ಜೈ ಜಗನ್ನಾಥ್!
ಒಡಿಶಾದ ರಾಜ್ಯಪಾಲರಾದ ಶ್ರೀ ಗಣೇಶಿ ಲಾಲ್ ಅವರೇ, ಮುಖ್ಯಮಂತ್ರಿಗಳು ಮತ್ತು ನನ್ನ ಸ್ನೇಹಿತ ಶ್ರೀ ನವೀನ್ ಪಟ್ನಾಯಕ್ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಅವರೇ, ಧರ್ಮೇಂದ್ರ ಪ್ರಧಾನ್ ಅವರೇ, ಬಿಶ್ವೇಶ್ವರ್ ಟುಡು ಅವರೇ ಹಾಗೂ ಇತರ ಎಲ್ಲ ಗಣ್ಯರು ಮತ್ತು ಪಶ್ಚಿಮ ಬಂಗಾಳ ಮತ್ತು ಒಡಿಶಾದ ನನ್ನ ಎಲ್ಲಾ ಸಹೋದರ ಸಹೋದರಿಯರೇ!
ಇಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಜನರು ʻವಂದೇ ಭಾರತ್ʼ ರೈಲಿನ ಉಡುಗೊರೆಯನ್ನು ಸ್ವೀಕರಿಸುತ್ತಿದ್ದಾರೆ. ʻವಂದೇ ಭಾರತ್ʼ ರೈಲು ಆಧುನಿಕ ಭಾರತದ ಮತ್ತು ಮಹತ್ವಾಕಾಂಕ್ಷೆಯ ಭಾರತದ ಸಂಕೇತವಾಗಿ ಬದಲಾಗುತ್ತಿದೆ. ಇಂದು, ʻವಂದೇ ಭಾರತ್ʼ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವಾಗ, ಅದು ಭಾರತದ ವೇಗ ಮತ್ತು ಪ್ರಗತಿ ಎರಡನ್ನೂ ಪ್ರತಿಬಿಂಬಿಸುತ್ತದೆ.
ಈಗ ವಂದೇ ಭಾರತದ ಈ ವೇಗ ಮತ್ತು ಪ್ರಗತಿಯು ಬಂಗಾಳ ಮತ್ತು ಒಡಿಶಾದ ಬಾಗಿಲು ತಟ್ಟಲಿದೆ. ಇದು ರೈಲು ಪ್ರಯಾಣದ ಅನುಭವವನ್ನು ಬದಲಾಯಿಸುವುದಲ್ಲದೆ ಅಭಿವೃದ್ಧಿಗೆ ಹೊಸ ಅರ್ಥವನ್ನು ನೀಡುತ್ತದೆ. ಈಗ ಯಾರಾದರೂ ದರ್ಶನಕ್ಕಾಗಿ ಕೋಲ್ಕತ್ತಾದಿಂದ ಪುರಿಗೆ ಅಥವಾ ಕೆಲವು ಕೆಲಸಗಳಿಗಾಗಿ ಪುರಿಯಿಂದ ಕೋಲ್ಕತ್ತಾಗೆ ಪ್ರಯಾಣಿಸುವುದಾದರೆ, ಈ ಪ್ರಯಾಣವು ಕೇವಲ 6.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ಸಮಯವನ್ನು ಉಳಿಸುತ್ತದೆ; ವ್ಯಾಪಾರ ಮತ್ತು ವ್ಯವಹಾರವನ್ನು ವಿಸ್ತರಿಸಲು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನಾನು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಜನರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಯಾರಾದರೂ ತಮ್ಮ ಕುಟುಂಬದೊಂದಿಗೆ ದೂರ ಪ್ರಯಾಣಿಸಬೇಕಾದಾಗ, ರೈಲು ಅವರ ಮೊದಲ ಆಯ್ಕೆ ಮತ್ತು ಆದ್ಯತೆಯಾಗಿದೆ. ಇಂದು, ಪುರಿ ಮತ್ತು ಕಟಕ್ ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕೆ ಶಂಕುಸ್ಥಾಪನೆ, ರೈಲ್ವೆ ಮಾರ್ಗಗಳ ಡಬ್ಲಿಂಗ್ ಅಥವಾ ಒಡಿಶಾದಲ್ಲಿ ರೈಲ್ವೆ ಮಾರ್ಗಗಳ 100% ವಿದ್ಯುದ್ದೀಕರಣವನ್ನು ಸಾಧಿಸುವುದು ಸೇರಿದಂತೆ ಒಡಿಶಾದ ರೈಲು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಕಾರ್ಯಗಳನ್ನು ಮಾಡಲಾಗಿದೆ. ಈ ಎಲ್ಲ ಯೋಜನೆಗಳಿಗಾಗಿ ನಾನು ಒಡಿಶಾದ ಜನರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಇದು 'ಸ್ವಾತಂತ್ರ್ಯದ ಅಮೃತ ಕಾಲʼ. ಇದು ಭಾರತದ ಏಕತೆಯನ್ನು ಮತ್ತಷ್ಟು ಬಲಪಡಿಸುವ ಸಮಯ. ಏಕತೆ ಹೆಚ್ಚಾದಷ್ಟೂ ಭಾರತದ ಸಾಮೂಹಿಕ ಶಕ್ತಿ ಬಲಗೊಳ್ಳುತ್ತದೆ. ಈ ʻವಂದೇ ಭಾರತ್ʼ ರೈಲುಗಳು ಈ ಆಶಯದ ಪ್ರತಿಬಿಂಬವಾಗಿದೆ. ಈ 'ಅಮೃತ ಕಾಲʼದಲ್ಲಿ ʻವಂದೇ ಭಾರತ್ʼ ರೈಲುಗಳು ಅಭಿವೃದ್ಧಿಯ ಎಂಜಿನ್ ಆಗುತ್ತಿರುವುದು ಮಾತ್ರವಲ್ಲದೆ, 'ಏಕ ಭಾರತ- ಶ್ರೇಷ್ಠ ಭಾರತ' ಆಶಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿವೆ .
ಭಾರತೀಯ ರೈಲ್ವೆ ಎಲ್ಲರನ್ನೂ ಸಂಪರ್ಕಿಸುತ್ತದೆ ಮತ್ತು ಅವರನ್ನು ಒಂದೇ ಎಳೆಯಲ್ಲಿ ಹೆಣೆಯುತ್ತದೆ. ʻವಂದೇ ಭಾರತ್ʼ ರೈಲುಗಳು ಸಹ ಈ ಪ್ರವೃತ್ತಿಯನ್ನು ಮುಂದುವರಿಸುತ್ತವೆ. ಈ ʻವಂದೇ ಭಾರತ್ʼ ರೈಲು ಹೌರಾ ಮತ್ತು ಪುರಿ, ಬಂಗಾಳ ಮತ್ತು ಒಡಿಶಾ ನಡುವಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಇಂದು, ಅಂತಹ ಸುಮಾರು 15 ʻವಂದೇ ಭಾರತ್ʼ ರೈಲುಗಳು ದೇಶದ ವಿವಿಧ ರಾಜ್ಯಗಳಲ್ಲಿ ಚಲಿಸುತ್ತಿವೆ. ಈ ಆಧುನಿಕ ರೈಲುಗಳು ದೇಶದ ಆರ್ಥಿಕತೆಗೆ ಉತ್ತೇಜನ ನೀಡುತ್ತಿವೆ.
ಸ್ನೇಹಿತರೇ,
ಹಲವು ವರ್ಷಗಳಿಂದ, ಅತ್ಯಂತ ಕಠಿಣ ಜಾಗತಿಕ ಪರಿಸ್ಥಿತಿಗಳಲ್ಲಿಯೂ ಭಾರತವು ತನ್ನ ಬೆಳವಣಿಗೆಯ ವೇಗವನ್ನು ಕಾಯ್ದುಕೊಂಡಿದೆ. ಇದರ ಹಿಂದೆ ಒಂದು ಪ್ರಮುಖ ಕಾರಣವಿದೆ. ಅದೆಂದರೆ, ಪ್ರತಿಯೊಂದು ರಾಜ್ಯವು ಈ ಅಭಿವೃದ್ಧಿಯ ಪಯಣದಲ್ಲಿ ಭಾಗವಹಿಸುತ್ತದೆ, ಮತ್ತು ದೇಶವು ಪ್ರತಿ ರಾಜ್ಯವನ್ನು ತನ್ನೊಂದಿಗೆ ಜೊತೆಗೂಡಿಸಿಕೊಂಡು ಮುಂದುವರಿಯುತ್ತಿದೆ. ಪರಿಚಯಿಸಲಾಗುವ ಯಾವುದೇ ಹೊಸ ತಂತ್ರಜ್ಞಾನ ಅಥವಾ ಹೊಸ ಸೌಲಭ್ಯವು ದೆಹಲಿ ಅಥವಾ ಕೆಲವು ಪ್ರಮುಖ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಸಮಯವಿತ್ತು. ಆದರೆ ಇಂದಿನ ಭಾರತವು ಈ ಹಳೆಯ ಚಿಂತನೆಯನ್ನು ಬಿಟ್ಟು ಮುಂದುವರಿಯುತ್ತಿದೆ.
ಇಂದಿನ ನವ ಭಾರತವು ತಾನೇ ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುತ್ತಿರುವುದು ಮಾತ್ರವಲ್ಲದೆ ಹೊಸ ಸೌಲಭ್ಯಗಳನ್ನು ದೇಶದ ಮೂಲೆ ಮೂಲೆಗೂ ವೇಗವಾಗಿ ಕೊಂಡೊಯ್ಯುತ್ತಿದೆ. ಭಾರತವು ತನ್ನದೇ ಆದ ʻವಂದೇ ಭಾರತ್ʼ ರೈಲುಗಳನ್ನು ನಿರ್ಮಿಸಿದೆ. ಇಂದು, ಭಾರತವು ತನ್ನದೇ ಆದ 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಅದನ್ನು ದೇಶದ ದೂರದ ಪ್ರದೇಶಗಳಿಗೆ ಕೊಂಡೊಯ್ಯುತ್ತಿದೆ.
ಕರೋನಾದಂತಹ ಸಾಂಕ್ರಾಮಿಕ ರೋಗಕ್ಕೆ ದೇಶೀಯ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಜಗತ್ತನ್ನು ಅಚ್ಚರಿಗೊಳಿಸಿತ್ತು. ಈ ಎಲ್ಲಾ ಪ್ರಯತ್ನಗಳಲ್ಲಿ ಸಾಮಾನ್ಯ ವಿಷಯವೆಂದರೆ ಈ ಎಲ್ಲಾ ಸೌಲಭ್ಯಗಳು ಕೇವಲ ಒಂದು ನಗರ ಅಥವಾ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಈ ಸೌಲಭ್ಯಗಳು ಎಲ್ಲರನ್ನೂ ತಲುಪಿದವು ಮತ್ತು ತ್ವರಿತವಾಗಿ ತಲುಪಿದವು. ನಮ್ಮ ʻವಂದೇ ಭಾರತ್ʼ ರೈಲುಗಳು ಈಗ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ದೇಶದ ಪ್ರತಿಯೊಂದು ಮೂಲೆಯನ್ನು ಸ್ಪರ್ಶಿಸುತ್ತಿವೆ.
ಸೋದರ ಸೋದರಿಯರೇ,
ಈ ಹಿಂದೆ ಅಭಿವೃದ್ಧಿಯ ಓಟದಲ್ಲಿ ಹಿಂದುಳಿದಿದ್ದ ದೇಶದ ರಾಜ್ಯಗಳು 'ಸಬ್ ಕಾ ಸಾಥ್-ಸಬ್ ಕಾ ವಿಕಾಸ್'
ನೀತಿಯ ಗರಿಷ್ಠ ಲಾಭವನ್ನು ಪಡೆದುಕೊಂಡಿವೆ. ಕಳೆದ 8-9 ವರ್ಷಗಳಲ್ಲಿ, ಒಡಿಶಾದ ರೈಲು ಯೋಜನೆಗಳಿಗೆ ಬಜೆಟ್‌ನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. 2014ರ ಹಿಂದಿನ ಮೊದಲ 10 ವರ್ಷಗಳಲ್ಲಿ, ಪ್ರತಿ ವರ್ಷ ಸರಾಸರಿ ಸುಮಾರು 20 ಕಿಲೋಮೀಟರ್ ರೈಲು ಮಾರ್ಗಗಳನ್ನು ಮಾತ್ರ ಇಲ್ಲಿ ನಿರ್ಮಿಸಲಾಗಿತ್ತು; ಆದರೆ 2022-23 ರಲ್ಲಿ ಅಂದರೆ ಕೇವಲ ಒಂದು ವರ್ಷದಲ್ಲಿ, ಸುಮಾರು 120 ಕಿಲೋಮೀಟರ್ ಹೊಸ ರೈಲು ಮಾರ್ಗಗಳನ್ನು ಇಲ್ಲಿ ನಿರ್ಮಿಸಲಾಗಿದೆ.
2014ಕ್ಕಿಂತಲೂ ಹಿಂದಿನ 10 ವರ್ಷಗಳಲ್ಲಿ, ಒಡಿಶಾದಲ್ಲಿ ರೈಲು ಮಾರ್ಗಗಳ ಡಬ್ಲಿಂಗ್ 20 ಕಿ.ಮೀ.ಗಿಂತ ಕಡಿಮೆ ಇತ್ತು. ಕಳೆದ ವರ್ಷ ಈ ಸಂಖ್ಯೆ ಸುಮಾರು 300 ಕಿ.ಮೀ.ಗೆ ಏರಿದೆ. ಸುಮಾರು 300 ಕಿ.ಮೀ ಉದ್ದದ ಖುರ್ಧಾ-ಬೋಲಾಂಗೀರ್ ಯೋಜನೆಯು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು ಎಂಬ ಅಂಶವು ಒಡಿಶಾದ ಜನರಿಗೆ ಗೊತ್ತಿದೆ. ಇಂದು ಈ ಯೋಜನೆಯ ಕೆಲಸವೂ ವೇಗವಾಗಿ ನಡೆಯುತ್ತಿದೆ. ಅದು ಹೊಸ 'ಹರಿದಾಸ್ಪುರ-ಪಾರಾದೀಪ್' ರೈಲ್ವೆ ಮಾರ್ಗವಾಗಲಿ ಅಥವಾ ತಿತ್ಲಗಢ-ರಾಯ್ಪುರ ಮಾರ್ಗದ ಡಬ್ಲಿಂಗ್ ಮತ್ತು ವಿದ್ಯುದೀಕರಣವಾಗಲಿ, ಒಡಿಶಾದ ಜನರು ವರ್ಷಗಳಿಂದ ಕಾಯುತ್ತಿದ್ದ ಈ ಎಲ್ಲಾ ಯೋಜನೆಗಳು ಈಗ ಪೂರ್ಣಗೊಳ್ಳುತ್ತಿವೆ.
ಇಂದು, ರೈಲು ಜಾಲದ 100 ಪ್ರತಿಶತ ವಿದ್ಯುದ್ದೀಕರಣವನ್ನು ಮಾಡಿದ ದೇಶದ ರಾಜ್ಯಗಳಲ್ಲಿ ಒಡಿಶಾ ಕೂಡ ಒಂದಾಗಿದೆ. ಪಶ್ಚಿಮ ಬಂಗಾಳದಲ್ಲೂ ಶೇ.100ರಷ್ಟು ವಿದ್ಯುದ್ದೀಕರಣದ ಕಾಮಗಾರಿ ಭರದಿಂದ ಸಾಗಿದೆ. ಪರಿಣಾಮವಾಗಿ, ರೈಲುಗಳ ವೇಗ ಹೆಚ್ಚಾಗಿದೆ ಮತ್ತು ಸರಕು ಸಾಗಣೆ ರೈಲುಗಳ ಪ್ರಯಾಣ ಸಮಯವನ್ನು ಸಹ ಕಡಿಮೆ ಮಾಡಲಾಗಿದೆ. ಖನಿಜ ಸಂಪತ್ತಿನ ಬೃಹತ್ ಭಂಡಾರವಾಗಿರುವ ಒಡಿಶಾದಂತಹ ರಾಜ್ಯವು ರೈಲ್ವೆಯ ವಿದ್ಯುದ್ದೀಕರಣದಿಂದ ಇನ್ನೂ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ, ಕೈಗಾರಿಕಾ ಅಭಿವೃದ್ಧಿಯನ್ನು ವೇಗಗೊಳಿಸುವುದರ ಜೊತೆಗೆ ಡೀಸೆಲ್‌ನಿಂದ ಉಂಟಾಗುವ ಮಾಲಿನ್ಯದಿಂದ ಮುಕ್ತಿ ದೊರೆಯುತ್ತದೆ.
ಸ್ನೇಹಿತರೇ,
ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಹೆಚ್ಚು ಮಾತನಾಡದ ಮತ್ತೊಂದು ವಿಷಯವಿದೆ. ಮೂಲಸೌಕರ್ಯವು ಜನರ ಜೀವನವನ್ನು ಸುಲಭಗೊಳಿಸುವುದಲ್ಲದೆ, ಸಮಾಜವನ್ನು ಸಶಕ್ತಗೊಳಿಸುತ್ತದೆ. ಎಲ್ಲಿ ಮೂಲಸೌಲಭ್ಯಗಳ ಕೊರತೆ ಇದೆಯೋ ಅಲ್ಲಿ ಜನರ ಅಭಿವೃದ್ಧಿಯೂ ಹಿಂದುಳಿದಿದೆ. ಎಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಇದೆಯೋ, ಅಲ್ಲಿ ಜನರ ತ್ವರಿತ ಅಭಿವೃದ್ಧಿಯನ್ನೂ ಕಾಣಬಹುದಾಗಿದೆ.
ʻಪ್ರಧಾನ ಮಂತ್ರಿ ಸೌಭಾಗ್ಯʼ ಯೋಜನೆ ಅಡಿಯಲ್ಲಿ ಭಾರತ ಸರ್ಕಾರವು 2.5 ಕೋಟಿಗೂ ಹೆಚ್ಚು ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ನೀಡಿದೆ ಎಂಬುದು ನಿಮಗೆ ತಿಳಿದಿದೆ. ಇದರಲ್ಲಿ ಒಡಿಶಾದಲ್ಲಿ ಸುಮಾರು 25 ಲಕ್ಷ ಮನೆಗಳು ಮತ್ತು ಬಂಗಾಳದಲ್ಲಿ 7.25 ಲಕ್ಷ ಮನೆಗಳು ಸೇರಿವೆ. ಈಗ ಸ್ವಲ್ಪ ಊಹಿಸಿ ನೋಡಿ, ಈ ಯೋಜನೆಯನ್ನು ಜಾರಿಗೆ ತರದಿದ್ದರೆ, ಏನಾಗುತ್ತಿತ್ತು? ಇಂದಿಗೂ 21ನೇ ಶತಮಾನದಲ್ಲಿ, 2.5 ಕೋಟಿ ಕುಟುಂಬಗಳ ಮಕ್ಕಳು ಕತ್ತಲೆಯಲ್ಲಿ ಓದಬೇಕಾಗಿತ್ತು ಮತ್ತು ಕತ್ತಲೆಯಲ್ಲಿ ವಾಸಿಸಬೇಕಾಗಿತ್ತು. ಆ ಕುಟುಂಬಗಳು ಆಧುನಿಕ ಸಂಪರ್ಕ ಮತ್ತು ವಿದ್ಯುತ್‌ಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳಿಂದ ದೂರವಿರಬೇಕಾಗಿತ್ತು.
ಸ್ನೇಹಿತರೇ,
ಇಂದು ನಾವು ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 75 ರಿಂದ 150 ಕ್ಕೆ ಹೆಚ್ಚಿಸುವ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಭಾರತದ ಪಾಲಿಗೆ ದೊಡ್ಡ ಸಾಧನೆ. ಆದರೆ ಅದರ ಹಿಂದಿನ ಆಲೋಚನೆಯು ಈ ವಿಷಯವನ್ನು ಮತ್ತಷ್ಟು ವಿಸ್ತಾರವಾಗಿಸುತ್ತದೆ. ವಿಮಾನ ಪ್ರಯಾಣ ಕನಸು ಮಾತ್ರ ಎಂದುಕೊಂಡಿದ್ದ ವ್ಯಕ್ತಿ ಇಂದು ವಿಮಾನದಲ್ಲಿ ಪ್ರಯಾಣಿಲು ಸಾಧ್ಯವಾಗಿದೆ. ದೇಶದ ಸಾಮಾನ್ಯ ನಾಗರಿಕರು ವಿಮಾನ ನಿಲ್ದಾಣದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಇಂತಹ ಅನೇಕ ಚಿತ್ರಗಳನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬಹುದು. ಮಗ ಅಥವಾ ಮಗಳು ಮೊದಲ ಬಾರಿಗೆ ತಮ್ಮನ್ನು ವಿಮಾನದಲ್ಲಿ ಕರೆದೊಯ್ಯುವಾಗ ತಂದೆ-ತಾಯಿಗೆ ಆಗುವ ಸಂತೋಷ ಅನನ್ಯವಾದುದು.
ಸ್ನೇಹಿತರೇ,
ಮೂಲಸೌಕರ್ಯಕ್ಕೆ ಸಂಬಂಧಿಸಿದ ಭಾರತದ ಸಾಧನೆಗಳು ಇಂದು ಸಂಶೋಧನೆಯ ವಿಷಯವಾಗಿವೆ. ಮೂಲಸೌಕರ್ಯ ಅಭಿವೃದ್ಧಿಗೆ ನಾವು 10 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಾಗ, ಅದು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ನಾವು ಒಂದು ಪ್ರದೇಶವನ್ನು ರೈಲ್ವೆ ಮತ್ತು ಹೆದ್ದಾರಿಗಳಂತಹ ಮೂಲಸೌಕರ್ಯಗಳೊಂದಿಗೆ ಸಂಪರ್ಕಿಸಿದಾಗ, ಅದರ ಪರಿಣಾಮವು ಪ್ರಯಾಣದ ಅನುಕೂಲಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರೈತರು ಮತ್ತು ಉದ್ಯಮಿಗಳನ್ನು ಹೊಸ ಮಾರುಕಟ್ಟೆಗಳಿಗೆ ಸಂಪರ್ಕಿಸುತ್ತದೆ; ಇದು ಪ್ರವಾಸಿಗರನ್ನು ಪ್ರವಾಸಿ ಸ್ಥಳಗಳಿಗೆ ಸಂಪರ್ಕಿಸುತ್ತದೆ; ಇದು ವಿದ್ಯಾರ್ಥಿಗಳನ್ನು ಅವರ ಆಯ್ಕೆಯ ಕಾಲೇಜಿಗೆ ಸಂಪರ್ಕಿಸುತ್ತದೆ. ಈ ಚಿಂತನೆಯೊಂದಿಗೆ, ಇಂದು ಭಾರತವು ಆಧುನಿಕ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆ ಮಾಡುತ್ತಿದೆ.
ಸ್ನೇಹಿತರೇ,
ಇಂದು ದೇಶವು 'ಜನಸೇವಾ ಹೀ ಪ್ರಭು ಸೇವಾ' ಅಥವಾ ಸಾರ್ವಜನಿಕ ಸೇವೆಯೇ ದೇವರ ಸೇವೆ ಎಂಬ ಭಾವನೆಯೊಂದಿಗೆ ಮುಂದುವರಿಯುತ್ತಿದೆ. ಇಲ್ಲಿ ನಮ್ಮ ಆಧ್ಯಾತ್ಮಿಕ ಸಾಧನೆಯು ಶತಮಾನಗಳಿಂದ ಈ ಪರಿಕಲ್ಪನೆಯನ್ನು ಪೋಷಿಸಿದೆ. ಪುರಿಯಂತಹ ತೀರ್ಥಯಾತ್ರೆಗಳು, ಜಗನ್ನಾಥ ದೇವಾಲಯದಂತಹ ಪವಿತ್ರ ಸ್ಥಳಗಳು ಇದರ ಕೇಂದ್ರಗಳಾಗಿವೆ. ಅನೇಕ ಬಡ ಜನರು ಶತಮಾನಗಳಿಂದ ಭಗವಾನ್ ಜಗನ್ನಾಥನ 'ಮಹಾಪ್ರಸಾದ'ದಿಂದ ಆಹಾರವನ್ನು ಪಡೆಯುತ್ತಿದ್ದಾರೆ.
ಈ ಆಶಯಕ್ಕೆ ಅನುಗುಣವಾಗಿ, ಇಂದು ದೇಶವು ʻಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ʼ ಯೋಜನೆಯನ್ನು ಜಾರಿಗೊಳಿಸಿದ್ದು, 80 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ಇಂದು, ಒಬ್ಬ ಬಡ ವ್ಯಕ್ತಿಗೆ ಚಿಕಿತ್ಸೆಯ ಅಗತ್ಯವಿದ್ದರೆ, ʻಆಯುಷ್ಮಾನ್ ಕಾರ್ಡ್ʼ ಮೂಲಕ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಿದೆ. ʻಪ್ರಧಾನ ಮಂತ್ರಿ ಆವಾಸ್ ಯೋಜನೆʼಯಡಿ ಕೋಟ್ಯಂತರ ಬಡವರಿಗೆ ಶಾಶ್ವತ ಮನೆಗಳು ದೊರೆತಿವೆ. ಅದು ಮನೆಯಲ್ಲಿ ಉಜ್ವಲ ಗ್ಯಾಸ್ ಸಿಲಿಂಡರ್ ಆಗಿರಲಿ ಅಥವಾ ಜಲ ಜೀವನ್ ಮಿಷನ್ ಅಡಿಯಲ್ಲಿ ನೀರು ಸರಬರಾಜಾಗಿರಲಿ, ಇಂದು ಬಡವರು ಸಹ ಆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ, ಇದಕ್ಕಾಗಿ ಅವರು ವರ್ಷಗಳ ಕಾಲ ಕಾಯಬೇಕಾಯಿತು.
ಸ್ನೇಹಿತರೆ,
ಭಾರತದ ಕ್ಷಿಪ್ರ ಅಭಿವೃದ್ಧಿಗೆ, ಭಾರತದ ರಾಜ್ಯಗಳ ಸಮತೋಲಿತ ಅಭಿವೃದ್ಧಿಯೂ ಅಷ್ಟೇ ಅಗತ್ಯವಾಗಿದೆ. ಇಂದು ದೇಶವು ಸಂಪನ್ಮೂಲಗಳ ಕೊರತೆಯಿಂದಾಗಿ ಯಾವುದೇ ರಾಜ್ಯವು ಅಭಿವೃದ್ಧಿಯ ಓಟದಲ್ಲಿ ಹಿಂದುಳಿಯದಂತೆ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ 15 ನೇ ಹಣಕಾಸು ಆಯೋಗದಲ್ಲಿ, ಒಡಿಶಾ ಮತ್ತು ಬಂಗಾಳದಂತಹ ರಾಜ್ಯಗಳಿಗೆ ಮೊದಲಿಗೆ ಹೋಲಿಸಿದರೆ ಹೆಚ್ಚಿನ ಬಜೆಟ್ ಅನ್ನು ಶಿಫಾರಸು ಮಾಡಲಾಗಿದೆ. ಒಡಿಶಾದಂತಹ ರಾಜ್ಯವು ಇಷ್ಟು ವಿಶಾಲವಾದ ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿದೆ. ಆದರೆ, ಈ ಹಿಂದೆ ತಪ್ಪು ನೀತಿಗಳಿಂದಾಗಿ ಈ ರಾಜ್ಯಗಳು ತಮ್ಮದೇ ಆದ ಸಂಪನ್ಮೂಲಗಳಿಂದ ವಂಚಿತರಾಗಬೇಕಾಯಿತು.
ಖನಿಜ ಸಂಪತ್ತನ್ನು ಗಮನದಲ್ಲಿಟ್ಟುಕೊಂಡು ನಾವು ಗಣಿಗಾರಿಕೆ ನೀತಿಯನ್ನು ಸುಧಾರಿಸಿದ್ದೇವೆ. ಈ ಕಾರಣದಿಂದಾಗಿ, ಖನಿಜ ಸಂಪತ್ತನ್ನು ಹೊಂದಿರುವ ಎಲ್ಲಾ ರಾಜ್ಯಗಳ ಆದಾಯವು ಗಣನೀಯವಾಗಿ ಹೆಚ್ಚಾಗಿದೆ. ʻಜಿಎಸ್‌ಟಿʼ ಜಾರಿಗೆ ಬಂದ ನಂತರ ತೆರಿಗೆಯಿಂದ ಬರುವ ಆದಾಯವೂ ಸಾಕಷ್ಟು ಹೆಚ್ಚಾಗಿದೆ. ಇಂದು ಈ ಸಂಪನ್ಮೂಲಗಳನ್ನು ರಾಜ್ಯದ ಅಭಿವೃದ್ಧಿಗೆ ಹಾಗೂ ಬಡವರು ಮತ್ತು ಗ್ರಾಮೀಣ ಪ್ರದೇಶಗಳ ಸೇವೆಗೆ ಬಳಸಲಾಗುತ್ತಿದೆ. ಒಡಿಶಾ ನೈಸರ್ಗಿಕ ವಿಪತ್ತುಗಳನ್ನು ಯಶಸ್ವಿಯಾಗಿ ಎದುರಿಸುವುದನ್ನು ಖಾತರಿಪಡಿಸಲು ಕೇಂದ್ರ ಸರ್ಕಾರ ಸಂಪೂರ್ಣ ಗಮನ ಹರಿಸುತ್ತಿದೆ. ವಿಪತ್ತು ನಿರ್ವಹಣೆ ಮತ್ತು ʻಎನ್‌ಡಿಆರ್‌ಎಫ್ʼಗಾಗಿ ನಮ್ಮ ಸರಕಾರ ಒಡಿಶಾಕ್ಕೆ 8000 ಕೋಟಿ ರೂ. ನೀಡಿದೆ. ಇದು ಚಂಡಮಾರುತದ ಸಮಯದಲ್ಲಿ ಜನರು ಮತ್ತು ಹಣ ಎರಡನ್ನೂ ರಕ್ಷಿಸಲು ಸಹಾಯ ಮಾಡಿದೆ.
ಸ್ನೇಹಿತರೇ,
ಮುಂಬರುವ ದಿನಗಳಲ್ಲಿ ಒಡಿಶಾ, ಬಂಗಾಳ ಮತ್ತು ಇಡೀ ದೇಶದ ಅಭಿವೃದ್ಧಿಯ ವೇಗ ಇನ್ನೂ ಹೆಚ್ಚಾಗುತ್ತದೆ ಎಂಬ ವಿಶ್ವಾಸ ನನಗಿದೆ. ಭಗವಾನ್ ಜಗನ್ನಾಥ ಮತ್ತು ಕಾಳಿ ಮಾತೆಯ ಅನುಗ್ರಹದಿಂದ, ನಾವು ಖಂಡಿತವಾಗಿಯೂ ನವ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ತಲುಪುತ್ತೇವೆ. ಈ ಹಾರೈಕೆಯೊಂದಿಗೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು! ಮತ್ತೊಮ್ಮೆ ಎಲ್ಲರಿಗೂ ನಮಸ್ಕಾಋ
ಜೈ ಜಗನ್ನಾಥ್!