ನಮಸ್ಕಾರ್ ಜೀ!
ಉತ್ತರಾಖಂಡದ ಗವರ್ನರ್ ಶ್ರೀ ಗುರ್ಮೀತ್ ಸಿಂಗ್ ಜಿ, ಉತ್ತರಾಖಂಡದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉತ್ತರಾಖಂಡ ಸರ್ಕಾರದ ಸಚಿವರು, ವಿವಿಧ ಸಂಸದರು, ಶಾಸಕರು, ಮೇಯರ್‌ಗಳು, ಜಿಲ್ಲಾ ಪರಿಷತ್ ಸದಸ್ಯರು, ಇತರ ಗಣ್ಯರು ಮತ್ತು ಉತ್ತರಾಖಂಡದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ ! ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕಾಗಿ ಉತ್ತರಾಖಂಡದ ಎಲ್ಲ ಜನರಿಗೆ ಅಭಿನಂದನೆಗಳು.
ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಈ ರೈಲು ದೇಶದ ರಾಜಧಾನಿಯನ್ನು ದೇವಭೂಮಿಯೊಂದಿಗೆ ಹೆಚ್ಚು ವೇಗವಾಗಿ ಸಂಪರ್ಕ ಕಲ್ಪಿಸುತ್ತದೆ. ಈಗ ಈ ವಂದೇ ಭಾರತ್ ರೈಲಿನಿಂದ ದೆಹಲಿ-ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವು ಗಣನೀಯವಾಗಿ ಕಡಿಮೆಯಾಗುತ್ತದೆ. ಈ ರೈಲು ವೇಗವಾಗಿ ಚಲಿಸುವ ಜತೆಗೆ, ಸೌಲಭ್ಯಗಳು ಸಹ ಪ್ರಯಾಣವನ್ನು ಆನಂದದಾಯಕವಾಗಿಸಲಿವೆ.
ಸ್ನೇಹಿತರೆ,
ನಾನು ಕೆಲವು ಗಂಟೆಗಳ ಹಿಂದೆ 3 ದೇಶಗಳ ಪ್ರವಾಸದಿಂದ ಹಿಂತಿರುಗಿದ್ದೇನೆ. ಇಂದು ಇಡೀ ವಿಶ್ವವೇ ಭಾರತದತ್ತ ಭಾರೀ ನಿರೀಕ್ಷೆಯಿಂದ ನೋಡುತ್ತಿದೆ. ಭಾರತೀಯರು ನಮ್ಮ ಆರ್ಥಿಕತೆಯನ್ನು ಬಲಪಡಿಸಿದ ರೀತಿ, ನಾವು ಬಡತನದ ವಿರುದ್ಧ ಹೋರಾಡುತ್ತಿರುವ ರೀತಿ, ಇದು ನಮ್ಮಲ್ಲಿ ಇಡೀ ವಿಶ್ವದ ವಿಶ್ವಾಸವನ್ನು ತುಂಬಿದೆ. ನಾವು ಒಟ್ಟಾಗಿ ಕೊರೊನಾ ಸವಾಲನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದೇವೆ, ಆದರೆ ಅನೇಕ ಪ್ರಮುಖ ದೇಶಗಳು ಅದರೊಂದಿಗೆ ಹಿಡಿತ ಸಾಧಿಸುತ್ತಲೇ ಇರುತ್ತವೆ. ನಾವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಪ್ರಾರಂಭಿಸಿದ್ದೇವೆ. ಇಂದು ವಿಶ್ವದೆಲ್ಲೆಡೆ ಭಾರತ ಕುರಿತು ಚರ್ಚೆಯಾಗುತ್ತಿದೆ. ಭಾರತವನ್ನು ನೋಡಲು ಮತ್ತು ಅರ್ಥ ಮಾಡಿಕೊಳ್ಳಲು ವಿಶ್ವಾದ್ಯಂತ ಜನರು ಭಾರತಕ್ಕೆ ಬರಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ತರಾಖಂಡದಂತಹ ಸುಂದರ ರಾಜ್ಯಗಳಿಗೆ ಇದೊಂದು ಉತ್ತಮ ಅವಕಾಶ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಈ ವಂದೇ ಭಾರತ್ ರೈಲು ಉತ್ತರಾಖಂಡಕ್ಕೆ ಸಹಾಯ ಮಾಡಲಿದೆ.
ಸ್ನೇಹಿತರೆ,
ಉತ್ತರಾಖಂಡವು ದೇವಭೂಮಿ. ಬಾಬಾ ಕೇದಾರನ ದರ್ಶನಕ್ಕೆ ಹೋದಾಗ ತಾನಾಗಿಯೇ ಏನೋ ಗೊಣಗಿದ್ದು ನೆನಪಿದೆ. ಇವು ಬಾಬಾ ಕೇದಾರರ ಆಶೀರ್ವಾದದ ರೂಪದಲ್ಲಿದ್ದು ಈ ದಶಕ ಉತ್ತರಾಖಂಡದ ದಶಕವಾಗಲಿದೆ ಎಂದು ಆಗ ಹೇಳಿದ್ದೆ. ಉತ್ತರಾಖಂಡವು ಕಾನೂನು ಸುವ್ಯವಸ್ಥೆಯನ್ನು ಪ್ರಮುಖವಾಗಿ ಇಟ್ಟುಕೊಂಡು ಅಭಿವೃದ್ಧಿಯ ಅಭಿಯಾನ ನಡೆಸುತ್ತಿರುವ ರೀತಿ ಶ್ಲಾಘನೀಯ. ಈ ದೇವಭೂಮಿಯ ಗುರುತು ಕಾಪಾಡುವುದು ಸಹ ಮುಖ್ಯವಾಗಿದೆ. ಈ ದೇವಭೂಮಿಯು ಮುಂದಿನ ದಿನಗಳಲ್ಲಿ ಇಡೀ ವಿಶ್ವದ ಆಧ್ಯಾತ್ಮಿಕ ಪ್ರಜ್ಞೆಯ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ನಾನು ನಂಬುತ್ತೇನೆ. ಈ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಉತ್ತರಾಖಂಡವನ್ನೂ ಅಭಿವೃದ್ಧಿಪಡಿಸಬೇಕಾಗಿದೆ.
ಪ್ರತಿ ವರ್ಷ ಚಾರ್ ಧಾಮ್ ಯಾತ್ರೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸುತ್ತಿದೆ. ಇದೀಗ, ಬಾಬಾ ಕೇದಾರದ ದರ್ಶನಕ್ಕೆ ಭಕ್ತರು ಮುಗಿಬೀಳುವುದನ್ನು ನಾವು ನೋಡಬಹುದು. ಹರಿದ್ವಾರದಲ್ಲಿ ನಡೆಯುವ ಕುಂಭ ಮತ್ತು ಅರ್ಧಕುಂಭಕ್ಕೆ ಜಗತ್ತಿನಾದ್ಯಂತ ಕೋಟಿಗಟ್ಟಲೆ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ನಡೆಯುವ ಕನ್ವರ್ ಯಾತ್ರೆಯಲ್ಲಿ ಲಕ್ಷಾಂತರ ಜನರು ಉತ್ತರಾಖಂಡ ತಲುಪುತ್ತಾರೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ರಾಜ್ಯಗಳು ದೇಶದಲ್ಲಿ ಕೆಲವೇ ಕೆಲವು ಇವೆ. ಈ ಸಂಖ್ಯೆಯ ಭಕ್ತರು ಸಹ ಒಂದು ಕೊಡುಗೆಯಾಗಿದೆ, ಇಷ್ಟು ದೊಡ್ಡ ಸಂಖ್ಯೆಯನ್ನು ನಿರ್ವಹಿಸುವುದು ಸಹ ಕಠಿಣ ಕಾರ್ಯವಾಗಿದೆ. ಡಬಲ್ ಇಂಜಿನ್ ಸರ್ಕಾರವು ಈ ಕಠಿಣ ಕೆಲಸವನ್ನು ಸುಲಭಗೊಳಿಸಲು ದುಪ್ಪಟ್ಟು ವೇಗದಲ್ಲಿ ಮತ್ತು 2 ಪಟ್ಟು ಶಕ್ತಿಯೊಂದಿಗೆ ಕೆಲಸ ಮಾಡುತ್ತಿದೆ.
ಬಿಜೆಪಿ ಸರಕಾರ ಅಭಿವೃದ್ಧಿಯ ನವರತ್ನಗಳಿಗೆ ವಿಶೇಷ ಒತ್ತು ನೀಡುತ್ತಿದೆ. ಮೊದಲನೆಯದು 1,300 ಕೋಟಿ ರೂ. ಅಂದಾಜು ವೆಚ್ಚದ ಕೇದಾರನಾಥ-ಬದರಿನಾಥ ಧಾಮದ ಪುನರ್ ರ್ನಿರ್ಮಾಣ, ಎರಡನೆಯದು, 2,500 ಕೋಟಿ ರೂ. ವೆಚ್ಚದ ಗೌರಿಕುಂಡ್-ಕೇದಾರನಾಥ ಮತ್ತು ಗೋವಿಂದಘಾಟ್-ಹೇಮಕುಂಟ್ ಸಾಹಿಬ್‌ನ ರೋಪ್‌ವೇ ಕಾಮಗಾರಿ. ಮೂರನೆಯದು, ಕುಮಾನ್‌ನ ಪೌರಾಣಿಕ ದೇವಾಲಯಗಳನ್ನು ಭವ್ಯವಾಗಿಸಲು ಮಾನಸಖಂಡ ಮಂದಿರ ಮಾಲಾ ಮಿಷನ್. ನಾಲ್ಕನೆಯದು, ಇಡೀ ರಾಜ್ಯದಲ್ಲಿ ಹೋಮ್ ಸ್ಟೇಗಳ ಪ್ರಚಾರ. ರಾಜ್ಯದಲ್ಲಿ 4,000ಕ್ಕೂ ಹೆಚ್ಚು ಹೋಂ ಸ್ಟೇಗಳು ನೋಂದಣಿಯಾಗಿವೆ ಎಂದು ಹೇಳಿದ್ದೇನೆ. ಐದನೆಯದು 16 ಪರಿಸರ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ಆರನೆಯದು, ಉತ್ತರಾಖಂಡದಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆ. ಉಧಮ್ ಸಿಂಗ್ ನಗರದಲ್ಲಿ ಏಮ್ಸ್‌ನ ಉಪಗ್ರಹ ಕೇಂದ್ರ ನಿರ್ಮಿಸಲಾಗುತ್ತಿದೆ. ಏಳನೆಯದು ಸುಮಾರು 2,000 ಕೋಟಿ ರೂ. ವೆಚ್ಚದ ತೆಹ್ರಿ ಲೇಕ್ ಅಭಿವೃದ್ಧಿ ಯೋಜನೆಯಾಗಿದೆ, ಎಂಟನೆಯದು ಸಾಹಸ ಪ್ರವಾಸೋದ್ಯಮ ಮತ್ತು ಯೋಗದ ರಾಜಧಾನಿಯಾಗಿ ಋಷಿಕೇಶ-ಹರಿದ್ವಾರದ ಅಭಿವೃದ್ಧಿ ಮತ್ತು ಒಂಬತ್ತನೆಯದು ತನಕ್‌ಪುರ-ಬಾಗೇಶ್ವರ್ ರೈಲು ಮಾರ್ಗವಾಗಿದೆ. ಈ ರೈಲು ಮಾರ್ಗದ ಕಾಮಗಾರಿಯೂ ಶೀಘ್ರದಲ್ಲೇ ಆರಂಭವಾಗಲಿದೆ. ಈ ನವರತ್ನಗಳ ಮಾಲೆಯನ್ನು ಕಟ್ಟಲು ಧಾಮಿ ಜಿ ಅವರ ಸರ್ಕಾರವು ಇಲ್ಲಿನ ಮೂಲಸೌಕರ್ಯ ಯೋಜನೆಗಳಿಗೆ ಹೊಸ ಉತ್ತೇಜನ ನೀಡಿದೆ. 12,000 ಕೋಟಿ ರೂ. ವೆಚ್ಚದ ಚಾರ್ ಧಾಮ್ ಮೆಗಾ ಯೋಜನೆಯ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ, ಡೆಹ್ರಾಡೂನ್ ಮತ್ತು ದೆಹಲಿ ನಡುವಿನ ಪ್ರಯಾಣ ಸುಲಭವಾಗುತ್ತದೆ. ಉತ್ತರಾಖಂಡದಲ್ಲಿ ರಸ್ತೆ ಸಂಪರ್ಕದ ಜತೆಗೆ ರೋಪ್‌ವೇ ಸಂಪರ್ಕವನ್ನು ಸಹ ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪರ್ವತ ಮಾಲಾ ಯೋಜನೆಯು ಮುಂದಿನ ದಿನಗಳಲ್ಲಿ ಉತ್ತರಾಖಂಡದ ಭವಿಷ್ಯವನ್ನೇ ಬದಲಾಯಿಸಲಿದೆ. ಇದಕ್ಕಾಗಿ ನಮ್ಮ ಸರ್ಕಾರವು ಉತ್ತರಾಖಂಡದ ಜನರ ಈ ಸಂಪರ್ಕಕ್ಕಾಗಿ ಅನೇಕ ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸುತ್ತಿದೆ.
ಋಷಿಕೇಶ-ಕರ್ಣಪ್ರಯಾಗ ರೈಲು ಯೋಜನೆ 2-3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆಗೆ 16,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಋಷಿಕೇಶ ಕರ್ಣಪ್ರಯಾಗ್ ರೈಲು ಯೋಜನೆ ಪೂರ್ಣಗೊಂಡ ನಂತರ, ಉತ್ತರಾಖಂಡದ ಹೆಚ್ಚಿನ ಭಾಗವು ರಾಜ್ಯದ ಜನರಿಗೆ ಮತ್ತು ಪ್ರವಾಸಿಗರಿಗೆ ಪ್ರವೇಶ ಸಿಗಲಿದೆ. ಇದರಿಂದಾಗಿ ಇಲ್ಲಿ ಹೂಡಿಕೆ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ದೇವಭೂಮಿಯ ಅಭಿವೃದ್ಧಿಯ ಈ ಮಹಾ ಅಭಿಯಾನದ ಮಧ್ಯೆ, ಈ ವಂದೇ ಭಾರತ್ ರೈಲು ಉತ್ತರಾಖಂಡದ ಜನರಿಗೆ ಉತ್ತಮ ಕೊಡುಗೆಯಾಗಿದೆ.
ಸ್ನೇಹಿತರೆ,
ಇಂದು ಉತ್ತರಾಖಂಡ ರಾಜ್ಯ ಸರ್ಕಾರದ ಪ್ರಯತ್ನದಿಂದ ಪ್ರವಾಸೋದ್ಯಮ ಕೇಂದ್ರವಾಗಿ, ಸಾಹಸ ಪ್ರವಾಸೋದ್ಯಮ ಕೇಂದ್ರವಾಗಿ, ಚಲನಚಿತ್ರ ಶೂಟಿಂಗ್ ತಾಣವಾಗಿ ಮತ್ತು ವಿವಾಹದ ತಾಣವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಇಂದು ಉತ್ತರಾಖಂಡದ ಹೊಸ ಸ್ಥಳಗಳು ಮತ್ತು ಪ್ರವಾಸಿ ಕೇಂದ್ರಗಳು ಭಾರತ ಮತ್ತು ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಂದೇ ಭಾರತ್ ರೈಲಿನಿಂದ ಅವರಿಗೆ ಸಾಕಷ್ಟು ಸಹಾಯವೂ ಸಿಗಲಿದೆ. ಈಗ ದೇಶದ ಮೂಲೆ ಮೂಲೆಗಳಲ್ಲಿ ವಂದೇ ಭಾರತ್ ರೈಲುಗಳು ಓಡಲಾರಂಭಿಸಿವೆ. ಕುಟುಂಬದೊಂದಿಗೆ ದೂರದ ಪ್ರಯಾಣ ಮಾಡಲು ಬಯಸುವ ಜನರ ಮೊದಲ ಆಯ್ಕೆ ರೈಲುಗಳು. ಇಂತಹ ಪರಿಸ್ಥಿತಿಯಲ್ಲಿ ವಂದೇ ಭಾರತ್ ಈಗ ಭಾರತದ ಸಾಮಾನ್ಯ ಕುಟುಂಬಗಳ ಮೊದಲ ಆಯ್ಕೆಯಾಗುತ್ತಿದೆ.
ಸಹೋದರ ಸಹೋದರಿಯರೇ,
21ನೇ ಶತಮಾನದ ಭಾರತವು ತನ್ನ ಮೂಲಸೌಕರ್ಯವನ್ನು ಆಧುನೀಕರಿಸುವ ಮೂಲಕ ಹೆಚ್ಚು ವೇಗವಾಗಿ ಅಭಿವೃದ್ಧಿ ಹೊಂದಬಹುದು. ಹಿಂದೆ, ದೀರ್ಘಕಾಲ ಅಧಿಕಾರದಲ್ಲಿದ್ದ ಪಕ್ಷಗಳು ದೇಶದ ಈ ಅಗತ್ಯವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆ ಪಕ್ಷಗಳ ಗಮನವು ಹಗರಣಗಳು ಮತ್ತು ಭ್ರಷ್ಟಾಚಾರಗಳ ಮೇಲಿತ್ತು. ಅವರು ಸ್ವಜನ ಪಕ್ಷಪಾತಕ್ಕೆ ಸೀಮಿತರಾಗಿದ್ದರು. ಸ್ವಜನ ಪಕ್ಷಪಾತದಿಂದ ಹೊರಬರುವ ಶಕ್ತಿ ಅವರಿಗಿರಲಿಲ್ಲ. ಹಿಂದಿನ ಸರ್ಕಾರಗಳು ಭಾರತದಲ್ಲಿ ಹೈಸ್ಪೀಡ್ ರೈಲುಗಳ ಬಗ್ಗೆ ಹೇಳಿಕೆಗಳನ್ನು ನೀಡಿ ಹಲವು ವರ್ಷಗಳು ಕಳೆದಿವೆ. ಹೆಚ್ಚಿನ ವೇಗದ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸುವುದಿರಲಿ, ಅವರು ರೈಲು ಜಾಲದಿಂದ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲು ಸಹ ಸಾಧ್ಯವಾಗಲಿಲ್ಲ. ರೈಲ್ವೆ ವಿದ್ಯುದ್ದೀಕರಣದ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. 2014ರ ಹೊತ್ತಿಗೆ, ದೇಶದ ಮೂರನೇ ಒಂದು ಭಾಗದಷ್ಟು ರೈಲು ಜಾಲವನ್ನು ಮಾತ್ರ ವಿದ್ಯುದ್ದೀಕರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ವೇಗದ ರೈಲು ಓಡಿಸುವ ಬಗ್ಗೆ ಯೋಚಿಸುವುದು ಅಸಾಧ್ಯವಾಗಿತ್ತು. 2014ರ ನಂತರ ರೈಲ್ವೆಯನ್ನು ಮಾರ್ಪಾಡು ಮಾಡಲು ಸರ್ವತೋಮುಖ ಕೆಲಸ ಆರಂಭಿಸಿದೆವು. ಒಂದೆಡೆ ದೇಶದ ಮೊದಲ ಹೈಸ್ಪೀಡ್ ರೈಲಿನ ಕನಸನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿದೆವು, ಮತ್ತೊಂದೆಡೆ ಇಡೀ ದೇಶವನ್ನು ಸೆಮಿ ಹೈಸ್ಪೀಡ್ ರೈಲುಗಳಿಗಾಗಿ ಸಿದ್ಧಪಡಿಸಲು ಆರಂಭಿಸಿದೆವು. 2014ಕ್ಕಿಂತ ಮೊದಲು ಪ್ರತಿ ವರ್ಷ ಸರಾಸರಿ 600 ಕಿಮೀ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಂಡಿದ್ದರೆ, ಈಗ ಪ್ರತಿ ವರ್ಷ 6,000 ಕಿಲೋಮೀಟರ್ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಳ್ಳುತ್ತಿವೆ. 600 ಕಿಮೀ ಮತ್ತು 6,000 ಕಿಮೀ ನಡುವಿನ ವ್ಯತ್ಯಾಸವನ್ನು ನೋಡಿ. ಇದರಿಂದಾಗಿ ದೇಶದ ಶೇ.90ಕ್ಕೂ ಹೆಚ್ಚು ರೈಲ್ವೆ ಜಾಲ ವಿದ್ಯುದೀಕರಣಗೊಂಡಿದೆ. ಉತ್ತರಾಖಂಡದಲ್ಲಿ, ಇಡೀ ರೈಲು ಜಾಲದ ಶೇಕಡ 100ರಷ್ಟು ವಿದ್ಯುದ್ದೀಕರಣ ಸಾಧಿಸಲಾಗಿದೆ.
ಸಹೋದರ ಸಹೋದರಿಯರೇ,
ಇಂದು ಅಭಿವೃದ್ಧಿ, ನೀತಿ ಮತ್ತು ನಂಬಿಕೆಗೆ ಸರಿಯಾದ ಉದ್ದೇಶ ಇರುವುದರಿಂದ ಇದು ಸಾಧ್ಯವಾಗಿದೆ. 2014ಕ್ಕೆ ಹೋಲಿಸಿದರೆ ರೈಲ್ವೆ ಬಜೆಟ್ ಹೆಚ್ಚಳವು ಉತ್ತರಾಖಂಡಕ್ಕೂ ನೇರವಾಗಿ ಪ್ರಯೋಜನ ನೀಡಿದೆ. 2014ರ ಹಿಂದಿನ 5 ವರ್ಷಗಳಲ್ಲಿ ಉತ್ತರಾಖಂಡಕ್ಕೆ ಸರಾಸರಿ 200 ಕೋಟಿ ರೂ.ಗಿಂತ ಕಡಿಮೆ ಅನುದಾನ ಮೀಸಲಿಡಲಾಗಿತ್ತು. ಇದೀಗ ಅಶ್ವಿನಿ ಜೀ ಅದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಇಷ್ಟು ದೂರದ ಗುಡ್ಡಗಾಡು ಪ್ರದೇಶಕ್ಕೆ 200 ಕೋಟಿ ರೂಪಾಯಿ ಕಡಿಮೆ! ಉತ್ತರಾಖಂಡದ ರೈಲ್ವೇ ಬಜೆಟ್ ಈ ವರ್ಷ 5,000 ಕೋಟಿ ರೂಪಾಯಿ. ಅಂದರೆ 25 ಪಟ್ಟು ಹೆಚ್ಚಳವಾಗಿದೆ. ಈ ಕಾರಣಕ್ಕಾಗಿಯೇ ಇಂದು ಉತ್ತರಾಖಂಡದ ಹೊಸ ಪ್ರದೇಶಗಳಿಗೆ ರೈಲ್ವೆ ವಿಸ್ತರಣೆಯಾಗುತ್ತಿದೆ. ಉತ್ತರಾಖಂಡದಲ್ಲಿ ರೈಲ್ವೆ ಮಾತ್ರವಲ್ಲ, ಆಧುನಿಕ ಹೆದ್ದಾರಿಗಳೂ ಅಭೂತಪೂರ್ವವಾಗಿ ವಿಸ್ತರಿಸುತ್ತಿವೆ. ಉತ್ತರಾಖಂಡದಂತಹ ಗುಡ್ಡಗಾಡು ರಾಜ್ಯಕ್ಕೆ ಈ ಸಂಪರ್ಕವು ಎಷ್ಟು ಮುಖ್ಯ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಸಂಪರ್ಕದ ಕೊರತೆಯಿಂದ ಹಿಂದೆ ಹಳ್ಳಿಗಳು ಹೇಗೆ ನಿರ್ಜನವಾಗಿದ್ದವು ಎಂಬ ನೋವು ನಮಗೆ ಅರ್ಥವಾಗುತ್ತದೆ. ಮುಂದಿನ ಪೀಳಿಗೆಯನ್ನು ಆ ಸಂಕಟದಿಂದ ಪಾರು ಮಾಡಲು ನಾವು ಬಯಸುತ್ತೇವೆ. ಪ್ರವಾಸೋದ್ಯಮ, ಕೃಷಿ ಮತ್ತು ಕೈಗಾರಿಕೆಗಳ ಮೂಲಕ ಉತ್ತರಾಖಂಡದಲ್ಲಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಇಂದು ಶ್ರಮಿಸುತ್ತಿದ್ದೇವೆ. ಈ ಆಧುನಿಕ ಸಂಪರ್ಕವು ನಮ್ಮ ಗಡಿಗಳನ್ನು ಸುಲಭವಾಗಿ ಪ್ರವೇಶಿಸಲು ಮತ್ತು ರಾಷ್ಟ್ರದ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಸೈನಿಕರಿಗೆ ಅನುಕೂಲವಾಗಲು ತುಂಬಾ ಉಪಯುಕ್ತವಾಗಿದೆ.
ಸಹೋದರ ಸಹೋದರಿಯರೇ,
ನಮ್ಮ ಡಬಲ್ ಇಂಜಿನ್ ಸರ್ಕಾರ ಉತ್ತರಾಖಂಡದ ಅಭಿವೃದ್ಧಿಗೆ ಬದ್ಧವಾಗಿದೆ. ಉತ್ತರಾಖಂಡದ ಕ್ಷಿಪ್ರ ಅಭಿವೃದ್ಧಿಯು ಭಾರತದ ತ್ವರಿತ ಅಭಿವೃದ್ಧಿಗೂ ಸಹಾಯ ಮಾಡುತ್ತದೆ. ಇಡೀ ದೇಶವು ವಂದೇ ಭಾರತದ ವೇಗದಲ್ಲಿ ಮುನ್ನಡೆಯುತ್ತಿದೆ ಮತ್ತು ಮುಂದುವರಿಯುತ್ತಿದೆ. ಮತ್ತೊಮ್ಮೆ, ಉತ್ತರಾಖಂಡದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಜನರು ಬಾಬಾ ಕೇದಾರ್, ಬದ್ರಿ ವಿಶಾಲ್, ಯಮುನೋತ್ರಿ ಮತ್ತು ಗಂಗೋತ್ರಿಗೆ ಭೇಟಿ ನೀಡುತ್ತಿದ್ದಾರೆ. ಅದೇ ಸಮಯದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಅವರಿಗೂ ಬಹಳ ಆಹ್ಲಾದಕರ ಅನುಭವವಾಗಲಿದೆ. ನಾನು ಮತ್ತೊಮ್ಮೆ ಬಾಬಾ ಕೇದಾರರ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ದೇವಭೂಮಿಗೆ ನಮಸ್ಕರಿಸುತ್ತೇನೆ. ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ, ಧನ್ಯವಾದ!