ನಮಸ್ಕಾರ!
ನಗರಾಭಿವೃದ್ಧಿ - ಈ ಪ್ರಮುಖ ವಿಷಯದ ಸಮಾಲೋಚನೆ ಕುರಿತ ಬಜೆಟ್ ವೆಬಿನಾರ್‌ಗೆ ನಿಮ್ಮೆಲ್ಲರಿಗೂ ಸ್ವಾಗತ.
ಸ್ನೇಹಿತರೆ,
ಸ್ವಾತಂತ್ರ್ಯಾ ನಂತರ ನಮ್ಮ ದೇಶದಲ್ಲಿ ಕೆಲವೇ ಯೋಜಿತ ನಗರಗಳು ನಿರ್ಮಾಣವಾಗಿರುವುದು ದುರದೃಷ್ಟಕರ. ಸ್ವಾತಂತ್ರ್ಯಾ ನಂತರ ಕಳೆದ 75 ವರ್ಷಗಳಲ್ಲಿ 75 ಹೊಸ ಮತ್ತು ಪ್ರಮುಖ ಯೋಜಿತ ನಗರಗಳನ್ನು ನಿರ್ಮಿಸಿದ್ದರೆ, ಇಂದಿನ ಭಾರತದ ಚಿತ್ರಣವು ಸಂಪೂರ್ಣ ವಿಭಿನ್ನವಾಗಿರುತ್ತಿತ್ತು. ಆದರೆ ಈಗ 21ನೇ ಶತಮಾನದಲ್ಲಿ, ಭಾರತವು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರೀತಿ ನೋ ಡಿದರೆ, ಭವಿಷ್ಯದಲ್ಲಿ ಭಾರತಕ್ಕೆ ಹಲವಾರು ಹೊಸ ನಗರಗಳು ಅತ್ಯಗತ್ಯವಾಗಲಿವೆ.
ಇಂತಹ ಸನ್ನಿವೇಶದಲ್ಲಿ, ಭಾರತದಲ್ಲಿ ನಗರಾಭಿವೃದ್ಧಿಯ 2 ಪ್ರಮುಖ ಅಂಶಗಳಿವೆ. ಹೊಸ ನಗರಗಳ ಅಭಿವೃದ್ಧಿ ಮತ್ತು ಹಳೆಯ ನಗರಗಳ ತೀರಾ ಹಳೆಯದಾದ ವ್ಯವಸ್ಥೆಗಳ ಆಧುನೀಕರಣ. ಈ ದೃಷ್ಟಿಕೋನವನ್ನು ಮುಂಚೂಣಿಯಲ್ಲಿಟ್ಟುಕೊಂಡು, ನಮ್ಮ ಸರ್ಕಾರವು ಪ್ರತಿ ಬಜೆಟ್‌ನಲ್ಲಿ ನಗರಾಭಿವೃದ್ಧಿಗೆ ಅಪಾರ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಈ ಬಾರಿಯ ಬಜೆಟ್‌ನಲ್ಲಿ ನಗರೋತ್ಥಾನಕ್ಕೆ 15 ಸಾವಿರ ಕೋಟಿ ರೂ. ಪ್ರೋತ್ಸಾಹ(ಉತ್ತೇಜನಾ)ಧನ ಮೀಸಲಿಡಲಾಗಿದೆ. ಇದು ದೇಶದಲ್ಲಿ ಯೋಜಿತ ಮತ್ತು ವ್ಯವಸ್ಥಿತ ನಗರೀಕರಣದ ಹೊಸ ಆರಂಭವನ್ನು ಗುರುತಿಸುತ್ತಿದೆ, ಇದು ವೇಗವನ್ನು ಸಹಪಡೆಯುತ್ತದೆ ಎಂದು ನಾನು ನಂಬುತ್ತೇನೆ.
ಸ್ನೇಹಿತರೆ,
ನಗರ ಯೋಜನೆ ಮತ್ತು ನಗರ ಆಡಳಿತ ಎರಡೂ ನಗರಾಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದು ನಿಮ್ಮಂತಹ ಪರಿಣಿತರಿಗೆ ತಿಳಿದಿದೆ. ನಗರಗಳ ಕಳಪೆ ಯೋಜನೆ ಅಥವಾ ಯೋಜನೆ ನಂತರ ಸಮರ್ಪಕ ಅನುಷ್ಠಾನ ಕೊರತೆಯು ನಮ್ಮ ಅಭಿವೃದ್ಧಿ ಪಯಣದ ಮುಂದೆ ಪ್ರಮುಖ ಸವಾಲುಗಳನ್ನು ಸೃಷ್ಟಿಸಬಹುದು. ನಗರ ಯೋಜನೆಯಡಿ ಬರುವ ವಿಶೇಷ ಯೋಜನೆಯಾಗಲಿ, ಸಾರಿಗೆ ಯೋಜನೆಯಾಗಲಿ, ನಗರ ಮೂಲಸೌಕರ್ಯ ಯೋಜನೆಯಾಗಲಿ, ನೀರು ನಿರ್ವಹಣೆಯಾಗಲಿ, ಈ ಎಲ್ಲಾ ಕ್ಷೇತ್ರಗಳಲ್ಲಿ ಆದ್ಯತೆಯ ಗಮನ ಹರಿಸಿ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ.
ಈ ವೆಬಿನಾರ್‌ನ ವಿವಿಧ ಕಲಾಪಗಳಲ್ಲಿ ನೀವು 3 ಪ್ರಶ್ನೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಮೊದಲನೆಯದಾಗಿ - ರಾಜ್ಯಗಳಲ್ಲಿ ನಗರ ಯೋಜನೆ ಪರಿಸರ ವ್ಯವಸ್ಥೆಯನ್ನು ಹೇಗೆ ಬಲಪಡಿಸುವುದು. ಎರಡನೆಯದು - ನಗರ ಯೋಜನೆಯಲ್ಲಿ ಖಾಸಗಿ ವಲಯದಲ್ಲಿ ಲಭ್ಯವಿರುವ ಪರಿಣತಿಯನ್ನು ಸರಿಯಾಗಿ ಬಳಸುವುದು ಹೇಗೆ? ಮೂರನೆಯದು - ನಗರ ಯೋಜನೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಅಂತಹ ಶ್ರೇಷ್ಠತಾ ಕೇಂದ್ರಗಳನ್ನು ಹೇಗೆ ಅಭಿವೃದ್ಧಿಪಡಿಸುವುದು?
ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯೋಜಿತ ನಗರ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ಅವು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. 'ಅಮೃತ ಕಾಲ'ದಲ್ಲಿ ನಗರ ಯೋಜನೆ ಮಾತ್ರ ನಮ್ಮ ನಗರಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಭಾರತದ ಯೋಜಿತ ನಗರಗಳು ಮಾತ್ರ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಯೋಜನೆಯನ್ನು ಉತ್ತಮವಾಗಿ ಮಾಡಿದಾಗ, ನಮ್ಮ ನಗರಗಳು ಹವಾಮಾನಕ್ಕೆ ಪೂರಕವಾಗಿರುತ್ತವೆ ಮತ್ತು ನೀರಿನಿಂದ ಸುರಕ್ಷಿತವಾಗಿರುತ್ತವೆ.
ಸ್ನೇಹಿತರೆ,
ಈ ವೆಬಿನಾರ್‌ನಲ್ಲಿ ನಗರ ಯೋಜನೆ ಮತ್ತು ನಗರ ಆಡಳಿತದ ತಜ್ಞರಿಗೆ ನಾನು ವಿಶೇಷ ಮನವಿ ಮಾಡುತ್ತೇನೆ. ನೀವು ಹೆಚ್ಚು ಹೆಚ್ಚು ಹೊಸ ವಿಚಾರಗಳನ್ನು ಯೋಚಿಸಲು, ಆಲೋಚನೆಗಳನ್ನು ಮಾಡಲು ಪ್ರಯತ್ನಿಸಬೇಕು. ಅದು ಜಿಐಎಸ್-ಆಧಾರಿತ ಮಾಸ್ಟರ್ ಪ್ಲಾನಿಂಗ್ ಆಗಿರಲಿ, ವಿವಿಧ ರೀತಿಯ ಯೋಜನಾ ಪರಿಕರಗಳ ಅಭಿವೃದ್ಧಿಯಾಗಿರಬಹುದು, ಸಮರ್ಥ ಮಾನವ ಸಂಪನ್ಮೂಲಗಳು ಅಥವಾ ಸಾಮರ್ಥ್ಯ ವರ್ಧನೆಯಾಗಿರಬಹುದು, ನೀವು ಪ್ರತಿಯೊಂದು ಕ್ಷೇತ್ರದಲ್ಲೂ ನಿರ್ಣಾಯಕ ಪಾತ್ರ ವಹಿಸಬಹುದು. ಇಂದು ನಗರ ಸ್ಥಳೀಯ ಸಂಸ್ಥೆಗಳಿಗೆ ನಿಮ್ಮ ಪರಿಣತಿಯ ಅಗತ್ಯವಿದೆ. ಈ ಅಗತ್ಯವು ನಿಮಗೆ ಅನೇಕ ಅವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೆ,
ಸಾರಿಗೆ ಯೋಜನೆಯು ನಗರಗಳ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮ ನಗರಗಳ ಚಲನಶೀಲತೆ ಅಡೆತಡೆಯಿಲ್ಲದೆ ಇರಬೇಕು. 2014ರ ಮೊದಲು ಇದ್ದ ದೇಶದ ಮೆಟ್ರೋ ಸಂಪರ್ಕ ಪರಿಸ್ಥಿತಿ ನಿಮಗೆ ಚೆನ್ನಾಗಿ ತಿಳಿದಿದೆ. ನಮ್ಮ ಸರ್ಕಾರವು ಅನೇಕ ನಗರಗಳಲ್ಲಿ ಮೆಟ್ರೋ ರೈಲು ಸಂಪರ್ಕಕ್ಕಾಗಿ ಕೆಲಸ ಮಾಡುತ್ತಿದೆ. ಇಂದು ನಾವು ಮೆಟ್ರೋ ಸಂಪರ್ಕ ಜಾಲ ವಿಷಯದಲ್ಲಿ ಹಲವಾರು ದೇಶಗಳಿಗಿಂತ ಮುಂದೆ ಹೋಗಿದ್ದೇವೆ. ಈಗ ಈ ಜಾಲವನ್ನು ಬಲಪಡಿಸುವ ಮತ್ತು ಮತ್ತು ಕೊನೆಯ ಮೈಲಿಗೆ ವೇಗದ ಸಂಪರ್ಕ ಒದಗಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಸಮರ್ಥ ಸಾರಿಗೆ ಯೋಜನೆಯ ಅಗತ್ಯವಿದೆ. ನಗರಗಳ ರಸ್ತೆ ವಿಸ್ತರಣೆ, ಹಸಿರು ಚಲನಶೀಲತೆ, ಎತ್ತರಿಸಿದ(ಎಲಿವೇಟೆಡ್) ರಸ್ತೆಗಳು, ಜಂಕ್ಷನ್ ಸುಧಾರಣೆಯಂತಹ ಎಲ್ಲಾ ಸುಧಾರಣೆಗಳನ್ನು ಸಾರಿಗೆ ಯೋಜನೆಯ ಭಾಗವಾಗಿ ಮಾಡಬೇಕು.
ಸ್ನೇಹಿತರೆ,
ಭಾರತವು ಇಂದು ವೃತ್ತಾಕಾರದ ಆರ್ಥಿಕತೆ(ಉತ್ಪಾದನೆ ಮತ್ತು ಬಳಕೆಯ ಮಾದರಿ)ಯನ್ನು ನಗರಾಭಿವೃದ್ಧಿಗೆ ಪ್ರಮುಖ ಸಾಧನವನ್ನಾಗಿ ಮಾಡುತ್ತಿದೆ. ನಮ್ಮ ದೇಶದಲ್ಲಿ ಪ್ರತಿದಿನ ಸಾವಿರಾರು ಟನ್‌ಗಳಷ್ಟು ಪುರಸಭೆಯ ತ್ಯಾಜ್ಯ ಉತ್ಪತ್ತಿಯಾಗುತ್ತದೆ, ಇದರಲ್ಲಿ ಬ್ಯಾಟರಿ ತ್ಯಾಜ್ಯ, ವಿದ್ಯುತ್ ತ್ಯಾಜ್ಯ, ಆಟೋಮೊಬೈಲ್ ತ್ಯಾಜ್ಯ, ಟೈರ್‌ಗಳು ಮತ್ತು ಗೊಬ್ಬರ ತಯಾರಿಸಲು ಬಳಸಬಹುದಾದ ವಸ್ತುಗಳು ಸೇರಿವೆ. 2014ರಲ್ಲಿ ದೇಶದಲ್ಲಿ ಶೇ.14-15ರಷ್ಟು ಮಾತ್ರ ತ್ಯಾಜ್ಯ ಸಂಸ್ಕರಣೆ ನಡೆದಿದ್ದು, ಇಂದು ಶೇ.75ರಷ್ಟು ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ. ಇದನ್ನು ಮೊದಲೇ ಮಾಡಿದ್ದರೆ ನಮ್ಮ ನಗರಗಳ ಹೊರವಲಯವು ರಾಶಿ ರಾಶಿ ಕಸದಿಂದ ತುಂಬಿ ತುಳುಕಾಡುತ್ತಿರಲಿಲ್ಲ.
ಇಂದು ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಮೂಲಕ ನಗರಗಳನ್ನು ಈ ಕಸದ ರಾಶಿಗಳಿಂದ ಮುಕ್ತಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇದು ಅನೇಕ ಕೈಗಾರಿಕೆಗಳಿಗೆ ಮರುಬಳಕೆ ಮತ್ತು ಪುನರ್ಬಳಕೆಗೆ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಹಲವಾರು ನವೊದ್ಯಮಗಳು ಈ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿವೆ. ನಾವು ಅವರನ್ನು ಬೆಂಬಲಿಸಬೇಕಾಗಿದೆ. ಉದ್ಯಮವು ತ್ಯಾಜ್ಯ ನಿರ್ವಹಣೆಗೆ ಇರುವ ಸಂಪೂರ್ಣ ಸಾಮರ್ಥ್ಯವನ್ನು ಬಳಸಬೇಕು.
ಅಮೃತ ಯೋಜನೆಯ ಯಶಸ್ಸಿನ ನಂತರ, ನಾವು ನಗರಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ 'ಅಮೃತ್-2.0' ಅನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯೊಂದಿಗೆ ಈಗ ನಾವು ನೀರು ಮತ್ತು ಒಳಚರಂಡಿಯ ಸಾಂಪ್ರದಾಯಿಕ ಮಾದರಿ ದಾಟಿ ಸಮಗ್ರ ಅಥವಾ ಪರಿಪೂರ್ಣ ಯೋಜನೆ ಮಾಡಬೇಕಾಗಿದೆ. ಇಂದು ಕೆಲವು ನಗರಗಳಲ್ಲಿ ಬಳಸಿದ ನೀರನ್ನು ಸಂಸ್ಕರಿಸಿ ಕೈಗಾರಿಕಾ ಬಳಕೆಗೆ ಸರಬರಾಜು ಮಾಡಲಾಗುತ್ತಿದೆ. ತ್ಯಾಜ್ಯ ನಿರ್ವಹಣೆಯ ಈ ಕ್ಷೇತ್ರದಲ್ಲೂ ಖಾಸಗಿ ವಲಯಕ್ಕೆ ಅಪಾರ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ.
ಸ್ನೇಹಿತರೆ,
ನಮ್ಮ ಹೊಸ ನಗರಗಳು ಕಸ ಮುಕ್ತವಾಗಿರಬೇಕು, ನೀರು ಸುರಕ್ಷಿತವಾಗಿರಬೇಕು ಮತ್ತು ಹವಾಮಾನಕ್ಕೆ ಚೇತರಿಸಿಕೊಳ್ಳಬೇಕು. ಆದ್ದರಿಂದ, ನಾವು 2 ಮತ್ತು 3ನೇ ಹಂತದ ನಗರಗಳಲ್ಲಿ ನಗರ ಮೂಲಸೌಕರ್ಯ ಮತ್ತು ಯೋಜನೆಗಳಲ್ಲಿ ಹೂಡಿಕೆ ಹೆಚ್ಚಿಸಬೇಕಾಗಿದೆ. ವಾಸ್ತುಶಿಲ್ಪ, ಶೂನ್ಯ ವಿಲೇವಾರಿ ಮಾದರಿ, ನಿವ್ವಳ ಇಂಧನ ಸಕಾರಾತ್ಮಕತೆ, ಭೂ ಬಳಕೆಯಲ್ಲಿ ದಕ್ಷತೆ, ಸಾರಿಗೆ ಕಾರಿಡಾರ್‌ಗಳು ಅಥವಾ ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಇತ್ಯಾದಿ ವಲಯಗಳಲ್ಲಿ ಹೂಡಿಕೆ ಹೆಚ್ಚಿಸಬೇಕು. ಇದು ನಮ್ಮ ಭವಿಷ್ಯದ ನಗರಗಳಿಗೆ ಹೊಸ ನಿಯತಾಂಕಗಳನ್ನು ಹೊಂದಿಸುವ ಸಮಯ. ನಗರ ಯೋಜನೆಗಳಲ್ಲಿ ಮಕ್ಕಳ ಚಟುವಟಿಕೆಗಳನ್ನು ನೋಡಿಕೊಳ್ಳಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಗಮನಿಸಬೇಕು. ಮಕ್ಕಳಿಗೆ ಆಟವಾಡಲು ಅಥವಾ ಸೈಕ್ಲಿಂಗ್ ಮಾಡಲು ಸಾಕಷ್ಟು ಸ್ಥಳಾವಕಾಶವಿಲ್ಲ. ಹೊಸ ನಗರ ಯೋಜನೆಯಲ್ಲಿ ನಾವು ಈ ಎಲ್ಲಾ ಅಂಶಗಳನ್ನು ಸಹ ನೋಡಿಕೊಳ್ಳಬೇಕು.
ಸ್ನೇಹಿತರೆ,
ನಗರಗಳ ಅಭಿವೃದ್ಧಿಯಲ್ಲಿ, ನಗರ ಪ್ರದೇಶದ ಜನರ ಅಭಿವೃದ್ಧಿಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸಹ ಅಗತ್ಯವಾಗಿದೆ. ಅಂದರೆ, ನಾವು ರೂಪಿಸುತ್ತಿರುವ ಯೋಜನೆಗಳು ಮತ್ತು ನೀತಿಗಳು ನಗರಗಳ ಜನರಿಗೆ ಜೀವನವನ್ನು ಸುಲಭಗೊಳಿಸುವುದು ಮಾತ್ರವಲ್ಲ, ಅವರ ವೈಯಕ್ತಿಕ ಬೆಳವಣಿಗೆಗೆ ಸಹಾಯ ಮಾಡಬೇಕು. ಈ ವರ್ಷದ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸುಮಾರು 80 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.
ಮನೆಗಳನ್ನು ನಿರ್ಮಿಸುವಾಗ ಸಿಮೆಂಟ್, ಕಬ್ಬಿಣ, ಬಣ್ಣ ಮತ್ತು ಪೀಠೋಪಕರಣಗಳಂತಹ ಹಲವಾರು ಸಂಬಂಧಿತ ಕೈಗಾರಿಕೆಗಳು ಅದರೊಂದಿಗೆ ಉತ್ತೇಜನ ಪಡೆಯುತ್ತವೆ. ಅದರಿಂದ ದೊಡ್ಡ ಉತ್ತೇಜನ ಪಡೆಯುವ ಕೈಗಾರಿಕೆಗಳ ಸಂಖ್ಯೆಯನ್ನು ಊಹಿಸಿ. ಇಂದು ನಗರಾಭಿವೃದ್ಧಿ ಕ್ಷೇತ್ರದಲ್ಲಿ ಅತಿ ನವ್ಯವಾದ ಅಥವಾ ಸುಧಾರಿತ ಅಥವಾ ಭವಿಷ್ಯದ(ಫ್ಯೂಚರಿಸ್ಟಿಕ್) ತಂತ್ರಜ್ಞಾನದ ಪಾತ್ರ ಸಾಕಷ್ಟು ಹೆಚ್ಚಾಗಿದೆ. ನಮ್ಮ ನವೊದ್ಯಮಗಳು ಮತ್ತು ಕೈಗಾರಿಕೆಗಳು ಈ ದಿಕ್ಕಿನಲ್ಲಿ ಯೋಚಿಸಬೇಕು. ಅಲ್ಲದೆ, ವೇಗವಾಗಿ ಕಾರ್ಯ ನಿರ್ವಹಿಸಬೇಕು. ನಾವು ಈಗಿರುವ ಅಪಾರ ಸಾಧ್ಯತೆಗಳ ಲಾಭ ಪಡೆದುಕೊಳ್ಳಬೇಕು, ಹೊಸ ಸಾಧ್ಯತೆಗಳನ್ನು ಸೃಷ್ಟಿಸಬೇಕು. ಸುಸ್ಥಿರ ಮನೆ ತಂತ್ರಜ್ಞಾನದಿಂದ ಸುಸ್ಥಿರ ನಗರಗಳವರೆಗೆ, ನಾವು ಹೊಸ ಪರಿಹಾರಗಳನ್ನು ಕಂಡುಹಿಡಿಯಬೇಕು.
ಸ್ನೇಹಿತರೆ,
ನೀವೆಲ್ಲರೂ ಈ ವಿಷಯಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಇವುಗಳ ಹೊರತಾಗಿ ಇನ್ನೂ ಹಲವಾರು ವಿಷಯಗಳಿರಬಹುದು. ಈ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯಿರಿ, ಈ ಎಲ್ಲಾ ಸಾಧ್ಯತೆಗಳನ್ನು ಕಾರ್ಯಸಾಧುವಾಗಿಸಲು ಪರಿಪೂರ್ಣ ಮಾರ್ಗಸೂಚಿಯೊಂದಿಗೆ ಬನ್ನಿ.
ಈ ಆತ್ಮವಿಶ್ವಾಸದೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು! ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.