು ಯುವಜನರ ನಡುವೆ ಇರುವುದು ನನಗೆ ಸಂತೋಷವಾಗಿದೆ. ಇಲ್ಲಿನ ಘಟಿಕೋತ್ಸವಕ್ಕೆ ಬರುವ ಸೌಭಾಗ್ಯ ಪಡೆದ ಮೊದಲ ಪ್ರಧಾನಿ ನಾನು ಎಂದು ತಿಳಿದು ನನಗೆ ಸಂತೋಷವಾಗಿದೆ. ಈ ಮಹತ್ವದ ಸಂದರ್ಭದಲ್ಲಿ ನಾನು ಪದವಿ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರನ್ನು ಅಭಿನಂದಿಸುತ್ತೇನೆ.

 ಸಾಮಾನ್ಯವಾಗಿ, ವಿಶ್ವವಿದ್ಯಾನಿಲಯದ ರಚನೆಯು ಶಾಸನಾತ್ಮಕ ಪ್ರಕ್ರಿಯೆಯಾಗಿದೆ. ಒಂದು ಕಾಯ್ದೆಯನ್ನು ಅಂಗೀಕರಿಸುವ ಮೂಲಕ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬರುತ್ತದೆ. ನಂತರ, ಅದರ ಅಡಿಯಲ್ಲಿ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತದೆ. ನಂತರ ವಿಶ್ವವಿದ್ಯಾಲಯವು ಬೆಳೆಯುತ್ತದೆ ಮತ್ತು ಉತ್ಕೃಷ್ಟತೆಯ ಕೇಂದ್ರವಾಗಿ ಪ್ರಬುದ್ಧವಾಗುತ್ತದೆ. ಆದರೆ, ಭಾರತಿದಾಸನ್ ವಿಶ್ವವಿದ್ಯಾಲಯದ ವಿಚಾರದಲ್ಲಿ, ಈ ಪ್ರಕ್ರಿಯೆ ಸ್ವಲ್ಪ ಭಿನ್ನವಾಗಿದೆ. 1982ರಲ್ಲಿ ಇದನ್ನು ಸ್ಥಾಪಿಸಿದಾಗ, ಅದಾಗಲೇ ಅಸ್ತಿತ್ವದಲ್ಲಿದ್ದ ಅನೇಕ ಮತ್ತು ಪ್ರತಿಷ್ಠಿತ ಕಾಲೇಜುಗಳನ್ನು ನಿಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ತರಲಾಯಿತು. ಈ ಕಾಲೇಜುಗಳಲ್ಲಿ ಕೆಲವು ಈಗಾಗಲೇ ಮಹಾನ್ ವ್ಯಕ್ತಿಗಳನ್ನು ಸೃಷ್ಟಿಸಿದ ದಾಖಲೆಯನ್ನು ಹೊಂದಿವೆ. ಹಾಗೆ, ಭಾರತಿದಾಸನ್ ವಿಶ್ವವಿದ್ಯಾಲಯವು ಬಲವಾದ ಮತ್ತು ಪ್ರಬುದ್ಧ ಅಡಿಪಾಯದ ಮೇಲೆ ಪ್ರಾರಂಭವಾಯಿತು. ಈ ಪ್ರಬುದ್ಧತೆಯು ನಿಮ್ಮ ವಿಶ್ವವಿದ್ಯಾಲಯವನ್ನು ಅನೇಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿಯನ್ನಾಗಿ ಮಾಡಿದೆ. ಅದು ಮಾನವಿಕ ವಿಷಯಗಳಾಗಿರಲಿ, ಭಾಷೆಗಳಾಗಿರಲೀ, ವಿಜ್ಞಾನ ಅಥವಾ ಕೊನೆಗೆ ಉಪಗ್ರಹದ ವಿಚಾರದಲ್ಲೂ ನಿಮ್ಮ ವಿಶ್ವವಿದ್ಯಾಲಯವು ಅನನ್ಯ ಛಾಪು ಮೂಡಿಸಿದೆ!

ನಮ್ಮ ದೇಶ ಮತ್ತು ನಾಗರಿಕತೆ ಜ್ಞಾನ ಕೇಂದ್ರಿತವಾದುದು. ನಳಂದ ಮತ್ತು ವಿಕ್ರಮಶಿಲಾದಂತಹ ಕೆಲವು ಪ್ರಾಚೀನ ವಿಶ್ವವಿದ್ಯಾಲಯಗಳು ಪ್ರಸಿದ್ಧವಾಗಿವೆ. ಅಂತೆಯೇ, ಕಾಂಚೀಪುರಂನಂತಹ ಸ್ಥಳಗಳು ಶ್ರೇಷ್ಠ ವಿಶ್ವವಿದ್ಯಾಲಯಗಳನ್ನು ಹೊಂದಿರುವ ಉಲ್ಲೇಖಗಳಿವೆ. ಗಂಗೈಕೊಂಡ-ಚೋಳಾಪುರಂ ಮತ್ತು ಮಧುರೈ ಕೂಡ ಉತ್ತಮ ಕಲಿಕಾ ಕೇಂದ್ರಗಳಾಗಿದ್ದವು. ವಿಶ್ವದ ನಾನಾ ಮೂಲೆಗಳಿಂದ ವಿದ್ಯಾರ್ಥಿಗಳು ಈ ಸ್ಥಳಗಳಿಗೆ ಬರುತ್ತಿದ್ದರು. ಅಂತೆಯೇ, ಘಟಿಕೋತ್ಸವದ ಪರಿಕಲ್ಪನೆಯೂ ಸಹ ಬಹಳ ಪ್ರಾಚೀನ ಮತ್ತು ನಮಗೆ ಚಿರಪರಿಚಿತ. ಉದಾಹರಣೆಗೆ, ಕವಿಗಳು ಮತ್ತು ಬುದ್ಧಿಜೀವಿಗಳ ಸಮಾಗಮವೆನಿಸಿದ ಪ್ರಾಚೀನ ʻತಮಿಳು ಸಂಗಮʼ ಸಭೆಯನ್ನು ತೆಗೆದುಕೊಳ್ಳಿ. ಈ ʻಸಂಗಮʼ ಸಭೆಗಳಲ್ಲಿ ಇತರರಿಂದ ವಿಮರ್ಶೆಗಾಗಿ ಕಾವ್ಯ ಮತ್ತು ಸಾಹಿತ್ಯವನ್ನು ಪ್ರಸ್ತುತಪಡಿಸಲಾಗುತ್ತಿತ್ತು. ವಿಮರ್ಶೆಯ ನಂತರ, ಕವಿ ಮತ್ತು ಅವರ ಕೆಲಸವನ್ನು ದೊಡ್ಡ ಸಮಾಜವು ಗುರುತಿಸುತ್ತಿತ್ತು. ಇದೇ ತರ್ಕವನ್ನು ಇಂದಿಗೂ ಶೈಕ್ಷಣಿಕ ಮತ್ತು ಉನ್ನತ ಶಿಕ್ಷಣದಲ್ಲಿ ಬಳಸಲಾಗುತ್ತದೆ! ಆದ್ದರಿಂದ, ನನ್ನ ಯುವ ಸ್ನೇಹಿತರೇ, ನೀವು ಜ್ಞಾನದ ಮಹಾನ್ ಐತಿಹಾಸಿಕ ಸಂಪ್ರದಾಯದ ಭಾಗವಾಗಿದ್ದೀರಿ. ಯಾವುದೇ ರಾಷ್ಟ್ರಕ್ಕೆ ನಿರ್ದೇಶನ ನೀಡುವಲ್ಲಿ ವಿಶ್ವವಿದ್ಯಾಲಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ನಮ್ಮ ವಿಶ್ವವಿದ್ಯಾಲಯಗಳು ಬಲಿಷ್ಠವಾಗಿದ್ದಾಗ, ನಮ್ಮ ರಾಷ್ಟ್ರ ಮತ್ತು ನಾಗರಿಕತೆಯೂ ಬಲಿಷ್ಠವಾಗಿರುತ್ತದೆ. ನಮ್ಮ ರಾಷ್ಟ್ರದ ಮೇಲೆ ದಾಳಿ ನಡೆದಾಗ, ನಮ್ಮ ಜ್ಞಾನ ವ್ಯವಸ್ಥೆಗಳನ್ನೇ ಮೊದಲು ಗುರಿಯಾಗಿಸಲಾಯಿತು. 20ನೇ ಶತಮಾನದ ಆರಂಭದಲ್ಲಿ, ಮಹಾತ್ಮ ಗಾಂಧಿ, ಪಂಡಿತ್ ಮದನ್ ಮೋಹನ್ ಮಾಳವೀಯ ಮತ್ತು ಸರ್ ಅಣ್ಣಾಮಲೈ ಚೆಟ್ಟಿಯಾರ್ ಅವರಂತಹ ಜನರು ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವು ಜ್ಞಾನ ಮತ್ತು ರಾಷ್ಟ್ರೀಯತೆಯ ಕೇಂದ್ರಗಳಾಗಿದ್ದವು.

 

 

ಅಂತೆಯೇ, ಇಂದು ಭಾರತದ ಉದಯದ ಹಿಂದಿನ ಒಂದು ಪ್ರಮುಖ ಅಂಶವಾಗಿ ನಮ್ಮ ವಿಶ್ವವಿದ್ಯಾಲಯಗಳ ಉದಯವನ್ನು ಗುರುತಿಸಬಹುದು. ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಆರ್ಥಿಕ ಬೆಳವಣಿಗೆಯಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದೆ. ಇದೇ ವೇಳೆ, ನಮ್ಮ ವಿಶ್ವವಿದ್ಯಾಲಯಗಳು ಸಹ ದಾಖಲೆ ಸಂಖ್ಯೆಯಲ್ಲಿ ಜಾಗತಿಕ ಶ್ರೇಯಾಂಕವನ್ನು ಪ್ರವೇಶಿಸುತ್ತಿವೆ. ನನ್ನ ವಿದ್ಯಾರ್ಥಿ ಬಂಧುಗಳೇ, ನಿಮ್ಮ ವಿಶ್ವವಿದ್ಯಾಲಯವು ಇಂದು ನಿಮ್ಮಲ್ಲಿ ಅನೇಕರಿಗೆ ಪದವಿಗಳನ್ನು ನೀಡಿದೆ. ನಿಮ್ಮ ಶಿಕ್ಷಕರು, ಕುಟುಂಬ, ಸ್ನೇಹಿತರು, ಎಲ್ಲರೂ ನಿಮ್ಮ ವಿಚಾರದಲ್ಲಿ ಸಂತೋಷವಾಗಿದ್ದಾರೆ. ವಾಸ್ತವವಾಗಿ, ನಿಮ್ಮ ಪದವಿ ಗೌನ್ ಧರಿಸಿ ನೀವು ಹೊರಗೆ ಯಾರ ಕಣ್ಣಿಗಾದರೂ ಬಿದ್ದರೆ, ನಿಮ್ಮ ಪರಿಚಯ ಇಲ್ಲದ ಜನರೂ ನಿಮ್ಮನ್ನು ಅಭಿನಂದಿಸುತ್ತಾರೆ. ಇದು ಶಿಕ್ಷಣದ ಉದ್ದೇಶದ ಬಗ್ಗೆ ಮತ್ತು ಸಮಾಜವು ನಿಮ್ಮನ್ನು ಹೇಗೆ ಭರವಸೆಯಿಂದ ನೋಡುತ್ತದೆ ಎಂಬುದರ ಕುರಿತು ನಿಮ್ಮನ್ನು ಆಳ ಆಲೋಚನೆಗೆ ಹಚ್ಚಬೇಕು.

ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರು “ಉನ್ನತ ಶಿಕ್ಷಣವು ನಮಗೆ ಕೇವಲ ಮಾಹಿತಿಯನ್ನು ನೀಡುವುದಿಲ್ಲ. ಬದಲಿಗೆ ಅದು ಎಲ್ಲಾ ಅಸ್ತಿತ್ವದೊಂದಿಗೆ ಸಾಮರಸ್ಯದಿಂದ ಬದುಕಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ನೀಡು ಈ ಮಹತ್ವದ ದಿನಕ್ಕೆ ಬಂದಿದ್ದೀರಿ ಎಂದರೆ ಅದರಲ್ಲಿ ಕಡು ಬಡವರು ಸೇರಿದಂತೆ ಇಡೀ ಸಮಾಜದ ಪಾತ್ರವಿದೆ. ಆದ್ದರಿಂದ, ಅವರಿಗೆ ಹಿಂದಿರುಗಿಸಿ ಕೊಡುವುದು, ಉತ್ತಮ ಸಮಾಜ ಮತ್ತು ದೇಶವನ್ನು ಕಟ್ಟುವುದು ಶಿಕ್ಷಣದ ನೈಜ ಉದ್ದೇಶವಾಗಿದೆ. ನೀವು ಕಲಿತ ವಿಜ್ಞಾನವು ನಿಮ್ಮ ಹಳ್ಳಿಯ ರೈತನಿಗೆ ಸಹಾಯ ಮಾಡುತ್ತದೆ. ನೀವು ಕಲಿತ ತಂತ್ರಜ್ಞಾನವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನೀವು ಕಲಿತ ವ್ಯವಹಾರ ನಿರ್ವಹಣೆಯು ವ್ಯವಹಾರಗಳನ್ನು ನಡೆಸಲು ಮತ್ತು ಇತರರಿಗೆ ಆದಾಯದ ಬೆಳವಣಿಗೆಯನ್ನು ಖಾತರಿಪಡಿಸಲು ಸಹಾಯ ಮಾಡುತ್ತದೆ. ನೀವು ಕಲಿತ ಅರ್ಥಶಾಸ್ತ್ರವು ಬಡತನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಸಹಾಯಕವಾಗುತ್ತದೆ. ನೀವು ಕಲಿತ ಭಾಷೆಗಳು ಮತ್ತು ಇತಿಹಾಸವು ಸಂಸ್ಕೃತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನೆರವಾಗುತ್ತದೆ. ಒಂದು ರೀತಿಯಲ್ಲಿ, ಇಲ್ಲಿನ ಪ್ರತಿಯೊಬ್ಬ ಪದವೀಧರರು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬಹುದು!

 

 

ನನ್ನ ವಿದ್ಯಾರ್ಥಿ ಬಂಧುಗಳೇ, 2047ರವರೆಗಿನ ವರ್ಷಗಳನ್ನು ನಮ್ಮ ಇತಿಹಾಸದಲ್ಲೇ ಅತ್ಯಂತ ಮಹತ್ವಪೂರ್ಣ ಅವಧಿಯನ್ನಾಗಿಸುವಲ್ಲಿ ಯುವಜನರ ಸಾಮರ್ಥ್ಯ ಎಷ್ಟಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಮಹಾನ್ ಕವಿ ಭಾರತಿದಾಸನ್ ಅವರು ಹೀಗೆ ಹೇಳಿದ್ದಾರೆ: पुदियदोर् उलगम् सेय्वोम्. ಇದು ನಿಮ್ಮ ವಿಶ್ವವಿದ್ಯಾಲಯದ ಧ್ಯೇಯವಾಕ್ಯವೂ ಆಗಿದೆ. ಇದರರ್ಥ “ನಾವು ಧೈರ್ಯಶಾಲಿ ಹೊಸ ಜಗತ್ತನ್ನು ನಿರ್ಮಿಸೋಣ”. ಭಾರತೀಯ ಯುವಕರು ಈಗಾಗಲೇ ಅಂತಹ ಜಗತ್ತನ್ನು ಸೃಷ್ಟಿಸುತ್ತಿದ್ದಾರೆ. ಕೋವಿಡ್-19 ಸಮಯದಲ್ಲಿ ಲಸಿಕೆಗಳನ್ನು ಜಗತ್ತಿಗೆ ರವಾನಿಸಲು ಯುವ ವಿಜ್ಞಾನಿಗಳು ನಮಗೆ ಸಹಾಯ ಮಾಡಿದರು. ಚಂದ್ರಯಾನದಂತಹ ಯೋಜನೆಗಳ ಮೂಲಕ ಭಾರತೀಯ ವಿಜ್ಞಾನ ಕ್ಷೇತ್ರವು ವಿಶ್ವ ಭೂಪಟದಲ್ಲಿದೆ ಹೆಗ್ಗುರುತು ಪಡೆದಿದೆ. ನಮ್ಮ ಆವಿಷ್ಕಾರಕರು 2014ರಲ್ಲಿ ಸುಮಾರು 4,000 ಇದ್ದ ಪೇಟೆಂಟ್‌ಗಳ ಸಂಖ್ಯೆಯನ್ನು ಈಗ ಸುಮಾರು 50,000ಕ್ಕೆ ಕೊಂಡೊಯ್ದಿದ್ದಾರೆ! ನಮ್ಮ ಮಾನವಿಕ ವಿದ್ವಾಂಸರು ಹಿಂದೆಂದೂ ಇಲ್ಲದ ಮಟ್ಟದಲ್ಲಿ ಭಾರತದ ಯಶೋಗಾಥೆಯನ್ನು ಜಗತ್ತಿಗೆ ಪ್ರದರ್ಶಿಸುತ್ತಿದ್ದಾರೆ. ನಮ್ಮ ಸಂಗೀತಗಾರರು ಮತ್ತು ಕಲಾವಿದರು ನಿರಂತರವಾಗಿ ನಮ್ಮ ದೇಶಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತರುತ್ತಿದ್ದಾರೆ. ನಮ್ಮ ಕ್ರೀಡಾಪಟುಗಳು ʻಏಷ್ಯನ್ ಗೇಮ್ಸ್ʼ, ʻಏಷ್ಯನ್ ಪ್ಯಾರಾ ಗೇಮ್ಸ್ʼ ಮತ್ತು ಇತರ ಪಂದ್ಯಾವಳಿಗಳಲ್ಲಿ ದಾಖಲೆ ಸಂಖ್ಯೆಯ ಪದಕಗಳನ್ನು ಗೆದ್ದಿದ್ದಾರೆ. ಪ್ರತಿಯೊಬ್ಬರೂ ನಿಮ್ಮನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಭರವಸೆಯೊಂದಿಗೆ ನೋಡುತ್ತಿದ್ದಾರೆ. ಈ ಸಮಯದಲ್ಲಿ ನೀವು ಜಗತ್ತಿಗೆ ಕಾಲಿಡುತ್ತಿದ್ದೀರಿ. ಯೌವನ ಎಂದರೆ ಶಕ್ತಿ ಎಂದರ್ಥ. ಇದರರ್ಥ ವೇಗ, ಕೌಶಲ್ಯ ಮತ್ತು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವ ಸಾಮರ್ಥ್ಯ. ಕಳೆದ ಕೆಲವು ವರ್ಷಗಳಲ್ಲಿ, ವೇಗ ಮತ್ತು ಪ್ರಮಾಣದಲ್ಲಿ ನಿಮ್ಮನ್ನು ಹೊಂದಿಸಲು ನಾವು ಕೆಲಸ ಮಾಡಿದ್ದೇವೆ, ಇದರಿಂದ ನೀವು ಪ್ರಯೋಜನ ಪಡೆಯಬಹುದು.

 

 

ಕಳೆದ 10 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 74ರಿಂದ ಸುಮಾರು 150ಕ್ಕೆ ದ್ವಿಗುಣಗೊಂಡಿದೆ! ತಮಿಳುನಾಡು ಸಮರ್ಥ ಕರಾವಳಿಯನ್ನು ಹೊಂದಿದೆ. ಆದ್ದರಿಂದ, ಭಾರತದ ಪ್ರಮುಖ ಬಂದರುಗಳ ಒಟ್ಟು ಸರಕು ನಿರ್ವಹಣಾ ಸಾಮರ್ಥ್ಯವು 2014 ರಿಂದ ದ್ವಿಗುಣಗೊಂಡಿದೆ ಎಂದು ತಿಳಿದು ನಿಮಗೆ ಸಂತೋಷವಾಗುತ್ತದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ರಸ್ತೆ ಮತ್ತು ಹೆದ್ದಾರಿ ನಿರ್ಮಾಣದ ವೇಗವು ಬಹುತೇಕ ದ್ವಿಗುಣಗೊಂಡಿದೆ. ದೇಶದಲ್ಲಿ ನೋಂದಾಯಿತ ನವೋದ್ಯಮಗಳ ಸಂಖ್ಯೆ ಸುಮಾರು 1 ಲಕ್ಷಕ್ಕೆ ಏರಿದೆ. ಇದು 2014ರಲ್ಲಿ ನೂರಕ್ಕಿಂತ ಕಡಿಮೆ ಇತ್ತು. ಭಾರತವು ಪ್ರಮುಖ ಆರ್ಥಿಕತೆಗಳೊಂದಿಗೆ ಹಲವಾರು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಒಪ್ಪಂದಗಳು ನಮ್ಮ ಸರಕು ಮತ್ತು ಸೇವೆಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತವೆ. ಅವುಗಳು ನಮ್ಮ ಯುವಕರಿಗೆ ಅಸಂಖ್ಯಾತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ. ʻಜಿ-20ʼಯಂತಹ ಸಂಸ್ಥೆಗಳನ್ನು ಬಲಪಡಿಸುವುದಿರಲಿ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದಿರಲಿ ಅಥವಾ ಜಾಗತಿಕ ಪೂರೈಕೆ ಸರಪಳಿಯಲ್ಲಿ ದೊಡ್ಡ ಪಾತ್ರ ವಹಿಸುವುದಿರಲಿ, ಪ್ರತಿಯೊಂದಕ್ಕೂ ಒಂದು ಪರಿಹಾರದ ಭಾಗವಾಗಿ ಭಾರತವನ್ನು ಸ್ವಾಗತಿಸಲಾಗುತ್ತಿದೆ. ಸ್ಥಳೀಯ ಮತ್ತು ಜಾಗತಿಕ ಅಂಶಗಳ ಕಾರಣದಿಂದಾಗಿ ಯುವ ಭಾರತೀಯನಾಗಲು ಅನೇಕ ರೀತಿಯಲ್ಲಿ ಇದು ಅತ್ಯುತ್ತಮ ಸಮಯವಾಗಿದೆ. ಈ ಸಮಯವನ್ನು ಹೆಚ್ಚು ಸದ್ಬಳಕೆ ಮಾಡಿಕೊಳ್ಳಿರಿ ಮತ್ತು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿರಿ.

 

 

ನನ್ನ ವಿದ್ಯಾರ್ಥಿ ಬಂಧುಗಳೇ, ಇಂದು ನಿಮ್ಮ ವಿಶ್ವವಿದ್ಯಾಲಯ ಜೀವನದ ಕೊನೆಯ ದಿನ ಎಂದು ನಿಮ್ಮಲ್ಲಿ ಕೆಲವರು ಯೋಚಿಸುತ್ತಿರಬಹುದು. ಅದು ನಿಜವೂ ಆಗಿರಬಹುದು. ಆದರೆ ಇದು ಕಲಿಕೆಯ ಕೊನೆಯಲ್ಲ. ಇನ್ನು ಮುಂದೆ ನಿಮ್ಮ ಪ್ರಾಧ್ಯಾಪಕರು ನಿಮಗೆ ಕಲಿಸುವುದಿಲ್ಲ ಆದರೆ ಜೀವನವೇ ನಿಮ್ಮ ಶಿಕ್ಷಕನಾಗುತ್ತದೆ. ನಿರಂತರ ಕಲಿಕೆಯ ಆಶಯದೊಂದಿಗೆ, ಕೌಶಲ್ಯಾಭಿವೃದ್ಧಿ, ಮರುಕೌಶಲ್ಯ ಮತ್ತು ಉನ್ನತ-ಕೌಶಲ್ಯದ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡುವುದು ಮುಖ್ಯ. ಏಕೆಂದರೆ, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ನೀವು ಬದಲಾವಣೆಯನ್ನು ಪ್ರೇರೇಪಿಸುತ್ತೀರಿ ಅಥವಾ ಬದಲಾವಣೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಮತ್ತೊಮ್ಮೆ, ಇಂದು ಇಲ್ಲಿ ಪದವಿ ಪಡೆಯುತ್ತಿರುವ ಯುವಕರನ್ನು ನಾನು ಅಭಿನಂದಿಸುತ್ತೇನೆ.

ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ!  ತುಂಬಾ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi