Quote“ಇಂದು ಭಾರತದ ಸಂಸತ್ತಿನ 75 ವರ್ಷದ ಪಯಣವನ್ನು ಮತ್ತೆ ನೆನಪು ಮಾಡಿಕೊಳ್ಳುವ ಮತ್ತು ಸ್ಮರಿಸುವ ದಿನವಾಗಿದೆ’’
Quote“ನಾವು ಸಂಸತ್ತಿನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ, ಆದರೆ ಈ ಕಟ್ಟಡ ಭಾರತದ ಪ್ರಜಾಪ್ರಭುತ್ವದ ಪಯಣದ ಸುವರ್ಣ ಅಧ್ಯಾಯವಾಗಿದ್ದು, ಅದು ಮುಂದಿನ ಪೀಳಿಗೆಗೆ ಸದಾ ಸ್ಪೂರ್ತಿಯ ಕಟ್ಟಡವಾಗಿ ಮುಂದುವರಿಯಲಿದೆ’’
Quote“ಅಮೃತ ಕಾಲದ ಮೊದಲ ಬೆಳಕಿನಲ್ಲಿ ನವೀಕೃತ ವಿಶ್ವಾಸ, ಸಾಧನೆ ಮತ್ತು ಸಾಮರ್ಥ್ಯಗಳನ್ನು ತುಂಬಲಾಗಿದೆ’’
Quote“ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕಾ ಒಕ್ಕೂಟದ ಸೇರ್ಪಡೆ ಸದಾ ಹೆಮ್ಮೆ ಮೂಡಿಸುತ್ತದೆ’’
Quote“ಜಿ-20ರ ವೇಳೆ ಭಾರತ ‘ವಿಶ್ವದ ಮಿತ್ರ’ ನಾಗಿ ಹೊರಹೊಮ್ಮಿದೆ’’
Quote“ಸದನದಲ್ಲಿನ ಎಲ್ಲರನ್ನೂ ಒಳಗೊಳ್ಳುವ ವಾತಾವರಣ ದೇಶದ ಪೂರ್ಣ ಶಕ್ತಿಯೊಂದಿಗೆ ಜನರ ಆಶೋತ್ತರಗಳನ್ನು ವ್ಯಕ್ತಪಡಿಸುತ್ತಿದೆ’’
Quote“75 ವರ್ಷಗಳಲ್ಲಿ ತಮ್ಮ ಸಂಸತ್ತಿನಲ್ಲಿ ಸಾಮಾನ್ಯ ನಾಗರಿಕರಿಗೆ ನಿರಂತರವಾಗಿ ಬೆಳೆಯುತ್ತಿರುವ ನಂಬಿಕೆಯೇ ದೊಡ್ಡ ಸಾಧನವಾಗಿದೆ’’
Quote“ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ ಭಾರತ ಆತ್ಮದ ಮೇಲಿನ ದಾಳಿಯಾಗಿದೆ’’
Quote“ಭಾರತೀಯ ಪ್ರಜಾಪ್ರಭುತ್ವದ ಎಲ್ಲ ಏಳು ಬೀಳುಗಳನ್ನು ಕಂಡ ಈ ಸದನವು ಸಾರ್ವಜನಿಕ ನಂಬಿಕೆಯ ಕೇಂದ್ರಬಿಂದುವಾಗಿದೆ’’

 

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

ನಮ್ಮ ದೇಶದ 75 ವರ್ಷಗಳ ಸಂಸದೀಯ ಪಯಣ ಮತ್ತು ಈ ಹಿನ್ನೆಲೆಯಲ್ಲಿ ಹೊಸ ಸದನವನ್ನು ಪ್ರವೇಶಿಸುವ ಮೊದಲು ಮತ್ತೊಮ್ಮೆ ಆ ಸ್ಪೂರ್ತಿದಾಯಕ ಕ್ಷಣಗಳನ್ನು ನೆನಪಿಸಿಕೊಳ್ಳಲು, ನಾವು ಒಟ್ಟಾಗಿ, ಈ ಐತಿಹಾಸಿಕ ಕಟ್ಟಡಕ್ಕೆ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯದ ಮೊದಲು, ಈ ಸದನವನ್ನು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ ಇದನ್ನು ಸಂಸತ್ ಭವನ ಎಂದು ಕರೆಯಲಾಯಿತು. ಈ ಕಟ್ಟಡವನ್ನು ಕಟ್ಟುವ ನಿರ್ಧಾರವನ್ನು ವಿದೇಶಿ ಸಂಸದರು ಮಾಡಿರುವುದು ನಿಜ, ಆದರೆ ಈ ಕಟ್ಟಡದ ನಿರ್ಮಾಣಕ್ಕೆ ನನ್ನ ಸಹವರ್ತಿಗಳ ಬೆವರು ಸುರಿಸಲ್ಪಟ್ಟಿದೆ ಎಂದು ಹೆಮ್ಮೆಯಿಂದ ಹೇಳಲು ನಾವು ಎಂದಿಗೂ ಹಿಂಜರಿಯಲು ಸಾಧ್ಯವಿಲ್ಲ, ಇದರಲ್ಲಿ ನನ್ನ ಸಹೋದ್ಯೋಗಿಗಳ ಶ್ರಮವಿದೆ ಮತ್ತು ಹಣವನ್ನು ಕೂಡಾ ನನ್ನ ದೇಶದ ಜನರು ನೀಡಿದ್ದಾರೆ. 

ನಮ್ಮ 75 ವರ್ಷಗಳ ಪ್ರಯಾಣವು ಹಲವಾರು ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಪ್ರಕ್ರಿಯೆಗಳನ್ನು ಅದ್ಭುತವಾಗಿ ರಚಿಸಿ ರೂಪಿಸಿದೆ. ಈ ಸದನದ ಭಾಗವಾಗಿರುವಾಗ, ಪ್ರತಿಯೊಬ್ಬರೂ ಇದಕ್ಕೆ ಸಕ್ರಿಯವಾಗಿ ಕೊಡುಗೆ ನೀಡಿದ್ದಾರೆ ಮತ್ತು ಪೂಜ್ಯ ಭಾವದಿಂದ ವೀಕ್ಷಿಸಿದ್ದಾರೆ. ನಾವು ಹೊಸ ಕಟ್ಟಡಕ್ಕೆ ಹೋದರೂ ಕೂಡ, ಹಳೆಯ ಈ ಸದನವು ಭವಿಷ್ಯದ ಪೀಳಿಗೆಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ. ಈ ಕಟ್ಟಡವು ಭಾರತದ ಪ್ರಜಾಸತ್ತಾತ್ಮಕ ಪಯಣದಲ್ಲಿ ಒಂದು ಸುವರ್ಣ ಅಧ್ಯಾಯವಾಗಿದೆ ಮತ್ತು ಇದು ಭಾರತದ ಪ್ರಜೆಗಳ ರಕ್ತನಾಳಗಳಲ್ಲಿ ಹರಿಯುವ ಪ್ರಜಾಪ್ರಭುತ್ವದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ. 

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

‘ಅಮೃತ ಕಾಲ’ (ಸುವರ್ಣ ಯುಗ)ದ ಮೊದಲ ಕಿರಣಗಳು ರಾಷ್ಟ್ರವನ್ನು ಹೊಸ ನಂಬಿಕೆ, ತಾಜಾ ಆತ್ಮ ವಿಶ್ವಾಸ, ಹೊಸ ಉತ್ಸಾಹ, ಹೊಸ ಕನಸುಗಳು, ಹೊಸ ನಿರ್ಣಯಗಳು ಮತ್ತು ರಾಷ್ಟ್ರದ ನವೀಕೃತ ಶಕ್ತಿಯೊಂದಿಗೆ ಬೆಳಗುತ್ತಿವೆ. ಭಾರತೀಯರ ಸಾಧನೆಗಳನ್ನು ಎಲ್ಲೆಡೆ ಮತ್ತು ಹೆಮ್ಮೆಯ ಭಾವದಿಂದ ಚರ್ಚಿಸಲಾಗುತ್ತಿದೆ. ಇದು ನಮ್ಮ 75 ವರ್ಷಗಳ ಸಂಸದೀಯ ಇತಿಹಾಸದಲ್ಲಿ ಸಾಮೂಹಿಕ ಪ್ರಯತ್ನದ ಫಲ. ಇದರ ಪರಿಣಾಮವಾಗಿ ಇಂದು ನಮ್ಮ ಸಾಧನೆಗಳ ಪ್ರತಿಧ್ವನಿ ವಿಶ್ವಾದ್ಯಂತ ಕೇಳಿಬರುತ್ತಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

ಚಂದ್ರಯಾನ-3 ರ ಯಶಸ್ಸು ಇಡೀ ಭಾರತವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನು ರೋಮಾಂಚನಗೊಳಿಸಿದೆ. ಇದು ಭಾರತದ ಸಾಮರ್ಥ್ಯಗಳ ಹೊಸ ಮುಖವನ್ನು ಪ್ರತಿನಿಧಿಸುತ್ತದೆ. ಇದು ಆಧುನಿಕತೆ, ವಿಜ್ಞಾನ, ತಂತ್ರಜ್ಞಾನ, ನಮ್ಮ ವಿಜ್ಞಾನಿಗಳ ಸಾಧನೆ ಮತ್ತು 1.4 ಶತಕೋಟಿ ನಾಗರಿಕರ ನಿರ್ಣಯದ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಇದು ರಾಷ್ಟ್ರ ಮತ್ತು ಪ್ರಪಂಚದ ಮೇಲೆ ಹೊಸ ಪ್ರಭಾವವನ್ನು ಸೃಷ್ಟಿಸಲು ಸಜ್ಜಾಗಿದೆ. ಈ ಸದನ, ಸಭೆಯ ಮೂಲಕ ನಾನು ಮತ್ತೊಮ್ಮೆ ದೇಶದ ವಿಜ್ಞಾನಿಗಳಿಗೆ ಮತ್ತು ಅವರ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಹಿಂದೆ, ನ್ಯಾಮ್ ಶೃಂಗಸಭೆ ನಡೆದಾಗ, ಈ ಸದನವು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು ಮತ್ತು ದೇಶವು ಈ ಪ್ರಯತ್ನವನ್ನು ಮೆಚ್ಚಿದೆ. ಇಂದು ನೀವು ಜಿ20 ನ ಯಶಸ್ಸನ್ನು ಸರ್ವಾನುಮತದಿಂದ ಪ್ರಶಂಸಿಸಿದ್ದೀರಿ. ನೀವು ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದೀರಿ ಎಂದು ನಾನು ನಂಬುತ್ತೇನೆ ಮತ್ತು ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜಿ20 ನ ಯಶಸ್ಸು ಎಂದರೆ ಅದು ಭಾರತದ 1.4 ಶತಕೋಟಿ ನಾಗರಿಕರ ಯಶಸ್ಸು. ಇದು ಭಾರತದ ಯಶಸ್ಸು, ಯಾವುದೇ ವ್ಯಕ್ತಿ ಅಥವಾ ಪಕ್ಷದ ಯಶಸ್ಸಲ್ಲ. ಭಾರತದ ಫೆಡರಲ್ ರಚನೆ, ಅದರ ವೈವಿಧ್ಯತೆ ಮತ್ತು 60 ಕ್ಕೂ ಹೆಚ್ಚು ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಶೃಂಗಸಭೆಗಳನ್ನು ಆಯೋಜಿಸಲಾಗಿದೆ, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಪರಿಮಳ, ಸುಹಾಸನೆ, ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ದೇಶದ ವಿವಿಧ ಸರ್ಕಾರಗಳು ಭವ್ಯವಾಗಿ ಮಾಡಿವೆ. ಇದರ ಪ್ರಭಾವವು ಜಾಗತಿಕ ವೇದಿಕೆಯ ಮೇಲೆ ಕಂಡುಬಂದಿದೆ. ಇದು ನಾವೆಲ್ಲರೂ ಸಂಭ್ರಮಿಸಬೇಕಾದ ವಿಚಾರ. ಇದು ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸುತ್ತದೆ. ನೀವು ಹೇಳಿದಂತೆ, ಆಫ್ರಿಕನ್ ಯೂನಿಯನ್ ಜಿ20 ಸದಸ್ಯರಾದಾಗ, ಅದು ಭಾರತ ಜಿ20 ಅಧ್ಯಕ್ಷರಾಗಿರುವಾಗ ಆಯಿತು ಎಂದು ಹೆಮ್ಮೆಪಡುತ್ತಾರೆ. ಆಫ್ರಿಕನ್ ಯೂನಿಯನ್ ಸದಸ್ಯತ್ವದ ಘೋಷಣೆಯಾದಾಗ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷರಿಗೆ ಅದು ತಮ್ಮ ಜೀವನದ ಪ್ರಮುಖ ಕ್ಷಣಗಳಾಗಿರುವುದರಿಂದ, ಭಾವುಕರಾಗಿ ಭಾರತವನ್ನು ಪ್ರಶಂಸಿಸಿ ಮಾತನಾಡುವಾಗ, ಮತ್ತು ಆ ಭಾವನಾತ್ಮಕ ಕ್ಷಣವನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ. ಭಾರತವು ಅಂತಹ ದೊಡ್ಡ ಭರವಸೆಗಳನ್ನು ಮತ್ತು ನಿರೀಕ್ಷೆಗಳನ್ನು ಪೂರೈಸುವ ಅದೃಷ್ಟವನ್ನು ಪೂರೈಸಿದೆ, ಇದನ್ನೂ ಕೂಡಾ ನೀವು ಊಹಿಸಬಹುದು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

ಭಾರತವನ್ನು ಸಂದೇಹಿಸುವುದು ಅನೇಕ ಜನರ ಲಕ್ಷಣವಾಗಿದೆ, ಮತ್ತು ಸದಾ ಸಂದೇಹದಲ್ಲಿ ನೋಡುವುದು ಸ್ವಾತಂತ್ರ್ಯಗಳಿಸಿದ ಸಮಯದಿಂದಲೂ ಮುಂದುವರೆದಿದೆ. ಈ ಬಾರಿಯೂ ಹಾಗೆಯೇ ಆಗಿತ್ತು. ಯಾವುದೇ ಘೋಷಣೆ ಇಲ್ಲದಿರಬಹುದು; ಹಾಗೂ ಇದು ಅಸಂಭವವೆಂದು ಕೆಲವೊಮ್ಮೆ ತೋರಿರಬಹುದು. ಹಾಗಿದ್ದರೂ ಕೂಡಾ, ಜಗತ್ತು ಜಂಟಿ ಸಂವಹನಕ್ಕೆ ಒಪ್ಪಿಗೆ ನೀಡಿದೆ ಮತ್ತು ಅದನ್ನು ಮಾರ್ಗಸೂಚಿಯಾಗಿ ಮುನ್ನಡೆಸುವುದರೊಂದಿಗೆ ಜಿ20ಯ ಐತಿಹಾಸಿಕ ನಿಲುವು ಸಂಭವಿಸಿದೆ. ಇದು ಭಾರತದ ನಿಜವಾದ ಶಕ್ತಿಯಾಗಿದೆ.  

ಮತ್ತು, ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

ಭಾರತದ ಅಧ್ಯಕ್ಷತೆಯು ನವೆಂಬರ್ 2023 ಅಂತ್ಯದವರೆಗೆ ಮುಂದುವರಿಯುವುದರಿಂದ, ಈಗಿರುವ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಪ್ರಪಂಚದಾದ್ಯಂತದ ಪಿ-20(ಸಂಸತ್ತಿನ-20) ಭಾಷಣಕಾರರ ಸಮಾನವಾದ ನಿಮ್ಮ ಅಧ್ಯಕ್ಷತೆಯ ಶೃಂಗಸಭೆಗೆ ಮತ್ತು  ನಿಮ್ಮ ಘೋಷಣೆಗೆ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ಸಹಕಾರ ಹೊಂದಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು ಭಾರತವು ‘ವಿಶ್ವಾಮಿತ್ರ’ (ಜಾಗತಿಕ ಸ್ನೇಹಿತ) ಆಗಿ ತನ್ನ ಸ್ಥಾನವನ್ನು ಕಂಡುಕೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇಡೀ ಜಗತ್ತು ಭಾರತದೊಂದಿಗೆ ಸ್ನೇಹವನ್ನು ಬಯಸುತ್ತಿದೆ ಮತ್ತು ಜಗತ್ತು ಭಾರತದ ಸ್ನೇಹವನ್ನು ಅನುಭವಿಸುತ್ತಿದೆ. ಇದಕ್ಕೆ ಮೂಲ ಕಾರಣ ನಮ್ಮ ಸಂಸ್ಕೃತಿ, ವೇದಗಳಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ ನಾವು ಗಳಿಸಿದ ಜ್ಞಾನ ಮತ್ತು "ಸಬ್ಕಾ ಸಾಥ್, ಸಬ್ಕಾ ವಿಕಾಸ್" ಎಂಬ ಸರಕಾರದ  ಮಂತ್ರವು ಇಂದು ನಮ್ಮನ್ನು ವಿಶ್ವದೊಂದಿಗೆ ಬೆಸೆಯುತ್ತಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ಸದನದಿಂದ ವಿದಾಯ ತೆಗೆದುಕೊಳ್ಳುವುದು ನಿಜಕ್ಕೂ ಭಾವನಾತ್ಮಕ ಕ್ಷಣ. ಒಂದು ಕುಟುಂಬವು ಹಳೆಯ ಮನೆಯನ್ನು ತೊರೆದು ಹೊಸದಕ್ಕೆ ಹೋದಾಗ, ಅದು ಹಲವಾರು ನೆನಪುಗಳನ್ನು ಎದುರಿಸುತ್ತದೆ, ಅದೇ ರೀತಿ, ನಾವು ಈ ಸದನಕ್ಕೆ ವಿದಾಯ ಹೇಳುವಾಗ ನಮ್ಮ ಮನಸ್ಸು ಮತ್ತು ಹೃದಯಗಳು ಸಹ ಅನೇಕ ನೆನಪುಗಳಿಂದ ತುಂಬಿರುತ್ತವೆ. ನಾವು ಈ ಸದನದ ಗೋಡೆಗಳಲ್ಲಿ ಸಿಹಿ ಮತ್ತು ಕಹಿ ಅನುಭವಗಳನ್ನು, ಜಗಳ, ಘರ್ಷಣೆಗಳು ಮತ್ತು ಆಚರಣೆಗಳನ್ನು ಹೊಂದಿದ್ದೇವೆ.

ಈ ನೆನಪುಗಳನ್ನು ನಾವೆಲ್ಲರೂ ಹಂಚಿಕೊಂಡಿದ್ದೇವೆ, ಇವುಗಳು ನಮ್ಮ ಸಾಮಾನ್ಯ ಪರಂಪರೆಯಾಗಿದೆ ಮತ್ತು ಆದ್ದರಿಂದ ಅವರ ಬಗ್ಗೆ ನಮ್ಮ ಹೆಮ್ಮೆಯನ್ನು ಹಂಚಿಕೊಳ್ಳಲಾಗುತ್ತದೆ. ಕಳೆದ 75 ವರ್ಷಗಳಿಂದ ಈ ಸದನದೊಳಗೆ ಸ್ವತಂತ್ರ ಭಾರತದ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇಂದು, ನಾವು ಈ ಸದನದಿಂದ ಹೊಸ ಸದನಕ್ಕೆ ಹೋಗುವಾಗ, ಭಾರತದ ಸಾಮಾನ್ಯ ನಾಗರಿಕರ ಅಭಿವ್ಯಕ್ತಿಗೆ ನೀಡಿದ ಗೌರವವನ್ನು ಸಹ ನಾವು ಒಪ್ಪಿಕೊಳ್ಳಬೇಕು.

ಆದ್ದರಿಂದ ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ನಾನು ಮೊದಲ ಬಾರಿಗೆ ಸಂಸತ್ ಸದಸ್ಯನಾದಾಗ ಮತ್ತು ಮೊದಲ ಬಾರಿಗೆ ಸಂಸದನಾಗಿ ಈ ಕಟ್ಟಡವನ್ನು ಪ್ರವೇಶಿಸಿದ ಕ್ಷಣ, ನಾನು ಈ ಪ್ರಜಾಪ್ರಭುತ್ವದ ದೇವಾಲಯದ ಬಾಗಿಲಿಗೆ ಗೌರವದಿಂದ ತಲೆಬಾಗಿ ಈ ಪ್ರಜಾಪ್ರಭುತ್ವದ ಬಗ್ಗೆ ಆಳವಾದ ಗೌರವದಿಂದ ಹೆಜ್ಜೆ ಹಾಕಿದೆ. ಆ ಕ್ಷಣವು ನನಗೆ ಭಾವನೆಗಳಿಂದ ತುಂಬಿತ್ತು, ಮತ್ತು ನಾನು ಅದನ್ನು ಊಹಿಸಲು ಸಾಧ್ಯವಾಗಲಿಲ್ಲ. ಆದರೆ ಭಾರತದ ಪ್ರಜಾಪ್ರಭುತ್ವದ ಶಕ್ತಿಗೆ ಸಾಕ್ಷಿಯಾಗಿದೆ, ಪ್ರಜಾಪ್ರಭುತ್ವಕ್ಕಾಗಿ ಭಾರತದಲ್ಲಿರುವ ಸಾಮಾನ್ಯ ಮಾನವನ ಗೌರವದ ಸಂಕೇತವಾಗಿದೆ, ವಿನಮ್ರ ಕುಟುಂಬದ ಮಗು ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಬೆಳೆದು ಸಂಸತ್ತನ್ನು ತಲುಪಿದೆ. ದೇಶವು ನನ್ನನ್ನು ಇಷ್ಟೊಂದು ಗೌರವಿಸುತ್ತದೆ, ನನ್ನನ್ನು ಇಷ್ಟೊಂದು ಆಶೀರ್ವದಿಸುತ್ತದೆ ಮತ್ತು ನನ್ನನ್ನು ತುಂಬಾ ಪ್ರೀತಿಸುತ್ತದೆ ಎಂದು ನಾನು ಊಹಿಸಿರಲಿಲ್ಲ.   

  ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ನಮ್ಮಲ್ಲಿ ಅನೇಕರು ಸಂಸತ್ತಿನ ಕಟ್ಟಡದ ಒಳಗೆ ಏನು ಬರೆಯಲಾಗಿದೆ ಎಂಬುದನ್ನು ಮೊದಲು ಓದುತ್ತಾರೆ ಮತ್ತು ಕೆಲವೊಮ್ಮೆ ನಾವು ಅದನ್ನು ಭಾಷಣಗಳಲ್ಲಿ ಉಲ್ಲೇಖಿಸುತ್ತೇವೆ. ಇಲ್ಲಿ, ಸಂಸತ್ತಿನ ಕಟ್ಟಡದ ಪ್ರವೇಶದ್ವಾರದಲ್ಲಿ, ಚಾಂಗ್ದೇವ್ ಅವರ ಬೋಧನೆಗಳಿಂದ ಒಂದು ಪದವಿದೆ, ಅದು "ಲೋಕದ್ವಾರಂ", ಅಂದರೆ "ಸಾರ್ವಜನಿಕರಿಗೆ ಬಾಗಿಲು ತೆರೆಯಿರಿ" ಎಂದು ಹೇಳುತ್ತದೆ. ನಾವು ಸಾರ್ವಜನಿಕರಿಗೆ ಬಾಗಿಲು ತೆರೆಯಬೇಕು ಮತ್ತು ಅವರು ತಮ್ಮ ಹಕ್ಕುಗಳನ್ನು ಹೇಗೆ ಪಡೆಯುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಇದನ್ನು ನಮ್ಮ ಋಷಿಮುನಿಗಳು ಬರೆದಿದ್ದಾರೆ ಮತ್ತು ಸಂಸತ್ತಿನ ಪ್ರವೇಶ ದ್ವಾರದಲ್ಲಿ ಕೆತ್ತಲಾಗಿದೆ. ನಾವೆಲ್ಲರೂ ಮತ್ತು ನಮಗಿಂತ ಮೊದಲು ಇಲ್ಲಿ ಇದ್ದವರು ಈ ಸತ್ಯಕ್ಕೆ ಸಾಕ್ಷಿಯಾಗುತ್ತಾರೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಕಾಲ ಬದಲಾದಂತೆ, ನಮ್ಮ ಸಂಸತ್ತಿನ ರಚನೆಯು ನಿರಂತರವಾಗಿ ವಿಕಸನಗೊಂಡಿತು ಮತ್ತು ಹೆಚ್ಚು ಒಳಗೊಳ್ಳುತ್ತಿದೆ. ಈ ಸಂಸತ್ತಿನಲ್ಲಿ, ಸಮಾಜದ ಪ್ರತಿಯೊಂದು ವರ್ಗದ ಪ್ರತಿನಿಧಿಗಳು, ವೈವಿಧ್ಯತೆಗಳಿಂದ ತುಂಬಿದ್ದಾರೆ. ಇಲ್ಲಿ ಅನೇಕ ಭಾಷೆಗಳು, ಉಪಭಾಷೆಗಳು ಮತ್ತು ಪಾಕಶಾಲೆಯ ಸಂಪ್ರದಾಯಗಳಿವೆ. ಸಂಸತ್ತಿನ ಒಳಗೆ, ಎಲ್ಲವೂ ಪ್ರಸ್ತುತವಾಗಿದೆ ಮತ್ತು ಸಮಾಜದ ಎಲ್ಲಾ ಹಂತಗಳ ಜನರು, ಸಾಮಾಜಿಕ ಅಥವಾ ಆರ್ಥಿಕ, ಗ್ರಾಮೀಣ ಅಥವಾ ನಗರ, ಜನಸಾಮಾನ್ಯರ ಆಸೆಗಳನ್ನು ಮತ್ತು ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಅಂತರ್ಗತ ವಾತಾವರಣದಲ್ಲಿ ಕ್ರಮೇಣ ವ್ಯಕ್ತಪಡಿಸಿದ್ದಾರೆ. ದಲಿತ, ತುಳಿತಕ್ಕೊಳಗಾದ, ಬುಡಕಟ್ಟು, ಅಂಚಿನಲ್ಲಿರುವ ಅಥವಾ ಮಹಿಳೆಯರು, ಯಾರೂ ಆಗಿರಲಿ, ಪ್ರತಿಯೊಬ್ಬರ ಕೊಡುಗೆಯು ಕಾಲಾನಂತರದಲ್ಲಿ ಕ್ರಮೇಣ ಹೆಚ್ಚಾಗುತ್ತಾ ಇದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಆರಂಭದಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆಯಿದ್ದರೂ ನಿಧಾನವಾಗಿ ಈ ಸದನದ ಘನತೆಯನ್ನು ಹೆಚ್ಚಿಸುವಲ್ಲಿ ತಾಯಂದಿರು, ಸಹೋದರಿಯರು ಕೂಡ ತಮ್ಮ ಕೊಡುಗೆ ನೀಡಿದ್ದಾರೆ. ಈ ಸದನದ ಘನತೆಯಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಅವರ ಕೊಡುಗೆ ಮಹತ್ವದ ಪಾತ್ರ ವಹಿಸಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಆರಂಭದಿಂದಲೂ ಇಲ್ಲಿಯವರೆಗೆ ಒಟ್ಟು ವರ್ಷಗಳಲ್ಲಿ, ಅಂದಾಜಿನ ಪ್ರಕಾರ ಸುಮಾರು 7,500 ಪ್ರತಿನಿಧಿಗಳು ಎರಡೂ ಸದನಗಳಲ್ಲಿ ಕೊಡುಗೆ ನೀಡಿದ್ದಾರೆ. ಈ ಅವಧಿಯಲ್ಲಿ, ಸುಮಾರು 600 ಮಹಿಳಾ ಸಂಸದರು ಸಂಸತ್ತಿನಲ್ಲಿ ಉಭಯ ಸದನಗಳ ಘನತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದ್ದಾರೆ.

ಮತ್ತು ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ನಮಗೆ ತಿಳಿದಿರುವಂತೆ, ಗೌರವಾನ್ವಿತ ಶ್ರೀ ಇಂದ್ರಜಿತ್ ಗುಪ್ತಾ, ನಾನು ತಪ್ಪಾಗಿಲ್ಲದಿದ್ದರೆ, ಈ ಸದನದಲ್ಲಿ ಸುಮಾರು 43 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಸುದೀರ್ಘ ಅವಧಿಗೆ ಈ ಸದನಕ್ಕೆ ಸಾಕ್ಷಿಯಾಗುವ ಭಾಗ್ಯವನ್ನು ಹೊಂದಿದ್ದರು. ಶ್ರೀ ಶಫೀಕರ್ ರಹಮಾನ್ ಜೀ ಅವರು 93 ವರ್ಷ ವಯಸ್ಸಿನವರಾಗಿದ್ದರೂ ಸಹ ಕಲಾಪಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಿದ ಸದನ ಇದಾಗಿದೆ. ಮತ್ತು, ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿಯಾಗಿದೆ, ಶ್ರೀಮತಿ ಚಂದ್ರಾನಿ ಮುರ್ಮು ಅವರು ಕೇವಲ 25 ನೇ ವಯಸ್ಸಿನಲ್ಲಿ ಈ ಸದನದ ಸದಸ್ಯರಾದರು. ಅವರು, ಕೇವಲ 25 ವರ್ಷ ವಯಸ್ಸಿನ ಅತ್ಯಂತ ಕಿರಿಯ ಸದಸ್ಯರಾಗಿದ್ದರು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ನಾವೆಲ್ಲರೂ, ಭಿನ್ನಾಭಿಪ್ರಾಯಗಳನ್ನು, ವಿವಾದಗಳನ್ನು ಅನುಭವಿಸಿದ್ದೇವೆ ಮತ್ತು ತೀಕ್ಷ್ಣವಾದ ಪದಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ - ನಾವೆಲ್ಲರೂ ಅವುಗಳನ್ನು ಹೊಂದಿಕೊಂಡು ಮುಂದುವರಿಯಲು ಪ್ರಾರಂಭಿಸಿದ್ದೇವೆ ಮತ್ತು ನಮ್ಮಲ್ಲಿ ಯಾರನ್ನೂ ಪ್ರತ್ಯೇಕಿಸಲು ಸಾಧ್ಯವಿಲ್ಲ. ಬಹುಶಃ ಅದೆಲ್ಲದರ ಹೊರತಾಗಿಯೂ, ನಮ್ಮ ಹಿಂದಿನ ತಲೆಮಾರುಗಳಲ್ಲಿಯೂ ಹಾಗೂ ನಮ್ಮ ನಡುವೆ ಇರುವ ಕೌಟುಂಬಿಕ ಭಾವನೆ, ಮಾಧ್ಯಮಗಳ ಮೂಲಕ ಸಾರ್ವಜನಿಕ ವ್ಯಕ್ತಿಗಳನ್ನು ಗ್ರಹಿಸುವ ಮತ್ತು ನಮ್ಮನ್ನು ಹೊರಗಿನವರು ನೋಡುವ ವಿಧಾನ, ಇನ್ನೂ ಉತ್ತಮವಾಗಿದೆ. ಒಂದೇ ಕುಟುಂಬಕ್ಕೆ ಸೇರಿದವರ ಭಾವನೆ ಕುಟುಂಬದ ಪ್ರಜ್ಞೆ ನಮ್ಮನ್ನು ಬೇರೆ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇದೇ ಈ ಸದನದ ಶಕ್ತಿಯೂ ಹೌದು. ಕುಟುಂಬದ ಪ್ರಜ್ಞೆ, ಮತ್ತು ವ್ಯತ್ಯಾಸಗಳ ಹೊರತಾಗಿಯೂ, ನಾವು ಎಂದಿಗೂ ದ್ವೇಷವನ್ನು ಹೊಂದಿಲ್ಲ. ಎಷ್ಟೋ ವರ್ಷಗಳ ನಂತರವೂ ಭೇಟಿಯಾದರೆ ಅದೇ ಆತ್ಮೀಯತೆಯಿಂದ ಭೇಟಿಯಾಗುತ್ತೇವೆ, ಆ ಪ್ರೀತಿಯ ಸಮಯವನ್ನು ಮರೆಯುವುದಿಲ್ಲ. ನಾನು ಅದನ್ನು ಅನುಭವಿಸಿದ್ದೇನೆ.

 ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ಹಿಂದೆಯೂ, ಅನೇಕಬಾರಿ, ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ, ದೈಹಿಕ ನೋವು ಅಥವಾ ಅನಾನುಕೂಲತೆಗಳನ್ನು ಎದುರಿಸುತ್ತಿದ್ದರೂ ಕೂಡಾ ಸಂಸತ್ತಿನ ಸದಸ್ಯರು ಸದನಕ್ಕೆ ಬಂದು ಪ್ರತಿನಿಧಿಗಳಾಗಿ ತಮ್ಮ ಕರ್ತವ್ಯವನ್ನುನಿಭಾಯಿಸಿರುವುದನ್ನು ಹಲವಾರು ಬಾರಿ ನೋಡಿದ್ದೇವೆ. ಇಂತಹ ಅನೇಕ ನಿದರ್ಶನಗಳು ಇಂದು ನಮ್ಮ ಮುಂದಿವೆ. ಗಂಭೀರ ಕಾಯಿಲೆಗಳ ಹೊರತಾಗಿಯೂ, ಕೆಲವರು ಗಾಲಿಕುರ್ಚಿಯಲ್ಲಿ ಬರಬೇಕಾಗಿತ್ತು, ಮತ್ತು ಕೆಲವರು ಹೊರಗೆ ಕಾಯುವ ವೈದ್ಯರೊಂದಿಗೆ ಬರಬೇಕಾಗಿತ್ತು, ಆದರೆ ಸಂಸತ್ತಿನ ಎಲ್ಲಾ ಸದಸ್ಯರು ಕೆಲವು ಸಮಯದಲ್ಲಿ ಈ ರೀತಿಯಲ್ಲಿ ತಮ್ಮ ಪಾತ್ರ-ಜವಾಬ್ದಾರಿಗಳನ್ನು ಪೂರೈಸಿದ್ದಾರೆ.

ಕರೋನಾ ಅವಧಿಯು ನಮ್ಮ ಮುಂದೆ ಒಂದು ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಮನೆಯಲ್ಲೂ ಸಾವಿನ ಅಪಾಯವಿದೆ, ಅದರ ಹೊರತಾಗಿಯೂ, ಉಭಯ ಸದನಗಳಲ್ಲಿನ ನಮ್ಮ ಗೌರವಾನ್ವಿತ ಸಂಸದರು ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಸತ್ತಿಗೆ ಬಂದು ತಮ್ಮ ಕರ್ತವ್ಯವನ್ನು ಪೂರೈಸಿದರು. ರಾಷ್ಟ್ರದ ಕೆಲಸ ನಿಲ್ಲಿಸಲು ನಾವು ಬಿಡಲಿಲ್ಲ. ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯವಿತ್ತು ಮತ್ತು ಆಗಾಗ್ಗೆ ಪರೀಕ್ಷೆಗೆ ಒಳಗಾಗಿ. ನಾವು ಸದನಕ್ಕೆ ಬಂದೆವು ಆದರೆ ಮಾಸ್ಕ್ ಧರಿಸಬೇಕಿತ್ತು. ಆಸನ ವ್ಯವಸ್ಥೆ ವಿಭಿನ್ನವಾಗಿತ್ತು ಮತ್ತು ಸಮಯ ಕೂಡ ಬದಲಾಗಿತ್ತು. ಕರ್ತವ್ಯ ಪ್ರಜ್ಞೆಯಿಂದ, ಈ ಸದನದ ಎಲ್ಲಾ ಸದಸ್ಯರು ತಮ್ಮ ಜವಾಬ್ದಾರಿಯ ಅವಿಭಾಜ್ಯ ಅಂಗವೆಂದು ಪರಿಗಣಿಸಿದ್ದಾರೆ. ರಾಷ್ಟ್ರದ ಕೆಲಸ ನಿಲ್ಲದಂತೆ ಅವರು ಸಂಸತ್ತನ್ನು ನಡೆಸುತ್ತಿದ್ದರು. ಸದಸ್ಯರಿಗೆ ಈ ಸದನಕ್ಕೂ ವಿಶೇಷವಾದ ಬಾಂಧವ್ಯ ಇರುವುದನ್ನು ಕಂಡಿದ್ದೇನೆ. ಮೂವತ್ತು ವರ್ಷಗಳ ಹಿಂದೆ ಅಥವಾ ಮೂವತ್ತೈದು ವರ್ಷಗಳ ಹಿಂದೆ ಸಂಸದರಾಗಿದ್ದವರು, ಆದರೆ ಈಗಲೂ ಅವರು ಸೆಂಟ್ರಲ್ ಹಾಲ್ಗೆ ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದು ಹೇಗೆ ಅಭ್ಯಾಸವಾಗುತ್ತದೋ, ಅದೇ ರೀತಿ ಈ ಸದನಕ್ಕೆ ಬರುವುದನ್ನು ರೂಢಿಸಿಕೊಂಡಿದ್ದಾರೆ. ಭಾವನಾತ್ಮಕ ಸಂಬಂಧವಿದೆ, ಮತ್ತು ಅನೇಕ ಹಳೆಯ ಕಾಲದವರು, ಅವರು ಈಗ ಸಂಸತ್ತಿನ ಸದಸ್ಯರಾಗಿಲ್ಲದಿದ್ದರೂ ಸಹ, ಈ ಸದನದೊಂದಿಗೆ ಬಾಂಧವ್ಯವನ್ನು ಅನುಭವಿಸುತ್ತಾ ಇದ್ದಾರೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಸ್ವಾತಂತ್ರ್ಯದ ನಂತರ, ಅನೇಕ ಪ್ರಖ್ಯಾತ ವಿದ್ವಾಂಸರು ಆಳವಾದ ಕಳವಳ ವ್ಯಕ್ತಪಡಿಸಿದ್ದರು. ದೇಶದ ಭವಿಷ್ಯ, ಅದು ಯಶಸ್ವಿಯಾಗುವುದೋ ಅಥವಾ ವಿಫಲವಾಗುವುದೋ, ಅದು ಒಗ್ಗಟ್ಟಾಗಿ ಉಳಿಯುವುದೋ ಅಥವಾ ವಿಘಟನೆಯಾಗುವುದೋ, ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆಯೇ ಅಥವಾ ಕುಗ್ಗುತ್ತದೆಯೇ ಎಂಬ ಬಗ್ಗೆ ಅವರಿಗೆ ಖಚಿತವಾಗಿರಲಿಲ್ಲ. ಆದರೆ ಭಾರತದ ಸಂಸತ್ತಿನ ಬಲವು ಎಲ್ಲಾ ಅನುಮಾನಗಳನ್ನು ಮೌನಗೊಳಿಸಿತು ಮತ್ತು ಜಗತ್ತನ್ನು ತಪ್ಪು ಎಂದು ಸಾಬೀತುಪಡಿಸಿತು. ಈ ರಾಷ್ಟ್ರವು ಸಂಪೂರ್ಣ ಸಾಮರ್ಥ್ಯದೊಂದಿಗೆ ಪ್ರಗತಿಯನ್ನು ಮುಂದುವರೆಸಿತು. ನಾವು ಕಳವಳಗಳನ್ನು ಹೊಂದಿರಬಹುದು ಮತ್ತು ಸವಾಲುಗಳನ್ನು ಎದುರಿಸಬಹುದು, ಆದರೆ ನಾವು ನಮ್ಮ ಹಿಂದಿನವರ ಜೊತೆಗೆ ಈ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ನಾವು ಯಶಸ್ಸನ್ನು ಸಾಧಿಸುವುದನ್ನು ಮುಂದುವರಿಸುತ್ತೇವೆ ಎಂಬ ನಂಬಿಕೆ-ವಿಶ್ವಾಸಯೊಂದಿಗೆ, ಈ ಸಾಧನೆಯನ್ನು ಸಂಭ್ರಮಿಸುವ ಸಂದರ್ಭವಿದು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ಕಟ್ಟಡದಲ್ಲಿಯೇ ಸಂವಿಧಾನ ಸಭೆ ಎರಡು ವರ್ಷ ಹನ್ನೊಂದು ತಿಂಗಳ ಕಾಲ ಸಭೆ ಸೇರಿತು. ಇಂದಿಗೂ ನಮಗೆ ಮಾರ್ಗದರ್ಶನ ನೀಡುವ ಸಂವಿಧಾನವನ್ನು ಅವರು ನಮಗೆ ಒದಗಿಸಿದ್ದಾರೆ. 1949 ರ ನವೆಂಬರ್ 26 ರಂದು ನಾವು ಸ್ವೀಕರಿಸಿದ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿತು. ಈ 75 ವರ್ಷಗಳಲ್ಲಿ, ನಮ್ಮ ಸಂಸತ್ತಿನಲ್ಲಿ ಈ ದೇಶದ ಸಾಮಾನ್ಯ ಜನರ ನಂಬಿಕೆಯನ್ನು ಬೆಳೆಸಿಕೊಂಡಿರುವುದು ದೊಡ್ಡ ಸಾಧನೆಯಾಗಿದೆ. ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಈ ಮಹಾನ್ ಸಂಸ್ಥೆ, ಈ ಉದಾತ್ತ ಸಂಸ್ಥೆ ಮತ್ತು ಈ ವ್ಯವಸ್ಥೆಯಲ್ಲಿದೆ ಜನರ ಅಚಲ ನಂಬಿಕೆಯಲ್ಲಿದೆ. ಈ 75 ವರ್ಷಗಳಲ್ಲಿ ನಮ್ಮ ಸಂಸತ್ತು ಸಾರ್ವಜನಿಕ ಭಾವನೆಗಳನ್ನು ವ್ಯಕ್ತಪಡಿಸುವ ಸಂಕೇತವಾಗಿದೆ. ಇಲ್ಲಿ, ಸಾರ್ವಜನಿಕ ಭಾವನೆಗಳ ಬಲವಾದ ಅಭಿವ್ಯಕ್ತಿ ಕಂಡುಬರುತ್ತದೆ ಮತ್ತು ಶ್ರೀ ರಾಜೇಂದ್ರ ಬಾಬು ಜೀ, ಡಾ. ಕಲಾಂ ಜೀ, ಶ್ರೀ ರಾಮ್ ನಾಥ್ ಕೋವಿಂದ್ ಜೀ ಅವರಂತಹ ನಾಯಕರ ಭಾಷಣಗಳಿಂದ ಮತ್ತು ಇತ್ತೀಚೆಗೆ ಶ್ರೀಮತಿ ದ್ರೌಪದಿ ಮುರ್ಮು ಜೀ ಅವರ ಭಾಷಣಗಳಿಂದ  ನಾವು ಪ್ರಯೋಜನ ಪಡೆದಿದ್ದೇವೆ. ಅವರ ಮಾರ್ಗದರ್ಶನ ನಮ್ಮ ಸಂಸತ್ತಿನ ಉಭಯ ಸದನಗಳಿಗೆ ಅಮೂಲ್ಯವಾಗಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,                   

ಶ್ರೀ ಪಂಡಿತ್ ನೆಹರೂ ಜೀ, ಶ್ರೀ ಶಾಸ್ತ್ರಿ ಜೀ, ಶ್ರೀ ಅಟಲ್ ಜೀ, ಮತ್ತು ಶ್ರೀ ಮನಮೋಹನ್ ಜೀಯವರಿಂದ ಈ ಸದನವನ್ನು ಮುನ್ನಡೆಸಿದ ಮತ್ತು ಈ ಸದನದ ಮೂಲಕ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ ನಾಯಕರ ಉದ್ದನೆಯ ಸಾಲು ಇದೆ. ಅವರೆಲ್ಲರೂ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ ಮತ್ತು ದೇಶವನ್ನು ಹೊಸ ವರ್ಣಗಳಲ್ಲಿ ರೂಪಿಸಲು ಅಪಾರ ಪ್ರಯತ್ನವನ್ನು ಮಾಡಿದ್ದಾರೆ. ಅವರೆಲ್ಲರಿಗೂ ಗೌರವ ಸಲ್ಲಿಸುವ ಸಂದರ್ಭವೂ ಇಂದು ಆಗಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀ, ಶ್ರೀ ಲೋಹಿಯಾ ಜೀ, ಶ್ರೀ ಚಂದ್ರಶೇಖರ್ ಜೀ, ಶ್ರೀ ಅಡ್ವಾಣಿ ಜೀ, ಮತ್ತು ಹೀಗೆ ಅಸಂಖ್ಯಾತ ಇತರ ಹೆಸರುಗಳು ಈ ಸದನವನ್ನು ಶ್ರೀಮಂತಗೊಳಿಸಿವೆ. ಅವರು ಈ ಸದನದಲ್ಲಿ ಸಾಮಾನ್ಯ ಜನರ ಧ್ವನಿಯನ್ನು ಸಶಕ್ತಗೊಳಿಸಲು, ಚರ್ಚೆಗಳನ್ನು ಪುಷ್ಟೀಕರಿಸಲು ಮತ್ತು ದೇಶದ ಸಾಮಾನ್ಯ ವ್ಯಕ್ತಿಗಳಿಗೆ ಶಕ್ತಿ ನೀಡಲು ಕೆಲಸ ಮಾಡಿದ್ದಾರೆ. ಅನೇಕ ವಿಶ್ವ ನಾಯಕರು ನಮ್ಮ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ ಮತ್ತು ಅವರ ಮಾತುಗಳು ಭಾರತದ ಪ್ರಜಾಪ್ರಭುತ್ವದ ಗೌರವವನ್ನು ತೋರಿಸಿವೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಸಂಭ್ರಮ ಮತ್ತು ಉತ್ಸಾಹದ ಕ್ಷಣಗಳ ನಡುವೆ ಈ ಸದನದ ಕಣ್ಣುಗಳಿಂದ ನೋವಿನ ಕಣ್ಣೀರು ಕೂಡ ಹರಿಯಿತು. ಆಯಾ ಅಧಿಕಾರಾವಧಿಯಲ್ಲಿ ರಾಷ್ಟ್ರವು ತನ್ನ ಮೂವರು ಪ್ರಧಾನ ಮಂತ್ರಿಗಳನ್ನು ಕಳೆದುಕೊಂಡಾಗ ಈ ಸದನವು ದುಃಖದಿಂದ ತುಂಬಿತ್ತು. ನೆಹರೂ ಜೀ, ಶಾಸ್ತ್ರಿ ಜೀ, ಮತ್ತು ಇಂದಿರಾ ಜೀಯವರಿಗೆ ತೇವಗೊಂಡ ಕಣ್ಣುಗಳೊಂದಿಗೆ ಈ ಸದನವು ಬೀಳ್ಕೊಟ್ಟಿತ್ತು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಹಲವಾರು ಸವಾಲುಗಳ ಹೊರತಾಗಿಯೂ, ಪ್ರತಿ ಸಭಾಧ್ಯಕ್ಷರು ಮತ್ತು ಪ್ರತಿ ಸಭಾಪತಿಗಳು ತಮ್ಮ ಅಧಿಕಾರಾವಧಿಯಲ್ಲಿ ಉಭಯ ಸದನಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದ್ದಾರೆ ಮತ್ತು ಮಾದರಿ ನಿರ್ಧಾರಗಳನ್ನು ಮಾಡಿದ್ದಾರೆ. ಇದು ಶ್ರೀ ಮಾವಲಂಕರ್ ಜೀಯವರಿಂದ ಪ್ರಾರಂಭವಾದರೂ, ಶ್ರೀಮತಿ ಸುಮಿತ್ರಾ ಜೀಯವರ ಅವಧಿಯಲ್ಲಿ, ಅಥವಾ ಶ್ರೀ ಬಿರ್ಲಾ ಜೀಯವರಿಂದ ಹಿಡಿದು ಎಲ್ಲರ ನಿರ್ಧಾರಗಳನ್ನು ಉಲ್ಲೇಖದ ಅಂಶಗಳಾಗಿ ಪರಿಗಣಿಸಲಾಗುತ್ತದೆ. ನಮ್ಮ ಇಬ್ಬರು ಮಹಿಳಾ ಸಭಾಧ್ಯಕ್ಷರುಗಳು ಸೇರಿದಂತೆ ಶ್ರೀ ಮಾವಲಂಕರ್ ಜೀಯವರಿಂದ ಪ್ರಾರಂಭವಾದರೂ, ಶ್ರೀಮತಿ ಸುಮಿತ್ರಾ ಜೀಯವರ ಅವಧಿಯಲ್ಲಿ, ಅಥವಾ ಶ್ರೀ ಬಿರ್ಲಾ ಜೀಯವರ ವರೇಗೆ ಸುಮಾರು 17 ಸಭಾಧ್ಯಕ್ಷರುಗಳು ಈ ಕೆಲಸವನ್ನು ನಿರ್ವಹಿಸಿದ್ದಾರೆ. ಅವರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದ್ದರು, ಆದರೆ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿರುವಾಗ ಈ ಸದನವನ್ನು ಶಕ್ತಿಯುತವಾಗಿಡಲು ಅವರೆಲ್ಲರೂ ಒಟ್ಟಾಗಿ ಕೆಲಸ ಮಾಡಿದರು. ಇಂದು, ನಾನು ಈ ಎಲ್ಲಾ ಗೌರವಾನ್ವಿತ ಸಭಾಪತಿಗಳಿಗೆ ನನ್ನ ಹೃತ್ಪೂರ್ವಕ ಗೌರವ ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಸಾರ್ವಜನಿಕ ಪ್ರತಿನಿಧಿಗಳಾಗಿ ನಾವು ನಮ್ಮ ಪಾತ್ರವನ್ನು ನಿರ್ವಹಿಸುತ್ತೇವೆ ಎಂಬುದು ನಿಜ. ಆದಾಗ್ಯೂ, ನಮ್ಮನ್ನು ಬೆಂಬಲಿಸಲು ತೆರೆಮರೆಯಲ್ಲಿ ಕೆಲಸ ಮಾಡುವ ತಂಡಗಳು ಸಹ ವರ್ಷಗಳಲ್ಲಿ ವಿಕಸನಗೊಂಡಿವೆ. ಪ್ರಕ್ರಿಯೆಗಳು ಮತ್ತು ನಿರ್ಧಾರಗಳಲ್ಲಿ ಯಾವುದೇ ತಪ್ಪುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರ ಕೊಡುಗೆಗಳು ಅಮೂಲ್ಯವಾದವುಗಳಾಗಿವೆ. ಅವರ ಕೆಲಸವು ಈ ಸದನದಲ್ಲಿ ಆಡಳಿತದ ಗುಣಮಟ್ಟಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ನಮಗಿಂತ ಮೊದಲು ಸೇವೆ ಸಲ್ಲಿಸಿದವರು ಸೇರಿದಂತೆ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಂಸತ್ತು ಕೇವಲ ಈ ಸದನಗಳಿಗೆ ಸೀಮಿತವಾಗಿಲ್ಲ; ಇದು ಸಂಪೂರ್ಣ ಸುತ್ತಮುತ್ತಲಿನ ಪ್ರದೇಶವನ್ನು ಒಳಗೊಳ್ಳುತ್ತದೆ. ಇಲ್ಲಿ ಅನೇಕ ಜನರು ಚಹಾ ಅಥವಾ ನೀರನ್ನು ನೀಡುವುದರಿಂದ ಹಿಡಿದು ಯಾರೊಬ್ಬರೂ ಹಸಿವಿನಿಂದ ಬಳಲುತ್ತಿರುವುದನ್ನು ತಡೆಯುವವರೆಗೆ, ಮನೆಗಳು ತಡರಾತ್ರಿಯವರೆಗೆ ಕೆಲಸ ಮಾಡುವಾಗ ವಿವಿಧ ಸೇವೆಗಳನ್ನು ಒದಗಿಸುವವರೆಗೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಕೆಲವರು ಹೊರಗಿನ ಪರಿಸರದ ಬಗ್ಗೆ ಕಾಳಜಿ ವಹಿಸಿದ್ದಾರೆ, ಇತರರು ಸ್ವಚ್ಛತೆಯನ್ನು ಖಾತ್ರಿಪಡಿಸಿದ್ದಾರೆ. ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವಂತೆ ಅಸಂಖ್ಯಾತ ವ್ಯಕ್ತಿಗಳು ನಮ್ಮೆಲ್ಲರಿಗೂ ಶ್ರದ್ಧೆಯಿಂದ ಪರದೆಹಿಂದೆ ಕೆಲಸ ಮಾಡಿದ್ದಾರೆ. 

ಸೂಕ್ಷ್ಮವಾಗಿ ಹೇಳುವುದಾದರೆ, ಅವರ ಪ್ರಯತ್ನಗಳಿಗೆ ನಾನು ವೈಯಕ್ತಿಕವಾಗಿ ಮತ್ತು ಈ ಸದನದ ಪರವಾಗಿ ನನ್ನ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ಪ್ರಜಾಪ್ರಭುತ್ವದ ದೇವಾಲಯ... ಇಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಪ್ರಪಂಚದಾದ್ಯಂತ ಕಟ್ಟಡಗಳ ಮೇಲಿನ ದಾಳಿಗಿಂತ ಭಿನ್ನವಾಗಿ, ಈ ದಾಳಿಯು 'ಪ್ರಜಾಪ್ರಭುತ್ವದ ತಾಯಿ' ಮೇಲೆ ದಾಳಿ ನಡೆದಿದೆ, ಒಂದು ರೀತಿಯಲ್ಲಿ, ನಮ್ಮ ಆತ್ಮದ ಮೇಲೆ ಆಕ್ರಮಣವಾಗಿದೆ. ಆ ಘಟನೆಯನ್ನು ನಮ್ಮ ದೇಶ ಮರೆಯಲು ಸಾಧ್ಯವೇ ಇಲ್ಲ. ಸಂಸತ್ತನ್ನು ಉಳಿಸಲು ಮತ್ತು ಪ್ರತಿಯೊಬ್ಬ ಸದಸ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಯೋತ್ಪಾದಕರ ವಿರುದ್ಧ ಹೋರಾಡಿದ ಮತ್ತು ಅವರ ಎದೆಯ ಮೇಲೆ ಗುಂಡುಗಳನ್ನು ಹಾರಿಸಿದವರಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ. ಅವರು ನಮ್ಮ ನಡುವೆ ಇಲ್ಲದಿರಬಹುದು, ಆದರೆ ಅವರು ನಮ್ಮನ್ನು ರಕ್ಷಿಸುವ ಮೂಲಕ ದೊಡ್ಡ ಸೇವೆಯನ್ನು ಮಾಡಿದ್ದಾರೆ.

 ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

ನಾವು ಇಂದು ಈ ಸದನವನ್ನು ತೊರೆಯಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನ ವರದಿಗಾಗಿ ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಮುಡಿಪಾಗಿಟ್ಟ ಪತ್ರಕರ್ತ ಸ್ನೇಹಿತರನ್ನು ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ. ಅವರು ಒಂದು ರೀತಿಯಲ್ಲಿ ಜೀವಂತ ಸಾಕ್ಷಿಗಳಾಗಿದ್ದರು. ಅವರು ಇಲ್ಲಿಂದ ದೇಶಕ್ಕೆ ಸೂಕ್ಷ್ಮ ವಿವರಗಳನ್ನು ತಲುಪಿಸಿದರು ಮತ್ತು ಆಗಿನಕಾಲದಲ್ಲಿ, ಈಗ ಲಭ್ಯವಿರುವ ಎಲ್ಲಾ ತಂತ್ರಜ್ಞಾನಗಳು ನಮ್ಮಲ್ಲಿ ಇರಲಿಲ್ಲ. ಅವರು ಮಾಹಿತಿ ನೀಡಿದರು ಮತ್ತು ಸುದ್ದಿಯ ಹಿಂದೆ ಸುದ್ದಿ ನೀಡುವ ಸಾಮರ್ಥ್ಯ ಹೊಂದಿದ್ದರು. ಅವರನ್ನು ಹುಡುಕಲಾಗುವುದಿಲ್ಲ, ಆದರೆ ಅವರ ಕೆಲಸವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ಸಂಸತ್ತಿನ ಕಟ್ಟಡದಿಂದ ಭಾರತದ ಅಭಿವೃದ್ಧಿಯ ಪಯಣವನ್ನು ರಾಷ್ಟ್ರಕ್ಕೆ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದ ಪತ್ರಿಕೋದ್ಯಮವನ್ನು ನಾನು ನೋಡಿದ್ದೇನೆ ಮತ್ತು ಅದಕ್ಕಾಗಿ ಅವರು ತಮ್ಮ ಎಲ್ಲಾ ಶಕ್ತಿಯನ್ನು ವ್ಯಯಿಸಿದ್ದಾರೆ. ಇಂದಿಗೂ ಸಹ, ನಾನು ಈ ಹಿಂದೆ ಸಂಸತ್ತನ್ನು ವರದಿ ಮಾಡಿದ ಹಳೆಯ ಪತ್ರಕರ್ತ ಸ್ನೇಹಿತರನ್ನು ಭೇಟಿಯಾಗುತ್ತೇನೆ ಆದರೆ ಆಶ್ಚರ್ಯಕರವಾದ ಆದರೆ ನೈಜವಾದ ಕಥೆಗಳನ್ನು ಹಂಚಿಕೊಳ್ಳುತ್ತೇನೆ. ಇದು ಈ ಸದನದ ಗೋಡೆಗಳು ಹೊಂದಿರುವ ಶಕ್ತಿಯಂತೆ; ಅದೇ ಕನ್ನಡಿಯ ಪರಿಣಾಮವು ಅವರ ಲೇಖನಿಗಳಲ್ಲಿ ಕಂಡುಬರುತ್ತದೆ, ಇದು ಸಂಸತ್ತಿನ ಪ್ರಾಮುಖ್ಯತೆ, ಅದರ ಸದಸ್ಯರು ಮತ್ತು ಸಂಸದರ ಬಗ್ಗೆ ಸಹಾನುಭೂತಿಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಅನೇಕ ಪತ್ರಕರ್ತರಿಗೆ ಇದು ಭಾವನಾತ್ಮಕ ಕ್ಷಣ ಎಂದು ನನಗೆ ಖಾತ್ರಿಯಿದೆ. ಈ ಸದನವನ್ನು ತೊರೆಯುವುದು ನನಗೆ ಭಾವನಾತ್ಮಕ ಕ್ಷಣವಾಗಿದೆ ಎಂದು ನಾನು ನಂಬುತ್ತೇನೆ, ಈ ಪತ್ರಕರ್ತ ಮಿತ್ರರಿಗೆ ಇದು ಇನ್ನಷ್ಟು ಭಾವನಾತ್ಮಕವಾಗಿರಬೇಕು ಏಕೆಂದರೆ ಸಂಸತ್ತಿನ ಮೇಲಿನ ಅವರ ಪ್ರೀತಿ ನಮಗಿಂತ ಹೆಚ್ಚು. ಈ ಪತ್ರಕರ್ತರಲ್ಲಿ ಕೆಲವರು ನಮಗಿಂತ ಚಿಕ್ಕವರೂ ಇರಬಹುದು, ಆದರೆ ಅವರು ಈ ಮಹತ್ವದ ಪ್ರಜಾಪ್ರಭುತ್ವಕ್ಕೆ ಕೊಡುಗೆ ನೀಡಿದ್ದಾರೆ, ಆದ್ದರಿಂದ ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಸಂದರ್ಭವೂ ಇದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ಈ ಸದನವನ್ನು ಪ್ರವೇಶಿಸಿದಾಗ, ನಮ್ಮ ಸಂಪ್ರದಾಯವು ದೈವಿಕ ಶಕ್ತಿಯನ್ನು ಆಹ್ವಾನಿಸುತ್ತದೆ. ಒಂದೇ ಮಂತ್ರವನ್ನು ಒಂದು ಸ್ಥಳದಲ್ಲಿ ಹಲವಾರು ಬಾರಿ ಜಪಿಸಿದಾಗ ಅದು ಪವಿತ್ರ ಸ್ಥಳವಾಗುತ್ತದೆ ಎಂದು ನಮ್ಮ ಧರ್ಮಗ್ರಂಥಗಳು ಉಲ್ಲೇಖಿಸುತ್ತವೆ. ಇದು ಸಕಾರಾತ್ಮಕ ಕಾಂತಿಯ ಪ್ರಭಾವಲಯವನ್ನು(ವೈಬ್) ಹೊರಹೊಮ್ಮಿಸುತ್ತದೆ ಮತ್ತು ಒಂದು ಸ್ಥಳವನ್ನು ಆಧ್ಯಾತ್ಮಿಕ ನೆಲವಾಗಿ ಪರಿವರ್ತಿಸುವ ಪ್ರತಿಧ್ವನಿಸುವ ಶಕ್ತಿಯಿದೆ. ಈ ಸದನವು ಏಳೂವರೆ ಸಾವಿರ ಪ್ರತಿನಿಧಿಗಳ ಮಾತುಗಳು ಮತ್ತು ಚರ್ಚೆಗಳ ಮೂಲಕ, ನಾವು ಭವಿಷ್ಯದಲ್ಲಿ ಸಕ್ರಿಯವಾಗಿ ಚರ್ಚಿಸಲಿ ಅಥವಾ ಇಲ್ಲದಿರಲಿ, ಅದನ್ನು ಯಾತ್ರಾ ಸ್ಥಳವಾಗಿ, ಜಾಗೃತಿಯ ಸ್ಥಳವಾಗಿ ಪರಿವರ್ತಿಸುವ ಪ್ರತಿಧ್ವನಿಯನ್ನು ಸೃಷ್ಟಿಸಿದೆ ಎಂದು ನಾನು ನಂಬುತ್ತೇನೆ. ಪ್ರಜಾಪ್ರಭುತ್ವದ ಬಗ್ಗೆ ಗೌರವ ಹೊಂದಿರುವ ಯಾರಾದರೂ, ಇಂದಿನಿಂದ 50 ವರ್ಷಗಳ ನಂತರವೂ ಈ ಸ್ಥಳಕ್ಕೆ ಭೇಟಿ ನೀಡಿದಾಗ, ಒಮ್ಮೆ ಭರತದ ಆತ್ಮದ ಧ್ವನಿ ಇಲ್ಲಿ ಪ್ರತಿಧ್ವನಿಸಿದ ಅನುರಣನವನ್ನು ಅನುಭವಿಸುತ್ತಾರೆ ಎಂದು ನಾನು ನಂಬುತ್ತೇನೆ.

ಆದ್ದರಿಂದ ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಒಮ್ಮೆ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ವಿರೋಧಿಸಲು ಶ್ರೀ ಭಗತ್ ಸಿಂಗ್ ಮತ್ತು ಶ್ರೀ ಬಟುಕೇಶ್ವರ್ ದತ್ ಬಾಂಬ್ ಸ್ಫೋಟಿಸುವ ಮೂಲಕ ತಮ್ಮ ಶೌರ್ಯ ಮತ್ತು ಶಕ್ತಿಯನ್ನು ಪ್ರದರ್ಶಿಸಿದ ಸದನ ಇದು. ಆ ಬಾಂಬ್ನ ಪ್ರತಿಧ್ವನಿಗಳು ನಮ್ಮ ರಾಷ್ಟ್ರದ ಒಳಿತನ್ನು ಬಯಸುವವರಿಗೆ ಎಂದಿಗೂ ವಿಶ್ರಾಂತಿ ನೀಡಲಿಲ್ಲ. 

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಇದು ಶ್ರೀ ಪಂಡಿತ್ ನೆಹರೂ ಅವರನ್ನು ವಿವಿಧ ಕಾರಣಗಳಿಗಾಗಿ ನೆನಪಿಸಿಕೊಳ್ಳುವ ಸದನವಾಗಿದೆ, ಆದರೆ ನಾವು ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಈ ಸದನದಲ್ಲಿಯೇ ಶ್ರೀ ಪಂಡಿತ್ ನೆಹರೂ ಅವರ ‘ಅಟ್ ದಿ ಸ್ಟ್ರೋಕ್ ಆಫ್ ಮಿಡ್ನೈಟ್’ ಭಾಷಣವು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಮತ್ತು ಇದೇ ಸದನದಲ್ಲಿ, ಶ್ರೀ ಅಟಲ್ ಜೀ ಒಮ್ಮೆ ಹೇಳಿದರು 'ಸರ್ಕಾರಗಳು ಬರುತ್ತವೆ ಹೋಗುತ್ತವೆ, ಪಕ್ಷಗಳು ರಚನೆಯಾಗುತ್ತವೆ ಮತ್ತು ವಿಸರ್ಜಿಸಲ್ಪಡುತ್ತವೆ, ಆದರೆ ಈ ರಾಷ್ಟ್ರವು ಉಳಿಯಬೇಕು' ಮತ್ತು ಅವರ ಮಾತುಗಳು ಇಲ್ಲಿ ಪ್ರತಿಧ್ವನಿಸುತ್ತಲೇ ಇವೆ. 

 ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

ಶ್ರೀ ಪಂಡಿತ್ ನೆಹರು ಅವರ ಆರಂಭಿಕ ಸಂಪುಟದಲ್ಲಿ ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಭಾರತೀಯ ಕಾರ್ಮಿಕ ಕಾನೂನುಗಳಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಲು ಒತ್ತು ನೀಡಿದರು, ಇದು ದೇಶದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಹೆಚ್ಚುವರಿಯಾಗಿ, ನೆಹರೂ ಜೀಯವರ ಸರ್ಕಾರದ ಅವಧಿಯಲ್ಲಿ ಜಲನೀತಿಯನ್ನು ರೂಪಿಸುವಲ್ಲಿ ಬಾಬಾಸಾಹೇಬರು ನಿರ್ಣಾಯಕ ಪಾತ್ರವನ್ನು ವಹಿಸಿದರು. ಆ ಜಲ ನೀತಿಯನ್ನು ರೂಪಿಸಿದ ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳು ಭಾರತಕ್ಕೆ ಪ್ರಮುಖವಾಗಿವೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಕೈಗಾರಿಕೀಕರಣದ ಪ್ರಾಮುಖ್ಯತೆಯನ್ನು ನಿರಂತರವಾಗಿ ಒತ್ತಿ ಹೇಳಿದರು. ಕೈಗಾರಿಕೀಕರಣವು ನಿರ್ಣಾಯಕವಾಗಿದೆ ಎಂದು ಅವರು ನಂಬಿದ್ದರು ಏಕೆಂದರೆ ಅನೇಕ ಅಂಚಿನಲ್ಲಿರುವ ಸಮುದಾಯಗಳು, ವಿಶೇಷವಾಗಿ ದಲಿತರು, ಭೂಮಿಗೆ ಅವಕಾಶವನ್ನು ಹೊಂದಿಲ್ಲ, ಹೀಗಾಗಿ, ಅವರನ್ನು ಮೇಲಕ್ಕೆತ್ತಲು ಕೈಗಾರಿಕೀಕರಣವು ಅಗತ್ಯವಾಗಿತ್ತು. ವಿಶೇಷವಾಗಿ ಶ್ರೀ ಪಂಡಿತ್ ನೆಹರೂ ಅವರ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಅವಧಿಯಲ್ಲಿ ಶ್ರೀ ಬಾಬಾಸಾಹೇಬ್ ಅವರ ದೃಷ್ಟಿಕೋನವು ಭಾರತದ ಕೈಗಾರಿಕಾ ನೀತಿಯ ಮೇಲೆ ಪ್ರಭಾವ ಬೀರಿತು. ಇಂದಿಗೂ, ಎಷ್ಟೇ ಉದ್ಯಮ ನೀತಿಗಳನ್ನು ಮಾಡಿದರೂ, ಅದರ ಆತ್ಮವು ದೇಶದ ಕೈಗಾರಿಕಾ ಅಭಿವೃದ್ಧಿಯ ಮೇಲೆ ಶಾಶ್ವತ ಪರಿಣಾಮ ಬೀರಿದ ಮೊದಲ ಸರ್ಕಾರವು ನೀಡಿದಂತೆಯೇ ಉಳಿದಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

1965 ರ ಯುದ್ಧದ ಸಮಯದಲ್ಲಿ ನಮ್ಮ ದೇಶದ ಸೈನಿಕರ ಸ್ಥೈರ್ಯವನ್ನು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರೇರೇಪಿಸಿದರು ಹಾಗೂ ರಾಷ್ಟ್ರೀಯ ಹೆಮ್ಮೆಯ ಮೂಲ ಮತ್ತು ಅವರ ಸಾಮರ್ಥ್ಯಗಳಲ್ಲಿ ಸಂಪೂರ್ಣ ವಿಶ್ವಾಸವನ್ನು ತುಂಬಿದರು. ಈ ಸದನದಿಂದಲೇ. ಇಲ್ಲಿಯೇ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಹಸಿರು ಕ್ರಾಂತಿಗೆ ಭದ್ರ ಬುನಾದಿ ಹಾಕಿದರು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ಸದನವು ಬಾಂಗ್ಲಾದೇಶ ವಿಮೋಚನಾ ಯುದ್ಧ ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಅದರ ಬೆಂಬಲವನ್ನು ಇನ್ನೂ ವಿಸ್ತರಿಸಿದೆ. ಈ ಸದನವು ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣಕ್ಕೆ ಸಾಕ್ಷಿಯಾಯಿತು ಮತ್ತು ದೃಢವಾದ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಭಾರತದ ಜನರು ಪ್ರದರ್ಶಿಸಿದ ಶಕ್ತಿಯನ್ನು ಸಹ ವೀಕ್ಷಿಸಿತು. ಇದು ಆ ಅವಧಿಯ ರಾಷ್ಟ್ರೀಯ ಬಿಕ್ಕಟ್ಟನ್ನು ಕಂಡಿದೆ ಮತ್ತು ರಾಷ್ಟ್ರದ ಸ್ಥಿತಿಸ್ಥಾಪಕತ್ವಕ್ಕೂ ಸಾಕ್ಷಿಯಾಗಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ಗೋಡೆಗಳ ಮಧ್ಯೆಯೇ ನಮ್ಮ ಮಾಜಿ ಪ್ರಧಾನಮಂತ್ರಿ ಶ್ರೀ ಚೌಧರಿ ಚರಣ್ ಸಿಂಗ್ ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದರು ಎಂಬುದಕ್ಕೆ ಈ ಸದನವು ಯಾವಾಗಲೂ ಋಣಿಯಾಗಿ ಉಳಿಯುತ್ತದೆ. ಈ ಸದನದಲ್ಲಿ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸುವ ನಿರ್ಧಾರವನ್ನು ಮಾಡಲಾಯಿತು, ಇದು ದೇಶದ ಯುವಜನರಿಗೆ ಮತದಾನದ ಕೊಡುಗೆ ನೀಡಲು ಪ್ರೇರೇಪಿಸಿತು. ಶ್ರೀ ವಿ.ಪಿ. ಸಿಂಗ್ ಅವರಂತಹ ನಾಯಕರ ನೇತೃತ್ವದ ಸಮ್ಮಿಶ್ರ ಸರ್ಕಾರಗಳಿಗೆ,  ಶ್ರೀ ಚಂದ್ರಶೇಖರ್ ನೇತೃತ್ವದ ಸಮ್ಮಿಶ್ರ ಸರ್ಕಾರ ಮತ್ತು ಅದರ ನಂತರ ಸಮ್ಮಿಶ್ರ ಸರ್ಕಾರಗಳ ಸರಣಿಗೆ ರಾಷ್ಟ್ರ ಸಾಕ್ಷಿಯಾಗಿದೆ. ದೀರ್ಘಕಾಲದವರೆಗೆ, ದೇಶವು ಆರ್ಥಿಕ ನೀತಿಗಳಿಂದ ಹೊರೆಯಾಗಿ ಒಂದು ದಿಕ್ಕಿನಲ್ಲಿ ಸಾಗುತ್ತಿತ್ತು. ಆದರೆ ಶ್ರೀ ನರಸಿಂಹರಾವ್ ಅವರ ಸರ್ಕಾರ ಧೈರ್ಯ ತುಂಬಿ ಹಳೆಯ ಆರ್ಥಿಕ ನೀತಿಗಳನ್ನು ಕೈಬಿಟ್ಟು ಹೊಸ ಹಾದಿಯಲ್ಲಿ ಸಾಗಲು ನಿರ್ಧರಿಸಿತು, ಅದರ ಲಾಭವನ್ನು ದೇಶ ಇಂದು ಪಡೆಯುತ್ತಿದೆ.

ಈ ಸದನದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವನ್ನೂ ನೋಡಿದ್ದೇವೆ. ಸರ್ವಶಿಕ್ಷಾ ಅಭಿಯಾನ ಇಂದು ನಮ್ಮ ದೇಶಕ್ಕೆ ನಿರ್ಣಾಯಕವಾಗಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಈಶಾನ್ಯ ಸಚಿವಾಲಯವನ್ನು ಶ್ರೀ ಅಟಲ್ ಜೀ ಸ್ಥಾಪಿಸಿದರು. ಪರಮಾಣು ಪರೀಕ್ಷೆಗಳು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದವು. ಮತ್ತು ಈ ಸದನದಲ್ಲಿ ನಾವು ಶ್ರೀ ಮನಮೋಹನ್ ಜೀ ಯವರ ಸರ್ಕಾರ ಮತ್ತು ಮತಕ್ಕಾಗಿ ನಗದು ಹಗರಣವನ್ನು ಕೂಡಾ ನಾವು ಈ ಸದನದಲ್ಲಿ ನೋಡಿದ್ದೇವೆ. 

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಂತ್ರ, ಹಲವು ಐತಿಹಾಸಿಕ ನಿರ್ಧಾರಗಳು, ದಶಕಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಈ ಸದನದಲ್ಲಿ ಶಾಶ್ವತ ಪರಿಹಾರ ಸಿಕ್ಕಿದೆ. 370 ನೇ ವಿಧಿಯ ಅಂತ್ಯ - ತನ್ನ ಅಧಿಕಾರಾವಧಿಯಲ್ಲಿ ಈ ಸದನದಲ್ಲಿ ಸಂಭವಿಸಿದೆ ಎಂದು ಯಾವಾಗಲೂ ಹೆಮ್ಮೆಯಿಂದ ಹೇಳುತ್ತವೆ. ಒನ್ ನೇಷನ್, ಒನ್ ಟ್ಯಾಕ್ಸ್ - ಜಿಎಸ್ಟಿ ಬಗ್ಗೆಯೂ ಈ ಸದನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಒಂದು ಶ್ರೇಣಿ ಒಂದು  ಪಿಂಚಣಿ (ಒಆರ್ಒಪಿ)ಗೂ ಈ ಸದನ ಸಾಕ್ಷಿಯಾಯಿತು. ಈ ದೇಶದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಮೀಸಲಾತಿಯನ್ನು ಯಾವುದೇ ವಿವಾದವಿಲ್ಲದೆ ಪರಿಚಯಿಸಲಾಯಿತು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಭಾರತದ ಪ್ರಜಾಪ್ರಭುತ್ವದಲ್ಲಿ, ನಾವು ಹಲವಾರು ಏಳುಬೀಳುಗಳನ್ನು ಕಂಡಿದ್ದೇವೆ ಮತ್ತು ಈ ಸದನವು ಪ್ರಜಾಪ್ರಭುತ್ವದ ಶಕ್ತಿಯಾಗಿದೆ, ಮತ್ತು ಸಾರ್ವಜನಿಕ ನಂಬಿಕೆಯ ಕೇಂದ್ರ ಬಿಂದುವಾಗಿದೆ. ಈ ಸದನದ ವಿಶಿಷ್ಟತೆಯನ್ನು ನೋಡಿ; ಇಂದಿಗೂ ಅಚ್ಚರಿ ವಿಷ ಯವಾಗಿದೆ. ಈ ಸದನದಲ್ಲಿ ಕೇವಲ 4 ಸದಸ್ಯರಿರುವ ಪಕ್ಷ ಅಧಿಕಾರದಲ್ಲಿದ್ದು, 100 ಸದಸ್ಯರಿರುವ ಇನ್ನೊಂದು ಪಕ್ಷ ವಿರೋಧ ಪಕ್ಷದಲ್ಲಿದ್ದುದು ಜಗತ್ತನ್ನೇ ಬೆರಗುಗೊಳಿಸಿದೆ. ಇದು ಕೂಡ ಒಂದು ರೀತಿಯ ಸಾಮರ್ಥ್ಯ. ಈ ಸದನವು ಪ್ರಜಾಪ್ರಭುತ್ವದ ಶಕ್ತಿಯನ್ನು ಪರಿಚಯಿಸುತ್ತದೆ. ಇದು ಶ್ರೀ ಅಟಲ್ ಜೀಯವರ ಸರ್ಕಾರವನ್ನು ಕೇವಲ ಒಂದು ಮತದಿಂದ ಸೋಲಿಸಿದ ಸದನವಾಗಿದೆ ಮತ್ತು ಇದು ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಿತು; ಇದು ಕೂಡ ಈ ಸದನದಲ್ಲಿ ನಡೆದಿದೆ. ಇಂದು, ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಅನೇಕ ಸಣ್ಣ ಪ್ರಾದೇಶಿಕ ಪಕ್ಷಗಳ ಪ್ರಾತಿನಿಧ್ಯವು ನಮ್ಮ ದೇಶದ ವೈವಿಧ್ಯತೆ ಮತ್ತು ಆಕಾಂಕ್ಷೆಗಳಿಗೆ ಆಕರ್ಷಕ ಕೇಂದ್ರವಾಗಿದೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ದೇಶದಲ್ಲಿ ಇಬ್ಬರು ಪ್ರಧಾನಮಂತ್ರಿಗಳಾದ ಶ್ರೀ ಮೊರಾರ್ಜಿ ದೇಸಾಯಿ ಮತ್ತು ಶ್ರೀ ವಿ.ಪಿ. ಸಿಂಗ್ ಅವರು ತಮ್ಮ ಜೀವನವನ್ನು ಕಾಂಗ್ರೆಸ್ನಲ್ಲಿ ಕಳೆದರು, ಆದರೆ ಕಾಂಗ್ರೆಸ್ ವಿರೋಧಿ ಸರ್ಕಾರಗಳನ್ನು ಮುನ್ನಡೆಸಿದರು. ಇದು ಅದರ ವಿಶಿಷ್ಟತೆಯೂ ಆಗಿತ್ತು. ಮತ್ತು ಊರಿಗೆ ಮರಳಲು ತಯಾರಿ ನಡೆಸುತ್ತಿದ್ದ ನಮ್ಮ ಶ್ರೀ ನರಸಿಂಹರಾವ್ ಜೀ ಅವರನ್ನು ಪ್ರಧಾನಮಂತ್ರಿಯಾಗಿ ನೋಡಿ ಆನಂತರವೇ ನಿವೃತ್ತಿ ಘೋಷಿಸಿದ್ದರು, ಆದರೆ ಇದು ಪ್ರಜಾಪ್ರಭುತ್ವದ ಶಕ್ತಿ, ಅವರು 5 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಪ್ರತಿಯೊಬ್ಬರ ಒಮ್ಮತದಿಂದ ಅತ್ಯಂತ ಸವಾಲಿನ ಕೆಲಸಗಳನ್ನು ಸಹ ಸಾಧಿಸಬಹುದು ಎಂದು ನಾವು ನೋಡಿದ್ದೇವೆ. 2000ನೇ ಇಸವಿಯಲ್ಲಿ, ಶ್ರೀ ಅಟಲ್ ಜೀಯವರ ಸರ್ಕಾರದ ಅವಧಿಯಲ್ಲಿ, ಈ ಸದನವು ಮೂರು ಹೊಸ ರಾಜ್ಯಗಳ ರಚನೆಯನ್ನು ಅತ್ಯಂತ ಉತ್ಸಾಹದಿಂದ ಅಂಗೀಕರಿಸಿತು. ಛತ್ತೀಸ್ಗಢ ರಚನೆಯಾದಾಗ, ಇದನ್ನು ಛತ್ತೀಸ್ಗಢ ಮತ್ತು ಮಧ್ಯಪ್ರದೇಶ ಎರಡೂ ಆಚರಿಸಿದವು. ಉತ್ತರಾಖಂಡ್ ರೂಪುಗೊಂಡಾಗ, ಇದನ್ನು ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಎರಡೂ ಆಚರಿಸಿದವು. ಜಾರ್ಖಂಡ್ ರಚನೆಯಾದಾಗ, ಇದನ್ನು ಬಿಹಾರ ಮತ್ತು ಜಾರ್ಖಂಡ್ ಎರಡೂ ಆಚರಿಸಿದವು. ಇದು ಒಮ್ಮತ ಮತ್ತು ಸಂಭ್ರಮದ ವಾತಾವರಣವನ್ನು ಸೃಷ್ಟಿಸುವ ನಮ್ಮ ಸದನದ ಸಾಮರ್ಥ್ಯವಾಗಿದೆ. ಆದರೆ ಕೆಲವು ಕಹಿ ನೆನಪುಗಳೂ ಇವೆ. ತೆಲಂಗಾಣದ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದವು, ರಕ್ತವೂ ಹರಿದಿತ್ತು. ಈಗ ಅದು ರಚನೆಯಾದ ನಂತರ ತೆಲಂಗಾಣ ಅಥವಾ ಆಂಧ್ರಪ್ರದೇಶಗಳು ರಾಜ್ಯ ರಚನೆಯನ್ನು ಆಚರಿಸಲು ಸಾಧ್ಯವಾಗಲಿಲ್ಲ. ಕಹಿಯ ಬೀಜಗಳನ್ನು ಬಿತ್ತಲಾಯಿತು. ಅದೇ ಉತ್ಸಾಹ ಮತ್ತು ಸಂಭ್ರಮದಿಂದ ತೆಲಂಗಾಣ ರಚನೆ ಮಾಡಿದ್ದರೆ ಚೆನ್ನಾಗಿತ್ತು ಮತ್ತು ಅದು ಇಂದು ಉನ್ನತಿಯ ಹೊಸ ಉತ್ತುಂಗಕ್ಕೇರುತ್ತಿತ್ತು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಈ ಸದನದ ಸಂಪ್ರದಾಯವೆಂದರೆ ಅಂದಿನ ಸಂವಿಧಾನ ಸಭೆಯ ಸದಸ್ಯರು ತಮ್ಮ ದೈನಂದಿನ ಭತ್ಯೆಯನ್ನು 45 ರೂಪಾಯಿಗಳಿಂದ 40 ರೂಪಾಯಿಗಳಿಗೆ ಇಳಿಸಿದರು ಏಕೆಂದರೆ ಅದನ್ನು ನಾವು ಕಡಿಮೆ ಮಾಡಬೇಕು ಎಂದು ಅವರು ಭಾವಿಸಿದರು.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಇದೇ ಸದನದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಆಹಾರ ನೀಡುತ್ತಿದ್ದ ಕ್ಯಾಂಟೀನ್ನಲ್ಲಿ ನೀಡುತ್ತಿದ್ದ ಸಬ್ಸಿಡಿಯನ್ನು ಸದಸ್ಯರು ಸ್ಥಗಿತಗೊಳಿಸಿದ್ದಾರೆ. ಈಗ ಪೂರ್ತಿ ಹಣ ಕೊಟ್ಟು ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಾರೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ, 

ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಅಗತ್ಯವಿದ್ದಾಗ, ಈ ಸಂಸತ್ತಿನ ಸದಸ್ಯರು ತಮ್ಮ ಎಂ.ಪಿ.ಎಲ್.ಎ.ಡಿ.ಎಸ್.(ಎಂಪಿಲ್ಯಾಡ್ಸ್ - ಸಂಸತ್ತಿನ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ) ನಿಧಿಯನ್ನು ಬಿಟ್ಟುಕೊಟ್ಟರು ಮತ್ತು ಈ ಬಿಕ್ಕಟ್ಟಿನಲ್ಲಿ ದೇಶಕ್ಕೆ ಸಹಾಯ ಮಾಡಲು ಮುಂದೆ ಬಂದರು. ಅಷ್ಟೇ ಅಲ್ಲ, ಕರೋನಾ ಅವಧಿಯಲ್ಲಿ, ಈ ಸದನದ ಸಂಸದರು ಸ್ವಯಂಪ್ರೇರಣೆಯಿಂದ ತಮ್ಮ ಸಂಬಳದಲ್ಲಿ 30% ಕಡಿತಗೊಳಿಸಿದರು ಮತ್ತು ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ನಾವು ಹೆಮ್ಮೆಯಿಂದ ಹೇಳಬಹುದು ಮತ್ತು ಈ ಸದನದಲ್ಲಿ ಕುಳಿತವರು ಸಹ ಹೇಳಬಹುದು, ಮತ್ತು ಹಿಂದಿನ ಅಧಿವೇಶನಗಳ ಭಾಗವಾಗಿದ್ದವರು ಸಹ ಇಲ್ಲಿ ಶಿಸ್ತು ತಂದವರು, ನಮ್ಮ ಪ್ರಾತಿನಿಧ್ಯ ಕಾನೂನುಗಳಲ್ಲಿ ಕಟ್ಟುನಿಟ್ಟನ್ನು ಜಾರಿಗೊಳಿಸಿದವರು, ನಿಯಮಗಳನ್ನು ರೂಪಿಸಿದವರು ಮತ್ತು ಒಬ್ಬ ಪ್ರತಿನಿಧಿಯ ಜೀವನದಲ್ಲಿ ಕೆಲವು ವಿಷಯಗಳು ಸಂಭವಿಸುವುದಿಲ್ಲ ಎಂದು ನಿರ್ಧರಿಸಿದವರು. ಈ ಸದನವು ನೀಡಿದ ರೋಮಾಂಚಕ ಪ್ರಜಾಪ್ರಭುತ್ವಕ್ಕೆ ಇದು ಉತ್ತಮ ಉದಾಹರಣೆ ಎಂದು ನಾನು ನಂಬುತ್ತೇನೆ. ಗೌರವಾನ್ವಿತ ಸಂಸತ್ತಿನ ಸದಸ್ಯರು ಮತ್ತು ನಮ್ಮ ಹಿಂದಿನ ಪೀಳಿಗೆಯ ಸಂಸದರು ಇದಕ್ಕೆ ಉದಾಹರಣೆಯಾಗಿದ್ದಾರೆ. ಕೆಲವೊಮ್ಮೆ ನಾವು ಆ ವಿಷಯಗಳನ್ನು ನೆನಪಿಸಿಕೊಳ್ಳಬೇಕು ಎಂದು ನಾನು ನಂಬುತ್ತೇನೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಪ್ರಸ್ತುತ ಸಂಸತ್ತಿನ ಸದಸ್ಯರಾಗಿರುವ ನಮ್ಮಂತಹವರಿಗೆ ಇದು ನಿಜಕ್ಕೂ ವಿಶೇಷ ಅವಕಾಶ. ಇದು ವಿಶೇಷ ಅವಕಾಶವಾಗಿದೆ ಏಕೆಂದರೆ ನಾವು ಇತಿಹಾಸ ಮತ್ತು ಭವಿಷ್ಯದ ಭಾಗವಾಗಲು ಅವಕಾಶವಿದೆ. ಹಿಂದಿನ ಮತ್ತು ಪ್ರಸ್ತುತ ಎರಡನ್ನೂ ಸಂಪರ್ಕಿಸಲು ನಮಗೆ ಅವಕಾಶವಿದೆ. ಹೊಸ ನಂಬಿಕೆ, ಹೊಸ ಉತ್ಸಾಹ ಮತ್ತು ಹೊಸ ಶಕ್ತಿಯೊಂದಿಗೆ, ನಾವು ಇಲ್ಲಿಂದ ವಿದಾಯ ಹೇಳುತ್ತೇವೆ, ಭವಿಷ್ಯವನ್ನು ನಿರ್ಮಿಸಲು ಸಿದ್ಧರಾಗಿದ್ದೇವೆ.

ಸನ್ಮಾನ್ಯ ಗೌರವಾನ್ವಿತ ಸಭಾಧ್ಯಕ್ಷರೇ,

ಇಂದಿನ ದಿನವು ಈ ಸದನದ ಏಳೂವರೆ ಸಾವಿರ ಸದಸ್ಯರಿಗೆ ಮಾತ್ರ ಸೇರಿದೆ. ಇದು ಅವರ ಸುಪ್ರಸಿದ್ಧ ಪಯಣದ ಒಂದು ಪುಟ. ನಾವು ಈ ಗೋಡೆಗಳಿಂದ ಸ್ಫೂರ್ತಿ ಪಡೆಯುತ್ತೇವೆ ಮತ್ತು ಭವಿಷ್ಯವನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಈ ಸದನದೊಳಗಿನ ಅನೇಕ ವಿಷಯಗಳು ಪ್ರತಿಯೊಬ್ಬ ಸದಸ್ಯರ ಮೆಚ್ಚುಗೆಗೆ ಅರ್ಹವಾಗಿವೆ, ಆದರೂ ರಾಜಕೀಯವು ಅಲ್ಲಿಯೂ ಅತಿಕ್ರಮಿಸುತ್ತಿದೆ. ನೆಹರೂ ಅವರ ಕೊಡುಗೆಗಳ ಹೆಮ್ಮೆಯನ್ನು ಈ ಸದನದಲ್ಲಿ ಗುರುತಿಸಿದರೆ, ಚಪ್ಪಾಳೆ ತಟ್ಟಲು ಯಾರಿಗೆ ಅನಿಸುವುದಿಲ್ಲ? ಅದೇನೇ ಇದ್ದರೂ, ಸಭಾಧ್ಯಕ್ಷರ ಮಾರ್ಗದರ್ಶನದಲ್ಲಿ ಮತ್ತು ಈ ಅನುಭವಿ ಸಂಸದರ ಸಾಮರ್ಥ್ಯದೊಂದಿಗೆ ನಾವು ಹೊಸ ವಿಶ್ವಾಸದೊಂದಿಗೆ ಹೊಸ ಸಂಸತ್ತಿಗೆ ಪ್ರವೇಶಿಸುವುದು ದೇಶದ ಪ್ರಜಾಪ್ರಭುತ್ವದ ಅಭ್ಯುದಯಕ್ಕೆ ಅತ್ಯಗತ್ಯ.

ಈ ಹಳೆಯ ನೆನಪುಗಳನ್ನು ಮನನ ಮಾಡಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ಮತ್ತು ಅಂತಹ ಉತ್ತಮ ವಾತಾವರಣದಲ್ಲಿ ಪ್ರತಿಯೊಬ್ಬರನ್ನು ನೆನಪಿಸಿಕೊಂಡಿದ್ದಕ್ಕಾಗಿ ನಾನು ಮತ್ತೊಮ್ಮೆ ನಿಮಗೆಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಎಲ್ಲಾ ಸದಸ್ಯರು ತಮ್ಮ ಜೀವನದ ಇಂತಹ ಅಚ್ಚುಮೆಚ್ಚಿನ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ.  ನಮ್ಮ ಪ್ರತಿನಿಧಿಗಳು ರಾಷ್ಟ್ರಕ್ಕೆ ಪ್ರಾಮಾಣಿಕವಾಗಿ ಬದ್ಧರಾಗಿದ್ದಾರೆ. ಈ ಭಾವನೆಯೊಂದಿಗೆ ಮತ್ತೊಮ್ಮೆ ಈ ನೆಲಕ್ಕೆ, ಈ ಸದನಕ್ಕೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಭರತದ ಶ್ರಮಜೀವಿಗಳ ಬೆವರಿನಿಂದ ನಿರ್ಮಾಣವಾಗಿರುವ ಈ ಕಟ್ಟಡದ ಪ್ರತಿ ಇಟ್ಟಿಗೆಗೂ ತಲೆಬಾಗುತ್ತೇನೆ. ಕಳೆದ 75 ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಹೊಸ ಶಕ್ತಿ ಮತ್ತು ಶಕ್ತಿಯ ರೂಪವನ್ನು ನೀಡಿದ ಪ್ರತಿಯೊಬ್ಬ ಶಿಕ್ಷಕರಿಗೆ ಮತ್ತು ಆ ವಿಶ್ವಶಕ್ತಿಗೆ ನಾನು ವಂದಿಸುತ್ತೇನೆ. ಇದರೊಂದಿಗೆ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ತುಂಬ ಧನ್ಯವಾದಗಳು. 

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻🙏🏻
  • ज्योती चंद्रकांत मारकडे February 11, 2024

    जय हो
  • Uma tyagi bjp January 28, 2024

    जय श्री राम
  • Pankaj kumar singh January 05, 2024

    🙏🙏
  • Babla sengupta December 23, 2023

    Babla sengupta
  • bhaskar sen October 21, 2023

    It's an Epic journey of India 's phenomenal parliamentary history that crossed quarter 🌜 of a century , when our beloved prime minister bestrides the Lok sabha with his momentous speeches reverberating the House whose words will echo and re echo through the corridors of time . it's our honourable prime minister whose vision extends beyond all pathways and carves a haloed niche in the HALL OF FAME . JAI MODIJI Bhaskar Sen +919330790350 mail : senbhskr2006@gmail.com ( honourable sir I sent an urgent mail to you Last night 🌉) 😔
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi Distributes Over 51,000 Appointment Letters At 15th Rozgar Mela

Media Coverage

PM Modi Distributes Over 51,000 Appointment Letters At 15th Rozgar Mela
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in an accident in Mandsaur, Madhya Pradesh
April 27, 2025
QuotePM announces ex-gratia from PMNRF

Prime Minister, Shri Narendra Modi, today condoled the loss of lives in an accident in Mandsaur, Madhya Pradesh. He announced an ex-gratia of Rs. 2 lakh from PMNRF for the next of kin of each deceased and Rs. 50,000 to the injured.

The Prime Minister's Office posted on X :

"Saddened by the loss of lives in an accident in Mandsaur, Madhya Pradesh. Condolences to those who have lost their loved ones. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi"