ಆಂಧ್ರಪ್ರದೇಶದ ರಾಜ್ಯಪಾಲರಾದ ಶ್ರೀ ಬಿಸ್ವಭೂಷಣ್ ಜಿ, ಮುಖ್ಯಮಂತ್ರಿ ಶ್ರೀ ಜಗನ್ ಮೋಹನ್ ರೆಡ್ಡಿ ಜಿ, ನನ್ನ ಸಚಿವ ಸಂಪುಟ ಸಹೋದ್ಯೋಗಿ ಅಶ್ವಿನಿ ವೈಷ್ಣವ್ ಜಿ ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲ ಇತರ ಗಣ್ಯರು ಮತ್ತು ಆಂಧ್ರಪ್ರದೇಶದ ನನ್ನ ಸಹೋದರ-ಸಹೋದರಿಯರೇ..!
ಕೆಲವೇ ತಿಂಗಳ ಹಿಂದೆ ಕ್ರಾಂತಿವೀರ ಅಲ್ಲೂರಿ ಸೀತಾರಾಮರಾಜು ಅವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ನಿಮ್ಮೆಲ್ಲರೊಂದಿಗೆ ಭಾಗವಹಿಸುವ ಸೌಭಾಗ್ಯ ನನಗೆ ದೊರಕಿತ್ತು. ಇಂದು ಮತ್ತೆ ಆಂಧ್ರಪ್ರದೇಶ ಮತ್ತು ವಿಶಾಖಪಟ್ಟಣಕ್ಕೆ ಅತ್ಯಂತ ಮಹತ್ವದ ದಿನವಾದ ಈ ಸಮಯದಲ್ಲಿ ಆಂಧ್ರಕ್ಕೆ ನಾನು ಬಂದಿದ್ದೇನೆ. ವಿಶಾಖಪಟ್ಟಣಂ ಭಾರತದ ವಿಶೇಷ ನಗರ. ಇಲ್ಲಿ ಯಾವಾಗಲೂ ವ್ಯಾಪಾರದ ಶ್ರೀಮಂತ ಸಂಪ್ರದಾಯವಿದೆ. ವಿಶಾಖಪಟ್ಟಣಂ ಪ್ರಾಚೀನ ಭಾರತದಲ್ಲಿ ಪ್ರಮುಖ ಬಂದರು. ಈ ಬಂದರಿನ ಮೂಲಕ, ಸಾವಿರಾರು ವರ್ಷಗಳ ಹಿಂದೆ ಮತ್ತು ಪಶ್ಚಿಮ ಏಷ್ಯಾ ಮತ್ತು ರೋಮ್‌ನವರೆಗಿನ ಪ್ರದೇಶಗಳೊಂದಿಗೆ ವ್ಯಾಪಾರ ನಡೆಸಲಾಗಿದೆ ಮತ್ತು ಇಂದಿಗೂ ವಿಶಾಖಪಟ್ಟಣಂ ಭಾರತದ ವ್ಯಾಪಾರದ ಕೇಂದ್ರ ಬಿಂದುವಾಗಿ ಉಳಿದಿದೆ.
10 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯು ಆಂಧ್ರಪ್ರದೇಶ ಮತ್ತು ವಿಶಾಖಪಟ್ಟಣಂನ ಆಶೋತ್ತರಗಳನ್ನು ಈಡೇರಿಸುವ ಸಾಧನವಾಗಲಿದೆ. ಈ ಯೋಜನೆಗಳು ಮೂಲಸೌಕರ್ಯ, ಜೀವನ ಸುಲಭಗೊಳಿಸುವುದು ಮತ್ತು ಸ್ವಾವಲಂಬಿ ಭಾರತದಂತಹ ಅನೇಕ ಹೊಸ ಆಯಾಮಗಳನ್ನು ತೆರೆದುಕೊಳ್ಳಲು ನೆರವಾಗುವುದಲ್ಲದೆ, ಅಭಿವೃದ್ಧಿಯ ಪಯಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಅದಕ್ಕಾಗಿ ನಾನು ಆಂಧ್ರಪ್ರದೇಶದ ಎಲ್ಲಾ ಜನರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸ ಬಯಸುತ್ತೇನೆ. ನಮ್ಮ ದೇಶದ ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ವೆಂಕಯ್ಯನಾಯ್ಡು ಮತ್ತು ಶ್ರೀ ಹರಿಬಾಬು ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಲು ನಾನು ಈ ಅವಕಾಶ ಬಳಸಿಕೊಳ್ಳುತ್ತೇನೆ. ಅವರನ್ನು ಭೇಟಿಯಾದಾಗಲೆಲ್ಲ ಆಂಧ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಆಂಧ್ರದ ಬಗ್ಗೆ ಅವರ ಪ್ರೀತಿ ಮತ್ತು ಬದ್ಧತೆ ಅಸಮಾನ್ಯವಾದುದು.
ಮಿತ್ರರೇ,
ಆಂಧ್ರಪ್ರದೇಶದ ಜನರು ಬಹಳ ವಿಶೇಷ ಗುಣವನ್ನು ಹೊಂದಿದ್ದಾರೆ. ಅವರು ಸ್ವಭಾವತಃ ತುಂಬಾ ಪ್ರೀತಿ ಮತ್ತು ಶ್ರಮಜೀವಿಗಳು. ಇಂದು ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿ, ಆಂಧ್ರಪ್ರದೇಶದ ಜನರು ಪ್ರತಿಯೊಂದು ವಲಯದಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಅದು ಶಿಕ್ಷಣ ಅಥವಾ ವ್ಯಾಪಾರ, ತಂತ್ರಜ್ಞಾನ ಅಥವಾ ವೈದ್ಯಕೀಯ ವೃತ್ತಿಯಾಗಿರಲಿ, ಆಂಧ್ರಪ್ರದೇಶದ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ವಿಶಿಷ್ಟವಾದ ಹೆಗ್ಗುರುತನ್ನು ಹೊಂದಿದ್ದಾರೆ. ಈ ಗುರುತನ್ನು ಅವರ ವೃತ್ತಿಪರ ಗುಣಮಟ್ಟದಿಂದ ಮಾತ್ರವಲ್ಲದೆ ಅವರ ಸ್ನೇಹಪರ ಸ್ವಭಾವದಿಂದಲೂ ಗಳಿಸಿದ್ದಾರೆ. ಆಂಧ್ರಪ್ರದೇಶದ ಜನರ ಹರ್ಷಚಿತ್ತದಿಂದ ಮತ್ತು ಉತ್ಸಾಹಭರಿತ ವ್ಯಕ್ತಿತ್ವವು ಪ್ರತಿಯೊಬ್ಬರನ್ನು ಅವರ ಅಭಿಮಾನಿಗಳನ್ನಾಗಿ ಮಾಡುತ್ತದೆ. ತೆಲುಗು ಮಾತನಾಡುವ ಜನರು ಸದಾ ಶ್ರೇಷ್ಠತೆಯ ಹುಡುಕಾಟದಲ್ಲಿರುತ್ತಾರೆ. ಅವರು ಸದಾ ಉತ್ತಮವಾದುದನ್ನೇ ಮಾಡಲು ಪ್ರಯತ್ನಿಸುತ್ತಾರೆ. ಇಂದು ಉದ್ಘಾಟನೆಗೊಂಡಿರುವ ಅಥವಾ ಇಂದು ಶಂಕುಸ್ಥಾಪನೆಗೊಂಡಿರುವ ಅಭಿವೃದ್ಧಿ ಯೋಜನೆಗಳು ಆಂಧ್ರಪ್ರದೇಶದ ಪ್ರಗತಿಯ ವೇಗವನ್ನು ಇನ್ನಷ್ಟು ಹೆಚ್ಚಲಿಸಲಿವೆ ಎಂಬುದು ನನಗೆ ಸಂತೋಷ ತಂದಿದೆ.
ಮಿತ್ರರೇ,
"ಆಜಾದಿ ಕಾ ಅಮೃತ ಕಾಲ್"ದಲ್ಲಿ, ಅಭಿವೃದ್ಧಿ ಹೊಂದಿದ ಭಾರತದ ಗುರಿಯೊಂದಿಗೆ ದೇಶವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದೆ. ಈ ಅಭಿವೃದ್ಧಿಯ ಪಯಣ ಬಹುಮುಖಿಯಾಗಿದೆ. ಇದು ಸಾಮಾನ್ಯ ನಾಗರಿಕರ ಜೀವನಕ್ಕೆ ಸಂಬಂಧಿಸಿದ ಅಗತ್ಯತೆಗಳ ಬಗ್ಗೆ ನಮ್ಮ ಕಾಳಜಿಯನ್ನು ಒಳಗೊಂಡಿದೆ. ಇದು ಅತ್ಯುತ್ತಮ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯನ್ನೂ ಸಹ ಒಳಗೊಂಡಿದೆ. ಇಂದಿನ ಕಾರ್ಯಕ್ರಮಗಳಲ್ಲಿ ಮೂಲಸೌಕರ್ಯಗಳ ಕುರಿತು ನಮ್ಮ ದೂರದೃಷ್ಟಿಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಎಲ್ಲವನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಅಂತರ್ಗತ ಪ್ರಗತಿಯನ್ನು ಖಾತ್ರಿಪಡಿಸುವುದು ನಮ್ಮ ದೂರದೃಷ್ಟಿಯಾಗಿದೆ. ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ನಾವು ಈ ರೀತಿಯ ಪ್ರಶ್ನೆಗಳಿಗೆ ನಮ್ಮ ಸಮಯವನ್ನು ಎಂದಿಗೂ ವ್ಯರ್ಥ ಮಾಡಿಲ್ಲ: ರೈಲ್ವೆ ಅಥವಾ ರಸ್ತೆ ಸಾರಿಗೆಯನ್ನು ಅಭಿವೃದ್ಧಿಪಡಿಸಬೇಕೆ? ಬಂದರುಗಳ ಮೇಲೆ ಅಥವಾ ಹೆದ್ದಾರಿಗಳ ಮೇಲೆ ಕೇಂದ್ರೀಕರಿಸಬೇಕೆ? ಎಂಬ ಬಗ್ಗೆ. ಮೂಲಸೌಕರ್ಯ ಕುರಿತು ಇಂತಹ ಪ್ರತ್ಯೇಕ ದೃಷ್ಟಿಕೋನದಿಂದ ದೇಶವು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಇದು ಪೂರೈಕೆ ಸರಣಿಯ ಮೇಲೆ ಪರಿಣಾಮ ಬೀರಿತು ಮತ್ತು ಸಾಗಾಣೆ ವೆಚ್ಚವನ್ನು ಹೆಚ್ಚಿಸಿದೆ.
ಮಿತ್ರರೇ,
ಪೂರೈಕೆ ಸರಣಿ ಮತ್ತು ಸರಕು ಸಾಗಾಣೆ ಬಹು-ಮಾದರಿ ಸಂಪರ್ಕವನ್ನು ಅವಲಂಬಿಸಿರುತ್ತದೆ. ಅದಕ್ಕಾಗಿಯೇ ನಾವು ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ವಿಧಾನ ಅಳವಡಿಸಿಕೊಂಡಿದ್ದೇವೆ. ಅಭಿವೃದ್ಧಿಯ ಸಮಗ್ರ ದೂರದೃಷ್ಟಿಯ ಮೇಲೆ ನಾವು ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದೇವೆ. ಇಂದು ಶಂಕುಸ್ಥಾಪನೆಗೊಂಡಿರುವ ಆರ್ಥಿಕ ಕಾರಿಡಾರ್‌ಗೆ 6 ಪಥದ ರಸ್ತೆಗೆ ಅವಕಾಶವಿದೆ. ಬಂದರು ತಲುಪಲು ಪ್ರತ್ಯೇಕ ರಸ್ತೆಯನ್ನೂ ಸಹ ನಿರ್ಮಿಸಲಾಗುವುದು. ಒಂದೆಡೆ ವಿಶಾಖಪಟ್ಟಣ ರೈಲು ನಿಲ್ದಾಣವನ್ನು ಸುಂದರಗೊಳಿಸುವ ಕಾರ್ಯ ಸಾಗುತ್ತಿದ್ದರೆ, ಮತ್ತೊಂದೆಡೆ ಅತ್ಯಾಧುನಿಕ ಮೀನುಗಾರಿಕೆ ಬಂದರು ಕೂಡ ಅಭಿವೃದ್ಧಿ ಪಡಿಸುತ್ತಿದ್ದೇವೆ.
ಮಿತ್ರರೇ,
ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆಯಿಂದಾಗಿ ಮೂಲಸೌಕರ್ಯದ ಈ ಸಮಗ್ರ ನೋಟ ಸಾಧ್ಯವಾಗುತ್ತಿದೆ. ಗತಿ ಶಕ್ತಿ ಯೋಜನೆಯು ಮೂಲಸೌಕರ್ಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದೆ ಹಾಗೂ ಯೋಜನೆಗಳ ವೆಚ್ಚವನ್ನು ತಗ್ಗಿಸಿದೆ. ಬಹು ಮಾದರಿ ಸಾರಿಗೆ ವ್ಯವಸ್ಥೆಯು ಪ್ರತಿ ನಗರದ ಭವಿಷ್ಯವಾಗಿದೆ ಮತ್ತು ವಿಶಾಖಪಟ್ಟಣಂ ಈ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಆಂಧ್ರದ ಜನರು ಈ ಯೋಜನೆಗಳಿಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದಾರೆಂದು ನನಗೆ ತಿಳಿದಿದೆ. ಮತ್ತು ಇಂದು ಅವರ ಕಾಯುವಿಕೆ ಮುಗಿಯುತ್ತಿದ್ದು, ಆಂಧ್ರ ಪ್ರದೇಶ ಮತ್ತು ಅದರ ಕರಾವಳಿ ಪ್ರದೇಶಗಳು ಹೊಸ ವೇಗದೊಂದಿಗೆ ಅಭಿವೃದ್ಧಿಯ ಈ ಓಟದಲ್ಲಿ ಮುನ್ನಡೆಯಲಿವೆ.
ಮಿತ್ರರೇ,
ಇಡೀ ಜಗತ್ತು ಇಂದು ಸವಾಲುಗಳ ಹೊಸ ಯುಗವನ್ನು ದಾಟಿ ಮುನ್ನಡೆಯುತ್ತಿದೆ. ಕೆಲವು ದೇಶಗಳಲ್ಲಿ ಅಗತ್ಯ ವಸ್ತುಗಳ ಕೊರತೆಯಿದ್ದರೆ, ಕೆಲವು ದೇಶಗಳು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬಹುತೇಕ ಪ್ರತಿಯೊಂದು ದೇಶವೂ ತನ್ನ ಆರ್ಥಿಕ ಬೆಳವಣಿಗೆ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಆದರೆ ಅವುಗಳೆಲ್ಲದರ ನಡುವೆಯೇ ಭಾರತವು ಅಸಂಖ್ಯಾತ ಕ್ಷೇತ್ರಗಳಲ್ಲಿ ಅತಿ ಎತ್ತರಕ್ಕೆ ಏರುತ್ತಿದೆ. ಭಾರತವು ಅಭಿವೃದ್ಧಿಯ ಹೊಸಗಾಥೆಯನ್ನು ಬರೆಯುತ್ತಿದೆ. ನೀವು ಅದನ್ನು ಪ್ರತ್ಯಕ್ಷವಾಗಿ ನೋಡುತ್ತಿರುವುದು ಮತ್ತು ಅನುಭವಿಸುತ್ತಿರುವಾಗ, ಇಡೀ ಪ್ರಪಂಚವು ಅದನ್ನು ಗಮನಿಸುತ್ತಿರುವುದನ್ನು ಕಾಣಬಹುದಾಗಿದೆ.
ತಜ್ಞರು ಮತ್ತು ಬುದ್ಧಿಜೀವಿಗಳು ಹೇಗೆ ಭಾರತವನ್ನು ಹೊಗಳುತ್ತಿದ್ದಾರೆಂಬುದನ್ನು ನೀವು ಗಮನಿಸುತ್ತಿರಬಹುದು. ಭಾರತ ಇಂದು ಇಡೀ ವಿಶ್ವದ ನಿರೀಕ್ಷೆಯ ಕೇಂದ್ರ ಬಿಂದುವಾಗಿದೆ. ಭಾರತವು ಇಂದು ತನ್ನ ನಾಗರಿಕರ ನಿರೀಕ್ಷೆಗಳು ಮತ್ತು ಅಗತ್ಯತೆಗಳನ್ನು ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವುದರಿಂದ ಇದು ಸಾಧ್ಯವಾಯಿತು. ನಾವು ತೆಗೆದುಕೊಳ್ಳುವ ಪ್ರತಿಯೊಂದು ನೀತಿ ಮತ್ತು ಪ್ರತಿಯೊಂದು ನಿರ್ಧಾರವೂ ಸಾಮಾನ್ಯ ಜನರ ಜೀವನವನ್ನು ಸುಧಾರಿಸುವ ಏಕೈಕ ಉದ್ದೇಶವನ್ನು ಹೊಂದಿದೆ. ಇಂದು, ಪಿಎಲ್‌ಐ ಯೋಜನೆ, ಜಿಎಸ್ ಟಿ, ಐಬಿಸಿ, ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಮತ್ತು ಗತಿ ಶಕ್ತಿಯಂತಹ ನೀತಿಗಳಿಂದಾಗಿ ಭಾರತದಲ್ಲಿ ಹೂಡಿಕೆ ಹೆಚ್ಚುತ್ತಿದೆ. ಇದೇ ವೇಳೆ ಬಡವರ ಕಲ್ಯಾಣಕ್ಕಾಗಿ ನಡೆಸುತ್ತಿರುವ ಯೋಜನೆಗಳು ಸಹ ನಿರಂತರವಾಗಿ ವಿಸ್ತರಣೆಗೊಳ್ಳುತ್ತಿವೆ.
ಈ ಅಭಿವೃದ್ಧಿಯ ಪಯಣದಲ್ಲಿ ಇಂದು ಈ ಹಿಂದೆ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ದೇಶದ ಆ ಪ್ರದೇಶಗಳೂ ಸೇರಿವೆ. ತೀರಾ ಹಿಂದುಳಿದ ಜಿಲ್ಲೆಗಳಲ್ಲೂ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಮೂಲಕ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ದೇಶದ ಕೋಟಿಗಟ್ಟಲೆ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಕಳೆದ ಮೂರೂವರೆ ವರ್ಷಗಳಿಂದ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ ತಲಾ 6 ಸಾವಿರ ರೂ.ಗಳನ್ನು ನೇರ ಜಮೆ ಮಾಡಲಾಗುತ್ತಿದೆ. ಅದೇ ರೀತಿ, ಉದಯೋನ್ಮುಖ (ಏರುಮುಖಿಯಾಗಿ ಪ್ರಗತಿ ಸಾಧಿಸುತ್ತಿರುವ) ಕ್ಷೇತ್ರಗಳಿಗೆ ಸಂಬಂಧಿಸಿದ ನಮ್ಮ ನೀತಿಗಳಿಂದಾಗಿ, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ನಮ್ಮ ನೀತಿಗಳಿಂದಾಗಿ ಡ್ರೋಣ್ ಗಳಿಂದ ಗೇಮಿಂಗ್‌ವರೆಗೆ, ಬಾಹ್ಯಾಕಾಶದಿಂದ ನವೋದ್ಯಮಗಳವರೆಗೆ ಪ್ರತಿಯೊಂದು ಕ್ಷೇತ್ರವೂ ಮುಂದುವರಿಯುವ ಅವಕಾಶಗಳನ್ನು ಪಡೆಯುತ್ತಿವೆ.
ಮಿತ್ರರೇ,
ನಮ್ಮ ಗುರಿಗಳು ಸ್ಪಷ್ಟವಾಗಿದ್ದಾಗಅದು ಆಕಾಶದ ಎತ್ತರವಾಗಲಿ ಅಥವಾ ಸಮುದ್ರದ ಆಳವಾಗಿರಲಿ, ನಾವು ಅವಕಾಶಗಳನ್ನು ಹುಡುಕುತ್ತೇವೆ ಮತ್ತು ಅವುಗಳನ್ನು ಸಾಧಿಸಿಯೇ ತೀರುತ್ತವೆ. ಉದಾಹರಣೆಗೆ ಆಂಧ್ರದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಆಳವಾದ ನೀರಿನಲ್ಲಿ ಇಂಧನನ್ನು ಹೊರತೆಗೆಯಲಾಗುತ್ತದೆ. ದೇಶವು ಇಂದು ನೀಲಿ ಆರ್ಥಿಕತೆಗೆ ಸಂಬಂಧಿಸಿದ ಅನಂತ ಸಾಧ್ಯತೆಗಳನ್ನು ಪೂರೈಸಲು ವ್ಯಾಪಕ ಪ್ರಯತ್ನಗಳನ್ನು ಮಾಡುತ್ತಿದೆ. ನೀಲಿ ಆರ್ಥಿಕತೆಯು ಮೊದಲ ಬಾರಿಗೆ ದೇಶದ ಪ್ರಮುಖ ಆದ್ಯತೆಯ ವಿಷಯವಾಗಿದೆ.
ಈಗ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನಂತಹ ಸೌಲಭ್ಯಗಳು ಲಭ್ಯವಿದೆ. ಇಂದು, ವಿಶಾಖಪಟ್ಟಣಂ ಮೀನುಗಾರಿಕೆ ಬಂದರನ್ನು ಆಧುನೀಕರಿಸುವ ಕೆಲಸ ಆರಂಭವಾಗಿದೆ. ಇದರಿಂದ ನಮ್ಮ ಮೀನುಗಾರರ ಜೀವನ ಸುಲಭವಾಗಲಿದೆ, ಬಡವರ ಶಕ್ತಿ ಹೆಚ್ಚಾದಂತೆ ಮತ್ತು ಆಧುನಿಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅವಕಾಶಗಳು ಅವರಿಗೆ ಲಭ್ಯವಾದಾಗ, ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಕನಸು ಕೂಡ ನನಸಾಗುತ್ತದೆ.
ಮಿತ್ರರೇ,
ಸಮುದ್ರವು ಶತಮಾನಗಳಿಂದ ಭಾರತಕ್ಕೆ ಸಂಪತ್ತು ಮತ್ತು ಸಮೃದ್ಧಿಯ ಮೂಲವಾಗಿದೆ ಮತ್ತು ನಮ್ಮ ಕರಾವಳಿಗಳು ಈ ಸಮೃದ್ಧಿಯ ಹೆಬ್ಬಾಗಿಲುಗಳಾಗಿ ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಇಂದು ಬಂದರು ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಪ್ರಗತಿಯಲ್ಲಿವೆ. ಭವಿಷ್ಯದಲ್ಲಿ ಅವು ಮತ್ತಷ್ಟು ವಿಸ್ತರಣೆಯಾಗಲಿವೆ. 21ನೇ ಶತಮಾನದ ಭಾರತ ಸಮಗ್ರ ಅಭಿವೃದ್ಧಿಯ ಕಲ್ಪನೆಯನ್ನು ಇಂದು ಜಾರಿಗೊಳಿಸಲಾಗುತ್ತಿದೆ. ದೇಶದ ಅಭಿವೃದ್ಧಿಯ ಈ ಅಭಿಯಾನದಲ್ಲಿ ಆಂಧ್ರಪ್ರದೇಶವು ನಿರ್ಣಾಯಕ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆಂಬ ಭರವಸೆ ನನಗಿದೆ.
ಈ ಸಂಕಲ್ಪದೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು!
ನಿಮ್ಮ ಎರಡೂ ಕೈಗಳನ್ನೂ ಮೇಲತ್ತಿ ನನ್ನೊಂದಿಗೆ ಗಟ್ಟಿ ಧ್ವನಿಯಲ್ಲಿ ಹೇಳಿ -
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ತುಂಬಾ ಧನ್ಯವಾದಗಳು !