ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಡಿ.ವೈ. ಚಂದ್ರಚೂಡ್ ಜೀ, ಕೇಂದ್ರ ಕಾನೂನು ಸಚಿವ ಮತ್ತು ನನ್ನ ಸಹೋದ್ಯೋಗಿ ಶ್ರೀ ಅರ್ಜುನ್ ರಾಮ್ ಮೇಘವಾಲ್ ಜೀ, ಲಾರ್ಡ್ ಚಾನ್ಸೆಲರ್ ಆಫ್ ಯು.ಕೆ. ಶ್ರೀ ಅಲೆಕ್ಸ್ ಚಾಕ್, ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್ನ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ಬಾರ್ ಕೌನ್ಸಿಲ್ ಅಧ್ಯಕ್ಷರು ಮತ್ತು ಸದಸ್ಯರು, ಪ್ರತಿನಿಧಿಗಳು ವಿವಿಧ ದೇಶಗಳೇ ಹಾಗೂ ರಾಜ್ಯಗಳ ಪ್ರತಿನಿಧಿಗಳೇ ಮತ್ತು ಗೌರವಾನ್ವಿತ ಮಹಿಳೆಯರೇ ಮತ್ತು ಸಜ್ಜನರೇ!
ಕಾನೂನು ಕ್ಷೇತ್ರದ ವಿಶ್ವಾದ್ಯಂತ ಹೆಸರಾಂತ ವ್ಯಕ್ತಿಗಳನ್ನು ಭೇಟಿಯಾಗುವುದು ಮತ್ತು ಅವರ ಉಪಸ್ಥಿತಿಯಲ್ಲಿರಲು ಅವಕಾಶವನ್ನು ಹೊಂದುವುದು ನನಗೆ ಸಂತೋಷಕರ ಅನುಭವವಾಗಿದೆ. ಭಾರತದ ಎಲ್ಲಾ ಭಾಗಗಳ ಜನರು ಇಂದು ಇಲ್ಲಿ ಇದ್ದಾರೆ. ಈ ಸಮ್ಮೇಳನಕ್ಕೆ ಇಂಗ್ಲೆಂಡಿನ ಲಾರ್ಡ್ ಚಾನ್ಸೆಲರ್ ಮತ್ತು ಇಂಗ್ಲೆಂಡಿನ ಬಾರ್ ಅಸೋಸಿಯೇಶನ್ಗಳ ಪ್ರತಿನಿಧಿಗಳೂ ನಮ್ಮ ನಡುವೆ ಇದ್ದಾರೆ. ಕಾಮನ್ವೆಲ್ತ್ ಮತ್ತು ಆಫ್ರಿಕನ್ ದೇಶಗಳ ಪ್ರತಿನಿಧಿಗಳು ಸಹ ಭಾಗವಹಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಈ ಅಂತರಾಷ್ಟ್ರೀಯ ವಕೀಲರ ಸಮ್ಮೇಳನವು ‘ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬ) ಎಂಬ ಭಾರತದ ಭಾವನೆಯ ಪ್ರತೀಕವಾಗಿ ಪರಿಣಮಿಸಿದೆ. ಭಾರತದಲ್ಲಿ ನಡೆಯುವ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿರುವ ಎಲ್ಲಾ ಅಂತಾರಾಷ್ಟ್ರೀಯ ಅತಿಥಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಕಾರ್ಯಕ್ರಮವನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊತ್ತು ಉತ್ತಮವಾಗಿ ನಿರ್ವಹಿಸುತ್ತಿರುವ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ನಾನು ಮನಃಪೂರ್ವಕವಾಗಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಯಾವುದೇ ದೇಶದ ಕಾನೂನು ಕ್ಷೇತ್ರವು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಭಾರತದಲ್ಲಿ, ವರ್ಷಗಳಿಂದ, ನ್ಯಾಯಾಂಗ ಮತ್ತು ವಕೀಲರು ದೇಶದ ಕಾನೂನು ವ್ಯವಸ್ಥೆಯ ರಕ್ಷಕರಾಗಿದ್ದಾರೆ. ನಾನು ಇಂದು ಇಲ್ಲಿ ನಮ್ಮ ವಿದೇಶಿ ಅತಿಥಿಗಳಿಗೆ ವಿಶೇಷವಾದದ್ದನ್ನು ತಿಳಿಸಲು ಬಯಸುತ್ತೇನೆ. ಸ್ವಲ್ಪ ಸಮಯದ ಹಿಂದೆ, ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿತು ಮತ್ತು ಸ್ವಾತಂತ್ರ್ಯಕ್ಕಾಗಿ ಈ ಹೋರಾಟದಲ್ಲಿ ಕಾನೂನು ವೃತ್ತಿಪರರು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಸ್ವಾತಂತ್ರ್ಯದ ಹೋರಾಟದಲ್ಲಿ, ಅನೇಕ ವಕೀಲರು ರಾಷ್ಟ್ರೀಯ ಚಳುವಳಿಗೆ ಸೇರಲು ತಮ್ಮ ಕಾನೂನು ಅಭ್ಯಾಸಗಳನ್ನು ತೊರೆದರು. ನಮ್ಮ ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜೀ, ನಮ್ಮ ಸಂವಿಧಾನದ ಮುಖ್ಯ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಜೀ, ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಜೀ, ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಜೀ, ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀ, ಮತ್ತು ಸ್ವಾತಂತ್ರ್ಯದ ಹೋರಾಟ ಸಂದರ್ಭದಲ್ಲಿ ಅದು ಲೋಕಮಾನ್ಯ ತಿಲಕ್ ಜೀ, ಅಥವಾ ವೀರ್ ಸಾವರ್ಕರ್ ಜೀ ಸೇರಿದಂತೆ ಅನೇಕ ಇತರ ಮಹಾನ್ ವ್ಯಕ್ತಿಗಳು ಸ್ವತಃ ವಕೀಲರಾಗಿದ್ದರು. ಇದರರ್ಥ ಕಾನೂನು ವೃತ್ತಿಪರರ ಅನುಭವವು ಸ್ವತಂತ್ರ ಭಾರತದ ಅಡಿಪಾಯವನ್ನು ಬಲಪಡಿಸಿತು. ಮತ್ತು ಇಂದು, ಭಾರತದಲ್ಲಿ ಪ್ರಪಂಚದ ನಂಬಿಕೆಯು ಬೆಳೆಯುತ್ತಲೇ ಇದೆ. ಭಾರತದ ನಿಷ್ಪಕ್ಷಪಾತ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯು ಆ ನಂಬಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಭಾರತವು ಹಲವಾರು ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಿರುವ ಉತ್ತುಂಗದ ಸಮಯದಲ್ಲಿ ಇಂದು ಈ ಸಮ್ಮೇಳನ ನಡೆಯುತ್ತಿದೆ. ಕೇವಲ ಒಂದು ದಿನದ ಹಿಂದೆ, ದೇಶದ ಸಂಸತ್ತು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ (ರಾಜ್ಯಗಳ ವಿಧಾನಸಭೆಗಳು) ಮಹಿಳೆಯರಿಗೆ 33 ಪ್ರತಿಶತದಷ್ಟು ಸ್ಥಾನಗಳನ್ನು ಮೀಸಲಿಡುವ ಕಾನೂನನ್ನು ಅಂಗೀಕರಿಸಿತು. ನಾರಿ ಶಕ್ತಿ ವಂದನ್ ಅಧಿನಿಯಮ್ ಹೊಸ ದಿಕ್ಕನ್ನು ರೂಪಿಸುತ್ತದೆ ಮತ್ತು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹೊಸ ಶಕ್ತಿಯನ್ನು ತರುತ್ತದೆ.
ಕೆಲವೇ ದಿನಗಳ ಹಿಂದೆ, ಐತಿಹಾಸಿಕ ಜಿ20 ಶೃಂಗಸಭೆಯ ಸಮಯದಲ್ಲಿ ಜಗತ್ತು ನಮ್ಮ ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ ಮತ್ತು ನಮ್ಮ ರಾಜತಾಂತ್ರಿಕತೆಯ ವಿಹಂಗಮ ನೋಟವನ್ನು ನೋಡಿದೆ. ಒಂದು ತಿಂಗಳ ಹಿಂದೆ, ಇದೇ ದಿನ, ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ತಲುಪಿದ ವಿಶ್ವದ ಮೊದಲ ದೇಶವಾಯಿತು. ಈ ಸಾಧನೆಗಳಿಂದ ಆತ್ಮವಿಶ್ವಾಸದಿಂದ ತುಂಬಿ, ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶದ ಗುರಿಯತ್ತ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈ ಗುರಿಯನ್ನು ಸಾಧಿಸಲು, ಭಾರತಕ್ಕೆ ನಿಸ್ಸಂದೇಹವಾಗಿ ಬಲವಾದ, ನಿಷ್ಪಕ್ಷಪಾತ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯು ಅದರ ಅಡಿಪಾಯದ ಅಗತ್ಯವಿರುವುದು ಕಾರಣವಾಗಿದೆ. ಅಂತರಾಷ್ಟ್ರೀಯ ವಕೀಲರ ಸಮ್ಮೇಳನವು ಭಾರತಕ್ಕೆ ಈ ದಿಶೆಯಲ್ಲಿ ಬಹಳ ಪ್ರಯೋಜನಕಾರಿಯಾಗಿದೆ ಎಂದು ನಾನು ನಂಬುತ್ತೇನೆ. ಈ ಸಮ್ಮೇಳನದಲ್ಲಿ ಪರಸ್ಪರರ ಉತ್ತಮ ಅಭ್ಯಾಸಗಳಿಂದ ಎಲ್ಲಾ ರಾಷ್ಟ್ರಗಳು ಕಲಿಯಬಹುದು ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
21 ನೇ ಶತಮಾನದಲ್ಲಿ, ನಾವು ಪರಸ್ಪರ ಆಳವಾಗಿ ಸಂಪರ್ಕ ಹೊಂದಿದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಪ್ರತಿ ಕಾನೂನು ಮನಸ್ಸು ಅಥವಾ ಸಂಸ್ಥೆಯು ತನ್ನ ಅಧಿಕಾರ ವ್ಯಾಪ್ತಿಯ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಕೂಡಿರುತ್ತದೆ. ಆದಾಗ್ಯೂ, ನಾವು ಹೋರಾಡುತ್ತಿರುವ ಅನೇಕ ಶಕ್ತಿಗಳು ಗಡಿಗಳು ಅಥವಾ ನ್ಯಾಯವ್ಯಾಪ್ತಿಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮತ್ತು ಬೆದರಿಕೆಗಳು ಜಾಗತಿಕವಾಗಿದ್ದಾಗ, ಅವುಗಳನ್ನು ಎದುರಿಸುವ ವಿಧಾನವು ಜಾಗತಿಕವಾಗಿರಬೇಕು. ಅದು ಸೈಬರ್ ಭಯೋತ್ಪಾದನೆ, ಹಣ ವರ್ಗಾವಣೆ, ಕೃತಕ ಬುದ್ಧಿಮತ್ತೆ ಅಥವಾ ಅದರ ದುರುಪಯೋಗ ಆಗಿರಲಿ, ಸಹಕಾರಕ್ಕೆ ಜಾಗತಿಕ ಚೌಕಟ್ಟಿನ ಅಗತ್ಯವಿರುವ ಅನೇಕ ಸಮಸ್ಯೆಗಳಿವೆ. ಇದು ಕೇವಲ ಯಾವುದೇ ಒಂದು ಸರ್ಕಾರ ಅಥವಾ ಆಡಳಿತಕ್ಕೆ ಸಂಬಂಧಿಸಿದ ವಿಷಯವಲ್ಲ. ಈ ಸವಾಲುಗಳನ್ನು ಎದುರಿಸಲು, ನಾವು ಏರ್ ಟ್ರಾಫಿಕ್ ಕಂಟ್ರೋಲ್ಗೆ ಸಹಕರಿಸುವಂತೆಯೇ ವಿವಿಧ ದೇಶಗಳ ಕಾನೂನು ಚೌಕಟ್ಟುಗಳು ಒಗ್ಗೂಡುವ ಅಗತ್ಯವಿದೆ. ನಿಮ್ಮ ಕಾನೂನುಗಳು ನಿಮ್ಮವು, ಮತ್ತು ನನ್ನ ಕಾನೂನುಗಳು ನನ್ನವು ಮತ್ತು ನಾನು ಹೆದರುವುದಿಲ್ಲ ಎಂದು ಯಾರೂ ಹೇಳುವುದಿಲ್ಲ. ಹೀಗಾದರೆ ಎಲ್ಲೂ ವಿಮಾನ ಇಳಿಯುವಿಕೆ(ಲ್ಯಾಂಡ್ ) ಆಗುವುದಿಲ್ಲ. ಪ್ರತಿಯೊಬ್ಬರೂ ಸಾಮಾನ್ಯ ನಿಯಮಗಳು ಮತ್ತು ನಿಯಮಗಳು, ಶಿಷ್ಟಾಚಾರ(ಪ್ರೋಟೋಕಾಲ್ ) ಗಳಿಗೆ ಬದ್ಧರಾಗಿರುತ್ತಾರೆ. ಅದೇ ರೀತಿಯಲ್ಲಿ, ನಾವು ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಚೌಕಟ್ಟನ್ನು ಸ್ಥಾಪಿಸಬೇಕಾಗಿದೆ. ಅಂತರಾಷ್ಟ್ರೀಯ ವಕೀಲರ ಸಮ್ಮೇಳನವು ನಿಸ್ಸಂದೇಹವಾಗಿ ಈ ದಿಕ್ಕನ್ನು ಪರಿಶೀಲಿಸಬೇಕು ಮತ್ತು ಜಗತ್ತಿಗೆ ಹೊಸ ದಿಕ್ಕನ್ನು ನೀಡಬೇಕು.
ಸ್ನೇಹಿತರೇ,
ಶ್ರೀ ತುಷಾರ್ ಜೀ ಅವರು ವಿವರಿಸಿದಂತೆ ಈ ಸಮ್ಮೇಳನದಲ್ಲಿ ಚರ್ಚೆಯ ಪ್ರಮುಖ ವಿಷಯವೆಂದರೆ ಪರ್ಯಾಯ ವಿವಾದ ಪರಿಹಾರ (ಎ.ಡಿ.ಆರ್). ವಾಣಿಜ್ಯ ವಹಿವಾಟುಗಳ ಹೆಚ್ಚುತ್ತಿರುವ ಸಂಕೀರ್ಣತೆಯ ಜೊತೆಗೆ, ಎ.ಡಿ.ಆರ್. ವಿಶ್ವಾದ್ಯಂತ ಆವೇಗವನ್ನು ಪಡೆಯುತ್ತಿದೆ. ಈ ಸಮ್ಮೇಳನವು ಈ ವಿಷಯವನ್ನು ವಿಸ್ತಾರವಾಗಿ ಒಳಗೊಂಡಿದೆ ಎಂದು ನನಗೆ ತಿಳಿಸಲಾಗಿದೆ. ಭಾರತದಲ್ಲಿ, ಶತಮಾನಗಳಿಂದ ಪಂಚಾಯತ್ಗಳ ಮೂಲಕ ವಿವಾದಗಳನ್ನು ಪರಿಹರಿಸುವ ಬಗ್ಗೆ; ನಾವು ಒಂದು ಸಂಪ್ರದಾಯವನ್ನು ಹೊಂದಿದ್ದೇವೆ, ಅದು ನಮ್ಮ ಸಂಸ್ಕೃತಿಯಲ್ಲಿ ಬೇರೂರಿದೆ. ಈ ಅನೌಪಚಾರಿಕ ವ್ಯವಸ್ಥೆಯನ್ನು ಔಪಚಾರಿಕಗೊಳಿಸಲು ನಮ್ಮ ಸರ್ಕಾರವು ಮಧ್ಯಸ್ಥಿಕೆ ಕಾಯಿದೆಯನ್ನೂ ಜಾರಿಗೆ ತಂದಿದೆ. ಹೆಚ್ಚುವರಿಯಾಗಿ, ಭಾರತದಲ್ಲಿರುವ ಲೋಕ ಅದಾಲತ್ಗಳ (ಜನತಾ ನ್ಯಾಯಾಲಯಗಳು) ವಿವಾದಗಳನ್ನು ಪರಿಹರಿಸುವ ಮಹತ್ವದ ಸಾಧನವಾಗಿದೆ. ನಾನು ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಯ ದೊರಕುವವರೆಗೆ ಒಂದು ಪ್ರಕರಣವನ್ನು ಇತ್ಯರ್ಥಪಡಿಸಲು ತಗಲುವ ಸರಾಸರಿ ವೆಚ್ಚ ಕೇವಲ 35 ಪೈಸೆಯಾಗಿತ್ತು ಎಂಬುದನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ನಮ್ಮ ದೇಶದಲ್ಲಿ ಈ ವ್ಯವಸ್ಥೆ ಚಾಲ್ತಿಯಲ್ಲಿದೆ. ಕಳೆದ ಆರು ವರ್ಷಗಳಲ್ಲಿ ಲೋಕ ಅದಾಲತ್ ಗಳಲ್ಲಿ ಸುಮಾರು 7 ಲಕ್ಷ ಪ್ರಕರಣಗಳನ್ನು ಪರಿಹರಿಸಲಾಗಿದೆ.
ಸ್ನೇಹಿತರೇ,
ನ್ಯಾಯ ವಿತರಣೆಯ ಮತ್ತೊಂದು ಮಹತ್ವದ ಅಂಶವೆಂದರೆ, ಇದನ್ನು ಸಾಮಾನ್ಯವಾಗಿ ಸಾಕಷ್ಟು ಚರ್ಚಿಸಲಾಗುವುದಿಲ್ಲ. ಅದು ಭಾಷೆ ಮತ್ತು ಕಾನೂನಿನ ಸರಳತೆಯಾಗಿದೆ. ಈಗ ನಾವು ಕಾನೂನನ್ನು ಎರಡು ರೀತಿಯಲ್ಲಿ ಪ್ರಸ್ತುತಪಡಿಸಲು ಯೋಚಿಸುತ್ತಿದ್ದೇವೆ: ಒಂದು ನಿಮಗೆ ತಿಳಿದಿರುವ ಭಾಷೆಯಲ್ಲಿ ಮತ್ತು ಇನ್ನೊಂದು ನಮ್ಮ ದೇಶದ ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ. ಸಾಮಾನ್ಯ ವ್ಯಕ್ತಿಯೂ ಕಾನೂನನ್ನು ತನ್ನದೆಂದು ಪರಿಗಣಿಸಬೇಕು. ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ನಾನು ಕೂಡ ಈ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದ್ದೇನೆ. ವ್ಯವಸ್ಥೆಯು ಒಂದೇ ಚೌಕಟ್ಟಿನಲ್ಲಿ ಬೇರೂರಿದೆಯಾದರೂ, ಅದನ್ನು ಸುಧಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ, ನನಗೆ ಸಮಯವಿದೆ, ನನ್ನಲ್ಲಿ ಸಾಕಷ್ಟು ಸಮಯವಿದೆ, ಮತ್ತು ನಾನು ಅದರ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಕಾನೂನುಗಳನ್ನು ಬರೆಯುವ ಭಾಷೆ ಮತ್ತು ನ್ಯಾಯಾಲಯದ ವಿಚಾರಣೆಗಳು ನಡೆಯುವ ಭಾಷೆ ನ್ಯಾಯವನ್ನು ಖಾತ್ರಿಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಿಂದೆ, ಯಾವುದೇ ಕಾನೂನನ್ನು ರಚಿಸುವುದು ಬಹಳ ಸಂಕೀರ್ಣವಾಗಿತ್ತು. ಆದರೆ, ನಾನು ಮೊದಲೇ ಹೇಳಿದಂತೆ, ಸರ್ಕಾರವಾಗಿ, ನಾವು ಅದನ್ನು ಸಾಧ್ಯವಾದಷ್ಟು ಸರಳೀಕರಿಸಲು ಮತ್ತು ನಮ್ಮಿಂದ ಸಾಧ್ಯವಾದಷ್ಟು ದೇಶದ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ.
ನೀವು ಡೇಟಾ ಸಂರಕ್ಷಣಾ ಕಾನೂನನ್ನು ನೋಡಿರಬೇಕು. ನಾವು ಅದರಲ್ಲಿ ಸರಳೀಕರಣದ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದ್ದೇವೆ ಮತ್ತು ಆ ವ್ಯಾಖ್ಯಾನಗಳೊಂದಿಗೆ ಸಾಮಾನ್ಯ ವ್ಯಕ್ತಿಗೆ ಇದು ಅನುಕೂಲಕರವಾಗಿರುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಇದು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ನಾನು ನಂಬುತ್ತೇನೆ. ನ್ಯಾಯಮೂರ್ತಿ ಚಂದ್ರಚೂಡ್ ಜೀ ಅವರನ್ನು ನಾನು ಸಾರ್ವಜನಿಕವಾಗಿ ಶ್ಲಾಘಿಸಿದ್ದೇನೆ ಏಕೆಂದರೆ ಇನ್ನು ಮುಂದೆ ನ್ಯಾಯಾಲಯದ ತೀರ್ಪಿನ ಕಾರ್ಯಕಾರಿ ಭಾಗವು ದಾವೆದಾರರ ಭಾಷೆಯಲ್ಲಿ ಲಭ್ಯವಾಗಲಿದೆ ಎಂದು ಅವರು ಹೇಳಿದರು. ನೋಡಿ, ಸ್ವಲ್ಪ ಆಲೋಚಿಸಿ, ಈ ಸಣ್ಣ ಹೆಜ್ಜೆ ಇಡಲೂ ಕೂಡಾ ನಮ್ಮ ದೇಶಕ್ಕೆ 75 ವರ್ಷ ಬೇಕಾಯಿತು. ನಾನೂ ಇದರಲ್ಲಿ ಮಧ್ಯಪ್ರವೇಶಿಸಬೇಕಾಯಿತು. ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪುಗಳನ್ನು ಹಲವು ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸಿದ್ದಕ್ಕಾಗಿ ನಾನು ಅಭಿನಂದಿಸಲು ಬಯಸುತ್ತೇನೆ. ಇದರಿಂದ ದೇಶದ ಸಾಮಾನ್ಯ ಜನರಿಗೆ ಹೆಚ್ಚಿನ ಸಹಾಯವಾಗುತ್ತದೆ. ವೈದ್ಯರು ರೋಗಿಯೊಂದಿಗೆ ಅವರ ಭಾಷೆಯಲ್ಲಿ ಮಾತನಾಡಿದರೆ ಅರ್ಧದಷ್ಟು ಕಾಯಿಲೆ ವಾಸಿಯಾಗುತ್ತದೆ. ಇಲ್ಲಿ, ನಾವು ಇದೇ ರೀತಿಯ ಪ್ರಗತಿಯನ್ನು ಮಾಡಲು ಪ್ರಯತ್ನಿಸಿದ್ದೇವೆ, ಪ್ರಗತಿ ಹೊಂದಿದ್ದೇವೆ.
ಸ್ನೇಹಿತರೇ,
ತಂತ್ರಜ್ಞಾನ, ಸುಧಾರಣೆಗಳು ಮತ್ತು ಹೊಸ ನ್ಯಾಯಾಂಗ ಅಭ್ಯಾಸಗಳ ಮೂಲಕ ಕಾನೂನು ಕಾರ್ಯವಿಧಾನಗಳನ್ನು ಸುಧಾರಿಸುವಲ್ಲಿ ನಾವು ನಿರಂತರವಾಗಿ ಕೆಲಸ ಮಾಡಬೇಕು. ತಾಂತ್ರಿಕ ಪ್ರಗತಿಯು ನ್ಯಾಯಾಂಗ ವ್ಯವಸ್ಥೆಗೆ ಗಮನಾರ್ಹ ಮಾರ್ಗಗಳನ್ನು ಸೃಷ್ಟಿಸಿದೆ. ವಾಸ್ತವವಾಗಿ, ತಾಂತ್ರಿಕ ಪ್ರಗತಿಗಳು ನಮ್ಮ ವ್ಯಾಪಾರ, ಹೂಡಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಅತ್ಯುತ್ತಮ ಉತ್ತೇಜನವನ್ನು ನೀಡಿವೆ. ಆದ್ದರಿಂದ, ಕಾನೂನು ವೃತ್ತಿಗೆ ಸಂಬಂಧಿಸಿದ ವ್ಯಕ್ತಿಗಳು ಸಹ ಈ ತಾಂತ್ರಿಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು. ವಿಶ್ವಾದ್ಯಂತ ಕಾನೂನು ವ್ಯವಸ್ಥೆಗಳ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಅಂತರರಾಷ್ಟ್ರೀಯ ವಕೀಲರ ಸಮ್ಮೇಳನವು ಸಹಕಾರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಈ ಯಶಸ್ವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ತುಂಬ ಧನ್ಯವಾದಗಳು.