ನಿರೂಪಕರು(ಆಂಕರ್): ಗೌರವಾನ್ವಿತ ಪ್ರಧಾನ ಮಂತ್ರಿಗಳೆ, ಮಾನ್ಯ ಸಚಿವರೆ, ಡಾ. ಪಿ.ಟಿ. ಉಷಾ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಎಲ್ಲಾ ಅಥ್ಲೀಟ್ ಗಳು  ಇಂದು ನಿಮ್ಮೊಂದಿಗೆ ಸಂವಾದ ನಡೆಸಲು ಬಂದಿದ್ದಾರೆ. ಅವರು ನಿಮ್ಮಿಂದ ಮಾರ್ಗದರ್ಶನ ನಿರೀಕ್ಷಿಸುತ್ತಿದ್ದಾರೆ. ಸರ್, ಅವರ ತರಬೇತಿಯು ವಿದೇಶದಲ್ಲಿ ಮತ್ತು ದೇಶದ ಇತರ ಕೇಂದ್ರಗಳಲ್ಲಿ ನಡೆಯುತ್ತಿರುವುದರಿಂದ, ಸರಿಸುಮಾರು 98 ಕ್ರೀಡಾಪಟುಗಳು ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ನೀವೆಲ್ಲರೂ ಪ್ಯಾರಿಸ್‌ಗೆ ಹೊರಡಲಿದ್ದೀರಿ. ದಯವಿಟ್ಟು ಎಲ್ಲರಿಗೂ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕಾಗಿ ವಿನಂತಿಸುತ್ತೇನೆ. ಧನ್ಯವಾದಗಳು, ಸರ್!

ಪ್ರಧಾನ ಮಂತ್ರಿ: ನಿಮ್ಮೆಲ್ಲರಿಗೂ ಸ್ವಾಗತ! ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದಿದವರಿಗೂ ಸ್ವಾಗತ ಕೋರುತ್ತೇನೆ. ಸ್ನೇಹಿತರೆ, ನಾನಿಂದು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ, ಏಕೆಂದರೆ ನೀವೆಲ್ಲರೂ ಗೆಲ್ಲುವ ಮನಸ್ಥಿತಿಯಲ್ಲಿದ್ದೀರಿ. ನಿಮ್ಮ ವಿಜಯದ ನಂತರ ನಿಮ್ಮನ್ನು ಸ್ವಾಗತಿಸುವ ಮನಸ್ಥಿತಿಯಲ್ಲಿ ನಾನಿದ್ದೇನೆ. ನಾನು ಯಾವಾಗಲೂ ನಮ್ಮ ದೇಶದ ಕ್ರೀಡಾ ತಾರೆಗಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತಲೇ ಇರುತ್ತೇನೆ, ಹೊಸ ವಿಷಯಗಳನ್ನು ಕಲಿಯುತ್ತೇನೆ, ಅವರ ಪ್ರಯತ್ನಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ, ಅವರಿಗೆ ಬೆಂಬಲ ನೀಡಲು ಸರ್ಕಾರದ ಕಡೆಯ ವ್ಯವಸ್ಥೆಯಲ್ಲಿ ಯಾವುದೇ ಅಗತ್ಯ ಬದಲಾವಣೆಗಳನ್ನು ಮಾಡುತ್ತೇನೆ. ನಾನು ನಿಮ್ಮಿಂದ ನೇರ ಮಾಹಿತಿ ಪಡೆಯಲು ಮುಖಾಮುಖಿ ಸಂವಾದ ನಡೆಸುವ ಗುರಿ ಹೊಂದಿದ್ದೇನೆ.

 

ಕ್ರೀಡೆಯು ವಿದ್ಯಾರ್ಥಿಗಳಂತೆಯೇ ಇರುತ್ತದೆ. ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹೋದಾಗ, ಉತ್ತಮ ಶ್ರೇಣಿ ಪಡೆಯುತ್ತೇನೆ... ಚಿಂತಿಸಬೇಡಿ ಎಂದು ಇಡೀ ಮನೆಯವರಿಗೆ ಧೈರ್ಯ ತುಂಬುತ್ತಾನೆ. ಪರೀಕ್ಷಾ ಕೊಠಡಿಯಿಂದ ಹೊರಬಂದ ನಂತರವೇ ಅವನಿಗೆ, ನಾನು ಹೇಗೆ ಮಾಡಿದೆ ಎಂಬುದು ತಿಳಿಯುತ್ತದೆ. ಅವನು ಚೆನ್ನಾಗಿ ಪರೀಕ್ಷೆ ಬರೆಯದಿದ್ದಾಗ, ಪರೀಕ್ಷಾ ಹಾಲ್‌ನಿಂದ ಹೊರಬಂದ ತಕ್ಷಣ, ಫ್ಯಾನ್ ಶಬ್ದ ತುಂಬಾ ಜೋರಾಗಿತ್ತು, ಕಿಟಕಿ ತೆರೆದುಕೊಂಡಿತ್ತು. ಹಾಗಾಗಿ, ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ, ಶಿಕ್ಷಕರು ನನ್ನನ್ನೇ ದಿಟ್ಟಿಸಿಕೊಂಡು ನೋಡುತ್ತಿದ್ದರು, ಹಾಗಾಗಿ, ಶಾಂತವಾಗಿ ಪರೀಕ್ಷೆ ಬರೆಯಲಾಗಲಿಲ್ಲ ಇತ್ಯಾದಿ ಕಾರಣ ಹೇಳಲು ಪ್ರಾರಂಭಿಸುತ್ತಾರೆ. ಯಾವಾಗಲೂ ಈ ರೀತಿಯ ನೆಪ ಹೇಳುವ ಮತ್ತು ಸಂದರ್ಭಗಳನ್ನು ದೂಷಿಸುವ ಇಂತಹ ವಿದ್ಯಾರ್ಥಿಗಳನ್ನು ನೀವು ನೋಡಿರುತ್ತೀರಿ. ಅಂತಹ ಜನರು ತಮ್ಮ ಜೀವನದಲ್ಲಿ ಎಂದಿಗೂ ಪ್ರಗತಿ ಸಾಧಿಸುವುದಿಲ್ಲ, ಕುಂಟು ನೆಪಗಳನ್ನು ಹೇಳುವುದರಲ್ಲಿ ನಿಷ್ಣಾತರಾಗಿರುತ್ತಾರೆಯೇ ಹೊರತು ಎಂದಿಗೂ ಪ್ರಗತಿ ಸಾಧಿಸಲು ಸಾಧ್ಯವಿಲ್ಲ.

ಆದರೆ ನಾನು ಅನೇಕ ಆಟಗಾರರನ್ನು ನೋಡಿದ್ದೇನೆ ಮತ್ತು ಸಂದರ್ಭಗಳನ್ನು ಎಂದಿಗೂ ದೂಷಿಸದ ಕೆಲವು ಆಟಗಾರರನ್ನು ನಾನು ತಿಳಿದಿದ್ದೇನೆ. ಅವರು ಯಾವಾಗಲೂ ಹೇಳುತ್ತಾರೆ, "ಆ ಆಟದ ತಂತ್ರವು ನನಗೆ ಹೊಸದು," ಅಥವಾ "ನನ್ನ ಎದುರಾಳಿಯ ಆಟದ ವಿಧಾನವನ್ನು ನಾನು ನಿರೀಕ್ಷಿಸಿರಲಿಲ್ಲ. ಅದು ಉತ್ತಮ ವಿಧಾನವೂ ಆಗಿರಬಹುದು."

ಸ್ನೇಹಿತರೆ ನಾನು ಹೇಳಬಯಸುವುದೇನೆಂದರೆ, ನಮ್ಮ ಅತ್ಯುತ್ತಮ ಪ್ರದರ್ಶನವನ್ನು ಗುರಿಯಾಗಿಟ್ಟುಕೊಂಡು ನಾವು ಆಟವಾಡಲು ಹೋಗುತ್ತೇವೆ. ಆದಾಗ್ಯೂ, ಒಲಿಂಪಿಕ್ಸ್ ಕ್ರೀಡಾ ಕಲಿಕೆಗೆ ಉತ್ತಮ ವೇದಿಕೆಯಾಗಿದೆ. ಕೆಲವರು ತಮ್ಮ ಆಟವನ್ನು ಆಡುತ್ತಾರೆ ಮತ್ತು ಅವರ ದಿನ ಹೇಗಿತ್ತು ಎಂದು ಎಲ್ಲರಿಗೂ ದೂರವಾಣಿಯಲ್ಲಿ ತಿಳಿಸುತ್ತಾರೆ, ಆದರೆ ಇನ್ನೂ ಕೆಲವರು ಪ್ರತಿ ಆಟವನ್ನು ನೋಡುತ್ತಾರೆ. ನಮ್ಮ ದೇಶವು ಹೇಗೆ ಆಡುತ್ತಿದೆ ಮತ್ತು ವಿವಿಧ ದೇಶಗಳು ಹೇಗೆ ಆಡುತ್ತಿವೆ ಎಂಬುದನ್ನು ಅವರು ಗಮನಿಸುತ್ತಾರೆ. ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಅವರು ತಮ್ಮ ತರಬೇತುದಾರರೊಂದಿಗೆ ಈ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ, ಕೊನೆಯ ಕ್ಷಣದಲ್ಲಿ ನಿರ್ದಿಷ್ಟ ಆಟಗಾರ ಹೇಗೆ ಉತ್ತಮ ಕೆಲಸ ಮಾಡಿದ, ಅವನು ಆ ತಂತ್ರದ ಬಗ್ಗೆ ತನ್ನ ತರಬೇತುದಾರನನ್ನು ಕೇಳುತ್ತಾನೆ. ಕೆಲವೊಮ್ಮೆ ಹೊಸ ಚಲನೆ ಅಥವಾ ತಂತ್ರಗಳನ್ನು ಕಲಿಯಲು ಆ ಪಂದ್ಯದ ವೀಡಿಯೊಗಳನ್ನು ಅನೇಕ ಬಾರಿ ಪರಿಶೀಲಿಸುತ್ತಾನೆ.

 

ಕಲಿಯುವ ಮನಸ್ಥಿತಿ ಇರುವವರಿಗೆ ಕಲಿಯಲು ಹಲವು ಅವಕಾಶಗಳಿವೆ. ದೂರುಗಳಲ್ಲಿ ಬದುಕಲು ಬಯಸುವವರಿಗೆ ದೂರುಗಳಿಗೆ ಕೊರತೆ ಇರುವುದೇ ಇಲ್ಲ. ಉತ್ತಮ ಸೌಲಭ್ಯಗಳನ್ನು ಹೊಂದಿರುವ ಅತ್ಯಂತ ಶ್ರೀಮಂತ ದೇಶಗಳ ಕ್ರೀಡಾಪಟುಗಳು ಸಹ ದೂರು ನೀಡಬಹುದು. ಆದರೆ ನಮ್ಮಂತಹ ದೇಶಗಳ ಕ್ರೀಡಾಪಟುಗಳು, ಹಲವಾರು ಕಷ್ಟಗಳನ್ನು ಮತ್ತು ಅನನುಕೂಲಗಳನ್ನು ಎದುರಿಸುತ್ತಿದ್ದಾರೆ, ತಮ್ಮ ಹೃದಯ ಮತ್ತು ಮನಸ್ಸನ್ನು ದೇಶಕ್ಕಾಗಿ ಮತ್ತು ರಾಷ್ಟ್ರಧ್ವಜಕ್ಕಾಗಿ ತಮ್ಮ ಧ್ಯೇಯವನ್ನು ಕೇಂದ್ರೀಕರಿಸುತ್ತಾರೆ, ಎಲ್ಲಾ ಕಷ್ಟಗಳನ್ನು ಬದಿಗಿಡುತ್ತಾರೆ.

ಆದ್ದರಿಂದ ಸ್ನೇಹಿತರೆ, ಈ ಬಾರಿಯೂ ನೀವು ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಹೆಮ್ಮೆಪಡುವಂತೆ ಮಾಡುತ್ತೀರಿ ಎಂದು ನಾನು ದೃಢವಾಗಿ ನಂಬುತ್ತೇನೆ. ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಹೋಗುವವರು ಯಾರು? ಹೆಚ್ಚು ಹುಡುಗಿಯರಿದ್ದಾರೆ ಎಂದು ತೋರುತ್ತದೆ. ಇನ್ನು ಕುಸ್ತಿಪಟುಗಳೂ ಇದ್ದಾರೆಯೇ?

ಮೊದಲ ಬಾರಿಗೆ ಬಂದವರು ಏನು ಯೋಚಿಸುತ್ತಿದ್ದಾರೆ? ನೀವು ಏನು ಯೋಚಿಸುತ್ತಿದ್ದೀರಿ ಎಂದು ಕೇಳಲು ನಾನು ಬಯಸುತ್ತೇನೆ. ಯಾರು ಬೇಕಾದರೂ ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಬಹುದು. ಹೌದು, ದಯವಿಟ್ಟು. ನೀವು ಏನನ್ನಾದರೂ ಹೇಳಲು ಬಯಸುತ್ತೀರಿ, ಸರಿ? ದಯವಿಟ್ಟು ಹಂಚಿಕೊಳ್ಳಿ.

ಆಟಗಾರ: ನನಗೆ ತುಂಬಾ ಸಂತೋಷವಾಗಿದೆ, ನಾನು ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಹೋಗುತ್ತಿದ್ದೇನೆ.

ಪ್ರಧಾನ ಮಂತ್ರಿ: ದಯವಿಟ್ಟು ನಿಮ್ಮನ್ನು ಪರಿಚಯಿಸಿಕೊಳ್ಳಿ.

ಆಟಗಾರ್ತಿ: ನಾನು ರಮಿತಾ ಜಿಂದಾಲ್, ನಾನು ಮೊದಲ ಬಾರಿಗೆ ಏರ್ ರೈಫಲ್ ಶೂಟಿಂಗ್‌ನಲ್ಲಿ ಒಲಿಂಪಿಕ್ಸ್‌ಗೆ ಹೋಗುತ್ತಿದ್ದೇನೆ. ಹಾಗಾಗಿ ನಾನು ತುಂಬಾ ಉತ್ಸುಕಳಾಗಿದ್ದೇನೆ ಏಕೆಂದರೆ ನಾನು ಕ್ರೀಡೆ ಪ್ರಾರಂಭಿಸಿದಾಗಿನಿಂದ ಒಲಿಂಪಿಕ್ಸ್‌ಗೆ ಹೋಗುವುದು ನನ್ನ ಕನಸಾಗಿತ್ತು. ಹಾಗಾಗಿ ಅಲ್ಲಿ ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಲು ನಾನು ತುಂಬಾ ಉತ್ಸುಕಳಾಗಿದ್ದೇನೆ ಮತ್ತು ಪ್ರೇರೇಪಣೆ ಹೊಂದಿದ್ದೇನೆ.

ಪ್ರಧಾನ ಮಂತ್ರಿ: ನೀವು ಎಲ್ಲಿ ತರಬೇತಿ ಪಡೆದಿದ್ದೀರಿ?

ರಮಿತಾ ಜಿಂದಾಲ್: ನಾನು ಹರಿಯಾಣದವಳು, ಆದರೆ ನಾನು ಚೆನ್ನೈನಲ್ಲಿ ತರಬೇತಿ ನೀಡುತ್ತೇನೆ.

ಪ್ರಧಾನಮಂತ್ರಿ: ನಿಮ್ಮ ಕುಟುಂಬದಲ್ಲಿ ಯಾರಾದರೂ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆಯೇ ಅಥವಾ ನೀವೇ ಮೊದಲಿಗರೇ?

 

ರಮಿತಾ ಜಿಂದಾಲ್: ಇಲ್ಲ, ನಾನು ಮೊದಲಿಗಳು.

ಪ್ರಧಾನ ಮಂತ್ರಿ: ಹರಿಯಾಣದ ಪ್ರತಿ ಮನೆಯಲ್ಲೂ ನೀವು ಒಬ್ಬ ಕ್ರೀಡಾಪಟುವನ್ನು ಕಾಣಬಹುದು. ಕುಳಿತುಕೊಳ್ಳಿ. ಮೊದಲ ಬಾರಿಗೆ ಹೋಗುತ್ತಿರುವ ತಮ್ಮ ಅನುಭವವನ್ನು ಬೇರೆ ಯಾರು ಹಂಚಿಕೊಳ್ಳಲು ಬಯಸುತ್ತಾರೆ? ಹುಡುಗಿಯರು ಬಹಳಷ್ಟು ಹಂಚಿಕೊಳ್ಳಬಹುದು. ಹೌದು, ಅವರಿಗೆ ಮೈಕ್ ಕೊಡಿ,  ಮಾತನಾಡಲಿ.

ಆಟಗಾರ್ತಿ: ಸರ್, ನನ್ನ ಹೆಸರು ರಿತಿಕಾ (ಸಜ್ದೇಹ್). ನಾನು ಹರಿಯಾಣದ ರೋಹ್ಟಕ್‌ನಿಂದ ಬಂದಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಹೋಗುತ್ತಿದ್ದೇನೆ. ನನ್ನ ಪ್ರದರ್ಶನ ತೋರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇಡೀ ದೇಶವು ನನ್ನನ್ನು ನೋಡುತ್ತಿದೆ, ಎಲ್ಲರೂ ನನಗಾಗಿ ಪ್ರಾರ್ಥಿಸುತ್ತಿದ್ದಾರೆ. ನಾನು ನನ್ನ 100% ಪ್ರದರ್ಶನ ನೀಡುತ್ತೇನೆ.

ಪ್ರಧಾನ ಮಂತ್ರಿ: ಒಳ್ಳೆಯದು! ದಯವಿಟ್ಟು ಮುಂದುವರಿಯಿರಿ, ನೀವು ಹಿಂಜರಿಯುತ್ತಿರುವಂತೆ ತೋರುತ್ತಿದೆ, ಆದರೆ ನಿಮ್ಮ ದೇಹ ಭಾಷೆಯು ನೀವು ಮಾತನಾಡಲು ಬಯಸುತ್ತಿದ್ದೀರಾ  ಎಂಬುದನ್ನು ಸೂಚಿಸುತ್ತಿದೆ.

ಆಟಗಾರ್ತಿ: ನನ್ನ ಹೆಸರು ಅಂತಿಮ್ ಪಂಗಲ್. ನಾನು 53 ಕೆಜಿ ವಿಭಾಗದಲ್ಲಿ ಕುಸ್ತಿಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನಗೆ 19 ವರ್ಷ, ನಾನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದೇನೆ. ಕುಸ್ತಿಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಪದಕ ಹುಡುಗಿಯಿಂದ ಬಂದಿದೆ, ಅದೂ ಕಂಚಿನ ಪದಕ. ನನಗೆ ತುಂಬಾ ಸಂತೋಷವಾಗಿದೆ. ನಾನು ಇನ್ನೂ ಉತ್ತಮ ಪದಕವನ್ನು ಮರಳಿ ತರಲು ಬಯಸುತ್ತೇನೆ.

ಪ್ರಧಾನ ಮಂತ್ರಿ: ಒಳ್ಳೆಯದು! ನಿಮ್ಮಲ್ಲಿ ಯಾರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು? 18 ವರ್ಷದೊಳಗಿನ ಯಾರಾದರೂ ಇಲ್ಲಿ? ಹೌದು, ನಿಮ್ಮ ಬಗ್ಗೆ ನಮಗೆ ತಿಳಿಸಿ.

ಆಟಗಾರ್ತಿ: ಹಾಯ್, ನಾನು ಧಿನಿಧಿ ದೇಸಿಂಗು. ನನ್ನ ವಯಸ್ಸು 14. ನಾನು ಕೇರಳದವಳು. ಆದರೆ ಸಾಮಾನ್ಯವಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತೇನೆ. ಟೀಮ್ ಇಂಡಿಯಾದ ಭಾಗವಾಗಿ ಈ ವರ್ಷ ಒಲಿಂಪಿಕ್ಸ್‌ಗೆ ಹೋಗಲು ನಾನು ಉತ್ಸುಕನಾಗಿದ್ದೇನೆ. ಅಂತಹ ಅದ್ಭುತ ತಂಡದ ಭಾಗವಾಗಿರುವುದು ದೊಡ್ಡ ಗೌರವ ಮತ್ತು ಸುಯೋಗ. ಇದು ನನ್ನ ಪ್ರಯಾಣದ ಆರಂಭವಷ್ಟೇ ಎಂಬುದು ನನಗೆ ತಿಳಿದಿದೆ ಮತ್ತು ಇಲ್ಲಿ ನಾನು ಸೇರಿದಂತೆ ನಮ್ಮೆಲ್ಲರಿಗೂ ಸಾಗುವ ದೂರ ಬಹಳವಿದೆ. ನಾವೆಲ್ಲರೂ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತೇವೆ. ಉತ್ತಮ ಸಾಧನೆಗಳು ಮತ್ತು ಜೀವಿತಾವಧಿಯ ಗುರಿಗಳೊಂದಿಗೆ ಹಿಂತಿರುಗುತ್ತೇವೆ ಎಂದು ನಾನು ಭಾವಿಸುತ್ತೇನೆ.

ಪ್ರಧಾನ ಮಂತ್ರಿ: ನಿಮಗೆ ಶುಭವಾಗಲಿ.

 

ಧಿನಿಧಿ ದೇಸಿಂಗು: ಧನ್ಯವಾದಗಳು ಸರ್!

ಪ್ರಧಾನ ಮಂತ್ರಿ: ನಿಮ್ಮಲ್ಲಿ ಯಾರು 3ಕ್ಕಿಂತ ಹೆಚ್ಚು ಬಾರಿ ಒಲಿಂಪಿಕ್ಸ್‌ಗೆ ಹೋಗಿದ್ದೀರಾ? 3ಕ್ಕಿಂತ ಹೆಚ್ಚಿನ  ಬಾರಿ ಹೋದವರಿಂದ ಕೇಳೋಣ. ಜಾರ್ಖಂಡ್‌ನ ಜನರು ಮುಕ್ತವಾಗಿ ಮಾತನಾಡಲು ವಿಶೇಷ ಅನುಮತಿ ಹೊಂದಿದ್ದಾರೆ.

ಆಟಗಾರ್ತಿ: ನಮಸ್ತೆ ಸರ್. ನನ್ನ ಹೆಸರು ದೀಪಿಕಾ ಕುಮಾರಿ. ನಾನು ಬಿಲ್ಲುಗಾರಿಕೆ ಪ್ರತಿನಿಧಿಸುತ್ತೇನೆ, ಇದು ನನ್ನ 4ನೇ ಒಲಿಂಪಿಕ್ಸ್ ಸ್ಪರ್ಧೆ. ನಾನು ತುಂಬಾ ಉತ್ಸುಕಳಾಗಿದ್ದೇನೆ, ಸಾಕಷ್ಟು ಅನುಭವ ಗಳಿಸಿದ್ದೇನೆ. ನಾನು ಆ ಎಲ್ಲಾ ಅನುಭವಗಳನ್ನು ಬಳಸಲು ಬಯಸುತ್ತೇನೆ. ಅದೇ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಈ ಬಾರಿಯೂ ಪ್ರತಿನಿಧಿಸಲು ಬಯಸುತ್ತೇನೆ, ನನ್ನ 200% ಪ್ರದರ್ಶನ ನೀಡುತ್ತೇನೆ. ಧನ್ಯವಾದಗಳು, ಸರ್.

ಪ್ರಧಾನ ಮಂತ್ರಿ: ಮೊದಲ ಬಾರಿಗೆ ಹೋಗುತ್ತಿರುವ ಹೊಸ ಕ್ರೀಡಾಪಟುಗಳು ಏನು ಸಂದೇಶ ನೀಡುತ್ತೀರಿ? ಮೊದಲ ಬಾರಿಗೆ ಹೋಗುತ್ತಿರುವ ಕ್ರೀಡಾಪಟುಗಳು!

ದೀಪಿಕಾ ಕುಮಾರಿ: ಸರ್, ಉತ್ಸಾಹ(ಎಕ್ಸೈಟ್ಮೆಂಟ್) ತುಂಬಾ ಜಾಸ್ತಿ ಅಂತ ಹೇಳ್ತೀನಿ, ಆದ್ರೆ ಗ್ಲಾಮರ್ ನಲ್ಲಿ ಕಳೆದು ಹೋಗಬೇಡಿ ಅಂತಲೂ ಹೇಳ್ತೀನಿ. ಅವರು ಸಾಧ್ಯವಾದಷ್ಟು ತಮ್ಮ ಮೇಲೆ ಗಮನ ಕೇಂದ್ರೀಕರಿಸಬೇಕು. ಅನುಭವ ಆನಂದಿಸಿ, ಆದರೆ ಪೂರ್ಣ ಗಮನ ಮತ್ತು ಆತ್ಮವಿಶ್ವಾಸದಿಂದ. ಪದಕಗಳನ್ನು ಬೆನ್ನಟ್ಟಬೇಡಿ, ಆದರೆ ಉತ್ತಮ ಪ್ರದರ್ಶನ ನೀಡಿ ಎಂದು ನಾನು ಹೇಳುತ್ತೇನೆ. ಅವರು ಉತ್ತಮ ಪ್ರದರ್ಶನ ನೀಡಿದರೆ ಪದಕಗಳು ಸಹಜವಾಗಿ ಬರುತ್ತವೆ.

ಪ್ರಧಾನ ಮಂತ್ರಿ: ನೀವು 3 ಬಾರಿ ಒಲಿಂಪಿಕ್ಸ್‌ಗೆ ಹೋಗಿದ್ದೀರಿ. ನೀವು ಮೊದಲ ಬಾರಿಗೆ ಹೋದಾಗ, ನೀವು ಏನನ್ನಾದರೂ ಕಲಿತು ನಂತರ ಅಭ್ಯಾಸ ಮಾಡಿರಬೇಕು. ಎರಡನೇ ಬಾರಿ, ನೀವು ಬೇರೆ ಏನನ್ನಾದರೂ ಕಲಿತಿದ್ದೀರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿದ ಮತ್ತು ದೇಶಕ್ಕೆ ನೀವು ಕೊಡುಗೆ ನೀಡಬಹುದು ಎಂಬ ಭಾವನೆ ಮೂಡಿಸಿದ ನೀವು ಅಳವಡಿಸಿಕೊಂಡ ಹೊಸ ವಿಷಯಗಳನ್ನು ನೀವು ಹಂಚಿಕೊಳ್ಳಬಹುದೇ? ಅಥವಾ ನೀವು ಅದೇ ದಿನನಿತ್ಯದ ಅಭ್ಯಾಸಗಳಿಗೆ ಅಂಟಿಕೊಳ್ಳುತ್ತೀರಾ? ನನ್ನಂತೆಯೇ ಯೋಗ ಮಾಡುವ ಅಭ್ಯಾಸವಿರುವ ಅನೇಕ ಜನರು ಪ್ರತಿ ಬಾರಿಯೂ ಅದೇ ರೀತಿಯಲ್ಲಿ ಪ್ರಾರಂಭಿಸುವುದನ್ನು ನಾನು ನೋಡಿದ್ದೇನೆ. ಕೆಲವೊಮ್ಮೆ ನಾನು ಪ್ರಜ್ಞಾಪೂರ್ವಕವಾಗಿ ಹೊಸದನ್ನು ಪ್ರಯತ್ನಿಸುತ್ತೇನೆ, ನಾನು ಕಲಿತಿರುವ 2 ಯೋಗ ಭಂಗಿಗಳನ್ನು ಬಿಡುತ್ತೇನೆ ಮತ್ತು 2 ಹೊಸದನ್ನು ಪ್ರಯತ್ನಿಸುತ್ತೇನೆ. ಪ್ರತಿಯೊಬ್ಬರೂ ಒಂದು ಅಭ್ಯಾಸ  ಪಡೆದರೆ ಅದನ್ನೇ ಮಾಡುತ್ತಿರುತ್ತಾರೆ. ಅವನು ಸಹ ಅದನ್ನೇ ಮಾಡಿದರೆಂದು ಭಾವಿಸುತ್ತಾರೆ. ನಿಮ್ಮ ಪರಿಸ್ಥಿತಿ ಏನು?

ದೀಪಿಕಾ ಕುಮಾರಿ: ಸರ್, ನಾವು ಉತ್ತಮ ಅಭ್ಯಾಸಗಳೊಂದಿಗೆ ಮುಂದುವರಿಯುತ್ತೇವೆ. ನಾವು ಪಂದ್ಯ ಕಳೆದುಕೊಂಡರೆ, ಅದರಿಂದ ಕಲಿಯುತ್ತೇವೆ. ನಮ್ಮ ಅಭ್ಯಾಸದ ಅವಧಿಯಲ್ಲಿ ಅದೇ ತಪ್ಪುಗಳನ್ನು ಪುನರಾವರ್ತಿಸದಂತೆ ಅಭ್ಯಾಸ ಮಾಡುತ್ತೇವೆ. ಒಳ್ಳೆಯ ಅಭ್ಯಾಸಗಳು ನಮ್ಮ ದಿನಚರಿಯ ಭಾಗವಾಗುವಂತೆ ತಪ್ಪುಗಳನ್ನು ತಪ್ಪಿಸಲು ನಾವು ಪುನರಾವರ್ತಿಸುತ್ತೇವೆ ಮತ್ತು ಅದನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ.

ಪ್ರಧಾನ ಮಂತ್ರಿ: ಕೆಲವೊಮ್ಮೆ ಕೆಟ್ಟ ಅಭ್ಯಾಸಗಳೂ ನಮ್ಮ ದಿನಚರಿಯ ಭಾಗವಾಗುತ್ತವೆ.

ದೀಪಿಕಾ ಕುಮಾರಿ: ಸಾರ್, ಆಗುತ್ತೆ. ಸಾಮಾನ್ಯವಾಗಿ, ಕೆಟ್ಟ ಅಭ್ಯಾಸಗಳು ಹರಿದಾಡುತ್ತವೆ. ಆದರೆ ನಾವು ನಮ್ಮೊಂದಿಗೆ ಮಾತನಾಡುತ್ತೇವೆ ಮತ್ತು ಅವುಗಳನ್ನು ಉತ್ತಮ ಅಭ್ಯಾಸಗಳಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ.

ಪ್ರಧಾನ ಮಂತ್ರಿ: ಸರಿ! 3 ಬಾರಿ ಒಲಿಂಪಿಕ್ಸ್‌ಗೆ ಯಾರು ಹೋಗಿದ್ದಾರೆ?

ಆಟಗಾರ್ತಿ: ನಮಸ್ತೆ ಸರ್. ನಾನು ಪೂವಮ್ಮ ಎಂ ಆರ್. 2008ರಲ್ಲಿ ನಾನು ಒಲಿಂಪಿಕ್ಸ್‌ಗೆ ಹೋದಾಗ 18 ವರ್ಷ ವಯಸ್ಸಾಗಿತ್ತು, ಆಗ ನಾನು ಸಂಕೋಚದವಳಾಗಿದ್ದೆ ಸರ್. 2016 ರಲ್ಲಿ ನಾವು 4x400 ಮೀ ರಿಲೇ ಕ್ವಾರ್ಟರ್ ಫೈನಲ್ಸ್ ನಲ್ಲಿ ಹೊರಬಿದ್ದೆವು. 2020ರಲ್ಲಿ ನಾವು ಫೈನಲ್‌ಗೆ ಬರಲಿಲ್ಲ. ಈ ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿ ಫೈನಲ್‌ಗೆ ತಲುಪುವ ಗುರಿ ಹೊಂದಿದ್ದೇವೆ.

ಪ್ರಧಾನ ಮಂತ್ರಿ: ಇದು ಆತ್ಮವಿಶ್ವಾಸವನ್ನು ತೋರಿಸುತ್ತದೆ. ಧನ್ಯವಾದ. ನಿಮಗೆ ಒಳ್ಳೆಯದಾಗಲಿ. ಆನ್‌ಲೈನ್‌ ಸಂಪರ್ಕದಲ್ಲಿ ಇರುವವರು ನಿಮ್ಮ ಅನುಭವ ಹಂಚಿಕೊಳ್ಳಲು ಬಯಸಿದರೆ, ಅದು ಎಲ್ಲಾ ಕ್ರೀಡಾಪಟುಗಳಿಗೆ ಅನುಕೂಲ. ಯಾರು ಹಂಚಿಕೊಳ್ಳಲು ಬಯಸುತ್ತೀರಾ? ನಿಮ್ಮ ಕೈಯನ್ನು ಮೇಲೆತ್ತಿ ಮಾತು ಪ್ರಾರಂಭಿಸಿ.

ಆಟಗಾರ್ತಿ: ನಮಸ್ತೆ, ಸರ್.

ಪ್ರಧಾನ ಮಂತ್ರಿ: ನಮಸ್ತೆ.

ಆಟಗಾರ್ತಿ: ನಾನು ಪಿ.ವಿ. ಸಿಂಧು. ಸರ್, ಇದು ನನ್ನ 3ನೇ ಒಲಿಂಪಿಕ್ಸ್. 2016ರ ಮೊದಲ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದೆ. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಾನು ಕಂಚಿನ ಪದಕವನ್ನು ದೇಶಕ್ಕೆ ತಂದಿದ್ದೇನೆ. ಈ ಬಾರಿ ಚಿನ್ನದ ಪದಕದೊಂದಿಗೆ ಮರಳುವ ಭರವಸೆ ಇದೆ. ನಿಸ್ಸಂಶಯವಾಗಿ, ನಾನು ಸಾಕಷ್ಟು ಅನುಭವದೊಂದಿಗೆ ಹೋಗುತ್ತಿದ್ದೇನೆ, ಆದರೆ ಅದು ಸುಲಭವಲ್ಲ. ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ, ಇನ್ನೊಂದು ಪದಕಕ್ಕಾಗಿ ಪ್ರಯತ್ನಿಸುತ್ತೇನೆ ಸರ್.

ಪ್ರಧಾನ ಮಂತ್ರಿ: ಹೊಸ ಕ್ರೀಡಾಪಟುಗಳಿಗೆ ನೀವು ಏನು ಹೇಳಲು ಬಯಸುತ್ತೀರಿ?

ಪಿ.ವಿ. ಸಿಂಧು: ಮೊದಲನೆಯದಾಗಿ, ನಾನು ಅವರಿಗೆ ಶುಭ ಹಾರೈಸುತ್ತೇನೆ. ಒಲಿಂಪಿಕ್ಸ್ ಬಹಳಷ್ಟು ಒತ್ತಡ ಮತ್ತು ಉತ್ಸಾಹ ತರುತ್ತದೆ ಎಂದು ಅನೇಕ ಜನರು ಭಾವಿಸುತ್ತಾರೆ, ವಿಶೇಷವಾಗಿ ಮೊದಲ ಬಾರಿಗೆ ಅದನ್ನು ಅನುಭವಿಸುವವರಿಗೆ. ಆದರೆ ಇದು ಯಾವುದೇ ಪಂದ್ಯಾವಳಿಯಂತೆ ಇರುತ್ತದೆ ಎಂದು ಹೇಳಲು ನಾನು ಬಯಸುತ್ತೇನೆ. ನಾವು ಗಮನ ಹರಿಸಬೇಕು, ನಾವು ಅದನ್ನು ಮಾಡಬಹುದು ಎಂದು ನಮ್ಮಲ್ಲಿ ನಂಬಿಕೆ ಇಡಬೇಕು. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಅವರು ತಮ್ಮ 100% ಪ್ರದರ್ಶನ ನೀಡಬೇಕೆಂದು ನಾನು ಬಯಸುತ್ತೇನೆ. ಇದು ವಿಭಿನ್ನ ಪಂದ್ಯಾವಳಿ ಅಥವಾ ಇದು ಕಷ್ಟ ಎಂದು ಭಾವಿಸಬೇಡಿ. ಇದು ಯಾವುದೇ ಪಂದ್ಯಾವಳಿಯಂತೆಯೇ ಇರುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಿಸುವುದರ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ನಿಮ್ಮ 100% ಪ್ರದರ್ಶನ ನೀಡಿ. ಧನ್ಯವಾದಗಳು, ಸರ್.

ಪ್ರಧಾನ ಮಂತ್ರಿ: ಬೇರೆ ಯಾರಾದರೂ ಮಾತನಾಡಲು ಇಷ್ಟಪಡುತ್ತೀರಾ?

ಆಟಗಾರ್ತಿ: ನಮಸ್ತೆ, ಸರ್. ನಾನು ಪ್ರಿಯಾಂಕಾ ಗೋಸ್ವಾಮಿ.

ಪ್ರಧಾನ ಮಂತ್ರಿ: ನಮಸ್ತೆ. ನಿಮ್ಮ ಕೃಷ್ಣನ ವಿಗ್ರಹ ಎಲ್ಲಿದೆ?

ಪ್ರಿಯಾಂಕಾ ಗೋಸ್ವಾಮಿ: ಸರ್, ಅದು ಸ್ವಿಜರ್ ಲೆಂಡ್ ನಲ್ಲಿ ನನ್ನೊಂದಿಗೆ ಇದೆ.

ಪ್ರಧಾನ ಮಂತ್ರಿ: ನೀವು ಮತ್ತೆ ಶ್ರೀಕೃಷ್ಣನ ವಿಗ್ರಹವನ್ನು ಒಲಿಂಪಿಕ್ಸ್‌ಗೆ ತೆಗೆದುಕೊಂಡು ಹೋಗುತ್ತೀರಾ?

ಪ್ರಿಯಾಂಕಾ ಗೋಸ್ವಾಮಿ: ಹೌದು ಸರ್, ಇದು ಅದರ 2ನೇ ಒಲಿಂಪಿಕ್ಸ್ ಭೇಟಿ ಆಗಿದೆ. ಮೊದಲನೆಯದಾಗಿ, 3ನೇ ಬಾರಿಗೆ ಪ್ರಧಾನಿ ಆಗಿರುವುದಕ್ಕೆ ಅಭಿನಂದನೆಗಳು ಸರ್. ನಿಮ್ಮೊಂದಿಗೆ ಮತ್ತೊಮ್ಮೆ ಮಾತನಾಡಲು ನಮಗೆಲ್ಲಾ ಸಂತೋಷವಾಗಿದೆ. ಸರ್, ಇದು ನನ್ನ 2ನೇ ಒಲಂಪಿಕ್ಸ್. ನಾನು ಸರ್ಕಾರದ ಬೆಂಬಲದ ಅಡಿ, 3 ತಿಂಗಳ ಕಾಲ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುತ್ತಿದ್ದೇನೆ, ಪ್ರಸ್ತುತ ನಾನು TOPS ಯೋಜನೆಯಡಿ, ಸ್ವಿಜರ್ ಲೆಂಡ್ ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸರ್ಕಾರದ ಸಾಕಷ್ಟು ಬೆಂಬಲದಿಂದ ವಿದೇಶದಲ್ಲಿ ತರಬೇತಿ ಪಡೆಯುತ್ತಿದ್ದೇವೆ. ಎಲ್ಲಾ ಆಟಗಾರರು ಒಲಿಂಪಿಕ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ, ಸಾಧ್ಯವಾದಷ್ಟು ಪದಕಗಳನ್ನು ಮರಳಿ ತರುತ್ತಾರೆ ಎಂದು ನಾನು ಭಾವಿಸುತ್ತೇನೆ.

ಪ್ರಧಾನ ಮಂತ್ರಿ: ನಿಮ್ಮ ಕ್ರೀಡೆಯನ್ನು ಯಾರೂ ನೋಡುವುದಿಲ್ಲ ಎಂದು ದೂರುತ್ತಿದ್ದಿರಿ. ವಿದೇಶದಲ್ಲಿ ಅಭ್ಯಾಸ ಸಮಯದಲ್ಲಿ, ನೀವು ಪ್ರೇಕ್ಷಕರನ್ನು ಹೊಂದಿದ್ದೀರಾ?

ಪ್ರಿಯಾಂಕಾ ಗೋಸ್ವಾಮಿ: ಹೌದು ಸರ್. ವಿದೇಶಗಳಲ್ಲಿ ಈ ಕ್ರೀಡೆಗೆ ಇತರ ಕ್ರೀಡೆಗಳಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಸ್ವದೇಶದಲ್ಲಿ ಸ್ವಲ್ಪ ಕಡಿಮೆ. ಆದರೆ ನೀವು ಎಲ್ಲಾ ಕ್ರೀಡೆಗಳನ್ನು ವೀಕ್ಷಿಸಲು ಮತ್ತು ಪ್ರತಿಯೊಬ್ಬ ಕ್ರೀಡಾಪಟುವಿನ ಬಗ್ಗೆ ಮಾತನಾಡಲು ಜನರನ್ನು ಪ್ರೋತ್ಸಾಹಿಸುತ್ತಿರುವುದರಿಂದ, ಈಗ ನಮ್ಮ ದೇಶದಲ್ಲಿ ಹೆಚ್ಚಿನ ಜನರು ಈ ಕ್ರೀಡೆಯನ್ನು ವೀಕ್ಷಿಸುತ್ತಿದ್ದಾರೆ. ಜನರು ನಮ್ಮ ಕ್ರೀಡಾಕೂಟಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ತಿಳಿದು, ಉತ್ತಮವಾಗಿ ಕಾರ್ಯ ನಿರ್ವಹಿಸಲು ಇದು ನಮಗೆ ಪ್ರೇರಣೆ ಮತ್ತು ಬೆಂಬಲ ನೀಡುತ್ತಿದೆ. ನಾನು ಈ ಬಾರಿ ಉತ್ತಮವಾಗಿ ಮಾಡಬೇಕು ಎಂದುಕೊಂಡಿದ್ದೇನೆ.

ಪ್ರಧಾನ ಮಂತ್ರಿ: ಸರಿ, ನಿಮಗೆ ಅನೇಕ ಅಭಿನಂದನೆಗಳು. ಬೇರೆ ಯಾರಾದರೂ ಮಾತನಾಡಲು ಬಯಸುತ್ತೀರಾ?

ಆಟಗಾರ್ತಿ: ನಮಸ್ತೆ, ಸರ್. ನಾನು ನಿಖತ್ ಜರೀನ್, ನಾನು ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. ಇದು ನನ್ನ ಮೊದಲ ಒಲಿಂಪಿಕ್ಸ್, ಹಾಗಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ಅದೇ ಸಮಯದಲ್ಲಿ, ನಾನು ನನ್ನ ಗಮನವನ್ನು ಕಾಪಾಡಿಳ್ಳುತ್ತಿದ್ದೇನೆ. ಇಡೀ ದೇಶವೇ ನನ್ನಿಂದ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ನಾನು ಆ ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ಮತ್ತು ನನ್ನ ದೇಶವನ್ನು ಹೆಮ್ಮೆಪಡಿಸುವ ಮೂಲಕ ಮರಳಲು ಬಯಸುತ್ತೇನೆ.

ಪ್ರಧಾನ ಮಂತ್ರಿ: ನಿಮಗೆ ಶುಭ ಹಾರೈಕೆಗಳು. ನೀರಜ್ ಏನೋ ಹೇಳಲು ಹೊರಟಿರಿ...

ನೀರಜ್ ಚೋಪ್ರಾ: ನಮಸ್ತೆ, ಸರ್!

ಪ್ರಧಾನ ಮಂತ್ರಿ: ನಮಸ್ತೆ, ಸಹೋದರ.

ನೀರಜ್ ಚೋಪ್ರಾ: ಹೇಗಿದ್ದೀರಾ ಸರ್?

ಪ್ರಧಾನ ಮಂತ್ರಿ: ನಾನೂ ಹಾಗೆಯೇ. ನಿಮ್ಮ ಚುರ್ಮಾ ಇನ್ನೂ ಬಂದಿಲ್ಲ.

ನೀರಜ್ ಚೋಪ್ರಾ: ಸರ್, ನಾನು ಈ ಬಾರಿ ಚುರ್ಮಾ ತರುತ್ತೇನೆ. ಕಳೆದ ಬಾರಿ ದೆಹಲಿಯ ಸಕ್ಕರೆಯಲ್ಲಿ ತಯಾರಿಸಲಾಗಿತ್ತು. ಈ ಬಾರಿ ಹರಿಯಾಣದ ದೇಸಿ ತುಪ್ಪದೊಂದಿಗೆ ಬರಲಿದೆ.

ಪ್ರಧಾನ ಮಂತ್ರಿ: ನಾನು ಅದನ್ನು ತಿನ್ನಬೇಕೆಂಬ ಆಸೆಯಾಗಿದೆ. ನನಗೆ ನಿಮ್ಮ ಅಮ್ಮ ಮಾಡಿದ ಚುರ್ಮಾ ತಿನ್ನಬೇಕು.

ನೀರಜ್ ಚೋಪ್ರಾ: ಖಂಡಿತ, ಸರ್.

ಪ್ರಧಾನ ಮಂತ್ರಿ: ದಯವಿಟ್ಟು ಮುಂದುವರಿಸಿ.

ನೀರಜ್ ಚೋಪ್ರಾ: ಸರ್, ನಾವು ಪ್ರಸ್ತುತ ಜರ್ಮನಿಯಲ್ಲಿದ್ದೇವೆ, ತರಬೇತಿ ತುಂಬಾ ಚೆನ್ನಾಗಿ ನಡೆಯುತ್ತಿದೆ. ಪದೇಪದೆ ಗಾಯವಾಗುತ್ತಿದ್ದರಿಂದ ಈ ಬಾರಿ ಕಡಿಮೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈಗ ಅದು ಹೆಚ್ಚು ಉತ್ತಮವಾಗಿದೆ. ಇತ್ತೀಚೆಗೆ, ನಾನು ಫಿನ್‌ಲ್ಯಾಂಡ್‌ನಲ್ಲಿ ಸ್ಪರ್ಧಿಸಿದ್ದೆ, ಅದು ಚೆನ್ನಾಗಿ ಆಯಿತು. ನಮಗೆ ಒಲಿಂಪಿಕ್ಸ್‌ಗೆ 1 ತಿಂಗಳು ಉಳಿದಿದೆ, ತರಬೇತಿಯೂ ಉತ್ತಮವಾಗಿ ನಡೆಯುತ್ತಿದೆ. ನಾವು ಪ್ಯಾರಿಸ್‌ಗೆ ಸಂಪೂರ್ಣವಾಗಿ ಫಿಟ್ ಆಗಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ದೇಶಕ್ಕಾಗಿ ನಮ್ಮ 100% ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೇವೆ, ಏಕೆಂದರೆ ಈ ಅವಕಾಶವು 4 ವರ್ಷಗಳಿಗೊಮ್ಮೆ ಬರುತ್ತದೆ. ನಾನು ಎಲ್ಲಾ ಕ್ರೀಡಾಪಟುಗಳಿಗೆ ಹೇಳಲು ಬಯಸುತ್ತೇನೆ, ಅವರು ತಮ್ಮ ಅತ್ಯುತ್ತಮವಾದದ್ದನ್ನು ನೀಡಲು ಮತ್ತು ದೇಶಕ್ಕೆ ಸಹಾಯ ಮಾಡಲು ಆಳವಾಗಿ ತೊಡಗಿಸಿಕೊಳ್ಳಬೇಕು. ನನ್ನ ಮೊದಲ ಒಲಿಂಪಿಕ್ಸ್ ಟೋಕಿಯೊದಲ್ಲಿ, ಅಲ್ಲಿ ನನಗೆ ಉತ್ತಮ ಫಲಿತಾಂಶ ಸಿಕ್ಕಿತು, ದೇಶಕ್ಕೆ ಚಿನ್ನ ಬಂತು. ನಾನು ನಿರ್ಭೀತಿಯಿಂದ ಆಡಿದ್ದೇನೆ. ಅತ್ಯುತ್ತಮ ತರಬೇತಿಯಿಂದಾಗಿ ನನ್ನ ಮೇಲೆ ನನಗೆ ಸಾಕಷ್ಟು ನಂಬಿಕೆ ಬಂದಿತ್ತು. ಭಯವಿಲ್ಲದೇ ಅದೇ ರೀತಿ ಆಡುವಂತೆ ನಾನು ಎಲ್ಲ ಅಥ್ಲೀಟ್‌ಗಳಿಗೂ ಹೇಳುತ್ತೇನೆ, ಏಕೆಂದರೆ ಸ್ಪರ್ಧಾಳುಗಳು ಸಹ ಮನುಷ್ಯರೇ. ಕೆಲವೊಮ್ಮೆ ನಾವು ಯುರೋಪಿಯನ್ನರು ಅಥವಾ ಅಮೆರಿಕ ಅಥವಾ ಇತರ ದೇಶಗಳ ಕ್ರೀಡಾಪಟುಗಳು ಬಲಶಾಲಿ ಎಂದು ಭಾವಿಸುತ್ತೇವೆ. ಆದರೆ ನಾವು ನಮ್ಮ ಕಠಿಣ ಪರಿಶ್ರಮವನ್ನು ಗುರುತಿಸಿದರೆ ಮತ್ತು ನಾವು ನಮ್ಮ ಮನೆಗಳಿಂದ ದೂರವಿದ್ದರೆ, ಏನು ಬೇಕಾದರೂ ಮಾಡಲು ಸಾಧ್ಯವಿದೆ.

ಪ್ರಧಾನ ಮಂತ್ರಿ: ನೀವು ಎಲ್ಲರಿಗೂ ಕೆಲವು ಅತ್ಯುತ್ತಮ ಸಲಹೆಗಳನ್ನು ನೀಡಿದ್ದೀರಿ. ನಾನು ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತಾ, ಮುಂದಿನ ತಿಂಗಳು ಯಾವುದೇ ಹೊಸ ಗಾಯಗಳಿಲ್ಲದೆ ನಿಮಗೆ ಉತ್ತಮ ಆರೋಗ್ಯ ಸಿಗಲಿ ಎಂದು ಬಯಸುತ್ತೇನೆ.

ನೀರಜ್ ಚೋಪ್ರಾ: ಖಂಡಿತವಾಗಿ, ಸರ್. ಅದಕ್ಕಾಗಿಯೇ ನಾವು ಪ್ರಯತ್ನಿಸುತ್ತಿದ್ದೇವೆ.

ಪ್ರಧಾನ ಮಂತ್ರಿ: ಸ್ನೇಹಿತರೇ ನೋಡಿ, ನಮ್ಮ ಚರ್ಚೆಯಲ್ಲಿ ಕೆಲವು ಪ್ರಮುಖ ವಿಷಯಗಳು ಹೊರಬಿದ್ದಿವೆ. ಅನುಭವಿ ಜನರ ಮಾತುಗಳನ್ನು ಕೇಳುವುದು ತನ್ನದೇ ಆದ ಮಹತ್ವ ಹೊಂದಿದೆ. ಮೊದಲೇ ಹೇಳಿದಂತೆ, ಅಲ್ಲಿನ ಕಾರ್ಯಕ್ರಮದ ಗ್ಲಾಮರ್ ಮತ್ತು ಗೊಂದಲದಲ್ಲಿ ಕಳೆದುಹೋಗಬೇಡಿ. ಅದು ತುಂಬಾ ನಿಜ. ಇಲ್ಲದಿದ್ದರೆ, ಅದು ನಮ್ಮ ಗಮನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಎರಡನೆಯದಾಗಿ, ದೇವರು ನಮಗೆ ಒಂದು ನಿರ್ದಿಷ್ಟ ನಿಲುವು ನೀಡಿದ್ದಾನೆ. ಆಗಾಗ್ಗೆ, ಇತರ ದೇಶಗಳ ಕ್ರೀಡಾಪಟುಗಳು ಎತ್ತರವಾಗಿ ಅಥವಾ ದೊಡ್ಡದಾಗಿ ಕಾಣಿಸಬಹುದು. ಆದರೆ ನೆನಪಿಡಿ, ಇದು ಭೌತಿಕ ಗಾತ್ರದ ಆಟವಲ್ಲ. ಇದು ಕೌಶಲ್ಯ ಮತ್ತು ಪ್ರತಿಭೆಯ ಆಟವಾಗಿದೆ.

ಸ್ಪರ್ಧಿಗಳ ದೈಹಿಕ ನೋಟದಿಂದ ಭಯಪಡಬೇಡಿ. ನಿಮ್ಮ ಸ್ವಂತ ಪ್ರತಿಭೆಯ ಮೇಲೆ ನಿಮಗೆ ವಿಶ್ವಾಸವಿರಬೇಕು. ಎದುರಾಳಿ ಎಷ್ಟೇ ಭವ್ಯವಾಗಿ, ಸದೃಢವಾಗಿ ಕಂಡರೂ,  ನಿಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ನಂಬಿಕೆ ಇಡಿ. ಕೌಶಲ್ಯ ಮತ್ತು ಪ್ರತಿಭೆಯು ಫಲಿತಾಂಶವನ್ನು ತರುತ್ತದೆ. ಅನೇಕ ಜನರಿಗೆ ಬಹಳಷ್ಟು ತಿಳಿದಿದೆ, ಆದರೆ ಪರೀಕ್ಷೆಯ ಸಮಯದಲ್ಲಿ ಇನ್ನೂ ಎಡವುದನ್ನು ನೀವು ಗಮನಿಸಿರಬಹುದು. ಇದು ಹೆಚ್ಚಾಗಿ ಸಂಭವಿಸುತ್ತದೆ. ಏಕೆಂದರೆ ಅವರು ಗಮನವನ್ನು ಬೇರೆಡೆಗೆ ಹರಿಸುತ್ತಾರೆ, ಅವರು ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿತರಾಗುತ್ತಾರೆ, ಅವರು ಉತ್ತಮವಾಗಿ ಮಾಡದಿದ್ದರೆ ಅವರ ಕುಟುಂಬ ಏನು ಹೇಳುತ್ತದೆ? ನಾನು ಉತ್ತಮ ಅಂಕಗಳನ್ನು ಪಡೆಯದಿದ್ದರೆ ಕುಟುಂಬದ ಸದಸ್ಯರು ಏನು ಹೇಳುತ್ತಾರೆ? ಅವರು ಅಂಕಗಳ ಬಗ್ಗೆ ಯೋಚಿಸುವ ಒತ್ತಡದಲ್ಲಿ ಉಳಿಯುತ್ತಾರೆ. ಅಂತಹ ವಿಷಯಗಳ ಬಗ್ಗೆ ನೀವು ಚಿಂತಿಸಬಾರದು. ನಿಮ್ಮ ಅತ್ಯುತ್ತಮ ಆಟ ಪ್ರದರ್ಶಿಸಿ. ನೀವು ಪದಕ ಗೆಲ್ಲಲಿ ಅಥವಾ ಗೆಲ್ಲದಿರಲಿ, ಆ ಒತ್ತಡ ನಿಮ್ಮ ಮೇಲೆ ಬರಲು ಬಿಡಬೇಡಿ. ಯಾವುದೇ ರಾಜಿಯಿಲ್ಲದೆ ನಿಮ್ಮ 100% ಪ್ರದರ್ಶನ ನೀಡುವ ಬಗ್ಗೆ ನಿಮ್ಮ ವರ್ತನೆ ಇರಬೇಕು.

ಮತ್ತೊಂದು ಪ್ರಮುಖ ಅಂಶವೆಂದರೆ, ನಿದ್ರೆಯ ಮಹತ್ವ. ನಿಮ್ಮ ತರಬೇತುದಾರರು ಮತ್ತು ಶರೀರಶಾಸ್ತ್ರಜ್ಞರು ಇದನ್ನು ಒತ್ತಿ ಹೇಳಿರಬೇಕು. ಕ್ರೀಡೆಗಳಲ್ಲಿ, ಅಭ್ಯಾಸ ಮತ್ತು ಸ್ಥಿರತೆ ಎಷ್ಟು ಮುಖ್ಯವೋ, ಸರಿಯಾದ ನಿದ್ದೆಯೂ ಅಷ್ಟೇ ಮುಖ್ಯ. ಕೆಲವೊಮ್ಮೆ, ಪಂದ್ಯದ ಹಿಂದಿನ ರಾತ್ರಿ, ಉತ್ಸಾಹದಿಂದಾಗಿ ನೀವು ನಿದ್ರಿಸಲು ಕಷ್ಟವಾಗಬಹುದು. ನಿದ್ರೆಯ ಕೊರತೆಯು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಕಾರ್ಯಕ್ಷಮತೆಯನ್ನು ಹಾನಿ ಮಾಡುತ್ತದೆ. ನಮಗೆ ಚೆನ್ನಾಗಿ ನಿದ್ದೆ ಮಾಡಲು ಹೇಳುತ್ತಿರುವ ಇವರೆಂತಹ ಪ್ರಧಾನಿ ಎಂದು ನೀವು ಯೋಚಿಸಬಹುದು. ಆದರೆ ಉತ್ತಮ ನಿದ್ರೆ ಕ್ರೀಡಾಪಟುಗಳಿಗೆ ಮತ್ತು ಎಲ್ಲರಿಗೂ ನಿಜವಾಗಿಯೂ ಮುಖ್ಯ ಎಂದು ನಾನು ಪ್ರತಿಪಾದಿಸುತ್ತೇನೆ. ಆಧುನಿಕ ವೈದ್ಯಕೀಯ ವಿಜ್ಞಾನವು ನಿದ್ರೆಯ ಗುಣಮಟ್ಟ ಮತ್ತು ಅವಧಿಯ ಪ್ರಾಮುಖ್ಯತೆಯನ್ನು ಸಹ ಒತ್ತಿಹೇಳುತ್ತದೆ. ಆದ್ದರಿಂದ, ನೀವು ಎಷ್ಟೇ ಉತ್ಸುಕರಾಗಿದ್ದರೂ, ಸರಿಯಾಗಿ ನಿದ್ರೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ನೀವೆಲ್ಲರೂ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೀರಿ, ಆದ್ದರಿಂದ ನೈಸರ್ಗಿಕವಾಗಿ, ದೈಹಿಕ ಆಯಾಸದಿಂದಾಗಿ ನೀವು ಗಾಢವಾದ ನಿದ್ರೆಗೆ ಬೀಳುತ್ತೀರಿ.

ಆದರೆ ದೈಹಿಕ ಆಯಾಸದಿಂದ ಉಂಟಾಗುವ ನಿದ್ರೆ ಮತ್ತು ಚಿಂತೆಗಳಿಂದ ಮುಕ್ತವಾದ ನಿದ್ರೆಯ ನಡುವೆ ವ್ಯತ್ಯಾಸವಿದೆ. ಆದ್ದರಿಂದ, ನಿದ್ರೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಅದಕ್ಕಾಗಿಯೇ ಜೆಟ್ ಲ್ಯಾಗ್‌ನ ಸಮಸ್ಯೆಯನ್ನು ತಪ್ಪಿಸಲು ನಾವು ನಿಮ್ಮನ್ನು ಮುಂಚಿತವಾಗಿ ಕಳುಹಿಸುತ್ತೇವೆ. ಇದರಿಂದಆದ್ದರಿಂದ ನೀವು ಆರಾಮದಾಯಕವಾಗಬಹುದು ಮತ್ತು ಸ್ಪರ್ಧಿಸುವ ಮೊದಲು ಸಮಯದಲ್ಲಿ ಆಗುವ  ವ್ಯತ್ಯಾಸಕ್ಕೆ ಹೊಂದಿಕೊಳ್ಳಬಹುದು. ಅದಕ್ಕಾಗಿಯೇ ಸರ್ಕಾರ ನಿಮಗೆ ಈ ಸೌಲಭ್ಯವನ್ನು ಒದಗಿಸುತ್ತಿದೆ. ಈ ಬಾರಿಯೂ ನಿಮ್ಮ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಹೊಸ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಎಲ್ಲವೂ ಆರಾಮದಾಯಕವಾಗಿದೆಯೇ ಅಥವಾ ಇಲ್ಲವೇ ಎಂದು ನಾನು ಖಚಿತವಾಗಿ ಹೇಳಲಾರೆ, ಆದರೆ ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ. ನಿಮ್ಮನ್ನು ಬೆಂಬಲಿಸಲು ನಾವು ಭಾರತೀಯ ಸಮುದಾಯವನ್ನು ಸಹ ತೊಡಗಿಸಿಕೊಳ್ಳುತ್ತಿದ್ದೇವೆ. ಕೆಲವು ಶಿಸ್ತುಗಳ ಕಾರಣದಿಂದಾಗಿ ಅವರು ತುಂಬಾ ಹತ್ತಿರವಾಗಿರಲು ಸಾಧ್ಯವಾಗದಿರಬಹುದು, ಆದರೆ ಅವರು ನಿಮ್ಮ ಕಾಳಜಿ ವಹಿಸಲು ಮತ್ತು ಬೆಂಬಲಿಸಲು ಇರುತ್ತಾರೆ. ಕ್ರೀಡಾಕೂಟ ಮುಗಿಸಿದ ಆಟಗಾರರನ್ನು ಅವರು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ನೀವು ಆರಾಮದಾಯಕವಾಗಿರಬೇಕು, ಯಾವುದೇ ಅನನುಕೂಲಗಳನ್ನು ಎದುರಿಸಬಾರದು ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಬುದನ್ನು ಖಚಿತಪಡಿಸಲು ಸರ್ಕಾರ ಪ್ರಯತ್ನಿಸುತ್ತದೆ.

ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಆಗಸ್ಟ್ 11ರಂದು ಕ್ರೀಡಾಕೂಟ ಮುಗಿದಾಗ ನಿಮ್ಮನ್ನು ಮತ್ತೆ ನೋಡಲು ನಾನು ಎದುರು ನೋಡುತ್ತಿದ್ದೇನೆ. ನಿಮ್ಮಲ್ಲಿ ಕೆಲವರು ಬೇಗನೆ ನಿರ್ಗಮಿಸುವಿರಿ. ಆದರೆ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನೀವು ಸೇರಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಒಲಿಂಪಿಕ್ಸ್‌ನಲ್ಲಿ ಆಡಲು ಹೋದ ನಿಮ್ಮನ್ನು ಇಡೀ ದೇಶ ನೋಡುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಇದು ಹೆಮ್ಮೆಯ ಕ್ಷಣವಾಗಿದೆ. ನೀವು ಮನೆಗೆ ಪದಕವನ್ನು ತಂದರೆ ಅದು ಇನ್ನಷ್ಟು ಹೆಮ್ಮೆ ನೀಡುತ್ತದೆ. ಖೇಲೋ ಇಂಡಿಯಾದ ಮೂಲಕ ಬಂದವರು ನಿಮ್ಮಲ್ಲಿ ಎಷ್ಟು ಮಂದಿ ಇದ್ದಾರೆ? ಕೆಲವರನ್ನು ನಾನು ನೋಡುತ್ತೇನೆ. ನಿಮ್ಮ ಕ್ರೀಡೆ ಮತ್ತು ಅನುಭವದ ಬಗ್ಗೆ ನಮಗೆ ತಿಳಿಸಿ.

ಆಟಗಾರ: ಸರ್, ನನ್ನ ಹೆಸರು ಅರ್ಜುನ್. ನಾನು ಖೇಲೊ ಇಂಡಿಯಾ ಉಪಕ್ರಮದ ಮೂಲಕ ಬಂದಿದ್ದೇನೆ, ನಾನು ಬ್ಯಾಡ್ಮಿಂಟನ್ ಆಡುತ್ತೇನೆ. ಈ ಉಪಕ್ರಮವು ನನ್ನಂತಹ ಯುವ ಕ್ರೀಡಾಪಟುಗಳಿಗೆ ಉತ್ತಮ ಬೆಂಬಲವಾಗಿದೆ. ಇದು ಸಂಪನ್ಮೂಲಗಳು ಮತ್ತು ತರಬೇತಿ ಸೌಲಭ್ಯಗಳನ್ನು ಒದಗಿಸುತ್ತಿದೆ.

ಪ್ರಧಾನ ಮಂತ್ರಿ: ಅದ್ಭುತವಾಗಿದೆ ಅರ್ಜುನ್. ಖೇಲೊ ಇಂಡಿಯಾದಿಂದ ಒಲಿಂಪಿಕ್ಸ್‌ವರೆಗಿನ ನಿಮ್ಮ ಪ್ರಯಾಣ ಸ್ಫೂರ್ತಿದಾಯಕವಾಗಿದೆ. ಕಠಿಣ ಪರಿಶ್ರಮ ಮುಂದುವರಿಸಿ ಮತ್ತು ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತೆ ಮಾಡಿ.

ಆಟಗಾರ: ಹಲೋ ಸರ್, ನಾನು ಜರಡಿ, ನಾನು ಶೂಟಿಂಗ್‌ನಲ್ಲಿದ್ದೇನೆ. ಖೇಲೊ ಇಂಡಿಯಾ ನನಗೆ ಸಾಕಷ್ಟು ಸಹಾಯ ಮಾಡಿದೆ. ಏಕೆಂದರೆ ದೆಹಲಿಯಲ್ಲಿ ತರಬೇತಿ ಪಡೆದು ಆ ಯೋಜನೆಗೆ ಸೇರಿದ ನಂತರ ನಾನು ಸಾಧಿಸಿದ ಫಲಿತಾಂಶಗಳಿಗೆ ಖೇಲೋ ಇಂಡಿಯಾವೇ ಕಾರಣ.

ಪ್ರಧಾನ ಮಂತ್ರಿ: ಒಳ್ಳೆಯದು, ಇದು ಉತ್ತಮ ಆರಂಭ.

ಜರಡಿ: ಹೌದು ಸರ್.

ಪ್ರಧಾನ ಮಂತ್ರಿ: ಮತ್ತು ನೀವು?

ಆಟಗಾರ: ನಮಸ್ತೆ ಸರ್, ನನ್ನ ಹೆಸರು ಮನು ಭಾಕರ್. ಮುಂದಿನ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. 2018 ರಲ್ಲಿ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನ ಮೊದಲ ಆವೃತ್ತಿಯಲ್ಲಿ, ನಾನು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದೇನೆ. ಅಲ್ಲಿಂದ, ನಾನು TOPS (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್)ನ ಪ್ರಮುಖ ಗುಂಪಿಗೆ ಸೇರಿಕೊಂಡೆ. ಅಂದಿನಿಂದ ನನ್ನ ಗುರಿ ಭಾರತೀಯ ಜೆರ್ಸಿಯನ್ನು ಗಳಿಸಿ ಭಾರತಕ್ಕಾಗಿ ಆಡುವುದಾಗಿದೆ. ಖೇಲೊ ಇಂಡಿಯಾ ಅನೇಕ ಜನರಿಗೆ ಮಾರ್ಗದರ್ಶನ ನೀಡುವ ವೇದಿಕೆ ಒದಗಿಸಿದೆ. ನನ್ನ ತಂಡದಲ್ಲಿ ಈಗ ಖೇಲೊ ಇಂಡಿಯಾದ ಅನೇಕ ಅಥ್ಲೀಟ್‌ಗಳು ನನ್ನೊಂದಿಗೆ ಆಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ, ಖೇಲೊ ಇಂಡಿಯಾದಿಂದ ಬಂದಿರುವ ಕಿರಿಯರನ್ನು ಸಹ. 2018ರಿಂದ TOPSನಿಂದ ಬೆಂಬಲ ಪಡೆಯಲು ಇದು ಒಂದು ದೊಡ್ಡ ಹೆಜ್ಜೆಯಾಗಿದೆ, ಅದರ ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅಲ್ಲಿ ಕ್ರೀಡಾಪಟುಗಳು ಎದುರಿಸುತ್ತಿರುವ ಸಣ್ಣ ಸಮಸ್ಯೆಗಳನ್ನು ಸಹ ಪರಿಹರಿಸುತ್ತಾರೆ, ಇದು ನನ್ನ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಖೇಲೊ ಇಂಡಿಯಾ ಮತ್ತು TOPSಗೆ ಧನ್ಯವಾದಗಳು, ಈ ಸಂಸ್ಥೆಗಳಿಂದಲೇ ನಾನು ಇಂದು ಇಲ್ಲಿದ್ದೇನೆ. ಧನ್ಯವಾದಗಳು, ಸರ್.

ಪ್ರಧಾನ ಮಂತ್ರಿ: ಅದ್ಭುತವಾಗಿದೆ, ನಿಮಗೆ ಶುಭಾಶಯಗಳು. ಏನಾದರೂ ಹೇಳಲು ಬಯಸುವವರು ಯಾರಾದರೂ ಇದ್ದಾರೆಯೇ? ದಯವಿಟ್ಟು ಹಂಚಿಕೊಳ್ಳಿ.

ಆಟಗಾರ: ನಮಸ್ಕಾರ ಸರ್! ನಾನು ಹಾಕಿ ತಂಡದ ಹರ್ಮನ್‌ಪ್ರೀತ್ ಸಿಂಗ್. ಕಳೆದ ಬಾರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದೆವು. ಹಾಕಿಯ ಶ್ರೀಮಂತ ಇತಿಹಾಸದಿಂದಾಗಿ ಇದು ನಮಗೆ ಹೆಮ್ಮೆಯ ಕ್ಷಣವಾಗಿತ್ತು. ನಾವು ಈ ಬಾರಿ ಬಲವಾದ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾನು ಸೌಲಭ್ಯಗಳ ಬಗ್ಗೆ ಮಾತನಾಡಬೇಕೇ?

ಪ್ರಧಾನ ಮಂತ್ರಿ: ಎಲ್ಲರೂ ನಿಮ್ಮ ತಂಡವನ್ನು ಗಮನಿಸುತ್ತಿದ್ದಾರೆ.

ಹರ್ಮನ್‌ಪ್ರೀತ್ ಸಿಂಗ್: ಸೌಲಭ್ಯಗಳಿಗೆ ಸಂಬಂಧಿಸಿದಂತೆ, ನಾವು ಭಾರತೀಯ ಕ್ರೀಡಾ ಪ್ರಾಧಿಕಾರದ ಬಂಗಲೆಯಲ್ಲಿ ಇರುತ್ತೇವೆ, ಅಲ್ಲಿ ನಾವು ಕೆಲವು ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. ನೀವು ಚೇತರಿಕೆ ಮತ್ತು ನಿದ್ರೆಯನ್ನು ಪ್ರಸ್ತಾಪಿಸಿದ್ದೀರಿ. ನಾವು ಅಲ್ಲಿ ಅತ್ಯುತ್ತಮ ಆಹಾರ ಮತ್ತು ಹೊಂದಾಣಿಕೆಯಾಗುವ ಎಲ್ಲಾ ಸಂಪನ್ಮೂಲಗಳನ್ನು ಪಡೆಯುತ್ತೇವೆ. ನಾವು ಈ ಬಾರಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ನಮ್ಮ ತಂಡ ಬಲಿಷ್ಠವಾಗಿದೆ. ಇನ್ನೂ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಪದಕ ಗೆಲ್ಲುವ ಭರವಸೆ ಇದೆ ಸರ್.

ಪ್ರಧಾನ ಮಂತ್ರಿ: ಬಹುಶಃ ಹಾಕಿ ನಮ್ಮ ದೇಶದಲ್ಲಿ ಹೆಚ್ಚು ಒತ್ತಡದಲ್ಲಿರುವ ಕ್ರೀಡೆಯಾಗಿದೆ, ಏಕೆಂದರೆ ಇದು ನಮ್ಮ ಆಟ ಎಂದು ಎಲ್ಲರಿಗೂ ಗೊತ್ತಿದೆ. ಈ ಕ್ರೀಡೆಯಲ್ಲಿ ನಾವು ಹೇಗೆ ಹಿಂದುಳಿದಿದ್ದೇವೆ. ಹಾಕಿ ಆಟಗಾರರು ಹೆಚ್ಚಿನ ಒತ್ತಡವನ್ನು ಎದುರಿಸುತ್ತಾರೆ. ಏಕೆಂದರೆ, ಪ್ರತಿ ಮಗುವೂ ಇದು ನಮ್ಮ ಆಟ ಎಂದು ನಂಬುತ್ತದೆ. ಹಾಗಾಗಿ, ನಾವು ಕಳೆದುಕೊಳ್ಳಲು ಸಾಧ್ಯವಿಲ್ಲ. ಇತರ ಕ್ರೀಡೆಗಳಲ್ಲಾದರೆ, ನಮ್ಮ ಕ್ರೀಡಾಪಟುಗಳು ಸಕಲ ಪ್ರಯತ್ನ ನಡೆಸಿದರು ಎಂದು ಜನರು ಹೇಳಬಹುದು, ಆದರೆ ಹಾಕಿಯಲ್ಲಿ ಯಾವುದೇ ರಾಜಿ ಇಲ್ಲ. ಆದ್ದರಿಂದ, ನೀವು ಇನ್ನೂ ಹೆಚ್ಚು ಶ್ರಮಿಸಬೇಕು. ನನ್ನ ಶುಭಾಶಯಗಳು ನಿಮ್ಮೊಂದಿಗಿವೆ, ನೀವು ಯಶಸ್ವಿಯಾಗುತ್ತೀರಿ ಎಂಬ ವಿಸ್ವಾಸ ನನಗಿದೆ.

ಹರ್ಮನ್‌ಪ್ರೀತ್ ಸಿಂಗ್: ಧನ್ಯವಾದಗಳು ಸರ್.

ಪ್ರಧಾನ ಮಂತ್ರಿ: ದೇಶಕ್ಕಾಗಿ ಏನನ್ನಾದರೂ ಮಾಡಲು ಇದೊಂದು ಅವಕಾಶ ಎಂದು ನಾನು ಹೇಳುತ್ತೇನೆ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಈ ಸ್ಥಾನ ತಲುಪಿದ್ದೀರಿ. ಈಗ, ಮೈದಾನದಲ್ಲಿ ನಿಮ್ಮ ಅತ್ಯುತ್ತಮವಾದುದನ್ನು ನೀಡುವ ಮೂಲಕ ದೇಶಕ್ಕೆ ಹಿಂತಿರುಗಿಸುವ ಸಮಯ. ಮೈದಾನದಲ್ಲಿ ಕೈಲಾದಷ್ಟು ಕೊಡುಗೆ ನೀಡಿದವರು ದೇಶಕ್ಕೆ ಕೀರ್ತಿ ತರುತ್ತಾರೆ. ಈ ಬಾರಿ ನಮ್ಮ ತಂಡ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ವಿಶ್ವಾಸವಿದೆ. ಭಾರತವು 2036ರಲ್ಲಿ ಒಲಿಂಪಿಕ್ಸ್ ಆಯೋಜಿಸುವ ಗುರಿ ಹೊಂದಿದೆ. ಇದು ನಮಗೆ ದೊಡ್ಡ ವಾತಾವರಣ ಸೃಷ್ಟಿಸುತ್ತದೆ, ನಾವು ಆ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸಿದ್ಧತೆಗಳು ಸಹ ನಡೆಯುತ್ತಿವೆ. ಸಿದ್ಧತೆಗಳ ಪ್ರಗತಿ ನಿಧಾನವಾಗಬಹುದು. ಮೂಲಸೌಕರ್ಯಗಳ ವಿಷಯದಲ್ಲಿ ತಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಒಲಿಂಪಿಕ್ಸ್ ನಡೆಯುತ್ತಿದ್ದು, ದೂರದ ದ್ವೀಪ ರಾಷ್ಟ್ರದಲ್ಲಿ ಕಾರ್ಯಕ್ರಮವೊಂದು ನಡೆಯಲಿದೆ. ನಿಮಗೆ ಆಸಕ್ತಿ ಇದ್ದರೆ, ಒಲಿಂಪಿಕ್ಸ್ ಸಮಯದಲ್ಲಿ ಫ್ರಾನ್ಸ್‌ನಲ್ಲಿನ ವ್ಯವಸ್ಥೆಗಳನ್ನು ಗಮನಿಸಿ, ಯಾವುದೇ ಕೊರತೆ ಅಥವಾ ಸುಧಾರಣೆಗಳನ್ನು ಗಮನಿಸಿ. ಆಟಗಾರರ ಯಾವುದೇ ಸಲಹೆ 2036ರ ಒಲಿಂಪಿಕ್ಸ್ ಗೆ ತಯಾರಿ ಮಾಡಲು ನಮಗೆ ದೊಡ್ಡದಾಗಿ ಸಹಾಯ ಮಾಡುತ್ತದೆ. ನಿಮ್ಮೆಲ್ಲರಿಗೂ ಶುಭಾಶಯಗಳು. ಧನ್ಯವಾದ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
5 Days, 31 World Leaders & 31 Bilaterals: Decoding PM Modi's Diplomatic Blitzkrieg

Media Coverage

5 Days, 31 World Leaders & 31 Bilaterals: Decoding PM Modi's Diplomatic Blitzkrieg
NM on the go

Nm on the go

Always be the first to hear from the PM. Get the App Now!
...
Prime Minister urges the Indian Diaspora to participate in Bharat Ko Janiye Quiz
November 23, 2024

The Prime Minister Shri Narendra Modi today urged the Indian Diaspora and friends from other countries to participate in Bharat Ko Janiye (Know India) Quiz. He remarked that the quiz deepens the connect between India and its diaspora worldwide and was also a wonderful way to rediscover our rich heritage and vibrant culture.

He posted a message on X:

“Strengthening the bond with our diaspora!

Urge Indian community abroad and friends from other countries  to take part in the #BharatKoJaniye Quiz!

bkjquiz.com

This quiz deepens the connect between India and its diaspora worldwide. It’s also a wonderful way to rediscover our rich heritage and vibrant culture.

The winners will get an opportunity to experience the wonders of #IncredibleIndia.”