ಗೌರವಾನ್ವಿತ ಪ್ರಧಾನಮಂತ್ರಿ ಕಿಶಿದಾ ಅವರೇ,
ಎರಡೂ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮಗಳ ಸ್ನೇಹಿತರೇ,
ನಮಸ್ಕಾರ!
ಮೊದಲಿಗೆ ನಾನು ಪ್ರಧಾನಮಂತ್ರಿ ಕಿಶಿದಾ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಪ್ರಧಾನಿ ಕಿಶಿದಾ ಮತ್ತು ನಾನು ಕಳೆದ ಒಂದು ವರ್ಷದಲ್ಲಿ ಹಲವಾರು ಬಾರಿ ಭೇಟಿಯಾಗಿದ್ದೇವೆ ಮತ್ತು ಪ್ರತಿ ಬಾರಿಯೂ, ಭಾರತ-ಜಪಾನ್ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕತೆ ಮತ್ತು ಬದ್ಧತೆ ನನ್ನ ಅನುಭವಕ್ಕೆ ಬಂದಿದೆ. ಆದ್ದರಿಂದ, ನಮ್ಮ ಸಹಕಾರದ ವೇಗವನ್ನು ಕಾಪಾಡಿಕೊಳ್ಳಲು ಅವರ ಇಂದಿನ ಭೇಟಿ ಬಹಳ ಉಪಯುಕ್ತವಾಗಿದೆ.
ಸ್ನೇಹಿತರೇ,
ಇಂದು ನಮ್ಮ ಭೇಟಿ ಮತ್ತೊಂದು ಕಾರಣಕ್ಕಾಗಿ ವಿಶೇಷವಾಗಿದೆ. ಈ ವರ್ಷ ʻಜಿ 20ʼ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿದ್ದರೆ, ಜಪಾನ್ ʻಜಿ 7ʼ ಅಧ್ಯಕ್ಷತೆ ವಹಿಸುತ್ತಿದೆ. ಆದ್ದರಿಂದ, ನಮ್ಮ ಆಯಾ ಆದ್ಯತೆಗಳು ಮತ್ತು ಆಸಕ್ತಿಗಳ ಮೇಲೆ ಒಟ್ಟಾಗಿ ಕೆಲಸ ಮಾಡಲು ಇದು ಪರಿಪೂರ್ಣ ಅವಕಾಶವಾಗಿದೆ. ಇಂದು ನಾನು ಪ್ರಧಾನಮಂತ್ರಿ ಕಿಶಿದಾ ಅವರಿಗೆ ಭಾರತದ ʻಜಿ-20ʼ ಅಧ್ಯಕ್ಷತೆಯ ಆದ್ಯತೆಗಳ ಬಗ್ಗೆ ವಿವರವಾಗಿ ವಿವರಿಸಿದ್ದೇನೆ. ಜಾಗತ್ತಿನ ದಕ್ಷಿಣ ಭಾಗದ ಆದ್ಯತೆಗಳಿಗೆ ಧ್ವನಿ ನೀಡುವುದು ನಮ್ಮ ʻಜಿ 20ʼ ಅಧ್ಯಕ್ಷತೆಯ ಪ್ರಮುಖ ಆಧಾರಸ್ತಂಭವಾಗಿದೆ. ನಾವು ಈ ಉಪಕ್ರಮವನ್ನು ಕೈಗೊಂಡಿರುವುದರ ಹಿಂದಿನ ಕಾರಣವೆಂದರೆ, ನಮ್ಮದು "ವಸುದೈವ ಕುಟುಂಬಕಂ" ತತ್ವವನ್ನು ನಂಬುವ ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಂಸ್ಕೃತಿಯಾಗಿದೆ.
ಸ್ನೇಹಿತರೇ,
ʻಭಾರತ-ಜಪಾನ್ ನಡುವಿನ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವʼವು ಪರಸ್ಪರ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅಂತರರಾಷ್ಟ್ರೀಯ ರಂಗದಲ್ಲಿ ಕಾನೂನಿಗೆ ನೀಡುವ ಗೌರವದ ಮೇಲೆ ನಿಂತಿದೆ. ಈ ಪಾಲುದಾರಿಕೆಯನ್ನು ಬಲಪಡಿಸುವುದರಿಂದ ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ನೆರವಾಗಲಿದೆ. ಇಂದಿನ ನಮ್ಮ ಸಂಭಾಷಣೆಯಲ್ಲಿ, ನಾವು ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದ್ದೇವೆ. ನಾವು ರಕ್ಷಣಾ ಸಲಕರಣೆ ಮತ್ತು ತಂತ್ರಜ್ಞಾನ ಸಹಯೋಗ, ವ್ಯಾಪಾರ, ಆರೋಗ್ಯ ಮತ್ತು ಡಿಜಿಟಲ್ ಸಹಭಾಗಿತ್ವದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡೆವು. ಸೆಮಿಕಂಡಕ್ಟರ್ ಮತ್ತು ಇತರ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ವಿಶ್ವಾಸಾರ್ಹ ಪೂರೈಕೆ ಸರಪಳಿಗಳ ಪ್ರಾಮುಖ್ಯತೆಯ ಬಗ್ಗೆ ನಾವು ಫಲಪ್ರದ ಚರ್ಚೆ ನಡೆಸಿದ್ದೇವೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಜಪಾನ್‌ನಿಂದ 5 ಟ್ರಿಲಿಯನ್ ಯೆನ್ ಅಂದರೆ ಮೂರು ಲಕ್ಷ ಇಪ್ಪತ್ತು ಸಾವಿರ ಕೋಟಿ ರೂ ಹೂಡಿಕೆ ಮಾಡುವ ಗುರಿಯನ್ನು ಕಳೆದ ವರ್ಷ ನಾವು ಇರಿಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ ಎಂಬುದು ತೃಪ್ತಿಯ ವಿಷಯವಾಗಿದೆ.
2019ರಲ್ಲಿ ನಾವು ʻಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕ ಪಾಲುದಾರಿಕೆʼಯನ್ನು ಸ್ಥಾಪಿಸಿದ್ದೆವು. ಇದರ ಅಡಿಯಲ್ಲಿ, ನಾವು ಸರಕು-ಸಾಗಣೆ, ಆಹಾರ ಸಂಸ್ಕರಣೆ, ʻಎಂಎಸ್ಎಂಇʼ, ಜವಳಿ, ಯಂತ್ರೋಪಕರಣಗಳು ಮತ್ತು ಉಕ್ಕಿನಂತಹ ಕ್ಷೇತ್ರಗಳಲ್ಲಿ ಭಾರತೀಯ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿದ್ದೇವೆ. ಇಂದು ನಾವು ಈ ಪಾಲುದಾರಿಕೆಯ ಸಕ್ರಿಯತೆಯ ಬಗ್ಗೆ ಪರಸ್ಪರ ಸಂತೋಷವನ್ನು ವ್ಯಕ್ತಪಡಿಸಿದ್ದೇವೆ. ನಾವು ಮುಂಬೈ-ಅಹ್ಮದಾಬಾದ್ ಹೈಸ್ಪೀಡ್ ರೈಲಿನ ಯೋಜನೆ ವಿಚಾರದಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ನಾವು 2023 ಅನ್ನು ʻಪ್ರವಾಸೋದ್ಯಮ ವಿನಿಮಯ ವರ್ಷʼವಾಗಿ ಆಚರಿಸುತ್ತಿರುವುದು ನನಗೆ ಸಂತೋಷ ತಂದಿದೆ. ಇದಕ್ಕಾಗಿ ನಾವು "ಹಿಮಾಲಯವನ್ನು ಫ್ಯೂಜಿ ಪರ್ವತದೊಂದಿಗೆ ಸಂಪರ್ಕಿಸುವುದು" ಎಂಬ ಥೀಮ್ ಅನ್ನು ಆಯ್ಕೆ ಮಾಡಿದ್ದೇವೆ.
ಸ್ನೇಹಿತರೇ,
ಮೇ ತಿಂಗಳಲ್ಲಿ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ಕಿಶಿದಾ ಅವರು ಇಂದು ನನಗೆ ಆಹ್ವಾನ ನೀಡಿದರು. ಇದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ. ಕೆಲವು ತಿಂಗಳುಗಳ ನಂತರ ಸೆಪ್ಟೆಂಬರ್‌ನಲ್ಲಿ, ʻಜಿ 20ʼ ನಾಯಕರ ಶೃಂಗಸಭೆಗಾಗಿ ಪ್ರಧಾನಿ ಕಿಶಿದಾ ಅವರನ್ನು ಮತ್ತೆ ಭಾರತಕ್ಕೆ ಸ್ವಾಗತಿಸುವ ಅವಕಾಶ ನನಗೆ ದೊರೆಯಲಿದೆ. ನಮ್ಮ ಮಾತುಕತೆಗಳು ಮತ್ತು ಸಂಪರ್ಕಗಳ ಈ ಸರಣಿ ಇದೇ ರೀತಿ ಮುಂದುವರಿಯಲಿ ಮತ್ತು ಭಾರತ-ಜಪಾನ್ ಸಂಬಂಧಗಳು ಹೊಸ ಎತ್ತರವನ್ನು ಮುಟ್ಟಲಿ ಎಂಬ ಆಶಯದೊಂದಿಗೆ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.
ಅನಂತ ಧನ್ಯವಾದಗಳು.