ಮಹಾರಾಷ್ಟ್ರದಲ್ಲಿ ʻಪಿಎಂಎವೈ-ನಗರʼ ಯೋಜನೆಯಡಿ ಪೂರ್ಣಗೊಂಡ 90,000ಕ್ಕೂ ಹೆಚ್ಚು ಮನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
ಸೋಲಾಪುರದ ರಾಯನಗರ ಹೌಸಿಂಗ್ ಸೊಸೈಟಿಯ 15,000 ಮನೆಗಳನ್ನು ಸಮರ್ಪಿಸಿದರು
ʻಪಿಎಂ-ಸ್ವನಿಧಿʼ ಯೋಜನೆಯ 10,000 ಫಲಾನುಭವಿಗಳಿಗೆ 1 ಮತ್ತು 2ನೇ ಕಂತುಗಳ ವಿತರಣೆಗೆ ಚಾಲನೆ
“ಶ್ರೀ ರಾಮನ ಆದರ್ಶಗಳನ್ನು ಅನುಸರಿಸುವ ಮೂಲಕ ದೇಶದಲ್ಲಿ ಉತ್ತಮ ಆಡಳಿತ ಹಾಗೂ ಪ್ರಾಮಾಣಿಕತೆ ನೆಲೆಗೊಳ್ಳುವುದನ್ನು ಖಾತರಿಪಡಿಸಲು ನಮ್ಮ ಸರ್ಕಾರ ಮೊದಲ ದಿನದಿಂದಲೂ ಪ್ರಯತ್ನಿಸುತ್ತಿದೆ"
"ಸಾವಿರಾರು ಕುಟುಂಬಗಳ ಕನಸುಗಳು ಸಾಕಾರಗೊಂಡಾಗ ಮತ್ತು ಅವರ ಆಶೀರ್ವಾದವೇ ನನಗೆ ದೊಡ್ಡ ಶ್ರೀಮಂತಿಕೆಯಾದಾಗ ಅದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ"
"ಜನವರಿ 22 ರಂದು ಬೆಳಗಲಿರುವ ʻರಾಮ ಜ್ಯೋತಿʼಯು ಬಡತನದ ಕತ್ತಲೆಯನ್ನು ಹೋಗಲಾಡಿಸಲು ಸ್ಫೂರ್ತಿಯಾಗಲಿದೆ"
'ಕಾರ್ಮಿಕರ ಘನತೆ', 'ಸ್ವಾವಲಂಬಿ ಕಾರ್ಮಿಕ' ಮತ್ತು 'ಬಡವರ ಕಲ್ಯಾಣ'ವು ಸರ್ಕಾರದ ಮಾರ್ಗವಾಗಿದೆ: ಪ್ರಧಾನಿ
"ಬಡವರಿಗೆ ಶಾಶ್ವತ ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ, ನೀರು ಸಿಗಬೇಕು; ಅಂತಹ ಎಲ್ಲಾ ಸೌಲಭ್ಯಗಳು ಸಾಮಾಜಿಕ ನ್ಯಾಯದ ಖಾತರಿ ಒದಗಿಸುತ್ತವೆ"

ಮಹಾರಾಷ್ಟ್ರ ರಾಜ್ಯಪಾಲರಾದ ಶ್ರೀ ರಮೇಶ್ ಬೈನ್ಸ್ ಜಿ, ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜಿ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಜಿ ಮತ್ತು ಅಜಿತ್ ದಾದಾ ಪವಾರ್ ಜಿ, ಮಹಾರಾಷ್ಟ್ರ ಸರ್ಕಾರದ ಸಚಿವರೆ, ಜನಪ್ರತಿನಿಧಿಗಳೆ, ಶ್ರೀ ನರಸಯ್ಯ ಆದಮ್ ಜಿ, ಮತ್ತು ಸೊಲ್ಲಾಪುರದ,ಸಹೋದರ ಸಹೋದರಿಯರೆ,

ನಮಸ್ಕಾರ!

ನಾನು ಪಂಢರಪುರದ ವಿಠ್ಠಲ ಮತ್ತು ಸಿದ್ಧೇಶ್ವರ ಮಹಾರಾಜರಿಗೆ ನಮಸ್ಕರಿಸುತ್ತೇನೆ. ಈ ಕಾಲವು ನಮಗೆಲ್ಲರಿಗೂ ಭಕ್ತಿಯ ಪರಕಾಷ್ಠೆಯಿಂದ ತುಂಬಿದೆ. ಜನವರಿ 22ರಂದು ನಮ್ಮ ಭಗವಾನ್ ಶ್ರೀರಾಮನು ತನ್ನ ಭವ್ಯವಾದ ದೇವಾಲಯದಲ್ಲಿ ನೆಲೆನಿಲ್ಲುವ ಐತಿಹಾಸಿಕ ಕ್ಷಣ ಸಮೀಪಿಸುತ್ತಿದೆ. ಡೇರೆಯಲ್ಲಿ ನಮ್ಮ ಪೂಜ್ಯ ದೇವರ ದರ್ಶನ ಪಡೆದ ದಶಕಗಳ ಹಿಂದಿನ ನೋವು ಇದೀಗ ಕೊನೆಗೊಳ್ಳುತ್ತಿದೆ.

ಕೆಲವು ಸಂತರ ಮಾರ್ಗದರ್ಶನದಿಂದ ನಾನು ನನ್ನ ನಡವಳಿಕೆಯನ್ನು ಬಹುಶ್ರದ್ಧೆಯಿಂದ ಅನುಸರಿಸುತ್ತಿದ್ದೇನೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ಮೊದಲು ನನ್ನ ಸಂಕಲ್ಪ ಮತ್ತು ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ನಿಮ್ಮ ಆಶೀರ್ವಾದದೊಂದಿಗೆ ಈ 11 ದಿನಗಳಲ್ಲಿ ಈ ಆಧ್ಯಾತ್ಮಿಕ ಅಭ್ಯಾಸವನ್ನು ಯಶಸ್ವಿಯಾಗಿ ಕೈಗೊಳ್ಳಲು ನಾನು ಆಶಿಸುತ್ತೇನೆ. ಇದರಲ್ಲಿ ನಾನು ಯಾವುದೇ ಅಂಶದಲ್ಲಿ ಕೊರತೆ ತೋರುವುದಿಲ್ಲ. ಈ ಪವಿತ್ರ ಕಾರ್ಯದಲ್ಲಿ ನಾನು ಭಾಗವಹಿಸುವ ಅವಕಾಶವು ನಿಮ್ಮೆಲ್ಲರ ಆಶೀರ್ವಾದಕ್ಕೆ ಸಾಕ್ಷಿಯಾಗಿದೆ, ನಾನು ಆಳವಾದ ಕೃತಜ್ಞತಾ ಭಾವದಿಂದ ಅಲ್ಲಿಗೆ ಹೋಗುತ್ತೇನೆ.

 

ಸ್ನೇಹಿತರೆ,

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪಂಚವಟಿ ಭೂಮಿಯಿಂದ ನನ್ನ ಆಚರಣೆಯ ಆರಂಭ ಆಗುತ್ತಿರುವುದು ಕಾಕತಾಳೀಯ ಸಂದರ್ಭವಾಗಿದೆ. ಭಗವಾನ್ ಶ್ರೀರಾಮನ ಭಕ್ತಿಯಿಂದ ತುಂಬಿದ ಈ ವಾತಾವರಣದಲ್ಲಿ ಇಂದು, ಮಹಾರಾಷ್ಟ್ರದ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಮನೆಗಳನ್ನು ಪ್ರವೇಶಿಸುತ್ತಿವೆ. ಈಗ ಹೇಳಿ, ನನ್ನ ಸಂತೋಷವು ಹಲವಾರು ಪಟ್ಟು ಹೆಚ್ಚಾಗುತ್ತದೆಯೇ ಅಥವಾ ಇಲ್ಲವೋ? ನಿಮ್ಮ ಸಂತೋಷಗಳು ಹೆಚ್ಚಾಗುತ್ತವೆಯೇ ಅಥವಾ ಇಲ್ಲವೇ? ಮಹಾರಾಷ್ಟ್ರದ ಈ 1 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳು ಜನವರಿ 22ರಂದು ತಮ್ಮ ಮನೆಗಳಲ್ಲಿ ರಾಮಜ್ಯೋತಿ (ದೀಪ) ಬೆಳಗಿಸುವುದು ನನಗೆ ತುಂಬಾ ಸಂತೋಷವಾಗಿದೆ. ಎಲ್ಲರೂ ಸಂಜೆ ರಾಮಜ್ಯೋತಿ ಬೆಳಗುತ್ತೀರಾ ತಾನೆ? ನೀವು ಅದನ್ನು ಭಾರತದಾದ್ಯಂತ ಮಾಡುತ್ತೀರಾ?

ಈಗ, ಭಗವಾನ್ ಶ್ರೀರಾಮನ ಹೆಸರಿನಲ್ಲಿ ನಿಮ್ಮ ಮೊಬೈಲ್ ಫೋನ್‌ಗಳ ಬ್ಯಾಟರಿ ದೀಪವನ್ನು ಆನ್ ಮಾಡಿ ಮತ್ತು ರಾಮ ಜ್ಯೋತಿಯನ್ನು ಬೆಳಗಿಸುವ ಪ್ರತಿಜ್ಞೆ ತೆಗೆದುಕೊಳ್ಳಿ. ನಿಮ್ಮ ಎಲ್ಲಾ ಮೊಬೈಲ್ ಫೋನ್‌ಗಳ ಬ್ಯಾಟರಿ ದೀಪವನ್ನು ಆನ್ ಮಾಡಿ... ಎಲ್ಲರೂ. ಕೈಯಲ್ಲಿ ಮೊಬೈಲ್ ಇರುವವರು... ದೂರದಲ್ಲಿರುವವರೂ. ಇಷ್ಟು ದೊಡ್ಡ ಸಂಖ್ಯೆಯ ಜನರು ಇಲ್ಲಿ ಸೇರುತ್ತಾರೆ ಎಂದು ನಾನು ಯೋಚಿಸಿರಲಿಲ್ಲ. ಬ್ಯಾಟರಿ ಆನ್ ಆಗಿರುವುದರಿಂದ ಜನಸಂದಣಿ ತುಂಬಾ ಗೋಚರಿಸುತ್ತಿದೆ. ಜ.22ರ ಸಂಜೆ ರಾಮಜ್ಯೋತಿ ಬೆಳಗಿಸುತ್ತೇನೆ ಎಂದು ಕೈ ಎತ್ತಿ ಹೇಳಿದ್ದೀರಾ... ತುಂಬಾ ಚೆನ್ನಾಗಿದೆ!

ಇಂದು ಮಹಾರಾಷ್ಟ್ರದ ವಿವಿಧ ನಗರಗಳಿಗೆ 2,000 ಕೋಟಿ ರೂಪಾಯಿ ಮೌಲ್ಯದ 7 ಅಮೃತ್ ಯೋಜನೆಗಳ ಉದ್ಘಾಟನೆಯೂ ನಡೆದಿದೆ. ಸೊಲ್ಲಾಪುರದ ನಿವಾಸಿಗಳಿಗೆ ಮತ್ತು ಮಹಾರಾಷ್ಟ್ರದಲ್ಲಿರುವ ನನ್ನ ಸಹೋದರ ಸಹೋದರಿಯರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಮಾನ್ಯ ಮುಖ್ಯಮಂತ್ರಿಗಳ ಮಾತನ್ನು ಕೇಳುತ್ತಿದ್ದೆ. ಪ್ರಧಾನಿ ಮೋದಿ ಅವರಿಂದ ಮಹಾರಾಷ್ಟ್ರದ ಹೆಮ್ಮೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಅವರು ಉಲ್ಲೇಖಿಸಿದರು. ಶ್ರೀ ಶಿಂಧೆ ಅವರೆ, ಇದನ್ನು ಕೇಳಲು ನನಗೆ ಸಂತೋಷವಾಗುತ್ತಿದೆ. ರಾಜಕಾರಣಿಗಳು ಇಂತಹ ಹೇಳಿಕೆಗಳ ಮೂಲಕ ವಿಶೇಷವಾಗಿ ಪ್ರಶಂಸಿಸುತ್ತಾರೆ. ಆದರೆ, ಮಹಾರಾಷ್ಟ್ರದ ಹೆಸರು ಬೆಳಗುತ್ತಿರುವುದು ಮಹಾರಾಷ್ಟ್ರದ ಜನತೆ ಹಾಗೂ ನಿಮ್ಮಂತಹ ಪ್ರಗತಿಪರ ಸರಕಾರದಿಂದ ಎಂಬುದೇ ಸತ್ಯ. ಆದ್ದರಿಂದ, ಇಡೀ ಮಹಾರಾಷ್ಟ್ರ ಅಭಿನಂದನೆಗೆ ಅರ್ಹವಾಗಿದೆ.

ಸ್ನೇಹಿತರೆ,

ಭಗವಾನ್ ಶ್ರೀರಾಮನು ಯಾವಾಗಲೂ ನಮ್ಮ ಭರವಸೆಗಳ ತತ್ವಗಳನ್ನು ಎತ್ತಿಹಿಡಿಯಲು ನಮಗೆ ಕಲಿಸಿದ್ದಾನೆ. ಸೊಲ್ಲಾಪುರದ ಸಾವಿರಾರು ಬಡವರಿಗಾಗಿ, ಸಾವಿರಾರು ಸಹೋದ್ಯೋಗಿಗಳಿಗಾಗಿ ನಾವು ಮಾಡಿದ ಸಂಕಲ್ಪ ಈಗ ಕಾರ್ಯರೂಪಕ್ಕೆ ಬರುತ್ತಿರುವುದು ನನಗೆ ಸಂತಸ ತಂದಿದೆ. ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ದೇಶದ ಅತಿ ದೊಡ್ಡ ಸೊಸೈಟಿಯ ಉದ್ಘಾಟನೆ ನೆರವೇರಿದೆ. ಅದನ್ನು ನೋಡಿದ ಮೇಲೆ ನನಗೂ ಅನಿಸಿತು. ‘‘ಬಾಲ್ಯದಲ್ಲಿ ಇಂಥ ಮನೆಯಲ್ಲಿ ಬದುಕುವ ಅವಕಾಶ ನನಗೆಸಿಕ್ಕಿದ್ದರೆ ಹೇಗಿರುತ್ತಿತ್ತು ಎಂದು’’. ಈ ವಿಷಯಗಳನ್ನು ನೋಡಿದಾಗ ಹೃದಯ ತುಂಬಿ ಹೋಗುತ್ತಿದೆ. ಸಾವಿರಾರು ಕುಟುಂಬಗಳ ಕನಸುಗಳು ಸಾಕಾರಗೊಂಡಾಗ ಅವರ ಆಶೀರ್ವಾದವೇ ನನ್ನ ದೊಡ್ಡ ಆಸ್ತಿ. ಈ ಯೋಜನೆಗೆ ಶಂಕುಸ್ಥಾಪನೆ ಮಾಡಲು ಬಂದಾಗ ನಿಮ್ಮ ಮನೆಗಳ ಕೀಲಿಕೈ ಕೊಡಲು ನಾನೇ ಖುದ್ದಾಗಿ ಬರುತ್ತೇನೆ ಎಂದು ಭರವಸೆ ನೀಡಿದ್ದೆ. ಇಂದು ಈ ಭರವಸೆಯನ್ನು ಮೋದಿ ಈಡೇರಿಸಿದ್ದಾರೆ. ಮೋದಿ ಅವರ ಗ್ಯಾರಂಟಿ ಎಂದರೆ ಈಡೇರುವ ಗ್ಯಾರಂಟಿ ಎಂಬುದು ನಿಮಗೆ ಗೊತ್ತೇ ಇದೆ. ಅರ್ಥಾತ್ ಮೋದಿ ಅವರ ಗ್ಯಾರಂಟಿ ಎಂದರೆ ಈಡೇರುವ ಸಂಪೂರ್ಣ ಗ್ಯಾರಂಟಿ.

 

ಈಗ ಲಕ್ಷಾಂತರ ರೂಪಾಯಿ ಮೌಲ್ಯದ ಈ ಮನೆಗಳು ನಿಮ್ಮ ಸ್ವಂತ ಆಸ್ತಿಯಾಗಿವೆ. ಇಂದು ಈ ಮನೆಗಳನ್ನು ಪಡೆದ ನಿರಾಶ್ರಿತ ಕುಟುಂಬಗಳ ತಲೆ ತಲೆಮಾರುಗಳ ಲೆಕ್ಕವಿಲ್ಲದಷ್ಟು ಕಷ್ಟಗಳು ನನಗೆ ತಿಳಿದಿವೆ. ಈ ಮನೆಗಳೊಂದಿಗೆ, ಕಷ್ಟಗಳ ಸಂಕೋಲೆ ಕಳಚಿ ಹೋಗುತ್ತದೆ. ನಿಮ್ಮ ಮಕ್ಕಳು ನೀವು ಅನುಭವಿಸಿದ ಸಂಕಷ್ಟ ಮತ್ತು ಹೋರಾಟಗಳಿಗೆ ಸಾಕ್ಷಿಯಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಜನವರಿ 22 ರಂದು ನೀವು ಬೆಳಗಿಸುವ ರಾಮ ಜ್ಯೋತಿಯು ನಿಮ್ಮ ಎಲ್ಲಾ ಜೀವನದಿಂದ ಬಡತನದ ಕತ್ತಲೆಯನ್ನು ಹೋಗಲಾಡಿಸಲು ಪ್ರೇರೇಪಿಸುತ್ತದೆ. ನಿಮ್ಮ ಜೀವನವು ಸಂತೋಷದಿಂದ ತುಂಬಿರಲಿ ಎಂದು ನಾನು ಭಗವಾನ್ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ.

ನಾನು ರಾಮ್ ಜಿ ಅವರ ಅದ್ಭುತವಾದ ಭಾಷಣ ಕೇಳಿ ನನಗೆ ತುಂಬಾ ಸಂತೋಷವಾಗಿದೆ. 2019ರಲ್ಲಿ ನಾನು ನಿಮ್ಮನ್ನು ಭೇಟಿಯಾದಾಗ, ನೀವು ತುಂಬಾ ತೆಳ್ಳಗಾಗಿದ್ದೀರಿ. ಈಗ ನಿಮ್ಮನ್ನು ನೋಡಿ, ಯಶಸ್ಸಿನ ಫಲವನ್ನು ಅನುಭವಿಸಿದ ನಂತರ ಗಮನಾರ್ಹ ತೂಕ ಸೇರಿಸಿದೆ. ಇದು ಸಹ ಮೋದಿ ಅವರ ಭರವಸೆಯ ಫಲಿತಾಂಶವಾಗಿದೆ. ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನೀವು ಈ ಮನೆಗಳನ್ನು ಸ್ವೀಕರಿಸುತ್ತಿರುವಾಗ ಮತ್ತು ಜೀವನದ ಹೊಸ ಹಂತವನ್ನು ಪ್ರಾರಂಭಿಸುತ್ತಿರುವಾಗ, ನಿಮ್ಮ ಜೀವನವು ಸಂತೋಷದಿಂದ ತುಂಬಿರಲಿ ಮತ್ತು ಅದು ಭಗವಾನ್ ಶ್ರೀರಾಮನ ಹಾರೈಕೆಯೂ ಆಗಿದೆ.

ನನ್ನ ಕುಟುಂಬದ ಸದಸ್ಯರೆ,

ನಮ್ಮ ಸರ್ಕಾರವು ದೇಶದಲ್ಲಿ ಉತ್ತಮ ಆಡಳಿತ ಸ್ಥಾಪಿಸಲು ಮತ್ತು ಭಗವಾನ್ ಶ್ರೀರಾಮನ ಆದರ್ಶಗಳನ್ನು ಅನುಸರಿಸಿ ಪ್ರಾಮಾಣಿಕತೆಯ ಆಡಳಿತ ನೀಡಲು ಪಿಸಲು ಮೊದಲ ದಿನದಿಂದಲೂ ಶ್ರಮಿಸುತ್ತಿದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಮತ್ತು ಸಬ್ಕಾ ಪ್ರಯಾಸ್' ಹಿಂದೆ ಸ್ಫೂರ್ತಿಯಾಗಿರುವ ರಾಮರಾಜ್ಯ ಇದು. ಸಂತ ತುಳಸಿದಾಸರು ರಾಮಚರಿತಮಾನಸದಲ್ಲಿ ಹೇಳುತ್ತಾರೆ:

ಜೇಹಿ ವಿಧಿ ಸುಖೀ ಹೋಹಿಂ ಪುರ ಲೋಗಾ. ಕರಹಿಂ ಕೃಪಾನಿಧಿ ಸೋಯಿ ಸಂಜೋಗಾ ।।

ಅರ್ಥ, ಭಗವಾನ್ ಶ್ರೀರಾಮನು ಜನರನ್ನು ಸಂತೋಷಪಡಿಸುವ ರೀತಿಯಲ್ಲಿ ಕೆಲಸ ಮಾಡಿದನು. ಜನರ ಸೇವೆಗೆ ಇದಕ್ಕಿಂತ ದೊಡ್ಡ ಸ್ಫೂರ್ತಿ ಬೇರೇನಿದೆ? ಹೀಗಾಗಿ 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನನ್ನ ಸರ್ಕಾರ ಬಡವರ ಕಲ್ಯಾಣಕ್ಕೆ ಮೀಸಲಾಗಿದೆ ಎಂದು ಹೇಳಿದ್ದೆ. ಹಾಗಾಗಿ, ಬಡವರ ಕಷ್ಟಗಳನ್ನು ಕಡಿಮೆ ಮಾಡಲು ಮತ್ತು ಅವರ ಜೀವನವನ್ನು ಸುಲಭಗೊಳಿಸಲು ನಾವು ಒಂದರ ನಂತರ ಒಂದರಂತೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.

ಸ್ನೇಹಿತರೆ,

ಮನೆ, ಶೌಚಾಲಯ ಇಲ್ಲದ ಕಾರಣ ಬಡವರು ಪ್ರತಿ ಹಂತದಲ್ಲೂ ಅವಮಾನ ಎದುರಿಸುವಂತಾಗಿದೆ. ಇದು ವಿಶೇಷವಾಗಿ ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಗಂಭೀರ ಶಿಕ್ಷೆಯಾಗಿತ್ತು. ಆದ್ದರಿಂದ ನಮ್ಮ ಮೊದಲ ಗಮನ ಬಡವರಿಗೆ ಮನೆ ಮತ್ತು ಶೌಚಾಲಯ ನಿರ್ಮಾಣದತ್ತ ಹೊರಳಿತು. 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿ ಬಡವರಿಗೆ ನೀಡಿದ್ದೇವೆ. ಇವು ಕೇವಲ ಶೌಚಾಲಯಗಳಲ್ಲ, ಇವುಗಳು 'ಇಜ್ಜತ್ ಘರ್'ಗಳು ಮತ್ತು ನಾವು ಗೌರವದ ಭರವಸೆ ನೀಡಿದ್ದೇವೆ, ವಿಶೇಷವಾಗಿ ನನ್ನ ತಾಯಿ ಮತ್ತು ಸಹೋದರಿಯರಿಗೆ.

ಬಡವರಿಗೆ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನೀಡಿದ್ದೇವೆ. ನೀವು ಊಹಿಸಬಹುದು... ಇಲ್ಲಿ ಮನೆಗಳನ್ನು ಪಡೆದವರಿಗೆ ಜೀವನದಲ್ಲಿ ಎಷ್ಟು ತೃಪ್ತಿ ಇದೆ ಎಂದು ಕೇಳಿ. ಇವರು 30 ಸಾವಿರ ಜನರು, ನಾವು 4 ಕೋಟಿಗೂ ಹೆಚ್ಚು ಜನರಿಗೆ ಮನೆಗಳನ್ನು ಒದಗಿಸಿದ್ದೇವೆ... ಅವರ ಜೀವನದಲ್ಲಿ ಎಷ್ಟು ತೃಪ್ತಿ ಇರಬೇಕು. ಸಮಾಜದಲ್ಲಿ 2 ರೀತಿಯ ಆಲೋಚನೆಗಳಿವೆ. ಒಂದು - ನೇರ ರಾಜಕೀಯ ಲಾಭಕ್ಕಾಗಿ ಜನರನ್ನು ಪ್ರಚೋದಿಸುವುದಾದರೆ, ನಮ್ಮ ಕಾರ್ಯವಿಧಾನವು ಕಾರ್ಮಿಕರ ಘನತೆ ಕಾಪಾಡುವುದಾಗಿದೆ. ನಮ್ಮ ಕಾರ್ಯವಿಧಾನವು ಸ್ವಾವಲಂಬಿ ಕಾರ್ಮಿಕರು ಮತ್ತು ಬಡವರ ಕಲ್ಯಾಣವಾಗಿದೆ. ಹೊಸ ಮನೆಗಳಲ್ಲಿ ವಾಸಿಸಲು ಹೊರಟಿರುವವರಿಗೆ ನಾನು ಹೇಳಲು ಬಯಸುತ್ತೇನೆ, ದೊಡ್ಡ ಕನಸು ಕಾಣಿ, ಸಣ್ಣ ಕನಸು ಕಾಣಬೇಡಿ. ನಿಮ್ಮ ಕನಸುಗಳನ್ನು ನನಸಾಗಿಸುವುದು ನನ್ನ ಸಂಕಲ್ಪವಾಗಿದೆ, ಅದುವೇ ಮೋದಿ ಅವರ ಗ್ಯಾರಂಟಿ ಆಗಿದೆ.

 

ಹಿಂದೆ ನಗರಗಳಲ್ಲಿ ಕೊಳೆಗೇರಿಗಳು ನಿರ್ಮಾಣವಾಗುತ್ತಿದ್ದವು, ಇಂದು ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಪಕ್ಕಾ ಮನೆ ನೀಡುವ ಕೆಲಸ ಮಾಡುತ್ತಿದ್ದೇವೆ. ಜೀವನೋಪಾಯಕ್ಕಾಗಿ ಹಳ್ಳಿಗಳಿಂದ ಬರುವ ಜನರು ನಗರಗಳಲ್ಲಿನ ಬಾಡಿಗೆ ಕೊಳೆಗೇರಿಗಳಲ್ಲಿ ವಾಸಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಇಂದು, ನಗರಗಳಲ್ಲಿ ಕಾಲೋನಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಅಂತಹ ಕಾರ್ಮಿಕರಿಗೆ ಸಮಂಜಸವಾದ ಬಾಡಿಗೆಗೆ ಸೂಕ್ತವಾದ ವಸತಿಗಳನ್ನು ಒದಗಿಸುತ್ತೇವೆ. ನಾವು ಬೃಹತ್ ಪ್ರಚಾರ ನಡೆಸುತ್ತಿದ್ದೇವೆ. ಜನರು ಕೆಲಸ ಮಾಡುವ ಪ್ರದೇಶಗಳ ಸುತ್ತ ವಸತಿ ವ್ಯವಸ್ಥೆ ಇರಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ.

ನನ್ನ ಕುಟುಂಬದ ಸದಸ್ಯರೆ,

ನಮ್ಮ ದೇಶದಲ್ಲಿ ಬಹಳ ಕಾಲದಿಂದ ‘ಗರೀಬಿ ಹಟಾವೋ’ (ಬಡತನ ನಿರ್ಮೂಲನೆ) ಘೋಷಣೆಗಳು ಮೊಳಗಿದವು, ಆದರೆ ಈ ಘೋಷಣೆಗಳ ಹೊರತಾಗಿಯೂ, ಬಡತನ ಕಡಿಮೆಯಾಗಲಿಲ್ಲ. "ನಾವು ಅರ್ಧ ರೊಟ್ಟಿ ತಿನ್ನುತ್ತಿದ್ದೇವೆ" ಎಂಬಂತಹ ಹೇಳಿಕೆಗಳು ಮುಂದುವರೆದವು. "ಅರ್ಧ ರೊಟ್ಟಿ ತಿಂದು ನಿಮಗೆ ನಮ್ಮ ವೋಟು ಕೊಡುತ್ತೇವೆ" ಎಂದು ಜನರು ಹೇಳುತ್ತಿದ್ದರು. ಅರ್ಧ ರೊಟ್ಟಿ ಏಕೆ ತಿನ್ನಬೇಕು ಸಹೋದರ? ನೀವು ಪೂರ್ಣ ಊಟ ಮಾಡುವುದನ್ನು ಮೋದಿ ಖಚಿತಪಡಿಸುತ್ತಾರೆ. ಇದು ಜನರ ಕನಸು, ಇದೇ ಸಂಕಲ್ಪ... ಇದೇ ನೋಡಿ ವ್ಯತ್ಯಾಸ.

ಮತ್ತು ಸ್ನೇಹಿತರೆ,

ಸೊಲ್ಲಾಪುರ ಕೂಲಿ ಕಾರ್ಮಿಕರ ನಗರವೇ? ಅಹಮದಾಬಾದ್‌ನಂತೆಯೇ. ಅದೂ ಕಾರ್ಮಿಕರ ನಗರ, ನಿರ್ದಿಷ್ಟವಾಗಿ ಜವಳಿ ಕಾರ್ಮಿಕರ ನಗರ. ಅಹಮದಾಬಾದ್ ಮತ್ತು ಸೊಲ್ಲಾಪುರ ನಡುವೆ ಅಂತಹ ನಿಕಟ ಸಂಪರ್ಕವಿದೆ. ನನಗೆ ಸೊಲ್ಲಾಪುರದೊಂದಿಗಿನ ಸಂಪರ್ಕವು ಇನ್ನೂ ಹತ್ತಿರದಲ್ಲಿದೆ. ಅಹಮದಾಬಾದ್‌ನಲ್ಲಿ, ಇಲ್ಲಿಂದ ಬರುವ ಕುಟುಂಬಗಳು, ವಿಶೇಷವಾಗಿ ಪದ್ಮಶಾಲಿಗಳು ವಾಸಿಸುತ್ತಿದ್ದಾರೆ. ನನ್ನ ಆರಂಭಿಕ ಜೀವನದಲ್ಲಿ ಪದ್ಮಶಾಲಿ ಕುಟುಂಬಗಳಿಗೆ ತಿಂಗಳಿಗೆ 3-4  ಬಾರಿ ಊಟ ಒದಗಿಸುವ ಅದೃಷ್ಟ ನನಗೆ ಸಿಕ್ಕಿತು. ಅವರು ಸಣ್ಣ ವಸತಿಗಳಲ್ಲಿ ವಾಸಿಸುತ್ತಿದ್ದರು, ಅಲ್ಲಿ ಮೂರು ಜನರು ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವಿಲ್ಲ, ಆದರೆ ಅವರು ನನಗೆ ಹಸಿವಿನಿಂದ ಮಲಗಲು ಬಿಡಲಿಲ್ಲ. ಒಂದು ದಿನ ಸೊಲ್ಲಾಪುರದ ಒಬ್ಬ ಮಹಾನ್ ವ್ಯಕ್ತಿ, ಬಹಳ ವರ್ಷಗಳ ನಂತರ ನನಗೆ ನೆನಪಿಲ್ಲದ ಅವರ ಹೆಸರು, ನನಗೆ ಅದ್ಭುತವಾದ ಚಿತ್ರ ಕಳುಹಿಸಿದ್ದು ನನಗೆ ಆಶ್ಚರ್ಯವಾಯಿತು. ನನ್ನ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾರಾಷ್ಟ್ರದ ಸತಾರಾದ ‘ವಕೀಲ್ ಸಾಹೇಬ್’ ಎಂದು ಕರೆಯಲ್ಪಡುವ ಲಕ್ಷ್ಮಣ್ ರಾವ್ ಇನಾಮದಾರ್ ಅವರು ನುರಿತ ನೇಯ್ದ ಮತ್ತು ಸುಂದರವಾಗಿ ರಚಿಸಲಾದ ಚಿತ್ರವಾಗಿತ್ತು. ಅದನ್ನು ತಮ್ಮ ಪ್ರತಿಭೆಯಿಂದ ಕಲಾತ್ಮಕವಾಗಿ ಚಿತ್ರಿಸಿ ಈ ಅದ್ಭುತ ಚಿತ್ರವನ್ನು ನನಗೆ ಕಳುಹಿಸಿದ್ದರು. ಇಂದಿಗೂ ಸೊಲ್ಲಾಪುರ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ.

ನನ್ನ ಕುಟುಂಬದ ಸದಸ್ಯರೆ,

ನಮ್ಮ ದೇಶದಲ್ಲಿ “ಗರೀಬಿ ಹಠಾವೋ” (ಬಡತನ ನಿರ್ಮೂಲನೆ) ಎಂಬ ಘೋಷವಾಕ್ಯ ಬಹಳ ದಿನಗಳಿಂದ ಮೊಳಗುತ್ತಿದ್ದರೂ ಈ ಘೋಷಣೆಗಳ ಹೊರತಾಗಿಯೂ ಬಡತನ ಕಡಿಮೆಯಾಗಲಿಲ್ಲ. ಬಡವರ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸಿದರೂ ನೈಜ ಫಲಾನುಭವಿಗಳಿಗೆ ಸವಲತ್ತುಗಳು ಸಿಗದಿರುವುದು ಇದಕ್ಕೆ ಪ್ರಮುಖ ಕಾರಣ. ಹಿಂದಿನ ಸರ್ಕಾರಗಳಲ್ಲಿ, ಬಡವರ ಹಕ್ಕುಗಳಿಗಾಗಿ ಮೀಸಲಾದ ಹಣವು ಆಗಾಗ್ಗೆ ಮಧ್ಯ  ದುರುಪಯೋಗ ಆಗುತ್ತಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಿಂದಿನ ಸರ್ಕಾರಗಳ ಉದ್ದೇಶಗಳು, ನೀತಿಗಳು ಮತ್ತು ಸಮರ್ಪಣೆಯು ಪ್ರಶ್ನಾರ್ಹವಾಗಿತ್ತು. ನಮ್ಮ ಉದ್ದೇಶಗಳು ಸ್ಪಷ್ಟವಾಗಿವೆ ಮತ್ತು ಬಡವರ ಸಬಲೀಕರಣ ನಮ್ಮ ನೀತಿಯಾಗಿದೆ. ನಮ್ಮ ಸಮರ್ಪಣೆ ದೇಶಕ್ಕಾಗಿ. ನಮ್ಮ ಬದ್ಧತೆ ‘ವಿಕ್ಷಿತ್ ಭಾರತ್’ ಅಭಿವೃದ್ಧಿಪಡಿಸುವ ಕಡೆಗೆ.

ಹಾಗಾಗಿಯೇ ಮಧ್ಯವರ್ತಿಗಳಿಲ್ಲದೆ ಸರ್ಕಾರದ ಸವಲತ್ತುಗಳು ನೇರವಾಗಿ ಫಲಾನುಭವಿಗಳಿಗೆ ತಲುಪಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಫಲಾನುಭವಿಗಳ ಹಾದಿಯಲ್ಲಿ ಎದುರಾಗುವ ಮಧ್ಯವರ್ತಿಗಳನ್ನು ತೆಗೆದುಹಾಕುವ ಕೆಲಸ ಮಾಡಿದ್ದೇವೆ. ಇವತ್ತು ಕೆಲವರು ಗೋಳಾಡುತ್ತಿರುವುದಕ್ಕೆ ಅವರ ಅಕ್ರಮ ಸಂಪಾದನೆಯ ಮೂಲವೇ ಕಡಿದು ಹೋಗಿದೆ. ಕಳೆದ 10 ವರ್ಷಗಳಲ್ಲಿ ನಾವು ಬಡವರು, ರೈತರು, ಮಹಿಳೆಯರು ಮತ್ತು ಯುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 30 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಿದ್ದೇವೆ. ಜನ್ ಧನ್, ಆಧಾರ್ ಮತ್ತು ಮೊಬೈಲ್ ಭದ್ರತೆಯನ್ನು ರೂಪಿಸುವ ಮೂಲಕ, ಅಸ್ತಿತ್ವದಲ್ಲಿಲ್ಲದ ಆದರೆ ನಿಮ್ಮ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಬಳಸುತ್ತಿದ್ದ ಸುಮಾರು 10 ಕೋಟಿ ನಕಲಿ ಫಲಾನುಭವಿಗಳನ್ನು ನಾವು ತೆಗೆದುಹಾಕಿದ್ದೇವೆ. ಹೆಣ್ಣು ಮಕ್ಕಳಿಲ್ಲದವರನ್ನು ವಿಧವೆಯರೆಂದು ತೋರಿಸಿ ಸರಕಾರದಿಂದ ಹಣ ವಸೂಲಿ ಮಾಡಲಾಗುತ್ತಿತ್ತು. ಹುಟ್ಟದೇ ಇರುವವರನ್ನು ಅಸ್ವಸ್ಥರೆಂದು ತೋರಿಸಿ ಹಣ ಕಿತ್ತುಕೊಳ್ಳಲಾಗುತ್ತಿತ್ತು.

 

ಸ್ನೇಹಿತರೆ,

ನಮ್ಮ ಸರ್ಕಾರವು ಬಡವರ ಕಲ್ಯಾಣಕ್ಕೆ ಆದ್ಯತೆ ನೀಡಿದಾಗ ಮತ್ತು ಅವರ ಯೋಗಕ್ಷೇಮಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದಾಗ, ಅದರ ಫಲಿತಾಂಶವು ಸ್ಪಷ್ಟವಾಗಿದೆ. ನಮ್ಮ ಸರ್ಕಾರದ 9  ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. ಇದು ಸಣ್ಣ ಸಾಧನೆ ಏನಲ್ಲ, ಇದು 10 ವರ್ಷಗಳ ಸಮರ್ಪಣೆಯ ಫಲಿತಾಂಶವಾಗಿದೆ. ಇದು ಬಡವರ ಜೀವನ ಸುಧಾರಿಸುವ ಸಂಕಲ್ಪದ ಫಲಿತಾಂಶವಾಗಿದೆ. ನೀವು ನಿಜವಾದ ಉದ್ದೇಶ, ಸಮರ್ಪಣೆ ಮತ್ತು ಸಮಗ್ರತೆಯಿಂದ ಕೆಲಸ ಮಾಡಿದಾಗ, ಫಲಿತಾಂಶಗಳು ನಿಮ್ಮ ಕಣ್ಣುಗಳ ಮುಂದೆ ಗೋಚರಿಸುತ್ತವೆ. ಇದು ನಮ್ಮ ಸಹ ನಾಗರಿಕರಲ್ಲಿ ಬಡತನವನ್ನು ಸೋಲಿಸಬಲ್ಲೆ ಎಂಬ ವಿಶ್ವಾಸವನ್ನು ಹುಟ್ಟುಹಾಕಿದೆ.

ಸ್ನೇಹಿತರೆ,

25 ಕೋಟಿ ಜನರ ಬಡತನ ಹೋಗಲಾಡಿಸುವಲ್ಲಿ ಯಶಸ್ವಿಯಾಗಿರುವುದು ಈ ದೇಶದ ಜನತೆಯ ಅಗಾಧ ಸಾಧನೆಯಾಗಿದೆ. ಬಡವರಿಗೆ ಸಂಪನ್ಮೂಲ ಮತ್ತು ಸೌಲಭ್ಯಗಳನ್ನು ಒದಗಿಸಿದರೆ, ಅವರು ಬಡತನವನ್ನು ಜಯಿಸುವ ಶಕ್ತಿ ಹೊಂದಿದ್ದಾರೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಅದಕ್ಕಾಗಿಯೇ ನಾವು ಸೌಲಭ್ಯಗಳನ್ನು ನೀಡಿದ್ದೇವೆ, ಸಂಪನ್ಮೂಲಗಳನ್ನು ಒದಗಿಸಿದ್ದೇವೆ. ದೇಶದ ಬಡವರ ಪ್ರತಿಯೊಂದು ಕಾಳಜಿಯನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬಡವರ ದೊಡ್ಡ ಚಿಂತೆಯೆಂದರೆ ದಿನಕ್ಕೆ 2 ಬಾರಿ ಊಟ ಮಾಡುವುದು. ಇಂದು ನಮ್ಮ ಸರ್ಕಾರವು ದೇಶದ ಬಡವರಿಗೆ ಉಚಿತ ಪಡಿತರ ನೀಡುವ ಮೂಲಕ ಅನೇಕ ಚಿಂತೆಗಳಿಂದ ಮುಕ್ತಗೊಳಿಸಿದೆ. ಯಾರು ಸಹ ಅರ್ಧ ಊಟ ಮಾಡಿದೆವು ಎಂಬ ಘೋಷಣೆಗಳನ್ನು ಕೂಗುವ ಅಗತ್ಯವಿಲ್ಲ.

ಕೊರೊನಾ ವೈರಸ್ ಸಮಯದಲ್ಲಿ ಪ್ರಾರಂಭಿಸಲಾದ ಯೋಜನೆಯನ್ನು ಈಗ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ. ನಾನು ದೇಶದ ನಾಗರಿಕರಿಗೆ ಭರವಸೆ ನೀಡುತ್ತೇನೆ. 25 ಕೋಟಿ ಜನರು ಬಡತನದಿಂದ ಹೊರಬಂದಿರುವ ತೃಪ್ತಿ ನನಗಿದೆ. ಬಡತನದಿಂದ ಹೊರಬಂದವರು ಯಾವುದೇ ಕಾರಣಕ್ಕೂ ಬಡತನಕ್ಕೆ ಮರಳದಂತೆ, ಮತ್ತೆ ಅದೇ ಕಷ್ಟದಲ್ಲಿ ಸಿಲುಕದಂತೆ ಮುಂದಿನ 5 ವರ್ಷಗಳವರೆಗೆ ಆಸರೆ ನೀಡಬೇಕು ಎಂಬುದು ನನಗೆ ತಿಳಿದಿದೆ. ಆದ್ದರಿಂದ ಈಗಿರುವ ಯೋಜನೆಗಳ ಪ್ರಯೋಜನಗಳು ಅವರನ್ನು ತಲುಪುತ್ತಲೇ ಇರುತ್ತವೆ. ವಾಸ್ತವವಾಗಿ, ನನ್ನ ನಿರ್ಣಯವನ್ನು ಧೈರ್ಯದಿಂದ ಪೂರೈಸಲು ಅವರು ನನ್ನ ಜೊತೆಗಾರರಾಗಿದ್ದಾರೆ ಎಂಬ ಕಾರಣದಿಂದ ನಾನು ಅವರಿಗೆ ಇಂದು ಹೆಚ್ಚಿನದನ್ನು ನೀಡಲು ಬಯಸುತ್ತೇನೆ.

ಮತ್ತು ಸ್ನೇಹಿತರೆ,

ನಾವು ಉಚಿತ ಪಡಿತರ ಒದಗಿಸುವುದು ಮಾತ್ರವಲ್ಲದೆ, ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಪರಿಹರಿಸಿದ್ದೇವೆ. ಈ ಹಿಂದೆ ಒಂದು ಸ್ಥಳದಲ್ಲಿ ರೂಪಿಸಲಾದ ಪಡಿತರ ಚೀಟಿ ಮತ್ತೊಂದು ರಾಜ್ಯದಲ್ಲಿ ಮಾನ್ಯವಾಗುತ್ತಿರಲಿಲ್ಲ. ಕೆಲಸಕ್ಕಾಗಿ ಬೇರೆ ರಾಜ್ಯಕ್ಕೆ ಹೋದರೆ ಅಲ್ಲಿ ಪಡಿತರ ಪಡೆಯಲು ಹಲವು ತೊಂದರೆಗಳನ್ನು ಎದುರಿಸುತ್ತಿದ್ದರು. ನಾವು "ಒಂದು ರಾಷ್ಟ್ರ, ಒಂದು ಪಡಿತರ ಚೀಟಿ" ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಅಂದರೆ ಇಡೀ ದೇಶಾದ್ಯಂತ ಒಂದು ಪಡಿತರ ಚೀಟಿ ಕೆಲಸ ಮಾಡುತ್ತದೆ. ಸೊಲ್ಲಾಪುರದ ವ್ಯಕ್ತಿಯೊಬ್ಬರು ಕೆಲಸಕ್ಕಾಗಿ ಚೆನ್ನೈಗೆ ಹೋಗಿ ಜೀವನೋಪಾಯ ಕಂಡುಕೊಂಡರೆ ಹೊಸ ಪಡಿತರ ಚೀಟಿ ಪಡೆಯುವ ಅಗತ್ಯವಿಲ್ಲ. ಅದೇ ಪಡಿತರ ಚೀಟಿಯಿಂದ ಚೆನ್ನೈನಲ್ಲೂ ಊಟ-ತಿಂಡಿ ಸಿಗುವುದು ಮೋದಿ ಗ್ಯಾರಂಟಿ.

 

ಸ್ನೇಹಿತರೆ,

ಪ್ರತಿಯೊಬ್ಬ ಬಡವರು ಅನಾರೋಗ್ಯಕ್ಕೆ ಒಳಗಾದರೆ ವೈದ್ಯಕೀಯ ಚಿಕಿತ್ಸೆಗೆ ಹೇಗೆ ವೆಚ್ಚ ಮಾಡುತ್ತಾರೆ ಎಂಬುದರ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದೆ. ಬಡ ಕುಟುಂಬದಲ್ಲಿ ಒಮ್ಮೆ ಅನಾರೋಗ್ಯ ಬಂದರೆ, ಬಡತನದಿಂದ ಪಾರಾಗುವ ಎಲ್ಲಾ ಪ್ರಯತ್ನಗಳು ಛಿದ್ರವಾಗುತ್ತವೆ. ಅನಾರೋಗ್ಯದ ಚಿಕಿತ್ಸೆಗೆ ತಗಲುವ ವೆಚ್ಚದಿಂದಾಗಿ ಅವರು ಮತ್ತೆ ಬಡತನದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇಡೀ ಕುಟುಂಬವು ಬಿಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತದೆ.  ಈ ಸಮಸ್ಯೆ ಗುರುತಿಸಿ, ನಮ್ಮ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿತು. 5 ಲಕ್ಷ ರೂ. ತನಕ ಉಚಿತ ವೈದ್ಯಕೀಯ ಚಿಕಿತ್ಸೆ. ಇಂದು ಈ ಯೋಜನೆಯು ಬಡವರನ್ನು 1 ಲಕ್ಷ ಕೋಟಿ ರೂಪಾಯಿ ತನಕ ವೆಚ್ಚ ಉಳಿಸಿದೆ.

ನಾನು 1 ಲಕ್ಷ ಕೋಟಿ ರೂಪಾಯಿ ಯೋಜನೆಯನ್ನು ಘೋಷಿಸಿದರೆ, ಅದು ಆರರಿಂದ ಏಳು ದಿನಗಳವರೆಗೆ ಪತ್ರಿಕೆಗಳು ಮತ್ತು ದೂರದರ್ಶನದಲ್ಲಿ ಮುಖ್ಯಾಂಶಗಳಲ್ಲಿ ಪ್ರಾಬಲ್ಯ ಸಾಧಿಸಿತು ಎಂದು ನೀವು ಊಹಿಸಬಹುದು. ಆದರೆ ಮೋದಿ ಭರವಸೆಯ ಶಕ್ತಿಯೇ ಬೇರೆ. ಈ ಯೋಜನೆಯು ನಿಮ್ಮ ಜೇಬಿನಲ್ಲಿ 1 ಲಕ್ಷ ಕೋಟಿ ರೂಪಾಯಿ ಉಳಿಸಿದೆ ಮತ್ತು ಇದು ಹಲವಾರು ಜೀವಗಳನ್ನು ಉಳಿಸಿದೆ. ಇಂದು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಸರ್ಕಾರವು 80% ರಿಯಾಯಿತಿಯಲ್ಲಿ ಔಷಧಿಗಳನ್ನು ನೀಡುತ್ತಿದೆ. ಇದರಿಂದ ಬಡವರಿಗೆ 30 ಸಾವಿರ ಕೋಟಿ ರೂಪಾಯಿ ಉಳಿತಾಯವೂ ಆಗಿದೆ. ಬಡ ಕುಟುಂಬಗಳಲ್ಲಿ ಅನಾರೋಗ್ಯಕ್ಕೆ ಕೊಳಕು ನೀರು ಗಮನಾರ್ಹ ಕಾರಣವಾಗಿದೆ. ಆದ್ದರಿಂದ, ನಮ್ಮ ಸರ್ಕಾರ ಪ್ರಸ್ತುತ ಜಲ ಜೀವನ್ ಮಿಷನ್ ಅನುಷ್ಠಾನಗೊಳಿಸುತ್ತಿದೆ, ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸುತ್ತಿದ್ದೇವೆ.

ಸ್ನೇಹಿತರೆ,

ಈ ಯೋಜನೆಗಳ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳವರಾಗಿದ್ದಾರೆ. ಬಡವನಿಗೆ ಪಕ್ಕಾ ಮನೆ, ಶೌಚಾಲಯ, ಅವರ ಮನೆಗೆ ವಿದ್ಯುತ್ ಸಂಪರ್ಕ, ನೀರು ಸರಬರಾಜು, ಹೀಗೆ ಎಲ್ಲ ಸೌಕರ್ಯಗಳನ್ನು ಒದಗಿಸುವುದು ಮೋದಿ ಅವರ ಭರವಸೆಯ ನಿಜವಾದ ಸಾಮಾಜಿಕ ನ್ಯಾಯದ ಸಾಕಾರಗಳಾಗಿವೆ. ಈ ಸಾಮಾಜಿಕ ನ್ಯಾಯದ ಕನಸು ಕಂಡವರು ಸಂತ ರವಿದಾಸರು. ತಾರತಮ್ಯವಿಲ್ಲದ ಅವಕಾಶದ ಕಲ್ಪನೆಯನ್ನು ಕಬೀರ್ ದಾಸ್ ಅವರು ಮಾತನಾಡಿದರು. ಈ ಸಾಮಾಜಿಕ ನ್ಯಾಯದ ಮಾರ್ಗವನ್ನು ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿಸಿದರು.

ನನ್ನ ಕುಟುಂಬ ಸದಸ್ಯರೆ,

ಬಡವರಲ್ಲಿ ಬಡವರು ಆರ್ಥಿಕ ಭದ್ರತೆ ಪಡೆಯುತ್ತಾರೆ. ಇದು ಮೋದಿ ಅವರ ಭರವಸೆಯೂ ಹೌದು. 10 ವರ್ಷಗಳ ಹಿಂದಿನವರೆಗೂ ಒಂದು ಬಡ ಕುಟುಂಬ ಜೀವ ವಿಮೆಯ ಬಗ್ಗೆ ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ಇಂದು, ಅವರು ಅಪಘಾತಗಳಿಗೆ ಮತ್ತು 2 ಲಕ್ಷ ರೂಪಾಯಿ ತನಕ ಜೀವ ವಿಮೆ ಹೊಂದಿದ್ದಾರೆ. ಈ ವಿಮಾ ಯೋಜನೆಯ ಅನುಷ್ಠಾನದ ನಂತರ, 16,000 ಕೋಟಿ ರೂ. ಮೊತ್ತದ ಅಂಕಿಅಂಶವೂ ಸಹ ನಿಮಗೆ ಸಂತೋಷ ನೀಡುತ್ತದೆ. ಬಿಕ್ಕಟ್ಟು ಎದುರಿಸಿದ ಬಡ ಕುಟುಂಬಗಳ ಖಾತೆಗಳಿಗೆ ವಿಮೆ ರೂಪದಲ್ಲಿ ಈ ಮೊತ್ತವನ್ನು ವರ್ಗಾಯಿಸಲಾಗಿದೆ.

ಸ್ನೇಹಿತರೆ,

ಬ್ಯಾಂಕ್‌ಗಳಿಗೆ ಗ್ಯಾರಂಟಿ ನೀಡಲು ಏನೂ ಇಲ್ಲದವರಿಗೆ ಇಂದು ಮೋದಿಯವರ ಗ್ಯಾರಂಟಿ ಹೆಚ್ಚು ವ್ಯತ್ಯಾಸ ಉಂಟು ಮಾಡುತ್ತಿದೆ. ಈ ಗುಂಪಿನಲ್ಲೂ 2014ರ ತನಕ ಬ್ಯಾಂಕ್ ಖಾತೆ ಇಲ್ಲದ ಅನೇಕ ಜನರಿದ್ದಾರೆ. ಬ್ಯಾಂಕ್ ಖಾತೆಯೇ ಇಲ್ಲದಿರುವಾಗ ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಹೇಗೆ? ಜನ್ ಧನ್ ಯೋಜನೆ ಜಾರಿಗೊಳಿಸುವ ಮೂಲಕ ನಮ್ಮ ಸರ್ಕಾರ 50 ಕೋಟಿ ಬಡವರನ್ನು ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಿದೆ. ಇಂದು ಪಿಎಂ-ಸ್ವನಿಧಿ ಯೋಜನೆಯ 10,000 ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಹಾಯ ಮಾಡಿದೆ. ಇಲ್ಲಿ ಕೆಲವು ಟೋಕನ್‌ಗಳನ್ನು ಪ್ರಸ್ತುತಪಡಿಸಲು ನನಗೆ ಅವಕಾಶವಿದೆ.

 

ದೇಶಾದ್ಯಂತ ಗಾಡಿಗಳು ಮತ್ತು ಫುಟ್‌ಪಾತ್‌ಗಳಲ್ಲಿ ಕೆಲಸ ಮಾಡುವ ಜನರು, ಹೌಸಿಂಗ್ ಸೊಸೈಟಿಗಳಲ್ಲಿ ತರಕಾರಿಗಳು, ಹಾಲು, ಪತ್ರಿಕೆಗಳನ್ನು ಮಾರುವವರು, ಆಟಿಕೆಗಳು, ರಸ್ತೆಗಳಲ್ಲಿ ಹೂವುಗಳನ್ನು ಮಾರುವವರು ಇಂತಹ ಲಕ್ಷಗಟ್ಟಲೆ ಜನರ ಬಗ್ಗೆ ಯಾರೂ ಮೊದಲು ಕಾಳಜಿ ವಹಿಸಲಿಲ್ಲ. ಯಾವತ್ತೂ ಕಾಳಜಿ ವಹಿಸದವರನ್ನು ಮೋದಿ ಸನ್ಮಾನಿಸಿದ್ದಾರೆ. ಇಂದು ಮೊಟ್ಟಮೊದಲ ಬಾರಿಗೆ ಮೋದಿ ಅವರ ಆರೈಕೆ ಮಾಡಿದ್ದಾರೆ, ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಹಿಂದೆ, ಈ ಜನರು ಬ್ಯಾಂಕ್‌ಗಳಿಗೆ ನೀಡಲು ಗ್ಯಾರಂಟಿ ಇಲ್ಲದ ಕಾರಣ ಹೆಚ್ಚಿನ ಬಡ್ಡಿದರದಲ್ಲಿ ಮಾರುಕಟ್ಟೆಯಿಂದ ಸಾಲ ತೆಗೆದುಕೊಳ್ಳಬೇಕಾಗಿತ್ತು. ಮೋದಿ ಅವರ ಗ್ಯಾರಂಟಿ ತೆಗೆದುಕೊಂಡರು. ನಾನು ಬ್ಯಾಂಕ್‌ಗಳಿಗೆ ಹೇಳಿದ್ದೇನೆ, ಇದು ನನ್ನ ಗ್ಯಾರಂಟಿ, ಅವರಿಗೆ ಹಣ ನೀಡಿ, ಈ ಬಡವರು ಮರುಪಾವತಿ ಮಾಡುತ್ತಾರೆ. ನಾನು ಬಡವರನ್ನು ನಂಬುತ್ತೇನೆ. ಇಂದು ಈ ಬೀದಿ ಬದಿ ವ್ಯಾಪಾರಿಗಳು ಯಾವುದೇ ಗ್ಯಾರಂಟಿ ಇಲ್ಲದೆ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದ್ದಾರೆ. ಇಂತಹ ಸಂಗಡಿಗರಿಗೆ ಇದುವರೆಗೆ ಸಾವಿರಾರು ಕೋಟಿ ರೂ. ಸಾಲ ಲಭಿಸುತ್ತಿದೆ.

ನನ್ನ ಕುಟುಂಬ ಸದಸ್ಯರೆ,

ಸೊಲ್ಲಾಪುರ ಕೈಗಾರಿಕಾ ನಗರವಾಗಿದ್ದು, ಶ್ರಮಜೀವಿ ಕಾರ್ಮಿಕ ಸಹೋದರ ಸಹೋದರಿಯರ ನಗರವಾಗಿದೆ. ಇಲ್ಲಿನ ಅನೇಕ ಜನರು ನಿರ್ಮಾಣ ಕೆಲಸ, ಸಣ್ಣ ಮತ್ತು ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೊಲ್ಲಾಪುರ ದೇಶ ಮತ್ತು ವಿಶ್ವದಲ್ಲಿ ಜವಳಿ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಸೊಲ್ಲಾಪುರಿ ಚಡ್ಡರ್ ಬಗ್ಗೆ ಯಾರಿಗೆ ಗೊತ್ತಿಲ್ಲ? ದೇಶದಲ್ಲೇ ಸಮವಸ್ತ್ರಗಳನ್ನು ತಯಾರಿಸುವ ಅತಿ ದೊಡ್ಡ ಎಂಎಸ್ಎಂಇ ಸಮೂಹ ಸೊಲ್ಲಾಪುರದಲ್ಲಿದೆ. ಹೊರ ದೇಶಗಳಿಂದಲೂ ಗಮನಾರ್ಹ ಸಂಖ್ಯೆಯ ಏಕರೂಪದ ಆರ್ಡರ್‌ಗಳು ಬರುತ್ತವೆ ಎಂಬುದು ನನಗೆ ತಿಳಿದಿದೆ.

ಸ್ನೇಹಿತರೆ,

ಇಲ್ಲಿ ಹಲವು ತಲೆಮಾರುಗಳಿಂದ ಬಟ್ಟೆ ಹೊಲಿಯುವ ಕೆಲಸ ನಡೆಯುತ್ತಿದೆ. ತಲೆಮಾರುಗಳು ಬದಲಾಗಿವೆ, ಫ್ಯಾಷನ್ ಬದಲಾಗಿದೆ, ಆದರೆ ಬಟ್ಟೆ ಹೊಲಿಯುವ ಜನರ ಬಗ್ಗೆ ಯಾರಾದರೂ ಯೋಚಿಸಿದ್ದೀರಾ? ನಾನು ಅವರನ್ನು ನನ್ನ ವಿಶ್ವಕರ್ಮ ಒಡನಾಡಿ ಎಂದು ಪರಿಗಣಿಸುತ್ತೇನೆ. ಈ ಕುಶಲಕರ್ಮಿಗಳ ಜೀವನ ಬದಲಾಯಿಸಲು ನಾವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ರೂಪಿಸಿದ್ದೇವೆ. ಕೆಲವೊಮ್ಮೆ ನೀವು ನನ್ನ ಜಾಕೆಟ್ ಗಳನ್ನು ನೋಡುತ್ತೀರಿ. ಅಂತಹ ಕೆಲವು ಜಾಕೆಟ್‌ಗಳನ್ನು ಸೊಲ್ಲಾಪುರದ ಸ್ನೇಹಿತರು ತಯಾರಿಸಿದ್ದಾರೆ. ನಾನು ಬೇಡ ಎಂದರೂ ಅವರು ನನಗೆ ಕಳುಹಿಸುತ್ತಾರೆ. ಒಮ್ಮೆ ಫೋನಿನಲ್ಲಿ ‘ಅಣ್ಣ ಇನ್ನು ಕಳಿಸಬೇಡ’ ಎಂದು ಗದರಿಸಿದ್ದೆ. ಅವರು ಉತ್ತರಿಸಿದರು, "ಇಲ್ಲ, ಸಾರ್, ನಿಮ್ಮಿಂದ ನಾನು ಯಶಸ್ಸನ್ನು ಕಂಡುಕೊಂಡಿದ್ದೇನೆ, ವಾಸ್ತವವಾಗಿ, ನಾನು ಅದನ್ನು ನಿಮ್ಮ ಬಳಿಗೆ ತರುತ್ತಿದ್ದೇನೆ."

 

ಸ್ನೇಹಿತರೆ,

ವಿಶ್ವಕರ್ಮ ಯೋಜನೆಯಡಿ ಈ ಸ್ನೇಹಿತರಿಗೆ ತರಬೇತಿ ನೀಡಲಾಗುತ್ತಿದ್ದು, ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆ. ತಮ್ಮ ಕೆಲಸ ಮುಂದುವರಿಸಲು, ಯಾವುದೇ ಖಾತರಿಯಿಲ್ಲದೆ ಬ್ಯಾಂಕ್‌ಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದಾರೆ. ಆದುದರಿಂದ ಸೊಲ್ಲಾಪುರದಲ್ಲಿರುವ ಎಲ್ಲಾ ವಿಶ್ವಕರ್ಮ ಸಂಗಡಿಗರು ಶೀಘ್ರವಾಗಿ ಈ ಯೋಜನೆಗೆ ಸೇರ್ಪಡೆಗೊಳ್ಳುವಂತೆ ಮನವಿ ಮಾಡುತ್ತೇನೆ. ಇತ್ತೀಚಿನ ದಿನಗಳಲ್ಲಿ, ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯು ಪ್ರತಿ ಹಳ್ಳಿ ಮತ್ತು ನೆರೆಹೊರೆ ತಲುಪುತ್ತಿದೆ. ಈ ಯಾತ್ರೆಗೆ ಮೋದಿ ಅವರ ಗ್ಯಾರಂಟಿ ವಾಹನ ಜೊತೆಗಿದೆ. ಇದರ ಮೂಲಕ, ನೀವು ಪಿಎಂ ವಿಶ್ವಕರ್ಮ ಸೇರಿದಂತೆ ಪ್ರತಿಯೊಂದು ಸರ್ಕಾರಿ ಯೋಜನೆಗಳೊಂದಿಗೆ ಸಂಪರ್ಕ ಸಾಧಿಸಬಹುದು.

ನನ್ನ ಕುಟುಂಬ ಸದಸ್ಯರೆ,

ಸ್ವಾವಲಂಬಿ ಭಾರತವನ್ನು ಅಭಿವೃದ್ಧಿಪಡಿಸುವುದು ‘ವಿಕ್ಷಿತ ಭಾರತ’ಕ್ಕೆ ಅತ್ಯಗತ್ಯ. ನಮ್ಮ ಸಣ್ಣ, ಮಧ್ಯಮ ಮತ್ತು ಗುಡಿ ಕೈಗಾರಿಕೆಗಳ ಸಕ್ರಿಯ ಭಾಗವಹಿಸುವಿಕೆ 'ಆತ್ಮನಿರ್ಭರ ಭಾರತ'ಕ್ಕೆ ನಿರ್ಣಾಯಕವಾಗಿದೆ. ಆದ್ದರಿಂದ, ಕೇಂದ್ರ ಸರ್ಕಾರವು ಎಂಎಸ್‌ಎಂಇಗಳನ್ನು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ನಿರಂತರವಾಗಿ ಉತ್ತೇಜಿಸುತ್ತಿದೆ ಮತ್ತು ಬೆಂಬಲಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಸವಾಲಿನ ಸಮಯದಲ್ಲಿ, ಎಂಎಸ್‌ಎಂಇಗಳು ಬಿಕ್ಕಟ್ಟು ಎದುರಿಸಿದಾಗ, ಸರ್ಕಾರವು ಅವರಿಗೆ ಲಕ್ಷ ಕೋಟಿ ರೂ. ಮೊತ್ತದಲ್ಲಿ ಸಹಾಯ ನೀಡಿತು. ಇದು ಸಣ್ಣ-ಪ್ರಮಾಣದ ಕೈಗಾರಿಕೆಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ನಷ್ಟ ತಡೆಯಲು ಸಹಾಯ ಮಾಡಿತು.

ಇಂದು ದೇಶದ ಪ್ರತಿ ಜಿಲ್ಲೆಯಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ’ವೋಕಲ್ ಫಾರ್ ಲೋಕಲ್’ ಅಭಿಯಾನ ನಮ್ಮ ಸಣ್ಣ ಕೈಗಾರಿಕೆಗಳಿಗೂ ಜಾಗೃತಿ ಮೂಡಿಸುತ್ತಿದೆ. ಭಾರತದ ಪ್ರಭಾವವು ಜಾಗತಿಕವಾಗಿ ಬೆಳೆಯುತ್ತಿರುವ ರೀತಿಯಲ್ಲಿ, 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಹೆಚ್ಚಿನ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರದ ಈ ಎಲ್ಲಾ ಅಭಿಯಾನಗಳಿಂದ ಸೊಲ್ಲಾಪುರದ ಜನತೆಗೆ ಲಾಭವಾಗುತ್ತಿದ್ದು, ಇಲ್ಲಿನ ಸ್ಥಳೀಯ ಕೈಗಾರಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ.

ನನ್ನ ಕುಟುಂಬ ಸದಸ್ಯರೆ,

ನಮ್ಮ ಕೇಂದ್ರ ಸರ್ಕಾರದ 3ನೇ ಅವಧಿಯಲ್ಲಿ ಭಾರತವು ಜಾಗತಿಕವಾಗಿ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲು ಸಿದ್ಧವಾಗಿದೆ. ನನ್ನ ಮುಂಬರುವ ಅವಧಿಯಲ್ಲಿ, ಭಾರತವನ್ನು ವಿಶ್ವದ ಅಗ್ರ 3 ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ನನ್ನ ನಾಗರಿಕರಿಗೆ ಭರವಸೆ ನೀಡಿದ್ದೇನೆ. ಈ ಗ್ಯಾರಂಟಿಯನ್ನು ಮೋದಿ ಅವರು ನೀಡಿದ್ದು, ನಿಮ್ಮ ಬೆಂಬಲದೊಂದಿಗೆ ನನ್ನ ಭರವಸೆ ಈಡೇರುತ್ತದೆ ಎಂದು ನಾನು ನಂಬುತ್ತೇನೆ. ನಿಮ್ಮ ಆಶೀರ್ವಾದವೇ ಇದರ ಹಿಂದಿನ ಶಕ್ತಿ. ಮಹಾರಾಷ್ಟ್ರದ ಸೊಲ್ಲಾಪುರದಂತಹ ನಗರಗಳು ಆರ್ಥಿಕತೆಯ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ಹೊಂದಿವೆ.

ಈ ನಗರಗಳಲ್ಲಿ ನೀರು ಮತ್ತು ಒಳಚರಂಡಿಯಂತಹ ಸೌಲಭ್ಯಗಳನ್ನು ಸುಧಾರಿಸಲು ಡಬಲ್ ಎಂಜಿನ್ ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ. ಉತ್ತಮ ರಸ್ತೆಗಳು, ರೈಲು ಮಾರ್ಗಗಳು ಮತ್ತು ವಿಮಾನ ಮಾರ್ಗಗಳ ಮೂಲಕ ನಗರಗಳನ್ನು ತ್ವರಿತ ಗತಿಯಲ್ಲಿ ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ. ಅದು ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗವಾಗಿರಲಿ ಅಥವಾ ಸಂತ ತುಕಾರಾಂ ಪಾಲ್ಖಿ ಮಾರ್ಗವಾಗಿರಲಿ, ಈ ಮಾರ್ಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ರತ್ನಗಿರಿ, ಕೊಲ್ಹಾಪುರ, ಸೊಲ್ಲಾಪುರ ನಡುವಿನ ಚತುಷ್ಪಥ ಹೆದ್ದಾರಿ ನಿರ್ಮಾಣವೂ ಶೀಘ್ರವೇ ಪೂರ್ಣಗೊಳ್ಳಲಿದೆ. ಇಂತಹ ಅಭಿವೃದ್ಧಿಯ ಪ್ರಯತ್ನಗಳಿಗೆ ನೀವೆಲ್ಲರೂ, ನನ್ನ ಕುಟುಂಬದ ಸದಸ್ಯರು ನಮ್ಮನ್ನು ಆಶೀರ್ವದಿಸಿದ್ದೀರಿ.

ಆಶೀರ್ವಾದಗಳು ಹೀಗೆ ಮುಂದುವರಿಯಲಿ. ಈ ನಂಬಿಕೆಯೊಂದಿಗೆ, ಈಗ ತಮ್ಮದೇ ಆದ ಪಕ್ಕಾ ಮನೆಗಳನ್ನು ಪಡೆದಿರುವ ಬಂಧುಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎರಡೂ ಕೈಗಳನ್ನು ಮೇಲಕ್ಕೆತ್ತಿ ನನ್ನೊಂದಿಗೆ ಹೇಳಿ:

"ಭಾರತ್ ಮಾತಾ ಕೀ ಜೈ" - ಈ ಪಠಣವು ಮಹಾರಾಷ್ಟ್ರದಾದ್ಯಂತ ತಲುಪಬೇಕು.

ಭಾರತ್ ಮಾತಾ ಕೀ -- ಜೈ

ಭಾರತ್ ಮಾತಾ ಕೀ -- ಜೈ

ಭಾರತ್ ಮಾತಾ ಕೀ -- ಜೈ

ನಿಮ್ಮ ಹರ್ಷೋದ್ಗಾರಗಳು ದೇಶದ ಪ್ರತಿಯೊಬ್ಬ ಬಡವರಲ್ಲಿ ಹೊಸ ಆತ್ಮವಿಶ್ವಾಸ ತುಂಬುವ ಶಕ್ತಿ ಹೊಂದಿವೆ.

ತುಂಬು ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.