ಪುಣೆ ಮೆಟ್ರೋದ ಪೂರ್ಣಗೊಂಡ ವಿಭಾಗಗಳ ಉದ್ಘಾಟನೆ, ಮೆಟ್ರೋ ರೈಲಿಗೆ ಹಸಿರು ನಿಶಾನೆ
ಪಿಎಂಎವೈ ಅಡಿ ಶಂಕುಸ್ಥಾಪನೆ, ನಿರ್ಮಾಣಗೊಂಡ ಮನೆಗಳ ಹಸ್ತಾಂತರ
ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕ ಉದ್ಘಾಟನೆ
“ದೇಶದ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ಉಜ್ವಲ ನಗರವಾಗಿ ಹೊರ ಹೊಮ್ಮಿದ ಪುಣೆ ಮತ್ತು ಇಡೀ ದೇಶದ ಯುವ ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸಿದ ನಗರ”
“ನಮ್ಮ ಸರ್ಕಾರ ನಾಗರಿಕರ ಜೀವನಮಟ್ಟ ಸುಧಾರಿಸಲು ಬದ್ಧ”
“ಆಧುನಿಕ ಭಾರತದ ನಗರಗಳಿಗೆ ಮೆಟ್ರೋ ಹೊಸ ಜೀವನಾಡಿ”
“ಮಹಾರಾಷ್ಟ್ರದ ಕೈಗಾರಿಕಾಭಿವೃದ್ದಿಯು ಸ್ವಾತಂತ್ರೋತ್ತರ ಭಾರತದ ಕೈಗಾರಿಕಾಭಿವೃದ್ಧಿಗೆ ದಾರಿ ಮಾಟಿಕೊಟ್ಟಿದೆ”
“ಅದು ಬಡವರು ಅಥವಾ ಮಧ್ಯಮವರ್ಗದವರಿರಬಹುದು, ಪ್ರತಿಯೊಂದು ಕನಸನ್ನು ಈಡೇರಿಸುವುದು ಮೋದಿಯವರ ವಾಗ್ದಾನ”

ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಅವರೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಅವರೇ ಮತ್ತು ಅಜಿತ್ ಪವಾರ್ ಅವರೇ, ದಿಲೀಪ್ ಅವರೇ, ಇತರ ಸಚಿವರೇ, ಸಂಸದರೇ, ಶಾಸಕರು ಮತ್ತು ಸಹೋದರ -ಸಹೋದರಿಯರೇ!

ಆಗಸ್ಟ್ ಮಾಸವು ಆಚರಣೆ ಮತ್ತು ಕ್ರಾಂತಿಯ ತಿಂಗಳು. ಈ ಕ್ರಾಂತಿಕಾರಿ ತಿಂಗಳ ಆರಂಭದಲ್ಲಿ ಪುಣೆಯಲ್ಲಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.

ವಾಸ್ತವವಾಗಿ, ಪುಣೆ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಬಾಲಗಂಗಾಧರ ತಿಲಕ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಪುಣೆ ದೇಶಕ್ಕೆ ನೀಡಿದೆ. ಇಂದು ಲೋಕಶಾಹಿರ್ ಅಣ್ಣಾ ಭಾವು ಸಾಥೆ ಅವರ ಜನ್ಮದಿನವೂ ಆಗಿದ್ದು, ಈ ದಿನ ನಮ್ಮೆಲ್ಲರಿಗೂ ಬಹಳ ವಿಶೇಷವಾಗಿದೆ. ಅಣ್ಣಾ ಭಾವು ಸಾಠೆ ಒಬ್ಬ ಮಹಾನ್ ಸಮಾಜ ಸುಧಾರಕರಾಗಿದ್ದರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಇಂದಿಗೂ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ಅವರ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತಾರೆ. ಅಣ್ಣಾ ಭಾವು ಸಾಥೆ ಅವರ ಕೃತಿಗಳು ಮತ್ತು ಬೋಧನೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇವೆ.

 

ಸ್ನೇಹಿತರೇ,

ಪುಣೆ ಒಂದು ರೋಮಾಂಚಕ ನಗರವಾಗಿದ್ದು, ಇದು ರಾಷ್ಟ್ರದ ಆರ್ಥಿಕತೆಯನ್ನು ಮುನ್ನಡೆಸುವುದರ ಜೊತೆಗೆ ದೇಶಾದ್ಯಂತದ ಯುವಕರ ಕನಸುಗಳನ್ನು ಈಡೇರಿಸುತ್ತದೆ. ಇಂದು ಪುಣೆ ಮತ್ತು ಪಿಂಪ್ರಿ-ಚಿಂಚ್ವಾಡ್‌ನಲ್ಲಿ ಕೈಗೊಂಡ ಯೋಜನೆಗಳಿಂದ ಪುಣೆಯ ಈ ಪಾತ್ರವು ಮತ್ತಷ್ಟು ಬಲಗೊಳ್ಳಲಿದೆ. ಸುಮಾರು 15,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮತ್ತು ಉದ್ಘಾಟನೆಗಳು ನೆರವೇರಿಸಲಾಗಿದೆ. ಸಾವಿರಾರು ಕುಟುಂಬಗಳು ಶಾಶ್ವತ ಮನೆಗಳನ್ನು ಪಡೆದಿವೆ. ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಲು ಆಧುನಿಕ ಘಟಕವನ್ನು ಸ್ಥಾಪಿಸಲಾಗಿದೆ. ಈ ಯೋಜನೆಗಳಿಗಾಗಿ ನಾನು ಪುಣೆ ಎಲ್ಲಾ ನಿವಾಸಿಗಳು ಮತ್ತು ನಾಗರಿಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ವೃತ್ತಿಪರರ, ವಿಶೇಷವಾಗಿ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಜೀವನದ ಗುಣಮಟ್ಟವನ್ನು ಸುಧಾರಿಸಲು ನಮ್ಮ ಸರ್ಕಾರ ಅತ್ಯಂತ ಬದ್ಧವಾಗಿದೆ. ಜೀವನದ ಗುಣಮಟ್ಟ ಸುಧಾರಿಸಿದಾಗ, ನಗರದ ಅಭಿವೃದ್ಧಿಯೂ ವೇಗಗೊಳ್ಳುತ್ತದೆ. ಪುಣೆಯಂತಹ ನಮ್ಮ ನಗರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ನಾನು ಇಲ್ಲಿಗೆ ಬರುವ ಮೊದಲು, ಪುಣೆ ಮೆಟ್ರೋದ ಮತ್ತೊಂದು ವಿಭಾಗವನ್ನು ಉದ್ಘಾಟನೆಯಲ್ಲಿ ಪಾಲ್ಗೊಂಡೆ. ಪುಣೆ ಮೆಟ್ರೋ ಕಾಮಗಾರಿ ಪ್ರಾರಂಭವಾದಾಗ, ಅದರ ಅಡಿಪಾಯ ಹಾಕುವ ಅವಕಾಶ ನನಗೆ ಸಿಕ್ಕಿತು, ಮತ್ತು ದೇವೇಂದ್ರ ಫಡ್ನವೀಸ್‌ ಅದನ್ನು ಬಹಳ ಸಂತೋಷಕರ ರೀತಿಯಲ್ಲಿ ವಿವರಿಸಿದರು. ಕಳೆದ 5 ವರ್ಷಗಳಲ್ಲಿ, ಸರಿಸುಮಾರು 24 ಕಿಲೋಮೀಟರ್ ಮೆಟ್ರೋ ಜಾಲವನ್ನು ಸ್ಥಾಪಿಸಲಾಗಿದೆ.

ಸ್ನೇಹಿತರೇ,

ಭಾರತೀಯ ನಗರಗಳಲ್ಲಿನ ಜನರ ಜೀವನ ಮಟ್ಟವನ್ನು ಹೆಚ್ಚಿಸಬೇಕಾದರೆ ನಾವು ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸಬೇಕು. ಅದಕ್ಕಾಗಿಯೇ ನಾವು ನಿರಂತರವಾಗಿ ಮೆಟ್ರೋ ಜಾಲವನ್ನು ವಿಸ್ತರಿಸುತ್ತಿದ್ದೇವೆ, ಹೊಸ ಫ್ಲೈಓವರ್‌ಗಳನ್ನು ನಿರ್ಮಿಸುತ್ತಿದ್ದೇವೆ ಜೊತೆಗೆ ಕೆಂಪು ದೀಪಗಳ ಸಂಖ್ಯೆಯನ್ನು ಕಡಿಮೆ ಮಾಡಲು ಒತ್ತು ನೀಡುತ್ತಿದ್ದೇವೆ. 2014ರವರೆಗೆ, ಭಾರತವು 250 ಕಿಲೋಮೀಟರ್‌ಗಿಂತ ಕಡಿಮೆ ಮೆಟ್ರೋ ಜಾಲವನ್ನು ಹೊಂದಿತ್ತು, ಅದರಲ್ಲಿ ಹೆಚ್ಚಿನವು ʻದೆಹಲಿ-ಎನ್‌ಸಿಆರ್ʼ ನಲ್ಲಿದ್ದವು. ಈಗ, ದೇಶವು 800 ಕಿಲೋಮೀಟರ್‌ಗಿಂತ ಹೆಚ್ಚು ಮೆಟ್ರೋ ಜಾಲವನ್ನು ಹೊಂದಿದೆ. ಇದಲ್ಲದೆ, ಹೆಚ್ಚುವರಿಯಾಗಿ ಒಂದು ಸಾವಿರ ಕಿಲೋಮೀಟರ್ ಕೆಲಸ ನಡೆಯುತ್ತಿದೆ. 2014ರಲ್ಲಿ, ಕೇವಲ 5 ನಗರಗಳಲ್ಲಿ ಮೆಟ್ರೋ ಜಾಲಗಳು ಅಸ್ತಿತ್ವದಲ್ಲಿದ್ದವು, ಆದರೆ ಇಂದು ದೇಶಾದ್ಯಂತ 20 ನಗರಗಳಲ್ಲಿ ಮೆಟ್ರೋ ಜಾಲವು ಕಾರ್ಯನಿರ್ವಹಿಸುತ್ತಿದೆ. ಪುಣೆ ಹೊರತುಪಡಿಸಿ, ಮಹಾರಾಷ್ಟ್ರವು ಮುಂಬೈ ಮತ್ತು ನಾಗ್‌ಪುರದಲ್ಲಿ ಮೆಟ್ರೋ ವಿಸ್ತರಣೆಗೆ ಸಾಕ್ಷಿಯಾಗಿದೆ. ಈ ಮೆಟ್ರೋ ಜಾಲಗಳು ಆಧುನಿಕ ಭಾರತೀಯ ನಗರಗಳ ಜೀವನಾಡಿಗಳಾಗುತ್ತಿವೆ. ಪುಣೆಯಂತಹ ನಗರಗಳಲ್ಲಿ ಮೆಟ್ರೋವನ್ನು ವಿಸ್ತರಿಸುವುದು ಪರಿಣಾಮಕಾರಿ ಸಾರಿಗೆಯನ್ನು ಒದಗಿಸಲು ಮಾತ್ರವಲ್ಲದೆ ಪರಿಸರವನ್ನು ರಕ್ಷಿಸಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರವು ಮೆಟ್ರೋ ಜಾಲವನ್ನು ವಿಸ್ತರಿಸಲು ದಣಿವರಿಯದೆ ಕೆಲಸ ಮಾಡುತ್ತಿದೆ.

ಸಹೋದರ-ಸಹೋದರಿಯರೇ,

ನಗರಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಮೇಲೆ ಜೀವನ ಗುಣಮಟ್ಟ ಸುಧಾರಣೆಯು ಹೆಚ್ಚು ಅವಲಂಬಿತವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಸ್ವಚ್ಛ ನಗರಗಳನ್ನು ಹೊಂದಿದ್ದಕ್ಕಾಗಿ ಪ್ರಶಂಸೆಯನ್ನು ಪಡೆಯುತ್ತಿದ್ದ ಕಾಲವೊಂದಿತ್ತು. ಈಗ ನಾವು ಭಾರತೀಯ ನಗರಗಳನ್ನು ಅದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ʻಸ್ವಚ್ಛ ಭಾರತ ಅಭಿಯಾನʼ(ಸ್ವಚ್ಛ ಭಾರತ ಮಿಷನ್) ಕೇವಲ ಶೌಚಾಲಯಗಳನ್ನು ನಿರ್ಮಿಸುವುದಕ್ಕಿಂತಲೂ ಮಿಗಿಲಾದುದು; ಇದು ತ್ಯಾಜ್ಯ ನಿರ್ವಹಣೆಗೂ ಗಮನಾರ್ಹ ಒತ್ತು ನೀಡುತ್ತದೆ. ಕಸದ ಬೃಹತ್ ಪರ್ವತಗಳು ನಮ್ಮ ನಗರಗಳಲ್ಲಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿವೆ. ನಿಮಗೆ ತಿಳಿದಿರುವಂತೆ, ಪುಣೆಯಲ್ಲಿ ಮೆಟ್ರೋ ಡಿಪೋವನ್ನು ನಿರ್ಮಿಸಲಾಗಿದೆ, ಇದನ್ನು ಮೊದಲು ಕೊಥ್ರುಡ್ ಕಸ ಡಂಪಿಂಗ್ ಯಾರ್ಡ್ ಎಂದು ಕರೆಯಲಾಗುತ್ತಿತ್ತು. ಅಂತಹ ಕಸದ ಪರ್ವತಗಳನ್ನು ತೆಗೆದುಹಾಕಲು ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚುವರಿಯಾಗಿ, ನಾವು 'ತ್ಯಾಜ್ಯದಿಂದ ಸಂಪತ್ತಿಗೆ' ತತ್ವದ ಮೇಲೆ ಕೆಲಸ ಮಾಡುತ್ತಿದ್ದೇವೆ, ಅಲ್ಲಿ ನಾವು ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲಗಳಾಗಿ ಪರಿವರ್ತಿಸುವ ಗುರಿ ಹೊಂದಿದ್ದೇವೆ. ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ʻಪಿಂಪ್ರಿ-ಚಿಂಚ್ವಾಡ್ʼ ಸ್ಥಾವರವು ಈ ನಿಟ್ಟಿನಲ್ಲಿ ಅತ್ಯುತ್ತಮ ಯೋಜನೆಯಾಗಿದೆ. ಈ ಘಟಕವು ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುತ್ತದೆ. ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್‌ ಮೂಲಕ ನಿಗಮವು ತನ್ನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರರ್ಥ ಮಾಲಿನ್ಯದ ಸಮಸ್ಯೆ ಕಡಿಮೆಯಾಗುತ್ತದೆ, ಜೊತೆಗೆ ಪುರಸಭೆಯ ವೆಚ್ಚವು ಸಹ ಉಳಿಯುತ್ತದೆ.

 

ಸ್ನೇಹಿತರೇ,

ಸ್ವಾತಂತ್ರ್ಯದ ನಂತರ, ಮಹಾರಾಷ್ಟ್ರದ ಕೈಗಾರಿಕಾ ಅಭಿವೃದ್ಧಿಯು ಭಾರತದ ಒಟ್ಟಾರೆ ಕೈಗಾರಿಕಾ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದೆ. ಮಹಾರಾಷ್ಟ್ರದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು, ಆಧುನಿಕ ಮೂಲಸೌಕರ್ಯ ಅತ್ಯಗತ್ಯ. ಆದ್ದರಿಂದ, ಮಹಾರಾಷ್ಟ್ರದಲ್ಲಿ ಮೂಲಸೌಕರ್ಯಕ್ಕಾಗಿ ನಮ್ಮ ಸರ್ಕಾರ ಮಾಡುತ್ತಿರುವ ಹೂಡಿಕೆಯ ಪ್ರಮಾಣವು ಅಭೂತಪೂರ್ವವಾಗಿದೆ. ಪ್ರಸ್ತುತ, ದೊಡ್ಡ ಎಕ್ಸ್‌ಪ್ರೆಸ್ ವೇಗಳು, ಹೊಸ ರೈಲ್ವೆ ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ರೈಲ್ವೆ ಅಭಿವೃದ್ಧಿಗಾಗಿ ವೆಚ್ಚವು 2014ಕ್ಕಿಂತ ಮೊದಲಿನ ಅವಧಿಗೆ ಹೋಲಿಸಿದರೆ 12 ಪಟ್ಟು ಹೆಚ್ಚಾಗಿದೆ. ಮಹಾರಾಷ್ಟ್ರದ ವಿವಿಧ ನಗರಗಳನ್ನು ನೆರೆಯ ರಾಜ್ಯಗಳ ಆರ್ಥಿಕ ಕೇಂದ್ರಗಳೊಂದಿಗೆ ಸಂಪರ್ಕಿಸಲಾಗುತ್ತಿದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಗುಜರಾತ್ ಮತ್ತು ಮಹಾರಾಷ್ಟ್ರ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ. ದೆಹಲಿ-ಮುಂಬೈ ಆರ್ಥಿಕ ಕಾರಿಡಾರ್ ಮಹಾರಾಷ್ಟ್ರವನ್ನು ಮಧ್ಯಪ್ರದೇಶ ಮತ್ತು ಇತರ ಉತ್ತರದ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ. ಮಹಾರಾಷ್ಟ್ರ ಮತ್ತು ಉತ್ತರ ಭಾರತದ ನಡುವಿನ ರೈಲು ಸಂಪರ್ಕವನ್ನು ʻವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ʼ ಗಮನಾರ್ಹವಾಗಿ ಸುಧಾರಿಸುತ್ತದೆ. ಇದಲ್ಲದೆ, ಮಹಾರಾಷ್ಟ್ರವನ್ನು ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಛತ್ತೀಸ್‌ಗಢದೊಂದಿಗೆ ಸಂಪರ್ಕಿಸುವ ಪ್ರಸರಣ ಮಾರ್ಗ ಜಾಲವು ಮಹಾರಾಷ್ಟ್ರದಲ್ಲಿ ಕೈಗಾರಿಕೆಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ತೈಲ ಮತ್ತು ಅನಿಲ ಕೊಳವೆ ಮಾರ್ಗಗಳು, ಔರಂಗಾಬಾದ್ ಕೈಗಾರಿಕಾ ನಗರ, ನವೀ ಮುಂಬೈ ವಿಮಾನ ನಿಲ್ದಾಣ ಮತ್ತು ಶೇಂದ್ರ-ಬಿಡ್ಕಿನ್ ಕೈಗಾರಿಕಾ ಪಾರ್ಕ್ ಮಹಾರಾಷ್ಟ್ರದ ಆರ್ಥಿಕತೆಗೆ ಹೊಸ ಪ್ರಚೋದನೆ ನೀಡುವ ಸಾಮರ್ಥ್ಯವನ್ನು ಹೊಂದಿವೆ.

ಸ್ನೇಹಿತರೇ,

ನಮ್ಮ ಸರ್ಕಾರವು ರಾಜ್ಯದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ, ಇದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಮಹಾರಾಷ್ಟ್ರವು ಪ್ರಗತಿ ಹೊಂದಿದಾಗ, ಭಾರತವು ಪ್ರಗತಿ ಹೊಂದುತ್ತದೆ, ಮತ್ತು ಭಾರತವು ಅಭಿವೃದ್ಧಿ ಹೊಂದಿದಾಗ, ಮಹಾರಾಷ್ಟ್ರಕ್ಕೂ ಪ್ರಯೋಜನವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಭಾರತದ ಪ್ರಗತಿ ಮತ್ತು ಅಭಿವೃದ್ಧಿಯ ಬಗ್ಗೆ ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಮಹಾರಾಷ್ಟ್ರ, ವಿಶೇಷವಾಗಿ ಪುಣೆ ಕೂಡ ಈ ಬೆಳವಣಿಗೆಯ ಲಾಭವನ್ನು ಪಡೆಯುತ್ತಿದೆ. ಕಳೆದ 9 ವರ್ಷಗಳಲ್ಲಿ, ನಾವೀನ್ಯತೆ ಮತ್ತು ನವೋದ್ಯಮಗಳ ವಿಷಯದಲ್ಲಿ ಭಾರತವು ಜಗತ್ತಿನಲ್ಲಿ ಹೊಸ ಗುರುತನ್ನು ಸೃಷ್ಟಿಸಿದೆ. ಕೇವಲ 9 ವರ್ಷಗಳ ಹಿಂದೆ, ಭಾರತದಲ್ಲಿ ಕೆಲವೇ ನೂರು ನವೋದ್ಯಮಗಳಿದ್ದವು, ಮತ್ತು ಈಗ ನಾವು 100,000 ನವೋದ್ಯಮಗಳ ಗಡಿಯನ್ನು ದಾಟಿದ್ದೇವೆ. ಡಿಜಿಟಲ್ ಮೂಲಸೌಕರ್ಯದ ವಿಸ್ತರಣೆಯಿಂದಾಗಿ ನವೋದ್ಯಮಗಳ ಈ ಪರಿಸರ ವ್ಯವಸ್ಥೆಯು ಪ್ರವರ್ಧಮಾನಕ್ಕೆ ಬಂದಿದೆ. ಭಾರತದಲ್ಲಿ ಡಿಜಿಟಲ್ ಮೂಲಸೌಕರ್ಯಕ್ಕೆ ಅಡಿಪಾಯ ಹಾಕುವಲ್ಲಿ ಪುಣೆ ಮಹತ್ವದ ಐತಿಹಾಸಿಕ ಪಾತ್ರ ವಹಿಸಿದೆ. ಅಗ್ಗದ ಡೇಟಾ, ಕೈಗೆಟುಕುವ ಫೋನ್‌ಗಳು ಮತ್ತು ಪ್ರತಿ ಹಳ್ಳಿಯನ್ನು ತಲುಪುವ ಇಂಟರ್ನೆಟ್ ಸಂಪರ್ಕವು ಈ ವಲಯವನ್ನು ಬಲಪಡಿಸಿದೆ. ಇಂದು, ಭಾರತವು ವಿಶ್ವದ ಅತ್ಯಂತ ವೇಗವಾಗಿ ʻ5ಜಿʼ ಸೇವೆಗಳನ್ನು ಹೊರತರುವ ದೇಶಗಳಲ್ಲಿ ಒಂದಾಗಿದೆ. ಫಿನ್‌ಟಕೆ, ಬಯೋಟೆಕ್, ಅಗ್ರಿಟೆಕ್ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಯುವ ಪ್ರತಿಭೆಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ಪ್ರಗತಿಯಿಂದ ಪುಣೆ ಅಪಾರ ಲಾಭವನ್ನು ಪಡೆಯುತ್ತಿದೆ.

 

ಸ್ನೇಹಿತರೇ,

ಒಂದೆಡೆ, ನಾವು ಮಹಾರಾಷ್ಟ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ನೋಡುತ್ತಿದ್ದೇವೆ. ಮತ್ತೊಂದೆಡೆ, ನೆರೆಯ ರಾಜ್ಯವಾದ ಕರ್ನಾಟಕದ ಬೆಳವಣಿಗೆಗಳನ್ನು ನಾವು ಗಮನಿಸುತ್ತಿದ್ದೇವೆ. ಬೆಂಗಳೂರು ಅಂತಹ ಮಹತ್ವದ ಐಟಿ ಹಬ್ ಮತ್ತು ಜಾಗತಿಕ ಹೂಡಿಕೆದಾರರ ಕೇಂದ್ರವಾಗಿದೆ. ಈ ಸಮಯದಲ್ಲಿ ಬೆಂಗಳೂರು ಮತ್ತು ಕರ್ನಾಟಕವು ತ್ವರಿತ ಪ್ರಗತಿಗೆ ಸಾಕ್ಷಿಯಾಗುವುದು ಅತ್ಯಗತ್ಯವಾಗಿತ್ತು. ಆದರೆ, ʻಗ್ಯಾರಂಟಿʼಗಳ ಆಧಾರದ ಮೇಲೆ ಅಲ್ಲಿ ರಚನೆಯಾದ ಸರ್ಕಾರವು ಅಲ್ಪಾವಧಿಯಲ್ಲಿ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಿದೆ. ಇದನ್ನು ಇಡೀ ದೇಶವು ನೋಡುತ್ತಿದೆ ಮತ್ತು ಚಿಂತಿಸುತ್ತಿದೆ. ಒಂದು ಪಕ್ಷವು ತನ್ನ ಗುಪ್ತ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿದಾಗ, ರಾಜ್ಯದ ಜನರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಅದು ನಮ್ಮ ಯುವಕರ ಭವಿಷ್ಯದ ಬಗ್ಗೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಇದು ಸರ್ಕಾರ ರಚಿಸಲು ಪಕ್ಷಕ್ಕೆ ಸಹಾಯ ಮಾಡಬಹುದಾದರೂ, ಇದು ಜನರ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತದೆ. ಪರಿಸ್ಥಿತಿ ಹೇಗಿದೆಯೆಂದರೆ, ಕರ್ನಾಟಕ ಸರ್ಕಾರವೇ ತನ್ನ ಬೊಕ್ಕಸ ಖಾಲಿಯಾಗಿದೆ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಮತ್ತು ಕರ್ನಾಟಕದ ಪ್ರಗತಿಗೆ ಹಣದ ಕೊರತೆಯಿದೆ ಎಂದು ಒಪ್ಪಿಕೊಳ್ಳುತ್ತದೆ. ಸಹೋದರರೇ, ಇದು ನಮ್ಮ ದೇಶಕ್ಕೆ ಬಹಳ ಕಳವಳಕಾರಿ ವಿಷಯವಾಗಿದೆ. ರಾಜಸ್ಥಾನದಲ್ಲೂ ಇದೇ ರೀತಿಯ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ, ಅಲ್ಲಿ ಸಾಲದ ಹೊರೆ ಹೆಚ್ಚುತ್ತಿದೆ ಮತ್ತು ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ.

ಸ್ನೇಹಿತರೇ,

ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ನೀತಿ, ಸಂಕಲ್ಪ ಹಾಗೂ ಸಮರ್ಪಣೆ ಈ ಮೂರರ ಪಾತ್ರವೂ ನಿರ್ಣಾಯಕವಾಗಿದೆ. ಸರ್ಕಾರ ಮತ್ತು ವ್ಯವಸ್ಥೆಯನ್ನು ನಡೆಸುವವರ ನೀತಿಗಳು, ಉದ್ದೇಶಗಳು ಮತ್ತು ಸಮರ್ಪಣೆಯು ಅಭಿವೃದ್ಧಿ ಇರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಬಡವರಿಗೆ ಶಾಶ್ವತ ಮನೆಗಳನ್ನು ಒದಗಿಸುವ ಯೋಜನೆ ಇದೆ. 2014ಕ್ಕಿಂತ ಮೊದಲು ಇದ್ದ ಸರ್ಕಾರವು ಹತ್ತು ವರ್ಷಗಳಲ್ಲಿ ನಗರ ಬಡವರಿಗೆ ಮನೆಗಳನ್ನು ಒದಗಿಸುವ ಎರಡು ಯೋಜನೆಗಳನ್ನಷ್ಟೇ ಜಾರಿಗೊಳಿಸಿತು. ಈ ಯೋಜನೆಗಳ ಅಡಿಯಲ್ಲಿ, ಒಂದು ದಶಕದಲ್ಲಿ ದೇಶಾದ್ಯಂತ ಕೇವಲ 8 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ, ಈ ಮನೆಗಳ ಸ್ಥಿತಿ ತುಂಬಾ ಕೆಟ್ಟದಾಗಿತ್ತು, ಹೆಚ್ಚಿನ ನಗರ ಬಡವರು ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಈಗ ನೀವು ಊಹಿಸಿಕೊಳ್ಳಿ, ಕೊಳೆಗೇರಿಯಲ್ಲಿ ವಾಸಿಸುವ ವ್ಯಕ್ತಿಯು ಸಹ ಆ ಮನೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಆ ಮನೆ ಇನ್ನೆಷ್ಟು ಕೆಟ್ಟದಾಗಿರಬಹುದು! ಯುಪಿಎ ಸರ್ಕಾರದ ಅವಧಿಯಲ್ಲಿ ಯಾರೂ ತೆಗೆದುಕೊಳ್ಳಲು ಸಿದ್ಧರಿರದ 2 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಮಹಾರಾಷ್ಟ್ರದಲ್ಲಿಯೂ ಆ ಸಮಯದಲ್ಲಿ ನಿರ್ಮಿಸಲಾದ 50,000 ಕ್ಕೂ ಹೆಚ್ಚು ಮನೆಗಳು ಖಾಲಿ ಇದ್ದವು. ಹೀಗೆ ಹಣವನ್ನು ವ್ಯರ್ಥ ಮಾಡಲಾಯಿತು. ಜನರ ಸಮಸ್ಯೆಗಳ ಬಗ್ಗೆಯೂ  ಆಗಿನ ಸರ್ಕಾರ ಯಾಔುದೇ ಕಾಳಜಿ ವಹಿಸಲಿಲ್ಲ.

 

ಸಹೋದರ-ಸಹೋದರಿಯರೇ,

2014ರಲ್ಲಿ, ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದೀರಿ. ಅಧಿಕಾರಕ್ಕೆ ಬಂದ ನಂತರ, ನಾವು ಸರಿಯಾದ ಉದ್ದೇಶಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ಮತ್ತು ನೀತಿಗಳನ್ನು ಸಹ ಬದಲಾಯಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ, ನಮ್ಮ ಸರ್ಕಾರವು ಹಳ್ಳಿಗಳು ಮತ್ತು ನಗರಗಳಲ್ಲಿ ಬಡವರಿಗಾಗಿ 4 ಕೋಟಿಗೂ ಹೆಚ್ಚು ಶಾಶ್ವತ ಮನೆಗಳನ್ನು ನಿರ್ಮಿಸಿದೆ. ಈ ಪೈಕಿ 75 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಗರ ಪ್ರದೇಶದ ಬಡವರಿಗಾಗಿ ನಿರ್ಮಿಸಲಾಗಿದೆ. ಈ ಹೊಸ ಮನೆಗಳ ನಿರ್ಮಾಣದಲ್ಲಿ ನಾವು ಪಾರದರ್ಶಕತೆಯನ್ನು ತಂದಿದ್ದೇವೆ ಮತ್ತು ಅವುಗಳ ಗುಣಮಟ್ಟವನ್ನು ಸುಧಾರಿಸಿದ್ದೇವೆ. ನಮ್ಮ ಸರ್ಕಾರ ಮತ್ತೊಂದು ಮಹತ್ವದ ಕೆಲಸ ಮಾಡಿದೆ. ಸರ್ಕಾರ ನಿರ್ಮಿಸಿ ಬಡವರಿಗೆ ನೀಡುತ್ತಿರುವ ಹೆಚ್ಚಿನ ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿದೆ. ಈ ಮನೆಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿದೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಕೋಟ್ಯಂತರ ಸಹೋದರಿಯರು ಲಕ್ಷಾಧೀಶರಾಗಿದ್ದಾರೆ. ಇದೇ ಮೊದಲ ಬಾರಿಗೆ ಆಸ್ತಿಯನ್ನು ಅವರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿದೆ. ಇಂದು ಸ್ವಂತ ಮನೆಗಳನ್ನು ಪಡೆದ ಎಲ್ಲಾ ಸಹೋದರ ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ಮತ್ತು ಈ ವರ್ಷದ ಗಣೇಶ ಉತ್ಸವವು ಅವರ ಪಾಲಿಗೆ ಭವ್ಯವಾಗಿರಲಿದೆ.

ಸಹೋದರ ಸಹೋದರಿಯರೇ,

ಬಡವರಾಗಿರಲಿ ಅಥವಾ ಮಧ್ಯಮ ವರ್ಗದ ಕುಟುಂಬವಾಗಿರಲಿ, ಪ್ರತಿಯೊಬ್ಬರ ಕನಸನ್ನು ಈಡೇರಿಸುವುದು ಮೋದಿಯವರ ಭರವಸೆಯಾಗಿದೆ. ಒಂದು ಕನಸು ನನಸಾದಾಗ, ಆ ಯಶಸ್ಸಿನ ಗರ್ಭದಿಂದ ನೂರಾರು ಹೊಸ ಸಂಕಲ್ಪಗಳು ಹುಟ್ಟುತ್ತವೆ. ಈ ನಿರ್ಣಯಗಳು ವ್ಯಕ್ತಿಯ ಜೀವನದಲ್ಲಿ ದೊಡ್ಡ ಶಕ್ತಿಯಾಗುತ್ತವೆ. ನಿಮ್ಮ ಮಕ್ಕಳು, ನಿಮ್ಮ ವರ್ತಮಾನ ಮತ್ತು ನಿಮ್ಮ ಭವಿಷ್ಯದ ಪೀಳಿಗೆಯ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ.

 

ಸ್ನೇಹಿತರೇ,

ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ, ಆದರೆ ಸಮಾಜ ಮತ್ತು ದೇಶ ಉಳಿಯುತ್ತದೆ. ಆದ್ದರಿಂದ, ನಿಮ್ಮ ಇಂದಿನ ಮತ್ತು ನಿಮ್ಮ ನಾಳೆಯನ್ನು ಉತ್ತಮಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಬದ್ಧತೆಯು ಈ ಭಾವನೆಯ ಅಭಿವ್ಯಕ್ತಿಯಾಗಿದೆ. ಇದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ಮಹಾರಾಷ್ಟ್ರದಲ್ಲಿ, ಅನೇಕ ವಿಭಿನ್ನ ಪಕ್ಷಗಳು ಒಂದೇ ಗುರಿಯೊಂದಿಗೆ ಒಗ್ಗೂಡಿವೆ. ಎಲ್ಲರ ಭಾಗವಹಿಸುವಿಕೆಯೊಂದಿಗೆ, ಮಹಾರಾಷ್ಟ್ರವು ವೇಗವಾಗಿ ಪ್ರಗತಿ ಸಾಧಿಸಬಹುದು ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದು ಇದರ ಉದ್ದೇಶವಾಗಿದೆ. ಮಹಾರಾಷ್ಟ್ರವು ಸದಾ ನಮಗೆ ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿದೆ. ಈ ಪ್ರೀತಿ ಮುಂದುವರಿಯಲಿ ಎಂಬ ಆಶಯದೊಂದಿಗೆ, ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಧನ್ಯವಾದಗಳು!

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi visits the Indian Arrival Monument
November 21, 2024

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.