ಜೋಧ್ ಪುರ ಏಮ್ಸ್ ನಲ್ಲಿ ಟ್ರಾಮಾ ಸೆಂಟರ್ ಮತ್ತು ಕ್ರಿಟಿಕಲ್ ಕೇರ್ ಆಸ್ಪತ್ರೆ ಬ್ಲಾಕ್ ನಿರ್ಮಾಣ ಮತ್ತು ಪಿಎಂ-ಎಬಿಎಚ್ಐಎಂ ಅಡಿಯಲ್ಲಿ 7 ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ
ಜೋಧ್ ಪುರ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ
ರಾಜಸ್ತಾನದ ಕೇಂದ್ರೀಯ ವಿಶ್ವವಿದ್ಯಾಲಯದ ಮೂಲಸೌಕರ್ಯ ಉನ್ನತೀಕರಣ ಮತ್ತು ಐಐಟಿ-ಜೋಧ್ ಪುರ ಕ್ಯಾಂಪಸ್ ಲೋಕಾರ್ಪಣೆ
ಹಲವು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ
145 ಕಿ.ಮೀ. ಉದ್ದದ ದೇಗನಾ-ರಾಯ್ ಕಾ ಬಾಗ್ ಉದ್ದದ ರೈಲ್ವೆ ಜೋಡಿ ಮಾರ್ಗ ಮತ್ತು 58 ಕಿ.ಮೀ. ಉದ್ದದ ದೇಗನಾ=ಕುಚಮನ್ ನಗರ ರೈಲು ಮಾರ್ಗ ಉದ್ಘಾಟನೆ
ಜೈಸಲ್ಮೇರ್ ಮತ್ತು ದೆಹಲಿಗೆ ಸಂಪರ್ಕ ಕಲ್ಪಿಸುವ ರುನಿಚ ಎಕ್ಸ್ ಪ್ರೆಸ್ ಮತ್ತು ಮಾರ್ವಾರ್ ಜಂಕ್ಷನ್ – ಖಂಬ್ಲಿ ಘಾಟ್ ಸಂಪರ್ಕ ಕಲ್ಪಿಸುವ ಹೊಸ ಪಾರಂಪರಿಕ ರೈಲು ಸಂಚಾರಕ್ಕೆ ಹಸಿರುನಿಶಾನೆ
"ದೇಶದ ಶೌರ್ಯ, ಸಮೃದ್ಧಿ ಮತ್ತು ಸಂಸ್ಕೃತಿಯಲ್ಲಿ ಪ್ರಾಚೀನ ಭಾರತದ ವೈಭವವು ಗೋಚರಿಸುವ ರಾಜ್ಯ ರಾಜಸ್ಥಾನ"
“ಭಾರತದ ಪ್ರಾಚೀನ ವೈಭವವನ್ನು ಪ್ರತಿಬಿಂಬಿಸುವ ರಾಜಸ್ತಾನ, ಭಾರತದ ಭವಿಷ್ಯವನ್ನೂ ಸಹ ಪ್ರತಿನಿಧಿಸುವುದು ಅತಿಮುಖ್ಯ’’
“ಏಮ್ಸ್ ಜೋಧ್ ಪುರ ಮತ್ತು ಐಐಟಿ ಜೋಧ್ ಪುರ, ಕೇವಲ ರಾಜಸ್ತಾನಕ್ಕೆ ಮಾತ್ರವಲ್ಲ, ದೇಶದ ಪ್ರಮುಖ ಸಂಸ್ಥೆಗಳ ಪಟ್ಟಿಯಲ್ಲಿ ಕಾಣುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ’’
“ರಾಜಸ್ತಾನದ ಅಭಿವೃದ್ಧಿಯಾದರೆ ಮಾತ್ರ ಭಾರತದ ಅಭಿವೃದ್ಧಿ”

ವೇದಿಕೆಯ ಮೇಲೆ ಆಸೀನರಾಗಿರುವ ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೂ ಆದ ಈ ನಾಡಿನ ʼಸೇವಕʼರಾದ ಗಜೇಂದ್ರ ಸಿಂಗ್‌ ಶೆಖಾವತ್‌, ಕೈಲಾಶ್ ಚೌಧರಿ ಅವರೇ, ರಾಜಸ್ಥಾನ ರಾಜ್ಯ ಸರಕಾರದ ಸಚಿವರಾದ ಭಜನ್ ಲಾಲ್ ಅವರೇ, ಸಂಸದರೂ ಆದ ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷರಾದ ಸಿ.ಪಿ. ಜೋಷಿ ಅವರೇ, ಇತರೆ ನಮ್ಮ ಸಂಸದರೆ, ಎಲ್ಲ ಜನಪ್ರತಿನಿಧಿಗಳೇ, ಮಹಿಳೆಯರೇ ಹಾಗೂ ಸಜ್ಜನ ಬಂಧುಗಳೇ!

ಮೊಟ್ಟ ಮೊದಲನೆಯದಾಗಿ ನಾನು ವೀರ ದುರ್ಗಾದಾಸ್‌  ರಾಥೋಡ್‌ ಅವರ ಮಡೋರ್‌ ವೀರ ಭೂಮಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಜೋಧಪುರದ ಮಾರ್ವಾಡ್‌ ಪುಣ್ಯಭೂಮಿಯಲ್ಲಿ ಇಂದು ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಜತೆಗೆ ಆಯ್ದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಕಳೆದ 9 ವರ್ಷಗಳಿಂದ ರಾಜಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡ ನಮ್ಮ ನಿರಂತರ ಪ್ರಯತ್ನಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅವುಗಳ ಫಲಶ್ರುತಿಯನ್ನು ನಾವೆಲ್ಲರೂ ಇಂದು ಕಾಣುತ್ತಿದ್ದೇವೆ. ಈ ಎಲ್ಲ ಅಭಿವೃದ್ಧಿ ಉಪಕ್ರಮಗಳಿಗಾಗಿ ನಾನು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೇ,

ನಮ್ಮ ದೇಶದ ಶೌರ್ಯ, ಸಮೃದ್ಧಿ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಸಾಕ್ಷೀಕರಿಸುವ ಪ್ರಾಚೀನ ಭಾರತದ ವೈಭವದ ಕುರುಹುಗಳನ್ನು ರಾಜಸ್ಥಾನದಲ್ಲಿ ಕಾಣಬಹುದಾಗಿದೆ. ಇತ್ತೀಚೆಗೆ, ಜೋಧ್‌ಪುರದಲ್ಲಿ ಜಿ- 20 ಶೃಂಗಸಭೆ ನಡೆದ ಸಂದರ್ಭದಲ್ಲಿ ಜಗತ್ತಿನಾದ್ಯಂತ ಆಗಮಿಸಿದ್ದ ಅತಿಥಿಗಳಿಂದ ಮೆಚ್ಚುಗೆ ಪಡೆದಿತ್ತು. ಅವರು ನಮ್ಮ ದೇಶೀಯ ಜನರಾಗಲಿ ಅಥವಾ ವಿದೇಶಿ ಪ್ರವಾಸಿಗರಾಗಲಿ, ಪ್ರತಿಯೊಬ್ಬರೂ ಒಮ್ಮೆಯಾದರೂ ಈ ಸೂರ್ಯ ನಗರಿ ಜೋಧಪುರಕ್ಕೆ ಭೇಟಿ ನೀಡ ಬಯಸುತ್ತಾರೆ. ಮರಳಿನ ಇಳಿಜಾರು ಪ್ರದೇಶದಲ್ಲಿನ ಮೆಹ್ರಂಗ್‌ಘರ್‌ ಹಾಗೂ ಜಸ್ವಂತ್ ತಾಡಾದ ಸೌಂದರ್ಯ ಕಣ್ತುಂಬಿಕೊಳ್ಳಲು, ಸ್ಥಳೀಯ ಕರಕುಶಲ ಉತ್ಪನ್ನ ಕೌಶಲ್ಯವನ್ನು ಕಾಣಲು ಉತ್ಸುಕರಾಗಿರುತ್ತಾರೆ. ಹಾಗಾಗಿ ರಾಜಸ್ಥಾನವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿರುವ ಜತೆಗೆ ಭವಿಷ್ಯದ ಭಾರತದ ಪ್ರತಿಬಿಂಬಿಸುವಲ್ಲಿ ನಿರ್ಣಾಯಕವೆನಿಸಿದೆ. 
ಮೇವಾಡ್‌ನಿಂದ ಮಾರ್ವಾರ್‌ವರೆಗಿನ ಇಡೀ ರಾಜಸ್ಥಾನದ ಅಭಿವೃದ್ಧಿಯು ಉತ್ತುಂಗ ತಲುಪಿದಾಗ ಹಾಗೂ ಆಧುನಿಕ ಮೂಲ ಸೌಕರ್ಯಗಳು ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾದಾಗ ಮಾತ್ರ ಇದು ಕಾರ್ಯಸಾಧುವಾಗಲಿದೆ. ಬಿಕನೇರ್‌ನಿಂದ ಜೈಸಲ್ಮೇರ್‌ವರೆಗಿನ ಎಕ್ಸ್‌ಪ್ರೆಸ್‌ ವೇ ಕಾರಿಡಾರ್ ಹೆದ್ದಾರಿಯು ಜೋಧ್‌ಪುರವನ್ನು ಸಂಪರ್ಕಿಸುತ್ತಿದ್ದ ರಾಜಸ್ಥಾನದಲ್ಲಿ ಆಧುನಿಕ ಮತ್ತು ಹೈಟೆಕ್ ಮೂಲಸೌಕರ್ಯಕ್ಕೆ ನೀಡಿರುವ ಆದ್ಯತೆಗೆ ಉದಾಹರಣೆಯಂತಿದೆ. ಭಾರತ ಸರ್ಕಾರ ಇಂದು ರಾಜಸ್ಥಾನದಲ್ಲಿ ರೈಲು ಮತ್ತು ಹೆದ್ದಾರಿ ಸಂಪರ್ಕ ಜಾಲ ಸೇರಿದಂತೆ ಪ್ರತಿಯೊಂದು ಸೌಲಭ್ಯ ದಿಕ್ಕಿನಲ್ಲೂ ವೇಗವಾಗಿ ಕಾರ್ಯ ಮಾಡುತ್ತಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜಸ್ಥಾನದಲ್ಲಿ ರೈಲ್ವೆ ಸಂಬಂಧಿತ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 9,500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೊತ್ತದ ಅನುದಾನವು ಹಿಂದಿನ ಸರ್ಕಾರದ ವಾರ್ಷಿಕ ಬಜೆಟ್‌ನ ಸರಾಸರಿ ಮೊತ್ತಕ್ಕಿಂತ ಸುಮಾರು 14 ಪಟ್ಟು ಹೆಚ್ಚು ಎಂಬುದು ಗಮನಾರ್ಹ. ನಾನು ರಾಜಕೀಯ ಹೇಳಿಕೆ ನೀಡುತ್ತಿಲ್ಲ. ಬದಲಿಗೆ ವಾಸ್ತವಾಂಶವನ್ನು ತಿಳಿಸುತ್ತಿದ್ದೇನೆ. ಇಲ್ಲದಿದ್ದರೆ ಮಾಧ್ಯಮಗಳು "ಮೋದಿಯವರ ದೊಡ್ಡ ವಾಗ್ದಾಳಿ ನಡೆಸಿದರು" ಎಂಬುದಾಗಿ ವರದಿ ಮಾಡುತ್ತವೆ. ಸ್ವಾತಂತ್ರ್ಯಾ ನಂತರದಿಂದ 2014ರವರೆಗಿನ ದಶಕಗಳಲ್ಲಿ ರಾಜಸ್ಥಾನದಲ್ಲಿ ಕೇವಲ 600 ಕಿಲೋ ಮೀಟರ್ ಉದ್ದದ ರೈಲು ಮಾರ್ಗವಷ್ಟೇ ವಿದ್ಯುದ್ದೀಕರಿಣಗೊಂಡಿತ್ತು. ಆದರೆ ಕಳೆದ 9 ವರ್ಷಗಳಲ್ಲಿ 3,700 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದ ರೈಲು ಹಳಿಯ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿದೆ. ಆ ಮೂಲಕ ಡೀಸೆಲ್ ಎಂಜಿನ್‌ಗಳ ಬದಲಿಗೆ ಎಲೆಕ್ಟ್ರಿಕ್ ಎಂಜಿನ್‌ನ ರೈಲುಗಳು ಈಗ ಈ ಹಳಿಗಳಲ್ಲಿ ಸಂಚರಿಸುತ್ತಿವೆ. ಇದರಿಂದ ರಾಜಸ್ಥಾನದಲ್ಲಿ ಮಾಲಿನ್ಯ ಪ್ರಮಾಣ ತಗ್ಗುವುದಷ್ಟೇ ಅಲ್ಲದೆ, ಗಾಳಿಯೂ ಸ್ವಚ್ಛವಾಗಿರುತ್ತದೆ. ಅಮೃತ್ ಭಾರತ್ ಸ್ಟೇಷನ್ (ನಿಲ್ದಾಣ) ಯೋಜನೆಯಡಿ ನಾವು ಆಧುನಿಕ ಸೌಲಭ್ಯಗಳೊಂದಿಗೆ ರಾಜಸ್ಥಾನದಲ್ಲಿ 80ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಶ್ರೀಮಂತರು ಓಡಾಡುವ ಕಡೆ ಅದ್ಭುತ ವಿಮಾನನಿಲ್ದಾಣಗಳನ್ನು ನಿರ್ಮಿಸುವ ಟ್ರೆಂಡ್ ಇದೆಯಾದರೂ ಮೋದಿಯವರ ಲೋಕವೇ ಬೇರೆ. ಬಡವರು ಅಥವಾ ಮಧ್ಯಮ ವರ್ಗದ ಜನ ಎಲ್ಲಿಗೇ ಹೋದರೂ, ನಾನು ಆ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣಕ್ಕಿಂತ ಉತ್ತಮವಾದ ಸೌಲಭ್ಯ ಹೊಂದಿರುವ ನಿಲ್ದಾಣವಾಗಿ ಪರಿವರ್ತಿಸುತ್ತೇನೆ ಮತ್ತು ಇದು ನಮ್ಮ ಜೋಧ್‌ಪುರ ರೈಲು ನಿಲ್ದಾಣವನ್ನು ಒಳಗೊಂಡಿದೆ.

ಸಹೋದರ ಸಹೋದರಿಯರೇ,

ಇಂದು ಉದ್ಘಾಟನೆಗೊಂಡಿರುವ ರಸ್ತೆ ಮತ್ತು ರೈಲು ಸಂಪರ್ಕ ಜಾಲದ ಯೋಜನೆಗಳು ಅಭಿವೃದ್ಧಿ ಪರ್ವ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಿವೆ. ಜೋಡಿ ರೈಲು ಮಾರ್ಗ ನಿರ್ಮಾಣದಿಂದ ಪ್ರಯಾಣ ಅವಧಿ ತಗ್ಗುವ ಜತಗೆ ಸಾಕಷ್ಟು ಅನುಕೂಲಗಳಾಗಲಿವೆ. ಜೈಸಲ್ಮೇರ್‌- ದೆಹಲಿ ಎಕ್ಸ್‌ಪ್ರೆಸ್‌ ರೈಲು ಹಾಗೂ ಮಾರ್ವಾರ್‌- ಕಂಬ್ಲಿ ಘಾಟ್‌ ರೈಲು ಸೇವೆಗೆ ಹಸಿರು ನಿಶಾನೆ ತೋರುವ ಅವಕಾಶ ನನಗೆ ಒದಗಿ ಬಂದಿತ್ತು. ಕೆಲವು ದಿನಗಳ ಹಿಂದೆ ವಂದೇ ಭಾರತ್ ರೈಲಿಗೂ ಹಸಿರು ನಿಶಾನೆ ತೋರುವ ಅವಕಾಶ ದೊರಕಿತ್ತು. ಇಂದು ಇನ್ನೂ ಮೂರು ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ ಶಂಕುಸ್ಥಾಪನೆ ನೇರವೇರಿಸಲಾಗಿದೆ. ಹಾಗೆಯೇ, ಜೋಧಪುರ ಮತ್ತು ಉದಯಪುರ ವಿಮಾನ ನಿಲ್ದಾಣಗಳಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೂ ಶಿಲಾನ್ಯಾಸ ನೆರವೇರಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳು ಈ ಪ್ರದೇಶದ ಸ್ಥಳೀಯರ ಆರ್ಥಿಕತೆಯನ್ನು ಹೆಚ್ಚಿಸಲು ಉತ್ತೇಜಿಸುವ ಜತೆಗೆ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ಕ್ರಮೇಣ ರಾಜಸ್ಥಾನದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ ಕೊಡುಗೆ ನೀಡಲಿದೆ.

 

ಸ್ನೇಹಿತರೇ,

ನಮ್ಮ ರಾಜಸ್ಥಾನವು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾದ ಹೆಗ್ಗುರುತನ್ನು ಮೂಡಿಸಿದೆ. ಕೋಟಾವು ಅಸಂಖ್ಯಾತ ವೈದ್ಯರು ಮತ್ತು ಇಂಜಿನಿಯರ್‌ಗಳನ್ನು ರೂಪಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ರಾಜಸ್ಥಾನವನ್ನು ಕೇವಲ ಶಿಕ್ಷಣದ ಅತ್ಯುನ್ನತ ಕೇಂದ್ರವನ್ನಾಗಿ ಮಾಡುವುದಷ್ಟೇ ಅಲ್ಲದೆ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲೂ ಉತ್ಕೃಷ್ಟತೆಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ಅದಕ್ಕಾಗಿ, ಜೊಧಪುರದ ಎಐಐಎಂಎಸ್‌ (AIIMS) ಸಂಸ್ಥೆಯಲ್ಲಿ ಅಪಘಾತ, ತುರ್ತು ಮತ್ತು ತ್ವರಿತ ಚಿಕಿತ್ಸೆ, ಆರೈಕೆಗಾಗಿ ಅತ್ಯುಧುನಿಕ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಮೂಲಸೌಕರ್ಯ ಮಿಷನ್ ಯೋಜನೆಯಡಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಏಮ್ಸ್‌ (AIIMS) ಜೋಧಪುರ ಮತ್ತು ಐಐಟಿ (IIT) ಜೋಧಪುರದಂತಹ ಸಂಸ್ಥೆಗಳು ರಾಜಸ್ಥಾನದಲ್ಲಿ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಪ್ರಮುಖ ಸಂಸ್ಥೆಗಳಾಗಿ ಹೊರಹೊಮ್ಮುತ್ತಿರುವುದು ನನಗೆ ಸಂತಸ ತಂದಿದೆ.

ಏಮ್ಸ್‌ (AIIMS) ಮತ್ತು ಐಐಟಿ (IIT) ಜೋಧಪುರವು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಕುರಿತು ಸಂಶೋಧನಾ ಕಾರ್ಯದ ಕೆಲಸವನ್ನೂ ಆರಂಭಿಸಿವೆ. ರೊಬೋಟಿಕ್ ಸರ್ಜರಿಯಂತಹ ಹೈಟೆಕ್ ವೈದ್ಯಕೀಯ ತಂತ್ರಜ್ಞಾನವು ಭಾರತ ಸಂಶೋಧನೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಹೊಸ ಎತ್ತರವನ್ನು ತಲುಪಲು ನಾಂದಿ ಹಾಡಲಿದೆ. ಆ ಮೂಲಕ ಇದು ವೈದ್ಯಕೀಯ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

 

ಸ್ನೇಹಿತರೇ,

ರಾಜಸ್ಥಾನವು ಪ್ರಕೃತಿ ಮತ್ತು ಪರಿಸರವನ್ನು ಪ್ರೀತಿಸುವವರ ಪಾಲಿನ ಅಚ್ಚುಮೆಚ್ಚಿನ ನಾಡಾಗಿದೆ. ಗುರು ಜಂಭೇಶ್ವರ್ ಮತ್ತು ಬಿಷ್ಣೋಯಿ ಸಮುದಾಯವು ಶತಮಾನಗಳಿಂದ ಈ ಜೀವನಶೈಲಿಯನ್ನು ಅನುಸರಿಸುತ್ತಾ ಬಂದಿದ್ದು, ಇಂದು ಇಡೀ ಜಗತ್ತು ಅದನ್ನು ಅನುಕರಿಸಲು ಬಯಸುತ್ತದೆ. ಈ ಪರಂಪರೆಯನ್ನು ಬುನಾದಿಯಾಗಿ ಬಳಸಿಕೊಂಡು ಭಾರತ ಇಂದು ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿದೆ. ನಮ್ಮ ಪ್ರಯತ್ನಗಳು ಅಭಿವೃದ್ಧಿ ಹೊಂದಿದ ಭಾರತಕ್ಕೆ ಭದ್ರ ಅಡಿಪಾಯವನ್ನು ರೂಪಿಸುವ ನಂಬಿಕೆ ನನಗಿದೆ.  ರಾಜಸ್ಥಾನ ಅಭಿವೃದ್ಧಿಯಾದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಒಟ್ಟಾರೆ, ನಾವು ರಾಜಸ್ಥಾನವನ್ನು ಅಭಿವೃದ್ಧಿ ಜತೆಗೆ ಸಮೃದ್ಧಗೊಳಿಸಬೇಕಿದೆ.  ಈ ಬದ್ಧತೆಯನ್ನು ತೋರುವ ಭರವಸೆಯೊಂದಿಗೆ, ನಾನು ಇನ್ನು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಈ ವೇದಿಕೆ ಕಾರ್ಯಕ್ರಮದಲ್ಲಿ ಕೆಲ ಶಿಷ್ಟಾಚಾರಗಳಿರುತ್ತವೆ. ಇಲ್ಲಿಂದ ನಾನು ಬಯಲು ಪ್ರದೇಶಕ್ಕೆ ತೆರಳಲಿದ್ದು, ಅಲ್ಲಿನ ವಾತಾವರಣ, ಮನಸ್ಥಿತಿ, ಉದ್ದೇಶ ಎಲ್ಲವೂ ಭಿನ್ನವಾಗಿರುತ್ತದೆ. ಕೆಲವೇ ನಿಮಿಷಗಳಲ್ಲಿ ನಾನು ನಿಮ್ಮನ್ನು ತೆರೆದ ಮೈದಾನದಲ್ಲಿ ಕಾಣುತ್ತೇನೆ. ಎಲ್ಲರಿಗೂ ತುಂಬ ಹೃದಯದ ಧನ್ಯವಾದಗಳು!

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Railways spent 76% of its budgetary outlay within first nine months: Ministry

Media Coverage

Railways spent 76% of its budgetary outlay within first nine months: Ministry
NM on the go

Nm on the go

Always be the first to hear from the PM. Get the App Now!
...
Prime Minister condoles loss of lives due to stampede in Tirupati, Andhra Pradesh
January 09, 2025

The Prime Minister, Shri Narendra Modi has condoled the loss of lives due to stampede in Tirupati, Andhra Pradesh.

The Prime Minister’s Office said in a X post;

“Pained by the stampede in Tirupati, Andhra Pradesh. My thoughts are with those who have lost their near and dear ones. I pray that the injured recover soon. The AP Government is providing all possible assistance to those affected: PM @narendramodi”