ʻಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಮೈತ್ರಿಕೂಟʼಕ್ಕೆ ಚಾಲನೆ
ಹುಲಿ ಸಂಖ್ಯೆ 3167 ಎಂದು ಘೋಷಿಸಿದ ಪ್ರಧಾನಿ
ಹುಲಿ ಸಂರಕ್ಷಣೆಯ ಸ್ಮರಣಾರ್ಥ ನಾಣ್ಯ ಮತ್ತು ಹಲವಾರು ಪ್ರಕಟಣೆಗಳ ಲೋಕಾರ್ಪಣೆ
"ಹುಲಿ ಯೋಜನೆಯ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಹೆಮ್ಮೆಯ ಕ್ಷಣವಾಗಿದೆ"
“ಭಾರತವು ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯ ನಡುವಿನ ಸಂಘರ್ಷವನ್ನು ನಂಬುವುದಿಲ್ಲ, ಬದಲಿಗೆ ಅವೆರಡರ ಸಹಬಾಳ್ವೆಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ "
“ಪ್ರಕೃತಿಯ ರಕ್ಷಣೆಯು ಸಂಸ್ಕೃತಿಯ ಒಂದು ಭಾಗವಾಗಿರುವ ದೇಶ ಭಾರತ"
"ದೊಡ್ಡ ಬೆಕ್ಕುಗಳ ಉಪಸ್ಥಿತಿಯು ಎಲ್ಲೆಡೆ ಸ್ಥಳೀಯ ಜನರ ಜೀವನ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ"
"ವನ್ಯಜೀವಿ ಸಂರಕ್ಷಣೆಯು ಒಂದು ದೇಶದ ಸಮಸ್ಯೆಯಲ್ಲ, ಅದೊಂದು ಸಾರ್ವತ್ರಿಕ ಸಮಸ್ಯೆ”
"ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಮೈತ್ರಿಕೂಟʼವು ವಿಶ್ವದ 7 ಪ್ರಮುಖ ದೊಡ್ಡ ಬೆಕ್ಕುಗಳ ಸಂರಕ್ಷಣೆಯ ಮೇಲೆ ಗಮನ ಹರಿಸುತ್ತದೆ"
"ಪರಿಸರವು ಸುರಕ್ಷಿತವಾಗಿದ್ದರೆ ಮತ್ತು ಜೀವವೈವಿಧ್ಯತೆಯು ವಿಸ್ತರಿಸುತ್ತಲೇ ಇದ್ದರೆ ಮಾತ್ರ ಮನುಕುಲಕ್ಕೆ ಉತ್ತಮ ಭವಿಷ್ಯ ಸಾಧ್ಯ"

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಭೂಪೇಂದರ್ ಯಾದವ್ ಅವರೇ, ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರೇ, ದೇಶಗಳ ಇತರ ಮಂತ್ರಿಗಳು, ರಾಜ್ಯಗಳ ಸಚಿವರು, ಇತರ ಪ್ರತಿನಿಧಿಗಳು, ಮಹಿಳೆಯರು ಮತ್ತು ಮಹನೀಯರೇ!

ಮೊದಲಿಗೆ, ನಾನು ಒಂದು ಗಂಟೆ ತಡವಾಗಿ ಬಂದಿದ್ದಕ್ಕಾಗಿ ನಿಮ್ಮೆಲ್ಲರ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಬೆಳಗ್ಗೆ ಆರು ಗಂಟೆಗೆ ಹೊರಟೆ; ಕಾಡಿಗೆ ಭೇಟಿ ನೀಡಿದ ನಂತರ ಸಮಯಕ್ಕೆ ಸರಿಯಾಗಿ ಹಿಂತಿರುಗುತ್ತೇನೆ ಎಂದು ನಾನು ಭಾವಿಸಿದ್ದೆ. ನಿಮ್ಮೆಲ್ಲರನ್ನೂ ಕಾಯುವಂತೆ ಮಾಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಹುಲಿಗಳ ಸಂಖ್ಯೆ ಏರಿಕೆ ದೃಷ್ಟಿಯಿಂದ ಇದು ಹೆಮ್ಮೆಯ ಕ್ಷಣವಾಗಿದೆ; ಈ ಕುಟುಂಬವು ವಿಸ್ತರಿಸುತ್ತಿದೆ. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುಲಿಗೆ ಗೌರವ ತೋರುವಂತೆ ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಧನ್ಯವಾದಗಳು!

ಇಂದು ಬಹಳ ಮುಖ್ಯವಾದ ಮೈಲುಗಲ್ಲಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ʻಹುಲಿ ಯೋಜನೆʼಯು (ಪ್ರಾಜೆಕ್ಟ್‌ ಟೈಗರ್) 50 ವರ್ಷಗಳನ್ನು ಪೂರೈಸಿದೆ. ‌ʻಹುಲಿ ಯೋಜನೆʼಯ ಯಶಸ್ಸು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಹೆಮ್ಮೆಯ ವಿಷಯವಾಗಿದೆ. ಭಾರತವು ಹುಲಿಯನ್ನು ರಕ್ಷಿಸಿರುವುದು ಮಾತ್ರವಲ್ಲದೆ, ಹುಲಿಗಳು ಅಭಿವೃದ್ಧಿ ಹೊಂದಲು ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ನೀಡಿದೆ. ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ವಿಶ್ವದ ಹುಲಿ ಜನಸಂಖ್ಯೆಯ 75 ಪ್ರತಿಶತಕ್ಕೆ ಭಾರತವು ನೆಲೆಯಾಗಿದೆ ಎಂಬ ವಿಷಯ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿದೆ. ಭಾರತದ ಹುಲಿ ಮೀಸಲು ಪ್ರದೇಶವು 75,000 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಕಳೆದ 10-12 ವರ್ಷಗಳಲ್ಲಿ ಹುಲಿಗಳ ಸಂಖ್ಯೆಯೂ ಶೇಕಡಾ 75 ರಷ್ಟು ಹೆಚ್ಚಾಗಿದೆ ಎಂಬುದು ಕಾಕತಾಳೀಯವೇ ಸರಿ. ಎಲ್ಲರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಮತ್ತು ಈ ಯಶಸ್ಸಿಗಾಗಿ ನಾನು ಇಡೀ ದೇಶವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು, ಅನೇಕ ದೇಶಗಳಲ್ಲಿ ಹುಲಿಗಳ ಸಂಖ್ಯೆ ತಟಸ್ಥವಾಗಿರುವ ಅಥವಾ ಕಡಿಮೆಯಾಗುತ್ತಿರುವ ಸಮಯದಲ್ಲಿ, ಭಾರತದಲ್ಲಿ ಹುಲಿಗಳ ಸಂಖ್ಯೆ ಹೇಗೆ ವೇಗವಾಗಿ ಹೆಚ್ಚುತ್ತಿದೆ ಎಂಬ ಬಗ್ಗೆ ಪ್ರಪಂಚದಾದ್ಯಂತದ ವನ್ಯಜೀವಿ ಪ್ರಿಯರು ದಿಗ್ಭ್ರಮೆಗೊಂಡಿದ್ದಾರೆ. ಭಾರತದ ಸಂಪ್ರದಾಯಗಳು, ಇಲ್ಲಿನ ಸಂಸ್ಕೃತಿ ಮತ್ತು ಜೀವವೈವಿಧ್ಯತೆ ಹಾಗೂ ಪರಿಸರದ ಬಗ್ಗೆ ಸ್ವಾಭಾವಿಕ ಅಕ್ಕರೆಯಲ್ಲಿ ಇದಕ್ಕೆ ಉತ್ತರ ಅಡಗಿದೆ. ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯ ನಡುವಿನ ಸಂಘರ್ಷವನ್ನು ನಾವು ನಂಬುವುದಿಲ್ಲ, ಬದಲಿಗೆ ಅವೆರಡರ ಸಹಬಾಳ್ವೆಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಹುಲಿಗಳಿಗೆ ಸಂಬಂಧಿಸಿದಂತೆ ಸಾವಿರಾರು ವರ್ಷಗಳ ಹಳೆಯ ಇತಿಹಾಸವನ್ನು ನಾವು ಹೊಂದಿದ್ದೇವೆ. ಮಧ್ಯಪ್ರದೇಶದ ಹತ್ತು ಸಾವಿರ ವರ್ಷಗಳಷ್ಟು ಹಳೆಯದಾದ ʻರಾಕ್ ಆರ್ಟ್ʼನಲ್ಲಿ ಹುಲಿಗಳ ಗ್ರಾಫಿಕಲ್ ಪ್ರಾತಿನಿಧ್ಯಗಳು ಕಂಡುಬಂದಿವೆ. ಮಧ್ಯ ಭಾರತದಲ್ಲಿ ವಾಸಿಸುವ ಭರಿಯಾಗಳು ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುವ ವರ್ಲಿಗಳಂತಹ ದೇಶದ ಅನೇಕ ಸಮುದಾಯಗಳು ಹುಲಿಯನ್ನು ಪೂಜಿಸುತ್ತವೆ. ನಮ್ಮ ದೇಶದ ಅನೇಕ ಬುಡಕಟ್ಟುಗಳಲ್ಲಿ ಹುಲಿಯನ್ನು ನಮ್ಮ ಸ್ನೇಹಿತ ಮತ್ತು ಸಹೋದರ ಎಂದು ಪರಿಗಣಿಸಲಾಗಿದೆ. ಅಲ್ಲದೆ,  ಹುಲಿಯು ನಾವು ಪೂಜಿಸುವ ದುರ್ಗಾ ಮಾತೆ ಮತ್ತು ಅಯ್ಯಪ್ಪನ ವಾಹನವಾಗಿದೆ.

ಸ್ನೇಹಿತರೇ,

ಪ್ರಕೃತಿಯ ರಕ್ಷಣೆಯು ಭಾರತದ ಸಂಸ್ಕೃತಿಯಲ್ಲೇ ಅಡಕವಾಗಿದೆ. ಹಾಗಾಗಿಯೇ ಇಂದು ದೇಶವು ವನ್ಯಜೀವಿ ಸಂರಕ್ಷಣೆಯಲ್ಲಿ ಅನೇಕ ವಿಶಿಷ್ಟ ಸಾಧನೆಗಳನ್ನು ಕಂಡಿದೆ. ವಿಶ್ವದ ಭೂಪ್ರದೇಶದ ಕೇವಲ 2.4 ಪ್ರತಿಶತವನ್ನು ಹೊಂದಿರುವ ಭಾರತವು ಜಾಗತಿಕ ಜೀವವೈವಿಧ್ಯತೆಗೆ ಸುಮಾರು 8 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಭಾರತವು ವಿಶ್ವದ ಅತಿದೊಡ್ಡ ಹುಲಿ ವ್ಯಾಪ್ತಿ ದೇಶವಾಗಿದೆ. ಸುಮಾರು 30,000 ಆನೆಗಳನ್ನು ಹೊಂದಿರುವ ನಮ್ಮದು ವಿಶ್ವದ ಅತಿದೊಡ್ಡ ಏಷ್ಯಾಟಿಕ್ ಆನೆ ವ್ಯಾಪ್ತಿಯ ದೇಶವೂ ಹೌದು! ಭಾರತದಲ್ಲಿ ಸುಮಾರು 3,000 ಖಡ್ಗಮೃಗಗಳಿದ್ದು, ಇವುಗಳ ಈ ಸಂಖ್ಯೆಯು ಭಾರತವನ್ನು ವಿಶ್ವದ ಅತಿದೊಡ್ಡ ಒಂಟಿ ಕೊಂಬಿನ ಖಡ್ಗಮೃಗ ದೇಶವನ್ನಾಗಿ ಮಾಡಿದೆ. ಏಷ್ಯಾಟಿಕ್ ಸಿಂಹಗಳನ್ನು ಹೊಂದಿರುವ ವಿಶ್ವದ ಏಕೈಕ ದೇಶ ನಮ್ಮದು. ಸಿಂಹಗಳ ಸಂಖ್ಯೆ 2015 ರಲ್ಲಿ ಸುಮಾರು 525 ಇದ್ದದ್ದು 2020ರಲ್ಲಿ ಸುಮಾರು 675 ಕ್ಕೆ ಏರಿದೆ. ನಮ್ಮ ಚಿರತೆಗಳ ಸಂಖ್ಯೆ ಕೇವಲ 4 ವರ್ಷಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚಾಗಿದೆ. ಗಂಗೆಯಂತಹ ನದಿಗಳನ್ನು ಸ್ವಚ್ಛಗೊಳಿಸಿದ ಕೆಲಸವು ಜೀವವೈವಿಧ್ಯತೆಗೆ ಸಹಾಯ ಮಾಡಿದೆ. ಅಪಾಯದಲ್ಲಿದೆ ಎಂದು ಪರಿಗಣಿಸಲಾದ ಕೆಲವು ಜಲಚರ ಪ್ರಭೇದಗಳ ಸಂಖ್ಯೆಯಲ್ಲಿ ಸುಧಾರಣೆ ಕಂಡುಬಂದಿದೆ. ಈ ಎಲ್ಲಾ ಸಾಧನೆಗಳಿಗೆ ಜನರ ಭಾಗವಹಿಸುವಿಕೆ, ಸಂರಕ್ಷಣೆಯ ಸಂಸ್ಕೃತಿ ಮತ್ತು 'ಸಬ್‌ ಕಾ ಪ್ರಯಾಸ್' (ಸಾಮೂಹಿಕ ಪ್ರಯತ್ನಗಳು) ಕಾರಣ.

ವನ್ಯಜೀವಿಗಳು ಅಭಿವೃದ್ಧಿ ಹೊಂದುವಂತಾಗಲು, ಪರಿಸರ ವ್ಯವಸ್ಥೆಗಳು ಅಭಿವೃದ್ಧಿ ಹೊಂದುವುದು ಮುಖ್ಯ. ಇದು ಭಾರತದಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತದ ʻರಾಮ್ಸರ್ ತಾಣʼಗಳ ಪಟ್ಟಿಗೆ ಇನ್ನೂ ಹನ್ನೊಂದು ಜೌಗುಪ್ರದೇಶಗಳು ಸೇರ್ಪಡೆಗೊಂಡಿವೆ. ಇದರಿಂದ ದೇಶದಲ್ಲಿ ಒಟ್ಟು ʻರಾಮ್ಸರ್‌ ತಾಣʼಗಳ ಸಂಖ್ಯೆ  75ಕ್ಕೆ ಹೆಚ್ಚಿದೆ. ಅರಣ್ಯ ಮತ್ತು ಹಸಿರು ಹೊದಿಕೆಯೂ ಹೆಚ್ಚುತ್ತಿದೆ. 2019ಕ್ಕೆ ಹೋಲಿಸಿದರೆ 2021ರ ವೇಳೆಗೆ ಭಾರತದಲ್ಲಿ ಅರಣ್ಯ ಮತ್ತು ಹಸಿರು ಪ್ರದೇಶದ ವ್ಯಾಪ್ತಿ 2,200 ಚದರ ಕಿಲೋಮೀಟರ್ನಷ್ಟು ಹೆಚ್ಚಿದೆ. ಕಳೆದ ದಶಕದಲ್ಲಿ, ಸಮುದಾಯ ಮೀಸಲು ಅರಣ್ಯಗಳ ಸಂಖ್ಯೆ 43 ರಿಂದ 100ಕ್ಕೆ ಏರಿದೆ. ಒಂದು ದಶಕದಲ್ಲಿ, ಪರಿಸರ ಸೂಕ್ಷ್ಮ ವಲಯಗಳಾಗಿ ಘೋಷಿಸಲಾದ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಸಂಖ್ಯೆಯು ಒಂಬತ್ತರಿಂದ 468ಕ್ಕೆ ಹೆಚ್ಚಳಗೊಂಡಿದೆ.

ಸ್ನೇಹಿತರೇ,

ಈ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ಸುದೀರ್ಘ ಅನುಭವದ ಪ್ರಯೋಜನವನ್ನು ನಾನು ಪಡೆದಿದ್ದೇನೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಸಿಂಹಗಳ ಸಂಖ್ಯೆಗೆ ಸಂಬಂಧಿಸಿದಂತೆ ನಾವು ಕೆಲಸ ಮಾಡಿದ್ದೇವೆ. ಕೇವಲ ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತಗೊಳಿಸುವುದರಿಂದ ಕಾಡು ಪ್ರಾಣಿಯನ್ನು ಉಳಿಸಲು ಸಾಧ್ಯವಿಲ್ಲ ಎಂದು ನಾನು ಕಲಿತಿದ್ದೇನೆ. ಸ್ಥಳೀಯ ಜನರು ಮತ್ತು ಪ್ರಾಣಿಗಳ ನಡುವೆ ಸಂಬಂಧವನ್ನು ಏರ್ಪಡಿಸುವುದು ಅವಶ್ಯಕ. ಈ ಸಂಬಂಧವು ಭಾವನೆ ಮತ್ತು ಆರ್ಥಿಕತೆಯನ್ನು ಆಧರಿಸಿರಬೇಕು. ಆದ್ದರಿಂದ, ನಾವು ಗುಜರಾತ್‌ನಲ್ಲಿ ʻವನ್ಯಜೀವಿ ಮಿತ್ರʼ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದರ ಅಡಿಯಲ್ಲಿ, ಬೇಟೆಯಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲು ನಗದು ಬಹುಮಾನದ ಪ್ರೋತ್ಸಾಹವನ್ನು ನೀಡಲಾಯಿತು. ನಾವು ʻಗಿರ್ʼ ಸಿಂಹಗಳಿಗಾಗಿ ಪುನರ್ವಸತಿ ಕೇಂದ್ರವನ್ನು ಸಹ ತೆರೆದಿದ್ದೇವೆ. ನಾವು ʻಗಿರ್ʼ ಪ್ರದೇಶದ ಅರಣ್ಯ ಇಲಾಖೆಯಲ್ಲಿ ಮಹಿಳಾ ಬೀಟ್ ಗಾರ್ಡ್‌ಗಳು ಮತ್ತು ಫಾರೆಸ್ಟರ್‌ಗಳನ್ನು ಸಹ ನೇಮಿಸಿಕೊಂಡಿದ್ದೇವೆ. ಇದು 'ಲಯನ್ ಹೈ ತೋ ಹಮ್ ಹೈ, ಹಮ್ ಹೈ ತೋ ಲಯನ್ ಹೈ' (ಸಿಂಹ ಇದ್ದರೆ ನಾವು, ನಾವಿದ್ದರೆ ಸಿಂಹ) ಉತ್ಸಾಹವನ್ನು ಬಲಪಡಿಸಲು ಸಹಾಯ ಮಾಡಿತು. ಇಂದು ʻಗಿರ್ʼನಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮದ ಬೃಹತ್ ವ್ಯವಸ್ಥೆಯನ್ನು ಸ್ಥಾಪನೆಗೊಂಡಿರುವುದನ್ನು ಸಹ ನೀವು ನೋಡಬಹುದು.

ಸ್ನೇಹಿತರೇ,

ʻಗಿರ್ʼನಲ್ಲಿ ಕೈಗೊಂಡ ಉಪಕ್ರಮಗಳಂತೆಯೇ, ʻಹುಲಿ ಯೋಜನೆʼಯ ಯಶಸ್ಸು ಸಹ ಅನೇಕ ಆಯಾಮಗಳನ್ನು ಹೊಂದಿದೆ. ಇದರ ಪರಿಣಾಮವಾಗಿ, ಪ್ರವಾಸಿ ಚಟುವಟಿಕೆಯೂ ಹೆಚ್ಚಾಗಿದೆ. ನಾವು ನಡೆಸಿದ ಜಾಗೃತಿ ಕಾರ್ಯಕ್ರಮಗಳಿಂದಾಗಿ ಹುಲಿ ಮೀಸಲು ಪ್ರದೇಶಗಳಲ್ಲಿ ಮಾನವ-ಪ್ರಾಣಿ ಸಂಘರ್ಷಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ವ್ಯಾಘ್ರಗಳಿಂದಾಗಿ ಹುಲಿ ಮೀಸಲು ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಇದು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿದೆ. ಹುಲಿಗಳ ಉಪಸ್ಥಿತಿಯು ಸ್ಥಳೀಯ ಜನರ ಜೀವನ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

ಸ್ನೇಹಿತರೇ,

ಕೆಲವು ತಿಂಗಳ ಹಿಂದೆ, ಭಾರತದ ಜೀವವೈವಿಧ್ಯತೆಯನ್ನು ಶ್ರೀಮಂತಗೊಳಿಸಲು ನಾವು ಮತ್ತೊಂದು ಪ್ರಮುಖ ಉಪಕ್ರಮವನ್ನು ಕೈಗೊಂಡಿದ್ದೇವೆ. ದಶಕಗಳ ಹಿಂದೆ ಭಾರತದಲ್ಲಿ ʻಚೀತಾʼಸಂತತಿ ಅಳಿದುಹೋಗಿತ್ತು. ನಾವು ಈ ಭವ್ಯವಾದ ಪ್ರಾಣಿಯನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ತಂದಿದ್ದೇವೆ. ಇದು ʻಚೀತಾʼಗಳ ಮೊದಲ ಯಶಸ್ವಿ ಭೂಖಂಡಾಂತರ ವರ್ಗಾವಣೆಯಾಗಿದೆ. ಕೆಲವು ದಿನಗಳ ಹಿಂದೆ, ʻಕುನೋ ರಾಷ್ಟ್ರೀಯ ಉದ್ಯಾನʼದಲ್ಲಿ ನಾಲ್ಕು ಸುಂದರ ಮರಿಗಳು ಜನಿಸಿವೆ. ಸುಮಾರು 75 ವರ್ಷಗಳ ಹಿಂದೆ ಭಾರತೀಯ ಮಣ್ಣಿನಿಂದ ಚಿರತೆ ಅಳಿದುಹೋಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಸುಮಾರು 75 ವರ್ಷಗಳ ನಂತರ ಭಾರತದ ಭೂಮಿಯಲ್ಲಿ ʻಚೀತಾʼ ಜನಿಸಿದೆ. ಇದು ಬಹಳ ಶುಭದಾಯಕ ಆರಂಭವಾಗಿದೆ. ಜೀವವೈವಿಧ್ಯತೆಯ ರಕ್ಷಣೆ ಮತ್ತು ಸಮೃದ್ಧಿಗೆ ಅಂತರರಾಷ್ಟ್ರೀಯ ಸಹಕಾರ ಎಷ್ಟು ಮುಖ್ಯ ಎಂಬುದಕ್ಕೆ ಇದು ಪುರಾವೆಯಾಗಿದೆ.

ಸ್ನೇಹಿತರೇ,

ವನ್ಯಜೀವಿ ಸಂರಕ್ಷಣೆ ಒಂದು ದೇಶದ ವಿಷಯವಲ್ಲ, ಅದೊಂದು ಸಾರ್ವತ್ರಿಕ ವಿಚಾರ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮೈತ್ರಿಯು ಇಂದಿನ ತುರ್ತು ಅಗತ್ಯವಾಗಿದೆ. 2019ರ ʻವಿಶ್ವ ಹುಲಿ ದಿನʼದಂದು ಏಷ್ಯಾದಲ್ಲಿ ಕಳ್ಳಬೇಟೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರದ ವಿರುದ್ಧ ಮೈತ್ರಿಗೆ ನಾನು ಕರೆ ನೀಡಿದ್ದೆ. ಈ ಆಶಯದ ಮೂರ್ತರೂಪವೆಂಬಂತೆ ʻಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯೆನ್ಸ್ʼ ರಚನೆಯಾಗಿದೆ. ಇದು ದೊಡ್ಡ ಬೆಕ್ಕುಗಳಿಗೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಗೆ ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಹಾಯ ಮಾಡುತ್ತದೆ. ಭಾರತ ಸೇರಿದಂತೆ ವಿವಿಧ ದೇಶಗಳ ಅನುಭವಗಳಿಂದ ಹೊರಹೊಮ್ಮಿದ ಸಂರಕ್ಷಣೆ ಮತ್ತು ಸಂರಕ್ಷಣಾ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವುದು ಸಹ ಸುಲಭವಾಗಲಿದೆ. ʻಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯೆನ್ಸ್‌ʼನ ಗಮನವು ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ಸಂರಕ್ಷಣೆಯ ಮೇಲೆ ಇರುತ್ತದೆ. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾಗಳನ್ನು ಹೊಂದಿರುವ ದೇಶಗಳು ಈ ಮೈತ್ರಿಯ ಭಾಗವಾಗಲಿವೆ. ಈ ಮೈತ್ರಿಯ ಅಡಿಯಲ್ಲಿ, ಸದಸ್ಯ ರಾಷ್ಟ್ರಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅವುಗಳು ತಮ್ಮ ಸಹ ದೇಶಕ್ಕೆ ತ್ವರಿತವಾಗಿ ಸಹಾಯ ಮಾಡಲು ಸಾಧ್ಯವಾಗುತ್ತದೆ. ಈ ಮೈತ್ರಿಯು ಸಂಶೋಧನೆ, ತರಬೇತಿ ಮತ್ತು ಸಾಮರ್ಥ್ಯವರ್ಧನೆಗೂ ಒತ್ತು ನೀಡಲಿದೆ. ಒಟ್ಟಾಗಿ ನಾವು ಈ ಸಂತತಿಗಳನ್ನು ಅಳಿವಿನಿಂದ ಉಳಿಸುವುದರ ಜೊತೆಗೆ ಅವುಗಳಿಗಾಗಿ ಸುರಕ್ಷಿತ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ.

ಸ್ನೇಹಿತರೇ,

ನಮ್ಮ ಪರಿಸರವು ಸುರಕ್ಷಿತವಾಗಿದ್ದಾಗ ಮತ್ತು ನಮ್ಮ ಜೈವಿಕ ವೈವಿಧ್ಯತೆಯು ವಿಸ್ತರಿಸುತ್ತಲೇ ಇದ್ದಾಗ ಮಾತ್ರ ಮನುಕುಲಕ್ಕೆ ಉತ್ತಮ ಭವಿಷ್ಯ ಸಾಧ್ಯ. ಈ ಜವಾಬ್ದಾರಿ ನಮ್ಮೆಲ್ಲರಿಗೂ, ಇಡೀ ಜಗತ್ತಿಗೆ ಸೇರಿದೆ. ನಮ್ಮ ʻಜಿ -20ʼ ಅಧ್ಯಕ್ಷತೆಯ ಅವಧಿಯಲ್ಲಿ ನಾವು ಈ ಮನೋಭಾವವನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದೇವೆ. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ʻಜಿ 20ʼ ಧ್ಯೇಯವಾಕ್ಯವು ಈ ಸಂದೇಶವನ್ನು ಸಾರುತ್ತದೆ. ಹವಾಮಾನ ಶೃಂಗಸಭೆಯಲ್ಲೂ (ʻಸಿಒಪಿ 26) ನಾವು ನಮಗಾಗಿ ದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದೇವೆ. ಪರಸ್ಪರ ಸಹಕಾರದಿಂದ ಪರಿಸರ ಸಂರಕ್ಷಣೆಯ ಪ್ರತಿಯೊಂದು ಗುರಿಯನ್ನು ನಾವು ಸಾಧಿಸುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ಸ್ನೇಹಿತರೇ,

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದೇಶಿ ಅತಿಥಿಗಳಿಗೆ ಮತ್ತು ಇತರ ರಾಜ್ಯಗಳ ನಮ್ಮ ಅತಿಥಿಗಳಿಗೆ ನಾನು ಇನ್ನೂ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಇಲ್ಲಿ ಮತ್ತೊಂದು ವಿಷಯದ ಲಾಭವನ್ನು ನೀವು ಪಡೆಯಬೇಕು. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ʻಸಹ್ಯಾದ್ರಿʼ ಪ್ರದೇಶವಿದೆ, ಅಲ್ಲಿ ಅನೇಕ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಶತಮಾನಗಳಿಂದಲೂ ಅವರು ಹುಲಿಗಳು ಸೇರಿದಂತೆ ಪ್ರತಿಯೊಂದು ಜೈವಿಕ ವೈವಿಧ್ಯತೆಯನ್ನು ಶ್ರೀಮಂತಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಜೀವನ ಮತ್ತು ಅವರ ಸಂಸ್ಕೃತಿ ಇಡೀ ಜಗತ್ತಿಗೆ ಉತ್ತಮ ಉದಾಹರಣೆಯಾಗಿದೆ. ಪ್ರಕೃತಿಯೊಂದಿಗೆ ಕೊಡು-ಕೊಳ್ಳುವಿಕೆಯ ಸಮತೋಲನವನ್ನು ಹೇಗೆ ಸೃಷ್ಟಿಸಬೇಕು ಎಂಬುದನ್ನು ನಾವು ಈ ಬುಡಕಟ್ಟು ಸಂಪ್ರದಾಯದಿಂದ ಕಲಿಯಬಹುದು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಹೋದ್ಯೋಗಿಗಳೊಂದಿಗೆ ನಾನು ಮಾತಿನಲ್ಲಿ ತೊಡಗಿದ್ದರಿಂದ ನಾನು ಇಲ್ಲಿಗೆ ಬರುವುದು ತಡವಾಯಿತು. ʻಆಸ್ಕರ್ʼ ಪ್ರಶಸ್ತಿ ಗೆದ್ದ 'ದಿ ಎಲಿಫೆಂಟ್ ವಿಸ್ಪರ್ಸ್' ಸಾಕ್ಷ್ಯಚಿತ್ರವು ಪ್ರಕೃತಿ ಮತ್ತು ಜೀವಿಗಳ ನಡುವಿನ ಅದ್ಭುತ ಸಂಬಂಧದ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಬುಡಕಟ್ಟು ಸಮಾಜದ ಜೀವನಶೈಲಿಯು ʻಮಿಷನ್ ಲೈಫ್‌ʼ (ಪರಿಸರಕ್ಕಾಗಿ ಜೀವನಶೈಲಿ - Mission LiFE) ಆಶಯವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಹಾಯ ಮಾಡುತ್ತದೆ. ನಿಮ್ಮ ದೇಶಕ್ಕಾಗಿ ಮತ್ತು ನಿಮ್ಮ ಸಮಾಜಕ್ಕಾಗಿ ನಮ್ಮ ಬುಡಕಟ್ಟು ಸಮಾಜದ ಜೀವನ ಮತ್ತು ಸಂಪ್ರದಾಯದಿಂದ ತಪ್ಪದೆ ಏನನ್ನಾದರೂ ಕಲಿಯುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಹುಲಿಗಳ ಈ ಸಂಖ್ಯೆಯನ್ನು ನಾವು ಮತ್ತಷ್ಟು ಉತ್ತಮಗೊಳಿಸುತ್ತೇವೆ ಮತ್ತು ಹೊಸ ಸಾಧನೆಗಳನ್ನು ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ.

ಅನಂತ ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”