5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ರಾಷ್ಟ್ರ ಸಮರ್ಪಣೆ ಮತ್ತು ಶಂಕುಸ್ಥಾಪನೆ
103 ಕಿಮೀ ಉದ್ದದ ರಾಯಪುರ - ಖರಿಯಾರ್ ರೋಡ್ ಜೋಡಿ ಮಾರ್ಗ ಮತ್ತು 17 ಕಿಮೀ ಉದ್ದದ ಕೆಯೋಟಿ – ಅಂತಗಢ್ ಹೊಸ ರೈಲು ಮಾರ್ಗ ದೇಶಕ್ಕೆ ಸಮರ್ಪಣೆ
ಕೊರ್ಬಾದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬಾಟ್ಲಿಂಗ್ ಪ್ಲಾಂಟ್ ಉದ್ಘಾಟನೆ
ವೀಡಿಯೋ ಲಿಂಕ್ ಮೂಲಕ ಅಂತಗಢ್ - ರಾಯ್ಪುರ್ ರೈಲಿಗೆ ಹಸಿರು ನಿಶಾನೆ
ಆಯುಷ್ಮಾನ್ ಭಾರತ್ ಅಡಿಯಲ್ಲಿ ಫಲಾನುಭವಿಗಳಿಗೆ 75 ಲಕ್ಷ ಕಾರ್ಡ್ಗಳ ವಿತರಣೆಗೆ ಚಾಲನೆ
"ಇಂದಿನ ಯೋಜನೆಗಳು ಛತ್ತೀಸಗಢದ ಬುಡಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಅನುಕೂಲತೆಯ ಹೊಸ ಪ್ರಯಾಣವನ್ನು ಸೂಚಿಸುತ್ತವೆ"
"ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಿರ್ದಿಷ್ಟ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ"
"ಆಧುನಿಕ ಮೂಲಸೌಕರ್ಯವು ಸಾಮಾಜಿಕ ನ್ಯಾಯಕ್ಕೂ ಸಂಬಂಧಿಸಿದೆ"
"ಇಂದು ಛತ್ತೀಸಗಢ ಎರಡು ಆರ್ಥಿಕ ಕಾರಿಡಾರ್ಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ"
"ಹೊಸ ಅವಕಾಶಗಳನ್ನು ಸೃಷ್ಟಿಸಲು ಮತ್ತು ನೈಸರ್ಗಿಕ ಸಂಪತ್ತಿನ ಕ್ಷೇತ್ರಗಳಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ"
"ಎಂ ಎನ್ ಆರ್ ಇ ಜಿ ಎ ಅಡಿಯಲ್ಲಿ ಸಾಕಷ್ಟು ಉದ್ಯೋಗವನ್ನು ಒದಗಿಸಲು ಸರ್ಕಾರವು ಛತ್ತೀಸಗಢಕ್ಕೆ 25000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಒದಗಿಸಿದೆ"

ಛತ್ತೀಸ್ ಗಢದ ರಾಜ್ಯಪಾಲರಾದ ಶ್ರೀ ವಿಶ್ವ ಭೂಷಣ್ ಹರಿಚಂದನ್ ಜೀ, ಮುಖ್ಯಮಂತ್ರಿ ಶ್ರೀ ಭೂಪೇಶ್ ಬಘೇಲ್ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜೀ, ಮನ್ಸುಖ್ ಮಾಂಡವೀಯ ಜೀ, ರೇಣುಕಾ ಸಿಂಗ್ ಜೀ, ರಾಜ್ಯದ ಉಪ ಮುಖ್ಯಮಂತ್ರಿಗಳಾದ ಶ್ರೀ ಟಿ.ಎಸ್. ಸಿಂಗ್ ದೇವ್ ಜೀ, ಶ್ರೀ ರಮಣ್ ಸಿಂಗ್ ಜೀ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! ಛತ್ತೀಸ್ ಗಢದ ಅಭಿವೃದ್ಧಿಯ ಪಯಣದಲ್ಲಿ ಈ ದಿನ ಅತ್ಯಂತ ನಿರ್ಣಾಯಕವಾಗಿದೆ.

ಇಂದು ಛತ್ತೀಸ್ ಗಢ 7000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳ ಉಡುಗೊರೆಯನ್ನು ಪಡೆಯುತ್ತಿದೆ. ಈ ಉಡುಗೊರೆ ಮೂಲಸೌಕರ್ಯ ಮತ್ತು ಸಂಪರ್ಕಕ್ಕಾಗಿ. ಈ ಉಡುಗೊರೆ ಛತ್ತೀಸ್ ಗಢದ ಜನರ ಜೀವನವನ್ನು ಸುಲಭಗೊಳಿಸುವುದು ಮತ್ತು ಇಲ್ಲಿನ ಆರೋಗ್ಯ ಸೇವೆಗಳನ್ನು ಸುಧಾರಿಸುವುದು. ಭಾರತ ಸರ್ಕಾರದ ಈ ಯೋಜನೆಗಳೊಂದಿಗೆ, ಇಲ್ಲಿ ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಭತ್ತ ಬೆಳೆಯುವ  ರೈತರು, ಖನಿಜ ಸಂಪತ್ತಿಗೆ ಸಂಬಂಧಿಸಿದ ಉದ್ಯಮಗಳು ಮತ್ತು ಪ್ರವಾಸೋದ್ಯಮಕ್ಕೂ ಈ ಯೋಜನೆಗಳಿಂದ ಹೆಚ್ಚಿನ ಲಾಭವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇವುಗಳೊಂದಿಗೆ ಬುಡಕಟ್ಟು ಪ್ರದೇಶಗಳಲ್ಲಿ ಅನುಕೂಲತೆಗಳು ಮತ್ತು ಅಭಿವೃದ್ಧಿಯತ್ತ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. ಈ ಎಲ್ಲ ಯೋಜನೆಗಳಿಗಾಗಿ ನಾನು ಛತ್ತೀಸ್ ಗಢದ ಜನರನ್ನು ಅಭಿನಂದಿಸುತ್ತೇನೆ. 

ಸ್ನೇಹಿತರೇ,

ಭಾರತದಲ್ಲಿ ನಮ್ಮ ದಶಕಗಳ ಅನುಭವದ ಪ್ರಕಾರ, ಎಲ್ಲೆಲ್ಲಿ ಮೂಲಸೌಕರ್ಯಗಳು ದುರ್ಬಲವಾಗಿವೆಯೋ, ಅಲ್ಲಿ ಅಭಿವೃದ್ಧಿಯು ಅಷ್ಟೇ ತಡವಾಗಿ ತಲುಪಿದೆ ಎಂಬುದು ಸ್ಪಷ್ಟವಾಗಿ ಅರಿವಿಗೆ ಬಂದಿದೆ. ಆದ್ದರಿಂದ ಇಂದು ಭಾರತವು ಅಭಿವೃದ್ಧಿಯ ಓಟದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿದೆ. ಮೂಲಸೌಕರ್ಯ ಎಂದರೆ ಜನರ ಜೀವನವನ್ನು ಸುಲಭಗೊಳಿಸುವುದು, ಮೂಲಸೌಕರ್ಯ ಎಂದರೆ ವ್ಯವಹಾರವನ್ನು ಸುಲಭಗೊಳಿಸುವುದು, ಮೂಲಸೌಕರ್ಯ ಎಂದರೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಮೂಲಸೌಕರ್ಯ ಎಂದರೆ ತ್ವರಿತ ಅಭಿವೃದ್ಧಿ. ಇಂದು ಭಾರತದಲ್ಲಿ ಆಧುನಿಕ ಮೂಲಸೌಕರ್ಯಗಳು ಅಭಿವೃದ್ಧಿ ಹೊಂದುತ್ತಿರುವ ರೀತಿ ಮತ್ತು ವಿಧಾನವು ಛತ್ತೀಸ್ ಗಢದಲ್ಲಿಯೂ ಪ್ರತಿಬಿಂಬಿತವಾಗುತ್ತಿದೆ. ಕಳೆದ 9 ವರ್ಷಗಳಲ್ಲಿ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಛತ್ತೀಸ್ ಗಢದ ಸಾವಿರಾರು ಬುಡಕಟ್ಟು ಗ್ರಾಮಗಳಿಗೆ  ರಸ್ತೆಗಳ ನಿರ್ಮಾಣವಾಗಿದೆ. ಇಲ್ಲಿ ಸುಮಾರು 3,500 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯ ಯೋಜನೆಗಳಿಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ ಸುಮಾರು 3,000 ಕಿಲೋಮೀಟರ್ ಉದ್ದದ ಯೋಜನೆಗಳು ಪೂರ್ಣಗೊಂಡಿವೆ. ಇದಕ್ಕೆ ಅನುಗುಣವಾಗಿ, ರಾಯ್ಪುರ-ಕೊಡೆಬೋಡ್ ಮತ್ತು ಬಿಲಾಸ್ಪುರ್-ಪತ್ರಾಪಲಿ ಹೆದ್ದಾರಿಗಳನ್ನು ಇಂದು ಉದ್ಘಾಟಿಸಲಾಗಿದೆ. ಅದು ರೈಲು, ರಸ್ತೆ ಅಥವಾ ದೂರಸಂಪರ್ಕವಾಗಿರಲಿ, ಭಾರತ ಸರ್ಕಾರವು ಕಳೆದ 9 ವರ್ಷಗಳಲ್ಲಿ ಛತ್ತೀಸ್ ಗಢದಲ್ಲಿ ಎಲ್ಲಾ ರೀತಿಯ ಸಂಪರ್ಕಕ್ಕೆ ಸಂಬಂಧಿಸಿ  ಅಭೂತಪೂರ್ವ ರೀತಿಯಲ್ಲಿ ಕೆಲಸ ಮಾಡಿದೆ.

ಸ್ನೇಹಿತರೇ,

ಆಧುನಿಕ ಮೂಲಸೌಕರ್ಯದಿಂದ ಮತ್ತೊಂದು ಪ್ರಮುಖ ಪ್ರಯೋಜನವಿದೆ, ಇದನ್ನು ಸಾಮಾನ್ಯವಾಗಿ ಸಾಕಷ್ಟು ಚರ್ಚಿಸಲಾಗುವುದಿಲ್ಲ. ಆಧುನಿಕ ಮೂಲಸೌಕರ್ಯವು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದೆ. ಶತಮಾನಗಳಿಂದ ಅನ್ಯಾಯ ಮತ್ತು ಅನಾನುಕೂಲತೆಯನ್ನು ಅನುಭವಿಸಿದವರಿಗೆ ಭಾರತ ಸರ್ಕಾರ ಈ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಂದು ಈ ರಸ್ತೆಗಳು ಮತ್ತು ರೈಲು ಮಾರ್ಗಗಳು ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರ ವಾಸಸ್ಥಾನಗಳನ್ನು/ನೆಲೆಗಳನ್ನು ಸಂಪರ್ಕಿಸುತ್ತಿವೆ. ಈ ಕಷ್ಟಕರ ಪ್ರದೇಶಗಳಲ್ಲಿ ವಾಸಿಸುವ ರೋಗಿಗಳು, ತಾಯಂದಿರು ಮತ್ತು ಸಹೋದರಿಯರು ಇಂದು ಸುಲಭವಾಗಿ ಆಸ್ಪತ್ರೆಯನ್ನು ತಲುಪುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇಲ್ಲಿನ ರೈತರು ಮತ್ತು ಕಾರ್ಮಿಕರು ಇದರಿಂದ ನೇರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಇದಕ್ಕೆ ಇಂತಹದೇ ಮತ್ತೊಂದು ಉದಾಹರಣೆಯೆಂದರೆ ಮೊಬೈಲ್ ಸಂಪರ್ಕ. ಒಂಬತ್ತು ವರ್ಷಗಳ ಹಿಂದೆ, ಛತ್ತೀಸ್ ಗಢದ ಶೇಕಡಾ 20 ಕ್ಕೂ ಹೆಚ್ಚು ಹಳ್ಳಿಗಳು ಯಾವುದೇ ರೀತಿಯ ಮೊಬೈಲ್ ಸಂಪರ್ಕವನ್ನು ಹೊಂದಿರಲಿಲ್ಲ. ಇಂದು ಅದು ಸುಮಾರು 6 ಪ್ರತಿಶತಕ್ಕೆ ಇಳಿದಿದೆ. ಇವುಗಳಲ್ಲಿ ಹೆಚ್ಚಿನವು ಬುಡಕಟ್ಟು ಗ್ರಾಮಗಳು ಮತ್ತು ನಕ್ಸಲ್ ಹಿಂಸಾಚಾರದಿಂದ ಬಾಧಿತವಾದ ಹಳ್ಳಿಗಳು. ಈ ಗ್ರಾಮಗಳು ಉತ್ತಮ 4 ಜಿ ಸಂಪರ್ಕವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು 700 ಕ್ಕೂ ಹೆಚ್ಚು ಮೊಬೈಲ್ ಟವರ್ ಗಳನ್ನು ಸ್ಥಾಪಿಸುತ್ತಿದೆ. ಈ ಪೈಕಿ ಸುಮಾರು 300 ಟವರ್ ಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಬುಡಕಟ್ಟು ಪ್ರದೇಶಗಳನ್ನು ತಲುಪುತ್ತಿದ್ದಂತೆ ಸಂಪರ್ಕ ಕಳೆದುಕೊಳ್ಳುತ್ತಿದ್ದ ಮೊಬೈಲ್ ಫೋನ್ ಗಳು ಇಂದು ಮೊಬೈಲ್ ರಿಂಗ್ ಟೋನ್ ಗಳೊಂದಿಗೆ ಅನುರಣಿಸುತ್ತಿವೆ. ಮೊಬೈಲ್ ಸಂಪರ್ಕದ ಆಗಮನದೊಂದಿಗೆ, ಹಳ್ಳಿಗಳ ಜನರು ಈಗ ಅನೇಕ ಕೆಲಸ ಕಾರ್ಯಗಳಿಗೆ  ಅನುಕೂಲತೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತು ಇದು ಸಾಮಾಜಿಕ ನ್ಯಾಯ. ಹಾಗು ಇದು 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಪರಿಕಲ್ಪನೆಯಾಗಿದೆ. 

ಸ್ನೇಹಿತರೇ,

ಇಂದು ಛತ್ತೀಸ್ ಗಢ ಎರಡು ಆರ್ಥಿಕ ಕಾರಿಡಾರ್ ಗಳೊಂದಿಗೆ ಸಂಪರ್ಕ ಹೊಂದಿದೆ - ರಾಯ್ಪುರ್-ಧನ್ಬಾದ್ ಆರ್ಥಿಕ ಕಾರಿಡಾರ್ ಮತ್ತು ರಾಯ್ಪುರ್-ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್. ಇವು ಈ ಇಡೀ ವಲಯದ  ಅದೃಷ್ಟವನ್ನು ಬದಲಾಯಿಸಲಿವೆ. ಈ ಆರ್ಥಿಕ ಕಾರಿಡಾರ್ ಗಳು ಒಂದು ಕಾಲದಲ್ಲಿ ಹಿಂದುಳಿದವು ಎಂದು ಕರೆಯಲ್ಪಡುತ್ತಿದ್ದ ಮತ್ತು ಒಂದು ಕಾಲದಲ್ಲಿ ಹಿಂಸಾಚಾರ ಮತ್ತು ಅರಾಜಕತೆ ಮೇಲುಗೈ ಸಾಧಿಸಿದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೂಲಕ ಹಾದುಹೋಗುತ್ತಿವೆ. ಇಂದು, ಭಾರತ ಸರ್ಕಾರದ ಅಡಿಯಲ್ಲಿ ಆ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಹೊಸ ಕಥೆಯನ್ನು ಬರೆಯಲಾಗುತ್ತಿದೆ. ಇಂದು ಕಾಮಗಾರಿ ಪ್ರಾರಂಭವಾಗಿರುವ ರಾಯ್ಪುರ-ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್ ಈ ಪ್ರದೇಶದ ಹೊಸ ಜೀವನಾಡಿಯಾಗಲಿದೆ. ರಾಯ್ಪುರ ಮತ್ತು ವಿಶಾಖಪಟ್ಟಣಂ ನಡುವಿನ ಪ್ರಯಾಣ ಈ ಕಾರಿಡಾರ್ ನಿಂದಾಗಿ ಅರ್ಧದಷ್ಟು ಕಡಿಮೆಯಾಗಲಿದೆ. ಈ 6 ಪಥದ ರಸ್ತೆ ಧಮ್ತಾರಿಯ ಭತ್ತದ ವಲಯ, ಕಂಕೇರ್ನ ಬಾಕ್ಸೈಟ್ ವಲಯ ಮತ್ತು ಕರಕುಶಲ ಶ್ರೀಮಂತಿಕೆಯ ಕೊಂಡಗಾಂವ್ ಅನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಲಿದೆ. ಮತ್ತು ನಾನು ಅದರ ಬಗ್ಗೆ ಇನ್ನೂ ಒಂದು ವಿಷಯವನ್ನು ತಿಳಿದು ನಿಜವಾಗಿಯೂ ಮೆಚ್ಚಿಕೊಂಡೆ. ಈ ರಸ್ತೆ ವನ್ಯಜೀವಿ ಪ್ರದೇಶದ ಮೂಲಕ ಹಾದುಹೋಗುತ್ತದೆ. ಆದ್ದರಿಂದ ವನ್ಯಜೀವಿಗಳ ಅನುಕೂಲಕ್ಕಾಗಿ ಸುರಂಗಗಳು ಮತ್ತು ಪ್ರಾಣಿಗಳಿಗೆ ಹಾದು ಹೋಗುವ ದಾರಿಗಳನ್ನು ಸಹ  ನಿರ್ಮಾಣ  ಮಾಡಲಾಗುವುದು. ದಲ್ಲಿ ರಾಜಹರಾದಿಂದ ಜಗದಾಲ್ಪುರಕ್ಕೆ ರೈಲು ಮಾರ್ಗ ಮತ್ತು ಅಂತಘರ್ ನಿಂದ  ರಾಯ್ಪುರಕ್ಕೆ ನೇರ ರೈಲು ಸೇವೆಯು ದೂರದ ಪ್ರದೇಶಗಳಿಗೆ ಪ್ರಯಾಣಿಸುವುದನ್ನು  ಸುಲಭಗೊಳಿಸುತ್ತದೆ.

ಸ್ನೇಹಿತರೇ,

ಎಲ್ಲೆಲ್ಲಿ ನೈಸರ್ಗಿಕ ಸಂಪತ್ತು ಇದೆಯೋ, ಅಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಬೇಕು ಮತ್ತು ಅಲ್ಲಿ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಭಾರತ ಸರ್ಕಾರದ ಬದ್ಧತೆಯಾಗಿದೆ. ಕಳೆದ 9 ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಭಾರತ ಸರ್ಕಾರ ಮಾಡಿದ ಪ್ರಯತ್ನಗಳು ಛತ್ತೀಸ್ ಗಢದಲ್ಲಿ ಕೈಗಾರಿಕೀಕರಣಕ್ಕೆ ಹೊಸ ಉತ್ತೇಜನ ನೀಡಿವೆ. ಭಾರತ ಸರ್ಕಾರದ ನೀತಿಗಳಿಂದಾಗಿ, ಛತ್ತೀಸ್ ಗಢವು ಆದಾಯದ/ಕಂದಾಯದ ರೂಪದಲ್ಲಿ ಹೆಚ್ಚಿನ ಹಣವನ್ನು ಪಡೆದಿದೆ. ವಿಶೇಷವಾಗಿ ಗಣಿ ಮತ್ತು ಖನಿಜ ಕಾಯ್ದೆಯ ಬದಲಾವಣೆಯ ನಂತರ, ಛತ್ತೀಸ್ ಗಢವು ರಾಯಲ್ಟಿ ರೂಪದಲ್ಲಿ (ಗೌರವ ಧನ/ ರಾಯಧನ)  ಹೆಚ್ಚಿನ ಹಣವನ್ನು ಪಡೆಯಲು ಪ್ರಾರಂಭಿಸಿದೆ. 2014ಕ್ಕೆ ಮುಂಚಿನ ನಾಲ್ಕು ವರ್ಷಗಳಲ್ಲಿ ಛತ್ತೀಸ್ ಗಢಕ್ಕೆ 1300 ಕೋಟಿ ರೂ. ರಾಯಧನ ಲಭಿಸಿದೆ. 2015-16 ರಿಂದ 2020-21ರ ನಡುವೆ ಛತ್ತೀಸ್ ಗಢಕ್ಕೆ ಸುಮಾರು 2800 ಕೋಟಿ ರೂ.ರಾಯಧನ ಲಭಿಸಿದೆ. ಜಿಲ್ಲಾ ಖನಿಜ ನಿಧಿಯ ಮೊತ್ತ ಹೆಚ್ಚಳದೊಂದಿಗೆ, ಖನಿಜ ಸಂಪತ್ತನ್ನು ಹೊಂದಿರುವ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ. ಮಕ್ಕಳ ಶಾಲೆಗಳು, ಗ್ರಂಥಾಲಯಗಳು, ರಸ್ತೆಗಳು ಅಥವಾ ನೀರಿನ ವ್ಯವಸ್ಥೆಯೇ ಇರಲಿ, ಜಿಲ್ಲಾ ಖನಿಜ ನಿಧಿಯ ಹಣವನ್ನು ಅಂತಹ ಅನೇಕ ಯೋಜನೆಗಳಿಗೆ ಬಳಸಲಾಗುತ್ತಿದೆ.

ಸ್ನೇಹಿತರೇ,

ಕೇಂದ್ರ ಸರ್ಕಾರದ ಮತ್ತೊಂದು ಪ್ರಯತ್ನದಿಂದ ಛತ್ತೀಸ್ ಗಢಕ್ಕೆ ಸಾಕಷ್ಟು ಪ್ರಯೋಜನವಾಗಿದೆ. ಭಾರತ ಸರ್ಕಾರದ ಪ್ರಯತ್ನದಿಂದ ಛತ್ತೀಸ್ ಗಢದಲ್ಲಿ 1 ಕೋಟಿ 60 ಲಕ್ಷಕ್ಕೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇಂದು, ಈ ಬ್ಯಾಂಕ್ ಖಾತೆಗಳಲ್ಲಿ 6000 ಕೋಟಿ ರೂ.ಗಿಂತ ಹೆಚ್ಚು ಠೇವಣಿ ಇಡಲಾಗಿದೆ. ಈ ಹಿಂದೆ ತಮ್ಮ ಹಣವನ್ನು ಅಸುರಕ್ಷಿತ ಕೈಗಳಲ್ಲಿ ಇಡುವಂತಹ ಪರಿಸ್ಥಿತಿಯಲ್ಲಿದ್ದ ಬಡ ಕುಟುಂಬಗಳು, ಅವರ ಕುಟುಂಬ ಸದಸ್ಯರು, ರೈತರು ಮತ್ತು ಕಾರ್ಮಿಕರ ಹಣ ಇದು. ಇಂದು, ಈ ಜನ್ ಧನ್ ಖಾತೆಗಳಿಂದಾಗಿ, ಬಡವರು ಸರ್ಕಾರದಿಂದ ನೇರ ಸಹಾಯವನ್ನು ಪಡೆಯುತ್ತಿದ್ದಾರೆ. ಛತ್ತೀಸ್ ಗಢದ ಯುವಕರಿಗೆ ಉದ್ಯೋಗ ಪಡೆಯಲು ಸಹಾಯ ಮಾಡಲು, ಅವರು ಸ್ವಯಂ ಉದ್ಯೋಗಿಗಳಾಗಲು ಬಯಸಿದರೆ ಅವರಿಗೆ ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಮುದ್ರಾ ಯೋಜನೆ ಅಡಿಯಲ್ಲಿ ಛತ್ತೀಸ್ ಗಢದ ಯುವಕರಿಗೆ 40,000 ಕೋಟಿ ರೂ. ಹಣವನ್ನು ನೀಡಲಾಗಿದೆ, ಮತ್ತು ಈ ಹಣವನ್ನು ಯಾವುದೇ ಬ್ಯಾಂಕ್ ಗ್ಯಾರಂಟಿ ಇಲ್ಲದೆ ನೀಡಲಾಗಿದೆ. ಈ ನೆರವಿನೊಂದಿಗೆ, ಬಹಳ ದೊಡ್ಡ ಸಂಖ್ಯೆಯಲ್ಲಿ ನಮ್ಮ ಬುಡಕಟ್ಟು ಯುವಕರು ಮತ್ತು ಬಡ ಕುಟುಂಬಗಳ ಯುವಕರು ಛತ್ತೀಸ್ ಗಢದ ಹಳ್ಳಿಗಳಲ್ಲಿ ತಮ್ಮದೇ ಆದ ಉದ್ಯಮ-ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ. ಕರೋನಾ ಅವಧಿಯಲ್ಲಿ ದೇಶದ ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡಲು ಭಾರತ ಸರ್ಕಾರವು ಲಕ್ಷಾಂತರ ಕೋಟಿ ರೂ. ಮೌಲ್ಯದ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಛತ್ತೀಸ್ ಗಢದ ಸುಮಾರು 2 ಲಕ್ಷ ಉದ್ಯಮಗಳಿಗೆ ಸುಮಾರು 5000 ಕೋಟಿ ರೂ.ನೆರವು ಲಭಿಸಿದೆ. 

ಸ್ನೇಹಿತರೇ,

ನಮ್ಮ ದೇಶದಲ್ಲಿ, ಈ ಹಿಂದೆ ಯಾವುದೇ ಸರ್ಕಾರವು ನಮ್ಮ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಯೋಚಿಸಿರಲಿಲ್ಲ. ಈ ಜನರಲ್ಲಿ ಹೆಚ್ಚಿನವರು ಹಳ್ಳಿಗಳಿಂದ ಬಂದು ನಗರಗಳಲ್ಲಿ ಕೆಲಸ ಮಾಡುತ್ತಾರೆ. ಭಾರತ ಸರ್ಕಾರವು ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಯನ್ನು ತನ್ನ ಪಾಲುದಾರನೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ನಾವು ಅವರಿಗೆ ಮೊದಲ ಬಾರಿಗೆ ಪಿಎಂ ಸ್ವನಿಧಿ ಯೋಜನೆಯನ್ನು ಮಾಡಿದ್ದೇವೆ ಮತ್ತು ಬ್ಯಾಂಕ್ ಗ್ಯಾರಂಟಿ ಇಲ್ಲದೆ ಅವರಿಗೆ ಸಾಲ ನೀಡಿದ್ದೇವೆ. ಇದು ಛತ್ತೀಸ್ ಗಢದಲ್ಲಿ 60 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಹೊಂದಿದೆ. ಎಂ.ಜಿ.ಎನ್.ಆರ್.ಇ.ಜಿ.ಎ. ಅಡಿಯಲ್ಲಿ ಗ್ರಾಮಗಳಲ್ಲಿ ಸಾಕಷ್ಟು ಉದ್ಯೋಗವನ್ನು ಒದಗಿಸಲು ಭಾರತ ಸರ್ಕಾರವು ಛತ್ತೀಸ್ ಗಢಕ್ಕೆ 25,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ನೀಡಿದೆ. ಭಾರತ ಸರ್ಕಾರದ ಈ ಹಣವು ಹಳ್ಳಿಗಳಲ್ಲಿನ ಕಾರ್ಮಿಕರ ಜೇಬುಗಳನ್ನು ತಲುಪಿದೆ.

ಸ್ನೇಹಿತರೇ,

ಸ್ವಲ್ಪ ಸಮಯದ ಹಿಂದೆ, ಇಲ್ಲಿ 75 ಲಕ್ಷ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಲಾಗಿದೆ. ಅಂದರೆ, ಈ ಬಡ ಮತ್ತು ಬುಡಕಟ್ಟು ಸಹೋದರ ಸಹೋದರಿಯರು ಪ್ರತಿವರ್ಷ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯ ಖಾತರಿಯನ್ನು ಪಡೆದಿದ್ದಾರೆ. ಛತ್ತೀಸ್ ಗಢದ 1500 ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳಲ್ಲಿ ಅವರು ತಮ್ಮ ಚಿಕಿತ್ಸೆಯನ್ನು ಪಡೆಯಬಹುದು. ಆಯುಷ್ಮಾನ್ ಯೋಜನೆ ಬಡ, ಬುಡಕಟ್ಟು, ಹಿಂದುಳಿದ ಮತ್ತು ದಲಿತ ಕುಟುಂಬಗಳ ಜೀವ ಉಳಿಸಲು ಸಾಕಷ್ಟು ಸಹಾಯ ಮಾಡುತ್ತಿದೆ ಎಂಬುದು ನನಗೆ  ಸಂತೋಷದಾಯಕ ಸಂಗತಿಯಾಗಿದೆ. ಮತ್ತು ಈ ಯೋಜನೆಯಲ್ಲಿ ಮತ್ತೊಂದು ಪ್ರಮುಖ ವೈಶಿಷ್ಟ್ಯವಿದೆ. ಛತ್ತೀಸ್ ಗಢದ ಫಲಾನುಭವಿ ಭಾರತದ ಬೇರೆ ಯಾವುದೇ ರಾಜ್ಯದಲ್ಲಿದ್ದರೆ ಮತ್ತು ಅವರು ಅಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಕಾರ್ಡ್ ಆ ಬೇರೆ ರಾಜ್ಯದಲ್ಲಿಯೂ ಸಹ ಆ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಕಾರ್ಡ್ ನಲ್ಲಿ ಅಪಾರ ಶಕ್ತಿ ಇದೆ. ಭಾರತ ಸರ್ಕಾರವು ಛತ್ತೀಸ್ ಗಢದ ಪ್ರತಿಯೊಂದು ಕುಟುಂಬಕ್ಕೂ ಅದೇ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನನ್ನ ಶುಭ ಹಾರೈಕೆಗಳು! ಧನ್ಯವಾದಗಳು! 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Space Sector: A Transformational Year Ahead in 2025

Media Coverage

India’s Space Sector: A Transformational Year Ahead in 2025
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India