ನಮಸ್ಕಾರ!
2014 ರಿಂದ ಭಾರತದ ಎಲ್ಲಾ ಬಜೆಟ್ ಗಳಲ್ಲಿ ಒಂದು ಮಾದರಿ ಇದೆ. ಅಂದಿನಿಂದ ನಮ್ಮ ಸರ್ಕಾರದ ಪ್ರತಿಯೊಂದು ಬಜೆಟ್ ಪ್ರಸ್ತುತ ಸವಾಲುಗಳನ್ನು ಏಕಕಾಲದಲ್ಲಿ ಎದುರಿಸುತ್ತಾ ನವಯುಗದ ಸುಧಾರಣೆಗಳಿಗೆ ಒತ್ತು ನೀಡುತ್ತಿದೆ. ಹಸಿರು ಬೆಳವಣಿಗೆ ಮತ್ತು ಇಂಧನ ಪರಿವರ್ತನೆಗಾಗಿ ಭಾರತದ ಕಾರ್ಯತಂತ್ರದ ಮೂರು ಪ್ರಮುಖ ಸ್ತಂಭಗಳಿವೆ. ಮೊದಲನೆಯದಾಗಿ, ನವೀಕರಿಸಬಹುದಾದ ಇಂಧನದ ಉತ್ಪಾದನೆಯನ್ನು ಹೆಚ್ಚಿಸುವುದು; ಎರಡನೆಯದಾಗಿ, ನಮ್ಮ ಆರ್ಥಿಕತೆಯಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ತಗ್ಗಿಸುವುದು; ಮತ್ತು ಮೂರನೆಯದಾಗಿ: ದೇಶದೊಳಗೆ ಅನಿಲ ಆಧಾರಿತ ಆರ್ಥಿಕತೆಯತ್ತ ವೇಗವಾಗಿ ಮುಂದುವರಿಯುವುದು. ಈ ಕಾರ್ಯತಂತ್ರದ ಭಾಗವಾಗಿ, ಎಥೆನಾಲ್ ಮಿಶ್ರಣ, ಪಿಎಂ-ಕುಸುಮ್ ಯೋಜನೆ, ಸೌರ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ, ಛಾವಣಿ ಮೇಲೆ ಸೌರ ಯೋಜನೆ, ಕಲ್ಲಿದ್ದಲು ಅನಿಲೀಕರಣ ಅಥವಾ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹಣೆ ಸೇರಿದಂತೆ ಅನೇಕ ಪ್ರಮುಖ ಘೋಷಣೆಗಳನ್ನು ನಂತರದ ಬಜೆಟ್ ನಲ್ಲಿ ಮಾಡಲಾಗಿದೆ. ಈ ವರ್ಷದ ಬಜೆಟ್ ನಲ್ಲಿ, ಉದ್ಯಮಕ್ಕೆ ಹಸಿರು ಸಾಲಗಳಿವೆ ಮತ್ತು ರೈತರಿಗೆ ಪಿಎಂ ಪ್ರಣಾಮ್ ಯೋಜನೆಯೂ ಇದೆ. ಹಳ್ಳಿಗಳಿಗೆ ಗೋಬರ್ ಧನ್ ಯೋಜನೆ ಮತ್ತು ನಗರ ಪ್ರದೇಶಗಳಿಗೆ ವಾಹನ ಗುಜರಿ ನೀತಿ ಇದೆ. ಹಸಿರು ಜಲಜನಕಕ್ಕೆ ಒತ್ತು ನೀಡಲಾಗಿದೆ ಮತ್ತು ಗದ್ದೆ ಸಂರಕ್ಷಣೆಗೆ ಸಮಾನ ಗಮನವಿದೆ. ಹಸಿರು ಬೆಳವಣಿಗೆಗೆ ಸಂಬಂಧಿಸಿದಂತೆ ಈ ವರ್ಷದ ಬಜೆಟ್ ನಲ್ಲಿ ಮಾಡಲಾದ ಅವಕಾಶಗಳು ಒಂದು ರೀತಿಯಲ್ಲಿ ನಮ್ಮ ಭವಿಷ್ಯದ ಪೀಳಿಗೆಯ ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗಿವೆ.
ಸ್ನೇಹಿತರೇ,
ನವೀಕರಿಸಬಹುದಾದ ಇಂಧನ ಮೂಲಗಳಲ್ಲಿ ಭಾರತವು ಆಧಿಪತ್ಯದ ಸ್ಥಾನವನ್ನು ಪಡೆದರೆ ಇಡೀ ಜಗತ್ತಿನಲ್ಲಿ ಪ್ರಮುಖ ಬದಲಾವಣೆಯನ್ನು ತರಬಹುದು. ಜಾಗತಿಕ ಹಸಿರು ಇಂಧನ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವಾಗಿ ನೆಲೆ ನಿಲ್ಲುವಂತೆ ಮಾಡುವಲ್ಲಿ ಈ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ, ಇಂಧನ ಜಗತ್ತಿಗೆ ಸಂಬಂಧಿಸಿದ ಪ್ರತಿಯೊಬ್ಬ ಬಾಧ್ಯಸ್ಥರನ್ನೂ ಭಾರತದಲ್ಲಿ ಹೂಡಿಕೆ ಮಾಡಲು ನಾನು ಆಹ್ವಾನಿಸುತ್ತೇನೆ. ಇಂದು ಜಗತ್ತು ತನ್ನ ನವೀಕರಿಸಬಹುದಾದ ಇಂಧನ ಪೂರೈಕೆ ಸರಪಳಿಗಳನ್ನು ವೈವಿಧ್ಯಮಯಗೊಳಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತವು ಈ ವರ್ಷದ ಬಜೆಟ್ ನಲ್ಲಿ ಪ್ರತಿಯೊಬ್ಬ ಹಸಿರು ಹೂಡಿಕೆದಾರರಿಗೆ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶವನ್ನು ನೀಡಿದೆ. ಇದು ಈ ವಲಯದ ನವೋದ್ಯಮಗಳಿಗೆ ಬಹಳ ಅನುಕೂಲಕರವಾಗಿದೆ.
ಸ್ನೇಹಿತರೇ,
2014 ರಿಂದ, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರ್ಪಡೆಯಲ್ಲಿ ಭಾರತವು ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಅತ್ಯಂತ ವೇಗವಾಗಿದೆ. ಭಾರತವು ನವೀಕರಿಸಬಹುದಾದ ಇಂಧನ ಗುರಿಗಳನ್ನು ಗಡುವಿಗೆ ಮುಂಚಿತವಾಗಿ ಪೂರೈಸಲಾಗುತ್ತಿದೆ ಎಂದು ನಮ್ಮ ಪೂರ್ವದಾಖಲೆಗಳು ತೋರಿಸುತ್ತದೆ. ನಮ್ಮ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಶೇಕಡಾ 40 ರಷ್ಟು ಪಳೆಯುಳಿಕೆಯೇತರ ಇಂಧನದ ಕೊಡುಗೆಯ ಗುರಿಯನ್ನು ಭಾರತವು ಒಂಬತ್ತು ವರ್ಷಗಳ ಮುಂಚಿತವಾಗಿ ಸಾಧಿಸಿದೆ. ಭಾರತವು ಐದು ತಿಂಗಳ ಮುಂಚಿತವಾಗಿ ಪೆಟ್ರೋಲ್ ನಲ್ಲಿ ಶೇ.10ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನೂ ಸಾಧಿಸಿದೆ. ಭಾರತವು 2030ಕ್ಕೆ ಬದಲಾಗಿ 2025-26ರೊಳಗೆ ಶೇ.20ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸಲು ಗುರಿ ಹಾಕಿಕೊಂಡಿದೆ. ಭಾರತವು 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸಲಿದೆ. ನಮ್ಮ ಸರ್ಕಾರವು ಜೈವಿಕ ಇಂಧನಗಳಿಗೆ ಒತ್ತು ನೀಡುತ್ತಿರುವ ರೀತಿಯು ಎಲ್ಲಾ ಹೂಡಿಕೆದಾರರಿಗೆ ದೊಡ್ಡ ಅವಕಾಶವನ್ನು ನೀಡುತ್ತದೆ. ಇತ್ತೀಚೆಗೆ, ನಾನು ಇ -20 ಇಂಧನಕ್ಕೆ ಚಾಲನೆ ನೀಡಿದ್ದೇನೆ. ನಮ್ಮ ದೇಶದಲ್ಲಿ ಕೃಷಿ ತ್ಯಾಜ್ಯಕ್ಕೆ ಕೊರತೆಯಿಲ್ಲ. ಆದ್ದರಿಂದ, ಹೂಡಿಕೆದಾರರು ದೇಶದ ಪ್ರತಿಯೊಂದು ಮೂಲೆಯಲ್ಲೂ ಎಥೆನಾಲ್ ಸ್ಥಾವರಗಳನ್ನು ಸ್ಥಾಪಿಸುವ ಅವಕಾಶವನ್ನು ಕಳೆದುಕೊಳ್ಳಬಾರದು. ಭಾರತದಲ್ಲಿ ಸೌರ, ಪವನ ಮತ್ತು ಜೈವಿಕ ಅನಿಲದ ಸಾಮರ್ಥ್ಯವು ನಮ್ಮ ಖಾಸಗಿ ವಲಯಕ್ಕೆ ಯಾವುದೇ ಚಿನ್ನದ ಗಣಿ ಅಥವಾ ತೈಲ ಕ್ಷೇತ್ರಕ್ಕಿಂತ ಕಡಿಮೆಯೇನಲ್ಲ.
ಸ್ನೇಹಿತರೇ,
ರಾಷ್ಟ್ರೀಯ ಹಸಿರು ಹೈಡ್ರೋಜನ್ ಅಭಿಯಾನದ ಅಡಿಯಲ್ಲಿ ಭಾರತವು ಪ್ರತಿವರ್ಷ 5 ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಖಾಸಗಿ ವಲಯವನ್ನು ಉತ್ತೇಜಿಸಲು ಈ ಅಭಿಯಾನದಲ್ಲಿ 19,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಒದಗಿಸಲಾಗಿದೆ. ಹಸಿರು ಹೈಡ್ರೋಜನ್ ಉತ್ಪಾದನೆಯ ಜೊತೆಗೆ, ನಿಮಗಾಗಿ ಇನ್ನೂ ಅನೇಕ ಆಯ್ಕೆಗಳಿವೆ. ಉದಾಹರಣೆಗೆ, ಎಲೆಕ್ಟ್ರೋಲೈಸರ್ ಉತ್ಪಾದನೆ, ಹಸಿರು ಉಕ್ಕಿನ ಉತ್ಪಾದನೆ, ದೀರ್ಘ ಪ್ರಯಾಣದ ಸಾರಿಗೆಗಾಗಿ ಇಂಧನ ಕೋಶಗಳ ತಯಾರಿಕೆಯಲ್ಲಿ ಅನೇಕ ಹೂಡಿಕೆ ಅವಕಾಶಗಳು ಲಭ್ಯವಿವೆ.
ಸ್ನೇಹಿತರೇ,
ಭಾರತವು ಹಸುವಿನ ಸಗಣಿಯಿಂದ 10,000 ದಶಲಕ್ಷ ಘನ ಮೀಟರ್ ಜೈವಿಕ ಅನಿಲವನ್ನು ಮತ್ತು ಕೃಷಿ ತ್ಯಾಜ್ಯಗಳಿಂದ 1.5 ಲಕ್ಷ ದಶಲಕ್ಷ ಘನ ಮೀಟರ್ ಅನಿಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ನಮ್ಮ ದೇಶದಲ್ಲಿ ನಗರ ಅನಿಲ ವಿತರಣೆಯಲ್ಲಿ ಎಂಟು ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಈ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಇಂದು ಗೋಬರ್ ಧನ್ ಯೋಜನೆ ಭಾರತದ ಜೈವಿಕ ಇಂಧನ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಈ ವರ್ಷದ ಬಜೆಟ್ ನಲ್ಲಿ ಗೋಬರ್ ಧನ್ ಯೋಜನೆಯಡಿ 500 ಹೊಸ ಘಟಕಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ. ಇವು ಹಳೆಯ ಶೈಲಿಯ ಗೋಬರ್ ಗ್ಯಾಸ್ ಸ್ಥಾವರಗಳಿಗಿಂತ ಭಿನ್ನವಾಗಿವೆ. ಈ ಆಧುನಿಕ ಸ್ಥಾವರಗಳಿಗೆ ಸರ್ಕಾರ 10,000 ಕೋಟಿ ರೂ. ಖರ್ಚು ಮಾಡಲಿದೆ. ಸರ್ಕಾರದ "ತ್ಯಾಜ್ಯದಿಂದ ಇಂಧನ (ವೇಸ್ಟ್ ಟು ಎನರ್ಜಿ)" ಕಾರ್ಯಕ್ರಮವು ದೇಶದ ಖಾಸಗಿ ವಲಯ ಮತ್ತು ಎಂಎಸ್ಎಂಇಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ. ಹಳ್ಳಿಗಳಲ್ಲಿನ ಕೃಷಿ ತ್ಯಾಜ್ಯದ ಜೊತೆಗೆ, ನಗರಗಳ ಪುರಸಭೆಯ ಘನ ತ್ಯಾಜ್ಯದಿಂದ ಸಿಬಿಜಿ ಉತ್ಪಾದನೆಯೂ ಅವರಿಗೆ ಉತ್ತಮ ಅವಕಾಶವಾಗಿದೆ. ಖಾಸಗಿ ವಲಯವನ್ನು ಉತ್ತೇಜಿಸಲು ಸರ್ಕಾರವು ತೆರಿಗೆ ವಿನಾಯಿತಿ ಮತ್ತು ಆರ್ಥಿಕ ನೆರವು ನೀಡುತ್ತಿದೆ.
ಸ್ನೇಹಿತರೇ,
ಭಾರತದ ವಾಹನ ಸ್ಕ್ರ್ಯಾಪಿಂಗ್ ನೀತಿಯು ಹಸಿರು ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ವಾಹನಗಳನ್ನು ಗುಜರಿಗೆ ಹಾಕುವುದನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಈ ವರ್ಷದ ಬಜೆಟ್ ನಲ್ಲಿ 3,000 ಕೋಟಿ ರೂ.ಗಳನ್ನು ಒದಗಿಸಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಮಾರು ಮೂರು ಲಕ್ಷ ಹಳೆ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುವುದು. ಈ ವಾಹನಗಳು 15 ವರ್ಷಗಳಿಗಿಂತಲೂ ಹಳೆಯವಾಗಿದ್ದು, ಇದರಲ್ಲಿ ಪೊಲೀಸರು ಬಳಸುತ್ತಿದ್ದ ವಾಹನಗಳು, ವಿಶೇಷವಾಗಿ ನಮ್ಮ ಆಸ್ಪತ್ರೆಗಳಲ್ಲಿನ ಆಂಬ್ಯುಲೆನ್ಸ್ ಗಳು ಮತ್ತು ನಮ್ಮ ಸಾರ್ವಜನಿಕ ಸಾರಿಗೆಯ ಬಸ್ಸುಗಳೂ ಸೇರಿವೆ. ವಾಹನ ಸ್ಕ್ರ್ಯಾಪಿಂಗ್ ನಿಮ್ಮೆಲ್ಲರಿಗೂ ದೊಡ್ಡ ಮಾರುಕಟ್ಟೆಯಾಗಲಿದೆ. 'ಮರುಬಳಕೆ, ಪುನರ್ ಬಳಕೆ ಮತ್ತು ಮರುಪಡೆಯುವಿಕೆ' ತತ್ವವನ್ನು ಅನುಸರಿಸಿ, ಇದು ನಮ್ಮ ವೃತ್ತಾಕಾರದ ಆರ್ಥಿಕತೆಗೆ ಹೊಸ ಉತ್ತೇಜನವನ್ನು ನೀಡುತ್ತದೆ. ಭಾರತದ ಯುವಕರು ಮತ್ತು ನಮ್ಮ ನವೋದ್ಯಮಗಳು ವೃತ್ತಾಕಾರದ ಆರ್ಥಿಕತೆಯ ವಿವಿಧ ವಿಧಾನಗಳಿಗೆ ಸೇರಬೇಕೆಂದು ನಾನು ಆಗ್ರಹಿಸುತ್ತೇನೆ.
ಸ್ನೇಹಿತರೇ,
ಮುಂದಿನ 6-7 ವರ್ಷಗಳಲ್ಲಿ ಭಾರತವು ತನ್ನ ಬ್ಯಾಟರಿಗಳ ವಿದ್ಯುತ್ ಶೇಖರಣಾ ಸಾಮರ್ಥ್ಯವನ್ನು ಗಂಟೆಗೆ 125 ಗಿಗಾ ವ್ಯಾಟ್ ಹೆಚ್ಚಿಸಬೇಕಾಗಿದೆ. ಈ ಬೃಹತ್ ಗುರಿಯ ಹಿನ್ನೆಲೆಯಲ್ಲಿ ನಿಮಗಾಗಿ ಅನೇಕ ಹೊಸ ಅವಕಾಶಗಳು ಇರುತ್ತವೆ. ಈ ಗುರಿಯನ್ನು ಸಾಧಿಸಲು ಲಕ್ಷಾಂತರ ಕೋಟಿ ರೂಪಾಯಿಗಳ ಹೂಡಿಕೆಯ ಅಗತ್ಯವಿದೆ. ಬ್ಯಾಟರಿ ಅಭಿವೃದ್ಧಿದಾರರನ್ನು ಬೆಂಬಲಿಸಲು ಸರ್ಕಾರವು ಈ ವರ್ಷದ ಬಜೆಟ್ ನಲ್ಲಿ ಕಾರ್ಯಸಾಧ್ಯತೆ ಅಂತರ ನಿಧಿ (ವಯಬಿಲಿಟಿ ಗ್ಯಾಪ್ ಫಂಡಿಂಗ್) ಯೋಜನೆಯನ್ನು ಘೋಷಿಸಿದೆ.
ಸ್ನೇಹಿತರೇ,
ಜಲ ಆಧಾರಿತ ಸಾರಿಗೆ ಭಾರತದಲ್ಲಿ ಒಂದು ದೊಡ್ಡ ವಲಯವಾಗಿದೆ, ಇದು ಮುಂದಿನ ದಿನಗಳಲ್ಲಿ ವೇಗವನ್ನು ಪಡೆಯಲಿದೆ. ಇಂದು ಭಾರತವು ತನ್ನ ಕರಾವಳಿ ಮಾರ್ಗದ ಮೂಲಕ ಕೇವಲ 5 ಪ್ರತಿಶತದಷ್ಟು ಸರಕುಗಳನ್ನು ಮಾತ್ರ ಸಾಗಿಸುತ್ತಿದೆ. ಅಂತೆಯೇ, ಒಳನಾಡಿನ ಜಲಮಾರ್ಗಗಳ ಮೂಲಕ ಭಾರತದಲ್ಲಿ ಕೇವಲ ಶೇ.2 ರಷ್ಟು ಸರಕುಗಳನ್ನು ಮಾತ್ರ ಸಾಗಿಸಲಾಗುತ್ತಿದೆ. ಭಾರತದಲ್ಲಿ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿರುವ ರೀತಿಯಿಂದಾಗಿ ಈ ಕ್ಷೇತ್ರದಲ್ಲಿ ನಿಮ್ಮೆಲ್ಲರಿಗೂ ಅನೇಕ ಅವಕಾಶಗಳಿವೆ.
ಸ್ನೇಹಿತರೇ,
ಹಸಿರು ಇಂಧನ ತಂತ್ರಜ್ಞಾನದಲ್ಲಿ ಭಾರತವು ವಿಶ್ವದಲ್ಲಿ ಮುಂದಾಳತ್ವ ವಹಿಸಬಹುದು. ಭಾರತದಲ್ಲಿ ಹಸಿರು ಉದ್ಯೋಗಗಳನ್ನು ಹೆಚ್ಚಿಸುವುದರ ಹೊರತಾಗಿ, ಇದು ಜಾಗತಿಕ ಒಳಿತಿಗೆ ಸಾಕಷ್ಟು ಸಹಾಯ ಮಾಡುತ್ತದೆ. ಈ ಬಜೆಟ್ ನಿಮಗೆ ಒಂದು ಅವಕಾಶ ಮಾತ್ರವಲ್ಲ, ಇದು ನಿಮ್ಮ ಭವಿಷ್ಯಕ್ಕೆ ಖಾತರಿಯನ್ನು ನೀಡುತ್ತದೆ. ಬಜೆಟ್ ನ ಪ್ರತಿಯೊಂದು ಅವಕಾಶಗಳನ್ನು ಕಾರ್ಯಗತಗೊಳಿಸಲು ನಾವು ವೇಗವಾಗಿ ಮತ್ತು ಒಟ್ಟಾಗಿ ಶ್ರಮಿಸಬೇಕು. ನೀವೆಲ್ಲರೂ ಇಂದಿನ ವೆಬಿನಾರ್ ನಲ್ಲಿ ವಿವರವಾಗಿ ಚರ್ಚಿಸುತ್ತೀರಿ. ಈ ಚರ್ಚೆಯು ಬಜೆಟ್ ನಲ್ಲಿ ಏನಾಗಿರಬೇಕು ಅಥವಾ ಇರಬಾರದು ಎಂಬ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಬಜೆಟ್ ಅನ್ನು ಮಂಡಿಸಲಾಗಿದೆ ಮತ್ತು ಅದನ್ನು ಈಗಾಗಲೇ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗಿದೆ. ಈಗ, ಈ ಬಜೆಟ್ ನ ಪ್ರತಿಯೊಂದು ಅವಕಾಶಗಳನ್ನು ಪರಿಣಾಮಕಾರಿ ರೀತಿಯಲ್ಲಿ ಕಾರ್ಯಗತಗೊಳಿಸುವುದು ಮತ್ತು ದೇಶದಲ್ಲಿ ಹಸಿರು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಆವಿಷ್ಕಾರಗಳನ್ನು ಹೇಗೆ ಮಾಡುವುದು ಎಂಬುದು ಸರ್ಕಾರ ಮತ್ತು ದೇಶವಾಸಿಗಳ ಕರ್ತವ್ಯವಾಗಿದೆ. ಬಜೆಟ್ ಪ್ರಸ್ತಾಪಗಳನ್ನು ಕಾರ್ಯಗತಗೊಳಿಸಲು ಸರ್ಕಾರ ನಿಮ್ಮೊಂದಿಗೆ ಹೆಜ್ಜೆ ಹಾಕಲು ಸಿದ್ಧವಾಗಿದೆ. ಮತ್ತೊಮ್ಮೆ, ಈ ವೆಬಿನಾರ್ ಗಾಗಿ ಸಮಯ ತೆಗೆದುಕೊಂಡ ಎಲ್ಲಾ ಹೂಡಿಕೆದಾರರು, ನವೋದ್ಯಮಿಗಳು, ಕೃಷಿ ಕ್ಷೇತ್ರದವರು, ತಜ್ಞರು ಮತ್ತು ಶಿಕ್ಷಣ ತಜ್ಞರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಈ ವೆಬಿನಾರ್ ಯಶಸ್ಸಿಗೆ ಶುಭ ಹಾರೈಸುತ್ತೇನೆ.
ತುಂಬಾ ಧನ್ಯವಾದಗಳು!