"ಭಾರತ ಮತ್ತು ಶ್ರೀಲಂಕಾ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿವೆ"
"ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಜೀವಂತವಾಗಿರಿಸುತ್ತದೆ"
“ಸಂಪರ್ಕವು ಎರಡು ನಗರಗಳನ್ನು ಹತ್ತಿರಕ್ಕೆ ತರುವುದು ಮಾತ್ರವಲ್ಲ. ಇದು ನಮ್ಮ ದೇಶಗಳನ್ನೂ ಹತ್ತಿರಕ್ಕೆ ತರುತ್ತದೆ, ನಮ್ಮ ಜನರನ್ನು ಹತ್ತಿರಗೊಳಿಸುತ್ತದೆ ಮತ್ತು ನಮ್ಮ ಹೃದಯಗಳನ್ನು ಹತ್ತಿರಕ್ಕೆ ತರುತ್ತದೆ”
"ಪ್ರಗತಿ ಮತ್ತು ಅಭಿವೃದ್ಧಿಯ ಪಾಲುದಾರಿಕೆಯು ಭಾರತ - ಶ್ರೀಲಂಕಾ ದ್ವಿಪಕ್ಷೀಯ ಸಂಬಂಧದ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ"
"ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಜಾರಿಗೆ ತಂದ ಯೋಜನೆಗಳು ಜನರ ಜೀವನವನ್ನು ಮುಟ್ಟಿವೆ"

ಗೌರವಾನ್ವಿತ ಗಣ್ಯರೆ, ಸಹೋದರ ಸಹೋದರಿಯರೆ, ನಮಸ್ಕಾರ, ಆಯುಬೋವನ್, ವಣಕಂ!

 
ಸ್ನೇಹಿತರೆ,
ಈ ಮಹತ್ವದ ಸುಸಂದರ್ಭದಲ್ಲಿ ನಿಮ್ಮೊಂದಿಗೆ ಸೇರಿರುವುದು ನನ್ನ ಸೌಭಾಗ್ಯ. ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ನಾವು ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇವೆ. ನಾಗಪಟ್ಟಣಂ ಮತ್ತು ಕಂಕಸಂತುರೈ ನಡುವೆ ಕಡವು ಅಥವಾ ಸಣ್ಣ ಹಡಗು ಅಥವಾ ದೋಣಿಯ ಸೇವಾರಂಭವು ನಮ್ಮ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
 
ಸ್ನೇಹಿತರೆ,
ಭಾರತ ಮತ್ತು ಶ್ರೀಲಂಕಾ ಸಂಸ್ಕೃತಿ, ವಾಣಿಜ್ಯ ಮತ್ತು ನಾಗರಿಕತೆಯ ದೀರ್ಘವಾದ  ಇತಿಹಾಸ ಹಂಚಿಕೊಂಡಿದ್ದೇವೆ. ನಾಗಪಟ್ಟಿನಂ ಮತ್ತು ಹತ್ತಿರದ ಪಟ್ಟಣಗಳು ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳೊಂದಿಗೆ ಸಮುದ್ರ ವ್ಯಾಪಾರಕ್ಕೆ ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಪೂಂಪುಹಾರ್‌ನ ಐತಿಹಾಸಿಕ ಬಂದರನ್ನು ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಕೇಂದ್ರಬಿಂದುವೆಂದು ಉಲ್ಲೇಖಿಸಲಾಗಿದೆ. ಸಂಗಮ್ ಯುಗದ ಸಾಹಿತ್ಯಗಳಾದ ಪಟ್ಟಿನಪ್ಪಲೈ ಮತ್ತು ಮಣಿಮೇಕಲೈ ಭಾರತ ಮತ್ತು ಶ್ರೀಲಂಕಾ ನಡುವೆ ಚಲಿಸುವ ದೋಣಿಗಳು ಮತ್ತು ಹಡಗುಗಳ ಬಗ್ಗೆ ಅರ್ಥಪೂರ್ಣ ಮಾಹಿತಿ ಒದಗಿಸುತ್ತವೆ. ಮಹಾಕವಿ ಸುಬ್ರಮಣ್ಯ ಭಾರತಿ ಅವರು ತಮ್ಮ ‘ಸಿಂಧು ನದಿಯ ಮಿಸಾಯಿ’ ಗೀತೆಯಲ್ಲಿ ನಮ್ಮ 2 ದೇಶಗಳನ್ನು ಸಂಪರ್ಕಿಸುವ ಸೇತುವೆಯ ಬಗ್ಗೆ ವರ್ಣಿಸಿದ್ದಾರೆ. ಈ ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಜೀವಂತವಾಗಿ ಇಡುತ್ತದೆ.

 

 

ಸ್ನೇಹಿತರೆ,
ಅಧ್ಯಕ್ಷ ವಿಕ್ರಮಸಿಂಘೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ, ನಾವು ಜಂಟಿಯಾಗಿ ನಮ್ಮ ಆರ್ಥಿಕ ಪಾಲುದಾರಿಕೆಗಾಗಿ ಮುನ್ನೋಟ ದಾಖಲೆ(ವಿಷನ್ ಡಾಕ್ಯುಮೆಂಟ್)ಗಳನ್ನು ರೂಪಿಸಿಕೊಂಡಿದ್ದೇವೆ. ಸಂಪರ್ಕವು ಈ ಪಾಲುದಾರಿಕೆಯ ಕೇಂದ್ರ ವಿಷಯವಾಗಿದೆ. ಸಂಪರ್ಕವು ಎರಡು ನಗರಗಳನ್ನು ಹತ್ತಿರಕ್ಕೆ ತರುವುದು ಮಾತ್ರವಲ್ಲ, ಇದು ನಮ್ಮ ದೇಶಗಳನ್ನು ಹತ್ತಿರ, ನಮ್ಮ ಜನರನ್ನು ಹತ್ತಿರ ಮತ್ತು ನಮ್ಮ ಹೃದಯಗಳನ್ನು ಹತ್ತಿರ ತರುತ್ತದೆ. ಸಂಪರ್ಕವು ವ್ಯಾಪಾರ, ಪ್ರವಾಸೋದ್ಯಮ ಮತ್ತು ಜನರಿಂದ ಜನರ ಸಂಬಂಧಗಳನ್ನು ಹೆಚ್ಚಿಸುತ್ತಿದೆ. ಇದು ಎರಡೂ ದೇಶಗಳ ಯುವಕರಿಗೆ ವಿಫುಲ ಅವಕಾಶಗಳನ್ನು ಸೃಷ್ಟಿಸುತ್ತಿದೆ.
 
ಸ್ನೇಹಿತರೆ,
2015ರಲ್ಲಿ ನಾನು ಶ್ರೀಲಂಕಾಕ್ಕೆ ಭೇಟಿ ನೀಡಿದ ನಂತರ, ನಾವು ದೆಹಲಿ ಮತ್ತು ಕೊಲಂಬೊ ನಡುವೆ ನೇರ ವಿಮಾನಯಾನ ಪ್ರಾರಂಭಿಸಿದ್ದೇವೆ. ನಂತರ, ನಾವು ಶ್ರೀಲಂಕಾದಿಂದ ಕುಶಿನಗರ ಎಂಬ ಯಾತ್ರಿ ಪಟ್ಟಣದಲ್ಲಿ ಮೊದಲ ಅಂತಾರಾಷ್ಟ್ರೀಯ ವಿಮಾನ ಬಂದಿಳಿದ ಕ್ಷಣವನ್ನು ಆಚರಿಸಿದೆವು. 2019ರಲ್ಲಿ ಚೆನ್ನೈ ಮತ್ತು ಜಾಫ್ನಾ ನಡುವೆ ನೇರ ವಿಮಾನಯಾನ ಪ್ರಾರಂಭವಾಯಿತು. ಈಗ, ನಾಗಪಟ್ಟಿಣಂ ಮತ್ತು ಕಂಕಸಂತುರೈ ನಡುವಿನ ದೋಣಿ ಸೇವೆಯು ಈ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.
 
ಸ್ನೇಹಿತರೆ,
ಸಂಪರ್ಕಕ್ಕಾಗಿ ನಮ್ಮ ದೃಷ್ಟಿ ಸಾರಿಗೆ ವಲಯವನ್ನು ಮೀರಿದೆ. ಭಾರತ ಮತ್ತು ಶ್ರೀಲಂಕಾ ಹಣಕಾಸು ತಂತ್ರಜ್ಞಾನ ಮತ್ತು ಇಂಧನದಂತಹ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತಿವೆ. ಯುಪಿಐನಿಂದಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಒಂದು ಸಾಮೂಹಿಕ ಆಂದೋಲನವಾಗಿದೆ, ಇದು ಭಾರತದಲ್ಲಿ ಜೀವನ ವಿಧಾನವಾಗಿದೆ. ನಾವು ಯುಪಿಐ ಮತ್ತು ಲಂಕಾ ಪೇ ಅನ್ನು ಲಿಂಕ್ ಮಾಡುವ ಮೂಲಕ ಹಣಕಾಸು ತಂತ್ರಜ್ಞಾನ ವಲಯದ ಸಂಪರ್ಕದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಅಭಿವೃದ್ಧಿ ಪಯಣಕ್ಕೆ ಶಕ್ತಿ ತುಂಬಲು ನಮ್ಮ ದೇಶಗಳಿಗೆ ಇಂಧನ ಭದ್ರತೆ ಮುಖ್ಯವಾಗಿದೆ. ಇಂಧನ ಭದ್ರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲು ನಾವು ನಮ್ಮ ಇಂಧನ ಗ್ರಿಡ್‌ಗಳನ್ನು ಸಂಪರ್ಕಿಸುತ್ತಿದ್ದೇವೆ.
 
ಸ್ನೇಹಿತರೆ,
ಪ್ರಗತಿ ಮತ್ತು ಅಭಿವೃದ್ಧಿಗಾಗಿ ಪಾಲುದಾರಿಕೆಯು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರಬಲ ಆಧಾರಸ್ತಂಭಗಳಲ್ಲಿ ಒಂದಾಗಿದೆ. ಯಾರೊಬ್ಬರನ್ನೂ ಬಿಡದೆ, ಎಲ್ಲರನ್ನೂ ಒಟ್ಟಿಗೆ ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ. ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಜಾರಿಗೆ ತಂದ ಯೋಜನೆಗಳು ಜನರ ಜೀವನವನ್ನು ಮುಟ್ಟಿವೆ. ಉತ್ತರ ಪ್ರಾಂತ್ಯದಲ್ಲಿ ವಸತಿ, ನೀರು, ಆರೋಗ್ಯ ಮತ್ತು ಜೀವನೋಪಾಯದ ಬೆಂಬಲಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಕಂಕಸಂತುರೈ ಬಂದರು ಮೇಲ್ದರ್ಜೆಗೇರಿಸಲು ನಾವು ಬೆಂಬಲ ನೀಡಿರುವುದು ನನಗೆ ಸಂತೋಷ ಮೂಡಿಸಿದೆ. ಅದು ಇರಲಿ, ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕಿಸುವ ರೈಲು ಮಾರ್ಗಗಳ ಮರುಸ್ಥಾಪನೆ; ಸಾಂಪ್ರದಾಯಿಕ ಜಾಫ್ನಾ ಸಾಂಸ್ಕೃತಿಕ ಕೇಂದ್ರದ ನಿರ್ಮಾಣ; ಶ್ರೀಲಂಕಾದಾದ್ಯಂತ ತುರ್ತು ಆಂಬ್ಯುಲೆನ್ಸ್ ಸೇವೆ ಹೊರತರಲು ಅಥವಾ ಡಿಕ್ ಓಯಾದಲ್ಲಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಇತ್ಯಾದಿ ಮೂಲಕ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ದೃಷ್ಟಿಯಲ್ಲಿ ಕೆಲಸ ನಾವು ಮಾಡುತ್ತಿದ್ದೇವೆ.
 

 

ಸ್ನೇಹಿತರೆ,
ಭಾರತ ಇತ್ತೀಚೆಗೆ ಜಿ-20 ಶೃಂಗಸಭೆ ಆಯೋಜಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ವಸುಧೈವ ಕುಟುಂಬಕಂ ಕುರಿತ ನಮ್ಮ ದೃಷ್ಟಿಯನ್ನು ಅಂತಾರಾಷ್ಟ್ರೀಯ ಸಮುದಾಯವು ಸ್ವಾಗತಿಸಿದೆ. ಈ ದೃಷ್ಟಿಯ ಭಾಗವು ನಮ್ಮ ನೆರೆಹೊರೆಯವರಿಗೆ ಪ್ರಥಮ ಸ್ಥಾನ ನೀಡುವುದಾಗಿದೆ, ಪ್ರಗತಿ ಮತ್ತು ಸಮೃದ್ಧಿಯನ್ನು ಹಂಚಿಕೊಳ್ಳುವುದಾಗಿದೆ. ಜಿ-20 ಶೃಂಗಸಭೆಯ ಸಮಯದಲ್ಲಿ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಪ್ರಾರಂಭಿಸಲಾಯಿತು. ಇದು ಪ್ರಮುಖ ಸಂಪರ್ಕ ಕಾರಿಡಾರ್ ಆಗಿದ್ದು, ಅದು ಇಡೀ ಪ್ರದೇಶದ ಮೇಲೆ ಭಾರಿ ಆರ್ಥಿಕ ಪರಿಣಾಮ  ಉಂಟುಮಾಡುತ್ತದೆ. ನಾವು ನಮ್ಮ 2 ದೇಶಗಳ ನಡುವೆ ಬಹು-ಮಾದರಿ ಸಂಪರ್ಕ ಬಲಪಡಿಸುವುದರಿಂದ ಶ್ರೀಲಂಕಾದ ಜನರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ. ಇಂದು ದೋಣಿ ಸೇವೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದಕ್ಕಾಗಿ ನಾನು ಅಧ್ಯಕ್ಷರು, ಸರ್ಕಾರ ಮತ್ತು ಶ್ರೀಲಂಕಾದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದಿನ ಆರಂಭದೊಂದಿಗೆ ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವೆ ದೋಣಿ ಸೇವೆ ಪುನರಾರಂಭಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ.
 
ಸ್ನೇಹಿತರೆ,
ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಶ್ರೀಲಂಕಾದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಬದ್ಧವಾಗಿದೆ. ತುಂಬು ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones