ಧಮ್ಮದಲ್ಲಿ ಅಭಿಧಮ್ಮವಿದೆ, ಧಮ್ಮವನ್ನು ಅದರ ಸಾರದಲ್ಲಿ ಅರ್ಥಮಾಡಿಕೊಳ್ಳಲು ಪಾಲಿ ಭಾಷೆಯ ಜ್ಞಾನ ಅಗತ್ಯ: ಪ್ರಧಾನಮಂತ್ರಿ
ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಭಾಷೆ ನಾಗರಿಕತೆ ಮತ್ತು ಸಂಸ್ಕೃತಿಯ ಆತ್ಮ: ಪ್ರಧಾನಮಂತ್ರಿ
ಪ್ರತಿಯೊಂದು ರಾಷ್ಟ್ರವು ತನ್ನ ಪರಂಪರೆಯನ್ನು ತನ್ನ ಅಸ್ಮಿತೆಯೊಂದಿಗೆ ಸಂಯೋಜಿಸುತ್ತದೆ, ದುರದೃಷ್ಟವಶಾತ್, ಭಾರತವು ಈ ದಿಕ್ಕಿನಲ್ಲಿ ಬಹಳ ಹಿಂದುಳಿದಿದೆ, ಆದರೆ ದೇಶವು ಈಗ ಕೀಳರಿಮೆಯಿಂದ ಮುಕ್ತವಾಗಿ ಮುಂದುವರಿಯುತ್ತಿದೆ, ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ: ಪ್ರಧಾನಮಂತ್ರಿ
ಹೊಸ ಶಿಕ್ಷಣ ನೀತಿಯಡಿ ದೇಶದ ಯುವಕರು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಆಯ್ಕೆಯನ್ನು ಪಡೆದಾಗಿನಿಂದ, ಭಾಷೆಗಳು ಬಲಗೊಳ್ಳುತ್ತಿವೆ: ಪ್ರಧಾನಮಂತ್ರಿ
ಇಂದು ಭಾರತವು ತ್ವರಿತ ಅಭಿವೃದ್ಧಿ ಮತ್ತು ಶ್ರೀಮಂತ ಪರಂಪರೆಯ ಎರಡೂ ಸಂಕಲ್ಪಗಳನ್ನು ಏಕಕಾಲದಲ್ಲಿ ಈಡೇರಿಸುವಲ್ಲಿ ನಿರತವಾಗಿದೆ: ಪ್ರಧಾನಮಂತ್ರಿ
ಭಗವಾನ್ ಬುದ್ಧನ ಪರಂಪರೆಯ ಪುನರುಜ್ಜೀವನದಲ್ಲಿ, ಭಾರತವು ತನ್ನ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಮರುಶೋಧಿಸುತ್ತಿದೆ: ಪ್ರಧಾನಮಂತ್ರಿ
ಭಾರತವು ವಿಶ್ವ ಯುದ್ಧವನ್ನು ನೀಡಿಲ್ಲ, ಆದರೆ ಬುದ್ಧನನ್ನು ನೀಡಿದೆ: ಪ್ರಧಾನಮಂತ್ರಿ
ಇಂದು ಅಭಿಧಮ್ಮ ಪರ್ವದಂದು, ನಾನು ಇಡೀ ಜಗತ್ತಿಗೆ ಯುದ್ಧದಲ್ಲಿ ಪರಿಹಾರಗಳನ್ನು ಕಂಡುಹಿಡಿಯುವಂತೆ ಮನವಿ ಮಾಡುತ್ತೇನೆ, ಆದರೆ ಶಾಂತಿಯ ಹಾದಿಯನ್ನು ಸುಗಮಗೊಳಿಸುವ ಭಗವಾನ್ ಬುದ್ಧನ ಬೋಧನೆಗಳಲ್ಲಿ ಪರಿಹಾರಗಳನ್ನು ಕಂಡುಕೊಳ್ಳಿ:ಪ್ರಧಾನಮಂತ್ರಿ
ಎಲ್ಲರಿಗೂ ಸಮೃದ್ಧಿಯ ಭಗವಾನ್ ಬುದ್ಧನ ಸಂದೇಶವು ಮಾನವೀಯತೆಯ ಮಾರ್ಗವಾಗಿದೆ: ಪ್ರಧಾನಮಂತ್ರಿ
ಭಗವಾನ್ ಬುದ್ಧನ ಬೋಧನೆಗಳು ಭಾರತವು ತನ್ನ ಅಭಿವೃದ್ಧಿಗೆ ರೂಪಿಸಿರುವ ಮಾರ್ಗಸೂಚಿಯಲ್ಲಿ ನಮಗೆ ಮಾರ್ಗದರ್ಶನ ನೀಡುತ್ತವೆ: ಪ್ರಧಾನಮಂತ್ರಿ
ಭಗವಾನ್ ಬುದ್ಧನ ಬೋಧನೆಗಳು ಮಿಷನ್ ಲೈಫ್ ನ ಕೇಂದ್ರದಲ್ಲಿವೆ, ಪ್ರತಿಯೊಬ್ಬ ವ್ಯಕ್ತಿಯ ಸುಸ್ಥಿರ ಜೀವನಶೈಲಿಯಿಂದ ಸುಸ್ಥಿರ ಭವಿಷ್ಯದ ಹಾದಿ ಹೊರಹೊಮ್ಮುತ್ತದೆ: ಪ್ರಧಾನಮಂತ್ರಿ
ಭಾರತವು ಅಭಿವೃದ್ಧಿಯತ್ತ ಸಾಗುತ್ತಿದೆ ಮತ್ತು ಅದರ ಬೇರುಗಳನ್ನು ಬಲಪಡಿಸುತ್ತಿದೆ, ಭಾರತದ ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಗತ್ತನ್ನು ಮುನ್ನಡೆಸುವುದು ಮಾತ್ರವಲ್ಲದೆ ಅವರ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಹೆಮ್ಮೆ ಪಡಬೇಕು: ಪ್ರಧಾನಮಂತ್ರಿ

ನಮೋ ಬುದ್ಧಾಯ!

ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜೀ, ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರೆನ್ ರಿಜಿಜು ಜೀ, ಬಂದಂತ್ ರಾಹುಲ್ ಬೊಧಿ ಮಹಥೆರೋ ಜೀ, ವೆನವರಬಲ್ ಜುಂಗ್ ಚುಪ್ ಚೋಡೆನ್ ಜೀ, ಮಹಾಸಂಘದ ಎಲ್ಲಾ ಗಣ್ಯ ಸದಸ್ಯರೇ, ರಾಯಭಾರಿ ಸಮುದಾಯದ ಸದಸ್ಯರೇ,. ಬೌದ್ಧ ಚಿಂತಕರೇ, ಬೌದ್ಧ ಧರ್ಮದ ಅನುಯಾಯಿಗಳೇ, ಮಹಿಳೆಯರೇ ಮತ್ತು ಮಹನೀಯರೇ. 

ಮತ್ತೊಮ್ಮೆ, ಅಂತಾರಾಷ್ಟ್ರೀಯ ಅಭಿಧಮ್ಮ ದಿನದ ಕಾರ್ಯಕ್ರಮದ ಭಾಗವಾಗಿರುವುದು ತಮಗೆ ಸಂದ ಗೌರವವಾಗಿದೆ. ಅಭಿಧಮ್ಮ ದಿನ ನಮಗೆ ಕರುಣೆ ಮತ್ತು ಸದ್ಭಾವನೆಯ ಮೂಲಕ ಮಾತ್ರ ನಾವು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಬಹುದು ಎಂದು ನೆನಪಿಸುತ್ತದೆ. 2021ರಲ್ಲಿ ಕುಶಿನಗರದಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಭಾಗವಹಿಸುವ ಸೌಭಾಗ್ಯ ತಮಗೂ ಸಿಕ್ಕಿತ್ತು. ತಾವು ಜನ್ಮ ತಳೆದಂದಿನಿಂದ ಆರಂಭವಾದ ಭಗವಾನ್ ಬುದ್ಧನ ಸಂಪರ್ಕದ ಪಯಣ ಅವಿರತವಾಗಿ ಸಾಗುತ್ತಿರುವುದು ನನ್ನ ಭಾಗ್ಯ. ನಾನು ಬೌದ್ಧ ಧರ್ಮದ ಶ್ರೇಷ್ಠ ಕೇಂದ್ರವಾಗಿದ್ದ ಗುಜರಾತ್‌ನ ವಡ್‌ನಗರದಲ್ಲಿ ಜನಿಸಿದೆ. ಈ ಪ್ರೇರಣೆಗಳಿಂದ ಬದುಕುತ್ತಿರುವ ನಾನು ಬುದ್ಧನ ಧಮ್ಮ ಮತ್ತು ಬೋಧನೆಗಳನ್ನು ಹರಡುವಲ್ಲಿ ಹಲವಾರು ರೀತಿಯಲ್ಲಿ ಅನುಭವಗಳನ್ನು ಪಡೆದಿದ್ದೇನೆ.

ಕಳೆದ 10 ವರ್ಷಗಳಲ್ಲಿ, ಭಗವಾನ್ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿ, ಮಂಗೋಲಿಯಾದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಶ್ರೀಲಂಕಾದಲ್ಲಿ ವೆಸಕ್ ಆಚರಣೆ. ಭಗವಾನ್ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಗೆ ಭಾರತದಲ್ಲಿರುವ ಐತಿಹಾಸಿಕ ಬೌದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದರಿಂದ ಹಿಡಿದು ಅನೇಕ ಪವಿತ್ರ ಕಾರ್ಯಕ್ರಮಗಳ ಭಾಗವಾಗಲು ತಮಗೆ ಅವಕಾಶ ಸಿಕ್ಕಿದೆ. ಸಂಘ ಮತ್ತು ಸಾಧಕರ ಈ ಒಕ್ಕೂಟವು ಭಗವಾನ್ ಬುದ್ಧನ ಆಶೀರ್ವಾದದ ಪರಿಣಾಮ ಇದರ ಮೇಲಿದೆ ಎಂದು ನಾನು ನಂಬುತ್ತೇನೆ.  ಇಂದು ಅಭಿಧಮ್ಮ ದಿನದ ಸಂದರ್ಭದಲ್ಲಿ ಭಗವಾನ್ ಬುದ್ಧನ ಎಲ್ಲಾ ಅನುಯಾಯಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಇಂದು ಅತ್ಯಂತ ಪವಿತ್ರವಾದ ಶರದ್ ಪೂರ್ಣಿಮಾ ಹಬ್ಬ. ಭಾರತದ ಆತ್ಮ ಪ್ರಜ್ಞೆಯಾದ ಮಹರ್ಷಿ ವಾಲ್ಮೀಕಿ ಜೀ ಅವರ ಜನ್ಮ ದಿನವೂ ಆಗಿದೆ. ಇಡೀ ದೇಶಕ್ಕೆ ನಾನು ಶರದ್ ಪೂರ್ಣಿಮಾ ಮತ್ತು ವಾಲ್ಮೀಕಿ ಜಯಂತಿಯ ಶುಭಾಶಯಗಳು. 

 

ಗೌರವಾನ್ವಿತ ಸ್ನೇಹಿತರೇ, 

ಈ ವರ್ಷ ಅಭಿಧಮ್ಮ ದಿನ ಆಚರಣೆ ಜೊತೆಗೆ ದೇಶ ಐತಿಹಾಸಿಕ ಸಾಧನೆಯೊಂದಿಗೆ ಬೆಸೆದುಕೊಂಡಿದೆ. ಅಭಿಧಮ್ಮ ಭಗವಾನ್ ಬುದ್ಧ ಜಗತ್ತಿಗೆ ತನ್ನ ಪದಗಳು ಮತ್ತು ಬೋಧನೆಗಳನ್ನು ನೀಡಿದ ಪಾಲಿ ಭಾಷೆಗೆ ಭಾರತ ಸರ್ಕಾರ ಈ ವರ್ಷ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಘೋಷಿಸಿದೆ. ಆದ್ದರಿಂದ ಇಂದಿನ ಸಂದರ್ಭ ಮತ್ತಷ್ಟು ವಿಶೇಷವಾಗಿದೆ. ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರುವುದರಿಂದ ಭಗವಾನ್ ಬುದ್ಧನ ಪರಂಪರೆಗೂ ಹೆಚ್ಚಿನ ಮನ್ನಣೆ ದೊರೆತಂತಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ಅಭಿಧಮ್ಮ ಆಂತರ್ಗತವಾದ ಧರ್ಮ. ಧಮ್ಮವನ್ನು ಅರಿತುಕೊಳ್ಳಬೇಕಾದರೆ ಪಾಲಿ ಭಾಷೆಯ ಜ್ಞಾನವೂ ಸಹ ಅಷ್ಟೇ ಮುಖ್ಯ.  ಧಮ್ಮ ಎಂದರೆ ಅದು ಬುದ್ಧನ ಸಂದೇಶ, ಇವು ಬುದ್ಧನ ತತ್ವಗಳು… ಧಮ್ಮ ಎಂದರೆ ಮಾನವ ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ... ಧಮ್ಮ ಎಂದರೆ ಮಾನವೀಯತೆಗೆ ಶಾಂತಿಯ ಮಾರ್ಗ... ಧಮ್ಮ ಎಂದರೆ ಬುದ್ಧನ ಕಾಲಾತೀತ ಬೋಧನೆಗಳು... ಮತ್ತು ಧಮ್ಮ ಎಂದರೆ ಸಮಸ್ತ ಮಾನವೀಯತೆಯ ಕಲ್ಯಾಣದ ಅಚಲ ಭರವಸೆ! ಭಗವಾನ್ ಬುದ್ಧನ ಧರ್ಮದಿಂದ ಇಡೀ ಜಗತ್ತು ಬೆಳಗಿದೆ.

ಆದರೆ ಸ್ನೇಹಿತರೇ,  

ದುರದೃಷ್ಟಕರವೆಂದರೆ ಪ್ರಾಚೀನ ಪಾಲಿ ಭಾಷೆ, ಬುದ್ಧನ ಅಸ್ಥಿತ್ವನ್ನು ಸಾರುವ ಮೂಲ ಪದಗಳುಳ್ಳ ಈ ಭಾಷೆ ಸಾಮಾನ್ಯರ ಬಳಕೆಯಲ್ಲಿಲ್ಲ. ಭಾಷೆ ಕೇವಲ ಸಂಪರ್ಕವಷ್ಟೇ ಅಷ್ಟೇ ಅಲ್ಲ, ಭಾಷೆ ನಾಗರಿಕತೆಯ ಆತ್ಮ ಮತ್ತು ಸಂಸ್ಕೃತಿ. ಪ್ರತಿಯೊಂದು ಭಾಷೆ ತನ್ನದೇ ಆದ ಸಾರವನ್ನು ಹೊಂದಿದೆ. ಆದ್ದರಿಂದ, ಭಗವಾನ್ ಬುದ್ಧನ ಪದಗಳನ್ನು ಅವುಗಳ ಮೂಲ ಚೇತನದಲ್ಲಿ ಜೀವಂತವಾಗಿಡಲು ಪಾಲಿ ಭಾಷೆಯನ್ನು ಬಳಕೆಯಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನಮ್ಮ ಸರ್ಕಾರ ವಿನಮ್ರತೆಯಿಂದ ನಿರ್ವಹಿಸಿರುವುದಕ್ಕೆ ತಮಗೆ ಸಂತೋಷವಾಗಿದೆ. ಭಗವಾನ್ ಬುದ್ಧನ ಲಕ್ಷಾಂತರ ಅನುಯಾಯಿಗಳು ಮತ್ತು ಸಾವಿರಾರು ಸನ್ಯಾಸಿಗಳ ನಿರೀಕ್ಷೆಗಳನ್ನು ಪೂರೈಸುವುದು ನಮ್ಮ ವಿನಮ್ರ ಪ್ರಯತ್ನವಾಗಿದೆ. ಈ ಮಹತ್ವದ ನಿರ್ಧಾರಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

 

ಗೌರವಾನ್ವಿತ ಸ್ನೇಹಿತರೇ, 

ಭಾಷೆ, ಸಾಹಿತ್ಯ, ಕಲೆ, ಆಧ್ಯಾತ್ಮಿಕತೆಯ ಸಂಪತ್ತು ರಾಷ್ಟ್ರದ ಅಸ್ತಿತ್ವವನ್ನು ವ್ಯಾಖ್ಯಾನಿಸುತ್ತದೆ. ಆದ್ದರಿಂದಲೇ, ಜಗತ್ತಿನ ಯಾವುದೇ ದೇಶವು ಕೆಲವು ನೂರು ವರ್ಷಗಳಷ್ಟು ಹಳೆಯದನ್ನು ಕಂಡುಹಿಡಿದರೆ, ಹೆಮ್ಮೆಯಿಂದ ಅದನ್ನು ಜಗತ್ತಿಗೆ ಪ್ರಸ್ತುತಪಡಿಸುತ್ತದೆ. ಪ್ರತಿಯೊಂದು ರಾಷ್ಟ್ರವೂ ತನ್ನ ಪರಂಪರೆಯನ್ನು ತನ್ನ ಅಸ್ಮಿತೆಯೊಂದಿಗೆ ಜೋಡಿಸುತ್ತದೆ. ದುರದೃಷ್ಟವಶಾತ್, ಭಾರತ ಈ ವಿಷಯದಲ್ಲಿ ಬಹಳ ಹಿಂದೆ ಬಿದ್ದಿತ್ತು. ಸ್ವಾತಂತ್ರ್ಯದ ಮೊದಲು, ಆಕ್ರಮಣಕಾರರು ಭಾರತದ ಗುರುತನ್ನು ಅಳಿಸಿಹಾಕುವ ಗುರಿ ಹೊಂದಿದ್ದರು ಮತ್ತು ಸ್ವಾತಂತ್ರ್ಯದ ನಂತರ, ವಸಾಹತುಶಾಹಿ ಮನಸ್ಥಿತಿ ಹೊಂದಿರುವವರು ಅಧಿಕಾರವನ್ನು ಪಡೆದರು. ಭಾರತದಲ್ಲಿ ಒಂದು ಪರಿಸರ ವ್ಯವಸ್ಥೆಯು ನಮ್ಮನ್ನು ವಿರುದ್ಧ ದಿಕ್ಕಿನಲ್ಲಿ ತಳ್ಳಲು ಕೆಲಸ ಮಾಡಿದೆ. ಭಾರತದ ಆತ್ಮದಲ್ಲಿ ನೆಲೆಸಿರುವ ಬುದ್ಧ ಮತ್ತು ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ಸಂಕೇತಗಳಾಗಿ ಅಳವಡಿಸಿಕೊಂಡ ಬುದ್ಧನ ಚಿಹ್ನೆಗಳು, ನಂತರದ ದಶಕಗಳಲ್ಲಿ ಕ್ರಮೇಣ ಮರೆತುಹೋದವು. ಪಾಲಿ ಭಾಷೆಗೆ ಸರಿಯಾದ ಸ್ಥಾನ ಸಿಗಲು ಏಳು ದಶಕಗಳೇ ಬೇಕಾಯಿತು.

ಆದರೆ ಸ್ನೇಹಿತರೇ,

ದೇಶ ಇಂದು ಕೀಳರಿಮೆಯಿಂದ ಮುಕ್ತವಾಗಿದೆ ಮತ್ತು ಇದೀಗ ಸ್ವಯಂ ಗೌರವ, ಸ್ವಯಂ ವಿಶ್ವಾಸ ಮತ್ತು ಸ್ವಯಂ ಹೆಮ್ಮೆಯತ್ತ ಸಾಗುತ್ತಿದೆ. ಇದರ ಫಲವಾಗಿ ದೇಶ ಇಂದು ದೊಡ್ಡ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. ಆದ್ದರಿಂದಲೇ ಇಂದು ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ. ಮರಾಠಿಗೂ ಸಹ ಗೌರವ ಸಲ್ಲಿಸಲಾಗಿದೆ. ಮತ್ತು ಇದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಆಹ್ಲಾದಕರವಾಗಿ ಸಂಪರ್ಕಿಸುತ್ತದೆ ಎಂಬುದು ಎಂತಹ ಸುಂದರವಾದ ಕಾಕತಾಳೀಯ. ಬೌದ್ಧ ಧರ್ಮದ ನಮ್ಮ ಮಹಾನ್ ಅನುಯಾಯಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಧಮ್ಮ ದೀಕ್ಷೆಯನ್ನು ಪಾಲಿ ಭಾಷೆಯಲ್ಲಿ ಪಡೆದರು ಮತ್ತು ಅವರ ಮಾತೃಭಾಷೆ ಮರಾಠಿ. ಅದೇ ರೀತಿ ಬೆಂಗಾಲಿ, ಅಸ್ಸಾಮಿ, ಪ್ರಾಕೃತ ಭಾಷೆಗಳಿಗೂ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದ್ದೇವೆ.  

 

 

ಸ್ನೇಹಿತರೇ,

ಭಾರತದ ಈ ಭಾಷೆಗಳು ನಮ್ಮ ವೈವಿಧ್ಯತೆಯನ್ನು ಪೋಷಿಸುತ್ತವೆ. ಹಿಂದೆ, ನಮ್ಮ ಪ್ರತಿಯೊಂದು ಭಾಷೆಯು ರಾಷ್ಟ್ರ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಇಂದು ದೇಶವು ಅಳವಡಿಸಿಕೊಂಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಈ ಭಾಷೆಗಳನ್ನು ಉಳಿಸುವ ಸಾಧನವಾಗುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣದ ಆಯ್ಕೆಯನ್ನು ದೇಶದ ಯುವ ಸಮೂಹಕ್ಕೆ ಪರಿಚಯಿಸಿದ್ದರಿಂದ, ಈ ಭಾಷೆಗಳು ಇನ್ನಷ್ಟು ಬಲವಾಗಿ ಬೆಳೆಯುತ್ತಿವೆ.

ಸ್ನೇಹಿತರೇ, 

ನಮ್ಮ ನಿರ್ಣಯಗಳನ್ನು ಸಾಕಾರಗೊಳಿಸಲು ಕೆಂಪುಕೋಟೆ ಮೇಲಿನಿಂದ ‘ಪಂಚ್ ಪ್ರಣ್’ [ಐದು ಪ್ರತಿಜ್ಞೆಗಳು] ದೃಷ್ಟಿಕೋನವನ್ನು ಪ್ರಸ್ತುಪಡಿಸಲಾಯಿತು. ಪಂಚ್ ಪ್ರಣ್ ಎಂದರೆ ಅಭಿವೃದ್ಧಿ ಹೊಂದಿದ ಭಾರತವನ್ನು [ವಿಕಸಿತ ಭಾರತ] ನಿರ್ಮಿಸುವುದಾಗಿದೆ! ವಸಹತುಶಾಹಿ ಮನಸ್ಥಿತಿಯಿಂದ ಮುಕ್ತವಾಗುವುದು!, ದೇಶದ ಏಕತೆ!, ಕರ್ತವ್ಯಗಳನ್ನು ಜಾರಿಗೊಳಿಸುವುದು! ಮತ್ತು ನಮ್ಮ ಪರಂಪರೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದಾಗಿದೆ. ಆದ್ದರಿಂದ ಇಂದು ಭಾರತ ತ್ವರಿತವಾಗಿ ಅಭಿವೃದ್ಧಿ ಹೊಂದುವುದು ಮತ್ತು ನಮ್ಮ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಬದ್ಧತೆಯುನ್ನು ಕಾಯ್ದುಕೊಳ್ಳಬೇಕಾಗಿದೆ. ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪರಂಪರೆಯ ಸಂರಕ್ಷಣೆ ಈ ಧ್ಯೇಯದ ಆದ್ಯತೆಯಾಗಿದೆ. ಬುದ್ಧ ಕೇಂದ್ರೀತ ಭಾಗವಾಗಿ ನಾವು ಭಾರತ ಮತ್ತು ನೇಪಾಳದಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಥಳಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತಿದ್ದೇವೆ ಎಂಬುದನ್ನು ನೋಡಿ. ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಉದ್ಘಾಟನೆಗೊಂಡಿದೆ. ನಾವು ಬೌದ್ಧ ಸಂಸ್ಕೃತಿ ಮತ್ತು ಪರಂಪರೆಗಾಗಿ ಲುಂಬಿನಿಯಲ್ಲಿ ಭಾರತ ಅಂತರರಾಷ್ಟ್ರೀಯ ಕೇಂದ್ರವನ್ನು ನಿರ್ಮಿಸುತ್ತಿದ್ದೇವೆ. ಲುಂಬಿನಿಯಲ್ಲಿಯೇ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನಕ್ಕಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪೀಠವನ್ನು ಸ್ಥಾಪಿಸಿದ್ದೇವೆ. ಬೋಧ್ ಗಯಾ, ಶ್ರವಸ್ತಿ, ಕಪಿಲವಸ್ತು, ಸಂಚಿ, ಸತ್ನಾ ಮತ್ತು ರೇವಾದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಇಂದಿನಿಂದ ಮೂರು ದಿನಗಳ ಕಾಲ, ಅಂದರೆ ಅಕ್ಟೋಬರ್ 20 ರ ವರೆಗೆ ತಾವು ವಾರಣಸಿಗೆ ಭೇಟಿ ನೀಡುತ್ತಿದ್ದು, ಸಾರಾನಾಥ್ ನಲ್ಲಿ ಕೈಗೊಂಡಿರುವ ಹಲವಾರು ಅಭಿವೃದ್ದಿ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಹೊಸ ನಿರ್ಮಾಣ ಕಾಮಗಾರಿಗಳ ಜೊತೆಗೆ ನಾವು ನಮ್ಮ ಪೂರ್ವಿಕ ಸಂಸ್ಕೃತಿಯನ್ನು ರಕ್ಷಿಸುತ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ 600 ಕ್ಕೂ ಅಧಿಕ ಪ್ರಾಚೀನ ಪಾರಂಪರಿಕ ಕಲಾಕೃತಿಗಳನ್ನು ಸ್ವದೇಶಕ್ಕೆ ತಂದಿದ್ದೇವೆ ಮತ್ತು ಜಗತ್ತಿನ ವಿವಿಧ ದೇಶಗಳಲ್ಲಿ 600 ಕ್ಕೂ ಅಧಿಕ ಪರಿಶೋಧನೆಗಳನ್ನು ಕೈಗೊಂಡಿದ್ದೇವೆ. ಮತ್ತು ಈ ಅವಶೇಷಗಳಲ್ಲಿ ಹಲವು ಬೌದ್ಧಧರ್ಮಕ್ಕೆ ಸಂಬಂಧಿಸಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬುದ್ಧನ ಪರಂಪರೆಯ ಪುನರುಜ್ಜೀವನದಲ್ಲಿ ಭಾರತವು ತನ್ನ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊಸದಾಗಿ ಪ್ರಸ್ತುತಪಡಿಸುತ್ತಿದೆ. 

 

ಗೌರವಾನ್ವಿತ ಸ್ಹೇಹಿತರೇ,

ಬುದ್ಧನ ಮೇಲಿನ ಭಾರತದ ನಂಬಿಕೆಯು ತನಗಾಗಿ ಮಾತ್ರವಲ್ಲದೇ ಸಮಸ್ತ ಮಾನವೀಯತೆಯ ಸೇವೆಯ ಮಾರ್ಗವಾಗಿದೆ. ಪ್ರಪಂಚದ ದೇಶಗಳು ಮತ್ತು ಬುದ್ಧನನ್ನು ತಿಳಿದಿರುವ ಮತ್ತು ನಂಬುವ ಎಲ್ಲರನ್ನು ನಾವು ಈ ಕಾರ್ಯಾಚರಣೆಯಲ್ಲಿ ಒಟ್ಟುಗೂಡಿಸುತ್ತಿದ್ದೇವೆ. ಪ್ರಪಂಚದಾದ್ಯಂತದ ಅನೇಕ ದೇಶಗಳು ಈ ದಿಕ್ಕಿನಲ್ಲಿ ಅರ್ಥಪೂರ್ಣ ಪ್ರಯತ್ನಗಳನ್ನು ಮಾಡುತ್ತಿವೆ ಎಂಬುದು ತಮಗೆ ಸಂತಸದಾಯಕವಾಗಿದೆ.  ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಪಾಲಿ ಭಾಷೆಯಲ್ಲಿ ವ್ಯಾಖ್ಯಾನಗಳನ್ನು ಸಂಕಲಿಸಲಾಗುತ್ತಿದೆ. ಭಾರತದಲ್ಲೂ ನಾವು ಅಂತಹ ಪ್ರಯತ್ನಗಳನ್ನು ವೇಗಗೊಳಿಸುತ್ತಿದ್ದೇವೆ. ಸಾಂಪ್ರದಾಯಿಕ ವಿಧಾನಗಳ ಜೊತೆಗೆ, ನಾವು ಆನ್‌ಲೈನ್ ವೇದಿಕೆಗಳು, ಡಿಜಿಟಲ್ ಆರ್ಕೈವ್‌ಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ಪಾಲಿಯನ್ನು ಪ್ರಚಾರ ಮಾಡುತ್ತಿದ್ದೇವೆ. ಭಗವಾನ್ ಬುದ್ಧ ಈ ಬಗ್ಗೆ ಮೊದಲೇ ಹೇಳಿದ್ದರು - “बुद्ध बोध भी हैं, और बुद्ध शोध भी हैं”  (ಬುದ್ಧನು ಬುದ್ಧಿವಂತಿಕೆ, ಮತ್ತು ಬುದ್ಧನು ಸಹ ಸಂಶೋಧಕ). ಆದ್ದರಿಂದ, ನಾವು ಭಗವಾನ್ ಬುದ್ಧನನ್ನು ತಿಳಿದುಕೊಳ್ಳಲು ಆಂತರಿಕ ಮತ್ತು ಶೈಕ್ಷಣಿಕ ಸಂಶೋಧನೆ ಎರಡಕ್ಕೂ ಒತ್ತು ನೀಡುತ್ತಿದ್ದೇವೆ. ನಮ್ಮ ಸಂಘ, ನಮ್ಮ ಬೌದ್ಧ ಸಂಸ್ಥೆಗಳು ಮತ್ತು ನಮ್ಮ ಸನ್ಯಾಸಿಗಳು ಈ ದಿಕ್ಕಿನಲ್ಲಿ ಯುವಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿದು ತಮಗೆ ಸಂತೋಷವಾಗಿದೆ.

 

ಗೌರವಾನ್ವಿತ ಸ್ನೇಹಿತರೇ,

21ನೇ ಶತಮಾನ ಮತ್ತು ಈಗಿನ ಭೂ ಭೌಗೋಳಿಕ ಪರಿಸ್ಥಿತಿ… ಜಗತ್ತು ಮತ್ತೊಮ್ಮೆ ಹಲವಾರು ಅನಿಶ್ಚಿತತೆಗಳು ಮತ್ತು ಅಸ್ಥಿರತೆಗಳನ್ನು ಒಳಗೊಂಡಿದೆ. ಇಂತಹ ಕಾಲಘಟ್ಟದಲ್ಲಿ ಬುದ್ಧ ಪ್ರಸ್ತುತವಷ್ಟೇ ಅಲ್ಲದೇ ಅತ್ಯಂತ ಅಗತ್ಯವೂ ಸಹ ಆಗಿದ್ದಾರೆ. ವಿಶ್ವಸಂಸ್ಥೆಯಲ್ಲಿ ಒಮ್ಮೆ ಹೀಗೆ ಹೇಳಿದ್ದೇ” ಭಾರತ ಜಗತ್ತಿಗೆ ಯುದ್ಧವನ್ನಲ್ಲ, ಬುದ್ಧನನ್ನು ಕೊಟ್ಟಿದೆ. ಮತ್ತು ಇಂದು ಇಡೀ ಜಗತ್ತು ಮನಗಂಡಿದೆ ಯುದ್ಧವಲ್ಲ, ಬುದ್ಧನಿಂದ ಪರಿಹಾರವಿದೆ ಎಂದು. ಅಭಿಧಮ್ಮ ದಿನದ ಸಂದರ್ಭದಲ್ಲಿ ಜಗತ್ತಿಗೆ ಕರೆ ನೀಡುತ್ತಿದ್ದೇನೆ. ಬುದ್ಧನಿಂದ ಕಲಿಯಿರಿ. ಯುದ್ಧದಿಂದ ದೂರ ಸರಿಯಿರಿ…ಶಾಂತಿಯ ಮಾರ್ಗವನ್ನು ಅನುಸರಿಸಿ.. ಏಕೆಂದರೆ ಬುದ್ಧ ಹೇಳಿದ್ದಾರೆ “नत्थि-संति-परम-सुखं”, ಅದರರ್ಥ “ಶಾಂತಿಗಿಂತ ಪರಮೋಚ್ಛ ಸಂತಸ ಬೇರೊಂದಿಲ್ಲ” 
 “नही वेरेन वैरानि सम्मन्तीध कुदाचनम्
अवेरेन च सम्मन्ति एस धम्मो सनन्ततो”
ಶತೃತ್ವ ಶತೃತ್ವದಿಂದ ಕೊನೆಯಾಗುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಮಾನವೀಯ ಸಹಾನುಭೂತಿಯಿಂದ ಕೊನೆಗಾಣಿಸಿ. ಬುದ್ಧ ಹೇಳಿದ್ದಾರೆ  “भवतु-सब्ब-मंगलम्”, ಅಂದರೆ ಅರ್ಥ, “ಎಲ್ಲರೂ ಸಂತಸದಿಂದಿರಿ, ಎಲ್ಲರಿಗೂ ಆಶೀರ್ವಾದ ಸಿಗಲಿ”. ಇದು ಬುದ್ಧನ ಸಂದೇಶ ಮತ್ತು ಇದು ಮಾನವೀಯತೆಯ ಮಾರ್ಗವಾಗಿದೆ. 

ಗೌರವಾನ್ವಿತ ಸ್ನೇಹಿತರೇ, 

ಮುಂದಿನ 25 ವರ್ಷಗಳು, 2047ರ ವರೆಗೆ ನಾವು ಅಮೃತ ಕಾಲ ಎಂದು ಕರೆದಿದ್ದೇವೆ. ಈ ಅಮೃತ ಕಾಲ ಭಾರತದ ಪುರಾತನ ವೈಭವವಾಗಿದೆ. ಇದು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಯುಗವಾಗಿದೆ. ಭಾರತವು ತನ್ನ ಅಭಿವೃದ್ಧಿಗಾಗಿ ರಚಿಸಿರುವ ಮಾರ್ಗಸೂಚಿಯು ಭಗವಾನ್ ಬುದ್ಧನ ಬೋಧನೆಗಳಿಂದ ಮಾರ್ಗದರ್ಶವನ್ನು ಪಡೆದುಕೊಂಡಿದ್ದೇವೆ. ಬುದ್ಧನ ಈ ನೆಲದಲ್ಲಿಯೇ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯು ಸಂಪನ್ಮೂಲಗಳ ಬಳಕೆಯ ಬಗ್ಗೆ ಜಾಗೃತವಾಗಿದೆ. ಹವಾಮಾನ ಬದಲಾವಣೆಯ ರೂಪದಲ್ಲಿ ಜಗತ್ತು ಇಂದು ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟನ್ನು ನೋಡಿ. ಭಾರತವು ಈ ಸವಾಲುಗಳಿಗೆ ಸ್ವತಃ ಪರಿಹಾರವನ್ನು ಕಂಡುಕೊಳ್ಳುವುದು ಮಾತ್ರವಲ್ಲದೇ ಅವುಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಿದೆ. ನಾವು ಹಲವಾರು ದೇಶಗಳನ್ನು ಒಟ್ಟುಗೂಡಿಸುವ ಮೂಲಕ ಜೀವನ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಭಗವಾನ್ ಬುದ್ಧ ಹೀಗೆ ಹೇಳಿದ್ದಾರೆ  “अत्तान मेव पठमन्// पति रूपे निवेसये”, ಇದರರ್ಥ “ನಾವು ನಮ್ಮಲ್ಲೇ ಉತ್ತಮತನವನ್ನು ಆರಂಭಿಸಿಕೊಳ್ಳಬೇಕು” ಈ ಬೋಧನೆಗಳು ಜೀವನ ಅಭಿಯಾನದ ಪ್ರಮುಖ ಅಂಶಗಳಾಗಿವೆ. ಇದರರ್ಥ ವೈಯಕ್ತಿಕ ಜೀವನ ಶೈಲಿಯಿಂದ ಸುಸ್ಥಿರ ಭವಿಷ್ಯದ ಹಾದಿಯನ್ನು ಕಂಡುಕೊಳ್ಳುವುದಾಗಿದೆ. 

 

ಭಾರತವು ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ವೇದಿಕೆಯನ್ನು ಜಗತ್ತಿಗೆ ನೀಡಿದಾಗ, ಭಾರತವು ತನ್ನ ಜಿ-20 ಅಧ್ಯಕ್ಷತೆ ವಹಿಸಿದ್ದಾಗ, ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ರಚಿಸಿದಾಗ ಮತ್ತು ಭಾರತವು ಒಂದು ಸೂರ್ಯ, ಒಂದು ಜಗತ್ತು, ಒಂದು ಜಾಲ ದರ್ಶನವನ್ನು ನೀಡಿದಾಗ, ಬುದ್ಧನ ಕಲ್ಪನೆಗಳು ಪ್ರತಿಬಿಂಬಿಸಲ್ಪಟ್ಟವು. ಈ ಪ್ರಯತ್ನಗಳು. ನಮ್ಮ ಪ್ರತಿಯೊಂದು ಉಪಕ್ರಮಗಳು ಜಗತ್ತಿಗೆ ಸುಸ್ಥಿರ ಭವಿಷ್ಯವನ್ನು ಖಾತ್ರಿಪಡಿಸುತ್ತಿವೆ. ಅದು ಭಾರತ-ಮಧ್ಯಪ್ರಾಚ್ಯ-ಐರೋಪ್ಯ ರಾಷ್ಟ್ರಗಳು, ಆರ್ಥಿಕ ಕಾರಿಡಾರ್ ಆಗಿರಲಿ, ನಮ್ಮ ಹಸಿರು ಜಲಜನಕ ಅಭಿಯಾನ ಆಗಿರಲಿ, 2030 ರ ವೇಳೆಗೆ ಭಾರತೀಯ ರೈಲ್ವೇಯನ್ನು ನಿವ್ವಳ ಶೂನ್ಯ ಇಂಗಾಲ ಹೊರಸೂಸುವಂತೆ ಮಾಡುವ   ಗುರಿಯಾಗಿರಲಿ ಅಥವಾ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇಕಡಾ 20 ಕ್ಕೆ ಹೆಚ್ಚಿಸುವ-ಇಂತಹ ಅನೇಕ ಉಪಕ್ರಮಗಳ ಮೂಲಕ, ನಾವು ನಮ್ಮ ಪ್ರದರ್ಶನ ಮತ್ತು ಅನುಷ್ಠಾನಕ್ಕೆ ಒತ್ತು ನೀಡುತ್ತಿದ್ದೇವೆ. ಈ ಭೂಮಿಯನ್ನು ರಕ್ಷಿಸುವ ಬಲವಾದ ಬದ್ಧತೆಯನ್ನು ಇದು ಒಳಗೊಂಡಿದೆ. 

 

ಸ್ನೇಹಿತರೇ,

ನಮ್ಮ ಸರ್ಕಾರದ ಹಲವಾರು ನಿರ್ಧಾರಗಳು ಬುದ್ಧ, ಧಮ್ಮ ಮತ್ತು ಸಂಘದಿಂದ ಸ್ಪೂರ್ತಿ ಪಡೆದಿವೆ. ಇಂದು ಜಗತ್ತಿನ ಎಲ್ಲಿಯಾದರೂ ಬಿಕ್ಕಟ್ಟು ಉಂಟಾದರೆ ಭಾರತ ಮೊದಲು ಪ್ರತಿಕ್ರಿಯೆ ನೀಡುತ್ತದೆ. ಇದು ಬುದ್ಧನ ಸಹಾನುಭೂತಿಯ ತತ್ವದ ವಿಸ್ತರಣೆಯಾಗಿದೆ. ಅದು ಟರ್ಕಿಯಲ್ಲಿನ ಭೂಕಂಪವಾಗಲಿ, ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಅಥವಾ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿನ ಪರಿಸ್ಥಿತಿಗಳಾಗಲಿ, ಭಾರತವು ಸಹಾಯ ಮಾಡಲು ಮುಂದಾಯಿತು. ಭಾರತ ಎಲ್ಲರನ್ನೂ 'ವಿಶ್ವ ಬಂಧು' (ಜಗತ್ತಿನ ಸ್ನೇಹಿತ) ಎಂದು ಕರೆದುಕೊಂಡು ಹೋಗುತ್ತಿದೆ. ಯೋಗ ಆಂದೋಲನವಾಗಲಿ, ರಾಗಿ, ಆಯುರ್ವೇದ ಅಥವಾ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಪ್ರಚಾರವಾಗಲಿ, ಭಗವಾನ್ ಬುದ್ಧನ ಪ್ರೇರಣೆ ನಮ್ಮ ಅನೇಕ ಪ್ರಯತ್ನಗಳ ಹಿಂದೆ ಇದೆ.

 

 

ಗೌರವಾನ್ವಿತ ಸ್ನೇಹಿತರೇ, 

ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಮುನ್ನಡೆಯುತ್ತಿರುವ ಬೆಳವಣಿಗೆಯ ನಡುವೆಯೇ ತನ್ನ ಬೇರುಗಳನ್ನು ಬಲಗೊಳಿಸಿಕೊಳ್ಳುತ್ತಿದೆ. ಭಾರತದ ಯುವ ಸಮೂಹ ವಿಜ್ಞಾನ, ತಂತ್ರಜ್ಞಾನವನ್ನು ಜಗತ್ತಿನಲ್ಲಿ ಮುನ್ನಡೆಸಬೇಕು, ಈ ನಿಟ್ಟಿನಲ್ಲಿ ಸಂಸ್ಕೃತಿ ಮತ್ತು ಮೌಲ್ಯಗಳನ್ನು ರಕ್ಷಿಸಲು ಪ್ರತಿಜ್ಞೆ ಸ್ವೀಕರಿಸಬೇಕು. ಈ ಪ್ರಯತ್ನದಲ್ಲಿ ಬೌದ್ಧ ಧರ್ಮ ನಮಗೆ ಪರಮೋಚ್ಛ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದೆ. ನಮ್ಮ ಸಂತರು ಮತ್ತು ಸನ್ಯಾಸಿಗಳ ಮಾರ್ಗದರ್ಶನ ಮತ್ತು ಭಗವಾನ್ ಬುದ್ಧನ ಬೋಧನೆಗಳೊಂದಿಗೆ, ನಾವು ಒಟ್ಟಿಗೆ ಪ್ರಗತಿಯನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸ ತಮಗಿದೆ. 

ಈ ಶುಭ ದಿನದಂದು, ಈ ಕಾರ್ಯಕ್ರಮಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪಾಲಿ ಶಾಸ್ತ್ರೀಯ ಭಾಷೆಯಾದ ಹೆಮ್ಮೆಯ ಜೊತೆಗೆ ಈ ಭಾಷೆಯನ್ನು ಉಳಿಸಿ ಬೆಳೆಸುವ ಸಾಮೂಹಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ಸಂಕಲ್ಪವನ್ನು ತೆಗೆದುಕೊಂಡು ಅದನ್ನು ಈಡೇರಿಸಲು ಶ್ರಮಿಸೋಣ. ಈ ನಿರೀಕ್ಷೆಗಳೊಂದಿಗೆ, ನಾನು ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ, 
ನಮೋ ಬುದ್ಧಾಯಾ! 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi