ಗೌರವಾನ್ವಿತರೇ,

ನಮಸ್ಕಾರ!

ʻಪ್ರಜಾಪ್ರಭುತ್ವಕ್ಕಾಗಿ ಶೃಂಗಸಭೆʼಯು ಪ್ರಜಾಪ್ರಭುತ್ವಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಅವಕಾಶ ಕಲ್ಪಿಸುವ ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಈ ಉಪಕ್ರಮವನ್ನು ಮುಂದುವರಿಸಿದ್ದಕ್ಕಾಗಿ ನಾನು ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

ಗೌರವಾನ್ವಿತರೇ,

ಇನ್ನು ಕೆಲವೇ ವಾರಗಳಲ್ಲಿ ವಿಶ್ವವು ಭಾರತದ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ಸಾಕ್ಷಿಯಾಗಲಿದೆ. ಸುಮಾರು ಒಂದು ಶತಕೋಟಿ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದ್ದು, ಇದು ಮಾನವಕುಲದ ಇತಿಹಾಸದಲ್ಲಿ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯಾಗಿದೆ. ಭಾರತದ ಜನರು ಮತ್ತೊಮ್ಮೆ ಪ್ರಜಾಪ್ರಭುತ್ವದಲ್ಲಿ ತಮ್ಮ ನಂಬಿಕೆಯನ್ನು ದೃಢಪಡಿಸುತ್ತಾರೆ. ಭಾರತವು ಪ್ರಾಚೀನ ಮತ್ತು ಅವಿಚ್ಛಿನ್ನ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಹೊಂದಿದೆ. ಇದು ಭಾರತೀಯ ನಾಗರಿಕತೆಯ ಜೀವನಾಡಿಯಾಗಿದೆ. ಒಮ್ಮತ ಸೃಷ್ಟಿ, ಮುಕ್ತ ಸಂವಾದ ಮತ್ತು ಮುಕ್ತ ಚರ್ಚೆ ಭಾರತದ ಇತಿಹಾಸದುದ್ದಕ್ಕೂ ಪ್ರತಿಧ್ವನಿಸಿದೆ. ಅದಕ್ಕಾಗಿಯೇ ನನ್ನ ಸಹ ನಾಗರಿಕರು ಭಾರತವನ್ನು ʻಪ್ರಜಾಪ್ರಭುತ್ವದ ತಾಯಿʼ ಎಂದು ಪರಿಗಣಿಸುತ್ತಾರೆ.

ಗೌರವಾನ್ವಿತರೇ,

ಕಳೆದ ದಶಕದಲ್ಲಿ, ಭಾರತವು ''सबका साथ सबका विकास सबका विश्वास सबका प्रयास''('ಸಬ್ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ʼ) ಎಂಬ ಮಂತ್ರದೊಂದಿಗೆ ಮುನ್ನಡೆದಿದೆ - ಅಂದರೆ, ಎಲ್ಲರನ್ನೂ ಒಳಗೊಂಡ ಬೆಳವಣಿಗೆಗಾಗಿ ಸಾಮೂಹಿಕ ಪ್ರಯತ್ನಗಳು. ಸಮಾಜದ ಎಲ್ಲಾ ವರ್ಗಗಳನ್ನು, ವಿಶೇಷವಾಗಿ ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನು ತಲುಪುವುದು ಒಳಗೊಳ್ಳುವಿಕೆಯ ನಿಜವಾದ ಅರ್ಥದಲ್ಲಿ ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಕಾರ್ಯಕ್ಷಮತೆ-ಆಧಾರಿತ ಆಡಳಿತಕ್ಕೆ ಪರಿವರ್ತನೆಗೊಂಡಿದ್ದೇವೆ. ಅಲ್ಲಿ ಕೊರತೆಗಳು, ಭ್ರಷ್ಟಾಚಾರ ಮತ್ತು ತಾರತಮ್ಯದ ಇದ್ದ ಜಾಗವನ್ನು ಈಗ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಅವಕಾಶಗಳು ತುಂಬಿವೆ. ಈ ಪ್ರಯತ್ನಗಳಲ್ಲಿ, ತಂತ್ರಜ್ಞಾನವು ದೊಡ್ಡ ಶಕ್ತಿವರ್ಧಕವಾಗಿ ನಿರ್ಣಾಯಕ ಪಾತ್ರ ವಹಿಸಿದೆ.  ʻಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯʼದಲ್ಲಿ ಭಾರತದ ತ್ವರಿತ ಪ್ರಗತಿಯು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಕ್ರಾಂತಿಯನ್ನು ತಂದಿದೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಿದೆ. ಯುವಜನತೆ ಮತ್ತು ತಂತ್ರಜ್ಞಾನದ ಶಕ್ತಿಯಿಂದ ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ವೇಗವಾಗಿ ಅಭಿವೃದ್ಧಿ ಹೊಂದಿದೆ. ತಳಮಟ್ಟದಲ್ಲಿ 1.4 ದಶಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳಾ ಪ್ರತಿನಿಧಿಗಳು ಮಹಿಳಾ ನೇತೃತ್ವದ ಅಭಿವೃದ್ಧಿಗಾಗಿ ಬದಲಾವಣೆಯ ಏಜೆಂಟರೆನಿಸಿದ್ದಾರೆ.

 

ಗೌರವಾನ್ವಿತರೇ,

ಇಂದು, ಭಾರತವು ತನ್ನ 1.4 ಶತಕೋಟಿ ಜನರ ಆಕಾಂಕ್ಷೆಗಳನ್ನು ಪೂರೈಸುವುದಲ್ಲದೆ, ಪ್ರಜಾಪ್ರಭುತ್ವವು ಕೊಡುಗೆ ನೀಡಬಲ್ಲದು ಮತ್ತು ಪ್ರಜಾಪ್ರಭುತ್ವವು ಸಬಲೀಕರಣಗೊಳಿಬಲ್ಲದು ಎಂಬ ಭರವಸೆಯನ್ನು ಜಗತ್ತಿಗೆ ನೀಡುತ್ತಿದೆ. ಮಹಿಳಾ ಶಾಸಕರಿಗೆ ಕನಿಷ್ಠ ಮೂರನೇ ಒಂದು ಭಾಗದಷ್ಟು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸಂಸತ್ತು ಕಾನೂನನ್ನು ಅಂಗೀಕರಿಸಿದಾಗ, ಅದು ಇಡೀ ಪ್ರಜಾಪ್ರಭುತ್ವ ಜಗತ್ತಿನ ಮಹಿಳೆಯರಿಗೆ ಹೊಸ ಭರವಸೆಯನ್ನು ನೀಡಿತು. ಕಳೆದ 10 ವರ್ಷಗಳಲ್ಲಿ ಭಾರತವು 250 ದಶಲಕ್ಷ ಜನರನ್ನು ಬಡತನದಿಂದ ಮೇಲೆತ್ತಿದಾಗ, ಅದು ಸಕಾರಾತ್ಮಕ ಬದಲಾವಣೆಯ ಮೂರ್ತರೂಪವಾಗಿ ಪ್ರಜಾಪ್ರಭುತ್ವದಲ್ಲಿ ಜಾಗತಿಕ ನಂಬಿಕೆಯನ್ನು ಬಲಪಡಿಸಿತು. ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಔಷಧಿಗಳು ಮತ್ತು ಲಸಿಕೆಗಳನ್ನು ತಲುಪಿಸಿದಾಗ, ಅದು ಪ್ರಜಾಪ್ರಭುತ್ವದ ಗುಣಪಡಿಸುವ ಶಕ್ತಿಯನ್ನು ಪ್ರತಿಬಿಂಬಿಸಿತು. ಭಾರತವು ಚಂದ್ರಯಾನ ಯೋಜನೆ ಮೂಲಕ ಗಗನನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದಾಗ, ಅದು ಕೇವಲ ಭಾರತಕ್ಕಷ್ಟೇ ಹೆಮ್ಮೆಯ ಕ್ಷಣ ವಾಗಿರಲಿಲ್ಲ, ಅದು ಪ್ರಜಾಪ್ರಭುತ್ವದ ವಿಜಯವೂ ಆಗಿತ್ತು. ಭಾರತವು ತನ್ನ ʻಜಿ-20ʼ ಅಧ್ಯಕ್ಷತೆಯ ಅವಧಿಯಲ್ಲಿ ಜಾಗತಿಕ ದಕ್ಷಿಣದ ಧ್ವನಿಯನ್ನು ಗಟ್ಟಿಗೊಳಿಸಿದಾಗ, ಅದು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಸಮಾಲೋಚನಾ ನಿರ್ಧಾರ ತೆಗೆದುಕೊಳ್ಳುವ ಮಹತ್ವವನ್ನು ತೋರಿಸಿತು. ಈಗ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿರುವುದರಿಂದ, ಇದು ಉಜ್ವಲ ಭವಿಷ್ಯಕ್ಕಾಗಿ ವಿಶ್ವದಾದ್ಯಂತದ ಲಕ್ಷಾಂತರ ಜನರಿಗೆ ಭರವಸೆಯನ್ನು ನೀಡುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಕಲ್ಪ ಮಾಡುತ್ತಿರುವ ಭಾರತವು,  ಪ್ರಜಾಪ್ರಭುತ್ವವು ಆಶಿಸಬಲ್ಲದು, ಪ್ರೇರೇಪಿಸಬಲ್ಲದು ಮತ್ತು ಸಾಧಿಸಬಲ್ಲದು ಎಂಬುದನ್ನು ಇದು ತೋರಿಸುತ್ತದೆ.

ಗೌರವಾನ್ವಿತರೇ,

ಪ್ರಕ್ಷುಬ್ಧತೆ ಮತ್ತು ಪರಿವರ್ತನೆಗಳ ಯುಗದಲ್ಲಿ, ಪ್ರಜಾಪ್ರಭುತ್ವವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರಗಳು ಅಂತರರಾಷ್ಟ್ರೀಯ ವ್ಯವಸ್ಥೆಗಳು ಮತ್ತು ಸಂಸ್ಥೆಗಳನ್ನು ಹೆಚ್ಚು ಸಮಗ್ರ, ಪ್ರಜಾಸತಾತ್ಮಕ, ಜನಭಾಗಿದಾರಿ ಮತ್ತು ನ್ಯಾಯಯುತವಾಗಿಸುವಲ್ಲಿ ಪ್ರಯತ್ನಗಳನ್ನು ಮುನ್ನಡೆಸಬೇಕು. ಅಂತಹ ಪರಸ್ಪರ ಹಂಚಿಕೆಯ ಪ್ರಯತ್ನಗಳ ಮೂಲಕ ಮಾತ್ರ, ನಾವು ನಮ್ಮ ಜನರ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯ. ಮತ್ತು ನಾವು ಮುಂದಿನ ಪೀಳಿಗೆಗೆ ಸುರಕ್ಷಿತ, ಸ್ಥಿರ ಮತ್ತು ಸಮೃದ್ಧ ಭವಿಷ್ಯದ ಅಡಿಪಾಯವನ್ನು ಹಾಕಬಲ್ಲೆವು.  ಈ ಅನ್ವೇಷಣೆಯಲ್ಲಿ ಭಾರತವು ತನ್ನ ಅನುಭವವನ್ನು ಎಲ್ಲಾ ಸಹ-ಪ್ರಜಾಪ್ರಭುತ್ವಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ.

ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi