ನಮಸ್ಕಾರ!
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ವಿವಿಧ ರಾಜ್ಯಗಳ ಗೌರವಾನ್ವಿತ ಮುಖ್ಯಮಂತ್ರಿಗಳೇ, ಸಂಸದರು, ಶಾಸಕರು, ಇತರ ಗಣ್ಯರೇ, ಮಹಿಳೆಯರು ಮತ್ತು ಮಹನೀಯರೇ…
ʻಪದ್ಮ ಪ್ರಶಸ್ತಿʼಗಳನ್ನು ಪಡೆದ ಅನೇಕ ವ್ಯಕ್ತಿಗಳು ಇಂದಿನ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇದ್ದಾರೆ. ನಾನು ಅವರನ್ನು ಗೌರವಯುತವಾಗಿ ಸ್ವಾಗತಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ. ʻಆಲ್ ಇಂಡಿಯಾ ರೇಡಿಯೋʼದ ʻಎಫ್ಎಂʼ ಸೇವೆಯ ವಿಸ್ತರಣೆಯು ʻಆಲ್ ಇಂಡಿಯಾ ಎಫ್ಎಂʼ ಆಗುವತ್ತ ಒಂದು ದೊಡ್ಡ ಮತ್ತು ಪ್ರಮುಖ ಹೆಜ್ಜೆಯಾಗಿದೆ. ʻಆಲ್ ಇಂಡಿಯಾ ರೇಡಿಯೋʼದ 91 ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನೆಯು ದೇಶದ 85 ಜಿಲ್ಲೆಗಳ ಎರಡು ಕೋಟಿ ಜನರಿಗೆ ಉಡುಗೊರೆ ಇದ್ದಂತೆ . ಒಂದು ರೀತಿಯಲ್ಲಿ, ಈ ಕಾರ್ಯಕ್ರಮವು ಭಾರತದ ವೈವಿಧ್ಯತೆ ಮತ್ತು ವಿಭಿನ್ನ ವರ್ಣಗಳ ನೋಟವನ್ನು ಸಹ ಹೊಂದಿದೆ. ʻಎಫ್‌ಎಂʼ ಸೇವೆಯ ವಿಸ್ತರಣೆಯಿಂದ ಪ್ರಯೋಜನ ಪಡೆಯಲಿರುವ 85 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳು ಸಹ ಸೇರಿವೆ. ಈ ಸಾಧನೆಗಾಗಿ ನಾನು ʻಆಲ್ ಇಂಡಿಯಾ ರೇಡಿಯೋʼ ಅನ್ನು ಅಭಿನಂದಿಸುತ್ತೇನೆ. ಇದು ಈಶಾನ್ಯದ ನಮ್ಮ ಸಹೋದರ ಸಹೋದರಿಯರಿಗೆ ಮತ್ತು ನಮ್ಮ ಯುವ ಸ್ನೇಹಿತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಹೊಸ ಸೇವೆಗಾಗಿ ನಾನು ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೇ,
ರೇಡಿಯೋ ಮತ್ತು ಎಫ್ಎಂ ವಿಷಯಕ್ಕೆ ಬಂದಾಗ, ನಮ್ಮ ಪೀಳಿಗೆಯು ಬಾನುಲಿಯೊಂದಿಗೆ ಭಾವಪರವಶ ಶ್ರೋತ್ರುಗಳಾಗಿ ನಂಟು ಹೊಂದಿದೆ. ನನ್ನ ವಿಷಯಕ್ಕೆ ಬಂದರೆ, ರೇಡಿಯೋ ಮತ್ತು ನನ್ನ ನಡುವಿನ ಸಂಬಂಧವು ʻನಿರೂಪಕʼನ ಸಂಬಂಧವಾಗಿಯೂ ಮಾರ್ಪಟ್ಟಿದೆ ಎಂಬುದು ಬಹಳ ಸಂತೋಷದ ವಿಷಯವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನಾನು ರೇಡಿಯೋದಲ್ಲಿ 'ಮನ್ ಕಿ ಬಾತ್'ನ 100ನೇ ಎಪಿಸೋಡ್ ಉದ್ದೇಶಿಸಿ ಮಾಡಲಿದ್ದೇನೆ. ʻಮನ್ ಕಿ ಬಾತ್ʼನ ಈ ಅನುಭವ, ದೇಶವಾಸಿಗಳೊಂದಿಗೆ ಈ ರೀತಿಯ ಭಾವನಾತ್ಮಕ ಸಂಪರ್ಕ ರೇಡಿಯೋ ಮೂಲಕ ಮಾತ್ರ ಸಾಧ್ಯ. ಈ ಮೂಲಕ ನಾನು ದೇಶವಾಸಿಗಳ ಸಾಮರ್ಥ್ಯ ಮತ್ತು ರಾಷ್ಟ್ರದ ಸಾಮೂಹಿಕ ಕರ್ತವ್ಯದೊಂದಿಗೆ ಸಂಪರ್ಕ ಹೊಂದಿದ್ದೇನೆ. ಅದು ʻಸ್ವಚ್ಛ ಭಾರತ ಅಭಿಯಾನʼವಿರಲಿ, ʻಬೇಟಿ ಬಚಾವೋ ಬೇಟಿ ಪಡಾವೋʼ ಅಥವಾ ʻಹರ್ ಘರ್ ತಿರಂಗಾʼ ಅಭಿಯಾನವಾಗಲೀ, 'ಮನ್ ಕಿ ಬಾತ್' ಈ ಅಭಿಯಾನಗಳನ್ನು ಜನಾಂದೋಲನವನ್ನಾಗಿ ಮಾಡಿತು. ಆದ್ದರಿಂದ, ಒಂದು ರೀತಿಯಲ್ಲಿ, ನಾನು ʻಆಲ್ ಇಂಡಿಯಾ ರೇಡಿಯೋʼ ತಂಡದ ಭಾಗವಾಗಿದ್ದೇನೆ.
ಸ್ನೇಹಿತರೇ,
ಇಂದಿನ ಕಾರ್ಯಕ್ರಮದ ವಿಶೇಷತೆ ಬಗ್ಗೆ ಹೇಳಬೇಕಾದ ಮತ್ತೊಂದು ವಿಷಯವಿದೆ. ಇದು ದೀನದಲಿತರಿಗೆ ಆದ್ಯತೆ ನೀಡುವ ಸರಕಾರದ ನೀತಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಇಲ್ಲಿಯವರೆಗೆ ಈ ಎಫ್‌ಎಂ ಸೌಲಭ್ಯದಿಂದ ವಂಚಿತರಾಗಿದ್ದವರು ಮತ್ತು ದೂರದಲ್ಲಿ ವಾಸಿಸುತ್ತಿದ್ದವರು ಇನ್ನು ಮುಂದೆ ನಮ್ಮೆಲ್ಲರೊಂದಿಗೆ ಹೆಚ್ಚು ಸಂಪರ್ಕ ಹೊಂದಿರುತ್ತಾರೆ. ಈ ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳು ಅಗತ್ಯ ಮಾಹಿತಿಯನ್ನು ಸಮಯೋಚಿತವಾಗಿ ತಲುಪಿಸುವಲ್ಲಿ; ಸಮುದಾಯ ನಿರ್ಮಾಣ ಕಾರ್ಯದಲ್ಲಿ; ಕೃಷಿಗೆ ಸಂಬಂಧಿಸಿದ ಹವಾಮಾನ ಮಾಹಿತಿ; ಬೆಳೆಗಳು, ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳ ಬಗ್ಗೆ ರೈತರಿಗೆ ಇತ್ತೀಚಿನ ಮಾಹಿತಿ; ರಾಸಾಯನಿಕ ಕೃಷಿಯಿಂದ ಉಂಟಾಗುವ ಹಾನಿಯ ಬಗ್ಗೆ ಚರ್ಚೆಗಳು; ಕೃಷಿಗೆ ಆಧುನಿಕ ಯಂತ್ರಗಳ ಸಂಗ್ರಹ, ಹೊಸ ಮಾರುಕಟ್ಟೆಗಳ ಬಗ್ಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಇಡೀ ಪ್ರದೇಶಕ್ಕೆ ಸಹಾಯ ಮಾಡುತ್ತವೆ. ಇದೆಲ್ಲದರ ಜೊತೆಗೆ ಜನರಿಗೆ ಮಾಹಿತಿಯೊಂದಿಗೆ ಮನರಂಜನೆಯನ್ನೂ ಖಂಡಿತಾ ಇದರಿಂದ ದೊರೆಯಲಿದೆ.
ಸ್ನೇಹಿತರೇ,
ನಮ್ಮ ಸರಕಾರವು ತಂತ್ರಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಭಾರತವು ತನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಬೇಕಾದರೆ, ಯಾವುದೇ ಭಾರತೀಯನಿಗೆ ಅವಕಾಶಗಳ ಕೊರತೆಯಾಗಬಾರದು. ಆದ್ದರಿಂದ ಆಧುನಿಕ ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡುವುದು ಅತ್ಯಂತ ಮುಖ್ಯ. ಹಳ್ಳಿಗಳಿಗೂ ʻಆಪ್ಟಿಕಲ್ ಫೈಬರ್ʼ ವಿಸ್ತರಣೆಯಿಂದ ಹಾಗೂ ಮೊಬೈಲ್ ಫೋನ್‌ಗಳು ಮತ್ತು ʻಮೊಬೈಲ್ ಡೇಟಾʼ ಅಗ್ಗದ ದರದಲ್ಲಿ ಕೈಗೆಟುಕುವಂತೆ ಮಾಡುತ್ತಿರುವುದರಿಂದ ಇಂದು ಭಾರತದಲ್ಲಿ ಮಾಹಿತಿಯ ಲಭ್ಯತೆಯು ತುಂಬಾ ಸುಲಭವಾಗಿದೆ. ಇತ್ತೀಚಿನ ದಿನಗಳಲ್ಲಿ, ದೇಶದ ಪ್ರತಿಯೊಂದು ಮೂಲೆಯಲ್ಲೂ ಹೊಸ ಡಿಜಿಟಲ್ ಉದ್ಯಮಿಗಳು ತಲೆ ಎತ್ತುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಯುವಕರು ಹಳ್ಳಿಗಳಲ್ಲಿ ವಾಸಿಸುತ್ತಲೇ ಡಿಜಿಟಲ್ ತಂತ್ರಜ್ಞಾನದ ಲಾಭವನ್ನು ಪಡೆಯುವ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ಹಾಗೆಯೇ, ನಮ್ಮ ಸಣ್ಣ ಅಂಗಡಿಯವರು ಮತ್ತು ಬೀದಿ ಬದಿ ವ್ಯಾಪಾರಿಗಳು ಅಂತರ್ಜಾಲ ಮತ್ತು ʻಯುಪಿಐʼಗೆ ಪ್ರವೇಶವನ್ನು ಪಡೆಯುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಲಾಭವನ್ನು ಪಡೆಯಲು ಪ್ರಾರಂಭಿಸಿದರು. ಇಂದು ನಮ್ಮ ಮೀನುಗಾರರ ಸಹೋದ್ಯೋಗಿಗಳು ತಂತ್ರಜ್ಞಾನದ ಸಹಾಯದಿಂದ ಸರಿಯಾದ ಸಮಯದಲ್ಲಿ ಸರಿಯಾದ ಹವಾಮಾನ ಸಂಬಂಧಿತ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇಂದು ನಮ್ಮ ಸಣ್ಣ ಉದ್ಯಮಿಗಳು ತಂತ್ರಜ್ಞಾನದ ಸಹಾಯದಿಂದ ದೇಶದ ಮೂಲೆ ಮೂಲೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಮರ್ಥರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಸರಕಾರಿ ʻಇ-ಮಾರುಕಟ್ಟೆʼ, ಅಂದರೆ ʻಜಿಇಎಂʼನಿಂದ ಸಹಾಯ ಪಡೆಯುತ್ತಿದ್ದಾರೆ.
ಸ್ನೇಹಿತರೇ,
ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ನಡೆದ ತಂತ್ರಜ್ಞಾನ ಕ್ರಾಂತಿಯು ರೇಡಿಯೋ ಮತ್ತು ವಿಶೇಷವಾಗಿ ʻಎಫ್ಎಂʼಗೆ ಹೊಸ ರೂಪ ನೀಡಿದೆ. ಅಂತರ್ಜಾಲದಿಂದಾಗಿ, ರೇಡಿಯೋ ಹಿಂದೆ ಬಿದ್ದಿಲ್ಲ, ಬದಲಿಗೆ ʻಆನ್‌ಲೈನ್ ಎಫ್ಎಂʼ ಮತ್ತು ʻಪಾಡ್‌ಕಾಸ್ಟ್ʼ ಇತ್ಯಾದಿಗಳ ಮೂಲಕ ನವೀನ ರೀತಿಯಲ್ಲಿ ಮುಂದೆ ಬಂದಿದೆ. ಅಂದರೆ, ʻಡಿಜಿಟಲ್ ಇಂಡಿಯಾʼ ಅಭಿಯಾನವು ರೇಡಿಯೋಗೆ ಹೊಸ ಕೇಳುಗರನ್ನು ಮತ್ತು ಹೊಸ ಆಲೋಚನಾ ವಿಧಾನವನ್ನು ನೀಡಿದೆ. ಸಂವಹನದ ಪ್ರತಿಯೊಂದು ಮಾಧ್ಯಮದಲ್ಲೂ ನೀವು ಈ ಕ್ರಾಂತಿಯನ್ನು ನೋಡಬಹುದು. ಉದಾಹರಣೆಗೆ, ದೇಶದ ಅತಿದೊಡ್ಡ ʻಡಿಟಿಎಚ್ʼ ವೇದಿಕೆ ʻದೂರದರ್ಶನದ(ಡಿಡಿ) ಉಚಿತ ಡಿಶ್ ಸೇವೆಯು 4.30 ಕೋಟಿ ಕುಟುಂಬಗಳಿಗೆ ಲಭ್ಯವಿದೆ. ಇಂದು ವಿಶ್ವದ ಎಲ್ಲಾ ಮಾಹಿತಿಗಳು ದೇಶದ ಕೋಟ್ಯಂತರ ಗ್ರಾಮೀಣ ಮನೆಗಳಿಗೆ, ಗಡಿಗಳ ಸಮೀಪವಿರುವ ಪ್ರದೇಶಗಳಿಗೆ ನೈಜ ಸಮಯದಲ್ಲಿ ತಲುಪುತ್ತಿವೆ. ದಶಕಗಳಿಂದ ದುರ್ಬಲವಾಗಿದ್ದ ಮತ್ತು ಅವಕಾಶ ವಂಚಿತವಾಗಿದ್ದ ಸಮಾಜದ ವರ್ಗವು ಉಚಿತ ಡಿಶ್ ಮೂಲಕ ಶಿಕ್ಷಣ ಮತ್ತು ಮನರಂಜನೆಯ ಸೌಲಭ್ಯಗಳನ್ನು ಪಡೆಯುತ್ತಿದೆ. ಇದು ಸಮಾಜದ ವಿವಿಧ ವರ್ಗಗಳ ನಡುವಿನ ಅಸಮಾನತೆಯನ್ನು ತೊಡೆದುಹಾಕಲು ಮತ್ತು ಎಲ್ಲರಿಗೂ ಗುಣಮಟ್ಟದ ಮಾಹಿತಿಯನ್ನು ಒದಗಿಸಲು ನೆರವಾಗಿದೆ. ಇಂದು ವಿವಿಧ ರೀತಿಯ ಶೈಕ್ಷಣಿಕ ಕೋರ್ಸ್‌ಗಳು ಡಿಟಿಎಚ್ ಚಾನೆಲ್‌ಗಳಲ್ಲಿ ಲಭ್ಯವಿವೆ. ಉನ್ನತ ವಿಶ್ವವಿದ್ಯಾಲಯಗಳ ಪರಿಣತಿ ನೇರವಾಗಿ ನಿಮ್ಮ ಮನೆಗಳಲ್ಲೇ ಲಭ್ಯವಾಗುತ್ತದೆ. ಇದರಿಂದ ಕೊರೊನಾ ಅವಧಿಯಲ್ಲಿ ದೇಶದ ಕೋಟ್ಯಂತರ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯಕವಾಗಿದೆ. ಅದು ಡಿಟಿಎಚ್ ಆಗಿರಲಿ ಅಥವಾ ಎಫ್‌ಎಂ ರೇಡಿಯೋ ಆಗಿರಲಿ, ಅವುಗಳ ಶಕ್ತಿಯು ಭವಿಷ್ಯದ ಭಾರತದತ್ತ ಇಣುಕಿ ನೋಡಲು ನಮಗೆ ಒಂದು ಕಿಟಕಿಯನ್ನು ಒದಗಿಸುತ್ತದೆ. ಈ ಭವಿಷ್ಯಕ್ಕಾಗಿ ನಾವು ನಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು.
ಸ್ನೇಹಿತರೇ,
ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳ ಮೂಲಕ ಮಾಡಲಾಗುತ್ತಿರುವ ಸಂಪರ್ಕಕ್ಕೆ ಮತ್ತೊಂದು ಆಯಾಮವಿದೆ. ಈ ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳು ದೇಶದ ಎಲ್ಲಾ ಭಾಷೆಗಳಲ್ಲಿ ಮತ್ತು ವಿಶೇಷವಾಗಿ 27 ಉಪಭಾಷೆಗಳಲ್ಲಿ ಪ್ರಸಾರವಾಗಲಿವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಈ ಸಂಪರ್ಕವು ಸಂವಹನ ಸಾಧನಗಳನ್ನು ಸಂಪರ್ಕಿಸುವುದಲ್ಲದೆ, ಜನರನ್ನು ಸಂಪರ್ಕಿಸುತ್ತದೆ. ಇದು ನಮ್ಮ ಸರಕಾರದ ಕಾರ್ಯವೈಖರಿಯ ಪ್ರಮುಖ ಲಕ್ಷಣವಾಗಿದೆ. ಆಗಾಗ್ಗೆ ನಾವು ಸಂಪರ್ಕದ ಬಗ್ಗೆ ಮಾತನಾಡುವಾಗ, ರಸ್ತೆ, ರೈಲು ಮತ್ತು ವಿಮಾನ ನಿಲ್ದಾಣದ ಚಿತ್ರವು ನಮ್ಮ ಮುಂದೆ ಬರುತ್ತದೆ. ಆದರೆ ಭೌತಿಕ ಸಂಪರ್ಕದ ಜೊತೆಗೆ, ನಮ್ಮ ಸರಕಾರವು ಸಾಮಾಜಿಕ ಸಂಪರ್ಕವನ್ನು ಹೆಚ್ಚಿಸಲು ಸಮಾನ ಒತ್ತು ನೀಡಿದೆ. ನಮ್ಮ ಸರಕಾರವು ಸಾಂಸ್ಕೃತಿಕ ಮತ್ತು ಬೌದ್ಧಿಕ ಸಂಪರ್ಕವನ್ನು ನಿರಂತರವಾಗಿ ಬಲಪಡಿಸುತ್ತಿದೆ.
ಉದಾಹರಣೆಗೆ, ಕಳೆದ ಒಂಬತ್ತು ವರ್ಷಗಳಲ್ಲಿ ನಾವು ʻಪದ್ಮ ಪ್ರಶಸ್ತಿʼಗಳು, ಸಾಹಿತ್ಯ ಮತ್ತು ಕಲಾ ಪ್ರಶಸ್ತಿಗಳ ಮೂಲಕ ದೇಶದ ವಿವಿಧ ಭಾಗಗಳ ನಿಜವಾದ ವೀರರನ್ನು ಗೌರವಿಸಿದ್ದೇವೆ. ʻಪದ್ಮ ಪ್ರಶಸ್ತಿʼಗಳ ಆಯ್ಕೆಯಲ್ಲಿ ಮೊದಲಿಗಿಂತ ಭಿನ್ನವಾಗಿ ಮಾನದಂಡ ಅನುಸರಿಸಲಾಗುತ್ತಿದೆ. ಅವುಗಳನ್ನು ಈಗ ಶಿಫಾರಸಿನ ಆಧಾರದ ಮೇಲೆ ನೀಡದೆ, ದೇಶ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯ ಆಧಾರದ ಮೇಲೆ ನೀಡಲಾಗುತ್ತದೆ. ಇಂದು ನಮ್ಮೊಂದಿಗೆ ಇರುವ ʻಪದ್ಮ ಪ್ರಶಸ್ತಿʼ ಪುರಸ್ಕೃತರಿಗೆ ಇದು ಚೆನ್ನಾಗಿ ತಿಳಿದಿದೆ. ದೇಶದ ವಿವಿಧ ಭಾಗಗಳಲ್ಲಿ ತೀರ್ಥಕ್ಷೇತ್ರಗಳು, ಧಾರ್ಮಿಕ ಸ್ಥಳಗಳ ಪುನರುಜ್ಜೀವನದ ನಂತರ ಒಂದು ರಾಜ್ಯದ ಜನರು ಮತ್ತೊಂದು ರಾಜ್ಯಕ್ಕೆ ಹೋಗುತ್ತಿದ್ದಾರೆ. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚುತ್ತಿರುವುದು ದೇಶದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಸಂಪರ್ಕಕ್ಕೆ ಪುರಾವೆಯಾಗಿದೆ. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಂಚತೀರ್ಥದ ಪುನರ್ನಿರ್ಮಾಣ, ಪಿಎಂ ಮ್ಯೂಸಿಯಂ ಅಥವಾ ರಾಷ್ಟ್ರೀಯ ಯುದ್ಧ ಸ್ಮಾರಕ ಮುಂತಾದ ಅನೇಕ ಉಪಕ್ರಮಗಳು ದೇಶದಲ್ಲಿ ಬೌದ್ಧಿಕ ಮತ್ತು ಭಾವನಾತ್ಮಕ ಸಂಪರ್ಕಕ್ಕೆ ಹೊಸ ಆಯಾಮವನ್ನು ನೀಡಿವೆ.
ಸ್ನೇಹಿತರೇ,
ಸಂಪರ್ಕ ಯಾವುದೇ ಮಾದರಿಯದ್ದಾದರೂ ಅದರ ಉದ್ದೇಶ ಒಂದೇ – ಅದು ದೇಶವನ್ನು ಸಂಪರ್ಕಿಸುವುದು, 140 ಕೋಟಿ ದೇಶವಾಸಿಗಳನ್ನು ಸಂಪರ್ಕಿಸುವುದು. ʻಆಲ್ ಇಂಡಿಯಾ ರೇಡಿಯೋʼದಂತಹ ಎಲ್ಲಾ ಸಂವಹನ ವಾಹಿನಿಗಳಿಗೆ ಇದು ಆಶಯ ಮತ್ತು ಧ್ಯೇಯವಾಗಿರಬೇಕು. ನೀವು ಈ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತೀರಿ, ಮತ್ತು ಈ ವಿಸ್ತರಣೆಯು ಮಾತುಕತೆಯ ಮೂಲಕ ದೇಶಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಎಂಬ ಖಾತರಿ ನನಗಿದೆ. ಮತ್ತೊಮ್ಮೆ ನಾನು ʻಆಲ್ ಇಂಡಿಯಾ ರೇಡಿಯೋʼಗೆ ಮತ್ತು ದೇಶದ ದೂರದ ಪ್ರದೇಶಗಳಿಂದ ಬಂದಿರುವ ನನ್ನ ಪ್ರೀತಿಯ ಸಹೋದರ-ಸಹೋದರಿಯರಿಗೆ ನನ್ನ ಶುಭ ಹಾರೈಕೆಗಳು ಮತ್ತು ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ. ಧನ್ಯವಾದಗಳು.