ಸ್ವಾಮಿನಾರಾಯಣ ಅವರಿಗೆ ನಮಸ್ಕಾರ.
ಪೂಜ್ಯ ಶ್ರೀ ದೇವಕೃಷ್ಣ ದಾಸ್ಜಿ ಸ್ವಾಮಿಗಳು, ಮಹಂತ್ ಶ್ರೀ ದೇವಪ್ರಸಾದ್ ದಾಸ್ಜಿ ಸ್ವಾಮಿಗಳು, ಪೂಜ್ಯ ಧರ್ಮವಲ್ಲಭ ಸ್ವಾಮಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಗೌರವಾನ್ವಿತ ಸಂತರು ಮತ್ತು ಇತರ ಮಹನೀಯರು ಮತ್ತು ನನ್ನ ಪ್ರೀತಿಯ ಯುವ ಸ್ನೇಹಿತರು ಈ ಪವಿತ್ರ ಕಾರ್ಯಕ್ರಮಕ್ಕೆ ನಿರ್ದೇಶನ ನೀಡುತ್ತಿದ್ದಾರೆ!
ನಿಮ್ಮೆಲ್ಲರಿಗೂ ಜೈ ಸ್ವಾಮಿನಾರಾಯಣ...
ಪೂಜ್ಯ ಶಾಸ್ತ್ರೀಜಿ ಮಹಾರಾಜ್ ಶ್ರೀ ಧರ್ಮಜೀವನ್ ದಾಸ್ಜಿ ಸ್ವಾಮಿಗಳ ಪ್ರೇರಣೆಯಿಂದ, ಅವರ ಆಶೀರ್ವಾದದೊಂದಿಗೆ, ರಾಜ್‌ಕೋಟ್ ಗುರುಕುಲವು 75 ವರ್ಷಗಳನ್ನು ಪೂರೈಸುತ್ತಿದೆ. ರಾಜ್‌ಕೋಟ್ ಗುರುಕುಲದ 75 ವರ್ಷಗಳ ಈ ಪಯಣಕ್ಕೆ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಭಗವಾನ್ ಶ್ರೀ ಸ್ವಾಮಿ ನಾರಾಯಣ, ಅವರ ಹೆಸರನ್ನು ಸ್ಮರಿಸುವುದರ ಮೂಲಕ ಮಾತ್ರ ಹೊಸ ಪ್ರಜ್ಞೆಯು ಸಂವಹನಗೊಳ್ಳುತ್ತದೆ ಮತ್ತು ಇಂದು ನಿಮ್ಮೆಲ್ಲ ಸಂತರ ಸಹವಾಸದಲ್ಲಿ ಸ್ವಾಮಿನಾರಾಯಣನ ಹೆಸರನ್ನು ಸ್ಮರಿಸುವುದು ಒಂದು ಅದೃಷ್ಟದ ಅವಕಾಶವಾಗಿದೆ. ಈ ಐತಿಹಾಸಿಕ ಸಂಸ್ಥೆಯ ಮುಂಬರುವ ಭವಿಷ್ಯವು ಇನ್ನಷ್ಟು ಯಶಸ್ವಿಯಾಗಲಿದೆ . ಅದರ ಕೊಡುಗೆ ಇನ್ನಷ್ಟು ಅದ್ಭುತವಾಗಿರುತ್ತದೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೇ...
ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್‌ನ 75 ವರ್ಷಗಳ ಪ್ರಯಾಣವು ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವ ಸಮಯದಲ್ಲಿಯೇ ಪೂರ್ಣಗೊಳ್ಳುತ್ತಿದೆ. ಇದು ಸಂತೋಷದ ಸುಯೋಗವೇನೋ ನಿಜವೇ..ಅದರ ಸುಖದ ಸುಯೋಗದ ಅವಕಾಶವೂ ಆಗಿದೆ. ಒಂದು ರಾಷ್ಟ್ರವಾಗಿ ಈ ಸ್ವತಂತ್ರ ಭಾರತದ ಜೀವನಯಾನವು ಅಂತಹ ಅವಕಾಶಗಳಿಂದಾಗಿ ಮತ್ತು ಸಾವಿರಾರು ವರ್ಷಗಳ ನಮ್ಮ ಶ್ರೇಷ್ಠ ಸಂಪ್ರದಾಯವು ಅಂತಹ ಅವಕಾಶಗಳಿಂದಾಗಿಯೇ ಮುನ್ನಡೆಯುತ್ತಿದೆ.
ಇವು ಅದೃಷ್ಟ, ಕಠಿಣ ಪರಿಶ್ರಮ ಮತ್ತು ಕರ್ತವ್ಯದ ಪರಿಪಾಲನೆ ಒಳ್ಳೆಯ ಘಳಿಗೆ, ಸಂಸ್ಕೃತಿ ಮತ್ತು ಸಮರ್ಪಣೆಯ ಉತ್ತಮ ಭಾವದಿಂದಾಗಿದೆ. ಇವತ್ತಿನ ಈ ಅಮೃತ ಮಹೋತ್ಸವ ಒಂದುಕಡೆ ಕಾಕತಾಳೀಯ, ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಕಾಕತಾಳೀಯವೂ ಆಗಿದೆ. ದೇಶವು ಸ್ವತಂತ್ರವಾದಾಗ, ನಮ್ಮ ಪ್ರಾಚೀನ ವೈಭವವನ್ನು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಮಹಾನ್ ಹೆಮ್ಮೆಯನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ನಮ್ಮದಾಗಿತ್ತು. ಆದರೆ ಗುಲಾಮಗಿರಿಯ ಮನಸ್ಥಿತಿಯ ಒತ್ತಡದಲ್ಲಿ ಸರಕಾರಗಳು ಆ ದಿಸೆಯಲ್ಲಿ ಸಾಗಲಿಲ್ಲ. ಕೆಲವು ವಿಷಯಗಳಲ್ಲಿ ತಪ್ಪು ಹೆಜ್ಜೆಯೂ ಆಗಿದೆ. ಇಂತಹ ಸಂದರ್ಭಗಳಲ್ಲಿ ಮತ್ತೊಮ್ಮೆ ನಮ್ಮ ಸಂತರು, ಆಚಾರ್ಯರು ದೇಶಕ್ಕಾಗಿ ಈ ಕರ್ತವ್ಯವನ್ನು ಪೂರೈಸಲು ಉಪಕ್ರಮವನ್ನು ತೆಗೆದುಕೊಂಡರು. ಸ್ವಾಮಿನಾರಾಯಣ ಗುರುಕುಲವು ಈ ಕಾಕತಾಳೀಯಕ್ಕೆ ಜೀವಂತ ಉದಾಹರಣೆಯಾಗಿದೆ. ಸ್ವಾತಂತ್ರ್ಯದ ನಂತರ, ಈ ಚಳುವಳಿ, ಈ ಸಂಸ್ಥೆಯನ್ನು ಭಾರತೀಯ ಮೌಲ್ಯಗಳು ಮತ್ತು ಆದರ್ಶಗಳ ಅಡಿಪಾಯದ ಮೇಲೆ ನಿರ್ಮಿಸಲಾಯಿತು. ಪೂಜ್ಯ ಧರ್ಮಜೀವನದಾಸ್ ಸ್ವಾಮೀಜಿ ಅವರು ರಾಜ್‌ಕೋಟ್ ಗುರುಕುಲದ ಬಗ್ಗೆ ಹೊಂದಿದ್ದ ದೃಷ್ಟಿಕೋನವು ಆಧ್ಯಾತ್ಮಿಕತೆ ಮತ್ತು ಆಧುನಿಕತೆಯಿಂದ ಸಂಸ್ಕೃತಿ ಆಚರಣೆಗಳು ಈ ಎಲ್ಲವನ್ನೂ ಒಳಗೊಂಡಿದೆ. ಇಂದು ಆ ಕಲ್ಪನೆಯ ಬೀಜ ಈಗ ಬೃಹತ್ ಆಲದ ಮರದ ರೂಪದಲ್ಲಿ ನಮ್ಮ ಮುಂದಿದೆ. ನಾನು ಗುಜರಾತ್‌ನಲ್ಲಿ ನಿಮ್ಮೆಲ್ಲರ ನಡುವೆ ಬದುಕಿದ್ದೇನೆ. ನಿಮ್ಮ ನಡುವೆಯೇ ಬೆಳೆದಿದ್ದೇನೆ. ಅಲ್ಲದೇ ಇಂತಹ ಭವ್ಯ ಆಲದ ಮರವನ್ನು ನನ್ನ ಕಣ್ಣುಗಳಿಂದ ನೋಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಮತ್ತು ಪುಣ್ಯವೇ ಸರಿ.
ಭಗವಾನ್ ಸ್ವಾಮಿನಾರಾಯಣರ ಪ್ರೇರಣೆಯು ಈ ಗುರುಕುಲದ ಮೂಲದಲ್ಲಿದೆ - "ಪ್ರವರ್ತನೀಯ ಸದ್ ವಿದ್ಯಾ ಭುವಿ ಯತ್ ಸುಕೃತಂ ಮಹತ್"! ಅಂದರೆ ಸತ್ ವಿದ್ಯೆಯ ಪ್ರಸರಣವು ಜಗತ್ತಿನ ಅತ್ಯಂತ ಪವಿತ್ರವಾದ, ಪ್ರಮುಖವಾದ ಕೆಲಸವಾಗಿದೆ. ಇದು ನಮ್ಮ ನಾಗರಿಕತೆಯ ಅಡಿಪಾಯವನ್ನು ಹಾಕಿದ ಜ್ಞಾನ ಮತ್ತು ಶಿಕ್ಷಣದ ಕಡೆಗೆ ಭಾರತದ ಶಾಶ್ವತ ಸಮರ್ಪಣೆಯಾಗಿದೆ. ಒಂದು ಕಾಲದಲ್ಲಿ ರಾಜ್ ಕೋಟ್ ನಲ್ಲಿ ಕೇವಲ 7 ವಿದ್ಯಾರ್ಥಿಗಳಿಂದ ಆರಂಭವಾದ ಗುರುಕುಲ ವಿದ್ಯಾ ಪ್ರತಿಷ್ಠಾನ ಇಂದು ದೇಶ ವಿದೇಶಗಳಲ್ಲಿ ಸುಮಾರು 40 ಶಾಖೆಗಳನ್ನು ಹೊಂದಿದೆ.ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಕಳೆದ 75 ವರ್ಷಗಳಲ್ಲಿ, ಗುರುಕುಲವು ವಿದ್ಯಾರ್ಥಿಗಳ ಮನಸ್ಸು ಮತ್ತು ಹೃದಯವನ್ನು ಒಟ್ಟಾರೆ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಉತ್ತಮ ಆಲೋಚನೆಗಳು ಮತ್ತು ಮೌಲ್ಯಗಳೊಂದಿಗೆ ಅವರನ್ನು ಪೋಷಿಸಿದೆ. ನಮ್ಮ ಗುರುಕುಲ ಸಂಪ್ರದಾಯವನ್ನುಆಧ್ಯಾತ್ಮಿಕ ಕ್ಷೇತ್ರದಲ್ಲಿನ ಸಮರ್ಪಿತ ಯುವಕರಿಂದ ಇಸ್ರೋ ಮತ್ತು ಬಾರ್ಕ್‌ನ ವಿಜ್ಞಾನಿಗಳವರೆಗೆ, ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ದೇಶದ ಪ್ರತಿಭೆಯನ್ನು ಪೋಷಿಸಿದೆ. ಹಾಗೂ ನಮಗೆಲ್ಲರಿಗೂ ಗುರುಕುಲದ ಒಂದು ವಿಶೇಷತೆ ತಿಳಿದೇಯಿದೆ. ಇಂದಿನ ಈ ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಕೂಡ ಗುರುಕುಲ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಆ ಕಷ್ಟದ ಕಾಲದಲ್ಲೂ ಇಂದಿಗೂ ಈ ಗುರುಕುಲವು ಪ್ರತಿಯೊಬ್ಬ ಬಡ ವಿದ್ಯಾರ್ಥಿಯಿಂದ ಶಿಕ್ಷಣಕ್ಕಾಗಿ ದಿನಕ್ಕೆ ಒಂದು ರೂಪಾಯಿಯನ್ನು ಮಾತ್ರ ಪಡೆಯುವ ಸೇವಾ ಮಹಾನ್ ಸಂಸ್ಥೆಯಾಗಿದೆ.ಇದರಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ದಾರಿ ಸುಲಭವಾಗುತ್ತಿದೆ ಎನ್ನುವ ವಿಚಾರ ಕೆಲವೇ ಜನರಿಗೆ ಮಾತ್ರವೇ ತಿಳಿದಿದೆ.
ಸ್ನೇಹಿತರೇ....
ಭಾರತದಲ್ಲಿ ಜ್ಞಾನವು ಜೀವನದ ಅತ್ಯುನ್ನತ ಗುರಿಯಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆದ್ದರಿಂದಲೇ, ಅಂದಿನ ಕಾಲಘಟ್ಟದಲ್ಲಿ ಪ್ರಪಂಚದ ಇತರ ದೇಶಗಳನ್ನು ಅವುಗಳ ರಾಜ್ಯಗಳು ಮತ್ತು ಸಾಮ್ರಾಜ್ಯಗಳೊಂದಿಗೆ ಗುರುತಿಸಲ್ಪಡುತ್ತಿದ್ದರೆ ಅದೇ ಅವಧಿಯಲ್ಲಿ, ನಮ್ಮ ಈ ಭಾರತವನ್ನು (ಭರತ ಭೂಮಿಯನ್ನು) ಅದರ ಗುರುಕುಲಗಳಿಂದ ಗುರುತಿಸಲಾಗುತ್ತಿತ್ತು. ಗುರುಕುಲ ಎಂದರೆ, ಗುರುವಿನ ಕುಟುಂಬ, ಜ್ಞಾನದ ಕುಟುಂಬ! ನಮ್ಮ ಗುರುಕುಲಗಳು ಶತಮಾನಗಳಿಂದ ಸಮತೆ, ಪ್ರೀತಿ, ಸಮಾನತೆ ಮತ್ತು ಸೇವೆಯ ತೋಟದಂತಿವೆ.ನಳಂದ ಮತ್ತು ತಕ್ಷಶಿಲೆಯಂತಹ ವಿಶ್ವವಿದ್ಯಾನಿಲಯಗಳು ಭಾರತದ ಈ ಗುರುಕುಲ ಸಂಪ್ರದಾಯದ ಜಾಗತಿಕ ವೈಭವಕ್ಕೆ ಸಮಾನಾರ್ಥಕವಾಗಿವೆ. ಅನ್ವೇಷಣೆ ಮತ್ತು ಸಂಶೋಧನೆಯು ಭಾರತದ ಜೀವನ ವಿಧಾನದ ಭಾಗವಾಗಿತ್ತು. ಇಂದು ನಾವು ಭಾರತದ ಪ್ರತಿಯೊಂದು ಭಾಗದಲ್ಲಿ ಕಾಣುವ ವೈವಿಧ್ಯತೆ, ನಾವು ಕಾಣುವ ಸಾಂಸ್ಕೃತಿಕ ಶ್ರೀಮಂತಿಕೆ, ಇವು ಆ ಸಂಶೋಧನೆಗಳು ಮತ್ತು ಸಂಶೋಧನೆಗಳ ಫಲಿತಾಂಶಗಳಾಗಿವೆ. ಆತ್ಮ ತತ್ವದಿಂದ ಪರಮಾತ್ಮ ತತ್ವದವರೆಗೆ, ಆಧ್ಯಾತ್ಮಿಕತೆಯಿಂದ ಆಯುರ್ವೇದದವರೆಗೆ, ಸಮಾಜ ವಿಜ್ಞಾನದಿಂದ ಸೌರ ವಿಜ್ಞಾನದವರೆಗೆ, ಗಣಿತದಿಂದ ಲೋಹಶಾಸ್ತ್ರದವರೆಗೆ ಮತ್ತು ಶೂನ್ಯದಿಂದ ಅನಂತದವರೆಗೆ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಸಂಶೋಧನೆ ಮಾಡಿದ್ದೇವೆ, ಹೊಸ ತೀರ್ಮಾನಗಳನ್ನು ಪಡೆದುಕೊಂಡಿದ್ದೇವೆ. ಆಧುನಿಕ ಜಗತ್ತು ಮತ್ತು ಆಧುನಿಕ ವಿಜ್ಞಾನದ ಪಯಣ ಪ್ರಾರಂಭವಾದ ಆ ಕರಾಳ ಯುಗದಲ್ಲಿ ಭಾರತವು ಆ ಬೆಳಕಿನ ಕಿರಣಗಳನ್ನು ಮಾನವೀಯತೆಗೆ ನೀಡಿತು. ಮತ್ತು ಈ ಸಾಧನೆಗಳ ನಡುವೆ, ನಮ್ಮ ಗುರುಕುಲಗಳ ಮತ್ತೊಂದು ಶಕ್ತಿಯು ಜಗತ್ತಿಗೆ ದಾರಿ ಮಾಡಿಕೊಟ್ಟಿತು.
ಲಿಂಗ ಸಮಾನತೆಯಂತಹ ಪದಗಳು ಜಗತ್ತಿನಲ್ಲಿ ಹುಟ್ಟಿರದ ಕಾಲದಲ್ಲಿ, ಗಾರ್ಗಿ-ಮೈತ್ರೇಯಿಯಂತಹ ವಿದ್ವಾಂಸರು ನಮ್ಮ ಸ್ಥಳದಲ್ಲಿ ಚರ್ಚೆ ನಡೆಸುತ್ತಿದ್ದರು. ಲವ-ಕುಶ ಇವರ ಜೊತೆಗೆ, ಅತ್ರೇಯಿ ಕೂಡ ಮಹರ್ಷಿ ವಾಲ್ಮೀಕಿಯ ಆಶ್ರಮದಲ್ಲಿ ಅಧ್ಯಯನ ಮಾಡುತ್ತಿದ್ದಳು. ಈ ಪ್ರಾಚೀನ ಸಂಪ್ರದಾಯವನ್ನು ಆಧುನಿಕ ಭಾರತಕ್ಕೆ ಕೊಂಡೊಯ್ಯಲು ಸ್ವಾಮಿನಾರಾಯಣ ಗುರುಕುಲವು 'ಕನ್ಯಾ ಗುರುಕುಲ'ವನ್ನು ಪ್ರಾರಂಭಿಸುತ್ತಿರುವುದು ನನಗೆ ಸಂತೋಷ ತಂದಿದೆ. ಅಮೃತ ಮಹೋತ್ಸವದ 75 ವರ್ಷಗಳಲ್ಲಿ, ಸ್ವಾತಂತ್ರ್ಯದ ಅಮೃತ ಅವಧಿಯಲ್ಲಿ, ಇದು ಈ ಸಂಸ್ಥೆಯ ದೊಡ್ಡ ಸಾಧನೆಯಾಗಲಿದೆ ಮತ್ತು ದೇಶಕ್ಕೆ ಮಹತ್ವದ ಕೊಡುಗೆಯಾಗಿದೆ.
ಸ್ನೇಹಿತರೇ...
ಭಾರತದ ಉಜ್ವಲ ಭವಿಷ್ಯದಲ್ಲಿ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು ದೊಡ್ಡ ಪಾತ್ರವನ್ನು ಹೊಂದಿವೆ ಎಂಬುದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ, ಸ್ವಾತಂತ್ರ್ಯದ ಈ ಸುವರ್ಣ ಯುಗದಲ್ಲಿ, ನಾವು ಶಿಕ್ಷಣ ಮೂಲಸೌಕರ್ಯ ಅಥವಾ ಶಿಕ್ಷಣ ನೀತಿಯಾಗಿರಲಿ, ಪ್ರತಿಯೊಂದು ಹಂತದಲ್ಲೂ ಹೆಚ್ಚಿನ ವೇಗ ಮತ್ತು ಹೆಚ್ಚಿನ ವಿವರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇಂದು ದೇಶದಲ್ಲಿ ಐಐಟಿ, ಟ್ರಿಪಲ್ ಐಟಿ, ಐಐಎಂ, ಎಐಐಎಂಎಸ್‌ನಂತಹ ದೊಡ್ಡ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲಿ ದೊಡ್ಡ ಹೆಚ್ಚಳವಾಗಿದೆ. 2014ರಿಂದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಶೇ.65ಕ್ಕೂ ಹೆಚ್ಚು ಹೆಚ್ಚಳವಾಗಿದೆ. ಹೊಸ 'ರಾಷ್ಟ್ರೀಯ ಶಿಕ್ಷಣ ನೀತಿ'ಯ ಮೂಲಕ, ದೇಶವು ಮೊದಲ ಬಾರಿಗೆ ಭವಿಷ್ಯತ್ತನ್ನು ನೋಡುವ ಶಿಕ್ಷಣ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ. ಹೊಸ ಪೀಳಿಗೆಯು ಬಾಲ್ಯದಿಂದಲೂ ಉತ್ತಮ ಶಿಕ್ಷಣ ವ್ಯವಸ್ಥೆಯಲ್ಲಿ ಬೆಳೆದು ಬೆಳೆದಾಗ, ದೇಶಕ್ಕೆ ಆದರ್ಶ ನಾಗರಿಕರ ಸೃಷ್ಟಿ ಸ್ವಯಂಚಾಲಿತವಾಗಿ ಮುಂದುವರಿಯುತ್ತದೆ. ಈ ಆದರ್ಶ ನಾಗರಿಕರು, ಆದರ್ಶ ಯುವಕರು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು 2047 ರಲ್ಲಿ ಪೂರ್ಣಗೊಳಿಸುತ್ತಾರೆ, ಆಗ ದೇಶವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತದೆ. ಮತ್ತು ಖಂಡಿತವಾಗಿಯೂ ಶ್ರೀ ಸ್ವಾಮಿನಾರಾಯಣ ಗುರುಕುಲದಂತಹ ಶಿಕ್ಷಣ ಸಂಸ್ಥೆಗಳ ಪ್ರಯತ್ನಗಳು ಇದರಲ್ಲಿ ಬಹಳ ಮುಖ್ಯವಾಗುತ್ತವೆ.
ಸ್ನೇಹಿತರೇ...
ಅಮೃತ ಕಾಲದ ಮುಂದಿನ 25 ವರ್ಷಗಳ ಈ ಪ್ರಯಾಣದಲ್ಲಿ ನಿಮ್ಮೆಲ್ಲರ ಆಶೀರ್ವಾದ ಮತ್ತು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯವಾದುದು. ಇಂದು, ಭಾರತ ಮತ್ತು ಭಾರತದ ನಿರ್ಣಯಗಳು ಸಹ ಹೊಸದಾಗಿವೆ. ಇಂತಹ ನಿರ್ಣಯಗಳನ್ನು ಪೂರೈಸುವ ಪ್ರಯತ್ನಗಳು ಸಹ ಹೊಸದು. ಇಂದು ದೇಶವು ಡಿಜಿಟಲ್ ಇಂಡಿಯಾ, ಸ್ವಾವಲಂಬಿ ಭಾರತ, ಸ್ಥಳೀಯರಿಗೆ ಧ್ವನಿ, ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳ ನಿರ್ಮಾಣ, ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬ ದೃಷ್ಟಿಯಲ್ಲಿ ಮುನ್ನಡೆಯುತ್ತಿದೆ. ಸಾಮಾಜಿಕ ಬದಲಾವಣೆ ಮತ್ತು ಸಮಾಜ ಸುಧಾರಣೆಯ ಈ ಕಾರ್ಯಗಳಲ್ಲಿ ಪ್ರತಿಯೊಬ್ಬರ ಪ್ರಯತ್ನಗಳು ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಸ್ವಾಮಿನಾರಾಯಣ ಗುರುಕುಲ ವಿದ್ಯಾ ಪ್ರತಿಷ್ಠಾನದಂತಹ ಸಂಸ್ಥೆಗಳು ಈ ಸಂಕಲ್ಪ ಯಾತ್ರೆಗೆ ಅದೇ ರೀತಿ ಶಕ್ತಿ ನೀಡುತ್ತವೆ ಎಂಬುದು ನನಗೆ ಖಾತ್ರಿಯಿದೆ. ನಾನು ಇಂದು ನಿಮ್ಮೆಲ್ಲ ಸಂತರ ನಡುವೆ ಬಂದಾಗ, ನೀವು ಯಶಸ್ವಿಯಾಗಿ ಮುನ್ನಡೆಸಿರುವ 75 ವರ್ಷಗಳ ಅತ್ಯಂತ ದೊಡ್ಡ ಪ್ರಯಾಣವನ್ನು ಕಂಡು ಮನಸಿಗೆ ಬಹಳ ಸಂತಸ ಎನಿಸಿತು. ಇಂತಹ ಪ್ರಯಾಣವನ್ನು ಈಗ ಅದನ್ನು ದೇಶದ ಯುವಜನತೆಗೂ ವಿಸ್ತರಿಸಬೇಕು. ಹೀಗೆಂದು ನಾನು ಇಂದು ಸ್ವಾಮಿನಾರಾಯಣ ಗುರುಕುಲಗಳಿಗೆ ಪ್ರಾರ್ಥನೆ ಮಾಡಬಹುದೇ?... ಪ್ರತಿ ವರ್ಷ ನಮ್ಮ ಈಶಾನ್ಯಕ್ಕೆ ಕನಿಷ್ಠ 100 ಯುವಕರು 15 ದಿನಗಳವರೆಗೆ ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಸಿಕ್ಕಿಂಗೆ ಹೋಗಬೇಕೆಂದು ನೀವು ನಿರ್ಧರಿಸುತ್ತಾರೆ. ಹೀಗೆ ಗುರುಕುಲದಿಂದಲೂ 100 ಯುವಕರು ಹೀಹೆ 15 ದಿನ ಅಲ್ಲಿಗೆ ಹೋಗಿ, ಅಲ್ಲಿನ ಯುವಕರನ್ನು ಭೇಟಿ ಮಾಡಿ, ಅವರ ಪರಿಚಯ, ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವುದು, ಬಂದು ಬರೆಯುವುದು ಹೀಗೆ ಪ್ರತಿ ವರ್ಷ ಕನಿಷ್ಠ 150 ಯುವಕರು 15 ದಿನ ಅಲ್ಲಿಗೆ ಹೋಗಬೇಕು. ನಮ್ಮ ಸಂತರು 75 ವರ್ಷಗಳ ಹಿಂದೆ ಈ ಪ್ರಯಾಣವನ್ನು ಎಷ್ಟು ಕಷ್ಟಗಳಿಂದ ಪ್ರಾರಂಭಿಸಿರಬಹುದು ಎಂಬುದನ್ನು ನೀವು ನೋಡುತ್ತೀರಿ, ನಮ್ಮ ಈಶಾನ್ಯದಲ್ಲಿ ಎಷ್ಟು ಭರವಸೆಯ ಯುವಕರು ಇದ್ದಾರೆ ಎಂಬುದನ್ನು ನೀವು ನೋಡುತ್ತೀರಿ. ನಾವು ಅವರೊಂದಿಗೆ ಸಂಬಂಧವನ್ನು ಸ್ಥಾಪಿಸಿದರೆ, ನಂತರ ದೇಶಕ್ಕೆ ಹೊಸ ಶಕ್ತಿ ಸೇರ್ಪಡೆಯಾದಂತಾಗುತ್ತದೆ. ಇದಕ್ಕಾಗಿ ನೀವು ಪ್ರಯತ್ನಿಸಿ.
ಅದೇ ರೀತಿ ನಮ್ಮ ಸಂತ ಸಮುದಾಯದಲ್ಲಿ ಬೇಟಿ ಬಚಾವೋ ಅಭಿಯಾನ ಮಾಡುವಾಗ ಚಿಕ್ಕ ಹುಡುಗಿಯರು ವೇದಿಕೆಯ ಮೇಲೆ ಬಂದು 7 ನಿಮಿಷ, 8 ನಿಮಿಷ, 10 ನಿಮಿಷ ಹೀಗೆ ಮನಮುಟ್ಟುವಂತೆ, ಅಮೋಘ ಅಭಿನಯದಿಂದ ಭಾಷಣ ಮಾಡಿದ್ದು ನೆನಪಿದೆ. ಇಡೀ ಪ್ರೇಕ್ಷಕರ ಕಣ್ಣುಗಳಲ್ಲಿ ನೀರು ಬರಿಸಿ ದುಃಖಿಸುವಂತೆ ಮಾಡಿದ್ದು ನನಗೆ ನೆನಪಿದೆ. ಹೆಣ್ಣುಮಗುವೇ ತಾಯಿಯ ಗರ್ಭದಿಂದ ಹೇಳುತ್ತಿದ್ದದ್ದು , ಅಮ್ಮ ನನ್ನನ್ನು ಕೊಲ್ಲಬೇಡ ಎಂದು ಆ ಹೆಣ್ಣುಮಗಳು ಹೇಳುತ್ತಿದ್ದಳು. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಆಂದೋಲನವನ್ನು ಹೆಚ್ಚಾಗಿ ಗುಜರಾತ್‌ನಲ್ಲಿ ನಮ್ಮ ಹೆಣ್ಣುಮಕ್ಕಳೇ ಮುನ್ನಡೆಸಿದ್ದರು. ನಮ್ಮ ಗುರುಕುಲದ ವಿದ್ಯಾರ್ಥಿಗಳು ಸಹ ಭೂಮಿ ತಾಯಿಯ ರೂಪದಲ್ಲಿ ನಾನು ನಿಮ್ಮ ತಾಯಿ ಎಂದು ಜನರನ್ನು ಸಂಬೋಧಿಸಬೇಕು. ನಾನು ನಿಮಗಾಗಿ ಆಹಾರ, ಹಣ್ಣುಗಳು, ಹೂವುಗಳನ್ನು ಉತ್ಪಾದಿಸುತ್ತೇನೆ. ಈ ರಸಗೊಬ್ಬರಗಳು, ಈ ರಾಸಾಯನಿಕಗಳು, ಈ ಔಷಧಿಗಳು ನನ್ನನ್ನು ಕೊಲ್ಲಬೇಡಿ, ಅವುಗಳಿಂದ ನನಗೆ ಸ್ವಾತಂತ್ರ್ಯವನ್ನು ನೀಡಿ. ಮತ್ತು ಸಹಜ ಕೃಷಿಯತ್ತ ಪ್ರೇರೇಪಿಸುವ ನಿಟ್ಟಿನಲ್ಲಿ ನನ್ನ ಗುರುಕುಲದ ವಿದ್ಯಾರ್ಥಿಗಳು ಈ ರೀತಿ ರೈತರ ಮಧ್ಯೆ ಬೀದಿನಾಟಕ, ನಗರ ನಾಟಕಗಳನ್ನು ಮಾಡಬೇಕು. ನಮ್ಮ ಗುರುಕುಲ ದೊಡ್ಡ ಅಭಿಯಾನ ನಡೆಸಬೇಕು.ಮತ್ತು ನಮ್ಮ ಗುಜರಾತಿನ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜಿಯವರ ನೇತೃತ್ವದಲ್ಲಿ ನೈಸರ್ಗಿಕ ಕೃಷಿಯ ಬೃಹತ್ ಅಭಿಯಾನವನ್ನು ಪ್ರಾರಂಭಿಸಿರುವುದು ನನಗೆ ಸಂತೋಷ ತಂದಿದೆ. ಮನುಷ್ಯರನ್ನು ವ್ಯಸನದಿಂದ ಮುಕ್ತಗೊಳಿಸಲು ನೀವು ಅಭಿಯಾನವನ್ನು ನಡೆಸುತ್ತಿರುವಂತೆಯೇ, ಭೂಮಿ ತಾಯಿಯನ್ನು ಈ ರೀತಿಯ ವಿಷದಿಂದ ಮುಕ್ತಗೊಳಿಸಲು ಪ್ರತಿಜ್ಞೆ ಮಾಡಲು ರೈತರನ್ನು ಪ್ರೇರೇಪಿಸುವ ಕೆಲಸವನ್ನು ನೀವು ಮಾಡಬಹುದು. ಏಕೆಂದರೆ ಗುರುಕುಲಗಳಿಗೆ ಬರುವವರು ಮೂಲ ಗ್ರಾಮದಿಂದ, ರೈತರ ಕುಟುಂಬದಿಂದ ಬಂದವರು. ಅವರ ಮೂಲಕ ವಿಷಯ ಬಹಳ ಸುಲಭವಾಗಿ ತಲುಪಬಹುದು. ಹಾಗಾಗಿ ಈ ಸ್ವಾತಂತ್ರ್ಯದ ಅಮೃತದಲ್ಲಿ ನಮ್ಮ ಗುರುಕುಲ, ನಮ್ಮ ಸುಸಂಸ್ಕೃತ ವಿದ್ಯಾವಂತ ಯುವಕರು ಉಜ್ವಲ ಭವಿಷ್ಯಕ್ಕಾಗಿ, ಪರಿಸರ ಸಂರಕ್ಷಣೆಗಾಗಿ, ಏಕ ಭಾರತ ಶ್ರೇಷ್ಠ ಭಾರತದ ಕನಸನ್ನು ನನಸಾಗಿಸಲು ಹಲವಾರು ಹೊಸ ಆಲೋಚನೆಗಳು, ಆದರ್ಶಗಳು ಮತ್ತು ಸಂಕಲ್ಪಗಳೊಂದಿಗೆ ನಡೆಯಬಹುದು. ಮತ್ತು ಸ್ವಾಮಿನಾರಾಯಣ ಸಂಪ್ರದಾಯದಲ್ಲಿ ನಾನು ನಿಮ್ಮನ್ನು ಭೇಟಿಯಾದಾಗಲೆಲ್ಲಾ ನಾನು ಕೇಳಿದ್ದನ್ನೆಲ್ಲಾ ನೀವೆಲ್ಲರೂ ಪೂರೈಸಿರುವುದು ನನಗೆ ಒಂದು ದೊಡ್ಡ ಅದೃಷ್ಟ ಎಂದು ನಾನು ನಂಬುತ್ತೇನೆ. ಇಂದು, ನಾನು ಈ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಹೀಗೆ ಮಾಡಿ ಎಂದು ಕೇಳಿದ್ದೇನೆ.ನೀವು ಸಹ ಅವುಗಳನ್ನು ಪೂರೈಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಮತ್ತು ಗುಜರಾತ್ ಹೆಸರು ಖಂಡಿತವಾಗಿಯೂ ಪ್ರಕಾಶಮಾನವಾಗಿರುತ್ತದೆ. ಭವಿಷ್ಯದ ಪೀಳಿಗೆಯ ಜೀವನವು ಸುಲಭವಾಗುತ್ತದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಧನ್ಯವಾದಗಳು.
ಸ್ವಾಮಿನಾರಾಯಣ ಅವರಿಗೆ ನಮಸ್ಕಾರ.