ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
ಎರಡು ರೈಲು ಯೋಜನೆಗಳು ಮತ್ತು ಬಹು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ
ಬಹು-ಗ್ರಾಮ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
44 ಸ್ಮಾರ್ಟ್ ಸಿಟಿ ಯೋಜನೆಗಳ ಉದ್ಘಾಟನೆ
"ಇದು ಕೇವಲ ವಿಮಾನ ನಿಲ್ದಾಣವಲ್ಲ, ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುವ ಅಭಿಯಾನವಾಗಿದೆ"
"ಕರ್ನಾಟಕದ ಪ್ರಗತಿಯ ಹಾದಿಯು ರೈಲು ಮಾರ್ಗಗಳು, ರಸ್ತೆಮಾರ್ಗಗಳು, ವಾಯುಮಾರ್ಗಗಳು ಮತ್ತು ಐವೇ (ಡಿಜಿಟಲ್ ಸಂಪರ್ಕ) ಗಳಲ್ಲಿನ ದಾಪುಗಾಲುಗಳಿಂದ ಸುಗಮವಾಗಿದೆ"
"ಭಾರತದಲ್ಲಿ ವಿಮಾನ ಪ್ರಯಾಣವು ಸಾರ್ವಕಾಲಿಕ ಉತ್ತುಂಗದಲ್ಲಿರುವ ಸಮಯದಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗುತ್ತಿದೆ"
"ಇಂದಿನ ಏರ್ ಇಂಡಿಯಾ ನವ ಭಾರತದ ಸಾಮರ್ಥ್ಯ ಎಂದು ಗುರುತಿಸಲ್ಪಟ್ಟಿದೆ, ಅದು ಯಶಸ್ಸಿನ ಉತ್ತುಂಗವನ್ನು ಏರುತ್ತಿದೆ"
" ಮೂಲಸೌಕರ್ಯವು ಉತ್ತಮ ಸಂಪರ್ಕದೊಂದಿಗೆ ಇಡೀ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ"
"ಡಬಲ್ ಇಂಜಿನ್ ಸರ್ಕಾರವು ಹಳ್ಳಿಗಳು, ಬಡವರು, ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸೇರಿದೆ"

ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ, ನನ್ನ ನಮಸ್ಕಾರಗಳು!

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಜಯ ಭಾರತ ಜನನಿಯ ತನುಜಾತೆ!

ಜಯ ಹೇ ಕರ್ನಾಟಕ ಮಾತೆ!

‘ಏಕ ಭಾರತ ಶ್ರೇಷ್ಠ ಭಾರತ’ಸ್ಫೂರ್ತಿಯನ್ನು ಎತ್ತಿ ಹಿಡಿದ ರಾಷ್ಟ್ರಕವಿ ಕುವೆಂಪು ಅವರ ನಾಡಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ. ಇಂದು ಮತ್ತೊಮ್ಮೆ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ.

ಸದ್ಯ ನಾನು ಶಿವಮೊಗ್ಗದಲ್ಲಿದ್ದು ಇಲ್ಲಿಂದ ಬೆಳಗಾವಿಗೆ ಹೋಗುತ್ತೇನೆ. ಇಂದು ಶಿವಮೊಗ್ಗ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿದೆ. ಬಹುದಿನಗಳಿಂದ ಇದ್ದ ಬೇಡಿಕೆ ಇಂದು ಈಡೇರಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅತ್ಯಂತ ಭವ್ಯವಾಗಿ ಮತ್ತು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಕರ್ನಾಟಕದ ಸಂಪ್ರದಾಯ ಮತ್ತು ತಂತ್ರಜ್ಞಾನದ ಅದ್ಭುತ ಸಂಗಮ ಈ ವಿಮಾನ ನಿಲ್ದಾಣದಲ್ಲಿ ಗೋಚರಿಸುತ್ತದೆ. ಮತ್ತು ಇದು ಕೇವಲ ವಿಮಾನ ನಿಲ್ದಾಣವಲ್ಲ, ಈ ಭಾಗದ ಯುವಕರ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ಮಹತ್ವದ ಅಭಿಯಾನವಾಗಿದೆ. ಇಂದು ರಸ್ತೆ ಮತ್ತು ರೈಲಿಗೆ ಸಂಬಂಧಿಸಿದ ಹಲವಾರು ಯೋಜನೆಗಳ ಶಿಲಾನ್ಯಾಸವೂ ನಡೆದಿದೆ. ಪ್ರತಿ ಮನೆಯಲ್ಲೂ ನಲ್ಲಿ ನೀರು ಪೂರೈಕೆ ಮಾಡುವ ಜಲ ಜೀವನ್ ಯೋಜನೆಗಳ ಕೆಲಸ ಪ್ರಾರಂಭವಾಗಿದೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಶಿವಮೊಗ್ಗ ಮತ್ತು ನೆರೆಯ ಜಿಲ್ಲೆಗಳ ಎಲ್ಲ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇನ್ನೊಂದು ಮತ್ತೊಂದು ಕಾರಣಕ್ಕಾಗಿ ಇಂದು ಬಹಳ ವಿಶೇಷವಾಗಿದೆ. ಕರ್ನಾಟಕದ ಜನಪ್ರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನ. ಅವರಿಗೆ ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸುತ್ತೇನೆ. ಬಡವರು ಮತ್ತು ರೈತರ ಕಲ್ಯಾಣಕ್ಕಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕಳೆದ ವಾರ ಕರ್ನಾಟಕ ವಿಧಾನಸಭೆಯಲ್ಲಿ ಯಡಿಯೂರಪ್ಪ ಜೀ ಮಾಡಿದ ಭಾಷಣ ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ಮಾತು ಮತ್ತು ಅವರ ಜೀವನವು ನಮ್ಮಂತಹ ಪ್ರತಿಯೊಬ್ಬರಿಗೂ ಮತ್ತು ನಮ್ಮ ಮುಂದಿನ ಪೀಳಿಗೆಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಮತ್ತು ಯಶಸ್ಸಿನ ಈ ದೊಡ್ಡ ಎತ್ತರವನ್ನು ತಲುಪಿದ ನಂತರವೂ ನಡವಳಿಕೆಯ ವಿಷಯದಲ್ಲಿ ವಿನಮ್ರವಾಗಿರಲು ನಮಗೆ ಆದರ್ಶ ಮಾರ್ಗವನ್ನು ತೋರಿಸುತ್ತದೆ.

ಸ್ನೇಹಿತರೇ,

ನಿಮ್ಮಲ್ಲಿ ನನ್ನದೊಂದು ವಿನಂತಿ. ನೀವು ಇದನ್ನು ಮಾಡುತ್ತೀರಾ? ನಿಮ್ಮ ಬಳಿ ಮೊಬೈಲ್ ಫೋನ್ ಇದ್ದರೆ, ಮೊಬೈಲ್ ಫೋನ್ ತೆಗೆದು ಅದರ ಫ್ಲ್ಯಾಷ್ ಲೈಟ್ ಆನ್ ಮಾಡಿ ಮತ್ತು ಯಡಿಯೂರಪ್ಪ ಅವರಿಗೆ ಗೌರವ ಸಲ್ಲಿಸಿ. ಯಡಿಯೂರಪ್ಪನವರಿಗೆ ಗೌರವ ಸೂಚಕವಾಗಿ ಪ್ರತಿಯೊಬ್ಬರೂ ತಮ್ಮ ಮೊಬೈಲ್ನಲ್ಲಿ ಬ್ಯಾಟರಿ ದೀಪಗಳನ್ನು ಆನ್ ಮಾಡಬೇಕು. ಯಡಿಯೂರಪ್ಪ ಅವರ ಗೌರವಾರ್ಥ ನಾವು  ಇದನ್ನು ಮಾಡೋಣ. ಸುಮಾರು 50-60 ವರ್ಷಗಳ ಸಾರ್ವಜನಿಕ ಜೀವನ, ತಮ್ಮ ಇಡೀ ಯೌವನವನ್ನು ಒಂದು ಸಿದ್ಧಾಂತ ಹಾಗೂ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ. ಪ್ರತಿಯೊಬ್ಬರೂ ನಿಮ್ಮ ಮೊಬೈಲ್ ಫೋನ್ನ ಬ್ಯಾಟರಿ ದೀಪವನ್ನು ಆನ್ ಮಾಡುವ ಮೂಲಕ ಮಾನ್ಯ ಯಡಿಯೂರಪ್ಪ ಜೀ ಅವರಿಗೆ ಗೌರವವನ್ನು ತೋರಿಸಬೇಕು. ಚೆನ್ನಾಗಿದೆ! ಚೆನ್ನಾಗಿದೆ! ಭಾರತ್ ಮಾತಾ ಕೀ ಜೈ!

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿ ಪಯಣವನ್ನು ನೋಡಿದಾಗ ನನಗೆ ಅನಿಸುತ್ತದೆ: “ಕರ್ನಾಟಕ, ಅಭಿವೃದ್ಧಿಯ ರಥದ, ಮೇಲೆ, ಈ ರಥವೂ, ಪ್ರಗತಿಯ ಪಥದ ಮೇಲೆ!” ಸಾಗುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ಅಭಿವೃದ್ಧಿಯು ಬೆಳವಣಿಗೆಯ ರಥದಲ್ಲಿ ಸಾಗಿದೆ. ಈ ಬೆಳವಣಿಗೆಯ ರಥ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಈ ಪ್ರಗತಿಯ ಹಾದಿಯು ರೈಲ್ವೆ, ರಸ್ತೆ ಮಾರ್ಗಗಳು, ವಾಯುಮಾರ್ಗಗಳು ಮತ್ತು I-ವೇಗಳು ಅಂದರೆ ಡಿಜಿಟಲ್ ಸಂಪರ್ಕದ ರೂಪದಲ್ಲಿವೆ.

ಸ್ನೇಹಿತರೇ,

ವಾಹನವಿರಲಿ, ಸರಕಾರವಿರಲಿ ಡಬಲ್ ಇಂಜಿನ್ ಬಳಸಿದಾಗ ಅದರ ವೇಗ ಹಲವು ಪಟ್ಟು ಹೆಚ್ಚುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಇಂತಹ ಡಬಲ್ ಇಂಜಿನ್ ಸರ್ಕಾರದ ಮೂಲಕ ಕರ್ನಾಟಕದ ಬೆಳವಣಿಗೆ ರಥ ಸಾಗುತ್ತಿದೆ. ಬರೀ ಸಾಗುತ್ತಿಲ್ಲ ಅದು ವೇಗವಾಗಿ ಓಡುತ್ತಿದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಮತ್ತೊಂದು ಮಹತ್ವದ ಬದಲಾವಣೆ ತಂದಿದೆ. ಈ ಹಿಂದೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಾಗ ಅದು ಪ್ರಮುಖ ನಗರಗಳ ಸುತ್ತ ಮಾತ್ರ ಸೀಮಿತವಾಗಿತ್ತು. ಆದರೆ ಡಬಲ್ ಇಂಜಿನ್ ಸರ್ಕಾರವು ಈ ಬೆಳವಣಿಗೆಯನ್ನು ಕರ್ನಾಟಕದ ಹಳ್ಳಿಗಳು, ಎರಡನೇ ಶ್ರೇಣಿಯ ನಗರಗಳು ಮತ್ತು ಮೂರನೇ ಶ್ರೇಣಿ  ನಗರಗಳಿಗೆ ಕೊಂಡೊಯ್ಯಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರ ಫಲವೇ ಶಿವಮೊಗ್ಗದ ಸಮಗ್ರ ಅಭಿವೃದ್ಧಿ.

ಸಹೋದರರು ಮತ್ತು ಸಹೋದರಿಯರೇ,

ಭಾರತದಲ್ಲಿ ವಿಮಾನ ಪ್ರಯಾಣದ ಬಗ್ಗೆ ಹೆಚ್ಚಿನ ಉತ್ಸಾಹವಿರುವ ಸಮಯದಲ್ಲಿ ಶಿವಮೊಗ್ಗದ ಈ ವಿಮಾನ ನಿಲ್ದಾಣವು ಪ್ರಾರಂಭವಾಗುತ್ತಿದೆ. ಏರ್ ಇಂಡಿಯಾ ವಿಶ್ವದ ಅತಿದೊಡ್ಡ ವಿಮಾನವನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದನ್ನು ನೀವು ಇತ್ತೀಚೆಗೆ ನೋಡಿರಬೇಕು. 2014 ರ ಮೊದಲು, ಯಾರಾದರೂ ಏರ್ ಇಂಡಿಯಾದ ಬಗ್ಗೆ ಮಾತನಾಡುವಾಗ, ಅದು ನಕಾರಾತ್ಮಕವಾಗಿಯೇ ಇರುತ್ತಿತ್ತು. ಕಾಂಗ್ರೆಸ್ ಆಡಳಿತದಲ್ಲಿ, ಏರ್ ಇಂಡಿಯಾ ಹಗರಣಗಳಿಗೆ ಹೆಸರುವಾಸಿಯಾಗಿತ್ತು ಮತ್ತು ನಷ್ಟದಲ್ಲಿಯೇ ಇರುತ್ತದೆ ಎಂಬ ಭಾವನೆ ವ್ಯಕ್ತವಾಗಿತ್ತು. ಇಂದು ಏರ್ ಇಂಡಿಯಾ, ಭಾರತದ ಹೊಸ ಶಕ್ತಿಯಾಗಿ, ವಿಶ್ವದಲ್ಲಿ ಹೊಸ ಎತ್ತರವನ್ನು ಮುಟ್ಟುತ್ತಿದೆ.

ಇಂದು ಪ್ರಪಂಚದಾದ್ಯಂತ ಭಾರತದ ವಿಮಾನಯಾನ ಮಾರುಕಟ್ಟೆಯ ಬಗ್ಗೆ ಮಾತನಾಡಲಾಗುತ್ತಿದೆ. ಭಾರತದಲ್ಲಿ ಸದ್ಯದಲ್ಲಿಯೇ ಸಾವಿರಾರು ವಿಮಾನಗಳು ಬೇಕಾಗಲಿವೆ. ಈ ವಿಮಾನಗಳಲ್ಲಿ ಕೆಲಸ ಮಾಡಲು ಸಾವಿರಾರು ಯುವಕರು ಬೇಕಾಗುತ್ತಾರೆ. ಇದೀಗ ಈ ವಿಮಾನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದರೂ ಭಾರತದ ನಾಗರಿಕರು ‘ಮೇಡ್ ಇನ್ ಇಂಡಿಯಾ’ ಪ್ರಯಾಣಿಕ ವಿಮಾನಗಳಲ್ಲಿ ಪ್ರಯಾಣಿಸುವ ದಿನಗಳು ದೂರವಿಲ್ಲ. ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುತ್ತದೆ.

ಸ್ನೇಹಿತರೇ,

ಇಂದು ಭಾರತದಲ್ಲಿ ವಿಮಾನಯಾನದ ವಿಸ್ತರಣೆಗೆ ಬಿಜೆಪಿ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳೇ ಕಾರಣ. 2014ರ ಮೊದಲು ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ವಿಮಾನ ನಿಲ್ದಾಣಗಳು ಇತ್ತು ‘ಸಣ್ಣ ಪಟ್ಟಣಗಳಿಗೂ ವಿಮಾನ ಸಂಪರ್ಕ ಕಲ್ಪಿಸಬೇಕು’ ಎಂದು ಕಾಂಗ್ರೆಸ್ ಯೋಚಿಸಲೇ ಇಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ. 2014ರಲ್ಲಿ ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು. ಅದೇನೆಂದರೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಬಿಜೆಪಿ ಸರ್ಕಾರ ಕೇವಲ 9 ವರ್ಷಗಳಲ್ಲಿ 74 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ದೇಶದ ಅನೇಕ ಸಣ್ಣ ನಗರಗಳು ತಮ್ಮದೇ ಆದ ಆಧುನಿಕ ವಿಮಾನ ನಿಲ್ದಾಣಗಳನ್ನು ಹೊಂದಿವೆ. ಬಿಜೆಪಿ ಸರ್ಕಾರ ಯಾವ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ನೀವು ಊಹಿಸಬಹುದು. ಬಡವರ ಪರ ಕೆಲಸ ಮಾಡುವ ಬಿಜೆಪಿ ಸರ್ಕಾರ ಮತ್ತೊಂದು ಮಹತ್ವದ ಕಾರ್ಯ ಮಾಡಿದೆ. ಸಾಮಾನ್ಯ ವ್ಯಕ್ತಿಯೂ ವಿಮಾನದಲ್ಲಿ ಪ್ರಯಾಣಿಸಬೇಕೆಂದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿಯೇ ನಾವು ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣ ಅವಕಾಶ ಒದಗಿಸುವ UDAN (ಉಡಾನ್) ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇಂದು, ನನ್ನ ಹಲವಾರು ಬಡ ಸಹೋದರರು ಮತ್ತು ಸಹೋದರಿಯರು ಮೊದಲ ಬಾರಿಗೆ ವಿಮಾನವನ್ನು ಹತ್ತುವುದನ್ನು ನೋಡಿದಾಗ, ಅದು ನನಗೆ ಅಪಾರವಾದ ತೃಪ್ತಿಯನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದ ಈ ವಿಮಾನ ನಿಲ್ದಾಣವೂ ಸಾಕ್ಷಿಯಾಗಲಿದೆ.

ಸ್ನೇಹಿತರೇ,

ಈ ನೂತನ ವಿಮಾನ ನಿಲ್ದಾಣವು ನಿಸರ್ಗ, ಸಂಸ್ಕೃತಿ, ಕೃಷಿಯ ನಾಡು ಶಿವಮೊಗ್ಗಕ್ಕೆ ಅಭಿವೃದ್ಧಿಯ ಹೊಸ ಬಾಗಿಲು ತೆರೆಯಲಿದೆ. ಪಶ್ಚಿಮ ಘಟ್ಟಗಳಿಗೆ ಹೆಸರುವಾಸಿಯಾದ ಶಿವಮೊಗ್ಗ ಮಲೆನಾಡಿಗೆ ಹೆಬ್ಬಾಗಿಲು. ಪ್ರಕೃತಿಯ ವಿಷಯಕ್ಕೆ ಬಂದರೆ ಇಲ್ಲಿನ ಹಸಿರು, ವನ್ಯಜೀವಿಧಾಮಗಳು, ನದಿಗಳು ಮತ್ತು ಪರ್ವತಗಳು ಅದ್ಭುತ. ಇಲ್ಲಿ ಪ್ರಸಿದ್ಧ ಜೋಗ ಜಲಪಾತ, ಪ್ರಸಿದ್ಧ ಆನೆ ಶಿಬಿರ, ಲಯನ್ ಸಫಾರಿ ಇಲ್ಲಿದೆ. ಆಗುಂಬೆ ಪರ್ವತದ ಸೂರ್ಯಾಸ್ತವನ್ನು ಯಾರು ಆನಂದಿಸಲು ಬಯಸುವುದಿಲ್ಲ? ಇಲ್ಲಿ ‘ಗಂಗಾ ಸ್ನಾನ, ತುಂಗಾ ಪಾನ’ ಎಂಬ ಮಾತಿದೆ. ಗಂಗೆಯಲ್ಲಿ ಸ್ನಾನ ಮಾಡದೆ, ತುಂಗಾ ನದಿಯ ನೀರು ಕುಡಿಯದೆ ಮನುಷ್ಯನ ಜೀವನ ಅಪೂರ್ಣ.

ಸ್ನೇಹಿತರೇ,

ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ಶಿವಮೊಗ್ಗದ ಸಿಹಿನೀರು ರಾಷ್ಟ್ರಕವಿ ಕುವೆಂಪು ಅವರ ಮಾತುಗಳಿಗೆ ಮಾಧುರ್ಯವನ್ನು ನೀಡುತ್ತದೆ. ಪ್ರಪಂಚದ ಏಕೈಕ ಸಂಸ್ಕೃತ ಗ್ರಾಮ – ಮತ್ತೂರು ಇಲ್ಲಿಗೆ ಆಸುಪಾಸಿನಲ್ಲಿದೆ. ಮತ್ತು ಇದು ಇಲ್ಲಿಂದ ಹೆಚ್ಚು ದೂರವೂ ಇಲ್ಲ. ಸಿಗಂದೂರು  ದೇವಿ ಚೌಡೇಶ್ವರಿ, ಶ್ರೀಕೋಟೆ ಆಂಜನೇಯ, ಶ್ರೀ ಶ್ರೀಧರ ಸ್ವಾಮಿಗಳ ಆಶ್ರಮ, ನಂಬಿಕೆ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದಂತಹ ಸ್ಥಳಗಳು ಶಿವಮೊಗ್ಗದಲ್ಲೂ ಇವೆ. ಬ್ರಿಟಿಷರ ವಿರುದ್ಧ ಪ್ರತಿಧ್ವನಿಸಿದ  ‘ಏಸೂರು ಕೊಟ್ಟರೂ-ಈಸೂರು ಬಿಡೆವು’ ಎಂಬ ಘೋಷಣೆ ಮೊಳಗಿದ ಶಿವಮೊಗ್ಗದ ಈಸೂರು ಗ್ರಾಮ ನಮಗೆಲ್ಲ ಸ್ಪೂರ್ತಿ.

ಸಹೋದರ ಮತ್ತು ಸಹೋದರಿಯರೇ,

ಪ್ರಕೃತಿ ಮತ್ತು ಸಂಸ್ಕೃತಿಯ ಜೊತೆಗೆ ಶಿವಮೊಗ್ಗದ ಕೃಷಿಯೂ ವೈವಿಧ್ಯಮಯವಾಗಿದೆ. ಇದು ದೇಶದ ಅತ್ಯಂತ ಫಲವತ್ತಾದ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಕಂಡುಬರುವ ವೈವಿಧ್ಯಮಯ ಬೆಳೆಗಳು ಈ ಪ್ರದೇಶವನ್ನು ಕೃಷಿ ಕೇಂದ್ರವಾಗಿ ಸ್ಥಾಪಿಸುತ್ತವೆ. ಚಹಾ, ವೀಳ್ಯದೆಲೆ, ಸಾಂಬಾರ ಪದಾರ್ಥಗಳಿಂದ ಹಿಡಿದು ವಿವಿಧ ಬಗೆಯ ಹಣ್ಣು-ತರಕಾರಿಗಳು ನಮ್ಮ ಶಿವಮೊಗ್ಗ ಭಾಗದಲ್ಲಿ ದೊರೆಯುತ್ತವೆ. ಶಿವಮೊಗ್ಗದ ನಿಸರ್ಗ, ಸಂಸ್ಕೃತಿ, ಕೃಷಿಗೆ ಉತ್ತೇಜನ ನೀಡುವ ಅಗತ್ಯ ಇಲ್ಲಿ ಬಹಳ ಇತ್ತು. ಈ ಅಗತ್ಯವು ಸಂಪರ್ಕಕ್ಕಾಗಿ ಮತ್ತು  ಉತ್ತಮ ಸಂಪರ್ಕಕ್ಕಾಗಿತ್ತು. ಡಬಲ್ ಎಂಜಿನ್ ಸರ್ಕಾರವು ಈ ಅಗತ್ಯವನ್ನು ಪೂರೈಸುತ್ತಿದೆ.

ವಿಮಾನ ನಿಲ್ದಾಣ ನಿರ್ಮಾಣದಿಂದ ಸ್ಥಳೀಯ ಜನರಿಗೆ ಅನುಕೂಲವಾಗುವುದಲ್ಲದೇ, ಭಾರತ ಮತ್ತು ವಿದೇಶದ ಪ್ರವಾಸಿಗರು ಇಲ್ಲಿಗೆ ಬರಲು ಸುಲಭವಾಗುತ್ತದೆ. ಪ್ರವಾಸಿಗರು ಬಂದರೆ ಡಾಲರ್, ಪೌಂಡ್ ಗಳನ್ನು ತರುತ್ತಾರೆ, ಒಂದು ರೀತಿಯಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ರೈಲು ಸಂಪರ್ಕವು ಉತ್ತಮವಾದಾಗ, ಅನುಕೂಲ ಮತ್ತು ಪ್ರವಾಸೋದ್ಯಮದ ಜೊತೆಗೆ, ರೈತರೂ ಸಹ ಹೊಸ ಮಾರುಕಟ್ಟೆಗಳನ್ನು ಪಡೆಯುತ್ತಾರೆ. ರೈತರು ತಮ್ಮ ಬೆಳೆಗಳನ್ನು ದೇಶದಾದ್ಯಂತ ಕಡಿಮೆ ದರದಲ್ಲಿ ಮಾರುಕಟ್ಟೆಗೆ ತಲುಪಿಸಬಹುದು.

ಸ್ನೇಹಿತರೇ,

ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ಮಾರ್ಗ ಪೂರ್ಣಗೊಂಡರೆ ಶಿವಮೊಗ್ಗ ಮಾತ್ರವಲ್ಲದೆ ಹಾವೇರಿ, ದಾವಣಗೆರೆ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಾಲಿನಲ್ಲಿ ಲೆವೆಲ್ ಕ್ರಾಸಿಂಗ್ ಇರುವುದಿಲ್ಲ. ಅಂದರೆ ಇದು ಸುರಕ್ಷಿತ ರೈಲು ಮಾರ್ಗವಾಗಿದೆ ಮತ್ತು ಹೆಚ್ಚಿನ ವೇಗದ ರೈಲುಗಳ ಓಡಾಟಕ್ಕೆ ಸಾಧ್ಯವಾಗುತ್ತದೆ. ಕೋಟೆಗಂಗೂರು ಇದುವರೆಗೆ ಶಾರ್ಟ್ ಹಾಲ್ಟ್ ಸ್ಟೇಷನ್ ಆಗಿತ್ತು. ಈಗ ಅದನ್ನು ಹೊಸ ಕೋಚಿಂಗ್ ಟರ್ಮಿನಲ್ ಆಗಿ ಪರಿವರ್ತಿಸುವುದರಿಂದ ಅದರ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಅದರ ಸಾಮರ್ಥ್ಯ ಹೆಚ್ಚುತ್ತದೆ. ಈಗ ಇದನ್ನು 4 ರೈಲು ಮಾರ್ಗಗಳು, 3 ಪ್ಲಾಟ್ಫಾರ್ಮ್ಗಳು ಮತ್ತು ರೈಲ್ವೆ ಕೋಚಿಂಗ್ ಡಿಪೋದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ ಹೊಸ ರೈಲುಗಳು ಇಲ್ಲಿಂದ ದೇಶದ ಇತರ ಭಾಗಗಳಿಗೆ ಸಂಚರಿಸಲು ಸಾಧ್ಯವಾಗುತ್ತದೆ. ವಿಮಾನ ಮತ್ತು ರೈಲು ಸಾರಿಗೆಯ ಜೊತೆಗೆ, ರಸ್ತೆಗಳು ಉತ್ತಮವಾದಾಗ ಯುವಕರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಶಿವಮೊಗ್ಗ ಶೈಕ್ಷಣಿಕ ಕೇಂದ್ರವಾಗಿದೆ. ಉತ್ತಮ ಸಂಪರ್ಕದೊಂದಿಗೆ, ಹತ್ತಿರದ ಜಿಲ್ಲೆಗಳಿಂದ ಯುವ ಸ್ನೇಹಿತರು ಇಲ್ಲಿಗೆ ಬರಲು ಸುಲಭವಾಗುತ್ತದೆ. ಇದು ಹೊಸ ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಅಂದರೆ, ಉತ್ತಮ ಸಂಪರ್ಕಕ್ಕೆ ಸಂಬಂಧಿಸಿದ ಮೂಲಸೌಕರ್ಯವು ಈ ಇಡೀ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ.

ಸಹೋದರ ಮತ್ತು ಸಹೋದರಿಯರೇ,

ಇಂದು ಶಿವಮೊಗ್ಗ ಮತ್ತು ಈ ಭಾಗದ ತಾಯಂದಿರು ಮತ್ತು ಸಹೋದರಿಯರಿಗೆ ಜೀವನವನ್ನು ಸುಲಭಗೊಳಿಸಲು ಬೃಹತ್ ಅಭಿಯಾನ ನಡೆಯುತ್ತಿದೆ. ಪ್ರತಿ ಮನೆಗೆ ಪೈಪ್ಲೈನ್ನಲ್ಲಿ ನೀರು ಪೂರೈಸುವ ಅಭಿಯಾನ ಇದಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಕುಟುಂಬಗಳಿವೆ. ಜಲ ಜೀವನ್ ಮಿಷನ್ ಪ್ರಾರಂಭವಾಗುವ ಮೊದಲು, ಇಲ್ಲಿನ ಸುಮಾರು 90,000 ಕುಟುಂಬಗಳು ತಮ್ಮ ಮನೆಗಳಲ್ಲಿ ನಲ್ಲಿ ಸಂಪರ್ಕವನ್ನು ಹೊಂದಿದ್ದವು. ಡಬಲ್ ಇಂಜಿನ್ ಸರ್ಕಾರವು ಇದುವರೆಗೆ ಸುಮಾರು 1.5 ಲಕ್ಷ ಹೊಸ ಕುಟುಂಬಗಳಿಗೆ ಕೊಳವೆ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಉಳಿದ ಕುಟುಂಬಗಳಿಗೆ ನಲ್ಲಿ ನೀರು ಒದಗಿಸುವ ಹಲವಾರು ಯೋಜನೆ ಬರುತ್ತದೆ. ಕಳೆದ ಮೂರೂವರೆ ವರ್ಷಗಳಲ್ಲಿ ಕರ್ನಾಟಕದ 40 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಪೈಪ್ಲೈನ್ ಮೂಲಕ ನೀರು ಒದಗಿಸಲಾಗಿದೆ.

ಸ್ನೇಹಿತರೇ,

ಬಿಜೆಪಿ ಸರಕಾರ ಹಳ್ಳಿಗಳ, ಬಡವರ, ರೈತರ ಸರಕಾರ. ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರ್ಕಾರವಾಗಿದೆ. ಬಿಜೆಪಿ ಸರ್ಕಾರವು ಸ್ವಾಭಿಮಾನ ಮತ್ತು ತಾಯಂದಿರು ಮತ್ತು ಸಹೋದರಿಯರ ಸಬಲೀಕರಣವನ್ನು ಖಾತರಿಪಡಿಸುವ ಮತ್ತು ಮಹಿಳೆಯರಿಗೆ ಅವಕಾಶಗಳನ್ನು ಒದಗಿಸುವ ಹಾದಿಯಲ್ಲಿ ನಡೆಯುತ್ತದೆ. ಅದಕ್ಕಾಗಿಯೇ ಸಹೋದರಿಯರು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ನಾವು ಶ್ರಮಿಸಿದ್ದೇವೆ. ಶೌಚಾಲಯವಿರಲಿ, ಅಡುಗೆಮನೆಯಲ್ಲಿ ಗ್ಯಾಸ್ ಸಂಪರ್ಕವಿರಲಿ ಅಥವಾ ಟ್ಯಾಪ್ ಮೂಲಕ ನೀರು ಇರಲಿ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಹೆಚ್ಚು ತೊಂದರೆಗೆ ಒಳಪಡಿಸಲು ಬಿಡುವುದಿಲ್ಲ. ಇಂದು ನಾವು ಈ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ. ಜಲ ಜೀವನ್ ಮಿಷನ್ನೊಂದಿಗೆ ಡಬಲ್ ಇಂಜಿನ್ ಸರ್ಕಾರವು ಪ್ರತಿ ಮನೆಗೂ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ.

ಸ್ನೇಹಿತರೇ,

ಇದು ಭಾರತಕ್ಕೆ ‘ಅಮೃತಕಾಲ’ ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ಗೊತ್ತು; ಭಾರತವನ್ನು ಅಭಿವೃದ್ಧಿಪಡಿಸುವ ಸಮಯ. ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಅವಕಾಶ ಬಂದಿದೆ. ಮೊದಲ ಬಾರಿಗೆ ಭಾರತದ ಧ್ವನಿ ಇಡೀ ವಿಶ್ವದಲ್ಲಿ ಪ್ರತಿಧ್ವನಿಸುತ್ತಿದೆ. ಪ್ರಪಂಚದಾದ್ಯಂತದ ಹೂಡಿಕೆದಾರರು ಭಾರತಕ್ಕೆ ಬರಲು ಬಯಸುತ್ತಿದ್ದಾರೆ. ಮತ್ತು ಬಂಡವಾಳ ಹರಿದಾಗ ಕರ್ನಾಟಕಕ್ಕೆ ಹಾಗೂ ಇಲ್ಲಿನ ಯುವಕರಿಗೆ ಲಾಭವಾಗುತ್ತದೆ. ಅದಕ್ಕಾಗಿಯೇ ಡಬಲ್ ಇಂಜಿನ್ ಸರ್ಕಾರಕ್ಕೆ ಮತ್ತೆ ಮತ್ತೆ ಅವಕಾಶ ನೀಡಲು ಕರ್ನಾಟಕ ಮನಸ್ಸು ಮಾಡಿದೆ.

ಕರ್ನಾಟಕದ ಅಭಿವೃದ್ಧಿಯ ಈ ಅಭಿಯಾನವು ಈಗ ವೇಗವಾಗಿ ಸಾಗಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾವು ಒಟ್ಟಾಗಿ ಮುನ್ನಡೆಯಬೇಕು; ನಾವು ಒಟ್ಟಿಗೆ ನಡೆಯಬೇಕು. ನಮ್ಮ ಕರ್ನಾಟಕದವರ, ನಮ್ಮ ಶಿವಮೊಗ್ಗದ ಜನರ ಕನಸುಗಳನ್ನು ನನಸು ಮಾಡಲು ನಾವು ಒಟ್ಟಾಗಿ ನಡೆಯಬೇಕು. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು! 

ನನ್ನೊಂದಿಗೆ ಹೇಳಿ.

ಭಾರತ್ ಮಾತಾ ಕೀ ಜೈ! 

ಭಾರತ್ ಮಾತಾ ಕೀ ಜೈ! 

ಭಾರತ್ ಮಾತಾ ಕೀ ಜೈ!

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi